ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್-ಮೈತ್ರಿ ವಿರೋಧಿಸಿ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ ಮಾಜಿ ಸಚಿವ ಎ.ಮಂಜು ಮತ್ತೆ ಕಾಂಗ್ರೆಸ್ ಸೇರಲು ಪ್ರಯತ್ನ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಪಶುಸಂಗೋಪನೆ ಖಾತೆ ಸಚಿವರಾಗಿದ್ದ ಎ.ಮಂಜು ನಂತರದ ಚುನಾವಣೆಯಲ್ಲಿ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. ಈ ವೇಳೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಈ ಸಂದರ್ಭದಲ್ಲಿ ನಡೆದ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿಯೇ ಎದುರಿಸಲು ನಿರ್ಧರಿಸಿದ್ದವು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಎ.ಮಂಜು ದೇವೇಗೌಡರು ಸ್ಪರ್ಧೆ ಮಾಡುವುದಾದರೆ ಮೈತ್ರಿಯನ್ನು ಒಪ್ಪುತ್ತೇವೆ. ಆದರೆ ಬೇರೆಯವರು ನಿಲ್ಲುವುದಾದರೆ ಮೈತ್ರಿ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಕಣಕ್ಕಿಳಿದರು. ಇದನ್ನು ವಿರೋಧಿಸಿ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು. ಆ ನಂತರ ಕೆಲ ಬಾರಿ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡರೂ ನಂತರ ಮರೆಯಾಗಿದ್ದ ಮಂಜು ಈಗ ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಸುದ್ದಿಯಲ್ಲಿದ್ದಾರೆ.
ಇದನ್ನು ಓದಿ: ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಎ ಮಂಜು : ರೆಡ್ ಸಿಗ್ನಲ್ ನೀಡಿದ ಸಿದ್ಧರಾಮಯ್ಯ
2023ರ ಚುನಾವಣೆ ಚಿಂತೆ
ಲೋಕಸಭೆ ಚುನಾವಣೆ ವೇಳೆ ರಾಜ್ಯ ಬಿಜೆಪಿ ನಾಯಕರು ಎ.ಮಂಜುಗೆ ಹಲವು ಭರವಸೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಸೋತರೆ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವುದು, ಪುತ್ರ ಮಾಜಿ ಜಿಪಂ ಸದಸ್ಯ ಮಂತರ್ ಗೌಡರಿಗೆ ಅರಕಲಗೂಡಿನಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡುವುದು ಎಂಬ ಭರವಸೆಗಳನ್ನು ರಾಜ್ಯ ಬಿಜೆಪಿ ನಾಯಕರು ಮಂಜುಗೆ ಭರವಸೆ ನೀಡಿದ್ದರು. ಆದರೆ ಈ ಎರಡೂ ಭರವಸೆಗಳು ಈಡೇರಲಿಲ್ಲ. ನಿಗಮ, ಮಂಡಳಿಗಳ ನೇಮಕಾತಿ ವೇಳೆಯಲ್ಲೂ ಅವಕಾಶ ನೀಡಲಿಲ್ಲ. ರಾಜ್ಯ ಭೂ ಅಭಿವೃದ್ಧಿ ಮತ್ತು ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷತೆ ಮೇಲೆ ಕಣ್ಣಿಟ್ಟು ಅರಕಲಗೂಡು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದರೂ ಅದೂ ಕೈಗೂಡಲಿಲ್ಲ.
ಜೊತೆಗೆ ಪ್ರಸ್ತುತ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಎ.ಮಂಜು ಇದ್ದರೂ ಲೆಕ್ಕಿಕ್ಕಿಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ ಶಾಸಕ ಪ್ರೀತಂಗೌಡ. ಹಾಸನ ಜಿಲ್ಲಾ ಬಿಜೆಪಿಯಲ್ಲಿ ಏಕೈಕ ಒಕ್ಕಲಿಗ ನಾಯಕರಾಗಬೇಕು ಎನ್ನುವ ಪ್ರೀತಂಗೌಡರ ಬಯಕೆಗೆ ಎ.ಮಂಜು ಮರೆಗೆ ಸರಿಯುವಂತಾಗಿದೆ. ಅರಕಲಗೂಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತರೆ ಎ ಮಂಜುಗೆ ಸೋಲು ಖಚಿತ. ಮಂಜು ಕಾರ್ಯಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳು ಹುಟ್ಟಿಕೊಂಡಿದ್ದರಿಂದ 2023ರ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ಗೆ ಮರಳುವ ತವಕದಲ್ಲಿದ್ದಾರೆ ಎ.ಮಂಜು.
ಮೂಲ ಕಾಂಗ್ರೆಸ್ಸಿಗ
ಎ.ಮಂಜು ಮೂಲತಃ ಕಾಂಗ್ರೆಸ್ಸಿಗ. ದೇವರಾಜು ಅರಸು ಅವರ ಕಾಲದಲ್ಲಿ ರಾಮಲಿಂಗಾರೆಡ್ಡಿ, ಆರ್.ವಿ.ದೇವರಾಜು, ಜೀವರಾಜ ಆಳ್ವಾ ಅವರ ಜೊತೆ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಆರಂಭಿಸಿದ ಮಂಜು ವಿಧಾನಸಭೆ ಮೆಟ್ಟಿಲು ಹತ್ತಿದ್ದ ಮಾತ್ರ 1999ರಲ್ಲಿ ಬಿಜೆಪಿ ಮೂಲಕ. ನಂತರ ಅಲ್ಲಿ ವಿಜಯಮಲ್ಯ ಅವರಿಗೆ ಅಡ್ಡಮತದಾನ ಮಾಡಿದ ಆರೋಪದ ಮೇಲೆ ಪಕ್ಷದಿಂದ ಅಮಾನತುಗೊಂಡ ಮೇಲೆ ಕಾಂಗ್ರೆಸ್ಸಿಗೆ ಬಂದಿದ್ದರು. ನಂತರ 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. ನಂತರದ 2008 ಮತ್ತು 2013ರ ಚುನಾವಣೆಯಲ್ಲಿ ಸತತವಾಗಿ ಎರಡು ಬಾರಿಗೆ ಗೆಲುವು ಸಾಧಿಸಿದ ಮಂಜು ಸಿದ್ದರಾಮಯ್ಯ ಸಂಪುಟದಲ್ಲಿ ಪಶುಸಂಗೋಪನೆ ಖಾತೆ ಸಚಿವರಾಗಿದ್ದರು.
ಇದನ್ನು ಓದಿ: ಪರಿಸ್ಥಿತಿ ಗಂಭೀರವಾಗಿಯೇ ಇದೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು: ಸಿದ್ದರಾಮಯ್ಯ
ಅಷಾಢದ ನಂತರ ಕಾಂಗ್ರೆಸ್‌ಗೆ ಬರುವುದು ಖಚಿತ
ಮಂಜು ಕಾಂಗ್ರೆಸ್ ಪಕ್ಷಕ್ಕೆ ಬರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಪ್ಪಿದ್ದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಪ್ರಾಯ ಬೇರೆಯದೇ ಇತ್ತು. ಹಾಗಾಗಿ ಆರಂಭದಲ್ಲಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು.
ಹಾಲಿ ಜೆಡಿಎಸ್ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರನ್ನು ಕರೆತರುವ ಯೋಚನೆ ಸಿದ್ದರಾಮಯ್ಯನವರಿಗಿತ್ತು. ಎ.ಟಿ.ರಾಮಸ್ವಾಮಿ ಬಗ್ಗೆ ಸಾರ್ವಜನಿಕ ಅಭಿಪ್ರಾಯವೂ ಚೆನ್ನಾಗಿದೆ. ಜೊತೆಗೆ ರಾಜಕೀಯವಾಗಿಯೂ ಕ್ಲೀನ್ ಇಮೇಜ್ ಇದೆ. ಇವರನ್ನು ಕಾಂಗ್ರೆಸ್ಸಿಗೆ ಕರೆ ತಂದು ಟಿಕೆಟ್ ಕೊಟ್ರೆ ಗೆಲುವು ಗ್ಯಾರಂಟಿ. ಒಂದು ವೇಳೆ ಎ.ಟಿ.ರಾಮಸ್ವಾಮಿ ಕೈ ಹಿಡಿಯದಿದ್ದರೆ ಅವರ ಆಪ್ತ ಶಿಷ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ಯ ಪ್ರಸನ್ನಗೆ ಟಿಕೆಟ್ ಕೊಡಿಸುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿತ್ತು.
ಸಂಧಾನ ನಡೆಸಿದ ಎ.ಮಂಜು ಆಪ್ತರು
ಸಿದ್ದರಾಮಯ್ಯ ವಿರೋಧದಿಂದ ಕಂಗಾಲಾಗಿದ್ದ ಎ.ಮಂಜು ಸಿದ್ದರಾಮಯ್ಯ ಅವರ ನಿವಾಸಕ್ಕೆ ತಮ್ಮ ಆಪ್ತರನ್ನು ಕಳಿಸಿಕೊಟ್ಟು ಸಂಧಾನ ನಡೆಸಿದ್ದರು. ಕೊರೊನಾ ಕಾಲದಲ್ಲಿ ಅರಕಲಗೂಡು ರಾಜಕೀಯ ಚಿತ್ರಣ ಬದಲಾಗಿದ್ದರಿಂದ ಸಿದ್ದರಾಮಯ್ಯ ಕೂಡ ಎ.ಮಂಜು ಕಾಂಗ್ರೆಸ್ಸಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ನಡೆಯುತ್ತಿದ್ದು, ಆನಂತರ ಎ.ಮಂಜು ಕಾಂಗ್ರೆಸ್ ಪಕ್ಷ ಸೇರುವುದು ಪಕ್ಕಾ ಆಗಿದ್ದು, ಆಷಾಢದ ನಂತರ ಅಧಿಕೃತ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.