ನೈಸ್ ಕಂಪನಿ ದೌರ್ಜನ್ಯ, ಭ್ರಷ್ಟಾಚಾರ ವಿರೋಧಿಸಿ ಭೂ ಸಂತ್ರಸ್ಥ ರೈತರ ಬೃಹತ್ ಸಮಾವೇಶ

ಬೆಂಗಳೂರು:  ನಗರದ ಎಲ್ಲಾ ವ್ಯಾಪ್ತಿಯ ಎಲ್ಲಾ ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ 18 ಕಿಲೋಮೀಟರ್ ಪರಿಮಿತಿ ನಿರ್ಬಂಧ ರದ್ದುಪಡಿಸಿ ಭೂಮಿ ಹಕ್ಕು ಪತ್ರ ನೀಡಲು ಆಗ್ರಹಿಸಿ, ನೈಸ್ ಭೂ ಸಂತಸ್ತರ ರೈತರ ಬೃಹತ್ ಸಮಾವೇಶವನ್ನು ಸೆಪ್ಟೆಂಬರ್ 22, 2024 ರಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಸಂತ್ರಸ್ಥ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಎನ್. ವೆಂಕಟಾಚಲಯ್ಯ ಹೇಳಿದ್ದಾರೆ.

ಬಿ.ಎಂ.ಐ.ಸಿ. ಯೋಜನೆಯ ನೈಸ್ ಕಂಪನಿ ಪಾಲುದಾರಿಕೆಯನ್ನು ರದ್ದುಗೊಳಿಸಲು ಆಗ್ರಹಿಸಿ, ನೈಸ್ ಕಂಪನಿಯ ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದ ಹಗರಣವನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸಲು ಆಗ್ರಹಿಸಿ, ರೈತರ ಒಪ್ಪಿಗೆ ಇಲ್ಲದೆ ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲ ಪ್ರಕರಣಗಳನ್ನು ರದ್ದು ಪಡಿಸಲು ಆಗ್ರಹಿಸಿ, ನೈಸ್ ಅಕ್ರಮ ಕುರಿತು ಸದನ ಸಮಿತಿ ಮತ್ತು ಸಂಪುಟ ಉಪ ಸಮಿತಿಗಳ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ, ಕೆ.ಐ.ಎ.ಡಿ.ಬಿ. ಹಾಗೂ ನೈಸ್ ಕಂಪನಿಯ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ಮಾಡಿರುವ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಾಪಸು ಪಡೆದುಕೊಳ್ಳಲು ಆಗ್ರಹಿಸಿದ್ದಾರೆ.

ಭೂ ಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ತೀರ್ಮಾನಗಳ ಹೆಸರಿನಲ್ಲಿ ರೈತರ ಮೇಲೆ ನೈಸ್ ಕಂಪನಿಯ ದಬ್ಬಾಳಿಕೆ ದೌರ್ಜನ್ಯ ನಿಲ್ಲಿಸಲು ಆಗ್ರಹಿಸಿ, ಟೋಲ್ ಸಂಗ್ರಹಿಸುತ್ತಿರುವ ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಒಪ್ಪಂದದಂತೆ ಹೆಚ್ಚಿನ ಪರಿಹಾರ ಹಾಗೂ ನಿವೇಶನ ಒದಗಿಸಲು ಆಗ್ರಹಿಸಿ, ಬಿ.ಎಂ.ಐ.ಸಿ. ಯೋಜನೆಯ ನೆಪದಲ್ಲಿ ನೈಸ್ ಸಂಸ್ಥೆ ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಬಂಧಿಸಲು ಹಾಗೂ ಶಿಕ್ಷಿಸಲು ಆಗ್ರಹಿಸಿ, ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡು ಹೋರಾಟ ನಡೆಸುತ್ತಿರುವ ಬಡವರಿಗೆ ನಿವೇಶನ ನೀಡಬೇಕು ಮತ್ತು ಮನೆ ಕಟ್ಟಿಕೊಡಬೇಕೆಂದು ಒತ್ತಾಯಿಸಿ, ಸರ್ಕಾರಿ ಭೂಮಿಯನ್ನು ಕಬಳಿಸುತ್ತಿರುವ ಭೂ ಗಳ್ಳರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹೊರಗುತ್ತಿಗೆ ನೌಕರರ ಒಕ್ಕೂಟದ ನೂತನ ತಾಲ್ಲೂಕು ಸಮಿತಿಗೆ ಚಾಲನೆ: ಅಧ್ಯಕ್ಷ ಕೆ. ಭರತ್

ಬೆಳಿಗ್ಗೆ 10.30 ಕ್ಕೆ ತುಮಕೂರು ರಸ್ತೆಯ ಜಯಸೂರ್ಯ ಗ್ರಾಂಡ್ ಕನ್ವೆಂಷನ್ ಹಾಲ್‌ನಲ್ಲಿ ನಡೆಯುವ ಈ ಸಮಾವೇಶವನ್ನು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಧೀಶರಾದ ನ್ಯಾಯಮೂರ್ತಿ ವಿ. ಗೋಪಾಲಗೌಡ ರವರು ಉದ್ಘಾಟಿಸಲಿದ್ದು, ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಸೇರಿದಂತೆ ನೈಸ್ ಕಂಪನಿಯಿಂದ ದೌರ್ಜನ್ಯ ಹಿಂಸೆಗೀಡಾಗಿರುವ ಸಾವಿರಾರು ಸಂಖ್ಯೆಯ ರೈತರು, ಸ್ಥಳೀಯ ಜನ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂದರು.

ದಿನಾಂಕ 3-4-1997 ರಂದು ಕರ್ನಾಟಕ ಸರ್ಕಾರ ನೈಸ್ ಕಂಪನಿ ಜೊತೆ ಮಾಡಿಕೊಂಡ ಕ್ರಿಯಾ ಒಪ್ಪಂದದಂತೆ 111 ಕಿಲೋಮೀಟರ್ ಬೆಂಗಳೂರಿನಿಂದ ಮೈಸೂರಿನವರೆಗೆ ವೇಗದ ಹೆದ್ದಾರಿ ರಸ್ತೆ ಬೆಂಗಳೂರಿನಲ್ಲಿ 41 ಕಿ.ಮೀ. ಪೆರಿ ಪೆರಲ್ ರಸ್ತೆ 9.8 ಕಿಲೋ ಮೀಟರ್ ಲಿಂಕ್ ರಸ್ತೆ ಹಾಗೂ ನಿಯೋಜಿತ ಸ್ಥಳಗಳಲ್ಲಿ ಐದು ಟೌನ್ ಶಿಪ್ ಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಈ ಒಪ್ಪಂದ ಆಗಿ 27 ವರ್ಷಗಳೇ ಕಳೆದಿದ್ದರೂ ಈ ಯೋಜನೆ ಕಾರ್ಯಗತವಾಗಿಲ್ಲ ಆದರೂ ಈ ಯೋಜನೆಗೆ ಗುರುತಿಸಲಾಗಿದ್ದ ರೈತರ ಭೂ ಸ್ವಾಧೀನ ವನ್ನು ರದ್ದುಪಡಿಸದೇ ಹಾಗೆಯೇ ಮುಂದುವರಿಸಿಕೊಂಡು ಬರುತ್ತಿರುವುದು ಅತ್ಯಂತ ಯಾತನೆಯನ್ನು ಮತ್ತು ಅನ್ಯಾಯವನ್ನು ಈ ಯೋಜನಾ ವ್ಯಾಪ್ತಿಯ ರೈತರು ಅನುಭವಿಸುವಂತೆ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಪಾದಿಸುತ್ತದೆ ಎಂದರು.

ಬೆಂಗಳೂರು ದಕ್ಷಿಣ ತಾಲೂಕು ಬೆಂಗಳೂರು ಉತ್ತರ ತಾಲೂಕು ರೈತರು ತಮ್ಮ ಜಮೀನುಗಳನ್ನು ಇಂತಹ ದೈತ್ಯ ಭೂ ಕಬಳಿಕೆಯಿಂದ ರಕ್ಷಿಸಿ ಕೊಳ್ಳಲು ಪಟ್ಟಿರುವ ಪಾಡು ಅಷ್ಟಿಷ್ಟಲ್ಲ. ನೂರಾರು ಜನರು ಕೋರ್ಟ್ ಗಳಿಗೆ ಅಲೆದಾಡಿ ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಬಲಿಷ್ಠ ರಾಜಕೀಯ, ಉನ್ನತ ಅಧಿಕಾರಿಗಳ ಭ್ರಷ್ಟ ಬೆಂಬಲ, ಕೆ.ಐ.ಎ.ಡಿ.ಬಿ., ಪಿ.ಡಬ್ಲ್ಯೂ.ಡಿ. ಮುಂತಾದ ಇಲಾಖೆಗಳನ್ನು ತನ್ನ ದಾಳವಾಗಿ ಬಳಸಿ ಮಾಡಿಕೊಂಡು ಅಕ್ರಮ ಹಾಗೂ ಕಾನೂನು ಬಾಹಿರ ಕ್ರಮಗಳು ಮತ್ತು ಅರೆ ಸತ್ಯ ಹಾಗೂ ತಿರುಚಿದ ವಾಸ್ತವಗಳನ್ನು ಬಿಡಿ ಬಿಡಿಯಾಗಿ ಒದಗಿಸಿ ಅಪ  ಮಾರ್ಗಗಳ ಮೂಲಕ ಪಡೆದುಕೊಂಡ ನ್ಯಾಯಾಲಯದ ತೀರ್ಮಾನಗಳು ಹೀಗೆ ಇವುಗಳ ಜಂಟಿ ಅಡ ಕತ್ತರಿಯಲ್ಲಿ ಸಿಕ್ಕ ಈ ಭಾಗದ ರೈತರು ನರಕ ರೂಪದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS), ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ತಿಳಿಸುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ಮೈಸೂರು ರಾಜ್ಯ ಹೆದ್ದಾರಿಯನ್ನುರಾಷ್ಟ್ರೀಯ ಹೆದ್ದಾರಿಯನ್ನಾಗಿ  ಮೇಲ್ ದರ್ಜೆಗೆ ಏರಿಸಿ ಅಭಿವೃದ್ಧಿ ಪಡಿಸಿದ ಮೇಲೆ ಬಿ.ಎಂ.ಐ.ಸಿ. ಹೆದ್ದಾರಿ ಅಪ್ರಸುತ್ತವಾಗಿದೆ ಎಂದು ಈ 27 ವರ್ಷದ ಹಿಂದಿನ ಭೂ ಸ್ವಾಧೀನ ಮರೆತು ಈ ಯೋಜನಾ ವ್ಯಾಪ್ತಿಯ ರೈತರು ನಿರಾಳವಾಗಿದ್ದರು. ಆದರೆ ಬೆಂಗಳೂರು ದಕ್ಷಿಣ ತಾಲೂಕು ಹಾಗೂ ಈ ತಾಲ್ಲೂಕಿಗೆ ಹೊಂದಿಕೊಂಡ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ರೈತರಿಗೆ 27 ವರ್ಷದ ಹಿಂದಿನ ಭೂ ಸ್ವಾಧೀನವನ್ನು ನೆನಪಿಸಿ ಸಿವಿಲ್ ಕೋರ್ಟ್ಗಳ ಆಜ್ಞೆ ತಂದು ಭೂಮಿ ತೆರವುಗೊಳಿಸುವಂತೆ ಬಲವಂತ ಪಡಿಸಲಾಗುತ್ತಿದೆ ಇಂತಹ ಎಲ್ಲಾ ಭೂ ಸ್ವಾಧೀನ ಪ್ರಕರಣಗಳು ಕೆ.ಐ.ಎ.ಡಿ.ಬಿ. ಸ್ವಾಧೀನ ಕಾಯ್ದೆ 1966 ರ ಅಡಿಯಲ್ಲಿ ನಡೆದಿದ್ದು ಪರಿಹಾರವಾಗಿ ಇವತ್ತಿನ ಮಾರುಕಟ್ಟೆ ಮೌಲ್ಯದ ಶೇಕಡ ಒಂದರಷ್ಟಕ್ಕೆ ತೃಪ್ತಿ ಪಟ್ಟು ಕೊಳ್ಳುವಂತೆ ಬೆದರಿಸಲಾಗುತ್ತಿದೆ. ಇದೇ ರೀತಿಯ ಬೆದರಿಕೆಗಳು ಮೈಸೂರಿನ ತನಕ ಹಂತ ಹಂತವಾಗಿ ವಿಸ್ತರಿಸುವ ಉದ್ದೇಶವು ಬಿಡದಿ ಹೋಬಳಿ ರೈತರಿಗೆ ಅವಾರ್ಡ್ ನೋಟಿಸ್ ನೀಡುವ ಮೂಲಕ ಬಯಲುಗೊಂಡಿದೆ ಎಂದು ಹೇಳಿದರು.

ಮೂಲ ಒಪ್ಪಂದ ಚೌಕಟ್ಟಿನಲ್ಲಿ ಗುರುತಿಸಿಕೊಂಡಿದ್ದ ಸಾವಿರದ 18,313 ಎಕರೆ ಭೂಮಿಯನ್ನು ಮೋಸ ಮತ್ತು ವಂಚನೆಗಳ ಮೂಲಕ 20,193 ಎಕರೆಗೆ ಹೆಚ್ಚಳ ಮಾಡಿಕೊಂಡಿದ್ದಲ್ಲದೇ, ಕೆ.ಐ.ಎ.ಡಿ.ಬಿ. ಮೂಲಕ ಮತ್ತೆ ಹೆಚ್ಚುವರಿ 11,000 ಎಕರೆ ಭೂಮಿಯನ್ನು ಕಬಳಿಕೆ ಮಾಡಿಕೊಂಡಿದ್ದರೂ ಇಷ್ಟಕ್ಕೂ ತೃಪ್ತರಾಗದೇ ಓಡಿಪಿ ಔಟ್ ಲೈನ್ ಡೆವಲಪ್ಮೆಂಟ್ ಫ್ಯಾನ್ ಅಭಿವೃದ್ಧಿ ಯೋಜನೆ ರೂಪುರೇಖೆ ಮೂಲಕ ಸುಮಾರು 1 ಲಕ್ಷ 75 ಸಾವಿರ ಎಕರೆ ಭೂಮಿ ಮೇಲೆ ಕಣ್ಣು ಹಾಕಿದೆ. ಭೂ ಸ್ವಾಧೀನಕ್ಕೆ ಒಳಪಟ್ಟು ಜಮೀನುಗಳು ರೈತರ ಸ್ವಾಧೀನದಲ್ಲಿ ಇದ್ದಾಗಲೇ ವಿದೇಶಿ ಬ್ಯಾಂಕ್ ಗಳಿಗೆ ಅಡ ಇಟ್ಟು ಪಡೆದಿದ್ದ ಹಣ, ಹಾಗೇ, ಈಗ ಸುಮಾರು ಸಾವಿರಾರು ಕೋಟಿ ರೂ. ಗಳು ಟೋಲ್ ಸಂಗ್ರಹ ಜಮೆ ಬಲದಿಂದ ಇಂತಹ ಒಂದು ಭೂ ಕಬಳಿಕೆಯ ಮದ ನೈಸ್ ಕಂಪನಿಗೆ ಬಂದಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಆರೋಪಿಸುತ್ತದೆ.

ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ ಕೆ.ಐ.ಎ.ಡಿ.ಬಿ. ಸ್ವಾಧೀನದ ಮೂಲಕ ಪಡೆದ ಭೂಮಿಯನ್ನು ಮೂಲ ಚೌಕಟ್ಟು ಒಪ್ಪಂದ ಹಾಗೂ ಯೋಜನೆ ತಾಂತ್ರಿಕ ವರದಿ ಉಲ್ಲಂಘಿಸಿ ವಸತಿ ಲೇಔಟ್ ನಿರ್ಮಿಸಿ ಮಾರಾಟ ಮಾಡುತ್ತಿರುವ ನೈಸ್ ಸಂಸ್ಥೆ ಅಕ್ರಮಕ್ಕೆ ಕೂಡ ಕಡಿವಾಣ ಹಾಕುವಂತೆ ಸರ್ಕಾರಗಳನ್ನು ಆಗ್ರಹಿಸುತ್ತದೆ ಎಂದರು.

ಇದರ ಜೊತೆಗೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ನೂರಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ನೂರಾರು ರೈತರಿಗೆ ಬಿಬಿಎಂಪಿ ಗಡಿಯ 18 ಕಿಲೋಮೀಟರ್ ವ್ಯಾಪ್ತಿಯ ನೆಪ ಮಾಡಿಕೊಂಡು ಭೂಮಿ ಹಕ್ಕು ಪತ್ರ ನೀಡದೆ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗಿದೆ. ಈ ಎಲ್ಲಾ ಬಗರ್ ಹುಕುಂ ಸಾಗುವಳಿದಾರರನ್ನು ಅರ್ಹ ಸಾಗುವಳಿದಾರರು ಎಂದು ಪರಿಗಣಿಸಿ 18 ಕಿಲೋಮೀಟರ್ ವ್ಯಾಪ್ತಿಯ ನಿರ್ಬಂಧವನ್ನು ರದ್ದುಪಡಿಸಿ ಭೂಮಿ ಹಕ್ಕು ಮಂಜೂರು ಮಾಡಬೇಕು. ಹಾಗೆ ಮನೆ ನಿವೇಶನ ಕೋರಿ ಅರ್ಜಿ ಸಲ್ಲಿಸುವ ವಸತಿ ರಹಿತರಿಗೆ ಮನೆ ನಿವೇಶನ ಒದಗಿಸಬೇಕು. ಸರ್ಕಾರಿ ಭೂಮಿಯಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕು ಪತ್ರ ನೀಡಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಭೂ ಕಬಳಿಕೆಯಿಂದ ರೈತರ ಭೂಮಿಯನ್ನು ರಕ್ಷಿಸಿಕೊಳ್ಳಲು, ನ್ಯಾಯಯುತ ಹಕ್ಕೋತಾಯಗಳನ್ನು ಈಡೇರಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹಾಕಲು, ನೈಸ್ ಭೂ ಕಬಳಿಕೆ ವಿರುದ್ಧ ಇದುವರೆಗೆ ನಡೆದ ಹಲವಾರು ಹೋರಾಟಗಳನ್ನು ಮತ್ತಷ್ಟು ಸಂಘಟಿತರಾಗಿ ಮುನ್ನಡೆಸಲು ಸಪ್ಟೆಂಬರ್ 22, 2024 ರಂದು ಈ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ತಿಳಿಸುತ್ತದೆ.

ಈ ಸಮಾವೇಶದ ಆಗ್ರಹಗಳನ್ನು ಸರ್ಕಾರಗಳು ಕಡೆಗಣಿಸಿದರೆ, ಇದೇ ರೀತಿ ಭೂಮಿ ಪ್ರಶ್ನೆ ಮೇಲೆ ಹೋರಾಡುತ್ತಿರುವ ರೈತ ಸಮೂಹದ ಜೊತೆ ಸೇರಿ ಸಹಸ್ರಾರು ರೈತರ ವಿಧಾನ ಸೌಧ ನಡೆಸಲಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಎಚ್ಚರಿಕೆ ನೀಡುತ್ತದೆ.

ಈ ಮಹತ್ವದ ಸಮಾವೇಶದಲ್ಲಿ ನೈಸ್ ಭೂ ಸ್ವಾಧೀನದಿಂದ ನೊಂದಿರುವ ಎಲ್ಲಾ ರೈತರು ತಮ್ಮ ಗ್ರಾಮಗಳ ಎಲ್ಲಾ ರೈತರನ್ನು ಒಗ್ಗೂಡಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿಗಳು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

ಇದನ್ನೂ ನೋಡಿ: ವಚನಾನುಭವ – 12 | ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು | ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *