ಸರಿಯಾಗಿ ಮೂರು ದಶಕಗಳ ಹಿಂದೆ 1991ರಲ್ಲಿ ಹರಿಯಬಿಟ್ಟ ನವ-ಉದಾರವಾದಿ ಆರ್ಥಿಕ ಸುಧಾರಣೆಗಳು ದೇಶದಲ್ಲಿ ಆಳವಾದ ಬದಲಾವಣೆಗಳನ್ನು ತಂದಿವೆ- ಅವು ವಿವಿಧ ಜನವಿಭಾಗಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಿದೆ. ದುಡಿಯುವ ಜನವಿಭಾಗಗಳ ಮೇಲೆ ಅದರಿಂದಾದ ಪರಿಣಾಮಗಳೇನು, ಇದನ್ನು ಎಡಪಂಥೀಯರು ಹೇಗೆ ಕಾಣುತ್ತಾರೆ. ಈ ಕುರಿತು ಫ್ರಂಟ್‌ಲೈನ್ ಪಾಕ್ಷಿಕ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ರವರ ಸಂದರ್ಶನವನ್ನು ನಡೆಸಿತು. ಅವುಗಳ ಮೊದಲ ಭಾಗವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
ಸಂದರ್ಶನ: ಟಿ.ಕೆ.ರಾಜಲಕ್ಷ್ಮಿ
ಎಡ ಪಂಥೀಯರು ಎಂದಿನಿಂದಲೂ ನವ ಉದಾರವಾದಿ ಸುಧಾರಣೆಗಳನ್ನು ಟೀಕಿಸುತ್ತ ಬಂದಿದ್ದಾರೆ. ಈ ಸುಧಾರಣೆಗಳ 3 ದಶಕಗಳನ್ನು ಗಮನಿಸಿದಾಗ, ಎಡ ಪಂಥೀಯರ ಈ ಟೀಕೆಯು ಸಾಬೀತಾಗಿದೆ ಎಂದು ನೀವು ಹೇಳುತ್ತೀರಾ?
ಖಂಡಿತವಾಗಿಯೂ! ನವ ಉದಾರವಾದಿ ಸುಧಾರಣೆಗಳು ಲಾಭ ಕೇಂದ್ರಿತವೇ ಹೊರತು, ಜನ ಕೇಂದ್ರೀತ ಅಲ್ಲ. ಸುಧಾರಣಾ ದಶಕಗಳು ಜನರನ್ನು ಸಂಕಷ್ಟಕ್ಕೆ ತಳ್ಳಿ ಲಾಭ ಹೆಚ್ಚಿಸಿಕೊಳ್ಳುವತ್ತ ಮಾತ್ರ ಕೇಂದ್ರಿಕೃತವಾಗಿರುವುದು, ಹೆಚ್ಚುತ್ತಿರುವ ಬಡತನ, ತೀವ್ರವಾಗಿ ವ್ಯಾಪಕವಾಗುತ್ತಿರುವ ಆರ್ಥಿಕ ಅಸಮಾನತೆ ಮತ್ತು ಎಲ್ಲ ದೇಶಗಳಲ್ಲಿ ಆಂತರಿಕ ಬೇಡಿಕೆಗಳು ಕುಸಿಯುತ್ತಿರುವುದನ್ನು ವಿಶ್ವದ ಹಾಗೂ ಭಾರತದ ಅನುಭವಗಳು ತೋರಿಸಿವೆ. ಜಾಗತಿಕ ಆರ್ಥಿಕ ಮಂದಗತಿ ಮತ್ತು ಅದು ಜನರ ಜೀವದ ಮೇಲೆ ಬೀರಿರುವ ದುಷ್ಪರಿಣಾಮಗಳು ಈಗಲೂ ಮುಂದುವರೆಯುತ್ತಿರುವ ಪಿಡುಗಿನಿಂದ ಇನ್ನಷ್ಟು ಬಿಗಡಾಯಿಸಿವೆ. ಮಾರ್ಕ್ಸ್ ಈ ಹಿಂದೆ ಹೇಳಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. “ಬಂಡವಾಳಶಾಹಿಯು ಎಷ್ಟು ಅಗಾಧ ಪ್ರಮಾಣದ ಉತ್ಪಾದನೆ ಮತ್ತು ವಿನಿಮಯದ ಸಾಧನಗಳ ಮಾಯಾಲೋಕವನ್ನು ಹುಟ್ಟುಹಾಕಿದೆಯೆಂದರೆ, ತನ್ನ ಮಂತ್ರೋಚ್ಛಾರಣೆಗಳಿಂದ ತಾನೇ ಆವಾಹಿಸಿದ ನರಕದ ಶಕ್ತಿಗಳನ್ನು ನಿಯಂತ್ರಿಸಲಾಗದ ಮಾಂತ್ರಿಕನಂತಾಗಿದೆ”.
ಮೂರು ಹೊಸ ಕೃಷಿ ಕಾಯಿದೆಗಳು ಮತ್ತು ಕನಿಷ್ಟ ಬೆಂಬಲ ಬೆಲೆಗೆ ಮುಂದುವರೆದಿರುವ ನಮ್ಮ ರೈತರ ಅಭೂತಪೂರ್ವ ಹೋರಾಟಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಮೂರು ದಶಕಗಳ ನವ ಉದಾರವಾದಿ ಸುಧಾರಣೆಗಳು ಕಾಣಬರುತಿವೆ. ಇದು ಒಂದು ಶತಮಾನದ ಹಿಂದೆ ಇಂಡಿಗೋ ಬೆಳೆಯನ್ನು ಬೆಳೆಯುವಂತೆ ಒತ್ತಡ ಹೇರಿದ್ದರ ವಿರುದ್ಧ ನಡೆದಿದ್ದ ಚಂಪಾರಣ್ ಸತ್ಯಾಗ್ರಹವನ್ನು ನೆನಪಿಸುತ್ತಿದೆ- ಕಾರ್ಪೊರೇಟ್ ಕೃಷಿ, ಸಣ್ಣ ಉತ್ಪಾದನೆಗಳ ನಾಶ(ಮೋದಿಯವರ ‘ನೋಟುರದ್ಧತಿ’) ಮತ್ತು ಸದ್ಯದಲ್ಲೇ ಕ್ಷಾಮದ ಪರಿಸ್ಥಿತಿಗೆ ಕೊಂಡೊಯ್ಯಬಹುದಾದ ಆಹಾರ ಕೊರತೆಗಳು.
ಭಾರತದ ಸುಧಾರಣಾ ಪ್ರಕ್ರಿಯೆ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರಾಬಲ್ಯಕ್ಕೊಳಗಾಗಿರುವ ನವ ಉದಾರವಾದದ ಸೈದ್ಧಾಂತಿಕ ನಿಲುಮೆಯ ಅಭಿನ್ನ ಅಂಗ. ಅದರ ಉದ್ದೇಶ, ಬಂಡವಾಳಶಾಹಿ ವ್ಯವಸ್ಥೆಯ ಅತ್ಯಂತ ಹೀನ ಸುಲಿಗೆಕೋರ ಚಾರಿತ್ರ್ಯವನ್ನು, “ಮೃಗೀಯ ಶಕ್ತಿ”ಯನ್ನು ಹರಿಯಬಿಟ್ಟು ಲಂಗುಲಗಾಮಿಲ್ಲದೆ ಲಾಭಗಳನ್ನು ಗರಿಷ್ಟ ಪ್ರಮಾಣಕ್ಕೆ ಏರಿಸುವುದು. ಸಾರ್ವಜನಿಕ ಆಸ್ತಿಗಳು, ಎಲ್ಲಾ ಸಾರ್ವಜನಿಕ ಸೌಲಭ್ಯಗಳು ಮತ್ತು ಸೇವೆಗಳು ಮತ್ತು ಎಲ್ಲಾ ಖನಿಜ ಸಂಪನ್ಮೂಲಗಳ ವ್ಯಾಪಕ ಖಾಸಗೀಕರಣ ಮತ್ತು ಜನರ ಮೇಲೆ `ಬಳಕೆ ಶುಲ್ಕ’ಗಳನ್ನು ಹೇರುವುದು ಇತ್ಯಾದಿ. ನವ ಉದಾರವಾದವು ಜಾಗತಿಕವಾಗಿ ಮತ್ತು ಭಾರತದಲ್ಲಿ ಕಾರ್ಪೊರೇಟ್‌ಗಳಿಗೆ ಭಾರೀ ಸಮೃದ್ಧಿಯನ್ನು ಒದಗಿಸಿದೆ. ಶ್ರೀಮಂತರ ಮೇಲಿನ ತೆರಿಗೆಯು ಜಾಗತಿಕವಾಗಿ ಶೇ. 79ರಷ್ಟು ಇಳಿಕೆಯಾಗಿದೆ. 2008ರ ಹಣಕಾಸು ಕುಸಿತದ ನಂತರ, ಬಹುತೇಕ ಬಿಲಿಯನೇರ್‌ಗಳು ಮೂರು ವರ್ಷಗಳಲ್ಲಿ ತಮ್ಮ ಸಂಪತ್ತನ್ನು ಮರಳಿ ಪಡೆದರು ಮತ್ತು 2018ರಲ್ಲಿ ಅದನ್ನು ಇಮ್ಮಡಿಗೊಳಿಸಿಕೊಂಡರು. ಆ ಸಂಪತ್ತು ವೃದ್ಧಿಯಾಗಿರುವುದು ಉತ್ಪಾದನೆಯಿಂದಲ್ಲ, ಬದಲಾಗಿ ಸಟ್ಟಾಕೋರತನದ ಮೂಲಕ ಮತ್ತು ಹೀಗಾಗಿಯೇ ಈ ಅಗಾಧ ಜಾಗತಿಕ ಕುಸಿತವು ಶೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿಲ್ಲ.
ಮತ್ತೊಂದೆಡೆ, ಜಾಗತಿಕವಾಗಿ, ಆದಾಯ ಗಳಿಸುವವರಲ್ಲಿ ಶೇ. 80 ಪ್ರಮಾಣದ ಜನರು 2008ರ ಪೂರ್ಣ ಆದಾಯ ಮಟ್ಟವನ್ನು ಮರಳಿ ಪಡೆದಿಲ್ಲ. ಸಂಘಟಿತ ಉದ್ದಿಮೆ ಮತ್ತು ದುಡಿಯುವ ವರ್ಗದ ಹಕ್ಕುಗಳ ಮೇಲಿನ ದಾಳಿಯಿಂದಾಗಿ 1979 ರಲ್ಲಿ ಅಮೇರಿಕಾದಲ್ಲಿ ನಾಲ್ಕರಲ್ಲಿ ಒಬ್ಬ ಕಾರ್ಮಿಕರನ್ನು ಪ್ರತಿನಿಧಿಸುತ್ತಿದ್ದ ಕಾರ್ಮಿಕ ಸಂಘಟನೆಗಳು ಇಂದು 10 ರಲ್ಲಿ ಒಬ್ಬರನ್ನು ಪ್ರತಿನಿಧಿಸುವ ಪ್ರಮಾಣಕ್ಕೆ ಇಳಿದಿವೆ.
ಜೆಫ್ ಬೆಜೊಸ್ ರವರ ಅಂತರಿಕ್ಷ ಪ್ರಯಾಣದ ಕುರಿತು ಆಕ್ಸ್‌ಫಾಮ್ ಅಂತರರಾಷ್ಟ್ರೀಯದ ಅಸಮಾನತೆ ಆಂದೋಲನದ ಜಾಗತಿಕ ಮುಖ್ಯಸ್ಥ ದೀಪಕ್ ಕ್ಸೇವಿಯರ್, “ನಾವೀಗ ವಾಯುಮಂಡಲದ ಅಸಮಾನತೆ ತಲುಪಿದ್ದೇವೆ. ಪ್ರತಿ ಒಂದು ನಿಮಿಷಕ್ಕೆ ಸುಮಾರು 11 ಜನರು ಹಸಿವಿನಿಂದ ಇಂದು ಮರಣ ಹೊಂದುತ್ತಿದ್ದಾರೆ. ಇನ್ನೊಂದೆಡೆ ಬೆಜೋಸ್ 11 ನಿಮಿಷದ ವೈಯಕ್ತಿಕ ಅಂತರಿಕ್ಷ ಉಡ್ಡಯನಕ್ಕೆ ತಯಾರಾಗುತ್ತಾರೆ. ಇದೊಂದು ಮಾನವ ಅವಿವೇಕ, ಮಾನವ ಸಾಧನೆಯಲ್ಲ” ಎಂದಿದ್ದಾರೆ.
ಅತಿ ಶ್ರೀಮಂತರಿಗೆ ಅನ್ಯಾಯಯುತ ತೆರಿಗೆ ವ್ಯವಸ್ಥೆಗಳು ಮತ್ತು ಕರುಣಾಜನಕ ದುಡಿಮೆಗಾರರ ರಕ್ಷಣೆಯ ಕರುಣಾಜನಕ ಪರಿಸ್ಥಿತಿ ನಿರ್ಮಿಸಿ ಉತ್ತೇಜನೆ ಕೊಡಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ಆರಂಭದ ನಂತರದಲ್ಲಿ ಅಮೆರಿಕನ್ ಬಿಲಿಯನೇರ್‌ಗಳ ಶ್ರೀಮಂತಿಕೆ ಇನ್ನೂ 1.8 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಿತು. ಕೋವಿಡ್-19 ಲಸಿಕೆಯ ಮೇಲೆ ಬೃಹತ್ ಔಷಧಿ ಕಂಪನಿಗಳ ಏಕಸ್ವಾಮ್ಯದ ಮೂಲಕ ಒಂಬತ್ತು ಹೊಸ ಬಿಲಿಯನೇರ್‌ಗಳು ಸೃಷ್ಠಿಯಾಗಿದ್ದಾರೆ.
ಸಾಂಕ್ರಾಮಿಕ ಬಂದ 18 ತಿಂಗಳುಗಳಲ್ಲಿ ಕೇಂದ್ರ ಬ್ಯಾಂಕ್‌ಗಳು ಸರಿಸುಮಾರು 11 ಟ್ರಿಲಿಯನ್ ಡಾಲರ್‌ಗಳನ್ನು, ಅಂದರೆ ಪ್ರತಿ ಗಂಟೆಗೆ ಸುಮಾರು 834 ಮಿಲಿಯನ್ ಡಾಲರ್‌ಗಳನ್ನು ಜಾಗತಿಕ ಆರ್ಥಿಕತೆ ಕುಸಿಯದಿರುವಂತೆ ನೋಡಿಕೊಳ್ಳಲು ವೆಚ್ಚ ಮಾಡಿವೆ. ಇದು ಒಂದು ತಲೆಮಾರಿನಲ್ಲಿ ಕಂಡಿರದಷ್ಟು ಬೃಹತ್ ಪ್ರಮಾಣದ ಶೇರು ಮಾರುಕಟ್ಟೆ ಉಬ್ಬರದ ಕಿಡಿ ಹಚ್ಚಿದ ಸಮಯದಲ್ಲೇ ಜನಸಾಮಾನ್ಯರು ಹೆಚ್ಚೆಚ್ಚು ನಿರುದ್ಯೋಗ, ಬಡತನ, ಹಸಿವು ಮತ್ತು ಅಭಾವದಿಂದ ನರಳುತ್ತಿದ್ದಾರೆ. ಈ ಶೇರು ಮಾರುಕಟ್ಟೆ ಉಬ್ಬರದ ಅಲೆಯ ಮೇಲೆ ಬಿಲಿಯನೇರ್‌ಗಳು ತೇಲುತ್ತಿದ್ದರು. ಗಾಢವಾಗುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಶೇರು ಮಾರುಕಟ್ಟೆಯ ಈ ಉಬ್ಬರದ ‘ಗುಳ್ಳೆ’ ಎಲ್ಲಾ ಗುಳ್ಳೆಗಳಂತೆ ಒಡೆದೇ ಒಡೆಯುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಆರ್ಥಿಕತೆಯು ಇನ್ನಷ್ಟು ಹಾಳಾಗುತ್ತದೆ, ಹಲವು ದೇಶಗಳು ಘಾಸಿಗೊಳಗಾಗುತ್ತವೆ.
ನೆಹರೂ ಯುಗ ಮತ್ತು ವರ್ತಮಾನದ ಕಾಲ
1980ರ ವರೆಗೂ ಎಡ ಪಂಥೀಯರು ನೆಹರೂ ಅವಧಿಯ ಆರ್ಥಿಕ ನೀತಿಗಳನ್ನು ಸಹ ಟೀಕಿಸಿದ್ದವು. ಹಿಂದಿನ ಕಾಲದ ಟೀಕೆಗಳಿಗೂ, ವರ್ತಮಾನದ ಆರ್ಥಿಕ ನೀತಿಗಳ ಟೀಕೆಗೂ ಇರುವ ಭಿನ್ನತೆ ಏನು?
ನಿಜ. ನೆಹರೂ ಯುಗದಲ್ಲಿ ಜಾರಿ ಮಾಡಿದ್ದ ಆರ್ಥಿಕ ನೀತಿಗಳನ್ನು ನಾವು ಬಲವಾಗಿ ಟೀಕಿಸಿದ್ದೆವು. ದೊಡ್ಡ ಬೂರ್ಜ್ವಾವರ್ಗದ ಮುಂದಾಳತ್ವದಲ್ಲಿ ಬೂರ್ಜ್ವಾ ಮತ್ತು ಭೂಮಾಲಿಕ ಸಖ್ಯತೆಯ ಭಾರತೀಯ ಆಳುವ ವರ್ಗಗಳು ಅಂದು ಆಯ್ಕೆ ಮಾಡಿದ್ದ ಆರ್ಥಿಕ ಬೆಳವಣಿಗೆಯ ಹಾದಿಯು ಭಾರತದ ಧೀಮಂತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಭರವಸೆಗಳಿಗೆ ಮತ್ತು ಜನತೆಯ ಆಕಾಂಕ್ಷೆಗಳಿಗೆ ದ್ರೋಹ ಬಗೆಯುವಂತಿತ್ತು. ಬಡತನ, ಹಸಿವು, ನಿರುದ್ಯೋಗ ಮತ್ತು ಅನಕ್ಷರತೆ ಹೋಗಲಾಡಿಸುವ ಬದಲು, ಇವೆಲ್ಲದರಲ್ಲೂ ಹೆಚ್ಚಳವಾಗಿತ್ತು. ನೆಹರೂ ಯುಗದಲ್ಲಿ “ಸಮಾಜವಾದಿ ಮಾದರಿ ಸಮಾಜ” ಎಂಬ ಪ್ರಚಾರ ಮತ್ತು ಮಾತುಗಳು ಇದ್ದರೂ, ವಾಸ್ತವದಲ್ಲಿ ನಡೆದದ್ದು ಬಂಡವಾಳಶಾಹಿ ಹಾದಿಯ ಬೆಳವಣಿಗೆ. ಲಾಭ ಗಳಿಸಲು ಮಾನವ ಶೋಷಣೆಯನ್ನು ತೀವ್ರಗೊಳಿಸುವ ಮೂಲಕವೇ ಬಂಡವಾಳಶಾಹಿಯ ಬೆಳವಣಿಗೆಯಾಗುವುದು.
ಆದರೆ ವರ್ತಮಾನ ಕಾಲದ ಆರ್ಥಿಕ ನೀತಿಗಳ ಪ್ರಸ್ತುತ ಟೀಕೆ ಬಹಳ ಭಿನ್ನವಾಗಿದೆ. ನೆಹರೂ ಯುಗದಲ್ಲಿ ಆಗಿದ್ದ ಸಕಾರಾತ್ಮಕ ಸಾಧನೆಗಳೆಲ್ಲವನ್ನು ಇಂದು ವೇಗವಾಗಿ ಧ್ವಂಸಗೊಳಿಸಲಾಗುತ್ತಿದೆ. ಯೋಜನಾ ಆಯೋಗ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಯೋಜನೆ ತಯಾರಿಸುವುದು, ಸಾರ್ವಜನಿಕ ವಲಯದ ಸ್ಥಾಪನೆ ಮತ್ತು ನಮ್ಮ ಆರ್ಥಿಕತೆಯಲ್ಲಿ ಇವಕ್ಕೆ ಒಂದು “ದಿಗ್ಬರ್ಶಕ ಔನ್ನತ್ಯ” ಒದಗಿಸುವುದು, ಎಲ್ಲವೂ ಒಂದು ಸ್ವತಂತ್ರ ಆರ್ಥಿಕ ಬುನಾದಿಯನ್ನು ಭಾರತದಲ್ಲಿ ಹಾಕಿದವು. ಮೋದಿ ಸರ್ಕಾರವು ಜಾರಿ ಮಾಡುತ್ತಿರುವ ಆಕ್ರಮಣಕಾರಿ ನವ ಉದಾರವಾದಿ ನೀತಿಗಳು ಇದೇ ಬುನಾದಿಯನ್ನು ನಿಷ್ಕರುಣೆಯಿಂದ ಧ್ವಂಸ ಮಾಡುತ್ತಿವೆ. ಇದು ಕೇವಲ ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಹೊಸ ಕೃಷಿ ಕಾಯಿದೆಗಳ ಮೂಲಕ ಕೃಷಿ ರಂಗವನ್ನು ನಾಶ ಮಾಡಲು ಮುಂದಾಗಿದೆ.
ಸಾರ್ವಜನಿಕ ವಲಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದರಿಂದ ಅಂತಿಮವಾಗಿ ಪ್ರಯೋಜನವಾದದ್ದು ಖಾಸಗಿ ಬಂಡವಾಳಶಾಹಿ ವಲಯ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು. ಆದರೂ ಅದು ಭಾರತ ಪಾಶ್ಚಿಮಾತ್ಯ ಬಂಡವಾಳದ ಅಡಿಯಾಳಾಗಿ ಮತ್ತು ಅವಲಂಬಿ ಆರ್ಥಿಕತೆಯ ಮಟ್ಟಕ್ಕೆ ಇಳಿಯದಂತೆ ರಕ್ಷಣೆ ನೀಡುವಲ್ಲಿ ಸಾರ್ವಜನಿಕ ವಲಯವು ಭದ್ರ ತಡೆಗೋಡೆಯಾಗಿ ಕಾರ್ಯನಿರ್ವಹಿಸಿದೆ. ಎಡಪಂಥೀಯರು ಈಗ ಸಾರ್ವಜನಿಕ ವಲಯದ ರಕ್ಷಣೆಗೆ ನಿಂತಿರುವುದು, ಭಾರತದ ಸ್ವತಂತ್ರ ಆರ್ಥಿಕ ಬುನಾದಿಗಳನ್ನು ಮತ್ತು ರಾಷ್ಟ್ರೀಯ ಆಸ್ತಿಗಳನ್ನು ರಕ್ಷಿಸಿ, ಕಾಪಾಡಬೇಕಾಗಿದೆ ಎಂಬ ಈ ತಿಳುವಳಿಕೆಯ ಆಧಾರದಲ್ಲಿ.
ಭಾರತ ಹೊಳೆಯುತ್ತಿದೆಯೇ ಅಥವಾ ನರಳುತ್ತಿದೆಯೇ
ಆರ್ಥಿಕ ಉದಾರೀಕರಣದ ಮೂಲಕ ಬಹಳಷ್ಟು ಆದಾಯ ಮತ್ತು ಸಂಪತ್ತನ್ನು ಸೃಷ್ಟಿಸಲಾಗಿದೆ ಎಂದು ನಂಬುವವರು ಇದ್ದಾರೆ. ದುಡಿಯುವ ಜನರ ಸಂಕಷ್ಟ ಹೆಚ್ಚಳದ ಇನ್ನೊಂದು ಮಗ್ಗಲು ಕೂಡ ಇದಕ್ಕೆ ಇದೆಯಲ್ಲವೇ?
ನವಉದಾರವಾದಿ ಸುಧಾರಣೆಗಳಿಂದಾಗಿ ಆರ್ಥಿಕ ಅಸಮಾನತೆಗಳು ಹಲವು ಪಟ್ಟು ಹೆಚ್ಚಿವೆ. “ಹೊಳೆಯುವ ಭಾರತ”ವು ಸದಾ “ನರಳುವ ಭಾರತದ” ಹೆಗಲ ಮೇಲೆಯೇ ಸವಾರಿ ಮಾಡುವುದು. “ಹೊಳೆಯುವ ಭಾರತ” ಹೊಳಪು “ನರಳುವ ಭಾರತ” ಆಗುವ ವಂಚನೆಗಳು ವಿಲೋಮಾನುಪಾತ ಹೊಂದಿವೆ. ಮಾರ್ಚ್ 2020 ರ ನಂತರದಲ್ಲಿ ಭಾರತದ 100 ಬಿಲಿಯನೇರ್‌ಗಳು ತಮ್ಮ ಸಂಪತ್ತಿನಲ್ಲಿ ರೂ. 12,97,822 ಕೋಟಿ ಹೆಚ್ಚಳ ಕಂಡಿದ್ದಾರೆ. ಈ ಮೊತ್ತದಲ್ಲಿ 138 ಕೋಟಿ ಅತೀ ಬಡ ಭಾರತೀಯರಿಗೆ ತಲಾ ರೂ. 94,045 ಚೆಕ್ ನೀಡಬಹುದು.
ಆಕ್ಸ್‌ಫಾಮ್ ಹೊರಡಿಸಿರುವ ‘ದಿ ಇನಿಕ್ವಾಲಿಟಿ ವೈರಸ್’ (ಅಸಮಾನತೆಯ ವಿಷಾಣು)ವರದಿಯು ಮುಕೇಶ್ ಅಂಬಾನಿ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಒಂದು ಗಂಟೆಯಲ್ಲಿ ಗಳಿಸಿದ್ದನ್ನು ಗಳಿಸಲು ಓರ್ವ ಅಕುಶಲ ಕಾರ್ಮಿಕನಿ/ಳಿಗೆ 10,000 ವರ್ಷಗಳು ಬೇಕು ಮತ್ತು ಒಂದು ಸೆಕೆಂಡ್‌ನಲ್ಲಿ ಗಳಿಸಿದ್ದನ್ನು ಗಳಿಸಲು ಮೂರು ವರ್ಷಗಳು ಬೇಕು ಎಂದು ಕಂಡುಹಿಡಿದಿದೆ. ಇನ್ನೊಂದೆಡೆ, ಏಪ್ರಿಲ್ 2020ರ ತಿಂಗಳೊಂದರಲ್ಲಿ ಪ್ರತಿ ಒಂದು ಗಂಟೆಯಲ್ಲಿ 1,70,000 ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡರು ಎಂದು ಅಂಕಿ-ಅಂಶಗಳು ತಿಳಿಸುತ್ತಿವೆ. ಭಾರತೀಯ ಬಿಲಿಯನೇರ್‌ಗಳ ಸಂಪತ್ತು ಲಾಕ್‌ಡೌನ್ ಅವಧಿಯಲ್ಲಿ ಶೇ. 35 ರಷ್ಟು ಹೆಚ್ಚಿದೆ ಮತ್ತು 2009 ರಿಂದೀಚೆಗೆ ಶೇ. 90 ರಷ್ಟು ಹೆಚ್ಚಿ 422.9 ಬಿಲಿಯನ್ ಡಾಲರ‍್ಸ್ ತಲುಪಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಭಾರತದ ಅಗ್ರ 11 ಬಿಲಿಯನೇರ್‌ಗಳ ಸಂಪತ್ತಿನ ಹೆಚ್ಚಳದ ಪ್ರಮಾಣ ಎಷ್ಟಿದೆಯೆಂದರೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು 10 ವರ್ಷಗಳವರೆಗೆ ಕಾಯ್ದುಕೊಳ್ಳಬಹುದು ಅಥವಾ ಆರೋಗ್ಯ ಸಚಿವಾಲಯ ಬಜೆಟ್‌ಅನ್ನು 10 ವರ್ಷಗಳವರೆಗೆ ಕಾಯ್ದುಕೊಳ್ಳಬಹುದು.
ಶೇ. 20 ರಷ್ಟು ಕಡುಬಡವರಲ್ಲಿ ಕೇವಲ ಶೇ. 6 ಜನರನ್ನು ಮಾತ್ರವೇ ಹಂಚಿಕೊಳ್ಳದ ಸುಧಾರಿತ ನೈರ್ಮಲ್ಯ ವ್ಯವಸ್ಥೆ ತಲುಪಿದೆ. ಅತ್ಯಂತ ಮೇಲಿನ ಶೇ. 20 ರಲ್ಲಿ ಈ ಪ್ರಮಾಣ ಶೇ. 93.4 ರಷ್ಟಿದೆ. ಭಾರತದ ಜನಸಂಖ್ಯೆಯ ಶೇ. 59.6 ರಷ್ಟು ಜನ ಒಂದು ಕೊಠಡಿ ಅಥವಾ ಅದಕ್ಕಿಂತ ಕಡಿಮೆ ವ್ಯವಸ್ಥೆ ಇರುವ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಸರಕಾರದ ಒಟ್ಟು ಖರ್ಚಿನಲ್ಲಿ ಆರೋಗ್ಯ ಬಜೆಟ್‌ನ ಪಾಲಿನ ದೃಷ್ಟಿಯಿಂದ ತಯಾರಿಸಿರುವ ಪಟ್ಟಿಯಲ್ಲಿ ಭಾರತದ ದೇಶವು ಅತೀ ಕಡಿಮೆ 4 ರ ಕ್ರಮಾಂಕ ಕೆಳಗಿನಿಂದ 4ನೇಯದು. ಭಾರತದ 11 ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಸಾಂಕ್ರಾಮಿಕದ ಅವಧಿಯಲ್ಲಿ ಆಗಿರುವ ಹೆಚ್ಚಳದ ಮೇಲೆ ಕೇವಲ ಶೇ.1 ತೆರಿಗೆ ವಿಧಿಸಿದರೆ, ಬಡವರು ಮತ್ತು ಅವಕಾಶ ವಂಚಿತರಿಗೆ ಕಡಿಮೆ ದರದಲ್ಲಿ ಔಷಧಿ ನೀಡುವ ಜನೌಷಧಿ ಯೋಜನೆಗೆ ಮೀಸಲಿಡುವ ಮೊತ್ತವನ್ನು 140 ಪಟ್ಟು ಹೆಚ್ಚಿಸಬಹುದು.
ಅನು: ಶೃಂ.ಶ.ನಾ