ನವ-ಉದಾರವಾದಿ ಬಂಡವಾಳಶಾಹಿಯಲ್ಲಿ ಉಂಟಾಗುವ ಸ್ಥಗಿತತೆಗೆ ಅರ್ಥವ್ಯವಸ್ಥೆಯಲ್ಲಿನ “ಗುಳ್ಳೆ”ಗಳು ತಾತ್ಕಾಲಿಕ ಪರಿಹಾರವನ್ನು ಕೊಡುತ್ತವೆ. ಈ ಮೊದಲು ಡಾಟ್‌ಕಾಂ ಗುಳ್ಳೆ ಮತ್ತು ನಂತರ ವಸತಿ ಗುಳ್ಳೆ ಒಡೆದ ನಂತರ, ಜಾಗತಿಕ ಅರ್ಥವ್ಯವಸ್ಥೆಯು ಒಂದು ದೀರ್ಘಕಾಲದ ಸ್ಥಗಿತತೆಯಲ್ಲಿ ಮುಳುಗಿತು. ಈಗ ಎ.ಐ. ಗುಳ್ಳೆ ಏಳುತ್ತಿದೆ. ಇದು ಕೂಡ ನವ-ಉದಾರವಾದಿ ವ್ಯವಸ್ಥೆಯ ಸ್ಥಗಿತತೆಯನ್ನು ನಿವಾರಿಸುವ ಬದಲು ಆ ಪ್ರವೃತ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಏಕೆಂದರೆ ಅದು ಉದ್ಯೋಗಾವಕಾಶಗಳನ್ನು ಇಳಿಸುತ್ತದೆ, ಆ ಮೂಲಕ ಬಹುಪಾಲು ದುಡಿಮೆಗಾರರ ಕೂಲಿ-ಸಂಬಳಗಳನ್ನೂ ಇಳಿಸುತ್ತದೆ. ಯಾವುದೇ ತಾಂತ್ರಿಕ ಪ್ರಗತಿ, ಒಂದು ಸಮಾಜವಾದಿ ವ್ಯವಸ್ಥೆಯಲ್ಲಿ ಮಾತ್ರವೇ ಕೂಲಿ-ಸಂಬಳಗಳನ್ನು ಇಳಿಸದೆ ಎಲ್ಲರಿಗೂ ವಿರಾಮವನ್ನು ಮತ್ತು ಮಾನವ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯ.. ಎ.ಐ. ಗುಳ್ಳೆ ಸಮಾಜವಾದಿ ಅರ್ಥವ್ಯವಸ್ಥೆಯ ಮೇಲ್ಮೆಯನ್ನು ಮತ್ತೊಮ್ಮೆ ಪ್ರದರ್ಶಿಸುತ್ತದೆ.
ಪ್ರೊ. ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
ನವ-ಉದಾರವಾದಿ ಬಂಡವಾಳಶಾಹಿಯಲ್ಲಿ ಅಂತರ್ಗತವಾಗಿರುವ ಒಂದು ಪ್ರವೃತ್ತಿ ಎಂದರೆ ಅದು ಸ್ಥಗಿತತೆ. ಈ ಸ್ಥಗಿತತೆ ಎರಡು ಅಂಶಗಳು ಕಾರ್ಯಪ್ರವೃತ್ತವಾಗಿರುವುದರಿಂದಾಗಿ ಉದ್ಭವಿಸುತ್ತದೆ: ಮೊದಲನೆಯದು, ಅದು ನಿರಂತರವಾಗಿ ಹುಟ್ಟುಹಾಕುವ ವರಮಾನಗಳ ಅಸಮಾನತೆಯ ಬೆಳವಣಿಗೆ. ಬಡವರು ತಮ್ಮ ವರಮಾನದ ಬಹುಭಾಗವನ್ನು ಬಳಕೆಮಾಡುತ್ತಾರೆ ಮತ್ತು ಶ್ರೀಮಂತರು ಅದರಲ್ಲಿ ಹೆಚ್ಚಿನದನ್ನು “ಉಳಿಸುತ್ತಾರೆ” (ಅಂದರೆ, ಬಳಸುವುದಿಲ್ಲ). ಆದ್ದರಿಂದ, ಬಳಕೆಯ ಬೇಡಿಕೆ ಮತ್ತು ಆ ಮೂಲಕ ಒಟ್ಟು ಬೇಡಿಕೆಯು ಉತ್ಪಾದಿಸಬಹುದಾದ ಉತ್ಪತ್ತಿಯ ಬೆಳವಣಿಗೆಗಿಂತ ಒಟ್ಟಾರೆಯಾಗಿ ಕೆಳಗಿಳಿಯುತ್ತದೆ. ಇದರ ಪರಿಣಾಮವಾಗಿ ಉಂಟಾಗುವ ನಿರುದ್ಯೋಗ ಮತ್ತು ಬಳಕೆಯಾಗದ ಸಾಮರ್ಥ್ಯದ ಏರಿಕೆಯು ಅರ್ಥವ್ಯವಸ್ಥೆಯನ್ನು ಕೆಳಕ್ಕೆ ದೂಡುತ್ತದೆ.
ನಿರಂತರವಾಗಿ ಏರಿಕೆಯಾಗುತ್ತಿರುವ ವರಮಾನಗಳ ಅಸಮಾನತೆಯ ಪ್ರವೃತ್ತಿಯು ಕೂಲಿಯ ವಿಷಯದಿಂದ ಉದ್ಭವಿಸುತ್ತದೆ. ಬಂಡವಾಳವು ದೇಶ ದೇಶಗಳನ್ನು ದಾಟಿ ಹರಿದಾಡುತ್ತಿರುವುದರಿಂದಾಗಿ ಮೂರನೇ ಜಗತ್ತಿನಲ್ಲಿರುವ ಬೃಹತ್ ಶ್ರಮ ಮೀಸಲುಗಳು (ನಿರುದ್ಯೋಗವು) ಕೂಲಿಯು ಏರಿಕೆಯಾಗದಂತೆ ನೋಡಿಕೊಳ್ಳುತ್ತದೆ. ಮತ್ತು, ಜಾಗತಿಕ ಉತ್ತರದಿಂದ ಬಂಡವಾಳವು ಸ್ಥಳಾಂತರಗೊಳ್ಳುತ್ತಿರುವುದರ ಹೊರತಾಗಿಯೂ ಈ ಮೀಸಲುಗಳ ಸಾಪೇಕ್ಷ ಗಾತ್ರವು ಕಡಿಮೆಯಾಗಿಲ್ಲ. ಒಂದೆಡೆ ಪ್ರಭುತ್ವವು ಕಿರು ಉತ್ಪಾದನೆ ಮತ್ತು ರೈತ ಕೃಷಿಗೆ ಒದಗಿಸುತ್ತಿದ್ದ ಬೆಂಬಲವನ್ನು ನಿಲ್ಲಿಸಿದ್ದರಿಂದಾಗಿ ಸಂಕಷ್ಟಕ್ಕೊಳಗಾದ ಈ ವಲಯಗಳ ಉತ್ಪಾದಕರು ಉದ್ಯೋಗವನ್ನರಸಿ ಪಟ್ಟಣಗಳಿಗೆ ವಲಸೆ ಹೋಗುವಂತೆ ಮಾಡುತ್ತದೆ. ಇದರಿಂದಾಗಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮತ್ತೊಂದೆಡೆ, ವ್ಯಾಪಾರದ “ಉದಾರೀಕರಣ”ದಿಂದಾಗಿ ಹೊಸ ಹೊಸ ಉತ್ಪಾದನಾ ಪ್ರಕ್ರಿಯೆಗಳ ಅಳವಡಿಕೆ ಮತ್ತು ಉತ್ಪನ್ನಗಳ ಮಾರ್ಗವಾಗಿ ಎಲ್ಲಾ ದೇಶಗಳಲ್ಲೂ ಶ್ರಮದ ಉತ್ಪಾದಕತೆಯ ಬೆಳವಣಿಗೆಯ ದರದಲ್ಲಿ ಏರಿಕೆಯಾಗುತ್ತದೆ. ಇದು ಹೊಸ ಉದ್ಯೋಗಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ವಿಶ್ವಾದ್ಯಂತ ನಿಜ ಕೂಲಿಯು ಶ್ರಮದ ಉತ್ಪಾದಕತೆಗಿಂತ ಹಿಂದೆ ಉಳಿಯುತ್ತದೆ. ಈ ವಿದ್ಯಮಾನದಿಂದಾಗಿ ಪ್ರತಿ ದೇಶದ ಉತ್ಪತ್ತಿಯಲ್ಲಿ ಮತ್ತು ವಿಶ್ವದ ಒಟ್ಟು ಉತ್ಪತ್ತಿಯಲ್ಲಿ ಆರ್ಥಿಕ ಮಿಗುತಾಯದ ಪಾಲು ಹೆಚ್ಚುತ್ತದೆ. ಈ ರೀತಿಯಲ್ಲಿ ವರಮಾನಗಳ ಅಸಮಾನತೆಯ ಏರಿಕೆಯು ಈ ವಿದ್ಯಮಾನದ ಅಭಿವ್ಯಕ್ತಿಯೂ ಹೌದು ಮತ್ತು ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಸ್ಥಗಿತತೆಯ ಮೂಲ ಕಾರಣವೂ ಹೌದು.
ಈ ಪ್ರವೃತ್ತಿಯು ನೆರವೇರಲು ಕಾರಣವಾಗಿರುವ ಎರಡನೆಯ ಅಂಶವೆAದರೆ ಉತ್ಪಾದಿಸಬಹುದಾದ ಉತ್ಪತ್ತಿಗೆ ಹೋಲಿಸಿದರೆ ಒಟ್ಟು ಬೇಡಿಕೆಯಲ್ಲಿ ಕಂಡುಬರುವ ಕೊರತೆಯನ್ನು ಸರಿಪಡಿಸಲು ಮಧ್ಯಪ್ರವೇಶಿಸಲಾಗದ ಪ್ರಭುತ್ವದ ಅಸಮರ್ಥತೆ. ಇಪ್ಪತ್ತನೇ ಶತಮಾನದ ಪ್ರಮುಖ ಬೂರ್ಜ್ವಾ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್, ಪ್ರಭುತ್ವದ ಇಂಥಹ ಒಂದು ಮಧ್ಯಪ್ರವೇಶದ ಮೇಲೆ ತಮ್ಮ ಭರವಸೆಯನ್ನು ಇಟ್ಟುಕೊಂಡಿದ್ದರು. ಇಂಥಹ ಮಧ್ಯಪ್ರವೇಶವು ಫಲ ನೀಡಬೇಕು ಎಂದಾದರೆ, ಪ್ರಭುತ್ವವು ಕೈಗೊಳ್ಳುವ ಭಾರೀ ವೆಚ್ಚಗಳನ್ನು ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಒದಗಿಸಿಕೊಳ್ಳಬೇಕಾಗುತ್ತದೆ. (ಇದಕ್ಕೆ ಪರ್ಯಾಯವಾಗಿ, ದುಡಿಯುವ ಜನರ ಮೇಲೆ ತೆರಿಗೆ ವಿಧಿಸುವ ಮೂಲಕ ಒದಗಿಸಿಕೊಂಡ ಆದಾಯವನ್ನು ಖರ್ಚು ಮಾಡಿದಾಗ ಅದು ಒಟ್ಟು ಬೇಡಿಕೆಯಲ್ಲಿ ಹೆಚ್ಚಳವನ್ನು ಉಂಟುಮಾಡುವುದಿಲ್ಲ, ಏಕೆಂದರೆ, ದುಡಿಯುವ ಜನರು ತಮ್ಮ ವರಮಾನನ್ನು ಬಹುತೇಕ ಇಡಿಯಾಗಿ ಬಳಕೆಮಾಡುತ್ತಾರೆ). ಪ್ರಭುತ್ವದ ವೆಚ್ಚಗಳಿಗಾಗಿ ಹಣ ಒದಗಿಸಿಕೊಳ್ಳುವ ಈ ಎರಡೂ ವಿಧಾನಗಳನ್ನೂ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಇಷ್ಟಪಡುವುದಿಲ್ಲ. ಆದ್ದರಿಂದ ಪ್ರಭುತ್ವದ ಮಧ್ಯಪ್ರವೇಶÀವನ್ನು ಅದು ತಳ್ಳಿಹಾಕುತ್ತದೆ. ಅಂದರೆ, ಕೀನ್ಸ್ ಸೂಚಿಸಿದ ಈ ಪರಿಹಾರವನ್ನು ಅದು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಬೇಡಿಕೆಗೆ ಹೋಲಿಸಿದರೆ ಉತ್ಪಾದನೆ ಅತಿಯಾದರೆ ಉಂಟಾಗುವ ಸ್ಥಗಿತತೆಯ ಪ್ರವೃತ್ತಿಗೆ ಯಾವ ಪರಿಹಾರವೂ ಕಾಣುತ್ತಿಲ್ಲ.
“ಗುಳ್ಳೆ”ಗಳನ್ನು ಎಬ್ಬಿಸುವ ಅವಶ್ಯಕತೆ
ಈ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ “ಗುಳ್ಳೆಗಳನ್ನು” ಎಬ್ಬಿಸುವ ಅವಶ್ಯಕತೆ ಉದ್ಭವಿಸುತ್ತದೆ. ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಗಳು ಮೇಲೆ ಹೋಗುತ್ತವೆ ಎಂಬ ಊಹೆಯ ಮೇಲೆ ಅವುಗಳ ಬೆಲೆಗಳು ಏರುತ್ತಾ ಹೋಗುತ್ತವೆ. ಈ ವಿದ್ಯಮಾನವು ಆಸ್ತಿಗಳ ವಲಯಗಳಲ್ಲಿ ಅಧಿಕ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ (ಹಣ ಒದಗಿಸಿಕೊಳ್ಳಲು ಇರುವ ಸೌಲಭ್ಯದಿಂದಾಗಿ) ಮತ್ತು ಬೆಲೆಗಳು ಬಹಳ ಎತ್ತರಕ್ಕೆ ಏರಿದ ಷೇರುಗಳನ್ನು ಹೊಂದಿರುವವರು ಐಷಾರಾಮಿ ವಸ್ತುಗಳ ಮೇಲೆ ಖರ್ಚು ಮಾಡುತ್ತಾರೆ (ವಾಸ್ತವವಾಗಿ ಈ ಷೇರುಗಳ ಹೆಚ್ಚಿನಂಶವು ಕಾಲ್ಪನಿಕವಾಗಿದ್ದರೂ ಸಹ ತಾವು ಭಾರೀ ಶ್ರೀಮಂತರು ಎಂದು ಭಾವಿಸುತ್ತಾರೆ ಮತ್ತು ಧಾರಾಳವಾಗಿ ಖರ್ಚುಮಾಡುತ್ತಾರೆ). ಈ ರೀತಿಯಲ್ಲಿ ಆಸ್ತಿ ವಲಯದಲ್ಲಿ ಆಸ್ತಿಗಳ ಬೆಲೆಗಳು ನೀರಿನ ಮೇಲೆ ಗುಳ್ಳೆಗಳು ಉಬ್ಬುವಂತೆ ಉಬ್ಬುತ್ತವೆ. ಈ ಬೆಲೆ ಗುಳ್ಳೆಗಳು ಮೂಲತಃ ಹಣಕಾಸಿನ ಒಂದು ವಿದ್ಯಮಾನವೇ ಹೌದಾದರೂ ನಿಜ ಅರ್ಥವ್ಯವಸ್ಥೆಯ ಮೇಲೆ ಅವುಗಳ ಪರಿಣಾಮ ಕಂಡುಬರುತ್ತದೆ ಮತ್ತು ಅಂತಹ ಗುಳ್ಳೆಗಳು ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಸ್ಥಗಿತತೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಪಾತ್ರವನ್ನು ವಹಿಸುತ್ತವೆ.
ಈ ಗುಳ್ಳೆಗಳು ಸ್ಥಗಿತತೆಯ ಪ್ರವೃತ್ತಿಯನ್ನು ಇಲ್ಲದಂತೆ ಮಾಡುವುದಿಲ್ಲ. ಅವು ದೀರ್ಘಕಾಲಿಕ ಬೆಳವಣಿಗೆಯನ್ನೂ ಉಂಟುಮಾಡುವುದಿಲ್ಲ. ಅವು ಆಗಾಗ ಸಂಭವಿಸುತ್ತವೆ. ಅಳಿಯುವ ಮುನ್ನ ಬೆಳವಣಿಗೆಯ ಸುತ್ತ ಮುತ್ತ ಒಂದು ತಾತ್ಕಾಲಿಕ ಅಲೆಯನ್ನು ಸೃಷ್ಟಿಸುತ್ತವೆ. ಈ ಆರ್ಥಿಕ ಗುಳ್ಳೆಯು ಉಬ್ಬುವ ಸಮಯದಲ್ಲಿ ನಿಜ ಅರ್ಥವ್ಯವಸ್ಥೆಯ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಸುಧಾರಣೆ ಕಂಡುಬರುತ್ತದೆ. ಗುಳ್ಳೆ ಅಳಿದು ಆರ್ಥಿಕ ಬಿಕ್ಕಟ್ಟು ಉಂಟಾದಾಗ, ನಿಜ ಅರ್ಥವ್ಯವಸ್ಥೆಯು ಹಿನ್ನಡೆಯನ್ನು ಕಾಣುತ್ತದೆ. ಈ ಗುಳ್ಳೆಯು ಇದ್ದಕ್ಕಿದ್ದಂತೆ ಉದ್ಭವಿಸುವುದಿಲ್ಲ. ಅದು ಸಾಮಾನ್ಯವಾಗಿ ಹೊಸ ತಂತ್ರಜ್ಞಾನದ ಪರಿಚಯದೊಂದಿಗೆ ಸಂಬAಧ ಹೊಂದಿದೆ. ಯಾವುದೋ ಒಂದು ಹೊಸ ಉತ್ಪನ್ನ (ಅಥವಾ ಪ್ರಕ್ರಿಯೆ)ದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸ ತಂತ್ರಜ್ಞಾನದಿAದ ಹುಟ್ಟುವ ಸುಖಭ್ರಾಂತಿಯು ಸ್ವತಃ ಒಂದು ಗುಳ್ಳೆಯಾಗಿ ರೂಪಾಂತರಗೊಳ್ಳುತ್ತದೆ. ನಂತರ ಅದು ಒಂದು ಜೂಜುಕೋರ ವಿದ್ಯಮಾನವಾಗಿ ರೂಪಾಂತರಗೊಳ್ಳುತ್ತದೆ. ಈ ಪರಿಸ್ಥಿತಿಯಲ್ಲಿ ಹೊಸ ತಂತ್ರಜ್ಞಾನವು ಏನನ್ನು ತಂದುಕೊಡುತ್ತದೆ ಎಂಬುದರ ಮೇಲೆ ಗಮನವಿರುವುದಿಲ್ಲ, ಬದಲಿಗೆ, ಉಳಿದ ಜೂಜುಕೋರರು ಏನು ಮಾಡುತ್ತಾರೆ ಎಂಬುದರ ಮೇಲಿರುತ್ತದೆ.
ಆಸ್ಟ್ರಿಯಾ ಮೂಲದ ಅಮೇರಿಕನ್ ಅರ್ಥಶಾಸ್ತ್ರಜ್ಞ ಜೋಸೆಫ್ ಶುಂಪೀಟರ್ ಅವರು ಹೊಸ ತಂತ್ರಜ್ಞಾನವನ್ನು ಇಂತಹ ಅಲೆಗಳ ಸಮಯದಲ್ಲಿ ಪರಿಚಯಿಸಲಾಗುವುದು ಎಂಬುದನ್ನು ಕಂಡ ಕ್ರಮವು ಸರಿಯಾಗಿಯೇ ಇತ್ತು. ಆದರೆ, ಒಟ್ಟು ಬೇಡಿಕೆಯ ಕೊರತೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಅತಿ-ಉತ್ಪಾದನೆಯ ಪ್ರವೃತ್ತಿಯ ವಿದ್ಯಮಾನವನ್ನು ಅವರು ಗುರುತಿಸದೆ ಹೋದುದು ಮತ್ತು ಅದು ತಂತ್ರಜ್ಞಾನವನ್ನು ಪರಿಚಯಿಸುವ ಅಲೆಯ ಆಕಾರ ಮತ್ತು ಸ್ವರೂಪದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ಗುರುತಿಸದೆ ಹೋದುದು ಒಂದು ಘೋರವಾದ ತಪ್ಪಾಗಿತ್ತು. ಇದರ ಒಂದು ಪರಿಣಾಮವೆಂದರೆ, ಅರ್ಥವ್ಯವಸ್ಥೆಯು ಸದಾ ಪೂರ್ಣ ಉದ್ಯೋಗದ ಸ್ಥಿತಿಯಲ್ಲಿರುತ್ತದೆ (ಹೊಸ ತಂತ್ರಜ್ಞಾನದ ಪರಿಚಯದಿಂದ ಉಂಟಾಗುವ ಅಲೆಯು ಉದ್ಯೋಗಗಳ ಬದಲು ಬೆಲೆಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ), ಆದ್ದರಿಂದ ಅಲೆಯು ಅಂತಿಮವಾಗಿ ಅಳಿದು ಪರಿಸ್ಥಿತಿ ಶಾಂತವಾದಾಗ, ಹೊಸ ತಂತ್ರಜ್ಞಾನವು ತಂದುಕೊಟ್ಟ ಹೆಚ್ಚಿನ ಶ್ರಮದ ಉತ್ಪಾದಕತೆಯಿಂದಾಗಿ ಕಾರ್ಮಿಕರು ಖಂಡಿತವಾಗಿಯೂ ಉತ್ತಮ ಸ್ಥಿತಿಯಲ್ಲಿ ಇರುತ್ತಾರೆ, ಹೆಚ್ಚಿನ ವೇತನದ ರೂಪದಲ್ಲಿ ಅವರಿಗೆ ಪ್ರಯೋಜನಗಳು ಸಿಗುತ್ತವೆ ಎಂದು ಭಾವಿಸಲಾಯಿತು. ಅವರ ಈ ಸುಂದರ ಚಿತ್ರಣವು ನಿಜವಲ್ಲ ಎಂಬುದನ್ನು ನಾವೀಗ ನೋಡೋಣ.
ಸ್ಥಗಿತತೆಯನ್ನು ನಿವಾರಿಸಲಾರದು
ನವ-ಉದಾರವಾದಿ ಬಂಡವಾಳಶಾಹಿಯಲ್ಲಿ ಉಂಟಾಗುವ ಸ್ಥಗಿತತೆಗೆ ಒಂದು ತಾತ್ಕಾಲಿಕ ಪರಿಹಾರವನ್ನು ಈ ಮೊದಲು ಎಬ್ಬಿಸಿದ ಅಂತಹ ಎರಡು ಗುಳ್ಳೆಗಳು ಒದಗಿಸಿದ್ದವು. ಅವೆರಡೂ ಅಮೆರಿಕದಲ್ಲೇ ಸಂಭವಿಸಿದ್ದವು: 1990ರ ದಶಕದ ಡಾಟ್‌ಕಾಂ ಗುಳ್ಳೆ ಮತ್ತು ತದನಂತರ ತಕ್ಷಣವೇ ಉಬ್ಬಿದ ವಸತಿ ಗುಳ್ಳೆ (ತಕ್ಷಣದ ಈ ಅನುಕ್ರಮವನ್ನು ಉದ್ದೇಶಪೂರ್ವಕವಾಗಿ ಅಮೆರಿಕದ ಫೆಡರಲ್ ರಿಸರ್ವ್ ಮಂಡಳಿಯ ಅಧ್ಯಕ್ಷ ಅಲನ್ ಗ್ರೀನ್ಸ್ಪಾನ್ ರೂಪಿಸಿದ್ದರು). ವಸತಿ ಗುಳ್ಳೆಯ ಪತನದ ನಂತರ, ಜಾಗತಿಕ ಅರ್ಥವ್ಯವಸ್ಥೆಯು ಒಂದು ದೀರ್ಘಕಾಲದ ಸ್ಥಗಿತತೆಯಲ್ಲಿ ಮುಳುಗಿತು. ಈ ಗುಳ್ಳೆಯ ಕುಸಿತದ ನಂತರದ ಪರಿಣಾಮಗಳಿಂದ ಅದರ ಆರಂಭಿಕ ಹಂತದಲ್ಲಿ ಸ್ಥಗಿತತೆಯು ಉಲ್ಬಣಗೊಂಡಿತು. 2012-21 ದಶಕದಲ್ಲಿ (ಅಂದರೆ, ಸಾಂಕ್ರಾಮಿಕ-ಪ್ರೇರಿತ ಕುಸಿತವನ್ನು ಹಿಮ್ಮೆಟ್ಟಿಸಿದ ನಂತರ) ಜಾಗತಿಕ ಅರ್ಥವ್ಯವಸ್ಥೆಯ ಬೆಳವಣಿಗೆಯ ದರವು ಅದರ ಹಿಂದಿನ ಮೂರು ದಶಕಗಳಾದ 1982-91, 1992-2001, 2002-2011ರ ಬೆಳವಣಿಗೆಯ ದರಗಳಿಗಿಂತ ಕೆಳಗಿತ್ತು ಮತ್ತು ಈ ದಶಕಗಳ ಬೆಳವಣಿಗೆ ದರಗಳು ಯುದ್ಧಾನಂತರದ ಅವಧಿಯ ದಶಕಗಳಿಗಿಂತಲೂ ಕೆಳಗಿದ್ದವು. ಅದರಲ್ಲಿ ಆಶ್ಚರ್ಯವೇನಿಲ್ಲ,
ಈಗ ಜರುಗುತ್ತಿರುವ ಕೃತಕ ಬುದ್ಧಿಮತ್ತೆಯ(ಎಐ) ಗುಳ್ಳೆಯು ಪ್ರಸಕ್ತ ಸ್ಥಗಿತತೆಯ ಪ್ರವೃತ್ತಿಯನ್ನು ಸರಿದೂಗಿಸುವುದಲ್ಲದೆ, ಅದನ್ನು ಹೆಚ್ಚು ಸುಸ್ಥಿರವಾಗಿ ಸರಿದೂಗಿಸುತ್ತದೆ ಎಂಬ ಅಭಿಪ್ರಾಯವಿದೆ. ಆದರೆ, ಈ ಗ್ರಹಿಕೆಯು ಸಂಪೂರ್ಣವಾಗಿ ತಪ್ಪಾಗಿದೆ. ಆರ್ಥಿಕ ಪರಿಭಾಷೆಯಲ್ಲಿ ಎಐ ಗುಳ್ಳೆಯ ಗಾತ್ರವು ಸಾಕಷ್ಟು ಮಹತ್ವದ್ದಾಗಿದ್ದರೂ, ನಿಜ ಅರ್ಥವ್ಯವಸ್ಥೆಯ ಮೇಲೆ ಅದರ ಪ್ರಭಾವವಿಲ್ಲ; ವಾಸ್ತವವಾಗಿ ನಿಜ ಅರ್ಥವ್ಯವಸ್ಥೆಯ ಮೇಲೆ ಎಐ ಗುಳ್ಳೆಯ ಪ್ರಭಾವದ ಬಗ್ಗೆ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ.
ಮೊದಲನೆಯದು, ಅಮೆರಿಕದೊಳಗಿನ ನಿಜ ಅರ್ಥವ್ಯವಸ್ಥೆಯ ಮೇಲೆ ಅದರ ಒಟ್ಟಾರೆ ಪ್ರಭಾವವು ಸಕಾರಾತ್ಮಕವಾಗಿದ್ದರೂ, ಅದು ಅಲ್ಪವೇ. ಯುಎಸ್ ಬ್ಯೂರೋ ಆಫ್ ಲೇಬರ್ ಅಂಕಿ ಅಂಶಗಳ ಪ್ರಕಾರ, ಜುಲೈ 2025ರಲ್ಲಿ ಆ ದೇಶದಲ್ಲಿ ಯುವ ನಿರುದ್ಯೋಗ ದರವು ಶೇ. 10.8ರಷ್ಟಿತ್ತು, ಅದು ಹೆಚ್ಚಿನ ಮಟ್ಟದಲ್ಲಿತ್ತು ಮಾತ್ರವಲ್ಲ, ಜುಲೈ 2024ರಲ್ಲಿದ್ದ ಶೇ. 9.8ಕ್ಕಿಂತಲೂ ಹೆಚ್ಚಿನದಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಜ ಅರ್ಥವ್ಯವಸ್ಥೆಗೆ ಎಐ ಗುಳ್ಳೆಯು ಈಗ ಒದಗಿಸುತ್ತಿರುವ ಉತ್ತೇಜನದ ಮಟ್ಟವು ವರ್ಷದಿಂದ ವರ್ಷಕ್ಕೆ ಯುವ ನಿರುದ್ಯೋಗ ದರದ ಕುಸಿತವನ್ನು ಉಂಟುಮಾಡುವಷ್ಟು ಗಮನಾರ್ಹವಾಗಿಲ್ಲ.
ವಿವೇಚನಾ ಶೂನ್ಯ ವ್ಯವಸ್ಥ
ಅದಕ್ಕಿಂತಲೂ ಮಿಗಿಲಾಗಿ, ಈ ಗುಳ್ಳೆ ಅನಿವಾರ್ಯವಾಗಿ ಒಡೆದಾಗ, ಅಮೆರಿಕದಲ್ಲಿ ನಿರುದ್ಯೋಗ ದರವು ಗಣನೀಯವಾಗಿ ಏರಿಕೆಯಾಗುತ್ತದೆ. ಮೂರು ಕಾರಣಗಳಿಂದಾಗಿ ಇದು ಹೀಗಾಗುತ್ತದೆ: ಮೊದಲನೆಯದು, ಗುಳ್ಳೆ ಒಡೆಯುವ ಪರಿಣಾಮ (ಸಟ್ಟಾ ಗುಳ್ಳೆ ಅಲ್ಲದಿದ್ದರೂ ಮತ್ತು ತಂತ್ರಜ್ಞಾನವನ್ನು ಒಂದು ಅಲೆಯಲ್ಲಿ ಪರಿಚಯಿಸಿದಾಗ, ಆ ಅಲೆಯ ಇಳಿಕೆಯ ಪರಿಣಾಮವಾಗಿ). ಇದು ಉದ್ಯೋಗದ ಆವರ್ತಕ ಇಳಿಕೆಯ ಸ್ವರೂಪದಲ್ಲಿರುತ್ತದೆ. ಎರಡನೆಯದು, ಸಾಧಾರಣ ಸಮಯಗಳಲ್ಲಿಯೂ ಸಹ ಉದ್ಯೋಗವನ್ನು ಕಡಿಮೆ ಮಾಡುವಲ್ಲಿ ಎಐ ಬೀರುವ ಪರಿಣಾಮ (ಅಂದರೆ, ಆವರ್ತಕ ಕುಸಿತವಿಲ್ಲದಿದ್ದರೂ ಸಹ). ಮೂರನೆಯದು, ಉದ್ಯೋಗಿಗಳ ಇಳಿಕೆಯಾದ ವರಮಾನದ ಒಟ್ಟಾರೆ ಪರಿಣಾಮ (ಉದ್ಯೋಗಗಳು ಇಳಿಕೆಯಾದಾಗ ಕೂಲಿಯ ಹೆಚ್ಚಳವಿರುವುದಿಲ್ಲವಾದ್ದರಿಂದ). ಇವು ಒಟ್ಟಾರೆ ಬೇಡಿಕೆಯ ಮೇಲೆ ಮತ್ತು ಆ ಕಾರಣದಿಂದ ಆರ್ಥಿಕ ಚಟುವಟಿಕೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ (ಇದನ್ನೇ ಅರ್ಥಶಾಸ್ತ್ರಜ್ಞರು “ಗುಣಕ ಪರಿಣಾಮ” ಎಂದು ಕರೆಯುತ್ತಾರೆ). ಈ ಪರಿಣಾಮಗಳಲ್ಲಿ ಮೊದಲನೆಯದು ಕ್ಷೀಣಿಸಿದರೂ ಸಹ, ಎರಡನೆಯದು ಮತ್ತು ಮೂರನೆಯದು ಮುಂದುವರಿಯುತ್ತದೆ ಮತ್ತು ಎಐ ಪರಿಚಯದ ನಿವ್ವಳ ದೀರ್ಘಕಾಲೀನ ಪರಿಣಾಮವು ನಿರುದ್ಯೋಗದ ಶಾಶ್ವತ ಮಟ್ಟವನ್ನು ಅಪಾರವಾಗಿ ಹೆಚ್ಚಿಸುತ್ತದೆ. ಇದು ನವ-ಉದಾರವಾದಿ ಬಂಡವಾಳಶಾಹಿಯ ಸ್ಥಗಿತತೆಯ ಪ್ರವೃತ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಒಂದು ಉತ್ಪಾದನಾ ವಿಧಾನವಾಗಿ ಬಂಡವಾಳಶಾಹಿಯ ವಿವೇಚನಾ ಶೂನ್ಯತೆಯನ್ನು ಮತ್ತು ಅದರ ಮೇಲೆ ಸಮಾಜವಾದದ ಪ್ರಶ್ನಾತೀತ ಶ್ರೇಷ್ಠತೆಯನ್ನು ತೋರಿಸುವ ಅಂಶವು ಎಐ ಪರಿಚಯಕ್ಕಿಂತ ಹೆಚ್ಚು ಸ್ಪಷ್ಟವಾದುದು ಬೇರೆ ಯಾವುದೂ ಇಲ್ಲ. ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಉಂಟಾಗುವ ಒಂದು ತಾಂತ್ರಿಕ ಪ್ರಗತಿಯು ನಿಜ ಕೂಲಿಯ ಕುಸಿತವಿಲ್ಲದೆ ಎಲ್ಲರಿಗೂ ವಿರಾಮವನ್ನು ಹೆಚ್ಚಿಸಿ ಆ ಮೂಲಕ ಬೆರೆತುಹೋಗುವುದರ ಜೊತೆಗೆ ಮಾನವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದರೆ, ಒಂದು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉದ್ಯೋಗದ ಇಳಿಕೆಗೆ ಎಐ ನೇರವಾಗಿ ಕಾರಣವಾಗುತ್ತದೆ. ಅದರಿಂದಾಗಿ ನಿಜ ಕೂಲಿ ಇಳಿಯುತ್ತದೆ ಮತ್ತು ಗುಣಕ ಪರಿಣಾಮಗಳಿಂದಾಗಿ ಈ ಎರಡೂ ಇಳಿಕೆಗಳು (ಉದ್ಯೋಗ ಮತ್ತು ನಿಜ ಕೂಲಿ) ಒಟ್ಟಾರೆ ಬೇಡಿಕೆಯ ಮೇಲೆ ಹೆಚ್ಚು ಗಂಭೀರ ಪರಿಣಾಮ ಬೀರುತ್ತವೆ.

“ನೀನೀಗ ನಾನು ಹಿಂದೆಂದೂ
ಸೃಷ್ಟಿಸದ ಅತ್ಯುನ್ನತ ರೊಬೊ.
ನನ್ನನ್ನು ಹೇಗೆ ಅಭಿವಂದಿಸುತ್ತೀಯಾ?”
“ನಿನ್ನನ್ನು ಕೆಲಸದಿಂದ
ಕಿತ್ತು ಹಾಕಿದ್ದೇನೆ”
ವ್ಯಂಗ್ಯಚಿತ್ರ: ಸೊರಿತ್, ಡೌನ್ ಟು ಅರ್ಥ್
(ಬಹುದೊಡ್ಡ ಟೆಕ್‌ಕಂಪನಿಯ ಎ,ಐ,-ಚಾಲಿತ ಪುರ‍್ರಚನೆಯಲ್ಲಿ 30ಸಾವಿರ ಉದ್ಯೋಗಗಳ ಕಡಿತ)
