ನಾ ದಿವಾಕರ
ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ವ್ಯಾಧಿಗೆ ಬಲಿಯಾದ ಒಬ್ಬ ಹೆಣ್ಣುಮಗಳು ತನ್ನ ಒಡಲ ಕುಡಿಯ ಅಂಗಚಲನೆಯಲ್ಲಿ ಭವಿಷ್ಯದ ಸಮಾಜದ ಚಲನಶೀಲತೆಯನ್ನು ಗುರುತಿಸುವ ಒಂದು ರೂಪಕ ಇಲ್ಲಿ ಕಾಣುತ್ತದೆ. ಹಾಗೆಯೇ ಕಂದನ ಬಾಯೊಳಗೆ ಕಂಡ ಹಾಲುಹಲ್ಲುಗಳು ಇದೇ ಭವಿಷ್ಯದ ಸಮಾಜವನ್ನು ಕಚ್ಚಿಹಿಡಿಯುವ ಒಂದು ದಿಟ್ಟ ಅಸ್ತ್ರಗಳ ರೂಪದಲ್ಲಿ ಕಂಡುಬರುತ್ತವೆ. ಉರಿವ ಬೆಂಕಿಯ ಮುಂದೆ ತಾನೂ ಉರಿಯುತ್ತಾ ಕೂರುವ ಮಾಳ, ಸಮಾಜ ಪರಿವರ್ತನೆಗಾಗಿ ಹಪಹಪಿಸುವ ಪ್ರತಿಯೊಂದು ಸೂಕ್ಷ್ಮಸಂವೇದನೆಯ ಮನಸ್ಸಿನ ರೂಪಕವಾಗಿ ಕಾಣುತ್ತಾನೆ.
ಸಮಾಜದ ಗರ್ಭ ಸೀಳಿ ನೋಡುವ ಒಂದು ಪ್ರಯತ್ನವನ್ನು ʼಬಂಗಾರಿʼ ಕಾದಂಬರಿ ಮಾಡುತ್ತದೆ
ಸಮಾಜದ ಗರ್ಭದಿಂದ ಉದಯಿಸುವ ಅಕ್ಷರಗಳಷ್ಟೇ ಜನಪರ ಅಥವಾ ಸಮಾಜಮುಖಿ ಸಾಹಿತ್ಯ ಎನಿಸಿಕೊಳ್ಳುತ್ತದೆ. ಕತೆ, ಕಾದಂಬರಿ, ಕಾವ್ಯ, ನಾಟಕ ಹೀಗೆ ಸಹಜಾಭಿವ್ಯಕ್ತಿಯ ಯಾವುದೇ ಮಾಧ್ಯಮವಾದರೂ ತನ್ನೊಳಗೆ ಉಗಮಿಸುವ ಅಕ್ಷರಗಳಿಗೆ ಅರ್ಥಪೂರ್ಣ ಚೌಕಟ್ಟು ನೀಡಬೇಕಾದರೆ, ಆ ಅಕ್ಷರಗಳು ನಮ್ಮ ಸುತ್ತಲಿನ ಸಮಾಜದ ಅಂತರಂಗದಿಂದಲೇ ಆವಿರ್ಭವಿಸಿರಬೇಕು. ಹಾಗೆಯೇ ಈ ಸಾಮಾಜಿಕ ವಾತಾವರಣದ ಸುತ್ತ ಆವರಿಸಿರಬಹುದಾದ ಸಮಕಾಲೀನ ಸ್ಥಿತ್ಯಂತರಗಳು, ಚರಿತ್ರೆಯ ನೆನಪುಗಳು, ಪ್ರಾಚೀನ ನಂಬಿಕೆಗಳು ಮತ್ತು ಭವಿಷ್ಯದ ಆತಂಕಗಳಿಗೂ ಅಲ್ಲಿ ಅವಕಾಶ ಇರಬೇಕು. ಹಾಗೆಯೇ ವರ್ತಮಾನದ ಆಗುಹೋಗುಗಳಾಗಲೀ, ಗತಕಾಲದ ವೈಪರೀತ್ಯಗಳಾಗಲೀ, ಭವಿಷ್ಯದ ಮುಂಗಾಣ್ಕೆಯಾಗಲೀ ವಿಮರ್ಶಾತ್ಮಕವಾಗಿ ನೋಡುವಂತಹ ಒಂದು ಮೂಲ ಧಾತು ಸಾಹಿತ್ಯದಲ್ಲಿ ಅಡಗಿರಬೇಕು. ಆಗಲೇ ಒಂದು ಸಾಹಿತ್ಯ ಕೃತಿ “ಜನಮುಖಿ ಸಾಹಿತ್ಯ” ಎನಿಸಿಕೊಳ್ಳುತ್ತದೆ. ಇಲ್ಲವಾದರೆ ಕಾಫಿ ಟೇಬಲ್ ಕೃತಿಯಾಗಿ ಮನೆಗಳ/ಗ್ರಂಥಾಲಯಗಳ ಕಪಾಟುಗಳಲ್ಲಿ ಬಂದಿಯಾಗುತ್ತದೆ.
ಸಾಹಿತ್ಯ ರಚನೆಯಲ್ಲಿ ತೊಡಗುವವರಿಗೆ ಈ ಅರಿವು ಇದ್ದುದೇ ಆದರೆ ಅವರ ಬರಹಕ್ಕೂ ಸಾಹಿತ್ಯಾಧ್ಯಯನಕ್ಕೂ ನೇರಾನೇರ ಸಂಬಂಧ ಇರುವುದು ಅವರ ಕೃತಿಗಳಲ್ಲೇ ಗೋಚರಿಸುತ್ತದೆ. ಕಾದಂಬರಿ ಅಥವಾ ಕಥಾ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಅನುಭವಾತ್ಮಕ ನೆಲೆಗಳೇ ಹೆಚ್ಚು ಪ್ರಧಾನವಾಗಿ ಪ್ರಭಾವಿಸಿದರೂ, ಸ್ವಾನುಭವದಿಂದಾಚೆಗಿನ ಅನುಭಾವದ ನೆಲೆಗಳನ್ನು ಹೇಗೆ ಬಳಸಿಕೊಳ್ಳಲಾಗಿದೆ ಎನ್ನುವುದರ ಮೇಲೆ ಕತೆ ಕಾದಂಬರಿ ಅಥವಾ ಕಥನ ಕಾವ್ಯದ ಉತ್ಕೃಷ್ಟತೆ ನಿರ್ಧಾರವಾಗುತ್ತದೆ. ಈ ಗುಣಲಕ್ಷಣಗಳನ್ನು ಹೊಂದಿರುವ ಕತೆ-ಕಾವ್ಯಗಳನ್ನು ರಂಗಭೂಮಿಗೆ ಅಳವಡಿಸುವಾಗ ರಂಗ ನಿರ್ದೇಶಕರ-ನಾಟಕಕಾರರ ಕ್ರಿಯಾಶೀಲತೆ ಮತ್ತು ಸೃಜನಾತ್ಮಕ ಒಳನೋಟ ಹಾಗೂ ಒಳಹೊಕ್ಕು ನೋಡುವ ಸಾಮರ್ಥ್ಯದ ಅಗ್ನಿಪರೀಕ್ಷೆಯೇ ನಡೆಯುತ್ತದೆ. ಕನ್ನಡದ ಹಲವು ಶ್ರೇಷ್ಠ ಕೃತಿಗಳು ಶ್ರೇಷ್ಠ ನಾಟಕಗಳಾಗಿಯೂ ಮೂಡಿಬಂದಿರುವ ನೂರಾರು ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಯೇ ಸಾಹಿತ್ಯದ ಪರಾಗಸ್ಪರ್ಶವೂ ಇಲ್ಲದ ಕೃತಿಯೊಂದು ʼಜನಪ್ರಿಯʼ ನಾಟಕವಾಗುವ ದುರಂತವೂ ಸಂಭವಿಸಿರುವುದು ಕಾಲದ ವಿಡಂಬನೆಯಷ್ಟೆ.
ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳೇ ಬರುತ್ತಿಲ್ಲ, ಕಾವ್ಯ ಪ್ರತಿಭೆಗಳು ಹೊರಹೊಮ್ಮುತ್ತಿಲ್ಲ, ಉನ್ನತ ಗುಣಮಟ್ಟದ ಕತೆ ಕಾದಂಬರಿಗಳು ಪ್ರಕಟವಾಗುತ್ತಿಲ್ಲ ಎಂಬ ಗೊಣಗಾಟ, ಆರೋಪಗಳ ನಡುವೆಯೇ ನಮ್ಮ ನಡುವೆ ಅತ್ಯುತ್ತಮವಾದ ಕೆಲವು ಕಾದಂಬರಿಗಳು ನಡೆದಾಡುತ್ತಿರುವುದು ವಾಸ್ತವ. ಸಾಹಿತ್ಯದ ಓದುಗರೇ ಇಲ್ಲ ಎಂಬ ಹಲುಬುವಿಕೆ ಒಂದು ಹಂತದವರೆಗೆ ದಿಟ ಎನಿಸಿದರೂ, ಇಂದಿನ ಯುವ ಪೀಳಿಗೆಯ ಲೇಖನಿಯಿಂದ ಹೊರಬರುತ್ತಿರುವ ಕೆಲವು ಸಾಹಿತ್ಯ ಕೃತಿಗಳನ್ನು ಗಮನಿಸಿದಾಗ, ಓದುಗರ ಸಂಖ್ಯೆ ಕ್ಷೀಣಿಸಿದ್ದರೂ, ಗಂಭೀರ ಸಾಹಿತ್ಯಾಧ್ಯಯನದ ಮನಸುಗಳು ಕ್ಷೀಣಿಸಿವೆ ಎನಿಸುವುದಿಲ್ಲ. ಉನ್ನತ ಗುಣಮಟ್ಟದ ಅಭಿಜಾತ-ಸಮಕಾಲೀನ ಸಾಹಿತ್ಯಾಧ್ಯಯನ ಇಲ್ಲದೆಯೇ ಒಂದು ಸಾಹಿತ್ಯ ಕೃತಿಯ ರಚನೆ ಸಾಧ್ಯವಿಲ್ಲ ಎಂಬ ನಂಬಿಕೆ ನನಗಂತೂ ಇದೆ. ಈ ನಂಬಿಕೆಯನ್ನು ದೃಢೀಕರಿಸಲೇನೋ ಎನ್ನುವಂತೆ ನನ್ನ ಓದಿಗೆ ಯುವ ತಲೆಮಾರಿನ ಕೆಲವು ಸಾಹಿತ್ಯ ಕೃತಿಗಳು ಲಭಿಸಿವೆ. ಶ್ರೇಣೀಕರಣದ ಸಾಹಸಕ್ಕೆ ಕೈಹಾಕದೆ ಅಂತಹ ಕೆಲವು ಕೃತಿಗಳ ಬಗ್ಗೆ ಹೇಳುವುದಾದರೆ ಯುವ ತಲೆಮಾರಿನ ಈ ಸಾಹಿತ್ಯದ ಪಯಣದ ಬಗ್ಗೆ ಹೆಮ್ಮೆ ಮೂಡುತ್ತದೆ. ಕನ್ನಡ ಸಾಹಿತ್ಯ ಭಂಡಾರ ಬರಿದಾಗುವುದಿಲ್ಲ ಎಂಬ ಭರವಸೆಯೂ ಮೂಡುತ್ತದೆ.
ʼ ಬಂಗಾರಿ ʼ ಎಂಬ ರೂಪಕ
ಈ ಭರವಸೆಯನ್ನು ದೃಢೀಕರಿಸುವ ಒಂದು ಕೃತಿ ಇದೀಗ ನನ್ನ ಓದಿಗೆ ನಿಲುಕಿದೆ. ಸಮಾಜಮುಖಿ ಚಿಂತನೆಗಳೊಂದಿಗೆ ಜನಪರ ಹೋರಾಟಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾ ಪತ್ರಿಕೋದ್ಯಮದ ಅನುಭವದೊಂದಿಗೆ ಸಮಾಜದ ಒಳಸುಳಿಗಳನ್ನು ಅರ್ಥಮಾಡಿಕೊಳ್ಳುತ್ತಾ ನಮ್ಮ ನಡುವೆ ಇರುವ ಯುವ ಸಾಹಿತಿ ವರಹಳ್ಳಿ ಆನಂದ ಅವರ ಕಾದಂಬರಿ “ ಬಂಗಾರಿ ” ಈ ಭರವಸೆಗೆ ಕಾರಣವಾಗಿದೆ. ಈ ಕಾದಂಬರಿ ಮೊದಲ ಓದಿಗೆ ದಕ್ಕುವುದಲ್ಲ ಎಂದು ತಮ್ಮ ಮುನ್ನುಡಿಯಲ್ಲಿ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿರುವುದು ಅತಿಶಯೋಕ್ತಿಯೇನಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ಇದು ಎರಡು ಬಾರಿ ಓದಿಸಿಕೊಂಡಿದೆ. ಮೊದಲನೆಯ ಕಾರಣ ಎಂದರೆ ಈ ಕಾದಂಬರಿಯಲ್ಲಿ ಬಳಸಿರುವ ನಂಜನಗೂಡು-ಟಿ ನರಸೀಪುರ ಪ್ರದೇಶದ ಗ್ರಾಮ್ಯ ಭಾಷೆ, ಎರಡನೆಯದು ಈ ಕಥಾ ಹಂದರದ ವ್ಯಾಪ್ತಿ, ಆಳ ಮತ್ತು ಅಗಲ. ಕೋಲಾರ-ಮೈಸೂರಿಗೆ ಸೀಮಿತವಾದ ನನ್ನ ಭಾಷಾ ಅರಿವಿಗೆ ಈ ಸ್ಥಳೀಯ ಭಾಷೆ ಸುಲಭವಾಗಿ ನಿಲುಕುವುದಲ್ಲ ಎನ್ನುವ ಅನುಭವವನ್ನು ದೇವನೂರು ಮಹದೇವ ಅವರ ಕುಸುಮಬಾಲೆ, ಒಡಲಾಳದ ಸಂದರ್ಭದಲ್ಲೇ ಕಂಡುಕೊಂಡಿರುವುದರಿಂದ, “ ಬಂಗಾರಿ ”ಯನ್ನು ಮತ್ತೆ ಮತ್ತೆ ಓದಬೇಕಾಯಿತು.
ನನ್ನ ಸೀಮಿತ ಅರಿವಿಗೆ ಮೀರಿದ ಈ ಸ್ಥಳೀಯ ಗ್ರಾಮ್ಯ ಭಾಷೆಯ ಛಂದಸ್ಸು, ಲಯ ಬದ್ದತೆ, ಬಿಗಿ ಮತ್ತು ಅರ್ಥವ್ಯಾಪ್ತಿಯ ಬಗ್ಗೆ ಹೆಚ್ಚು ಬರೆಯುವುದೂ ನನ್ನಿಂದಾಗದು. ಆದರೆ ವರಹಳ್ಳಿ ಆನಂದ ಬಳಸಿರುವ ತಮ್ಮ ತಾಯ್ನುಡಿಯು ಕಥೆಯ ಹರವು-ಹಂದರ ಅಥವಾ ಚೌಕಟ್ಟಿಗೆ ಯಾವುದೇ ರೀತಿಯಲ್ಲೂ ಧಕ್ಕೆ ತರದಂತೆ ಹರಿದುಬಂದಿದೆ ಎನ್ನುವುದನ್ನು ನಿಶ್ಚಿತವಾಗಿ ಹೇಳಬಲ್ಲೆ. ಯಾವುದೇ ಒಂದು ಕಾದಂಬರಿಯ ಮೂಲ ಲಕ್ಷಣ ಎಂದರೆ ಓದಿಸಿಕೊಂಡು ಹೋಗುವ ವಿಧಾನ ಮತ್ತು ಕಥಾ ಹಂದರದಲ್ಲಿ ಆರಂಭದಿಂದಲೂ ಕೊನೆಯವರೆಗೂ ಇರಬೇಕಾದ ಬಿಗಿ ಹಿಡಿತ. ಕಾದಂಬರಿಯ ಪಾತ್ರಗಳನ್ನು ಸೃಷ್ಟಿಸುವ ಸಂದರ್ಭಲ್ಲಿ ಆಯಾ ಪಾತ್ರಗಳ ಸುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನೂ ಕಥೆಯ ಚೌಕಟ್ಟಿನೊಳಗೇ ಹಿಡಿದಿಡುವ ಒಂದು ಕಲೆ ಕಾದಂಬರಿಯ ಮೂಲ ಲಕ್ಷಣ. ಕಾದಂಬರಿಯ ಪಾತ್ರಗಳು ನಿರ್ವಾತದಲ್ಲಿ ಅಥವಾ ಶೂನ್ಯದಲ್ಲಿ ಸೃಷ್ಟಿಯಾಗುವುದಿಲ್ಲ, ಯಾವುದೋ ಒಂದು ವಿಭಿನ್ನ ಕಾಲಘಟ್ಟದ ಸಮಾಜದ ಒಡಲಲ್ಲೇ ಜನಿಸುತ್ತವೆ. ಹೀಗೆ ಜನಿಸುವ ಪಾತ್ರಗಳಿಗೆ ಜೀವ ತುಂಬುವಾಗ ತಾವು ಹುಟ್ಟಿ ಬೆಳೆದ ಭಾಷೆಯನ್ನೇ ಬಳಸುವುದು ಇವತ್ತಿನ ಸಂದರ್ಭದ ಅನಿವಾರ್ಯತೆಯೂ ಆಗಿದೆ. ವರಹಳ್ಳಿ ಆನಂದ ಇಲ್ಲಿ ಗೆದ್ದಿದ್ದಾರೆ ಎಂದೇ ಹೇಳಬಹುದು.
ಈ ಪಾತ್ರಗಳ ಜನಕರಿಗೆ, ಅಂದರೆ ಕಾದಂಬರಿಕಾರರಿಗೆ, ತಾವು ಸೃಷ್ಟಿಸುವ ಪಾತ್ರಗಳ ಸುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ಪರಿಸರದ ಅರಿವು ಇರುವಷ್ಟೇ ಆಯಾ ಸಮಾಜದ-ಕಾಲಘಟ್ಟದ ಒಳಸೂಕ್ಷ್ಮಗಳೂ, ಒಳಸುಳಿಗಳು, ಬಾಹ್ಯ ಲಕ್ಷಣಗಳೂ ತಿಳಿದಿರಬೇಕು. ಇಲ್ಲವಾದಲ್ಲಿ ಪಾತ್ರಗಳು ಕೇವಲ ಕೃತಿಕಾರನ ಸೂತ್ರದ ಗೊಂಬೆಗಳಾಗಿ ತಮ್ಮ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ವರಹಳ್ಳಿ ಆನಂದ ಅವರ “ ಬಂಗಾರಿ ” ( 94 ಪುಟಗಳ ಪುಟ್ಟ ಕಾದಂಬರಿ) ಈ ಎಲ್ಲ ಒಳಸೂಕ್ಷ್ಮಗಳನ್ನೂ ತನ್ನ ಒಡಲಲ್ಲಿಟ್ಟುಕೊಂಡೇ ಅಕ್ಷರ ರೂಪದಲ್ಲಿ ಹೊರಬಂದಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಕಥಾ ಹಂದರದಲ್ಲಿ ಆರಂಭದಿಂದ ಕೊನೆಯವರೆಗೂ ಹರಡಿಕೊಂಡಿರುವ ಮಾಳ ಎಂಬ ಯುವಕ ವರ್ತಮಾನದ ಸಾಮಾಜಿಕ ಬದುಕಿನಲ್ಲಿ ನಮಗೆ ಎದುರಾಗಬಹುದಾದ ಯಾವುದೋ ಒಬ್ಬ ಶೋಷಿತ ವರ್ಗದ ಸಮಾಜಮುಖಿ ಯುವಕನಾಗಿ ಕಾಣುತ್ತಾನೆ. ಈ ಮಾಳನ ಮನದ ತಲ್ಲಣಗಳು, ಆತಂಕಗಳು, ಸುತ್ತಲ ಘಟನೆಗಳ ವಿರುದ್ಧ ಆತನ ಮನಸ್ಸಿನಲ್ಲುಂಟಾಗುವ ಹತಾಶೆ-ಆಕ್ರೋಶಗಳು ಸಮಕಾಲೀನ ಸಂದರ್ಭದ ಸಾಮಾಜಿಕ ಸನ್ನಿವೇಶವನ್ನು ನಮ್ಮ ಮುಂದಿರಿಸುವುದಷ್ಟೇ ಅಲ್ಲದೆ ಮಾಳ ನಮ್ಮೊಳಗೊಬ್ಬನಾಗಿ ಕಾಣತೊಡಗುತ್ತಾನೆ.
ಗ್ರಹಿಕೆಗಳ ಸಿಕ್ಕುಗಳ ನಡುವೆ
ಶೋಷಣೆ ಎನ್ನುವುದು ತನ್ನೆಲ್ಲಾ ಆಯಾಮಗಳಲ್ಲೂ ತೆರೆದುಕೊಳ್ಳುತ್ತಿರುವ 21ನೆಯ ಶತಮಾನದ ಭಾರತದಲ್ಲಿ ಜಾತಿ-ಧರ್ಮ-ಸಂಸ್ಕೃತಿ-ಭಾಷೆ ಮತ್ತು ಜನಾಂಗೀಯ ನೆಲೆಯ ಎಲ್ಲ ಮಜಲುಗಳೂ ಸಹ ಶೋಷಿತರ ಗೂಡಿನಂತೆ ಭಾಸವಾಗುತ್ತಿದೆ. ದೌರ್ಜನ್ಯ ಅತ್ಯಾಚಾರ ತಾರತಮ್ಯಗಳ ಗುರಿ ಅಮಾಯಕ-ಶೋಷಿತ-ಅಸಹಾಯಕ-ದುರ್ಬಲ ಸಮುದಾಯಗಳಾಗಿರುವಂತೆಯೇ, ಈ ಅನ್ಯಾಯಗಳನ್ನು ನಿಷ್ಕರ್ಷೆ ಮಾಡುವ ವಿಶಾಲ ಸಮಾಜದ ಬೌದ್ಧಿಕ ನೆಲೆಗಳೂ ಸಹ ಈ ಅಸ್ಮಿತೆಗಳಿಗೆ ಅನುಸಾರವಾಗಿಯೇ ವಿಘಟನೆಯಾಗಿವೆ. ಅಂದರೆ 21ನೆಯ ಶತಮಾನದ ಮೂರನೆ ದಶಕದ ಭಾರತದಲ್ಲಿ ಸಂತ್ರಸ್ತ-ಸಂತ್ರಸ್ತೆಯರನ್ನು ನಿರ್ದಿಷ್ಟ ಅಸ್ಮಿತೆಗಳ ಚೌಕಟ್ಟಿನೊಳಗಿಟ್ಟು ಗುರುತಿಸುವಂತೆಯೇ ಅಮಾನುಷತೆಯ ಭೀಕರ ವಿಧಾನಗಳನ್ನು ಅನುಸರಿಸುವ ಶೋಷಕ ಸಮಾಜದ ಅಪರಾಧಿಗಳನ್ನೂ ಸಹ ಅದೇ ರೀತಿ ಗುರುತಿಸಲಾಗುತ್ತಿದೆ. ಹಾಗಾಗಿ ತಮ್ಮ ಅಸ್ಮಿತೆಗಳಿಗನುಸಾರ ಅನ್ಯಾಯಕ್ಕೊಳಗಾದವರು ವಿಸ್ಮೃತಿಗೆ ಜಾರುತ್ತಿದ್ದರೆ, ಅನ್ಯಾಯ ಎಸಗುವವರು ಸಮಾಜದ ಮುಖ್ಯವಾಹಿನಿಯ ಒಂದು ಭಾಗವಾಗಿಹೋಗುತ್ತಾರೆ.
ಇದನ್ನೂಓದಿ:ಕರ್ನಾಟಕಕ್ಕೆ ಅಕ್ಕಿ ನಿರಾಕರಿಸುವ ಆಹಾರ ನಿಗಮದ ವಿಲಕ್ಷಣ ತರ್ಕ
ಈ ಸಾಂಸ್ಕೃತಿಕ ವೈಪರೀತ್ಯ ಮತ್ತು ಸಾಮಾಜಿಕ ಸೂಕ್ಷ್ಮಗಳನ್ನು ವರಹಳ್ಳಿ ಆನಂದ “ಬಂಗಾರಿ” ಹೆಸರಿನ ಒಂದು ಎಳೆಗೂಸನ್ನು ರೂಪಕವನ್ನಾಗಿಟ್ಟು ಹೊರಗೆಡಹಲು ಯತ್ನಿಸಿದ್ದಾರೆ. ಈ ಕೃತಿಯಲ್ಲಿ ಬರುವ-ಬಂದುಹೋಗುವ-ಕೊನೆಯವರೆಗೂ ಉಳಿದು ಓದುಗರ ಮನಸ್ಸನ್ನು ತಲ್ಲಣಗೊಳಿಸುವ ಪಾತ್ರಗಳು ಹಲವು. ರಾಮಪ್ಪ-ಮಾಳ-ಸಿವಮ್ಮ-ಕಲೀಂಸಾಬಿ-ತಿರುಮಲ ಹೀಗೆ ಹಲವು ಪಾತ್ರಗಳ ಮೂಲಕ ನಮ್ಮ ನಿತ್ಯ ಸಾಮಾಜಿಕ ಬದುಕಿನಲ್ಲಿ ಎಂದಿಗೂ ಕಾಣಬಹುದಾದ ವ್ಯತ್ಯಯಗಳನ್ನು ತರತಮಗಳನ್ನು ಲೇಖಕರು ದಾಖಲಿಸುತ್ತಾ ಹೋಗುತ್ತಾರೆ. ಸಮಾಜದಲ್ಲಿ ಸಂಭವಿಸುವ ಘಟನೆಗಳನ್ನು ಕೇವಲ ನಿರ್ದಿಷ್ಟ ಚೌಕಟ್ಟಿನೊಳಗಿನ ಪ್ರಸಂಗಗಳಂತೆ ನೋಡದೆ ವರಹಳ್ಳಿ ಆನಂದ್ ತಮ್ಮ ʼ ಬಂಗಾರಿ ʼ ಕಾದಂಬರಿಯಲ್ಲಿ ಈ ಬೆಳವಣಿಗೆಗಳನ್ನು ರಾಷ್ಟ್ರ ರಾಜಕಾರಣ, ಆರ್ಥಿಕತೆ ಮತ್ತು ಸಮಕಾಲೀನ ಸಮಾಜದ ಬೇಕುಬೇಡಗಳ ಚೌಕಟ್ಟಿನೊಳಗಿಟ್ಟು ತಮ್ಮ ಕತೆಯನ್ನು ಬೆಳೆಸುತ್ತಾರೆ. ಇದು ಯಾವುದೇ ಒಂದು ಸಮಾಜಮುಖಿ ಸಾಹಿತ್ಯದಲ್ಲಿರಬೇಕಾದ ಲಕ್ಷಣ. ಕೋಮುವಾದ, ಕೋಮುವಾದಿ-ಜಾತಿ ಪ್ರಜ್ಞೆ ಮತ್ತು ಶ್ರೇಷ್ಠತೆಯ ಅಹಮಿಕೆ, ಮೌಢ್ಯಾಚರಣೆಗಳು ಮತ್ತು ಕಂದಾಚಾರ ಇದಾವುದೂ ನಿರ್ವಾತದಲ್ಲಿ ಉಗಮಿಸುವುದಿಲ್ಲ ಬದಲಾಗಿ ನಮ್ಮ ಸಮಾಜದ ನಿತ್ಯ ಬದುಕಿನ ನೆಲೆಗಳಲ್ಲೇ ಸೃಷ್ಟಿಯಾಗುತ್ತವೆ ಎಂಬ ಚಾರಿತ್ರಿಕ ವಾಸ್ತವವನ್ನು ʼ ಬಂಗಾರಿ ʼ ತೆರೆದಿಡುತ್ತದೆ.
ಯುವ ಸಾಹಿತಿಯಾಗಿ ವರಹಳ್ಳಿ ಆನಂದ್ ʼ ಬಂಗಾರಿ ʼ ಎಂಬ ಹಸುಳೆಯನ್ನು ರೂಪಕವಾಗಿ ಬಳಸುವಾಗ ತಮ್ಮ ಬದುಕಿನ ಅನುಭವ ಮತ್ತು ಅನುಭಾವದ ನೆಲೆಗಳನ್ನು ಸಮರ್ಥವಾಗಿ ಗ್ರಹಿಸಿದ್ದಾರೆ ಎನಿಸುತ್ತದೆ. ಏಕೆಂದರೆ ಆ ಕೂಸು ಸಮಾಜದ ಸಾಂಪ್ರದಾಯಿಕ ಕಟ್ಟಳೆಗಳನ್ನು ಮೀರಿದ ಇಬ್ಬರು ವ್ಯಕ್ತಿಗಳ ನಡುವಿನ ಸಮ್ಮಿಲನದ ಫಲ. ಬಂಗಾರಿಯ ಜನಕರಾದ ತಿರುಮಲ ಮತ್ತು ಚಿತ್ರಾ ತಮ್ಮ ಜಾತಿ ಅಸ್ಮಿತೆಗಳನ್ನು ಧಿಕ್ಕರಿಸಿ ಒಂದಾದರೂ ತನ್ನ ಹೊಸ ಪ್ರಪಂಚಕ್ಕೆ ಕಣ್ಣುಬಿಡುವ ʼ ಬಂಗಾರಿ ʼಯ ಅಸ್ಮಿತೆ ಏನು ? ಕಾದಂಬರಿಯ ಕೊನೆಯ ದೃಶ್ಯದಲ್ಲಿ ಈ ಪ್ರಸಂಗವನ್ನು ಹೃದಯಸ್ಪರ್ಶಿಯಾಗಿ ಮೂಡಿಸುವ ಲೇಖಕರ ಮನುಜ ಸೂಕ್ಷ್ಮತೆ ಈ ಸಾಲುಗಳಲ್ಲಿ ವ್ಯಕ್ತವಾಗುತ್ತದೆ .
“ ಕೂಸಿನ ಕೋಣೆಯ ಒಳಗ ದೀಪದ ಬೆಳಕಲ್ಲಿ ಬಂಗಾರಿಯು ಕಾಲುಕೈ ತುಟಿಗಳ ಆಡುಸ್ತ ಅವ್ವ ಚಿತ್ರಾಳ ತೊಡಮ್ಯಾಲ ಚೋಚುಗದಲ್ಲಿ ಆಡ್ತ ಇತ್ತು,,,,, ಚಿತ್ರಾಳು ಬಂಗಾರಿಯ ಬಾಯೊಳಗೆ ಕಂಡ ಎಡು ಹಾಲಹಲ್ಲುಗಳನ್ನು ನೋಡ್ತ ನಗುತ್ತಿರುವಾಗ ,,,”
ಹೀಗೆ ತಮ್ಮ ಕಥಾಹಂದರವನ್ನು ಸಂಪನ್ನಗೊಳಿಸುತ್ತಲೇ ವರಹಳ್ಳಿ ಆನಂದ್ “ {ಮಾಳನು},, ಕುಂಟ್ತ ಕುಂಟ್ತ ಆ ಉರಿಯುತ್ತಿದ್ದ ಬೆಂಕಿ ಮುಂದ ಕೂತು ತಾನೂ ಉರಿಯುತ್ತಿದ್ದ ” ಎಂದು ಹೇಳುವಲ್ಲಿ ಕಾದಂಬರಿಯನ್ನು ಸಂಪನ್ನಗೊಳಿಸುತ್ತಾರೆ.
ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ವ್ಯಾಧಿಗೆ ಬಲಿಯಾದ ಒಬ್ಬ ಹೆಣ್ಣುಮಗಳು ತನ್ನ ಒಡಲ ಕುಡಿಯ ಅಂಗಚಲನೆಯಲ್ಲಿ ಭವಿಷ್ಯದ ಸಮಾಜದ ಚಲನಶೀಲತೆಯನ್ನು ಗುರುತಿಸುವ ಒಂದು ರೂಪಕ ಇಲ್ಲಿ ಕಾಣುತ್ತದೆ. ಹಾಗೆಯೇ ಕಂದನ ಬಾಯೊಳಗೆ ಕಂಡ ಹಾಲುಹಲ್ಲುಗಳು ಇದೇ ಭವಿಷ್ಯದ ಸಮಾಜವನ್ನು ಕಚ್ಚಿಹಿಡಿಯುವ ಒಂದು ದಿಟ್ಟ ಅಸ್ತ್ರಗಳ ರೂಪದಲ್ಲಿ ಕಂಡುಬರುತ್ತವೆ. ಉರಿವ ಬೆಂಕಿಯ ಮುಂದೆ ತಾನೂ ಉರಿಯುತ್ತಾ ಕೂರುವ ಮಾಳ, ಸಮಾಜ ಪರಿವರ್ತನೆಗಾಗಿ ಹಪಹಪಿಸುವ ಪ್ರತಿಯೊಂದು ಸೂಕ್ಷ್ಮಸಂವೇದನೆಯ ಮನಸ್ಸಿನ ರೂಪಕವಾಗಿ ಕಾಣುತ್ತಾನೆ.
“ ಬಂಗಾರಿ ” ಎಂಬ ಕೂಸು ಈ ಭವಿಷ್ಯದ ಸಮಾಜಕ್ಕೆ ಬೇಕಾದ ಬೆಳಕಿನ ಕಿಂಡಿಯಾಗಿ ಮಾಳನ ಮುಂದಿರುವ ಬೆಂಕಿಯನ್ನು ನಂದಿಸುವ ಒಂದು ಸಾಂಸ್ಕೃತಿಕ ರೂಪಕವಾಗಿ ಕಾಣುತ್ತದೆ.
ಹೀಗೆ ಹಲವು ಪಾತ್ರಗಳನ್ನೇ ರೂಪಕಗಳನ್ನಾಗಿ, ಪ್ರತಿಮೆಗಳನ್ನಾಗಿ ಬಳಸುವ ಮೂಲಕ ಯುವ ಸಾಹಿತಿ ವರಹಳ್ಳಿ ಆನಂದ್ ಸ್ಥಳೀಯ ಭಾಷಾ ಸೊಗಡು ಎಲ್ಲಿಯೂ ಮಸುಕಾಗದ ರೀತಿಯಲ್ಲಿ ಇಡೀ ಕಾದಂಬರಿಯನ್ನು ರಚಿಸಿದ್ದಾರೆ. ಈ ರೂಪಕಗಳು, ಪ್ರತಿಮೆಗಳು ನಮ್ಮ ನಡುವೆ ಸದಾ ಜೀವಂತಿಕೆಯಿಂದ ಇದ್ದರೂ ಸಹ ಗುರುತಿಸಲಾಗದ ರೀತಿಯಲ್ಲಿ ಜಾತಿ-ಮತ-ಧರ್ಮಗಳ ಹೊದಿಕೆಗಳು ಮುಖವಾಡಗಳಾಗಿ ನಮ್ಮ ನಡುವೆ ಇದೆ. ʼ ಬಂಗಾರಿ ʼ ಈ ಹೊದಿಕೆಗಳನ್ನು ಕಳಚಿಹಾಕುವ ಒಂದು ಸಾಂಸ್ಕೃತಿಕ ಶಕ್ತಿಯಾಗಿ ಕಾಣುವ ಹಸುಳೆ ಎಂದು ಭಾಸವಾದರೆ ಅಚ್ಚರಿಯೇನಿಲ್ಲ. ಜಾತಿ-ಮತ ಶ್ರೇಷ್ಠತೆಯ ವ್ಯಾಧಿ ಮತ್ತು ಲಿಂಗ ಭೇದದ ವ್ಯಸನಗಳನ್ನು ಮೀರಿದ ಒಂದು ಸಮ ಸಮಾಜದತ್ತ ನೋಡುತ್ತಿರುವ ಇಡೀ ತಲೆಮಾರಿಗೆ ʼಬಂಗಾರಿʼ ಕೇವಲ ರೂಪಕವಾಗಿ ಉಳಿಯದೆ ಶಾಶ್ವತ ಪ್ರತಿಮೆಯಾಗಿ ಉಳಿದರೆ ವರಹಳ್ಳಿ ಆನಂದ ಅವರ ಈ ಪುಟ್ಟ ಕಾದಂಬರಿಯ ಆಶಯಗಳೂ ಸಾರ್ಥಕವಾದೀತು. ಆ ಹೊರೆ ನಮ್ಮ ಸಮಾಜದ ಮೇಲಿದೆ.