ಭ್ರಮಾಧೀನ ಸಮಾಜ – ಯುವಜನಾಂಗದ ಕನಸು

ಭ್ರಮಾಧೀನ ಯುವ ಮನಸ್ಸುಗಳನ್ನು ಅಸ್ಮಿತೆಗಳ  ಸಂಕೋಲೆಗಳಿಂದ ಬಿಡುಗಡೆ ಮಾಡಬೇಕಿದೆ
ಭಾರತೀಯ ಸಮಾಜ ಹಲವು ಆಯಾಮಗಳಲ್ಲಿ ಜಟಿಲ ಸವಾಲುಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲೇ ದೇಶದ ಯುವ ಸಮುದಾಯವನ್ನು ಭವಿಷ್ಯದೆಡೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನೂ ಸಹ ನಿಭಾಯಿಸಬೇಕಿದೆ. ಸಾಮಾನ್ಯವಾಗಿ ಮಿಲೆನಿಯಂ ಸಮಾಜ ಎಂದು ಕರೆಯಲಾಗುವ 20-30ರ ವಯೋಮಾನದ ಬೃಹತ್‌ ಜನಸಮೂಹ ಇಂದು ಪರ್ವಕಾಲವನ್ನು ಎದುರಿಸುತ್ತಿದೆ. ಹೊರಳು ಹಾದಿಯಲ್ಲಿರುವ ನವಭಾರತ ಸಾಮಾಜಿಕ-ಆರ್ಥಿಕ ಅಸಮಾನತೆಗಳ ನಡುವೆಯೇ, ಜಾತಿ-ಮತ-ಜನಾಂಗೀಯ ನೆಲೆಯಲ್ಲಿ ಸಾಂಸ್ಕೃತಿಕ ಸವಾಲುಗಳಿಗೂ ಮುಖಾಮುಖಿಯಾಗುತ್ತಿದೆ. ಇನ್ನು ಎರಡು ದಶಕಗಳಲ್ಲಿ ‘ವಿಕಸಿತ’ ಆಗಲಿರುವ ದೇಶದಲ್ಲಿ ವಿಕಾಸದ ಮೂಲ ಫಲಾನುಭವಿಗಳು ಯಾರು ಎಂದು ಯೋಚಿಸಿದಾಗ, ಅಲ್ಲಿ ಯುವ ಸಮೂಹವೇ ಪ್ರಧಾನವಾಗಿ ಕಾಣುತ್ತದೆ.

– ನಾ ದಿವಾಕರ

ಇಂದು ನಮ್ಮ ನಡುವೆ ಇರುವ ಯುವ ಜನಾಂಗ 2047ರ ವಿಕಸಿತ ಭಾರತದಲ್ಲಿ ವಯಸ್ಕ ಸಮಾಜವಾಗಿರುತ್ತದೆ. ದೇಶದ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಆಗಿನ ಯುವ ಸಮೂಹಕ್ಕೆ ಪೂರಕವಾದ ಬೌದ್ಧಿಕ ಭೂಮಿಕೆಗಳನ್ನು, ಸಾಂಸ್ಥಿಕ ಸಂರಚನೆಗಳನ್ನು, ಸಾಂಸ್ಕೃತಿಕ ಚಿಂತನಾ ವಾಹಿನಿಗಳನ್ನು ಕಟ್ಟಿಕೊಡುವುದು ವರ್ತಮಾನದ ಯುವ ಸಮೂಹದ ಆದ್ಯತೆಯಾಗಬೇಕಿದೆ. ಮೂಲ ಸಮಸ್ಯೆ ಇಲ್ಲಿದೆ. ಏಕೆಂದರೆ ಇಂದಿನ ಯುವ ಸಮೂಹದಲ್ಲಿ ಭವಿಷ್ಯವನ್ನು ಕುರಿತು ಯೋಚಿಸುವ ವ್ಯವಧಾನ ಇದೆಯೇ ಎಂಬ ಅನುಮಾನ ಬೌದ್ಧಿಕ-ಚಿಂತನಾ ವಲಯಗಳನ್ನು ಕಾಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಬಲಪಂಥೀಯ, ಬಹುಸಂಖ್ಯಾವಾದಿ ರಾಜಕಾರಣದಲ್ಲಿ ಚರಿತ್ರೆಯನ್ನು ವಿಕೃತಗೊಳಿಸಿ, ಸತ್ಯ-ಮಿಥ್ಯೆಯ ನಡುವೆ ಇರುವ ಗೆರೆಯನ್ನು ಅಳಿಸಿಹಾಕಿರುವುದರಿಂದ, ಯುವ ಸಮೂಹ ತನ್ನ ಸ್ಪಷ್ಟ ಗುರಿಯನ್ನು ಗುರುತಿಸಲು ಕಷ್ಟವಾಗುತ್ತಿದೆ.

ಹಿರಿಯ ಪೀಳಿಗೆಯ ಆತಂಕಗಳು

ಈ ಹಿನ್ನೆಲೆಯಲ್ಲೇ ಹಿರಿಯ ತಲೆಮಾರಿನ ಸಾಮಾಜಿಕ ಸಂಕಥನಗಳಲ್ಲಿ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಒಂದು ಆತಂಕ ವ್ಯಕ್ತವಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಸಮೂಹವನ್ನೂ ಒಳಗೊಂಡಂತೆ, ಸಾಮಾಜಿಕವಾಗಿ ಕ್ರಿಯಾಶೀಲವಾಗಿರುವ, ರಾಜಕೀಯವಾಗಿ ಪ್ರಜ್ಞಾವಂತರಾಗಿರುವ ಮತ್ತು ಸೈದ್ಧಾಂತಿಕವಾಗಿ ಶ್ರದ್ಧಾಳುಗಳಾಗಿ ಕಾಣುವ ಬೃಹತ್‌ ಯುವ ಜನಾಂಗ ಓದು ಮತ್ತು ಅಧ್ಯಯನಕ್ಕೆ ವಿಮುಖವಾಗುತ್ತಿದೆ ಎನ್ನುವುದೇ ಈ ಆತಂಕಕ್ಕೆ ಕಾರಣ. ಒಂದು ಹಂತದವರೆಗೆ ಈ ಆತಂಕವನ್ನು ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಚರಿತ್ರೆಯನ್ನು ಓದದೆ, ವರ್ತಮಾನದ ಬೆಳವಣಿಗೆಗಳನ್ನು ಪರಾಮರ್ಶಿಸದೆ ಅಧ್ಯಯನ ಶೀಲತೆಯನ್ನೇ ಕಳೆದುಕೊಂಡಿರುವ ಒಂದು ಯುವ ಪಡೆಯನ್ನು ಬಲಪಂಥೀಯ ರಾಜಕೀಯ ತಯಾರು ಮಾಡಿದೆ.

ಇದನ್ನೂ ಓದಿ: ಮಂಗಳೂರು ಕರಾವಳಿಯಲ್ಲಿ ಎಲ್‌ಪಿಜಿ ಕೊರತೆ: ಮೀನುಗಾರಿಕೆ ದೋಣಿಗಳ ಕಾರ್ಯಾಚರಣೆ ಭಾಗಶಃ ಸ್ಥಗಿತ

ವಿದ್ಯಾರ್ಥಿ-ಯುವ ಸಮೂಹವನ್ನು ಒಂದೇ ಆವರಣದಲ್ಲಿಟ್ಟು ನೋಡಿದಾಗ, ಅಧ್ಯಯನ ಶೀಲತೆಯ ಕೊರತೆ ಢಾಳಾಗಿ ಕಾಣುತ್ತದೆ. ಇದನ್ನು ಯುವ ಜನಾಂಗದ ವಿರುದ್ಧ ಆರೋಪದ ನೆಲೆಯಲ್ಲಿ ನೋಡುವುದಕ್ಕಿಂತಲೂ, ಹಿರಿಯ ತಲೆಮಾರಿನ ಸಾಹಿತಿ ಚಿಂತಕರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಯುವ ಮನಸ್ಸುಗಳನ್ನು ಅಧ್ಯಯನದ ಕಡೆಗೆ ಕರೆದೊಯ್ಯುವ ಪ್ರಯತ್ನಗಳನ್ನು ಮಾಡಿದ್ದಾರೆಯೇ ಎಂದು ಯೋಚಿಸುವುದು ಅವಶ್ಯ ಎನಿಸುತ್ತದೆ. ಈ ಸ್ವ-ವಿಮರ್ಶಾತ್ಮಕ ನೋಟ ಇಲ್ಲವಾದರೆ, 1960-70ರ ದಶಕಗಳಲ್ಲಿ ಕಂಡಂತಹ ಸಮಾಜ ಸುಧಾರಕ, ಕ್ರಾಂತಿಕಾರಿ, ಪರಿವರ್ತಕ ಹೋರಾಟಗಳನ್ನೇ ವೈಭವೀಕರಿಸುತ್ತಾ, ಸಾಫಲ್ಯ-ಸಾಧನೆಗಳ ಆತ್ಮರತಿಯಲ್ಲಿ ಮುಳುಗಿ, ನಮ್ಮ ಜವಾಬ್ದಾರಿಯನ್ನು ಮರೆತುಹೋದಂತಾಗುತ್ತದೆ.

ಈ ಹೋರಾಟದ ಕಥನಗಳು ಮತ್ತು ಆ ಕಾಲದ ಯಶಸ್ಸಿನ ಸಂಕಥನಗಳು ಯುವ ಸಮೂಹದಲ್ಲಿ ರೋಚಕತೆ, ಉತ್ಸಾಹ ಹುಟ್ಟಿಸುವುದು ಸಹಜ. ಕೆಲವರಲ್ಲಾದರೂ ಆ ದಿನಗಳ ಚಿಂತನಾ ಮಾದರಿಗಳನ್ನು ಅನುಸರಿಸುವ/ಅನುಕರಿಸುವ ಆಕಾಂಕ್ಷೆ ಗರಿಗೆದರುವುದೂ ಸಹಜ. ಆದರೆ ಸಮಾಜ ಪರಿವರ್ತನೆ, ಸುಧಾರಕವಾಗಲೀ ಕ್ರಾಂತಿಕಾರಿಯಾಗಲೀ, ಸಿದ್ಧ ಮಾದರಿಗಳ ಮೂಲಕ ಸಾಧ್ಯವಾಗುವುದಿಲ್ಲ. ವರ್ತಮಾನದ ಯುವ ತಲೆಮಾರಿಗೆ ನಿಲುಕುವಂತಹ, ತಂತ್ರಜ್ಞಾನ ಆಧಾರಿತ ಸಂಕಥನ ಮಾದರಿಗಳು ಬೇಕಿವೆ. ಚರಿತ್ರೆಯನ್ನು, ಗತಕಾಲದ ಜನಾಂದೋಲನಗಳನ್ನು ಯಥಾವತ್ತಾಗಿ ತೆರೆದಿಟ್ಟರೂ ಸಹ ಇಂದಿನ ಯುವ ತಲೆಮಾರಿಗೆ ಅದರ ಒಳಹೊರಗುಗಳು ಅರ್ಥವಾಗುವುದು ಕಷ್ಟವಾಗುತ್ತದೆ.

ವರ್ತಮಾನದ ವಾಸ್ತವಗಳ ನಡುವೆ

ಏಕೆಂದರೆ ಅಂದಿನ ಬಡತನ, ಹಸಿವೆ, ದೌರ್ಜನ್ಯ, ತಾರತಮ್ಯ ಮತ್ತು ಸಾಮಾಜಿಕ ಪರಿಸರಗಳು ಅದೇ ರೂಪದಲ್ಲಿ ಈಗಿನ ತಲೆಮಾರಿಗೆ ಕಾಣುತ್ತಿಲ್ಲ. ಎಲ್ಲವೂ ರೂಪಾಂತರಗೊಂಡಿವೆ. ಅಗ್ರಹಾರ ಸಂಸ್ಕೃತಿಯಿಂದ ಊಳಿಗಮಾನ್ಯ ಸಂಸ್ಕೃತಿಯವರೆಗೂ, ಶೋಷಣೆಯ ಮಾದರಿಗಳು, ಸ್ವರೂಪಗಳು ಬದಲಾಗಿವೆ. ವಿಶ್ವವಿದ್ಯಾಲಯಗಳಲ್ಲಿ ಇಂದಿಗೂ ಜಾತಿ ತಾರತಮ್ಯ, ಲಿಂಗ ತಾರತಮ್ಯ  ತಾಂಡವಾಡುತ್ತಿದ್ದರೂ ಇದಕ್ಕೆ ಬಲಿಯಾಗುತ್ತಿರುವ ವಿದ್ಯಾರ್ಥಿ-ಯುವ ಸಮುದಾಯ ಬಾಹ್ಯ ಸಮಾಜದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ. ಈ ಸಾಮಾಜಿಕ ಅಸ್ತಿತ್ವ ಮತ್ತು ಸಾಂಸ್ಕೃತಿಕ ಅಸ್ಮಿತೆಯೇ ಯುವ ಸಮೂಹವನ್ನು ಭ್ರಮಾಧೀನತೆಗೆ ಒಳಪಡಿಸುತ್ತಿದೆ. ಇದನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ.

ತಾವು ಬದುಕುತ್ತಿರುವ ಸಮಾಜ ಮತ್ತು ಸಾಂಸ್ಕೃತಿಕ ಜಗತ್ತು ಸುಂದರವಾಗಿರುವುದನ್ನು ಯುವ ತಲೆಮಾರು ಕಾಣುತ್ತಿದೆ. ಇದು ಗ್ರಾಮೀಣ ಪ್ರದೇಶಗಳಲ್ಲೂ ಸಹ ವಾಸ್ತವ ಎನ್ನುವುದು ಗಮನಾರ್ಹ. ಏಕೆಂದರೆ ನವ ಉದಾರವಾದಿ ಆರ್ಥಿಕತೆಯ ಅಭಿವೃದ್ಧಿ ಮಾದರಿಯು ಸರ್ವಾನುಕೂಲದ, ಸಾರ್ವಕಾಲಿಕ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಸಣ್ಣ ಹಳ್ಳಿಯ ಯುವ ಸಮೂಹವೂ ಸಹ ತಮ್ಮೂರಿನ ಪಕ್ಕದಲ್ಲೇ ಅಥವಾ ಸೂರುಗಳ ಮೇಲೆ ಹಾದುಹೋಗುವ ಹೆದ್ದಾರಿ, ಮೇಲ್ಸೇತುವೆಗಳಿಂದ ಹಾಗೂ ಸುತ್ತಲೂ ನಿರ್ಮಾಣವಾಗುವ ಅತ್ಯಾಧುನಿಕ ನಗರಗಳಿಂದ ಆಕರ್ಷಿತವಾಗುತ್ತದೆ. ಈ ಅಭಿವೃದ್ಧಿಯ ದಾರಿಯಲ್ಲಿ ತಮ್ಮ ಹಿರೀಕರೇ ಕಾಪಿಟ್ಟ ನೈಸರ್ಗಿಕ ಸಂಪತ್ತು, ಸಂಪನ್ಮೂಲಗಳು, ಕೃಷಿ ಭೂಮಿ ಮತ್ತು ಅರಣ್ಯ ಸಂಪನ್ಮೂಲಗಳು ನಾಶವಾಗಿರುವುದು ಇವರಿಗೆ ಕಾಣುವುದೇ ಇಲ್ಲ, ಒಂದು ವೇಳೆ ಕಂಡರೂ ಅದು ʼ ಅಭಿವೃದ್ಧಿಯ ಅನಿವಾರ್ಯತೆ ʼ ಎನಿಸಿಬಿಡುತ್ತದೆ. ಅಂತಹ ವಾತಾವರಣವನ್ನು ಮಾಧ್ಯಮಗಳೇ ಸೃಷ್ಟಿಸುತ್ತವೆ.

ಚರಿತ್ರೆ-ಪುರಾಣ ಮತ್ತು ಮಿಥ್ಯೆಗಳು

ಈ ರೀತಿಯ ಆಲೋಚನಾ ಕ್ರಮವನ್ನು ಯುವ ತಲೆಮಾರಿನ ನಡುವೆ ಬಿತ್ತುವ ಬೌದ್ಧಿಕ ಪ್ರಕ್ರಿಯೆಯನ್ನು ಕಳೆದ ಮೂರು ದಶಕಗಳಿಂದಲೂ ಗುರುತಿಸಬಹುದು. ಸಂಘಪರಿವಾರವು ಧಾರ್ಮಿಕ ನೆಲೆಯಲ್ಲಿ ಹಾಗೂ ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ಭಾರತೀಯ ಸಮಾಜವನ್ನು ನೋಡುವ ದೃಷ್ಟಿಯನ್ನೇ ಬದಲಿಸಿರುವುದರಿಂದ, ಚಾರಿತ್ರಿಕ ಕ್ರೌರ್ಯ-ಹಿಂಸೆ ಮತ್ತು ದೌರ್ಜನ್ಯಗಳನ್ನು ಭಾವನಾತ್ಮಕವಾಗಿ ಸಮರ್ಥಿಸಿಕೊಳ್ಳುವ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದಕ್ಕೆ ಸಮಾನಾಂತರವಾಗಿ ಬಿಜೆಪಿ ವರ್ತಮಾನದ ರಾಜಕೀಯ ಚಟುವಟಿಕೆಗಳನ್ನು ಇದೇ ಭಾವನಾತ್ಮಕ ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಮತ್ತು ಪ್ರಚಾರ ಮಾಡುವ ಕಾರ್ಯಪಡೆಗಳನ್ನೂ ಸೃಷ್ಟಿಸಿದೆ. ಈ ಎರಡೂ ಪ್ರಕ್ರಿಯೆಗಳನ್ನು ಒಂದು ಆವರಣದ ಒಳಗಿಟ್ಟು (Within One Bracket) ನೋಡಿದಾಗ ಅಲ್ಲಿ ನಮಗೆ ವಾಟ್ಸಾಪ್‌ ವಿಶ್ವವಿದ್ಯಾಲಯ ಕಾಣುತ್ತದೆ.

ಕಲ್ಪಿತ ಪೌರಾಣಿಕ ಕಥನಗಳನ್ನು ಚರಿತ್ರೆಯಾಗಿ  ನೋಡುವ, ಚಾರಿತ್ರಿಕ ವ್ಯಕ್ತಿಗಳನ್ನು ಸಮಕಾಲೀನವಾಗಿ ನೋಡುವ, ದಾಖಲಿತ ಚರಿತ್ರೆಯ ಕಥನಗಳಿಗೆ ಪ್ರತಿ-ಕಥನಗಳನ್ನು ರೂಪಿಸುವ ಹಾಗೂ ವರ್ತಮಾನದ ರಾಗದ್ವೇಷದ ಸಾಮಾಜಿಕ ಚಿಂತನಾಧಾರೆಯನ್ನು ಚರಿತ್ರೆಯೊಡನೆ ಸಮ್ಮಿಳಿತಗೊಳಿಸಿ ವಿಕೃತಗೊಳಿಸುವ ಪ್ರಯತ್ನಗಳು ಈ ವಾಟ್ಸಾಪ್‌ ವಿಶ್ವವಿದ್ಯಾಲಯದ ಪಠ್ಯಕ್ರಮವೇ ಆಗಿದೆ. ಇದನ್ನು ಸಾಮಾಜಿಕ ಪರಿಮಿಡ್ಡಿನ ತಳಪಾಯದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಕ್ಷಣಮಾತ್ರದಲ್ಲಿ ತಲುಪಿಸುವ ಕೆಲಸವನ್ನು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ವ್ಯವಸ್ಥಿತವಾಗಿ ಮಾಡುತ್ತವೆ. ಡಿಜಿಟಲ್‌ ವಿದ್ಯುನ್ಮಾನ ಸಂವಹನ ಸೇತುವೆಗಳೂ ಸಹ, ಬಹುತೇಕ ಸುದ್ದಿವಾಹಿನಿಗಳೂ ಸೇರಿದಂತೆ, ಇದೇ ಪಠ್ಯಕ್ರಮವನ್ನು ಸಮಾಜಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತಿವೆ.

ಈ ಡಿಜಿಟಲ್‌ ಆಕ್ರಮಣ ಮತ್ತು ವ್ಯವಸ್ಥಿತ ಬೌದ್ಧಿಕ ಹಲ್ಲೆಗೆ ಒಳಗಾಗುವ ಯುವ ಸಮೂಹವನ್ನು ಭ್ರಮಾಧೀನಗೊಳಿಸಲು ನೆರವಾಗುವುದು ಮಾರುಕಟ್ಟೆ ಆರ್ಥಿಕತೆ ಒದಗಿಸುವ ವಿದ್ಯುನ್ಮಾನ ಪರಿಕರಗಳು ಮತ್ತು ನವೀನ ತಂತ್ರಜ್ಞಾನ ಸಾಧನಗಳು. ವಿದ್ಯಾರ್ಥಿಗಳ ಪಠ್ಯಕ್ರಮದಿಂದ ಸಂಶೋಧಕರ ಆಕರ ಗ್ರಂಥಗಳವರೆಗೂ ವಿಸ್ತರಿಸುವ ಈ ಸಾಧನಗಳು ಶಿಕ್ಷಣಾರ್ಥಿಗಳಲ್ಲಿ ಗ್ರಾಂಥಿಕ ಓದನ್ನು ಅಪ್ರಸ್ತುತಗೊಳಿಸುತ್ತವೆ. ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಳ್ಳುವ ಈ ಮನಸ್ಥಿತಿಯೇ, ಯುವ ಸಮೂಹವನ್ನು ಸಾಮಾಜಿಕ ಚಟುವಟಿಕೆಗಳಲ್ಲೂ ನಿರ್ದೇಶಿಸುತ್ತದೆ. ಇಡೀ ಜಗತ್ತಿನ ವಿದ್ಯಮಾನಗಳನ್ನು, ಸಮಗ್ರ ಮಾನವೇತಿಹಾಸವನ್ನು ಅಂಗೈಯ್ಯೊಳಗೆ ಇಟ್ಟುಕೊಳ್ಳುವ ಯುವ ಸಮೂಹಕ್ಕೆ, ಗ್ರಂಥಾಲಯ ಎನ್ನುವುದು ಬಹುದೂರ ಅಥವಾ ಅನಗತ್ಯ ಎನಿಸಿಬಿಡುತ್ತದೆ. ಒಂದೆಡೆ ಕುಳಿತು, ಏಕಾಗ್ರತೆಯಿಂದ ಗ್ರಾಂಥಿಕ ಓದಿನಲ್ಲಿ ತೊಡಗುವ ಕ್ಷಮತೆಯನ್ನೇ ಕೊಲ್ಲಲಾಗುತ್ತದೆ.

ನೂರಾರು ಪುಟಗಳನ್ನು ತಿರುವುದಕ್ಕಿಂತಲೂ ಸಣ್ಣ ಪರದೆಯಲ್ಲಿ ಸ್ಕ್ರೋಲ್‌ ಮಾಡುವುದು ಸುಲಭಗಮ್ಯ ಎನಿಸಿದಾಗ, ಹೆಚ್ಚಿನ ಪರಿಶ್ರಮವಿಲ್ಲದೆಯೇ ಜ್ಞಾನಾಭಿವೃದ್ಧಿ ಸಾಧ್ಯ ಎಂಬ ಭ್ರಮೆ ಯುವ ಸಮೂಹವನ್ನು ಆವರಿಸುತ್ತದೆ. ಆದರೆ ಇಲ್ಲಿ ಲಭ್ಯವಾಗುವುದು ಜ್ಞಾನ ಅಲ್ಲ , ಸಾಮಾನ್ಯ ಅರಿವೂ ಅಲ್ಲ ಬದಲಾಗಿ ಜ್ಞಾನ ವೃದ್ಧಿಸಿಕೊಳ್ಳಲು ಇರುವ ಆಕರಗಳ ಪರಿಚಯ ಮಾತ್ರ ಎಂಬ ಸತ್ಯವನ್ನು ಯುವ ಸಮೂಹ ಮನಗಾಣುವುದಿಲ್ಲ. ಹಿರಿಯ ಪೀಳಿಗೆಯ ಚಿಂತನಾವಾಹಿನಿಗಳು ಮತ್ತು ವಿಚಾರ ಧಾರೆಗಳು ವಿಫಲರಾಗಿರುವುದು ಇಲ್ಲಿಯೇ ಎಂದು ಪ್ರಾಮಾಣಿಕವಾಗಿ ಒಪ್ಪಲೇಬೇಕಿದೆ. ಅಂದರೆ ಬುದ್ಧನಿಂದ ಕುವೆಂಪುವರೆಗೆ, ಬಸವನಿಂದ ಅಂಬೇಡ್ಕರ್‌ವರೆಗೆ ನಮ್ಮ ಬಹುತ್ವ ಸಂಸ್ಕೃತಿಯನ್ನು ನಿರ್ದೇಶಿಸಿರುವ ತಾತ್ವಿಕ ಚಿಂತನೆಗಳನ್ನು ಈ ಪೀಳಿಗೆಯ ಎಳೆಯ ಮನಸ್ಸುಗಳಲ್ಲಿ ನಾಟುವ ರೀತಿಯಲ್ಲಿ ಹೇಳಲು ನಮಗೆ ಸಾಧ್ಯವಾಗಿದೆಯೇ ? ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ.

ಬೌದ್ಧಿಕ ವಾಹಿನಿಗಳ ಜಡತ್ವ

ವಾಟ್ಸಾಪ್‌ ವಿಶ್ವವಿದ್ಯಾಲಯ ಮತ್ತು ಬಲಪಂಥೀಯ ಚಿಂತನಾಧಾರೆಗಳು ಸೃಷ್ಟಿಸಿರುವ ವರ್ತಮಾನದ ಮಿಥ್ಯೆಗಳನ್ನು ಒಡೆದು ಸತ್ಯಾಂಶವನ್ನು ಮರಳಿ ಕಟ್ಟುವ ಒಂದು ಬೌದ್ಧಿಕ ಪ್ರಕ್ರಿಯೆಗೆ ಹಿರಿಯ ಪೀಳಿಗೆಯ ಪುರೋಗಾಮಿ, ಎಡಪಂಥೀಯ, ಅಂಬೇಡ್ಕರ್‌ವಾದಿ ಚಿಂತಕರು ಚಾಲನೆ ನೀಡಬೇಕಿದೆ. ಈ ಪುರಾಣದ ಮಿಥ್ಯಾ ಕಥನಗಳಿಗೆ ಪ್ರತಿ ಕಥನಗಳನ್ನು ರೂಪಿಸುವಾಗ ಎಚ್ಚರಿಕೆ ವಹಿಸುವುದೂ ಅವಶ್ಯ. ಪುರಾಣ ಮತ್ತು ಪೌರಾಣಿಕ ಮಿಥ್ಯೆಗಳಿಗೆ ಚಾರಿತ್ರಿಕ ರೂಪ ನೀಡುವ ಸಂಘಪರಿವಾರದ ಪ್ರಯತ್ನಗಳನ್ನು ನಿರಾಕರಿಸಬೇಕೇ ಹೊರತು, ಅದೇ ಕಥನಗಳ ಅವೈದಿಕ-ಅಬ್ರಾಹ್ಮಣ ವ್ಯಕ್ತಿಗಳಿಗೂ ಚಾರಿತ್ರಿಕ ರೂಪ ನೀಡಕೂಡದು. ಹಾಗೆ ಮಾಡಿದಾಗ ಪುರಾಣದ ಕಾಲ್ಪನಿಕ ವ್ಯಕ್ತಿಗಳೆಲ್ಲರೂ ಚಾರಿತ್ರಿಕ ಅಸ್ಮಿತೆ ಪಡೆದುಕೊಳ್ಳುತ್ತಾರೆ. ಇದು ಯುವ ಸಮೂಹದಲ್ಲಿ ವೈಚಾರಿಕತೆಯನ್ನು, ಸೃಜನಶೀಲತೆಯನ್ನು ಕೊಲ್ಲುವ ಸಾತ್ವಿಕ ಪ್ರಕ್ರಿಯೆಯಾಗುತ್ತದೆ.

ಬಹುಶಃ ವರ್ತಮಾನದ ಯುವ ಪೀಳಿಗೆ ಓದಿಗೆ ವಿಮುಖವಾಗಿದೆ ಎಂದು ಆರೋಪಿಸುವ ಮುನ್ನ, ನಾವು ಪ್ರತಿ-ಕಥನಗಳನ್ನು ಸೃಷ್ಟಿಸಲು ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ವಿವೇಕಯುತ ಎನಿಸುತ್ತದೆ. ಸರ್ಕಾರಿ ಅನುದಾನಿತ ಸಂಸ್ಥೆಗಳಾದ ಅಕಾಡೆಮಿಗಳು, ಪ್ರಾಧಿಕಾರಗಳು ಭಾರತದ ಬಹುತ್ವ ಸಂಸ್ಕೃತಿಯನ್ನು ಪರಿಚಯಿಸುವ ನೂರಾರು ಗ್ರಾಂಥಿಕ ಆಕರಗಳನ್ನು ಮರುಪ್ರಕಟಿಸಿ ಜನರಿಗೆ ತಲುಪಿಸುತ್ತಿವೆ. ಆದರೆ ಈ ಸಾಂಸ್ಕೃತಿಕ ಚಿಂತನೆಗಳನ್ನು ಸಮಕಾಲೀನ ನೆಲೆಯಲ್ಲಿ, ವರ್ತಮಾನದ ಪರಿಸ್ಥಿತಿಗಳಲ್ಲಿ ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ನಿರ್ವಚಿಸುವ ಯಾವುದೇ ಸಾಹಿತ್ಯಿಕ ಪ್ರಯತ್ನಗಳನ್ನು ಮಾಡುತ್ತಿಲ್ಲ. ಕುವೆಂಪು ಅವರ ʼವಿಚಾರ ಕ್ರಾಂತಿಗೆ ಆಹ್ವಾನ ʼ ಉಪನ್ಯಾಸವನ್ನು ವಿದ್ವತ್‌ ಪೂರ್ಣ ಭಾಷಣಗಳ ಮುಖಾಂತರ ಯುವ ಸಮೂಹದ ಮುಂದಿರಿಸುವುದು ಸ್ವಾಗತಾರ್ಹವೇನೋ ಹೌದು.

ಆದರೆ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವಗಳನ್ನು ಸಾಮಾಜಿಕ ಚಿಂತನೆಯ ನೆಲೆಯಲ್ಲಿ ನೋಡಿದಾಗ, ವಿಚಾರ ಕ್ರಾಂತಿ ಯಾವ ಸಮಾಜಗಳ ನಡುವೆ ನಡೆಯಬೇಕು ಎಂಬ ಪ್ರಶ್ನೆ ಮುನ್ನಲೆಗೆ ಬರುತ್ತದೆ. ಕುವೆಂಪು ಅವರು ಉದ್ದೇಶಿಸಿದ ಯುವ ಪೀಳಿಗೆಯಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶವಿತ್ತು, ಹತಾಶೆ ಮಡುಗಟ್ಟಿತ್ತು, ಬದಲಾವಣೆಯ ತುಡಿತ ಗಾಢವಾಗಿತ್ತು, ಸಾಮಾಜಿಕ ಅನ್ಯಾಯಗಳಿಗೆ ಮತ್ತು ಸಾಂಸ್ಕೃತಿಕ ದೌರ್ಜನ್ಯಗಳಿಗೆ ಮುಖಾಮುಖಿಯಾಗುತ್ತಿರುವ ತಳಮಟ್ಟದ ಸಮಾಜ ಇತ್ತು. ಈ ಸಮಾಜದ ನಡುವಿನಿಂದ ಹೊರಹೊಮ್ಮುವ ಯುವ ಶಕ್ತಿಗೆ ವೈಚಾರಿಕತೆ, ವೈಜ್ಞಾನಿಕ ಪ್ರಜ್ಞೆ ಅತ್ಯವಶ್ಯವಾಗಿತ್ತು. ಆದರೆ ಇಂದು ಈ ಯಾವುದೇ ಲಕ್ಷಣಗಳನ್ನು ವಿಶಾಲ ಸಮಾಜದಲ್ಲಿ ಕಾಣಲಾಗುವುದಿಲ್ಲ. ಈಗಿನ ಪೀಳಿಗೆಗೆ ವಿಚಾರ ಕ್ರಾಂತಿ ಎಂದರೆ ರಾಜಕೀಯ ಅರ್ಥವೂ ಪಡೆದುಕೊಳ್ಳುತ್ತದೆ. 1970ರ ದಶಕದ ಪ್ರಜಾಪ್ರಭುತ್ವ 2026ರ ಭಾರತದಲ್ಲಿಲ್ಲ. ಹಾಗಾಗಿ ‘ನಿರಂಕುಶಮತಿಗಳಾಗಿ’ ಎಂಬ ಕರೆಯನ್ನು ಪುನರ್‌ ವಿಮರ್ಶಿಸಿ ಯುವಸಮೂಹದ ಮುಂದೆ ಮಂಡಿಸಬೇಕಿದೆ.

ಬಲಪಂಥೀಯ ದಾಳಿಗಳ ನಡುವೆ

ಬಲಪಂಥೀಯ ವಿಚಾರಧಾರೆಗಳು ಮೂಲತಃ ವೈಚಾರಿಕ ಪ್ರಜ್ಞೆಯನ್ನೇ ನಿಷ್ಕ್ರಿಯಗೊಳಿಸಿವೆ. ಹಿಂದೂ ರಾಷ್ಟ್ರ ಅಥವಾ ಸನಾತನ ಧರ್ಮದ ಆವರಣದಲ್ಲಿ ಯುವ ಸಮೂಹಗಳು ತಮ್ಮ ಮೂಲ ಸಾಂಸ್ಕೃತಿಕ ಬೇರುಗಳನ್ನೇ ಮರೆತಿರುವುದು ಢಾಳಾಗಿ ಕಾಣುತ್ತಿದೆ. ಹಾಗಾಗಿಯೇ ಜೈ ಭೀಮ್‌ ಸಾಮಾಜಿಕ ಧ್ವನಿಯಾದರೆ, ಜೈ ಶ್ರೀರಾಂ ಸಾಂಸ್ಕೃತಿಕ ಧ್ವನಿಯಾಗುತ್ತದೆ. ಹಿಂದುತ್ವ ರಾಜಕಾರಣಕ್ಕೆ ಕಾಲಾಳುಗಳಾಗಿ ಪರಿವರ್ತನೆಯಾಗಿರುವ ತಳಸಮುದಾಯಗಳ ಬಹತ್‌ ಸಂಖ್ಯೆಯ ಯುವ ಸಮೂಹ, ಸಾಂವಿಧಾನಿಕ ಚೌಕಟ್ಟಿನಲ್ಲಿ ಮಾತ್ರ ಅಂಬೇಡ್ಕರ್‌ ಮತ್ತು ಬುದ್ಧನನ್ನು ಆರಾಧಿಸುತ್ತದೆ. ಸಾಂಸ್ಕೃತಿಕ ಚೌಕಟ್ಟುಗಳಲ್ಲಿ ಮನುಸ್ಮೃತಿಯನ್ನು ಮೈಗೂಡಿಸಿಕೊಳ್ಳುತ್ತದೆ. ಹಾಗಾಗಿ ಪಿತೃಪ್ರಧಾನತೆ, ಲಿಂಗಭೇದ, ಊಳಿಗಮಾನ್ಯ ಶೋಷಣೆ ಇವೆಲ್ಲವೂ ಸಮ್ಮತಿ ಪಡೆದುಕೊಳ್ಳುತ್ತವೆ. ಈ ವಿರೋಧಾಭಾಸಕ್ಕೆ ಕಾರಣಗಳು ಹಲವು ಆದರೆ ಇದನ್ನು ದಾಟಿ ಹೋಗಲು ಅಗತ್ಯವಾದ ಬೌದ್ಧಿಕ ಪರಿಕರಗಳನ್ನು ಸೃಷ್ಟಿಸುವುದರಲ್ಲಿ ಎಡಪಕ್ಷಗಳು, ದಲಿತ ಸಂಘಟನೆಗಳು ಯಶಸ್ವಿಯಾಗಿವೆಯೇ ?

ಕಳೆದ ಐದಾರು ದಶಕಗಳಲ್ಲಿ ಸಾವಿರಾರು ವಿಚಾರ ಸಂಕಿರಣಗಳು-ಗೋಷ್ಠಿಗಳು-ಸಮಾವೇಶಗಳು ನಡೆದಿವೆ. ಈ ಸಭಾಂಗಣಗಳ, ಚರ್ಚಾ ಕೂಟಗಳ ಒಳಗಿನಿಂದಲೇ ಹುಟ್ಟಿಕೊಂಡ ಹತ್ತಾರು ಚಳುವಳಿಗಳು ಬೌದ್ಧಿಕ ನೆಲೆಯಲ್ಲಿ ನೂರಾರು ಚಿಂತಕರನ್ನು, ಸಾಹಿತಿಗಳನ್ನು, ರಂಗಕರ್ಮಿಗಳನ್ನು ಹುಟ್ಟುಹಾಕಿದೆ. ವರ್ತಮಾನದ ಕಿರಿಯ ಪೀಳಿಗೆಯಲ್ಲೂ ಇದೇ ರೀತಿ ಸಭಾಂಗಣಗಳ ಒಳಗಿನಿಂದ ಚಿಂತನಾ ವಾಹಕರು ಸೃಷ್ಟಿಯಾಗುತ್ತಾರೆ ಎಂಬ ಭ್ರಮೆಯಲ್ಲಿ ಹಿರಿಯ ಪೀಳಿಗೆ ಇದೆ. ಹಾಗಾಗಿಯೇ ಸಿದ್ಧಮಾದರಿಗೆ ಅಂಟಿಕೊಂಡಿದ್ದೇವೆ. ಮತ್ತೊಂದು ಗಹನವಾದ ವಿಚಾರ ಎಂದರೆ, ನೂರಾರು ಚಿಂತಕರಿಂದ ಮಂಡಿಸಲಾದ ಈ ಉಪನ್ಯಾಸ-ಭಾಷಣಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ, ಆಯಾ ಕಾರ್ಯಕ್ರಮಗಳು ಮುಗಿದ ಕೂಡಲೇ ಅಲ್ಲಿರುವ ಯುವ ಸಮೂಹಕ್ಕೆ ಅದನ್ನು ಹಂಚಿದಲ್ಲಿ, ಅವರಲ್ಲಿ ಓದುವ ಹವ್ಯಾಸ ಬೆಳೆಯುತ್ತದೆ ಅಲ್ಲವೇ ?  ಇದು ಹಿಂದೆಯೂ ನಡೆದಿಲ್ಲ ಈಗಲೂ ನಡೆಯುತ್ತಿಲ್ಲ.

ಮತ್ತೊಂದು ಆಯಾಮದಲ್ಲಿ ಯೋಚಿಸಿದಾಗ ಸೆಮಿನಾರ್‌ ಹಾಲ್‌ಗಳಿಂದ ಹೊರಬಂದು, ಯುವ ಸಮೂಹವನ್ನು ಸಣ್ಣ ಸಣ್ಣ ಗುಂಪುಗಳಲ್ಲಿ ಒಂದೆಡೆ ಕೂರಿಸಿ, ಅವರೊಡನೆ ಸಂವಾದಿಸುವ ಮಾದರಿಯ ಬಗ್ಗೆ ನಾವು ಯೋಚಿಸಿಯೇ ಇಲ್ಲ. ಇಲ್ಲಿ ಯುವ ತಲೆಮಾರಿನ ತಲೆಯಲ್ಲಿರುವ ನೂರಾರು ಪ್ರಶ್ನೆ, ಜಿಜ್ಞಾಸೆಗಳು ತಂತಾನೇ ತೆರೆದುಕೊಳ್ಳುತ್ತವೆ. ಅವುಗಳಿಗೆ ಉತ್ತರ ಶೋಧಿಸುವ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಬೃಹತ್‌ ಸಮಾವೇಶ, ದೊಡ್ಡ ವೇದಿಕೆ, ದಿನಗಟ್ಟಲೆ ಭಾಷಣ ಮತ್ತು ಅದಕ್ಕೆ ತಗಲುವ ವೆಚ್ಚ ಇವೆಲ್ಲವೂ ಅನುತ್ಪಾದಕೀಯ ಬೌದ್ಧಿಕ ಚಟುವಟಿಕೆಗಳಾಗಿರುವುದನ್ನು ಇತ್ತೀಚಿನ ಬೆಳವಣಿಗೆಗಳಲ್ಲಿ ಗುರುತಿಸಬಹುದು. ಈ ಪ್ರಕ್ರಿಯೆಯ ಅಪಾಯ ಎಂದರೆ ಯುವ ಸಮೂಹಕ್ಕೆ ನಾವು ʼ ಕೇಳಿಸಿಕೊಳ್ಳಲುʼ ಪ್ರಚೋದಿಸುತ್ತೇವೆಯೇ ಹೊರತು ಓದಲು ಅಲ್ಲ.

ಯುವ ಜನಾಂಗದ ಜಿಜ್ಞಾಸೆಗಳು

ವಿದ್ಯಾರ್ಥಿ ಯುವ ಸಮೂಹವನ್ನು ಗಾಢವಾಗಿ ಕಾಡುತ್ತಿರುವ ಮತ್ತೊಂದು ಜಿಜ್ಞಾಸೆ ಎಂದರೆ ಯಾರನ್ನು ಓದಬೇಕು, ಯಾವ ಸಿದ್ಧಾಂತದ ಗ್ರಂಥಗಳನ್ನು ಅಭ್ಯಸಿಸಬೇಕು, ಯಾರನ್ನು ಅನುಕರಿಸಬೇಕು ಇತ್ಯಾದಿ. ಮಾರ್ಕ್ಸ್‌, ಲೋಹಿಯಾ, ಗಾಂಧಿ, ಅಂಬೇಡ್ಕರ್‌ ಇವರೆಲ್ಲರನ್ನೂ ಸಾಂಘಿಕ ಸಂಕೋಲೆಗಳಲ್ಲಿ ಬಂಧಿಸಿರುವ ಬೌದ್ಧಿಕ ಜಗತ್ತು ನಮ್ಮ ನಡುವೆ ಇದೆ. ಈ ಪ್ರಪಂಚದಲ್ಲಿ ಬೆಳೆಯುವ ವಿದ್ಯಾರ್ಥಿ ಯುವ ಸಮೂಹದ ನಡುವೆ ಎಲ್ಲರನ್ನೂ ಓದುವ ವ್ಯವಧಾನವನ್ನು ಬೆಳೆಸಬೇಕಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬೌದ್ಧಿಕ ಚರ್ಚೆ ಮತ್ತು ಸಂವಾದಗಳಲ್ಲಿ ಸಂಕುಚಿತತೆ ಹೆಚ್ಚಾಗುತ್ತಿದೆ. ರಾಜಕೀಯ ಚಿಂತನೆಯಲ್ಲಿ ಅಂಬೇಡ್ಕರ್‌, ಸಾಹಿತ್ಯಿಕ ನೆಲೆಯಲ್ಲಿ ಕುವೆಂಪು, ಸಾಮಾಜಿಕ ಚಳುವಳಿಗಳಲ್ಲಿ ಲಂಕೇಶ್‌ ಮತ್ತು ಬಂಡಾಯದ ದನಿಯಾಗಿ ಸಿದ್ದಲಿಂಗಯ್ಯ ನಮ್ಮ ಹಿರಿಯ ಪೀಳಿಗೆಯನ್ನು ಮುನ್ನಡೆಸಿರುವ ಸೈದ್ಧಾಂತಿಕ ನೆಲೆಗಳು. ಸಮಾಜವನ್ನು ಮರುಕಟ್ಟುವ ಪ್ರಕ್ರಿಯೆಗೆ ಈ ವಿಚಾರಧಾರೆಗಳು ನೆರವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಆದರೆ ವರ್ತಮಾನದ ಸಂಕೀರ್ಣ ಪರಿಸ್ಥಿತಿಯಲ್ಲಿ ಯುವ ಸಮೂಹವನ್ನು ಈ ನಾಲ್ಕು ಸ್ತಂಭಗಳಿಂದಾಚೆ ಕರೆದೊಯ್ಯಬೇಕಿದೆ. ಈ ವಿಚಾರಧಾರೆಗಳು ಕಟ್ಟಿರುವ ಅಡಿಪಾಯದ ಮೇಲೆ ನಿಂತು, ಮತ್ತೊಂದು ಧೃವದಲ್ಲಿರುವ  ಇನ್ನಿತರ ಸೈದ್ಧಾಂತಿಕ, ತಾತ್ವಿಕ ಚಿಂತನೆಗಳನ್ನು ವಿದ್ಯಾರ್ಥಿ ಯುವ ಸಮೂಹಕ್ಕೆ ಪರಿಚಯಿಸಬೇಕಿದೆ. ಇಲ್ಲವಾದರೆ ಇವೆಲ್ಲವೂ ಸಾರ್ವಕಾಲಿಕ ಸಾರ್ವತ್ರಿಕತೆಯನ್ನು (All time Universality) ಪಡೆದುಕೊಂಡು , ಇವುಗಳನ್ನು ದಾಟಿ ನೋಡುವುದೇ ವಿದ್ರೋಹ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಮಾರ್ಕ್ಸ್‌, ಅಂಬೇಡ್ಕರಾದಿಯಾಗಿ ಎಲ್ಲ ದಾರ್ಶನಿಕರೂ ಹೇಳಿರುವಂತೆ ಸಾರ್ವಕಾಲಿಕ ಶ್ರೇಷ್ಠತೆಯನ್ನು ಪಡೆದುಕೊಳ್ಳುವ ಯಾವುದೇ ವಿಚಾರಧಾರೆ ಬೌದ್ಧಿಕ ವಿಕಸನಕ್ಕೆ ನೆರವಾಗುವುದಿಲ್ಲ. ಈ ದಾರ್ಶನಿಕರ ಅಂಧಾನುಕರಣೆಗೆ ಬಲಿಯಾಗುವ ಯುವ ಸಮೂಹ ಕೇವಲ ಅನುಯಾಯಿ ಅಥವಾ ಹಿಂಬಾಲಕರಾಗುತ್ತಾರೆ. ವಿಮರ್ಶಕರಾಗುವುದಿಲ್ಲ.

ವರ್ತಮಾನದ ಸಂದರ್ಭದಲ್ಲಿ ಯುವ ಸಮೂಹದಲ್ಲಿ ವಿಮರ್ಶಕ ಗುಣವನ್ನು ಬೆಳೆಸಬೇಕಿದೆ. ಒರೆ ಹಚ್ಚಿ ನೋಡುವ, ಒಳಹೊಕ್ಕು ನೋಡುವ, ಬೌದ್ಧಿಕ ಬೇಲಿಗಳನ್ನು ದಾಟಿ ನೋಡುವ ಈ ವಿಮರ್ಶಕ ಗುಣ ಬೆಳೆದಾಗ, ಸಹಜವಾಗಿ ಕೇಳುಗರೆಲ್ಲರೂ ಓದುಗರಾಗುತ್ತಾರೆ. ಪ್ರಶ್ನಿಸಲು ಒಪ್ಪದ ಮನಸ್ಸು ಅರಿವಿನ ವಿಸ್ತರಣೆಗೆ ತೆರೆದುಕೊಳ್ಳದೆ ಬಾವಿಯೊಳಗಿನ ಕಪ್ಪೆಯಂತಾಗುತ್ತದೆ. ಹಾಗೆಯೇ ದಾರ್ಶನಿಕರನ್ನು ಅವರ ತತ್ವಗಳನ್ನು ಪ್ರಶ್ನಾತೀತರನ್ನಾಗಿ ಮಾಡುವುದು ಆರಾಧಕರನ್ನು ಬೆಳೆಸುವುದೇ ಹೊರತು, ಅವರ ಚಿಂತನೆಗಳನ್ನು ಭವಿಷ್ಯಕ್ಕೆ ದಾಟಿಸುವ ನಾವಿಕರನ್ನು ಸೃಷ್ಟಿಸುವುದಿಲ್ಲ. ನಾವಿಂದು ಇಂತಹ ನಾವಿಕರನ್ನು ಸೃಷ್ಟಿಸಬೇಕಿದೆ. ಅಂಬಿಗರನ್ನು ರೂಪಿಸಬೇಕಿದೆ.

ಸಿದ್ಧ ಮಾದರಿಗಳಿಂದಾಚೆ…

ಈ ಬೌದ್ಧಿಕ ಚಲನಶೀಲತೆಯೊಂದಿಗೇ ಹಿರಿಯ ಪೀಳಿಗೆಗೆ ಪ್ರೇರಕವಾಗಿರುವ ಸಾಹಿತ್ಯ ಪ್ರಕಾರಗಳನ್ನು, ರಾಜಕೀಯ ಸಂಕಥನಗಳನ್ನು ಸರಳೀಕರಿಸಿ, ಕ್ಲುಪ್ತಗೊಳಿಸಿ, ಡಿಜಿಟಲ್‌ ಯುಗದ ಪರಿಭಾಷೆಯ ಮೂಲಕ ಯುವ ಸಮೂಹಕ್ಕೆ ತಲುಪಿಸಬೇಕಿದೆ. ಈ ಪ್ರಯತ್ನಗಳನ್ನೇ ಮಾಡದೆ, ʼ ಇಂದಿನ ಯುವ ಸಮೂಹ ಓದುವುದಿಲ್ಲ, ಅಧ್ಯಯನಕ್ಕೆ ಮುಂದಾಗುವುದಿಲ್ಲ ʼ ಎಂದು ಹಲುಬುವುದು ಅರಣ್ಯರೋದನವಾಗುತ್ತದೆ. ಕನ್ನಡ ಸಾಹಿತ್ಯ ಅಕಾಡೆಮಿ ಮತ್ತಿತರ ಸಾಹಿತ್ಯಿಕ ಸಂಸ್ಥೆಗಳು, ಅಂಬೇಡ್ಕರ್‌-ಮಾರ್ಕ್ಸ್‌ವಾದಿ ಸಂಸ್ಥೆಗಳು ಮತ್ತು ಸಂಘಟನೆಗಳು, ಈ ದಾರ್ಶನಿಕ ವಿಚಾರಧಾರೆಗಳನ್ನು ಸರಳ ರೀತಿಯಲ್ಲಿ ಯುವ ಸಮೂಹಕ್ಕೆ ತಲುಪಿಸುವ ಪ್ರಯತ್ನಗಳನ್ನು ಎಂದಾದರೂ ಮಾಡಿವೆಯೇ ? ಮರು ಮುದ್ರಣಗಳು ಪುಸ್ತಕ ಲೋಕವನ್ನು ವಿಸ್ತರಿಸುತ್ತವೆ ಅರಿವಿನ ಪ್ರಪಂಚವನ್ನು ಹಿಗ್ಗಿಸುವುದಿಲ್ಲ. ಶತಮಾನದ ಹಿಂದಿನ ಚಿಂತನಾಧಾರೆಯನ್ನು ಸಮಕಾಲೀನಗೊಳಿಸಿ ಸಮಾಜದ ಮುಂದಿಡದೆ ಹೋದರೆ, ಓದು ಮತ್ತು ಅಧ್ಯಯನ ಸಹ ವೇದಾಧ್ಯಯನದಂತಾಗುತ್ತದೆ. ಈ ಅಪಾಯವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಇದನ್ನೂ ನೋಡಿ: ಹೆಣ್ಣು ಮಕ್ಕಳ ಕಣ್ಮರೆ – ಸ್ಟ್ಯಾನ್ಲಿ Janashakthi Media

ವಿಶ್ವವಿದ್ಯಾಲಯಗಳಲ್ಲಿರುವ ವಿದ್ವಾಂಸರು ಕ್ಯಾಂಪಸ್‌ಗಳಿಂದಾಚೆಗಿರುವ ಸಮಾಜದ ಕಡೆ ನೋಡಬೇಕಿದೆ. ಹೊರ ಸಮಾಜದಲ್ಲಿರುವ ಚಿಂತಕರು, ಸಾಹಿತಿಗಳು, ವಿದ್ವಾಂಸರು ಕ್ಯಾಂಪಸ್‌ನ ಒಳಹೊಕ್ಕು ನೋಡಬೇಕಿದೆ. ಈ ಪರಸ್ಪರ ಪ್ರಕ್ರಿಯೆ ನಡೆಯದೆ ಹೋದರೆ ಎರಡೂ ಬದಿಗಳಲ್ಲಿ ಯುವ ಜನಾಂಗದ ಬೌದ್ಧಿಕ ವಿಕಾಸವನ್ನು ಯೋಚಿಸಲೂ ಸಾಧ್ಯವಾಗುವುದಿಲ್ಲ. ನಮ್ಮ ಸಾಮಾಜಿಕ ಹೋರಾಟದ ವಿಧಾನಗಳು ಬದಲಾಗಬೇಕಿದೆ ಹಾಗೆಯೇ ಆಲೋಚನೆಯ ಮಾದರಿಯೂ ಹೊಸ ಹಾದಿಯಲ್ಲಿ ನಡೆಯಬೇಕಿದೆ. ಚಿಂತನೆ, ಆದರ್ಶ, ಸಿದ್ದಾಂತಗಳು ಶಾಶ್ವತವಾಗಿರುತ್ತವೆ ಅವುಗಳನ್ನು ಅರಿತು, ಪ್ರಸರಿಸಿ, ವಿಸ್ತರಿಸುವ ಪ್ರಕ್ರಿಯೆಯಲ್ಲಿ ಚಲನಶೀಲತೆ ಇರಬೇಕಾಗುತ್ತದೆ. ಚರಿತ್ರೆಯ ದಾರ್ಶನಿಕ ತತ್ವಗಳನ್ನು ವರ್ತಮಾನದ ಸಂಕೋಲೆಗಳಲ್ಲಿ ಬಂಧಿಸದೆ, ಮುಕ್ತ ವಿಕಸನಕ್ಕೆ ಅವಕಾಶಗಳನ್ನು ಕಲ್ಪಿಸಬೇಕಿದೆ. ನಾವೇ ನಿರ್ಮಿಸಿಕೊಂಡಿರುವ ಬೌದ್ಧಿಕ ಗಡಿಗಳನ್ನು ದಾಟಿ ನೋಡುವ ಮೂಲಕ ಹೊಸ ಮಾರ್ಗಗಳನ್ನು ಶೋಧಿಸುವುದು ವರ್ತಮಾನದ ತುರ್ತು.

ಈ ದೃಷ್ಟಿಯಿಂದ ನಾವೇನು ಮಾಡಬಹುದು ? ಇದು ಚರ್ಚೆ ಮಾಡಬೇಕಾದ ವಿಚಾರ.

Donate Janashakthi Media

Leave a Reply

Your email address will not be published. Required fields are marked *