ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶರಂತವರು ನ್ಯಾಯಪೀಠಕ್ಕೆ, ನ್ಯಾಯಾಲಯಕ್ಕೆ, ಒಟ್ಟಾರೆಯಾಗಿ ನ್ಯಾಯಾಂಗ ವ್ಯವಸ್ಥೆಗೆ ಕಳಂಕ
ಅಲಹಾಬಾದ್: ಹೈಕೋರ್ಟಿನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ರವರ ಒಂದು ಸಾರ್ವಜನಿಕ ಭಾಷಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಮಾಜಿ ಸಂಸದೆ ಮತ್ತು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ವಿಶ್ವ ಹಿಂದೂ ಪರಿಷದ್(ವಿಹೆಚ್‍ಪಿ)ನ ಸಮಾರಂಭದಲ್ಲಿ ಮಾತಾಡುತ್ತ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ರವರ ಟಿಪ್ಪಣಿಗಳು ಹೇಗೆ ನ್ಯಾಯಾಂಗದ ನಿಷ್ಪಕ್ಷಪಾತತೆ ಮತ್ತು ಸಾಂವಿಧಾನಿಕ ಮೌಲ್ಯಗಳ ತತ್ವಗಳನ್ನು ದುರ್ಬಲಗೊಳಿಸುವ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಈ ಪತ್ರದಲ್ಲಿ ಎತ್ತಿ ತೋರಿಸಿರುವ ಬೃಂದಾ ಕಾರಟ್, ಇಂತಹ ಒಬ್ಬ ಸದಸ್ಯರು ಪೀಠಕ್ಕೆ, ನ್ಯಾಯಾಲಯಕ್ಕೆ, ಒಟ್ಟಾರೆಯಾಗಿ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುತ್ತಾರೆ, ಒಂದು ನ್ಯಾಯಾಲಯದಲ್ಲಿ ಅಂತಹ ವ್ಯಕ್ತಿಗಳಿಗೆ ಯಾವುದೇ ಸ್ಥಾನವಿಲ್ಲ ಮತ್ತು ಇರಬಾರದು, ಈ ನಿಟ್ಟಿನಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯದ ಕ್ರಮಕ್ಕೆ ದೇಶ ಆಭಾರಿಯಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಹೈಕೋರ್ಟ್ ನ್ಯಾಯಾಧೀಶರ ಭಾಷಣದ ಸಂದರ್ಭದಲ್ಲಿ ಮೂರು ಅಂಶಗಳಿಗಾಗಿ ಈ ಪತ್ರ ಬರೆಯಬೇಕಾಗಿದೆ ಎಂದು ಬೃಂದಾ ಕಾರಟ್ ಹೇಳುತ್ತಾರೆ
– ಮೊದಲನೆಯದಾಗಿ, ಒಬ್ಬ ಹಿರಿಯ ನ್ಯಾಯಾಂಗ ಅಧಿಕಾರಿ ಯಾವುದೇ ಸಂಕುಚಿತಪಂಥವಾದೀ ಸಂಘಟನೆಯ ಕಾರ್ಯಕ್ರಮಕ್ಕೆ ಹಾಜರಾಗಬೇಕೇ ಎಂಬುದೇ ಒಂದು ಗಂಭೀರ ವಿಷಯವಾಗಿದೆ. ಇದು ನ್ಯಾಯಾಂಗ ನೀತಿ ಸಂಹಿತೆಯ ಪ್ರಶ್ನೆ.
ಇದನ್ನೂ ಓದಿ: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ, ಜಾತಿನಿಂದನೆ ಆರೋಪ; ಆಂಧ್ರದ ಯುವಕನ ವಿರುದ್ಧ ಪ್ರಕರಣ ದಾಖಲು
– ಎರಡನೆಯದಾಗಿ, ನ್ಯಾಯಾಂಗದ ಸದಸ್ಯರು ನ್ಯಾಯಾಲಯದಲ್ಲಿ ವಿಚಾರಣಾಧೀನ ಅಥವಾ ಶಾಸಕಾಂಗಗಳಲ್ಲಿ ಚರ್ಚಿಸುತ್ತಿರುವ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಟಿಪ್ಪಣಿ ಮಾಡಬೇಕೇ?
– ಮೂರನೆಯದಾಗಿ ಮತ್ತು ಮುಖ್ಯವಾಗಿ ನ್ಯಾಯಮೂರ್ತಿ ಯಾದವ್ ತಮ್ಮ ಭಾಷಣದಲ್ಲಿ ಏನೆಲ್ಲಾ ಹೇಳಿದ್ದಾರೆ ಎಂಬುದು.
ಈ ಭಾಷಣ ಭಾರತದ ಸಂವಿಧಾನದ ಮೇಲೆ ಮಾಡಿದ ಪ್ರಮಾಣ ವಚನದ ಉಲ್ಲಂಘನೆಯಾಗಿದೆ. ಈ ಭಾಷಣ ಒಂದು ದ್ವೇಷ ಭಾಷಣ. ಈ ಭಾಷಣ ಸಂವಿಧಾನದ ಮೇಲಿನ ಹಲ್ಲೆಯಾಗಿದೆ. ಈ ಭಾಷಣವು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದ ಸಾಮೂಹಿಕ ಆತ್ಮಸಾಕ್ಷಿಗೆ ಅಪಚಾರವಾಗಿದೆ. ಇದನ್ನು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಮಾಡಿದ್ದಾರೆ ಎಂಬುದು ನ್ಯಾಯ ಪ್ರಕ್ರಿಯೆಗಳ ಮೇಲಿನ ಆಕ್ರಮಣ ಕೂಡ ಆಗಿದೆ ಎಂದು ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶರ ಭಾಷಣದ ಆಕ್ಷೇಪಕಾರಿ ಅಂಶಗಳನ್ನು ಉದ್ಧರಿಸುತ್ತ ಬೃಂದಾ ಕಾರಟ್ ಹೇಳಿದ್ದಾರೆ.
ಡಿಸೆಂಬರ್ 9, 2024 ರಂದು ಅವರು ಬರೆದ ಪತ್ರದ ಪೂರ್ಣ ಪಾಟ ಹೀಗಿದೆ:
ಗೌರವಾನ್ವಿತ ಭಾರತದ ಮುಖ್ಯ ನ್ಯಾಯಮೂರ್ತಿಗಳೇ,
ನ್ಯಾಯಾಂಗದ ಒಬ್ಬ ಹಿರಿಯ ಸದಸ್ಯ, ಅಲಹಾಬಾದ್ ಹೈಕೋರ್ಟ್‌ನ ಒಬ್ಬ ನ್ಯಾಯಾಧೀಶ, ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಮಾಡಿದ ಸಾರ್ವಜನಿಕ ಭಾಷಣದತ್ತ ನಿಮ್ಮ ಗಮನವನ್ನು ಸೆಳೆಯುವುದು ನನ್ನ ಕರ್ತವ್ಯವೆಂದು ಪರಿಗಣಿಸಿ ನಿಮಗೆ ಬರೆಯುವ ಸ್ವಾತಂತ್ರ್ಯವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ಈ ಭಾಷಣವು ಸಾರ್ವಜನಿಕವಾಗಿ ಯೂಟ್ಯೂಬ್‌ನಲ್ಲಿ ಲಭ್ಯವಿದೆ, ಮತ್ತು ಇಂದು ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ವರದಿಯಾಗಿದೆ. ಇದನ್ನು ಅಸಂಖ್ಯ ಜನರು ವೀಕ್ಷಿಸಿದ್ದಾರೆ/ಓದಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಸಹ ಟಿಪ್ಪಣಿ ಮಾಡಿದ್ದಾರೆ. ಅಂದರೆ , ಅದರ ಪ್ರಭಾವವು ನಿಸ್ಸಂದೇಹವಾಗಿ ಅವರು ಮಾತನಾಡುವಾಗ ಹಾಜರಿದ್ದ ಬಹುಶಃ ಕೆಲವು ನೂರು ಜನರಿಗಿಂತ ಹೆಚ್ಚು ವಿಸ್ತಾರವಾಗಿದೆ. ಆದುದರಿಂದ ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ವಾಸ್ತವಾಂಶಗಳನ್ನು ತಿಳಿಸುವುದು ಅಗತ್ಯ ವಾಗಿದೆ, ಈ ಮೂಲಕ ಕ್ರಮ ಕೈಗೊಳ್ಳುವಂತಾಗುವುದು ಅಗತ್ಯ ಮತ್ತು ತುರ್ತಿನದ್ದಾಗಿದೆ, ಹೀಗಾಗಿಯೇ ಈ ಪತ್ರ.
ಭಾನುವಾರ ಡಿಸೆಂಬರ್ 8 ರಂದು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಸಭೆಯಲ್ಲಿ ನ್ಯಾಯಮೂರ್ತಿ ಯಾದವ್ ಭಾಗವಹಿಸಿದ್ದರು. ವಿಎಚ್‌ಪಿ ಯ ಅಧಿಕೃತ ವೆಬ್‌ಸೈಟ್ (vhp.org) ಹೀಗೆ ಹೇಳುತ್ತದೆ ”ವಿಹಿಪ್ ಕಾ ಉದ್ದೇಶ ಹಿಂದೂ ಸಮಾಜ ಕೋ ಸಂಗಠಿತ್ ಕರ್ನಾ, ಹಿಂದೂ ಧರ್ಮ್ ಕೀ ರಕ್ಷಾ ಕರ್ನಾ, ಔರ್ ಸಮಾಜ್ ಕೀ ಸೇವಾ ಕರ್ನಾ ಹೈ” (ವಿಎಚ್‌ಪಿಯ ಗುರಿ ಹಿಂದೂ ಸಮಾಜವನ್ನು ಸಂಘಟಿಸುವುದು, ಹಿಂದೂ ಸಮಾಜವನ್ನು ರಕ್ಷಿಸುವುದು ಮತ್ತು ಅದರ ಸೇವೆ ಮಾಡುವುದು). ಒಬ್ಬ ಹಿರಿಯ ನ್ಯಾಯಾಂಗ ಅಧಿಕಾರಿ ಯಾವುದೇ ಸಂಕುಚಿತ ಪಂಥವಾದೀ ಸಂಘಟನೆಯ ಕಾರ್ಯಕ್ರಮಕ್ಕೆ ಹಾಜರಾಗಬೇಕೇ ಎಂಬುದೇ ಒಂದು ಗಂಭೀರ ವಿಷಯವಾಗಿದೆ. ಇದು ನಾನು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಗಮನವನ್ನು ಸೆಳೆಯುವ ವಿಷಯ ಮೊದಲನೆಯ ಸಂಗತಿ- ನ್ಯಾಯಾಂಗ ನೀತಿ ಸಂಹಿತೆಯ ಸಂಗತಿ.
ವಿಎಚ್‌ಪಿ ಸಭೆಯು ಏಕರೂಪ ನಾಗರಿಕ ಸಂಹಿತೆ ಮತ್ತು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ, ಮತಾಂತರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸುವಂತದ್ದಾಗಿತ್ತು. ಇವು ವಿಎಚ್‌ಪಿ ಸೇರಿದಂತೆ ಕೋಮುವಾದಿ ಪ್ರಚಾರಗಳನ್ನು ನಡೆಸುತ್ತಿರುವ ವಿಷಯಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಎರಡನೇ ವಿಷಯವಾಗಿದೆ- ನ್ಯಾಯಾಂಗದ ಸದಸ್ಯರು ನ್ಯಾಯಾಲಯದಲ್ಲಿ ವಿಚಾರಣಾಧೀನ ಅಥವಾ ಶಾಸಕಾಂಗಗಳಲ್ಲಿ ಚರ್ಚಿಸುತ್ತಿರುವ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಟಿಪ್ಪಣಿ ಮಾಡಬೇಕೇ?
ಮೂರನೆಯದಾಗಿ ಮತ್ತು ಮುಖ್ಯವಾಗಿ ನ್ಯಾಯಮೂರ್ತಿ ಯಾದವ್ ಮಾಡಿದ ನಿಜವಾದ ಭಾಷಣ. ನಾನು ಪೋರ್ಟಲ್ ‘ಬಾರ್ ಅಂಡ್ ಬೆಂಚ್’ ವೆಬ್‍ತಾಣದಿಂದ ನಿಂದ ತೆಗೆದುಕೊಂಡ ಭಾಷಣದ ಕೆಲವು ಭಾಗಗಳನ್ನು ಈ ಕೆಳಗೆ ನೀಡುತ್ತೇನೆ. ನಾನು ವಿವಿಧ ಸಾಮಾಜಿಕ ವೇದಿಕೆಗಳಲ್ಲಿಯೂ ಈ ಭಾಷಣದ ಹಲವು ಭಾಗಗಳನ್ನು ಕೇಳಿದ್ದೇನೆ. ಅವರು ಹೀಗೆ ಹೇಳಿದರು:
“ಇದು ಹಿಂದೂಸ್ತಾನ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಮತ್ತು ಈ ದೇಶವು ಇಲ್ಲಿ ವಾಸಿಸುವ ಬಹುಸಖ್ಯಾಕರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾನೂನು. ಇದು ಹೈಕೋರ್ಟ್ ನ್ಯಾಯಾಧೀಶನಾಗಿ ಮಾತನಾಡುವ ಬಗ್ಗೆ ಅಲ್ಲ; ಬದಲಿಗೆ, ಕಾನೂನು ಬಹುಸಂಖ್ಯಾಕರಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಕುಟುಂಬ ಅಥವಾ ಸಮಾಜದ ಸಂದರ್ಭದಲ್ಲಿ ಇದನ್ನು ಪರಿಗಣಿಸಿ – ಬಹುಸಂಖ್ಯಾಕರ ಕಲ್ಯಾಣ ಮತ್ತು ಸಂತೋಷವನ್ನು ಖಾತ್ರಿಪಡಿಸುವದನ್ನು ಮಾತ್ರ ಸ್ವೀಕರಿಸಲಾಗುತ್ತದೆ ” ಎಂದು ನ್ಯಾಯಮೂರ್ತಿ ಯಾದವ್ ಹೇಳಿದರು.
ಮುಂದುವರೆದು ಅವರು ಹೀಗೆ ಹೇಳಿದರು-“ಆದರೆ ಈ ಕಠ್ಮುಲ್ಲಾಗಳು… ಇದು ಸರಿಯಾದ ಪದ ಅಲ್ಲದಿರಬಹುದು… ಆದರೆ ನಾನು ಅದನ್ನು ಹೇಳಲು ಹಿಂಜರಿಯುವುದಿಲ್ಲ ಏಕೆಂದರೆ ಅವರಿಂದ ದೇಶಕ್ಕೆ ಕೆಟ್ಟದಾಗುತ್ತದೆ… ಅವರು ದೇಶಕ್ಕೆ ಘಾತಕರು, ವಿರುದ್ಧವಾಗಿರುವವರು, ಜನತೆಯನ್ನು ಉದ್ರೇಕಿಸುವ ಜನಗಳು.. .. ದೇಶ ಮುಂದುವರೆಯದಿರಲಿ ಎನ್ನುವಂತಹ ಜನಗಳು, ನಾವು ಅವರ ಬಗ್ಗೆ ಜಾಗರೂಕರಾಗಿರಬೇಕು”.
“ನಮ್ಮ ದೇಶದಲ್ಲಿ, ಎಲ್ಲಾ ಜೀವಿಗಳನ್ನು, ಚಿಕ್ಕ ಪ್ರಾಣಿಗಳನ್ನು ಸಹ ಗೌರವಿಸಲು ಮತ್ತು ಅವುಗಳಿಗೆ ಹಾನಿಯಾಗದಂತೆ ತಡೆಯಲು ನಮಗೆ ಚಿಕ್ಕ ವಯಸ್ಸಿನಿಂದಲೂ ಕಲಿಸಲಾಗುತ್ತದೆ. ಈ ಪಾಠವು ನಾವು ಯಾರೆಂಬುದರ ಒಂದು ಭಾಗವಾಗುತ್ತದೆ, ಬಹುಶಃ ಅದಕ್ಕಾಗಿಯೇ ನಾವು ಹೆಚ್ಚು ಸಹಿಷ್ಣು ಮತ್ತು ಸಹೃದಯರಾಗಿದ್ದೇವೆ, ಇತರರು ಬಳಲುತ್ತಿರುವಾಗ ನೋವು ಅನುಭವಿಸುತ್ತೇವೆ. ಆದರೆ ಎಲ್ಲರೂ ಹೀಗಿಲ್ಲ. ನಮ್ಮ ಸಂಸ್ಕೃತಿಯಲ್ಲಿ, ಮಕ್ಕಳನ್ನು ದೇವರ ಮಾರ್ಗದರ್ಶನದೊಂದಿಗೆ ಬೆಳೆಸಲಾಗುತ್ತದೆ, ಅವರಿಗೆ ವೇದ ಮಂತ್ರಗಳನ್ನು ಕಲಿಸಲಾಗುತ್ತದೆ ಮತ್ತು ಅಹಿಂಸೆಯ ಮೌಲ್ಯಗಳನ್ನು ತುಂಬಲಾಗುತ್ತದೆ. ಆದರೆ, ಇತರ ಕೆಲವು ಸಂಸ್ಕೃತಿಗಳಲ್ಲಿ, ಮಕ್ಕಳು ಪ್ರಾಣಿಗಳ ಹತ್ಯೆಯನ್ನು ನೋಡುತ್ತಾ ಬೆಳೆಯುತ್ತಾರೆ, ಇದರಿಂದಾಗಿ ಅವರು ಸಹನೆ ಮತ್ತು ಸಹೃದಯತೆಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟಕರವಾಗಿದೆ” ಎಂದು ಅವರು ಹೇಳಿದರು.
ಅಷ್ಟೇ ಅಲ್ಲ:
“ಎಲ್ಲಿ ಹಸು, ಗೀತೆ ಮತ್ತು ಗಂಗೆ ಸಂಸ್ಕೃತಿಯನ್ನು ನಿರೂಪಿಸುತ್ತದೆಯೋ, ಎಲ್ಲಿ, ಪ್ರತಿ ಮನೆಯಲ್ಲೂ ಹರ್ಬಲಾ ದೇವಿಯ ಒಂದು ವಿಗ್ರಹವಿದೆಯೋ , ಮತ್ತು ಪ್ರತಿ ಮಗುವೂ ರಾಮನಾಗಿದೆಯೋ – ಅದು ನನ್ನ ದೇಶ.”
“ನೀವು ವಕೀಲರಾಗಿರಲಿ, ಉದ್ಯಮಿಯಾಗಿರಲಿ ಅಥವಾ ವಿದ್ಯಾರ್ಥಿಯಾಗಿರಲಿ, ಹಿಂದೂ ಎಂಬ ನಿಮ್ಮ ಗುರುತು ಮೊದಲು ಬರುತ್ತದೆ. ಈ ಭೂಮಿಯನ್ನು ತನ್ನ ತಾಯಿ ಮತ್ತು ತಮ್ಮನ್ನು ಅದರ ಮಗು ಎಂದು ಪರಿಗಣಿಸುವವರು ಹಿಂದೂಗಳು. ಈ ದೇಶವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಸಾಮರ್ಥ್ಯ ಒಬ್ಬ ಹಿಂದೂವಿಗೆ ಮಾತ್ರ ಇದೆ ಬೇರೆ ಯಾರೂ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ವಿವೇಕಾನಂದರು ಕೂಡ ನಂಬಿದ್ದರು. ಈ ಆಕಾಂಕ್ಷೆಯನ್ನು ಎಂದಿಗೂ ಮಸುಕಾಗಲು ಬಿಡಬೇಡಿ ”
ಅವರು ತಮ್ಮ ಭಾಷಣವನ್ನು “ಹಿಂದೂಗಳು ತಮ್ಮ ಅಹಿಂಸೆ ಮತ್ತು ದಯಾಪರತೆಗೆ ಹೆಸರುವಾಸಿಯಾಗಿದ್ದರೂ ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು” ಎಂದು ಹೇಳುವ ಮೂಲಕ ತಮ್ಮ ಉಪನ್ಯಾಸವನ್ನು ಕೊನೆಗೊಳಿಸಿದರು (ಬಾರ್ ಅಂಡ್ ಬೆಂಚ್).
ಇವು ಅವರ ಭಾಷಣದಲ್ಲಿನ ಕೆಲವು ಹೇಳಿಕೆಗಳು.
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳೇ, ನ್ಯಾಯಾಧೀಶರು ಭಾರತದ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಈ ಭಾಷಣ ಆ ಪ್ರಮಾಣ ವಚನದ ಉಲ್ಲಂಘನೆಯಾಗಿದೆ. ಈ ಭಾಷಣ ಒಂದು ದ್ವೇಷದ ಭಾಷಣ. ಈ ಭಾಷಣ ಸಂವಿಧಾನದ ಮೇಲಿನ ಹಲ್ಲೆಯಾಗಿದೆ. ಈ ಭಾಷಣವು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದ ಸಾಮೂಹಿಕ ಆತ್ಮಸಾಕ್ಷಿಗೆ ಅಪಚಾರವಾಗಿದೆ. ಇದನ್ನು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಮಾಡಿದ್ದಾರೆ ಎಂಬುದು ನ್ಯಾಯ ಪ್ರಕ್ರಿಯೆಗಳ ಮೇಲಿನ ಆಕ್ರಮಣ ಕೂಡ ಆಗಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮತ್ತು ಬಹುಸಂಖ್ಯಾಕ ಧೋರಣೆಯ ಪರವಾಗಿ ಇಂತಹ ಪಕ್ಷಪಾತದ, ಪೂರ್ವಾಗ್ರಹ ಪೀಡಿತ ಅಭಿಪ್ರಾಯವನ್ನು ಸಾವ‍್ಜನಿಕವಾಗಿ ವ್ಯಕ್ತಪಡಿಸುವ ಒಬ್ಬನು ಸದಸ್ಯನಾಗಿರುವ ನ್ಯಾಯಾಲಯದಲ್ಲಿ ಯಾವುದೇ ಕಕ್ಷಿದಾರ ನ್ಯಾಯದ ನಿರೀಕ್ಷೆ ಇಟ್ಟುಕೊಳ್ಳುವುದು ಸಾಧ್ಯವಿಲ್ಲ.
ಇಂತಹ ಒಬ್ಬ ಸದಸ್ಯರು ಪೀಠಕ್ಕೆ, ನ್ಯಾಯಾಲಯಕ್ಕೆ, ಒಟ್ಟಾರೆಯಾಗಿ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುತ್ತಾರೆ. ಒಂದು ನ್ಯಾಯಾಲಯದಲ್ಲಿ ಅಂತಹ ವ್ಯಕ್ತಿಗಳಿಗೆ ಯಾವುದೇ ಸ್ಥಾನವಿಲ್ಲ ಮತ್ತು ಇರಬಾರದು.
ಈ ವಿಷಯದ ಬಗ್ಗೆ ಅತ್ಯುನ್ನತ ನ್ಯಾಯಾಲಯದ ಕ್ರಮಕ್ಕೆ ದೇಶವು ನಿಸ್ಸಂದೇಹವಾಗಿ ಕೃತಜ್ಞವಾಗಿರುತ್ತದೆ.
ಇದನ್ನೂ ನೋಡಿ: Karnataka legislative assembly Day 02 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ