ಬೆಂಗಳೂರು : ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇದ್ದಾಗ ಘನತೆಯ ಬದುಕು ಸಾಧ್ಯವಾಗುತ್ತದೆ. ಆದರೆ ಭಾರತದಲ್ಲಿ ಘನತೆಯ ಬದುಕು ಇದೆಯೇ? ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶ್ನಿಸಿದರು.
ಸಮುದಾಯ ಕರ್ನಾಟಕ ರಾಜ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಲಾಂಛನ ಬಿಡುಗಡೆ ಹಾಗೂ “ಘನತೆಯ ಬದುಕು – ಸಾಂಸ್ಕೃತಿಕ ಮಧ್ಯಪ್ರವೇಶ” ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ನಿರಂತರವಾಗಿ ಮರ್ಯಾದೆಗೇಡು ಹತ್ಯೆ ನಡೆಯುತ್ತಿವೆ. ತಂದೆ – ತಾಯಿ ಮಕ್ಕಳನ್ನು, ಮಕ್ಕಳು ತಂದೆ, ತಾಯಿಯನ್ನು ಕೊಲ್ಲುವಂತಹ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಕಳವಳ ವ್ಯಕ್ತ ಪಡಿಸಿದರು.
ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರು ಜೈಲಿನಿಂದ ಬಿಡುಗಡೆ ಆಗುವ ಸಂದರ್ಭಗಳಲ್ಲಿ ಮಂತ್ರಿಗಳೇ ಖುದ್ದು ಹಾಜರಿರುತ್ತಾರೆ. ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಚಿತ್ರದುರ್ಗದ ಸ್ವಾಮೀಜಿ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಪಾದಪೂಜೆ ಮಾಡಿ ಸ್ವಾಗತಿಸಿದ ದೃಶ್ಯ ದುರಂತ ಘಟನೆಗೆ ಸಾಕ್ಷಿ ಎಂದರು.
ಸಮುದಾಯ ಸಂಘಟನೆಯ ಸಾಂಸ್ಕೃತಿಕ ಮಧ್ಯಪ್ರವೇಶದಿಂದಾಗಿ ಸಾಕಷ್ಟು ಬದಲಾವಣೆಗಳು ಸಾಧ್ಯವಾಗಿವೆ. ನಾಟಕ, ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕೆಲಸಗಳು ನಡೆದವು. ಬೆಲ್ಚಿ ನಾಟಕ ಜನರಲ್ಲಿ ಸಂಚಲನ ಮೂಡಿಸಿತ್ತು. ದಲಿತ ಸಂಘಟನೆ ಉದಯಕ್ಕೆ ಸಮುದಾಯ ಸಂಘಟನೆ ಸ್ಪೂರ್ತಿಯಾಗಿತ್ತು. ಅನೇಕ ಕ್ರಾಂತಿಕಾರಿ ಹಾಡುಗಳು ಹುಟ್ಟಿಕೊಂಡ ಪಕ್ವದ ಕಾಲವಾಗಿತ್ತು ಎಂದರು.
ಈಗ ಎಲ್ಲವೂ ಬದಲಾಗುತ್ತಿದೆ. ಬಲಪಂಥೀಯರು, ತಳಸಮುದಾಯವನ್ನು ದಾರಿ ತಪ್ಪಿಸುವ ವಿಘಟಿಸುವ ಕೆಲಸ ಮಾಡುತ್ತೇವೆ. ದಲಿತರನ್ನು ಸೆಳೆಯುವ ಹುನ್ನಾರವನ್ನು ಬಲಪಂಥೀಯರು ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದರ ವಿರುದ್ಧ ಚಳುವಳಿ ಬಲಗೊಳ್ಳಬೇಕು, ವಿಸ್ತರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿತ್ರನಟ, ನಿರ್ದೇಶಕ ಬಿ. ಸುರೇಶ್ ಮಾತನಾಡಿ, ಪ್ರತಿಭಟನೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿರುವ ಕಾಲದಲ್ಲಿ ನಾವು ಘನತೆಯ ಬದುಕಿನ ಬಗ್ಗೆ ಚರ್ಚಿಸುತ್ತಿದ್ದೇವೆ. ಘನತೆಯ ಬದುಕು ನೀಡಬೇಕಿದ್ದ ಸರ್ಕಾರಗಳು ನೆಮ್ಮದಿಯನ್ನು ಹಾಳು ಮಾಡುತ್ತಿವೆ ಎಂದರು.
ನಮ್ಮ ಮುಂದೆ ದೊಡ್ಡ ಸವಾಲು ಇದೆ. ಸಾಂಸ್ಕೃತಿಕ ಸಂಘಟನೆಯನ್ನು ವಿಸ್ತರಿಸುವ ಅನಿವಾರ್ಯತೆ, ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಸಾಂಸ್ಕೃತಿಕ ರಂಗದ ನಾಯಕರು ಯೋಜನೆ ರೂಪಿಸಬೇಕಿದೆ. ಮೆಡಿಕಲ್ ವಿಮೆ, ಬೆಳೆ ವಿಮೆ, ಅಪಘಾತ ವಿಮೆ ಜನರಿಗೆ ಶೆ.4 ರಷ್ಟು ಸರಿಯಾಗಿ ತಲುಪುತ್ತಿಲ್ಲ. ಜೀವನಕ್ಕೆ ಭದ್ರತೆ ಸಿಗಬಹದು ಎಂಬ ಕಾರಣಕ್ಕಾಗಿಯೇ ವಿಮೆ ಮಾಡಿಸಿಕೊಂಡ ನಮಗೆ ಅದು ಸಿಗದೆ ಇದ್ದಾಗ ಘನತೆಯ ಬದುಕು ಎಲ್ಲಿಂದ ಸಾಧ್ಯ ಎಂದರು.
10 ವರ್ಷದ ಹಿಂದೆ ನಾಟಕ, ಸಿನೆಮಾ ಸಾಕಷ್ಟು ಪ್ರಭಾವ, ಪರಿಣಾಮ ಬೀರುತ್ತಿತ್ತು. ಈಗ ಕಾಲ ಬದಲಾಗಿದೆ. ಜನಪರವಾಗಿ ಇರುವ ನಾಟಕ, ಸಿನೆಮಾ ಯಶಸ್ಸು ಕಂಡರೂ ಹಾಕಿದ ಬಂಡವಾಳ ವಾಪಸ್ಸು ಬರದ ಸ್ಥಿತಿಯಲ್ಲಿ ಸಾಂಸ್ಕೃತಿಕವಾಗಿ ನಾವು ಗೆಲ್ಲುವುದು ಹೇಗೆ ಎಂಬುದರ ಬಗ್ಗೆ ಚಿಂತನ ನಡೆಸಬೇಕಿದೆ. ಕ್ರೀಯಾಶೀಲ ಯೋಜನೆಗಳ ಮೂಲಕ ಯುವ ಸಮುದಾಯವನ್ನು ತಲುಪಬೇಕಿದೆ. ದೇಶದಲ್ಲಿ ಹಬ್ಬುತ್ತಿರುವ ಕೋಮುವಾದದ ರೋಗಕ್ಕೆ ಸಾಂಸ್ಕೃತಿಕ ಕ್ಷೇತ್ರವೇ ಮದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ರಾಮಕೃಷ್ಣ ವಹಿಸಿದ್ದರು. ಸಮುದಾಯ ಕರ್ನಾಟಕ ರಾಜ್ಯ ಖಜಾಂಚಿ ವಸಂತರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಲೋಕೇಶ್, ಶಶಿಕಾಂತ ಯಡಹಳ್ಳಿ, ಗೌರಿ ದತ್ತು, ಅಗ್ರಹಾರ ಕೃಷ್ಣಮೂರ್ತಿ, ಸಿಕೆ ಗುಂಡಣ್ಣ, ಕೆ.ಷರೀಫಾ, ಕೆ.ಎಸ್. ವಿಮಲಾ ಇದ್ದರು.
ಇದೇ ವೇಳೆ ರಾಜ್ಯ ಸಮ್ಮೇಳನದ ಲೋಗೋ, ಬಹುಭಾಷಾ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯಾಯ ಸಾಂಸ್ಕೃತಿಕ ರಂಗದ ನಾಯಕರು, ಕಾರ್ಯಕರ್ತರು ಹಾಜರಿದ್ದರು.