ಸಮತೋಲನದ ನ್ಯಾಯಯುತ ಸಂಹಿತೆ ಜಾರಿಯಾಗಬೇಕಿದೆ

ಮೂಲ : ಫೈಜನ್‌ ಮುಸ್ತಫಾ

ಅನುವಾದ : ನಾ ದಿವಾಕರ

ಸಂವಿಧಾನದ ಮಾನದಂಡಗಳನ್ನು ಉಲ್ಲಂಘಿಸುವ ಆಚರಣೆಗಳನ್ನಷ್ಟೇ ತೊಡೆದುಹಾಕಬೇಕಿದೆ.

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಪ್ರಸ್ತಾಪಗಳನ್ನು ಕೋರಲು ಜೂನ್ 14 ರಂದು ಭಾರತದ ಕಾನೂನು ಆಯೋಗ ನಿರ್ಧರಿಸಿದೆ. ಕಾನೂನು ಆಯೋಗವು  ಏಕರೂಪ ನಾಗರಿಕ ಸಂಹಿತೆಯ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ ಎಂದು ತೀರ್ಮಾನಿಸಿದ ಕೇವಲ ಐದು ವರ್ಷಗಳ ವಿರಾಮದ ನಂತರ, ಈಗ ಆಯೋಗದ ಈ ಕ್ರಮವು ಭಾರತದ ರಾಜಕಾರಣದಲ್ಲಿ ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ವಿವಾದಾಸ್ಪದವಾಗಿರುವ ವಿಷಯದ ಮೇಲೆ ಬಿಸಿಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ.  ಏಕರೂಪ ನಾಗರಿಕ ಸಂಹಿತೆಯನ್ನು ಹಂತ ಹಂತವಾಗಿ ಜಾರಿಗೆ ತರುವುದು ಸಂವಿಧಾನದ ಅನುಚ್ಛೇದ 44 ರ ಆಶಯಕ್ಕೆ ಅನುಗುಣವಾಗಿರುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗುವುದಾದರೂ ಆಯೋಗವು ಈ ಕ್ರಮವನ್ನು ಕೈಗೊಳ್ಳುವಾಗ ಪರಿಗಣಿಸಬೇಕಾದ ಒಂದು ನಿರ್ದಿಷ್ಟ ವಿಚಾರದ ಬಗ್ಗೆ ಗಮನವನ್ನು ಸೆಳೆಯುವ ಪ್ರಯತ್ನ ಇಲ್ಲಿದೆ.

ಸ್ವಾಯತ್ತತೆ ಮತ್ತು ಅಧಿಕಾರ

ವೈಯಕ್ತಿಕ ಕಾನೂನುಗಳ ಪ್ರಶ್ನೆಯು ಮೂಲತಃ ವೈಯಕ್ತಿಕ ಮತ್ತು ಧಾರ್ಮಿಕ ಸ್ವಾಯತ್ತತೆಯ ಪ್ರಶ್ನೆಯಾಗಿದ್ದು ಕೌಟುಂಬಿಕ ಸಂಬಂಧಗಳನ್ನು ಸುಧಾರಿಸುವಲ್ಲಿ ಪ್ರಭುತ್ವದ ಅಧಿಕಾರದ ಪ್ರಶ್ನೆಯಾಗಿ ಕಾಣುತ್ತದೆ. ಪ್ರತಿಯೊಂದು ಧಾರ್ಮಿಕ ಗುಂಪು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಹೊಂದಿರುವುದರಿಂದ, ಸಮುದಾಯವು ಸುಧಾರಣೆಗಳನ್ನು ಪಡೆಯಲು ಮುಂದೆ ಬರಬೇಕು ಎಂದು ವಾದಿಸಲಾಗುತ್ತಿದೆ. ಆಂತರಿಕ ಕಾನೂನು ಸುಧಾರಣೆ ಅಥವಾ ಸ್ವಯಂಪ್ರೇರಿತ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳಲು ಇದು ಸಮರ್ಥನೆಯಾಗಿದೆ. ವಾಸ್ತವವಾಗಿ, ವಿಶೇಷ ವಿವಾಹ ಕಾಯ್ದೆ 1954 ಮತ್ತು ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ಏಕರೂಪ ನಾಗರಿಕ ಸಂಹಿತೆಯನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಳ್ಳುವ ಉದಾಹರಣೆಗಳಾಗಿವೆ, ಆದರೆ ಇತ್ತೀಚೆಗೆ ಜಾರಿಗೆ ತರಲಾದ ಅಂತರ್ ಧರ್ಮೀಯ ವಿವಾಹಗಳನ್ನು ನಿಷೇಧಿಸುವ ಕಾಯ್ದೆಗಳ ಮೂಲಕ ಜಾರಿಗೆ ತರಲಾದ ಲವ್ ಜಿಹಾದ್ ಕಾನೂನುಗಳು ಮೂಲತಃ ವಿಶೇಷ ವಿವಾಹ ಕಾಯ್ದೆಯ ಸ್ಫೂರ್ತಿಯನ್ನು ಉಲ್ಲಂಘಿಸುತ್ತವೆ.

ಇಲ್ಲಿ ಹಲವು ಪ್ರಾದೇಶಿಕ ವ್ಯತ್ಯಾಸಗಳೂ ಇವೆ, ಅಂದರೆ ಕೇರಳವು 1975 ರಲ್ಲಿ ಹಿಂದೂ ಅವಿಭಕ್ತ ಕುಟುಂಬವನ್ನು ರದ್ದುಗೊಳಿಸಿತು; ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳನ್ನು ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್‌ನಲ್ಲಿ 1876 ರ ಕಾನೂನಿನ ಅಡಿಯಲ್ಲಿ ಮತ್ತು ಅಸ್ಸಾಂನಲ್ಲಿ 1935 ರ ಕಾನೂನಿನ ಅಡಿಯಲ್ಲಿ ನೋಂದಾಯಿಸಬೇಕಾಗಿದೆ ಮತ್ತು ಕಾಶ್ಮೀರಿ ಮುಸ್ಲಿಮರಿಗೆ ದತ್ತು ಸ್ವೀಕಾರಕ್ಕೆ ಅವಕಾಶ ನೀಡಲಾಗಿದೆ.

ಪ್ರಸ್ತುತ, ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಯಹೂದಿಗಳು ಸಹ ತಮ್ಮದೇ ಆದ ವೈಯಕ್ತಿಕ ಕಾನೂನುಗಳಿಂದ ಆಳಲ್ಪಡುತ್ತಾರೆ. ಅಂತೆಯೇ ಇದು ವ್ಯಕ್ತಿಗಳ ಗುಂಪಿಗೆ ಯಾವ ವೈಯಕ್ತಿಕ ಕಾನೂನು ಅನ್ವಯಿಸುತ್ತದೆ ಎಂಬುದನ್ನು ನಿರ್ಧರಿಸುವ ಧಾರ್ಮಿಕ ಗುರುತಾಗಿದೆ ಎನ್ನುವುದು ನಿರ್ವಿವಾದ ಅಂಶ. ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ಸುಧಾರಿತ ಹಿಂದೂ ವೈಯಕ್ತಿಕ ಕಾನೂನು ಸಹ ಸಪ್ತಪದಿ (ಅಗ್ನಿಯ ಸುತ್ತ ಏಳು ಹೆಜ್ಜೆಗಳು) ಮತ್ತು ದತ್ತ (ಅಗ್ನಿಯ ಮುಂದೆ ಪ್ರಾರ್ಥನೆ) ಮೂಲಕ ಮದುವೆಯನ್ನು ಆಚರಿಸಲು ಒತ್ತಾಯಿಸುತ್ತದೆ. ಮನುಸ್ಮೃತಿ (8.227)ಯಂತೆಯೇ ಕಾಯ್ದೆಯ ಸೆಕ್ಷನ್ 7(2) ಮದುವೆಯು ಏಳನೇ ಹಂತದಲ್ಲಿ ಪೂರ್ಣಗೊಳ್ಳುತ್ತದೆ ಎಂದು ಸೂಚಿಸುತ್ತದೆ. ಸಗೋತ್ರ ಸಂಬಂಧ, ದತ್ತು ಮತ್ತು ಹಿಂದೂ ಅವಿಭಕ್ತ ಕುಟುಂಬ ನಿಯಮಗಳು ಸಹ ಹಿಂದೂ ವೈಯಕ್ತಿಕ ಕಾನೂನನ್ನು ಆಧರಿಸಿವೆ.

ಅಚ್ಚರಿಯ ಅಂಶವೆಂದರೆ 1954 ರ ವಿಶೇಷ ವಿವಾಹ ಕಾಯ್ದೆ (1976 ರಲ್ಲಿ ಸೇರಿಸಲಾದ ಸೆಕ್ಷನ್ 21 ಎ) ಅಡಿಯಲ್ಲಿ ಇಬ್ಬರು ಹಿಂದೂಗಳು ಮದುವೆಯಾದಾಗ, ಅವರು ಹಿಂದೂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುತ್ತಾರೆ, ಆದರೆ ಈ ಶಾಸನದ ಅಡಿಯಲ್ಲಿ ಇಬ್ಬರು ಮುಸ್ಲಿಮರು ಮದುವೆಯಾದರೆ, ಮುಸ್ಲಿಂ ವೈಯಕ್ತಿಕ ಕಾನೂನು (ಎಂಪಿಎಲ್) ಇನ್ನು ಮುಂದೆ ಅವರನ್ನು ನಿಯಂತ್ರಿಸುವುದಿಲ್ಲ. ಕುತೂಹಲಕಾರಿ ಸಂಗತಿಯೆಂದರೆ, ಹಿಂದೂ ಧರ್ಮವನ್ನು ತ್ಯಜಿಸುವ ವ್ಯಕ್ತಿಯೂ ಸಹ ಹಿಂದೂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುತ್ತಾನೆ.

ಸಂವಿಧಾನವು ಒಂದು ಪ್ರಾರಂಭಿಕ ಹೆಜ್ಜೆ ಮಾತ್ರವಾಗಿರಲಿಲ್ಲ, ಬದಲಾಗಿ ಭಾರತದ ದೀರ್ಘಕಾಲದ ಸಮನ್ವಯದ ಸಂಪ್ರದಾಯಗಳ ಅಂತಿಮ ಅಭಿವ್ಯಕ್ತಿಯಾಗಿತ್ತು. ಎಲ್ಲಾ ರೀತಿಯ ತಾರತಮ್ಯವನ್ನು ಕಾನೂನುಬಾಹಿರಗೊಳಿಸುವ ನಿಬಂಧನೆಗಳ ಜೊತೆಗೆ, ಸಾಂಸ್ಕೃತಿಕ ಹೊಂದಾಣಿಕೆಗೆ ಭಾರತೀಯ ಸಂವಿಧಾನದ ಬದ್ಧತೆಯು ಎಲ್ಲಾ ನಾಗರಿಕರ ವಿಶಿಷ್ಟ ಸಂಸ್ಕೃತಿಯನ್ನು ಸಂರಕ್ಷಿಸಲು ಮೀಸಲಾಗಿರುವ ಅನುಚ್ಛೇದ 29 (1) ರಲ್ಲಿ ಸಂಪೂರ್ಣ ಮೂಲಭೂತ ಹಕ್ಕಿನ ಮೂಲಕ ಗೋಚರಿಸುತ್ತದೆ. ಆದಾಗ್ಯೂ ವ್ಯಕ್ತಿಯು ಆಕ್ರೋಶದಲ್ಲಿದ್ದಾಗ ಅಥವಾ ಮಾದಕ ಅಮಲಿನ ಸ್ಥಿತಿಯಲ್ಲಿದ್ದಾಗಲೂ ಸಹ ಬಹುಪತ್ನಿತ್ವ ಅಥವಾ ಅನಿಯಂತ್ರಿತ ಏಕಪಕ್ಷೀಯ ವಿಚ್ಛೇದನವನ್ನು ತಮ್ಮ ಸಂಸ್ಕೃತಿಯ ಭಾಗವೆಂದು ಪರಿಗಣಿಸಬಹುದು ಎಂದು ವಾದಿಸಲು ಭಾರತದ ಮುಸ್ಲಿಮರಿಗೆ ಧೈರ್ಯವಿದೆಯೇ?

ಏಕರೂಪತೆಗಿಂತ ಏಕತೆ ಮುಖ್ಯ

ಭಾರತದಂತಹ ವೈವಿಧ್ಯಮಯ ಮತ್ತು ಬಹುಸಂಸ್ಕೃತಿಯ ರಾಜಕಾರಣದ ದೃಷ್ಟಿಯಿಂದ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯು ಭಾರತದ ಬಹುಸಾಂಸ್ಕೃತಿಕತೆಯ ‘ಮೊಸಾಯಿಕ್ ಮಾದರಿ’ಯ ಸಂಕೇತವಾಗಿರುವ ರೀತಿಯಲ್ಲಿ ಆಯೋಗವು ತನ್ನ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲಿ ಸ್ಪಷ್ಟವಾದ ಒಂದು ತರ್ಕವನ್ನು ಮಂಡಿಸಬಹುದು. ಪ್ರವರ್ಧಮಾನಕ್ಕೆ ಬರುತ್ತಿರುವ ವೈವಿಧ್ಯತೆಗೆ ಅಸ್ಮಿತೆಗಳ ಏಕರೂಪೀಕರಣವು ಮರೀಚಿಕೆಯಾಗಬಾರದು. ಇದು ಅಮೆರಿಕದ ಬಹುಸಾಂಸ್ಕೃತಿಕತೆಯ ಮಾದರಿಯಲ್ಲಿ ನಿರಂತರವಾಗಿ ಉಳಿದು ಬಂದಿರುವ ವೈಶಿಷ್ಟ್ಯವಾಗಿದೆ.  ಏಕತೆಯು ಏಕರೂಪತೆಗಿಂತ ಹೆಚ್ಚು ಪ್ರಮುಖವಾಗಿ ಕಾಣುತ್ತದೆ. ಬ್ರಿಟಿಷರು ಎರಡು ಧಾರ್ಮಿಕ ಸಮುದಾಯಗಳೊಳಗಿನ ವೈವಿಧ್ಯತೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಮೂಲಕ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಏಕರೂಪತೆಯನ್ನು ತಂದಿದ್ದರು.

ಇದನ್ನೂ ಓದಿ:ಹೊಸ ಸರ್ಕಾರವು ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ

ಭಾರತದ ಸಂವಿಧಾನದ ಅಡಿಯಲ್ಲಿ, ಸಾಂಸ್ಕೃತಿಕ ಸ್ವಾಯತ್ತತೆಯ ಹಕ್ಕು ಭಾರತೀಯ ಬಹುಸಾಂಸ್ಕೃತಿಕತೆಯ ಮಾದರಿಯನ್ನು ಸಮರ್ಥಿಸುತ್ತದೆ. ರೋಚನಾ ಬಾಜಪೇಯಿ ಅವರಂತಹ ಬಹುಸಾಂಸ್ಕೃತಿಕತೆಯ ಪ್ರಮುಖ ವಿದ್ವಾಂಸರು ಭಾರತದ ಸಂವಿಧಾನವು ಭಿನ್ನತೆಯ ಹೊಂದಾಣಿಕೆಗೆ ಸಂಬಂಧಿಸಿದಂತೆ ಎರಡು ಪ್ರಮುಖ ವಿಧಾನಗಳನ್ನು ನೀಡುತ್ತದೆ ಎಂದು ಸೂಚಿಸುತ್ತಾರೆ. ಅವುಗಳೆಂದರೆ ಏಕೀಕರಣವಾದಿ ವಿಧಾನ ಮತ್ತು ನಿರ್ಬಂಧಿತ ಬಹುಸಾಂಸ್ಕೃತಿಕ ವಿಧಾನ. ಮೊದಲನೆಯ ವಿಧಾನದಲ್ಲಿ ಸಕಾರಾತ್ಮಕ ಕ್ರಿಯಾ ನೀತಿಗಳು ಹೆಚ್ಚಾಗಿ ಕಂಡುಬರುತ್ತವೆಯಾದರೂ, ಶ್ರೀಮತಿ ಬಾಜಪೇಯಿ ಅವರ ಪ್ರಕಾರ  “ಅಲ್ಪಸಂಖ್ಯಾತ ಸಂಸ್ಕೃತಿಗಳಿಗೆ ಪ್ರಭುತ್ವದ ನೆರವನ್ನು ಕಾನೂನುಬಾಹಿರ ರಿಯಾಯಿತಿಯಾಗಿ ನೋಡಲಾಗಿದೆ […] ಮತ್ತು ಇದನ್ನು ಹೆಚ್ಚಾಗಿ ‘ಅಲ್ಪಸಂಖ್ಯಾತರ ತುಷ್ಟೀಕರಣ’ ಎಂದು ಕರೆಯಲಾಗುತ್ತದೆ.”

ಶ್ರೀಮತಿ ಬಾಜಪೇಯಿ ಅವರು ಹೇಳುವಂತೆ, ಇದು ಸಾಂಸ್ಕೃತಿಕ ವ್ಯತ್ಯಾಸವನ್ನು ಯಾವುದೇ ನಿಶ್ಚಿತವಾದ ಸಾಂವಿಧಾನಿಕ ಮಾನದಂಡದ ಆಧಾರಗಳಿಲ್ಲದೆ ಹಾಗೆಯೇ ಇರಲು ಅವಕಾಶ ನೀಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಎರಡು ವಿಧಾನಗಳ ಮೂಲಕವೇ ಸಂವಿಧಾನವು ಸಾಂಸ್ಕೃತಿಕ ಹೊಂದಾಣಿಕೆ ಮತ್ತು ವಿವಿಧ ಗುಂಪುಗಳ ನಡುವಿನ ವ್ಯತ್ಯಾಸಗಳನ್ನು ಅನುಸರಿಸಲು ದಾರಿ ಮಾಡಿಕೊಡುತ್ತದೆ. ಅದರಂತೆ, 21 ನೇ ಕಾನೂನು ಆಯೋಗ (2015-18) ಸಮುದಾಯಗಳ ನಡುವೆ ಸಮಾನತೆಯ ಗುರಿಗಿಂತ ಸಮುದಾಯಗಳಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆಯನ್ನು ದಿಟ್ಟವಾಗಿ ಪ್ರತಿಪಾದಿಸಿತ್ತು. ಕೇವಲ ಒಂದು ಏಕರೂಪದ ಕಾನೂನಿಗಿಂತ ನ್ಯಾಯಯುತ ಕಾನೂನುಗಳು ಹೆಚ್ಚು ಮುಖ್ಯವಾಗಿರುವುದರಿಂದ ನ್ಯಾಯಯುತವಾದ ಸಂಹಿತೆಯು ಪ್ರಾಥಮಿಕ ಗುರಿಯಾಗಿರಬೇಕು.

ಈ ಚರ್ಚೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ತನ್ನ ಬಹುಸಂಸ್ಕೃತಿಯ ವೈವಿಧ್ಯತೆಯನ್ನು ಸಂರಕ್ಷಿಸುವ ಭಾರತದ ಪ್ರಯತ್ನವು ಜಾತ್ಯತೀತತೆಯಂತಹ ಮೌಲ್ಯಗಳೊಂದಿಗೆ ಮುಖಾಮುಖಿಯಾಗುತ್ತಲೇ ಇರುತ್ತದೆ.  ಜಾತ್ಯತೀತತೆಯು ಭಾರತೀಯ ರಾಜಕೀಯವನ್ನು ಆಳುವ ಮೂಲಭೂತ ಸಿದ್ಧಾಂತವಾಗಿದ್ದರೂ, ಸಾರ್ವಜನಿಕವಾಗಿ ಯಾವುದೇ ಧಾರ್ಮಿಕ ಸಂಘಟನೆ ಅಥವಾ ಗುರುತನ್ನು ಹೊಂದುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಫ್ರೆಂಚ್ ಮಾದರಿಯ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳದಿರಲು ಭಾರತ ನಿರ್ಧರಿಸಿತು; ಈ ಮಾದರಿಯಲ್ಲಿ ಸಾರ್ವಜನಿಕ ವಲಯದಲ್ಲಿ ಧರ್ಮವನ್ನು ರಾಷ್ಟ್ರದ ಜಾತ್ಯತೀತ ರಚನೆಗೆ ಬೆದರಿಕೆ ಎಂದು ಪರಿಗಣಿಸಲಾಗುತ್ತದೆಯೇ ಹೊರತು ಪ್ರಧಾನ ಪ್ರವರ್ತಕವಾಗಿ ಅಲ್ಲ.  ಹೀಗಾಗಿ ಧರ್ಮವನ್ನು ಕೌಟುಂಬಿಕವಾಗಿ ನಾಲ್ಕು ಗೋಡೆಗಳ ನಡುವೆ ಬಂಧಿಸಲಾಗುತ್ತದೆ. ಆದ್ದರಿಂದ ಭಾರತೀಯ ಸಮಾಜವು ಗುಂಪು ಮತ್ತು ಜನಾಂಗೀಯ ಭಿನ್ನತೆಗಳ ವ್ಯಾಪಕ ಶ್ರೇಣಿಯನ್ನು ಸಹಿಸಿಕೊಳ್ಳುವುದಷ್ಟೇ ಅಲ್ಲದೆ ಹೊಂದಾಣಿಕೆಗೂ ಅವಕಾಶ ನೀಡುತ್ತದೆ.

ವಿವಿಧ ಗುಂಪುಗಳು ತಮ್ಮ ಸಹ ನಾಗರಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಧಕ್ಕೆಯಾಗದಂತೆ ತಮ್ಮ ಬಹು-ಜನಾಂಗೀಯ ಸಂಪ್ರದಾಯಗಳನ್ನು ಪ್ರತಿಪಾದಿಸಿದಾಗ ಮತ್ತು ಕಾರ್ಯರೂಪಕ್ಕೆ ತಂದಾಗ, ಆ ಗುಂಪುಗಳ ಸಂಪ್ರದಾಯಗಳು ಮತ್ತು ಮೌಲ್ಯಗಳು ಸಾಮಾಜಿಕ ಮತ್ತು ರಾಷ್ಟ್ರೀಯ ಏಕೀಕರಣದ ಉದ್ದೇಶಗಳನ್ನು ಹೆಚ್ಚು ವಿಶಾಲವಾದ ನೆಲೆಯಲ್ಲಿ ಪೂರೈಸುವುದರಿಂದ ಅವುಗಳು ಸಾಮಾಜಿಕ ಮೌಲ್ಯಗಳ ಸ್ಥಾನಮಾನವನ್ನು ಪಡೆಯುತ್ತವೆ. ಆದಾಗ್ಯೂ, ಅಂತಹ ವಿಶಾಲ ಸ್ವರೂಪದ ಹಕ್ಕು ಅಂತರ್ಗತವಾಗಿ ಕೆಲವು ಇತಿಮಿತಿಗಳನ್ನೂ ಅಪೇಕ್ಷಿಸುತ್ತದೆ. ವೈಯಕ್ತಿಕ ಕಾನೂನುಗಳು ಮತ್ತು ಆಚರಣೆಗಳ ಹೆಸರಿನಲ್ಲಿ ಯಾವುದು ಕಾನೂನು ರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಅರ್ಹವಾಗಿದೆ ಮತ್ತು ಯಾವುದು ಅಲ್ಲ ಎನ್ನುವ ಜಿಜ್ಞಾಸೆಯಲ್ಲಿ ಈ ಇತಿಮಿತಿಗಳನ್ನು ಗಮನಿಸಬೇಕಿದೆ. ಸಾಂಸ್ಕೃತಿಕ-ಸಾಪೇಕ್ಷತಾವಾದದ ಹಕ್ಕು ಅನ್ಯಾಯದ ಮತ್ತು ತಾರತಮ್ಯದ ವೈಯಕ್ತಿಕ ಕಾನೂನುಗಳ ಮುಂದುವರಿಕೆಯನ್ನು ಸಮರ್ಥಿಸುವುದಿಲ್ಲ. ವೈಯಕ್ತಿಕ ಕಾನೂನುಗಳ ಅಂತಹ ನಿಬಂಧನೆಗಳನ್ನು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಗಣನೀಯ ಸಮಾನತೆ ಮತ್ತು ಲಿಂಗ ನ್ಯಾಯದ ಗುರಿಗಳಿಗೆ ಅನುಗುಣವಾಗಿರುವಂತೆ ರೂಪಿಸಬೇಕಾಗುತ್ತದೆ.

ಮುಂದಿನ ಹಾದಿಯಲ್ಲಿ ಅಡೆತಡೆಗಳು

ಇದೇ ವೇಳೆ ಒಂದು ಸಮುದಾಯವು ಯಾವುದೇ ರೀತಿಯಲ್ಲಿ ಭೀತಿಯ ವಾತಾವರಣವನ್ನು ಎದುರಿಸಿದಾಗ ಆ ಸಮುದಾಯದ ಸದಸ್ಯರ ಸಾಮೂಹಿಕ ಗೌರವವು ಸಮುದಾಯದೊಂದಿಗೆ ಬೆಸೆದುಕೊಂಡಿರುತ್ತದೆ  ಹಾಗೂ ಇದರಿಂದ ಸಮುದಾಯದ ನಿಷ್ಠೆ ಹೆಚ್ಚು ಬಲಗೊಳ್ಳುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬೇಕಿದೆ.  ಆದ್ದರಿಂದ, ಭಾರತದ ಕಾನೂನು ಆಯೋಗದ ಪ್ರಸ್ತಾವನೆಗಳು ಮುಸ್ಲಿಮರು ಸೇರಿದಂತೆ ಭಾರತದ ವಿವಿಧ ಸಮುದಾಯಗಳಲ್ಲಿ ಪ್ರತಿಕ್ರಿಯಾತ್ಮಕ ಸಾಂಸ್ಕೃತಿಕತೆಯ ಬೆಳವಣಿಗೆಗೆ ಕಾರಣವಾಗಲಾರದು ಎಂದೇ ಭಾವಿಸಬೇಕಾಗಿದೆ. ಮುಸ್ಲಿಂ ವೈಯುಕ್ತಿಕ ಕಾನೂನು ಹಾಗೂ ಇಸ್ಲಾಂ ಧರ್ಮ ಎರಡೂ ಒಂದೇ ಅಲ್ಲ ಎಂಬುದನ್ನು ಮುಸ್ಲಿಂ ಸಮುದಾಯವೂ ಅರ್ಥಮಾಡಿಕೊಳ್ಳಬೇಕು. ಮುಸ್ಲಿಂ ವೈಯುಕ್ತಿಕ ಕಾನೂನು ನ್ಯಾಯಶಾಸ್ತ್ರಜ್ಞರ ಕಾನೂನು ಆಗಿದೆಯೇ ಹೊರತು ಸಂಪೂರ್ಣವಾಗಿ ದೈವೀಕವಲ್ಲ. ವಾಸ್ತವವಾಗಿ ಇದನ್ನು ಆಂಗ್ಲೋ-ಮಹಮ್ಮದೀಯ ಕಾನೂನು ಎಂದು ಕರೆಯುವುದು ಹೆಚ್ಚು ಸೂಕ್ತವಾಗಿದೆ, ಇದು ಕೆಲವು ವಿಷಯಗಳಲ್ಲಿ ಪ್ರವಾದಿಯ ಕುರಾನ್ ಮತ್ತು ಸನ್ನಾಗಳಿಂದ ತಪ್ಪಾಗಿ ಭಾಷಾಂತರಿಸಲಾದ ಅನುಷಂಗಿಕ ಮೂಲಗಳಿಂದ ಬಂದಿರುವುದಾಗಿದೆ.

ಬ್ರಿಟಿಷ್ ನ್ಯಾಯಾಲಯಗಳು ಮುಸ್ಲಿಂ ವೈಯುಕ್ತಿಕ ಕಾನೂನಿನಲ್ಲಿರುವ  ನ್ಯಾಯಶಾಸ್ತ್ರೀಯ ಅಭಿಪ್ರಾಯಗಳನ್ನು ಶಾಸಕಾಂಗವು ಜಾರಿಗೆ ತಂದ ಶಾಸನಬದ್ಧ ಕಾನೂನುಗಳಿಗೆ ಸಮಾನವಾಗಿ ಪರಿಗಣಿಸಿದವು ಮತ್ತು ಪೂರ್ವನಿದರ್ಶನದ ಬ್ರಿಟಿಷ್ ಸಿದ್ಧಾಂತವನ್ನು ಹೇರಿದ್ದರಿಂದ ಮುಸ್ಲಿಂ ವೈಯುಕ್ತಿಕ ಕಾನೂನಿನಲ್ಲಿ ಸಾಕಷ್ಟು ಕಠಿಣತೆಯನ್ನು ಜಾರಿಗೆ ತರಲಾಯಿತು. ವಿಭಿನ್ನ ಚಿಂತನಾ ಶಾಲೆಗಳ ಪ್ರತಿಪಾದನೆಗಳನ್ನು ಅವಲಂಬಿಸಿರುವ  ಮುಸ್ಲಿಂ ವೈಯುಕ್ತಿಕ ಕಾನೂನು ಸುಧಾರಣೆಗಳನ್ನು ಉಲೇಮಾಗಳು 1939 ರಲ್ಲಿಯೇ ಒಪ್ಪಿಕೊಳ್ಳಬಹುದಾದರೆ,  ಇದನ್ನು ಇಂದು ಏಕೆ ಒಪ್ಪಿಕೊಳ್ಳಬಾರದು ? ಮುಸ್ಲಿಂ ಉಲೇಮಾಗಳು ಖುದ್ದಾಗಿ ಮುಂದೆ ಬಂದು ತಾರತಮ್ಯ ಮತ್ತು ದಬ್ಬಾಳಿಕೆಯ ಸಮಸ್ಯೆಗಳನ್ನು ಗುರುತಿಸುವ ಮೂಲಕ ಮುಸ್ಲಿಂ ವೈಯುಕ್ತಿಕ ಕಾನೂನು ಸುಧಾರಣಾ ಪ್ರಕ್ರಿಯೆಯನ್ನು ಮುನ್ನಡೆಸಲು ಹಾಗೂ ಪುರೋಗಾಮಿ ನ್ಯಾಯಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಅಳವಡಿಸಿಕೊಳ್ಳಲು  ಮುಂದಾಗಬೇಕಿದೆ.

ಅನಾದಿ ಕಾಲದಿಂದಲೂ ಸಾವಿರಾರು ಧಾರ್ಮಿಕ ಮತ್ತು ಜನಾಂಗೀಯ ಸಮುದಾಯಗಳಿಗೆ ಆಧಾರವಾಗಿರುವ ವಿವಿಧ ಸಾಮಾಜಿಕ-ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳ ಸಮಗ್ರ ಜಾತ್ಯತೀತೀಕರಣವನ್ನು ಆಯೋಗವು ಪ್ರಸ್ತಾಪಿಸುತ್ತಿರುವುದರಿಂದ, ಮುಂದಿನ ಹಾದಿಯು ಅಡೆತಡೆಗಳಿಂದ ಮುಕ್ತವಾಗುವುದಿಲ್ಲ. ರಾಜಕೀಯ ತತ್ವಜ್ಞಾನಿ ಐರಿಸ್ ಯಂಗ್ ಅವರ ಮಾತಿನಲ್ಲಿ ಹೇಳುವುದಾದರೆ, ಸಾಮಾಜಿಕ ವ್ಯತ್ಯಾಸದ ಮೌಲ್ಯಗಳು ಹೆಚ್ಚು ಪರಸ್ಪರ ಸಂಬಂಧಿತವಾಗಿರುವುದರಿಂದ ಮತ್ತು ಸ್ವತಃ ಸಾಮಾಜಿಕ ಪ್ರಕ್ರಿಯೆಗಳ ಉತ್ಪನ್ನವಾಗಿರುವುದರಿಂದ,   ಸಂವಿಧಾನವು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ ಆಚರಣೆಗಳನ್ನು ಮಾತ್ರ ತೊಡೆದುಹಾಕುವ ಉದ್ದೇಶದೊಂದಿಗೆ ಉತ್ತಮ ಸಮತೋಲನವನ್ನು ಸಾಧಿಸುವುದು ಆಯೋಗದ ಕರ್ತವ್ಯವೂ, ಆದ್ಯತೆಯೂ ಆಗಿದೆ ಎಂದು ನಾವು ನಂಬಬಹುದು.

Donate Janashakthi Media

Leave a Reply

Your email address will not be published. Required fields are marked *