ಎಲ್ಲ ಸೂಚ್ಯಂಕಗಳೂ ಭಾರತ ಒಂದು ಅತ್ಯಂತ ಅಸಮಾನತೆಯಿರುವ ದೇಶ ಮತ್ತು ಈ ಅಸಮಾನತೆ ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಲೇ ಇದೆ ಎಂಬ ತೀರ್ಮಾನದತ್ತವೇ ಒಯ್ಯುತ್ತಿರುವಾಗ ಭಾರತ ನಾಲ್ಕನೇ ಅತ್ಯಂತ ಸಮಾನತೆಯ ದೇಶ ಎಂದು ಭಾರತ ಸರಕಾರದ ಪ್ರೆಸ್ ಇನ್ಫಾರ್ಮೇಷನ್ ಬ್ಯುರೊ ಸಂಭ್ರಮ ಪಟ್ಟಿರುವುದು ಹೇಗೆ? ಏಕೆ?
-ವೇದರಾಜ ಎನ್ ಕೆ
‘ವಿಶ್ವಬ್ಯಾಂಕ್ ಭಾರತವನ್ನು ಜಗತ್ತಿನ ಅತ್ಯಂತ ಸಮಾನ ಸಮಾಜಗಳಲ್ಲಿ ಪರಿಗಣಿಸಿದೆ’ -ಎಂಬ ಸುದ್ದಿ ಜುಲೈ 5ರಂದು ಭಾರತದ ಪ್ರಮುಖ ಪತ್ರಿಕೆಗಳಲ್ಲಿ, ಅದರಲ್ಲೂ ಇಂಗ್ಲಿಷ್ ಪತ್ರಿಕೆಗಳಲ್ಲಿ ದೊಡ್ಡದಾಗಿ ಪ್ರಕಟವಾಯಿತು. ಅದರಲ್ಲೂ, ‘ದಿ ಹಿಂದು’, ಇಂಡಿಯನ್ ಎಕ್ಸ್ ಪ್ರೆಸ್ ನಂತಹ ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಗಿ ಪ್ರಕಟವಾದದ್ದು ಹಲವರಿಗೆ ಆಶ್ವರ್ಯ ಉಂಟು ಮಾಡಿತು. ಏಕೆಂದರೆ ಭಾರತದಲ್ಲಿ ಅಸಮಾನತೆ ಹೆಚ್ಚುತ್ತಿದೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಈ ಪತ್ರಿಕೆಗಳಲ್ಲೂ ಬಹಳಷ್ಟು ಚರ್ಚೆಗೆ ಒಳಗಾಗಿರುವ ವಿಷಯ.
ಇದು ಸರಕಾರದ ನಿಯಂತ್ರಣದಲ್ಲಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯುರೊ(ಪಿಐಬಿ) ಬಿಡುಗಡೆ ಮಾಡಿದ ಹೇಳಿಕೆಯನ್ನು ಆಧರಿಸಿದ ಸುದ್ದಿಯಾಗಿತ್ತು. “ಭಾರತ ನಾಲ್ಕನೇ ದೊಡ್ಡ ಅರ್ಥವ್ಯವಸ್ಥೆ ಮಾತ್ರವಲ್ಲ, ವಿಶ್ವ ಬ್ಯಾಂಕಿನ ಜೀನಿ ಸೂಚ್ಯಂಕ 2011- 12 ರಲ್ಲಿ 28.8 ಇದ್ದದ್ದು 2022-23ರಲ್ಲಿ 25.5 ಗೆ ಇಳಿದಿದೆ, ಅಂದರೆ ಅಸಮಾನತೆಯ ಪ್ರಮಾಣ ಇಳಿದಿದೆ, ಅದೀಗ ಸೂಚ್ಯಂಕದ ಪ್ರಕಾರ ಸ್ಲೊವಾಕ್ ಗಣತಂತ್ರ, ಸ್ಲೊವೆನಿಯ ಮತ್ತು ಬೆಲರೂಸ್ ನಂತರ ನಾಲ್ಕನೆಯ ಸ್ಥಾನದಲ್ಲಿದೆ” ಎಂದು ಮುಂದುವರೆದು ಈ ಸುದ್ದಿ ಹೇಳಿತು. ಮತ್ತು ಇದು ಬಡತನವನ್ನು ಕಡಿಮೆ ಮಾಡುವ ಮತ್ತು ನೇರ ಕಲ್ಯಾಣ ಬೆಂಬಲದ ಸರಕಾರದ ನೀತಿಗಳನ್ನು ಬಿಂಬಿಸುತ್ತದೆ ಎಂದೂ ವರ್ಣಿಸಿತು. ಸಹಜವಾಗಿಯೇ, ಇದು ‘ಭಕ್ತ’ಗಣ ಕುಣಿದಾಡುವಂತೆ ಮಾಡಿದೆ.
ಇದನ್ನೂ ನೋಡಿ: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ನಿಧನ
ಆದರೆ ಇದು ದೊಡ್ಡ ಪತ್ರಿಕೆಗಳು ವಾಸ್ತವಾಂಶವನ್ನು ಪರೀಕ್ಷಿಸುವ ತಮ್ಮ ಹೊಣೆ ನಿಭಾಯಿಸದೆ ಪ್ರಕಟಿಸಿದ ಸುದ್ದಿ ಎಂದು ಬೇಗನೇ ಬೆಳಕಿಗೆ ಬಂತು. ಏಕೆಂದರೆ ವಿಶ್ವ ಬ್ಯಾಂಕ್ ಪ್ರಕಟಿಸಿದ ಅಂಕಿ-ಅಂಶ ಹೇಳಿರುವುದು ಭಾರತದ ಬಳಕೆ ಅಸಮಾನತೆ ಕುರಿತಾದ ಜೀನಿ ಸೂಚ್ಯಂಕ ಉತ್ತಮಗೊಂಡಿದೆಯೆಂದೇ ಹೊರತು ಒಟ್ಟು ಅಸಮಾನತೆ ಇಳಿದಿದೆಯೆಂದೇನೂ ಅಲ್ಲ.
ಅದರ ಹೇಳಿಕೆ ಹೀಗಿದೆ
“ಭಾರತದ ಬಳಕೆ-ಆಧಾರಿತ ಜೀನಿ ಸೂಚ್ಯಂಕ 2011-12ರಲ್ಲಿದ್ದ 28.8ರಿಂದ 2022-23ರಲ್ಲಿ 25.5ಕ್ಕೆ ಇಳಿದಿದೆ. ಆದಾಗ್ಯೂ ದತ್ತಾಂಶಗಳ ಮಿತಿಗಳಿಂದಾಗಿ ಅಸಮಾನತೆಯ ಕೆಳ-ಅಂದಾಜು ಆಗಿರಬಹುದು. ತದ್ವಿರುದ್ಧವಾಗಿ, ‘ವಿಶ್ವ ಅಸಮಾನತಾ ದತ್ತಾಂಶ ನೆಲೆ’ ಆದಾಯ ಅಸಮಾನತೆಯ ಜಿನಿ ಸೂಚ್ಯಂಕ 2004ರಲ್ಲಿ 52 ಇದ್ದದ್ದು 2023 ರಲ್ಲಿ 62ಕ್ಕೇರಿದೆ ಎಂದು ತೋರಿಸುತ್ತದೆ. ಸಂಬಳ ಅಸಮಾನತೆ ಮೇಲ್ಮಟ್ಟದಲ್ಲೇ ಉಳಿದಿದೆ, ಅತ್ಯಂತ ಮೇಲಣ 10ಶೇ. ಮಂದಿಯ ಮಧ್ಯಮ ಆದಾಯ ಅತ್ಯಂತ ಕೆಳಗಿನ 10ಶೇ. ಮಂದಿಯ ಮಧ್ಯಮಾದಾಯದ 13 ಪಟ್ಟು ಇದೆ” ಎಂದು ಇದೇ ವಿಶ್ವಬ್ಯಾಂಕ್ ಹೇಳಿಕೆ ತಿಳಿಸುತ್ತದೆ!
ಅಂದರೆ ಆದಾಯ ಸಮಾನತೆಯ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿ ಮೂರು ದೇಶಗಳಲ್ಲ, 61 ದೇಶಗಳಿವೆ ಎಂದು ಸ್ವತಃ ವಿಶ್ವ ಬ್ಯಾಂಕ್ ಹೇಳಿದೆ!
ಪಿಐಬಿ ಕೈಚಳಕ?
ಪಿಐಬಿ ಹೇಳಿಕೆ ಇಲ್ಲಿ ಬಳಕೆ-ಆಧಾರಿತ ಸೂಚ್ಯಂಕವನ್ನು ಮಾತ್ರ ಕೈಗೆತ್ತಿಕೊಂಡು ಕೈಚಳಕ ನಡೆಸಿದೆ ಎಂಬುದು ಇದರಿಂದ ಎದ್ದು ಕಾಣುತ್ತದೆ. ನಿಜ ಹೇಳಬೇಕೆಂದರೆ, ವಿಶ್ವ ಬ್ಯಾಂಕ್ ಜೂನ್ 5ರಂದು ಈ ಹೇಳಿಕೆ ಪ್ರಕಟಿಸಿತ್ತು. ಪಿಐಬಿ, ಸರಿಯಾಗಿ 1 ತಿಂಗಳ ನಂತರ ಇದನ್ನು ಉಲ್ಲೇಖಿಸಿ ಹೇಳಿಕೆ ಪ್ರಕಟಿಸಿತು. ಅಂದರೆ ಈ ಕೈಚಳಕ ಪ್ರದರ್ಶಿಸಲು ಅದಕ್ಕೆ ಒಂದು ತಿಂಗಳು ಹಿಡಿಸಿದಂತೆ ಕಾಣುತ್ತದೆ ಎಂದು ಒಬ್ಬ ಅರ್ಥಶಾಸ್ತ್ರಜ್ಞರು ಟಿಪ್ಪಣಿ ಮಾಡಿದ್ದಾರೆ.
ಇದರಲ್ಲಿ ಪಿಐಬಿ ಬಳಸಿಕೊಂಡದ್ದು ಅನುಭೋಗ ಆಧಾರಿತ ಅಥವ ಬಳಕೆ-ಆಧಾರಿತ ಜಿನಿ ಸೂಚ್ಯಂಕ ಮತ್ತು ಆದಾಯ ಆಧಾರಿತ ಜೀನಿ ಸೂಚ್ಯಂಕ ಇವೆರಡರ ನಡುವಿನ ವ್ಯತ್ಯಾಸದ ಬಗೆಗಿನ ತಿಳುವಳಿಕೆಯ ಅಭಾವವನ್ನು ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.

ವಿಶ್ವಬ್ಯಾಂಕ್ ಸಮಯ- ಸಮಯಕ್ಕೆ ವಿವಿಧ ಅಭಿವೃದ್ಧಿ ಸೂಚಕ ಅಂಶಗಳನ್ನು ಕುರಿತ ದತ್ತಾಂಶಗಳನ್ನು ಪ್ರಕಟಿಸುತ್ತದೆ. ಇದರಲ್ಲಿ ಆದಾಯ ಅಸಮಾನತೆಯ ಜೀನಿ ಸೂಚ್ಯಂಕವೂ ಒಂದು, ಆದರೆ ಇದು ಬಳಕೆ-ಆಧಾರಿತ ಜೀನಿ ಸೂಚ್ಯಂಕಕ್ಕಿಂತ ಭಿನ್ನವಾಗಿದೆ. ಹೆಸರೇ ಸೂಚಿಸುವಂತೆ ಮೊದಲನೆಯದ್ದು ಒಟ್ಟು ಆದಾಯ ಕುರಿತ ದತ್ತಾಂಶಗಳನ್ನು ಆಧರಿಸಿದ್ದರೆ, ಎರಡನೆಯದ್ದು ಅನುಭೋಗ ಅಥವ ಬಳಕೆ ಆಧಾರಿತವಾಗಿದೆ. ಅಂದರೆ ಆಹಾರ, ವಸತಿ, ಬಟ್ಟೆ, ಆರೋಗ್ಯ, ಶಿಕ್ಷಣ ಮುಂತಾದವುಗಳಿಗೆ ಮಾಡುವ ಖರ್ಚುಗಳ ದತ್ತಾಂಶಗಳನ್ನು ಆಧರಿಸಿರುತ್ತದೆ.
ಯುರೋಪಿಯನ್ ದೇಶಗಳಲ್ಲಿ, ಒಟ್ಟಾರೆಯಾಗಿ ಶ್ರೀಮಂತ ದೇಶಗಳಲ್ಲಿ ಆದಾಯ ಕುರಿತ ಸರ್ವೆಗಳನ್ನು ನಡೆಸಿ ಪಡೆವ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಆಧ್ದರಿಂದ ವಿಶ್ವಬ್ಯಾಂಕ್ ಜನಸಂಖ್ಯೆಯ ಎಷ್ಟು ಶೇಕಡಾ ಪ್ರಮಾಣ ಎಷ್ಟು ಆದಾಯ ಹೊಂದಿದೆ ಎಂಬ ಆದಾಯದ ಹಂಚಿಕೆಯ ಆಧಾರದಲ್ಲಿ ಜಿನಿ ಸೂಚ್ಯಂಕವನ್ನು ಲೆಕ್ಕ ಹಾಕುತ್ತದೆ.
ಆದರೆ ಭಾರತದಂತಹ ಕೃಷಿಪ್ರಧಾನ ದೇಶದಲ್ಲಿ ಇಂತಹ ಅಂಕಿ-ಅಂಶಗಳನ್ನು ಪಡೆಯಲು ಸಾಧ್ಯವಿಲ್ಲವಾದ್ದರಿಂದ ಬಹಳ ಹಿಂದಿನಿಂದಲೂ ‘ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಘಟನೆ’ (ಎನ್ಎಸ್ಎಸ್ಒ-ಈಗ ಇದು ಎನ್ಎಸ್ಒ ಅಂದರೆ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಎಂದಾಗಿದೆ) ಬಳಕೆಗೆ ಪ್ರತಿ ಕುಟುಂಬ ಮಾಡುವ ಖರ್ಚಿನ ಸರ್ವೆಗಳನ್ನು ನಡೆಸುತ್ತ ಬಂದಿದೆ.
ಈ ಮೊದಲಿನ ಇಂತಹ ಸರ್ವೆ 2011-12ರಲ್ಲಿ ನಡೆದಿತ್ತು. ನಂತರ 2017-18ರಲ್ಲಿ ನಡೆಸಲಾಯಿತು. ಆದರೆ ಇದು ಸರಿಯಾಗಿಲ್ಲ ಎಂದು ಅದರ ಅಂಕಿ-ಅಂಶಗಳನ್ನು ಪ್ರಕಟಿಸಲಿಲ್ಲ. ಈ ಸರ್ವೆಯ ಫಲಿತಾಂಶ ಸರಕಾರಕ್ಕೆ ಅಪಥ್ಯವಾಗಿದ್ದುದೇ ಇದಕ್ಕೆ ಕಾರಣವೆನ್ನಲಾಗಿದೆ, ನಂತರ ಇತ್ತೀಚೆಗೆ ಸರ್ವೆಯ ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಿ 2022-23ರಲ್ಲಿ ಇಂತಹ ಸರ್ವೆ ನಡೆಯಿತು. ವಿಶ್ವ ಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿರುವುದು ಇದರ ಮತ್ತು 2011-12 ರ ಸರ್ವೆಯ ಆಧಾರದಲ್ಲಿ ಲೆಕ್ಕ ಹಾಕಿದ ಜೀನಿ ಸೂಚ್ಯಂಕವನ್ನು.
ಇಲ್ಲಿ, ಬಳಕೆ-ಆಧಾರಿತ ಜೀನಿ ಸೂಚ್ಯಂಕಗಳ ವಿಷಯದಲ್ಲೂ, 2011-12 ರ ಸರ್ವೆ ಆಧಾರಿತ ಸೂಚ್ಯಂಕ ಮತ್ತು 2022-23 ಸರ್ವೆ ಆಧಾರಿತ ಸೂಚ್ಯಂಕವನ್ನು ಕೂಡ ಹೋಲಿಸುವುದು ಸಾಧ್ಯವಿಲ್ಲ ಎಂಬುದನ್ನೂ ಗಮನಿಸಬೇಕು.
ಗಮನಾರ್ಹ ವ್ಯತ್ಯಾಸ
ಮೇಲೆ ಹೇಳಿದಂತೆ, ಆದಾಯ-ಆಧಾರಿತ ಮತ್ತು ಬಳಕೆ-ಆಧಾರಿತ ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸವಿದೆ.
ಏಕೆಂದರೆ, ಶ್ರೀಮಂತ ವಿಭಾಗಗಳು ತಮ್ಮ ಆದಾಯದ ಗಮನಾರ್ಹ ಭಾಗವನ್ನು ಉಳಿತಾಯ ಮಾಡುತ್ತವೆ ಅಥವ ಬೇರೆ ಕಡೆ ಪೇರಿಸಿಡುತ್ತವೆ, ಬಡವಿಭಾಗಗಳ ಉಳಿತಾಯದ ಪ್ರಮಾಣ ಬಹಳ ಕಡಿಮೆ, ಹಲವಾರು ವಿಭಾಗಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಬಳಕೆ ಖರ್ಚುಗಳಿಗೆ ಸಂಬಂಧಪಟ್ಟ ದತ್ತಾಂಶಗಳು ಇದನ್ನು ಬಿಂಬಿಸುವುದಿಲ್ಲ. ಆದ್ದರಿಂದ ಇವೆರಡನ್ನು ಆಧರಿಸಿದ ಸೂಚ್ಯಂಕಗಳು ಸಂಪೂರ್ಣ ಭಿನ್ನ ಸೂಚಕಗಳು, ಇವನ್ನು ಪರಸ್ಪರ ಹೋಲಿಸುವುದು ಸಾಧ್ಯವಿಲ್ಲ.

ವಿಶ್ವ ಬ್ಯಾಂಕ್ ತನ್ನ ವರದಿಗಳಲ್ಲಿ ಅಸಮಾನತೆಯ ಲೆಕ್ಕಾಚಾರಕ್ಕೆ ಸಂಬಂಧಪಟ್ಟಂತೆ ಇವೆರಡನ್ನೂ ತನಗೆ ಲಭ್ಯವಿರುವಂತೆ ಪ್ರಕಟಿಸಿದರೂ, ಇವನ್ನು ಪರಸ್ಪರ ಹೋಲಿಸುವಂತಿಲ್ಲ ಎಂದು ಅದು ಕೂಡ ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಅಲ್ಲದೆ, ಮೇಲೆ ಹೇಳಿದಂತೆ, 2011-12 ಮತ್ತು 2022-23ರ ದತ್ತಾಂಶಗಳನ್ನೂ ಕೂಡ ಪರಸ್ಪರ ಹೋಲಿಸಲು ಸಾಧ್ಯವಿಲ್ಲ, ಏಕೆಂದರೆ , 2022-23ರ ಸರ್ವೆ ಪ್ರಶ್ನೆಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿತ್ತು. ಅಂದರೆ, , 2011-12ರಿಂದ 2022-23ರ ಅವಧಿಯಲ್ಲಿ ಬಳಕೆ-ಆಧಾರಿತ ಸಮಾನತೆ ಉತ್ತಮಗೊಂಡಿದೆ ಎಂದೂ ಹೇಳುವಂತಿಲ್ಲ! ವಿಶ್ವಬ್ಯಾಂಕ್ ಹೇಳಿಕೆ ಇದನ್ನು ಕೂಡ ಸ್ಪಷ್ಟವಾಗಿ ಹೇಳಿದೆ.
ಇವೆಲ್ಲವೂ ಪಿಐಬಿ ಹೇಳಿಕೆಯನ್ನು ಸಿದ್ಧಪಡಿಸಿದವರಿಗೆ ಅಥವ ಅದನ್ನು ಒದಗಿಸಿದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿದಿಲ್ಲ ಎಂದೇನಲ್ಲ. ಆದರೂ ಇಂತಹ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರ ನಿಜವಾದ ಕಾರಣ ಏನು ಎಂಬುದು ಅವರವರ ಊಹೆಗೆ ಬಿಟ್ಟದ್ದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಕುಟುಂಬ ಸರ್ವೆಗಳಲ್ಲಿ ಅತ್ಯಂತ ಶ್ರೀಮಂತ ವಿಭಾಗಗಳನ್ನು ಸಾಮಾನ್ಯವಾಗಿ ಒಳಗೊಳ್ಳುವುದಿಲ್ಲ. ಒಬ್ಬ ಅರ್ಥಶಾಸ್ತ್ರಜ್ಞರು ಹೇಳಿರುವಂತೆ, ಮುಂಬೈಯಲ್ಲಿರುವ ಅಂಬಾನಿ ಕುಟುಂಬದ ಭವ್ಯ ಭವನಕ್ಕೆ ಒಬ್ಬ ಸರ್ವೆ ಮಾಡುವವರು ಹೋಗಿ ಅವರು ಪ್ರತಿತಿಂಗಳು ಅನ್ನ-ಬಟ್ಟೆ ಇತ್ಯಾದಿಗೆ ಎಷ್ಟು ಖರ್ಚು ಮಾಡುತ್ತಾರೆ ಎಂದು ಕೇಳಲು ಸಾಧ್ಯವೇ? ಇದರಿಂದಾಗಿ ಬಳಕೆ ಖರ್ಚುಗಳ ಈ ದತ್ತಾಂಶಗಳು ಈ ಅತಿ ಸಣ್ಣ ವಿಭಾಗದ ಖರ್ಚುಗಳನ್ನು ಬಿಂಬಿಸಲಾರವು.
ಆದರೆ ಭಾರತದಂತಹ ದೇಶದಲ್ಲಿ ತುತ್ತ ತುದಿಯ ಈ 1 ಶೇ. ಜನರಲ್ಲೇ ಗರಿಷ್ಟ ಆದಾಯ ಮತ್ತು ಸಂಪತ್ತು ತುಂಬಿಕೊಂಡಿರುವಾಗ, ಇವು ಒಟ್ಟು ದತ್ತಾಂಶಗಳಲ್ಲಿ ಸೇರಿರದಿದ್ದರೆ, ಉಳಿದ ಜನವಿಭಾಗಗಳ ಬಳಕೆ ಖರ್ಚಿನ ಮಟ್ಟದಲ್ಲಿ ಬಹಳಷ್ಟು ವ್ಯತ್ಯಾಸಗಳೇನೂ ಬಿಂಬಿತವಾಗುವುದಿಲ್ಲ, ಇದು ಸಹಜವಾಗಿಯೇ ‘ಸಮಾನತೆ’ಯ ಭ್ರಮೆಯನ್ನು ಉಂಟುಮಾಡುತ್ತದೆ. ಇಂತಹ ಭ್ರಮೆಯನ್ನು ಹರಡುವ ಪ್ರಯತ್ನದಲ್ಲಿ ಪತ್ರಿಕೆಗಳೂ ಅಮಾಯಕರಂತೆ ಪಾಲ್ಗೊಳ್ಳಬೇಕೇ ಎಂಬುದು ಕೇಳಬೇಕಾಗಿರುವ ಪ್ರಶ್ನೆ.
ವಾಸ್ತವತೆ ತದ್ವಿರುದ್ಧ
ವಾಸ್ತವ ಪರಿಸ್ಥಿತಿ ಪಿಐಬಿ ಹೇಳಿಕೆಗೆ, ಆಮೂಲಕ ಸರಕಾರ ಬಿಂಬಿಸ ಬಯಸುವುದಕ್ಕೆ ತದ್ವಿರುದ್ಧವಾಗಿದೆ, ಇತರ ಹಲವು ಜಾಗತಿಕ ಸೂಚ್ಯಂಕಗಳು ಈಗಾಗಲೇ ಇದನ್ನು ಬಿಂಬಿಸಿವೆ. ಇವುಗಳಲ್ಲಿ ತೀರಾ ಇತ್ತೀಚಿನದ್ದೆಂದರೆ, ಈ ಪಿಐಬಿ ಹೇಳಿಕೆ ಪ್ರಕಟವಾಗುವುದಕ್ಕಿಂತ ಸ್ವಲ್ಪವೇ ಮುಂಚೆ ಬೆಳಕಿಗೆ ಬಂದ ಪೋಷಣಾಂಶ ಸೇವನೆ ಕುರಿತ ವರದಿ. ಇದು ಕೂಡ ಸರಕಾರವೇ ಬಿಡುಗಡೆ ಮಾಡಿರುವ ಎನ್ಎಸ್ಒ ವರದಿ, 2022-23 ಮತ್ತು 2023-24ರಲ್ಲಿ ನಡೆಸಿದ ಸರ್ವೆಗಳ ಫಲಿತಾಂಶಗಳನ್ನು ಇದು ಒಳಗೊಂಡಿದೆ. 1,55 ಲಕ್ಷ ಗ್ರಾಮವಾಸಿಗಳು ಮತ್ತು 1,07 ನಗರವಾಸಿಗಳ ನಡುವೆ ನಡೆಸಿದ ಸರ್ವೆಯಿದು.
ಈ ವರದಿಯ ಪ್ರಕಾರ, ಒಬ್ಬ ವಯಸ್ಕ ವ್ಯಕ್ತಿಯ ಕನಿಷ್ಟ ಪೋಷಣಾಂಶ ಆವಶ್ಯಕತೆ 2325 ಕೆಕ್ಯಾಲರಿ (2017-18ರ ಮೊದಲು ಇದು 2700 ಕೆಕ್ಯಾಲರಿ ಎಂದಿತ್ತು-ಇದರಲ್ಲಿ ಕಡಿತ ಮಾಡಿದ್ದೇಕೆ ಎಂಬುದಕ್ಕೆ ಸರಿಯಾದ ಕಾರಣಗಳನ್ನು ತಿಳಿಸಲಾಗಿಲ್ಲಎಂಬುದು ಬೇರೆಯೇ ಸಂಗತಿ).
ಸರ್ವೆಯ ಫಲಿತಾಂಶಗಳ ಪ್ರಕಾರ,
*ಅತ್ಯಂತ ಬಡ 5% ಜನಸಂಖ್ಯೆಗೆ ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ ಸರಾಸರಿ ಪೋಷಣಾಂಶ 1688 ಕೆಕ್ಯಾಲರಿ- ನಗರ ಪ್ರದೇಶಗಳಲ್ಲಿ 1696 ಕೆಕ್ಯಾಲರಿ, ಅಂದರೆ ಕನಿಷ್ಟ ಆವಶ್ಯಕತೆಗಿಂತ 30%ದಷ್ಟು ಕಡಿಮೆ.
*ಇನ್ನೊಂದು ತುದಿಯಲ್ಲಿ, ಅತ್ಯಂತ ಶ್ರೀಮಂತ 5% ಜನಸಂಖ್ಯೆಯ ಪೋಷಣಾಂಶ ಸೇವನೆಯ ಸರಾಸರಿ ಗ್ರಾಮೀಣ ಪ್ರದೇಶಗಳಲ್ಲಿ 2942 ಕೆಕ್ಯಾಲರಿ, ನಗರಪ್ರದೇಶಗಳಲ್ಲಿ 3092 ಕೆಕ್ಯಾಲರಿ, ಅಂದರೆ ಕನಿಷ್ಟ ಆವಶ್ಯಕತೆಗಿಂತ 30%ದಷ್ಟು ಹೆಚ್ಚು!
*ಜನಸಂಖ್ಯೆಯ 60-70% ಕನಿಷ್ಟ ಆವಶ್ಯಕತೆಯಾದ 2325 ಕೆಕ್ಯಾಲರಿಗಿಂತ ಕಡಿಮೆ ಸೇವನೆ ಮಾಡುತ್ತಾರೆ.
ಈ ವರದಿ ಪ್ರೊಟೀನ್ ಸೇವನೆ, ಕೊಬ್ಬು ಸೇವನೆಯಲ್ಲೂ ಇದೇ ತರಹದ ಭಾರೀ ಅಸಮಾನತೆಗಳು ಕಂಡು ಬಂದಿವೆ ಎಂದೂ ಹೇಳುತ್ತದೆ.
ಈ ವರದಿ ಕೊಡುವ ಒಟ್ಟಾರೆ ಚಿತ್ರ ಎಂದರೆ, ಬಡವರು ಮತ್ತು ಶ್ರೀಮಂತರ ನಡುವೆ ಅಗಾಧ ಅಂತರ. ಇವು ಆದಾಯಗಳಲ್ಲಿನ ಅಗಾಧ ಅಂತರಕ್ಕೆ ಅನುಗುಣವಾಗಿಯೇ ಇವೆ ಎಂದು ಬೇರೆ ಹೇಳಬೇಕಾಗಿಲ್ಲ.
ಅಸಮಾನತೆಯ ಪ್ರಮಾಣವನ್ನು ಸೂಚಿಸುವ ಇನ್ನೂ ಕೆಲವು ಸೂಚ್ಯಂಕಗಳನ್ನು ಗಮನಿಸಿ: ವಿಶ್ವಸಂಸ್ಥೆಯ ಅಂಗಸಂಸ್ತೆಯಾದ, ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಒ)ಯ 2019ರ ಆಹಾರ ಸೇವನೆ ಸೂಚ್ಯಂಕದಲ್ಲಿಯೂ, ಭಾರತದ ಸ್ಥಾನ 185 ದೇಶಗಳಲ್ಲಿ 102ನೇಯದ್ದು. 2009ರಲ್ಲಿ 82ನೇಸ್ಥಾನದಲ್ಲಿತ್ತು.
*ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 127ದೇಶಗಳಲ್ಲಿ 105ನೇಯದ್ದು
*ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 193 ದೇಶಗಳಲ್ಲಿ 134 ನೇಯದ್ದು
*ಹೆಚ್ಚುತ್ತಿರುವ ಅಸಮಾನತೆಯ ಚರ್ಚೆಗೆ ಇಂಬು ನೀಡಿದ ಥಾಮಸ್ ಪಿಕೆಟ್ಟಿ ಮತ್ತು ಸಂಗಡಿಗರ ‘ಗ್ಲೋಬಲ್ ಇನಿಕ್ವಾಲಿಟಿ ಡಾಟಾಬೇಸ್’ (ಜಾಗತಿಕ ಅಸಮಾನತೆ ದತ್ತಾಂಶ ನೆಲೆ) ವರದಿಯ ಇತ್ತೀಚಿನ ಆವೃತ್ತಿಯ ಶಿರೋನಾಮೆಯೇ “ ಭಾರತದಲ್ಲಿ ಆದಾಯ ಮತ್ತು ಸಂಪತ್ತು ಅಸಮಾನತೆ 1922-2023: ಬಿಲಿಯಾಧಿಪತಿಗಳ ರಾಜ್ಯಭಾರ” ಎಂದಿರುವುದನ್ನು ಗಮನಿಸಬೇಕು.
*ಇದರ ಪ್ರಕಾರ , 2023ರಲ್ಲಿ, ತೆರಿಗೆ ಪೂರ್ವ ಆದಾಯದ ಜೀನಿ ಸೂಚ್ಯಂಕ 61 ಆಗಿದ್ದರೆ, ಸಂಪತ್ತಿನ ಜೀನಿ ಸೂಚ್ಯಂಕ 75. ಈ ಡಾಟಾಬೇಸ್ ಪರಿಶೀಲಿಸಿದ 218 ಅರ್ಥವ್ಯವಸ್ಥೆಗಳಲ್ಲಿ, ಆದಾಯದ ವಿಷಯದಲ್ಲಿ ಭಾರತ 171ನೇ ಸ್ಥಾನದಲ್ಲಿದ್ದರೆ, ಸಂಪತ್ತಿನ ವಿಷಯದಲ್ಲಿ 68ನೇ ಸ್ಥಾನದಲ್ಲಿದೆ, ( ಇದನ್ನು ಪಿಐಬಿ ಸಂಭ್ರಮಿಸುವ ಭಾರತಕ್ಕೆ ನಾಲ್ಕನೇ ಅತ್ಯಂತ ಸಮಾನತೆಯ ಸ್ಥಾನ ನೀಡಿದೆ ಎನ್ನಲಾದ ಬಳಕೆ-ಆಧಾರಿತ ಜೀನಿ ಸೂಚ್ಯಂಕ 25,5 ರೊಂದಿಗೆ ಹೋಲಿಸಿ ನೋಡಬಹುದು).
ಅಂದರೆ, ಯಾವುದೇ ರೀತಿಯಲ್ಲಿ ನೋಡಿದರೂ, ಭಾರತ ಅತ್ಯಂತ ಅಸಮಾನತೆಯಿರುವ ದೇಶ ಮತ್ತು ಈ ಅಸಮಾನತೆ ಹೆಚ್ಚುತ್ತಲೇ ಇದೆ ಎಂಬ ತೀರ್ಮಾನಕ್ಕೇ ಬರಬೇಕಾಗುತ್ತದೆ. ಆದರೂ ಪಿಐಬಿ ಬಳಕೆ-ಆಧಾರಿತ ಜೀನಿ ಸೂಚ್ಯಂಕವನ್ನು ಸಂಭ್ರಮಿಸಲು ಮುಂದಾದ್ದೇಕೆ? ಬಹುಶಃ ಅದಕ್ಕೆ ಉತ್ತರವೂ ಈ ಹೆಚ್ಚುತ್ತಲೇ ಇರುವ ಅಸಮಾನತೆಯಲ್ಲಿಯೇ ಹುದುಗಿದೆ.
ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi
