ಏನಿದು ವೇಗನ್ ಜೀವನಶೈಲಿ? : ಒಂದು ವಾಸ್ತವಿಕ ದೃಷ್ಟಿಕೋನ! – ಡಾ. ಎನ್.ಬಿ. ಶ್ರೀಧರ

ಸದ್ಯಕ್ಕೆ ಅತ್ಯಂತ ಚರ್ಚೆಗೊಳಗಾಗುವ ಮತ್ತೊಂದು ವಿಷಯವೆಂದರೆ ವೇಗನ್ ಜೀವನಶೈಲಿ. ಅದರಲ್ಲಿಯೂ ಪೇಟಾದಂತ ಪ್ರಾಣಿಪ್ರಿಯ ಸಂಸ್ಥೆಗಳು ಪ್ರಾಣಿಗಳ ರುಂಡ-ಮುಂಡ, ಕರುಳು ಮಾಂಸ, ರಕ್ತದೋಕುಳಿ ಎಲ್ಲವನ್ನೂ ಹಾಕಿ ಕೊನೆಗೆ “ವೇಗನ್ ಆಗಿ-ಪ್ರಾಣಿ ಹಿಂಸೆ ತಪ್ಪಿಸಿ” ಎಂದು ಕರೆ ಕೊಡುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರಾಣಿಪ್ರಿಯರ ಘೋಷವಾಕ್ಯವಾಗಿದ್ದ ಇದನ್ನು ಇತ್ತೀಚಿಗೆ ಭಾರತದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ, ಅಮೀರ್ ಖಾನ್, ಶಾಹಿದ್ ಕಫೂರ್ ಇವರಂಥ ಅನೇಕ ಸೆಲೆಬ್ರಿಟಿಗಳೂ ಮತ್ತು ಜೋಕ್ವಿನ್ ಫೀನಿಕ್ಸ್ (ಅಮೇರಿಕನ್ ಚಲನಚಿತ್ರ ನಟ), ನಟಾಲಿ ಪೋರ್ಟ್‌ಮ್ಯಾನ್ (ಅಮೇರಿಕನ್ ನಟಿ), ಲೆವಿಸ್ ಹ್ಯಾಮಿಲ್ಟನ್ ( ಬ್ರಿಟಿಷ್ ಫಾರ್ಮುಲಾ ಒನ್ ರೇಸಿಂಗ್ ಚಾಲಕ ) ಇವರಂಥ ಅಂತರಾಷ್ಟ್ರೀಯ ಸೆಲೆಬ್ರಿಟಿಗಳೂ ಅನುಸರಿಸತೊಡಗಿದ್ದಾರೆ. 

-ಡಾ. ಎನ್.ಬಿ. ಶ್ರೀಧರ

ಕೆಲವೇ ಜನಕ್ಕೆ ಸೀಮಿತವಾಗಿದ್ದ ಇಂದು ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕ ಚರ್ಚೆಗಳ ಕೇಂದ್ರ ಬಿಂದುವಾಗಿದೆ. ಬಹುತೇಕ ಜನರು ವೇಗನ್ ಎಂದರೆ ಕೇವಲ ಮಾಂಸ ತಿನ್ನದಿರುವುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ವೇಗನ್ ಜೀವನಶೈಲಿ ಪ್ರಾಣಿಜನ್ಯ ಮೂಲದ ಹಾಲು, ಮೊಟ್ಟೆ, ಮಾಂಸ, ಜೇನುತುಪ್ಪ, ತುಪ್ಪ, ಗಿಣ್ಣ ಇತ್ಯಾದಿ ಯಾವುದೇ ಆಹಾರ ಸೇವಿಸದಿರುವುದು ಮತ್ತು ಪ್ರಕೃತಿಗೆ ಅಹಿತವಾದ ಯಾವುದೇ ಪದ್ದತಿಯನ್ನು ಅನುಸರಿಸದಿರುವ ನೂತನ ಜೀವನ ವಿಧಾನವಾಗಿದೆ. ಇದೊಂದು ನೈತಿಕತೆ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ವೈಯಕ್ತಿಕ ನಂಬಿಕೆಗಳ ಸಮನ್ವಯದಿಂದ ರೂಪುಗೊಂಡ ವಿಶಾಲ ದೃಷ್ಟಿಕೋನವಾಗಿದೆ. ಇದನ್ನು ತೀವ್ರ ಭಾವನಾತ್ಮಕತೆಯ ಚೌಕಟ್ಟಿನಿಂದ ಹೊರತಂದು ಸರಳ ಮತ್ತು ವಾಸ್ತವಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕಿದೆ.

ವೇಗನ್ ಎಂದರೇನು?

ವೇಗನ್ ಜೀವನಶೈಲಿಯಲ್ಲಿ ಪ್ರಾಣಿಗಳಿಂದ ದೊರೆಯುವ ಎಲ್ಲ ಆಹಾರ ಪದಾರ್ಥಗಳನ್ನು – ಮಾಂಸ, ಮೀನು, ಹಾಲು, ಮೊಟ್ಟೆ, ಜೇನುತುಪ್ಪ – ಸೇವಿಸುವುದನ್ನು ತಪ್ಪಿಸಲಾಗುತ್ತದೆ. ಜೊತೆಗೆ ಚರ್ಮ, ಉಣ್ಣೆ, ರೇಷ್ಮೆ, ಪ್ರಾಣಿಗಳ ಮೇಲೆ ಪರೀಕ್ಷಿಸಲಾದ ಸೌಂದರ್ಯವರ್ಧಕಗಳು ಮುಂತಾದ ಪ್ರಾಣಿ ಆಧಾರಿತ ಉತ್ಪನ್ನಗಳ ಬಳಕೆಯನ್ನೂ ಹಲವರು ತ್ಯಜಿಸುತ್ತಾರೆ. ಆದರೆ ಎಲ್ಲ ವೇಗನ್‌ಗಳೂ ಒಂದೇ ಮಟ್ಟದ ಕಟ್ಟುನಿಟ್ಟನ್ನು ಪಾಲಿಸುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಅನೇಕರು ತಮ್ಮ ಆರೋಗ್ಯ, ಆಹಾರದ ಲಭ್ಯತೆ, ವಯಸ್ಸು ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ವೇಗನ್ ಜೀವನಶೈಲಿಯನ್ನು ಹೊಂದಿಸಿಕೊಂಡಿರುತ್ತಾರೆ.

“ವೇಗನ್ ” ಎಂಬ ಪದವನ್ನು 1944 ರಲ್ಲಿ ದಿ ವೀಗನ್ ಸೊಸೈಟಿಯ ಸಹ-ಸಂಸ್ಥಾಪಕ ಡೊನಾಲ್ಡ್ ವ್ಯಾಟ್ಸನ್ ಸೃಷ್ಟಿಸಿದರು. ಪೈಥಾಗರಸ್ (ಕ್ರಿ.ಪೂ. 500) ಪ್ರಾಣಿಗಳ ಮೂಲದ ಆಹಾರದ ಬಗ್ಗೆ ಸಹಾನುಭೂತಿಯನ್ನು ಪ್ರತಿಪಾದಿಸಿದ. ಬೌದ್ಧಧರ್ಮ ಮತ್ತು ಹಿಂದೂ ಧರ್ಮದಲ್ಲಿ ಅಹಿಂಸೆಯ ಪರಿಕಲ್ಪನೆ ವೇಗಾನ್ ರೀತಿಯಲ್ಲಿದ್ದರೂ ಸಹ ಇಲ್ಲಿನ ಸಸ್ಯಾಹಾರಿಗಳು ಹಾಲು, ಮೊಸರು, ತುಪ್ಪ ಇತ್ಯಾದಿ ಆಹಾರಗಳನ್ನು ಶಾಖಾಹಾರವಾಗಿಯೇ ಸ್ವೀಕರಿಸುತ್ತಾರೆ. ಜೈನ ಧರ್ಮದವರು ಈ ವಿಷಯದಲ್ಲಿ ಇತರರಿಗಿಂತ ಜಾಸ್ತಿ ಕಠಿಣ. ಮಹಾತ್ಮ ಗಾಂಧಿಯವರು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಬಲವಾಗಿ ವಿರೋಧಿಸಿದರು ಮತ್ತು ಹಾಲು ಸೇವನೆಯನ್ನು ನಿಲ್ಲಿಸಿದ್ದರು. ಸದ್ಯ ನವೆಂಬರ್ 1 ರಂದು ವಿಶ್ವ ವೆಗನ್ ದಿನವನ್ನು ಆಚರಿಸಲಾಗುತ್ತದೆ.

ಜನರು ವೇಗನ್ ಜೀವನಶೈಲಿಯನ್ನು ಏಕೆ ಆಯ್ಕೆ ಮಾಡುತ್ತಾರೆ?

ವೇಗನ್ ಜೀವನಶೈಲಿಯನ್ನು ಆಯ್ಕೆ ಮಾಡುವವರ ಹಿಂದಿರುವ ಕಾರಣಗಳು ವಿಭಿನ್ನವಾಗಿವೆ. ಕೆಲವರಿಗೆ ಪ್ರಾಣಿಗಳನ್ನು ಆಹಾರಕ್ಕಾಗಿ ಬಳಸುವುದು ಅಥವಾ ಕೊಲ್ಲುವುದು ನೈತಿಕವಾಗಿ ಒಪ್ಪಿಕೊಳ್ಳಲಾಗದ ವಿಷಯ. ಇತರರಿಗೆ ಇದು ಆರೋಗ್ಯದ ಆಯ್ಕೆ – ಬೊಜ್ಜು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆಗಳಂತಹ ಜೀವನಶೈಲಿ ಕಾಯಿಲೆಗಳನ್ನು ನಿಯಂತ್ರಿಸುವ ಉದ್ದೇಶ. ಮತ್ತೊಂದು ಪ್ರಮುಖ ಕಾರಣ ಪರಿಸರ ಕಾಳಜಿ.

ಇದನ್ನೂ ಓದಿ: ಜಮೀನು ಕಬಳಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ವಂಚನೆ

ಪ್ರಾಣಿ ಸಾಕಣೆಗೆ ಹೆಚ್ಚಿನ ಭೂಮಿ, ನೀರು ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ ಎಂಬ ಅರಿವು ವೇಗನ್ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸದ್ಯ ಪ್ರಪಂಚದಲ್ಲಿ ಕೇವಲ ಶೇ 1 ರಷ್ಟು ( ಅಂದಾಜು 88 ಮಿಲಿಯನ್) ಜನ ಮಾತ್ರ ವೇಗನ್ನುಗಳು. ಆದರೆ ಅನೇಕರು ಆ ಕುರಿತು ಚಿಂತಿಸುತ್ತಿದ್ದಾರೆ. ಭಾರತದಲ್ಲಿ ಜನಸಂಖ್ಯೆಯ ಶೇ 9, ಅಮೇರಿಕಾ 2%, ಕೆನಡಾ 5 %, ಮೆಕ್ಸಿಕೋ 9 %, ಜಪಾನ್ 3 % ವೇಗಾನುಗಳಿದ್ದರೆ ರಶ್ಯಾ, ಚೀನಾ, ಆಫ್ರಿಕಾ ಇತ್ಯಾದಿ ದೇಶಗಳಲ್ಲಿ ಇವರ ಸಂಖ್ಯೆ ಸಂಖ್ಯೆ ನಗಣ್ಯ.

ಆರೋಗ್ಯ ಪ್ರಯೋಜನಗಳು ಮತ್ತು ಮಿತಿಗಳು

ಸರಿಯಾಗಿ ಯೋಜಿಸಿ ಅನುಸರಿಸಿದರೆ ವೇಗನ್ ಆಹಾರ ಆರೋಗ್ಯಕ್ಕೆ ಅನುಕೂಲಕರವಾಗಬಹುದು. ಹಣ್ಣು, ತರಕಾರಿ, ದ್ವಿದಳ ಧಾನ್ಯಗಳು, ಧಾನ್ಯಗಳು, ಕಾಳುಗಳು ಮತ್ತು ಬೀಜಗಳಿಂದ ಸಮೃದ್ಧವಾದ ಆಹಾರ ಜೀರ್ಣಕ್ರಿಯೆಗೆ ಸಹಾಯಕವಾಗಿದ್ದು, ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರಿಂದ ತೂಕ ನಿಯಂತ್ರಣ ಮತ್ತು ದೈನಂದಿನ ಚುರುಕುತನ ಹೆಚ್ಚಾಗಿದೆ ಎಂದು ಅನೇಕರು ಅನುಭವಿಸುತ್ತಾರೆ. ಆದರೆ ವೇಗನ್ ಆಹಾರಕ್ಕೆ ಎಚ್ಚರಿಕೆಯ ಪೌಷ್ಟಿಕ ಯೋಜನೆ ಅತ್ಯಗತ್ಯ.

ಪೂರ್ಣ ಪ್ರಮಾಣದ ವೇಗನ್ ಪ್ರಿಯರಿಗೆ ವಿಟಮಿನ್ ಬಿ12, ಕಬ್ಬಿಣ, ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಮುಂತಾದ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈ ಕೊರತೆಗಳು ಮಕ್ಕಳಲ್ಲಿ, ಗರ್ಭಿಣಿಯರಲ್ಲಿ, ವೃದ್ಧರಲ್ಲಿ ಮತ್ತು ದೀರ್ಘಕಾಲೀನ ಕಾಯಿಲೆ ಹೊಂದಿರುವವರಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೇಗನ್ ಜೀವನಶೈಲಿ ಭಾವೋದ್ರೇಕದಿಂದಲ್ಲ, ವೈದ್ಯಕೀಯ ಮತ್ತು ಪೌಷ್ಟಿಕ ವಿಜ್ಞಾನದಿಂದ ಮಾರ್ಗದರ್ಶಿತವಾಗಿರಬೇಕು. ಕಟ್ಟುನಿಟ್ಟಾದ ವೇಗನ್ನುಗಳಿಗೆ ವಿಟಮಿನ್ ಬಿ12 ಕೊರತೆ ಅತ್ಯಂತ ಸಾಮಾನ್ಯ ಮತ್ತು ಪೂರಕ ಕಡ್ಡಾಯ.

ಸಾಂಸ್ಕೃತಿಕ ಮತ್ತು ಸಾಮಾಜಿಕ ವಾಸ್ತವತೆ

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಾಣಿ ಆಧಾರಿತ ಆಹಾರ ಪದ್ಧತಿಗಳು ಸಂಪ್ರದಾಯ, ಧಾರ್ಮಿಕ ಆಚರಣೆಗಳು ಮತ್ತು ಗ್ರಾಮೀಣ ಜೀವನೋಪಾಯದ ಅವಿಭಾಜ್ಯ ಭಾಗವಾಗಿವೆ. ಹಾಲು ಮತ್ತು ಹೈನು ಉತ್ಪನ್ನಗಳು ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅನೇಕ ರೈತ ಕುಟುಂಬಗಳಿಗೆ ಜಾನುವಾರುಗಳು ಆದಾಯದ ಜೊತೆಗೆ ಭದ್ರತೆಯ ಸಂಕೇತವೂ ಹೌದು. ಈ ಹಿನ್ನೆಲೆಯಲ್ಲಿ ವೇಗನ್ ನಿಲುವು ಎಲ್ಲರಿಗೂ ತಕ್ಷಣ ಪ್ರಾಯೋಗಿಕವಾಗಿರುವುದಿಲ್ಲ. ಕುರಿ, ಕೋಳಿ, ಹಂದಿ ಸಾಕಣೆ ಮತ್ತು ಹೈನು ಉತ್ಪಾದನೆಯ ಮೇಲೆ ಭಾರತದಲ್ಲಿ ೮ ಕೋಟಿಗೂ ಅಧಿಕ ಜನ ಪಶುಪಾಲನೆಯ ಮೇಲೆ ಅವಲಂಭಿತರಾಗಿದ್ದಾರೆ.

ವೇಗನ್ ಜೀವನಶೈಲಿಯ ಬಗ್ಗೆ ಟೀಕೆಗಳು

ವೇಗನ್ ಚಳವಳಿಯ ಕುರಿತು ಇರುವ ಪ್ರಮುಖ ಟೀಕೆ ಎಂದರೆ, ಇದನ್ನು ಕೆಲವೊಮ್ಮೆ “ನೈತಿಕವಾಗಿ ಶ್ರೇಷ್ಠ” ಜೀವನಶೈಲಿಯಂತೆ ಬಿಂಬಿಸಲಾಗುತ್ತದೆ ಎಂಬುದು. ಇದರಿಂದ ಪ್ರಾಣಿ ಸಾಕಣೆಯನ್ನು ಅವಲಂಬಿಸಿರುವ ಜನರಲ್ಲಿ ಅಪರಾಧ ಭಾವನೆ ಮತ್ತು ಸಂಘರ್ಷ ಉಂಟಾಗಬಹುದು. ಇನ್ನೊಂದು ಆತಂಕವೆಂದರೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಅತಿಯಾಗಿ ಸಂಸ್ಕರಿಸಿದ ವೇಗನ್ ಆಹಾರಗಳು, ಪೌಷ್ಟಿಕ ಮೌಲ್ಯ ಕಡಿಮೆಯಾಗಿ ಅಪೌಷ್ಟಿಕತೆಯನ್ನು ಉಂಟುಮಾಡುವ ಸಂದರ್ಭಗಳೂ ಇರುತ್ತವೆ.

ಸಮತೋಲನದ ದಾರಿ

ವೇಗನ್ ಜೀವನಶೈಲಿ ಪ್ರಾಣಿ ಕಲ್ಯಾಣ, ಪರಿಸರ ಸಂರಕ್ಷಣೆ ಮತ್ತು ಆರೋಗ್ಯದ ಕುರಿತು ಸಮಾಜವನ್ನು ಆಲೋಚಿಸಲು ಪ್ರೇರೇಪಿಸಿದೆ. ವೇಗನ್ ಅಲ್ಲದವರೂ ಸಹ ಈ ಚಿಂತನೆಗಳಿಂದ ಕಲಿಯಬಹುದು. ಅನಗತ್ಯ ಮಾಂಸ ಸೇವನೆ ಕಡಿಮೆ ಮಾಡುವುದು, ಆಹಾರ ವ್ಯರ್ಥತೆಯನ್ನು ತಡೆಯುವುದು, ಉತ್ತಮ ಪ್ರಾಣಿ ಕಲ್ಯಾಣ ಮಾನದಂಡಗಳನ್ನು ಅನುಸರಿಸುವುದು ಮತ್ತು ಸ್ಥಳೀಯ-ಕಾಲೋಚಿತ ಆಹಾರವನ್ನು ಆಯ್ಕೆ ಮಾಡುವುದು ಎಲ್ಲರಿಗೂ ಉಪಯುಕ್ತವಾದ ಹೆಜ್ಜೆಗಳಾಗಿವೆ.

ಯಾವುದೂ ಸಹ ಅತಿಯಾಗಬಾರದು. ವೇಗನ್ ಪದ್ಧತಿಯೇ ಸರ್ವಶ್ರೇಷ್ಟ ಎಂದು ಲೆಬಲ್ ಅಂಟಿಸಿಕೊಂಡು ಓಡಾಡುವುದು ಕಡಿಮೆಯಾಗಬೇಕು. ಇದು ಎಲ್ಲರಿಗೂ ಅನ್ವಯಿಸುವ ಮಾಂತ್ರಿಕ ಪರಿಹಾರವೂ ಅಲ್ಲ, ಸಹಜವಾಗಿಯೇ ಹಾನಿಕಾರಕ ಕಲ್ಪನೆಯೂ ಅಲ್ಲ. ಜ್ಞಾನ, ವಿಜ್ಞಾನ ಮತ್ತು ಸಾಮಾಜಿಕ ಸಂವೇದನೆಯೊಂದಿಗೆ ಅನುಸರಿಸಿದರೆ ಇದು ಕೆಲವರಿಗೆ ಆರೋಗ್ಯಕರ ಜೀವನಶೈಲಿಯಾಗಬಹುದು. ಅತಿರೇಕದ ನಿಲುವುಗಳಿಗಿಂತ ಸಮತೋಲನದ ಮತ್ತು ವಾಸ್ತವಾಧಾರಿತ ದೃಷ್ಟಿಕೋನವೇ ಸಮಾಜಕ್ಕೆ ಹಿತಕರ.

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಚಿನ್ನಯ್ಯನಿಗೆ ಜಾಮೀನು! ಸತ್ಯ ಹೇಳಿದ್ದನಾ ಚಿನ್ನಯ್ಯ? Janashakthi Media

Donate Janashakthi Media

Leave a Reply

Your email address will not be published. Required fields are marked *