ಪತ್ರಿಕೋದ್ಯಮಿಯೊಳಗೆ ಇರುವ ಸೂಕ್ಷ್ಮ ಸಾಮಾಜಿಕ ಸಂವೇದನೆ ಸಾಹಿತ್ಯವನ್ನೂ ಸೃಷ್ಟಿಸುತ್ತದೆ
ಸಾಮಾನ್ಯವಾಗಿ ಪತ್ರಿಕೋದ್ಯೋಗಿ (Journalist) ಎಂದರೆ, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಸುತ್ತಲಿನ ಸಮಾಜದ ಆಗುಹೋಗುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಒಂದು ವೃತ್ತಿ ಎಂದೇ ಪರಿಗಣಿಸಲಾಗುತ್ತದೆ. ಪತ್ರಿಕೋದ್ಯಮ ( Journalism) ಕ್ಷೇತ್ರದಲ್ಲಿ ಇದನ್ನು ವೃತ್ತಿ ಧರ್ಮದ ನೆಲೆಯಲ್ಲಿ ಗೌರವಿಸಲಾಗುತ್ತೆ. ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ ಬೆಳವಣಿಗೆಯ ಹಂತದಲ್ಲಿರುವ ಸಮಾಜವೊಂದರಲ್ಲಿ ಪತ್ರಿಕೋದ್ಯೋಗಿ ಅಥವಾ ಪತ್ರಿಕೋದ್ಯಮದ ಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಡಾ. ಬಿ.ಆರ್. ಅಂಬೇಡ್ಕರ್ ದಶಕಗಳ ಮುನ್ನವೇ, ಮಾರಾಟವಾದ ಪತ್ರಕತ್ರ ಸಮಾಜಕ್ಕೆ ಎಷ್ಟು ಕಂಟಕಪ್ರಾಯನಾಗಬಹುದು ಎಂದು ಎಚ್ಚರಿಸಿದ್ದಾರೆ. ಇಲ್ಲಿ ಮಾರಾಟ ಎನ್ನುವ ಪದ ಮಾರುಕಟ್ಟೆ ಪರಿಭಾಷೆಯಲ್ಲ, ಬದಲಾಗಿ ಆಳುವ ವರ್ಗಗಳೊಂದಿಗೆ ರಾಜಿಯಾಗಿ ತನ್ನ ವೃತ್ತಿಧರ್ಮವನ್ನು ಬಲಿಕೊಡುವ ಅರ್ಥದಲ್ಲಿ ಅಂಬೇಡ್ಕರ್ ಬಳಸುತ್ತಾರೆ. ವಿಶಿಷ್ಟ
-ನಾ ದಿವಾಕರ
ವಿಕಸಿತವಾಗುವ ಆಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿರುವ ಮಿಲೆನಿಯಂ ಭಾರತದಲ್ಲಿ ಅಂಬೇಡ್ಕರ್ ಅವರ ಈ ಎಚ್ಚರಿಕೆಗೆ ಕಿವಿಯಾಗಿರುವವರು ಬೆರಳೆಣಿಕೆಯಷ್ಟು ಎನ್ನುವುದು ದುರಂತ ವಾಸ್ತವ. ಆದರೆ ಈ ಕತ್ತಲಿನ ನಡುವೆಯೂ ಅಲ್ಲಲ್ಲಿ ಬೆಳಕಿಂಡಿಗಳು ಕಾಣುತ್ತಿವೆ. ಟ್ಯಾಬ್ಲಾಯ್ಡ್, ಅಂತರ್ಜಾಲ ಆವೃತ್ತಿ, ವಿದ್ಯುನ್ಮಾನ ಯು ಟ್ಯೂಬ್ ಮತ್ತಿತರ ಮಾಧ್ಯಮಗಳ ಮೂಲಕ ಪತ್ರಿಕೋದ್ಯಮ ನವ ಭಾರತಕ್ಕೆ ಭರವಸೆಯ ನೆಲೆಗಳಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಕೆಲವೇ ಪತ್ರಿಕೆಗಳ ಪೈಕಿ ತುರುವನೂರು ಮಂಜುನಾಥ್ ಅವರ ʼ ಕೆಂಧೂಳಿ ʼಯೂ ಒಂದು ಎಂದರೆ ಭಾವಾತಿರೇಕದ ಉತ್ಪ್ರೆಕ್ಷೆಯಾಗಲಾರದು. ಈ ವೈಶಿಷ್ಟ್ಯದ ಹೊರತಾಗಿ ಗುರುತಿಸಬಹುದಾದ ಒಂದು ಅಂಶ ಎಂದರೆ ಪತ್ರಿಕಾ ಸಂಪಾದಕರಾಗಿರುವ ಮಂಜುನಾಥ್ ಅವರೊಳಗಿರುವ ಸಾಮಾಜಿಕ ಸೂಕ್ಷ್ಮ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅರಿವು ಮತ್ತು ಅದನ್ನು ಸಾಹಿತ್ಯಕವಾಗಿ ಹೊರಹೊಮ್ಮಿಸುವ ಅಭಿವ್ಯಕ್ತಿ ಕೌಶಲ. ವಿಶಿಷ್ಟ
ಈ ಮಾತುಗಳು ಉತ್ಪ್ರೇಕ್ಷೆಯಲ್ಲ ಎನ್ನಲು ಇತ್ತೀಚೆಗೆ ಬಿಡುಗಡೆ ಮಾಡಿರುವ ಮಂಜುನಾಥ್ ಬರಹಗಳ ಗುಚ್ಛ “ ಮೊಳಕೆ ”. ಹಲವಾರು ಪತ್ರಿಕೋದ್ಯೋಗಿಗಳಲ್ಲಿ, ಪತ್ರಿಕಾ ಸಂಪಾದಕರಲ್ಲಿ ಒಬ್ಬ ಸಾಹಿತಿ ಅವಿತಿರುವುದು ವಿಶಾಲ ಸಮಾಜಕ್ಕಾಗಲೀ, ಮಾಧ್ಯಮ ಲೋಕಕ್ಕಾಗಲೀ ಅಥವಾ ಸಾಹಿತ್ಯವಲಯಕ್ಕಾಗಲೀ ಗೋಚರಿಸದಿರುವ ಒಂದು ಸಂಗತಿ. ʼಸಾಹಿತ್ಯʼ ಎನ್ನುವುದನ್ನು ಕೆಲವೇ ನಿರ್ದಿಷ್ಟ ನಿರ್ವಚಿತ ಪ್ರಕಾರಗಳಿಗೆ ಸೀಮಿತಗೊಳಿಸದೆ, ಸಾಮಾಜಿಕ ಕಳಕಳಿ, ಸಾಂಸ್ಕೃತಿಕ ಅರಿವು, ರಾಜಕೀಯ ಪ್ರಜ್ಞೆ ಮತ್ತು ಪರಿಸರ ಕಾಳಜಿ ಈ ಲಕ್ಷಣಗಳನ್ನು ಹೊಂದಿರುವ ಬರಹಗಳನ್ನು ಒಳಗೊಂಡಾಗ, ಪತ್ರಿಕೋದ್ಯೋಗಿಗಳ ಒಳಗಿನ ಸಾಹಿತಿಯೂ ಹೊರ ಪ್ರಪಂಚಕ್ಕೆ ʼ ಸಾಹಿತಿಯಾಗಿʼ ಕಾಣಿಸಲು ಸಾಧ್ಯ. ತುರುವನೂರು ಮಂಜುನಾಥ್ ಅವರ ಮೊಳಕೆ ಕೃತಿಯನ್ನು ಓದಿದಾಗ ನನಗನ್ನಿಸಿದ್ದು ಹೀಗೆ. ವಿಶಿಷ್ಟ
ಇದನ್ನೂ ಓದಿ: ಪಾಕಿಸ್ತಾನಿ ಸೇನಾ ವಾಹನದ ಮೇಲೆ ಬಲೂಚಿಸ್ತಾನ್ ಆರ್ಮಿ ದಾಳಿ; 12 ಮಂದಿ ಮೃತ
ವಿಮರ್ಶಾತ್ಮಕ ಒಳನೋಟ
ಪುಸ್ತಕದ ಉಪಶೀರ್ಷಿಕೆಯಾಗಿ ಲೇಖಕರೇ ಹೇಳಿರುವಂತೆ ʼಮೊಳಕೆʼ ಕೃತಿಯು ʼಭಾಷೆ-ಸಂಸ್ಕೃತಿಯ ಭಾವ ʼಗಳ ಒಂದು ಪುಟ್ಟ ಸಂಗ್ರಹ. ಈ ಕೃತಿಕಾರರ ವಿಶೇಷತೆ ಎಂದರೆ ಇವರೊಳಗೆ ಒಬ್ಬ ವಿಮರ್ಶಕನನ್ನೂ ಕಾಣಬಹುದು. ಪಾರಂಪರಿಕ ಅರ್ಥದಲ್ಲಿ ನೋಡದೆ, ವಿವಿಧ ಪ್ರಕಾರಗಳ ಸಾಹಿತ್ಯವನ್ನು ವಿಮರ್ಶಾತ್ಮಕ ಒಳನೋಟದೊಂದಿಗೆ ನೋಡುವುದನ್ನು ʼವಿಮರ್ಶೆʼ ಎಂದು ನಿರ್ವಚಿಸುವುದು ಈ ಕಾಲಘಟ್ಟಕ್ಕೆ ಅವಶ್ಯ ಮತ್ತು ಅನಿವಾರ್ಯವೂ ಹೌದು. ಮಂಜುನಾಥ್ ಅವರ ಬರಹಗಳಲ್ಲಿ ಇಂತಹ ವಿಮರ್ಶಕನನ್ನು ಕಾಣಬಹುದು. ಮೊದಲ ಭಾಗದಲ್ಲಿ ಇಂತಹ ಹಲವು ಒಳನೋಟಗಳ ಬರಹಗಳನ್ನು ಗುರುತಿಸಬಹುದು. ಬಿ. ಎಲ್. ವೇಣು ಅವರ ʼ ದುರ್ಗದ ಬೇಡರ್ದಂಗೆ ʼ ಕೃತಿಯನ್ನು ವಿಮರ್ಶೆಗೆ ಒರೆಹಚ್ಚುವ ಲೇಖಕರು ಇಡೀ ಪುಸ್ತಕದ ಸಾರವನ್ನು ವಿಷದಪಡಿಸುವುದೇ ಅಲ್ಲದೆ, ವೇಣು ಅವರ ಬರಹ ಶೈಲಿ ಮತ್ತು ಅದರೊಳಗಿನ ಸೌಂದರ್ಯವನ್ನೂ ಪ್ರಶಂಸಾತ್ಮಕವಾಗಿ ನೋಡುತ್ತಾರೆ. ವಿಶಿಷ್ಟ
ಮೊಗಳ್ಳಿ ಗಣೇಶ್ ಅವರ ʼ ದೇವ ಸ್ಮಶಾನ ʼ ಕವನ ಸಂಕಲನವನ್ನು ಕಾವ್ಯಾತ್ಮಕ ನೆಲೆಯಲ್ಲೇ ಒರೆಹಚ್ಚಿ ನೋಡುವ ಮಂಜುನಾಥ್, ಮೊಗಳ್ಳಿ ಅವರ ಕವನಗಳಲ್ಲಿ ಸಾಮಾನ್ಯವಾಗಿ ಅಭಿವ್ಯಕ್ತಿಸಲಾಗುವ ಮಾನವೀಯ ಸಂಬಂಧಗಳ ಸೂಕ್ಷ್ಮತೆಗಳು, ಚಾರಿತ್ರಿಕ ಪ್ರಜ್ಞೆ ಮತ್ತು ಭಾರತೀಯ ಸಮಾಜದ ತಳಸಮುದಾಯಗಳನ್ನು ಇಂದಿಗೂ ಕಾಡುತ್ತಿರುವ ಅಸಮಾನತೆ, ತಾರತಮ್ಯ, ದೌರ್ಜನ್ಯಗಳನ್ನು ಬಿಂಬಿಸುವ ಕೆಲವು ಕವನಗಳನ್ನು ವಿಶೇಷವಾಗಿ ಒರೆಹಚ್ಚಿ ನೋಡುತ್ತಾರೆ. ʼದೇವಸ್ಮಶಾನʼ ಕವಿತೆಯ “ ಗತ ಇತಿಹಾಸದ ದಿಬ್ಬದಲ್ಲಿ ಈಗಲೂ ರಕ್ತದ ಕಲೆಗಳಿವೆ” (ಪುಟ 26) ಎಂಬ ಸಾಲುಗಳನ್ನು, ಓದುಗರನ್ನು ಮೂಲ ಪುಸ್ತಕದೆಡೆಗೆ ಕೊಂಡೊಯ್ಯುವ ರೀತಿಯಲ್ಲಿ ಮಂಜುನಾಥ್ ಒಳಹೊಕ್ಕು ನೋಡುತ್ತಾರೆ. ಪತ್ರಕರ್ತ ಜಯಕುಮಾರ್ ಅವರ ಆತ್ಮಕತೆ ʼಕಾಡುಹಾದಿಯ ಬೆಳಕಿನ ಜಾಡು ʼ ವಿಮರ್ಶಕನನ್ನು ಸೆಳೆಯುವುದು ಅದರೊಳಗಿನ ಸಂವೇದನಾಶೀಲ ಬದುಕಿನ ಹೆಜ್ಜೆಗಳು. ವಿಶಿಷ್ಟ
ಬಿ. ಬಸವರಾಜು ಅವರ ʼಕಲ್ಯಾಣದ ತೇರುʼ ನಾಟಕ, ಮುಖ್ಯಮಂತ್ರಿ ಚಂದ್ರು ಅವರ ರಂಗಾನುಭವದ ಕಥನ, ದೇವನೂರು ಅವರ ʼ ಆರೆಸ್ಸೆಸ್ ಆಳ ಅಗಲ ʼ, ಮಂಜುನಾಥ್ ಚಳ್ಳೂರು ಅವರ ʼಫೂ ಮತ್ತು ಇತರ ಕತೆಗಳುʼ ಕಥಾಸಂಕಲನ, ಇವುಗಳನ್ನು ಕುರಿತ ಬರಹಗಳಲ್ಲಿ ಮಂಜುನಾಥ್ ಅವರೊಳಗಿನ ವಿಮರ್ಶಾತ್ಮಕ ಒಳನೋಟವನ್ನು ಹೊರಹೊಮ್ಮಿರುವುದನ್ನು ಗುರುತಿಸಬಹುದು. ಇದನ್ನು ಅಷ್ಟೇ ವಿಹಂಗಮವಾಗಿ, ಓದುಗರ ಮನಮುಟ್ಟುವಂತೆ ಮಂಜುನಾಥ್ ತಮ್ಮ ಬರಹಗಳಲ್ಲಿ ಮೂಡಿಸಿದ್ದಾರೆ. ವರಕವಿ ಬೇಂದ್ರೆ ಅವರ ʼಸಖೀಗೀತ ʼ ವಿಮರ್ಶಕ ಮಂಜುನಾಥ್ ಅವರನ್ನು ಸೆಳೆಯುವುದು ಅದರೊಳಗಿನ ಮನುಜ ಸಂಬಂಧಗಳ ಆಂತರಿಕ ತುಮುಲ-ತಲ್ಲಣಗಳ ಚಿತ್ರಣ. ಇಂತಹ ಅಪೂರ್ವ ಕಾವ್ಯವನ್ನು ವಿಮರ್ಶೆ ಮಾಡಲು, ಸ್ವತಃ ಬರಹಗಾರನಿಗೂ ಕಾವ್ಯಪ್ರಜ್ಞೆ ಇದ್ದರಷ್ಟೇ ಸಾಧ್ಯ. ಇದು ಲೇಖಕ ಮಂಜುನಾಥ್ ಅವರಲ್ಲಿರುವುದು ಶ್ಲಾಘನೀಯ. ವಿಶಿಷ್ಟ
ಸಾಂಸ್ಕೃತಿಕ ಒಳನೋಟ
ಕೃತಿಯ ಎರಡನೆ ಭಾಗದಲ್ಲಿ ಲೇಖಕ ಮಂಜುನಾಥ್ ವಿಭಿನ್ನ ಸಾಂಸ್ಕೃತಿಕ ವಿಚಾರಧಾರೆಗಳನ್ನು ವಿಮರ್ಶಾತ್ಮಕವಾಗಿ ಒಳಹೊಕ್ಕು ನೋಡುತ್ತಾರೆ. ದೃಶ್ಯ ಮಾಧ್ಯಮ, ಸೃಜನಶೀಲತೆಯ ಸೂಕ್ಷ್ಮತೆಗಳು, ಭಾಷಾ ಕಲಿಕೆ, ಜಾನಪದ ಹಬ್ಬಗಳು, ದೈವತ್ವದ ಪರಿಕಲ್ಪನೆ ಹೀಗೆ ವಿಭಿನ್ನ ವಿಚಾರಗಳನ್ನು ತಮ್ಮದೇ ಆದ ಚಿಂತನಾ ಲಹರಿಯ ಮೂಲಕ ವಿಷದೀಕರಿಸುತ್ತಾರೆ. ಈ ಭಾಗದಲ್ಲಿ ಮಂಜುನಾಥ್ ಅವರ ಜ್ಞಾನ ವಿಸ್ತಾರ ಮತ್ತು ವೈವಿಧ್ಯತೆಯ ಪರಿಚಯವೂ ಆಗುತ್ತದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ದಿವಂಗತ ಪುನೀತ್ ರಾಜ್ಕುಮಾರ್ ಅವರ ಸಾಕ್ಷ್ಯಚಿತ್ರ ʼಗಂಧದ ಗುಡಿʼ ಕುರಿತ ವಿಮರ್ಶೆ ವಿಶೇಷ ಗಮನ ಸೆಳೆಯುತ್ತದೆ. ಕಾರಣ, ಇಲ್ಲಿ ಮಂಜುನಾಥ್ ಅವರ ವಿಮರ್ಶಕ ಪ್ರಜ್ಞೆಯಲ್ಲಿ ಬೆರೆತುಹೋಗಿರುವ ಪರಿಸರ ಕಾಳಜಿ ಮತ್ತು ಸಸ್ಯ ಸಂಪತ್ತು-ವನ್ಯಜೀವಿಗಳ ಬಗ್ಗೆ ಇರುವ ಕಳಕಳಿಯನ್ನು ಗುರುತಿಸಬಹುದು. ಪುನೀತ್ ನಿರ್ಮಾಣದ ʼ ಗಂಧದ ಗುಡಿ ʼ ನೋಡದೆ ಇರುವವರು ನೋಡುವಂತೆ ಮಾಡುವ ಬರಹ ಇದು. ವಿಶಿಷ್ಟ
ʼಅನಿಷ್ಟ ಪದ್ದತಿಗಳ ಗುಟ್ಟಿನ ಸಂಗತಿಗಳು ʼ ಲೇಖನದಲ್ಲಿ ಮಂಜುನಾಥ್ ಅವರು ಈಗಲೂ ನಮ್ಮ ಸಮಾಜವನ್ನು ಆವರಿಸಿರುವ ಅನಿಷ್ಟ ಪದ್ಧತಿಗಳನ್ನು ಭೇದಿಸಿ ನೋಡುವುದೇ ಅಲ್ಲದೆ, ಅದರ ಹಿಂದಿನ ಪಾರಂಪರಿಕ ನಂಬಿಕೆ, ಸಂಪ್ರದಾಯಗಳನ್ನೂ ಸಹ ಚಾರಿತ್ರಿಕ ನೆಲೆಯಲ್ಲಿ, ಸಮಕಾಲೀನತೆಯ ಚೌಕಟ್ಟಿನೊಳಗಿಟ್ಟು, ಒರೆಹಚ್ಚಿ ನೋಡುತ್ತಾರೆ. ʼಹೊಸ ತಲೆಮಾರಿನ ಸಾಹಿತ್ಯʼದ ಮುಂದಿನ ಸವಾಲುಗಳನ್ನು ಚರ್ಚಿಸುತ್ತಾರೆ. ಈ ಭಾಗದ ಬಹುಮುಖ್ಯ ಬರಹ ʼಸೃಜನಶೀಲ ಎನ್ನುವ,,,,,,ʼ ಶೀರ್ಷಿಕೆಯ ಲೇಖನ. ಇಲ್ಲಿ ಮಂಜುನಾಥ್ ಅವರು ಸೃಜನಶೀಲ ಮತ್ತು ಸೃಜನೇತರ ಎಂಬ ಬರಹ ಮಾದರಿಗಳ ನಡುವಿನ ತಾತ್ವಿಕ ಸಂಘರ್ಷ ಮತ್ತು ಸಾಹಿತ್ಯಕ ಸೂಕ್ಷ್ಮಗಳನ್ನು ವಿಷದೀಕರಿಸುತ್ತಾರೆ. “ಹೊಸ ಮನ್ವಂತರದ ಸಾಹಿತ್ಯ ಹಲವಾರು ಆಯಾಮಗಳನ್ನು ಸೃಷ್ಟಿಸಿದೆ ಆದರೆ ಒಂದು ನಿರ್ದಿಷ್ಟ ನಿಲುವು ಕಾಣಲು ಸಿಗುತ್ತಿಲ್ಲ ” (ಪುಟ 88) ಎಂಬ ಲೇಖಕರ ಮಾತುಗಳನ್ನು ಸಾಮಾನ್ಯೀಕರಿಸಲಾಗುವುದಿಲ್ಲವಾದರೂ (Generalisatioņ) ಈ ಅಭಿಪ್ರಾಯದ ಒಳಾರ್ಥವನ್ನು ಗ್ರಹಿಸಿದಾಗ ಇದು ಯೋಚಿಸಬೇಕಾದ ವಿಚಾರ ಎನಿಸುತ್ತದೆ.
ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆ ಭಾಷಾ ಕಲಿಕೆ. ಈ ಕುರಿತ ʼ ಕನ್ನಡ ಭಾಷಾ ಕಲಿಕೆ) ಪುಟ 89 ಲೇಖನದಲ್ಲಿ ಮಂಜುನಾಥ್ ಶೈಕ್ಷಣಿಕ ವ್ಯವಸ್ಥೆ ಮತ್ತು ಸರ್ಕಾರದ ಶಿಕ್ಷಣ ನೀತಿಯಲ್ಲಿರುವ ಹಲವು ಸಮಸ್ಯೆಗಳನ್ನು ಓದುಗರ ಮುಂದೆ ತೆರೆದಿಡುತ್ತಾರೆ. “ ನಮ್ಮ ನಾಡಿನ ನೂರಾರು ಶಾಲೆಗಳಿಗೆ ನೂರು ವರ್ಷಗಳ ಇತಿಹಾಸವಿದೆ ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯೇ ಹೆಚ್ಚಿನ ಮಕ್ಕಳಿಗೆ ಕಷ್ಟದ ವಿಷಯವಾಗಿದೆ ” (ಪುಟ 90) ಎಂಬ ಮಾತುಗಳಲ್ಲಿ ಲೇಖಕರು ತಮ್ಮ ಭಾಷಾ ಕಾಳಜಿ ಮತ್ತು ಕಳಕಳಿಯನ್ನು ವ್ಯಕ್ತಪಡಿಸುತ್ತಾರೆ, ಭಾಷಾ ಕಲಿಕೆಯ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಬೆಳಕು ಚೆಲ್ಲುವ ಈ ಬರಹ ವಿಶೇಷ ಗಮನ ಸೆಳೆಯುತ್ತದೆ.
ಬದಲಾಗುತ್ತಿರುವ ಭಾರತದಲ್ಲಿ ಸತ್ಯ-ಮಿಥ್ಯಗಳು ಅದಲುಬದಲಾಗುತ್ತಿರುವ ಹೊತ್ತಿನಲ್ಲಿ, ಅದರ ಹಿಂದಿನ ಸೂಕ್ಷ್ಮತೆಯನ್ನು ತಮ್ಮ ಲೇಖನ ʼ ಧಾರ್ಮಿಕ ಮತ್ತು ಪ್ರಾಕೃತಿಕ ,,,ʼ ದಲ್ಲಿ ಮಂಜುನಾಥ್ ನಿರ್ವಚಿಸುತ್ತಾರೆ. “ಕಪೋಲ ಕಲ್ಪಿತ ದೇವರಲ್ಲಿ ಶ್ರದ್ಧೆ ಮತ್ತು ನಂಬಿಕೆಯನ್ನು ಇಟ್ಟಿರುವವರೆಗೂ ಮನುಕುಲವು ಇದೇ ರೀತಿ ಅನುಭವಿಸುತ್ತಿರುತ್ತದೆ, ಅವಸಾನ ಹೊಂದುತ್ತಲೇ ಇರುತ್ತದೆ ” (ಪುಟ 97) ಎಂಬ ಸಾಲುಗಳ ಹಿಂದಿರುವ ವೈಚಾರಿಕ ಅರಿವು ಮತ್ತು ನೋವು ಇಂದು, ಮಾನವ ಸಮಾಜದ ಒಳಿತನ್ನು ಬಯಸುವ ಪ್ರತಿಯೊಂದು ಮನಸ್ಸಿನ ನೋವು ಸಹ ಆಗಿದೆ. ಆಧುನಿಕ ಯುಗದಲ್ಲೂ ಜಾನಪದ ಹಬ್ಬಗಳ ಪ್ರಸ್ತುತತೆಯ ಬಗ್ಗೆ ಮಂಜುನಾಥ್ ʼಜೋಕುಮಾರದಂತಹʼ ಲೇಖನದಲ್ಲಿ ಮನಮುಟ್ಟುವಂತೆ ಬರೆಯುತ್ತಾರೆ. ದೇವರು ಮತ್ತು ವೈಚಾರಿಕತೆಯ ನಡುವಿನ ಸಂಘರ್ಷವನ್ನು ತಮ್ಮ ʼದೇವರು ಮತ್ತು ವಾಸ್ತವತೆ ʼ ಲೇಖನದಲ್ಲಿ ತೆರೆದಿಡುವ ಮಂಜುನಾಥ್ ಮನೋವೈಜ್ಞಾನಿಕ ನೆಲೆಯಲ್ಲಿ ಸಮಾಜವನ್ನು ಆವರಿಸಿರುವ ಅಂಧಶ್ರದ್ಧೆ ಮತ್ತು ಮೌಢ್ಯಗಳನ್ನು ಪ್ರಶ್ನಿಸುತ್ತಾರೆ. ಇದು ಲೇಖಕರೊಳಗಿನ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವದ ದ್ಯೋತಕವಾಗಿ ಕಾಣುತ್ತದೆ. ವಿಶಿಷ್ಟ
ವ್ಯಕ್ತಿ ಚಿತ್ರಗಳ ಒಳನೋಟ
ಕೃತಿಯ ಕೊನೆಯ ಭಾಗದಲ್ಲಿ ಲೇಖಕ ಮಂಜುನಾಥ್ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ , ಆಧ್ಯಾತ್ಮಿಕ ಜಗತ್ತಿನ ಹಾಗೂ ಪತ್ರಿಕಾ ಪ್ರಪಂಚದ ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸುತ್ತಾರೆ. ಕನ್ನಡದ ಹೆಮ್ಮೆಯ ಸಾಹಿತಿ ಶಿವರಾಮ ಕಾರಂತರ ವಿವಿಧ ಮುಖಗಳನ್ನು ಪರಿಚಯಿಸುವ ʼ ಕಾರಂತರ ವಿವಿಧ ಮುಖಗಳ,,,,ʼ (ಪುಟ 115) ಲೇಖನದಲ್ಲಿ ಮಂಜುನಾಥ್ ಕಾರಂತಜ್ಜನ ವೈವಿಧ್ಯಮಯ ಸಾಹಿತ್ಯದ ಪಯಣವನ್ನು ಮತ್ತು ಅಭಿವ್ಯಕ್ತಿಗಳನ್ನು ವಿಹಂಗಮವಾಗಿ ವಿವರಿಸುವ ಮೂಲಕ, ಹೊಸ ತಲೆಮಾರಿನ ಓದುಗರ ಮುಂದೆ ಒಂದು ವಿಶಿಷ್ಟ ಲೋಕವನ್ನೇ ತೆರೆದಿಡುತ್ತಾರೆ. ಸಿದ್ಧೇಶ್ವರ ಸ್ವಾಮಿ ಮತ್ತು ಮಲ್ಲಾಡಿ ಹಳ್ಳಿ ಸಂತರ ಪರಿಚಯಾತ್ಮಕ ಬರಹಗಳು ಸಮಕಾಲೀನ ಯುಗದ ಅವಶ್ಯಕತೆಯಾಗಿದ್ದು, ಡಿಜಿಟಲ್ ಯುಗದ ಯುವ ಸಮೂಹಕ್ಕೆ ಮಾರ್ಗದರ್ಶಕವಾಗಿ ಕಾಣುತ್ತವೆ. ವಿಶಿಷ್ಟ
ಸೈದ್ಧಾಂತಿಕವಾಗಿ ಭಿನ್ನ ನೆಲೆಯಲ್ಲಿ ನಿಲ್ಲುವ ಗದ್ದರ್ ಅವರನ್ನು ʼ ದಮನಿತರ ಧ್ವನಿ ಹೆಜ್ಜೆ,,,ʼ ಪುಟ 130 ಎಂದು ಗುರುತಿಸುವ ಮೂಲಕವೇ ಮಂಜುನಾಥ್ ಅವರು ಗದ್ದರ್ ಅವರ ಆರಂಭಿಕ ದಿನಗಳ ಕ್ರಾಂತಿಕಾರಿ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ. ಹಾಗೆಯೇ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಗದ್ದರ್ ಅವರಲ್ಲಾದ ಮನ್ವಂತರಗಳನ್ನೂ ವಿಮರ್ಶಾತ್ಮಕವಾಗಿಯೇ ನೋಡುವ ಮಂಜುನಾಥ್, ಅವರ ಸೈದ್ಧಾಂತಿಕ ದ್ವಂದ್ವಗಳನ್ನೂ ಒರೆಹಚ್ಚಿ ನೋಡುತ್ತಾರೆ. ಕನ್ನಡದ ವಿಶಿಷ್ಟ ಲೇಖಕ ಎನಿಸಿಕೊಂಡ ರವಿ ಬೆಳಗೆರೆ ಅವರನ್ನು ಕುರಿತ ಲೇಖನ ಭಾವನಾತ್ಮಕವಾಗಿ ಕಾಣುತ್ತದೆ. ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಲೋಕ ಕೆಲವರನ್ನು ಮರೆಯಲ್ಲೇ ಉಳಿಸಿರುವುದು ಗುಟ್ಟಿನ ಮಾತೇನಲ್ಲ. ಇಂತಹುದರಲ್ಲಿ ಲೇಖಕ ಮಂಜುನಾಥ್, ನಾಟಕಕಾರ ಜಿ. ಟಿ. ಸ್ವಾಮಿ ಮತ್ತು ಗ್ರಾಮೀಣ ಸಾಹಿತಿ ಲಿಂಗಯ್ಯನವರನ್ನು ಪರಿಚಯಿಸಿರುವುದು ಸ್ತುತ್ಯಾರ್ಹ. ಈ ಲೇಖನದಲ್ಲಿ ಸಾಹಿತ್ಯ ಲೋಕದ ಸೂಕ್ಷ್ಮ ಗೋಡೆಗಳನ್ನೂ ಭೇದಿಸಲು ಯತ್ನಿಸಿರುವ ಮಂಜುನಾಥ್, ಲಿಂಗಯ್ಯ ಮತ್ತು ಸ್ವಾಮಿ ಅವರಂತಹ, ಮುನ್ನಲೆಗೆ ಬಾರದ ಸಾಹಿತಿಗಳನ್ನು ಪರಿಚಯಿಸಿರುವುದು ಪ್ರಶಂಸನೀಯ. ವಿಶಿಷ್ಟ
ಒಳನೋಟಗಳ ಹೂರಣವಾಗಿ,,,,
ಸಹಜವಾಗಿಯೇ ಯಾವುದೇ ಸಮಕಾಲೀನ ಸಾಹಿತಿ-ಸಾಹಿತ್ಯ ವಿದ್ಯಾರ್ಥಿಯನ್ನು ಸೂಜಿಗಲ್ಲಿನಂತೆ ಸೆಳೆಯುವ ಕುವೆಂಪು ಅವರನ್ನು ಕುರಿತ ಲೇಖನದೊಂದಿಗೆ ಈ ಕೃತಿ ಸಮಾಪ್ತಿಯಾಗುತ್ತದೆ. ಒಟ್ಟಾರೆಯಾಗಿ ನೋಡಿದಾಗ ವಿಭಿನ್ನ ದೃಷ್ಟಿಕೋನದಲ್ಲಿ ಕನ್ನಡದ ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ, ಧರ್ಮ ಮತ್ತು ರಂಗಭೂಮಿಯ ವಿಭಿನ್ನ ಚಹರೆಗಳನ್ನು ಪರಿಚಯಿಸುವ 31 ಲೇಖನಗಳ ಸಂಗ್ರಹ, ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ಅಲ್ಲಲ್ಲಿ ಕಾಗುಣಿತದ ಮುದ್ರಣ ದೋಷಗಳು ಎದ್ದುಕಾಣುವಂತಿದ್ದು ಮುಂದಿನ ಆವೃತ್ತಿಯಲ್ಲಿ ಸರಿಪಡಿಸಬೇಕಿದೆ. ಪತ್ರಿಕೋದ್ಯೋಗಿಯಾಗಿ, ಪತ್ರಿಕಾ ಸಂಪಾದಕರಾಗಿ ತಮ್ಮೊಳಗೆ ಅವಿತಿರುವ ಸಾಹಿತ್ಯಕ ಅಭಿವ್ಯಕ್ತಿಯನ್ನು ಈ ಲೇಖನಗಳ ಮೂಲಕ ತುರುವನೂರು ಮಂಜುನಾಥ್ ಹೊರಗೆಡಹಿದ್ದಾರೆ.
ಈ ಕೃತಿಯ ಶೀರ್ಷಿಕೆ “ ಮೊಳಕೆ ” ಎಂದಿದ್ದರೂ, ಓದುಗರಿಗೆ ಇದೊಂದು ಅಕ್ಷರ ವೃಕ್ಷದಂತೆಯೇ ಹರಡಿಕೊಳ್ಳುವ ಸಂಕಲನವಾಗಿ ಕಾಣುತ್ತದೆ. ಅಥವಾ ʼ ಮೊಳಕೆ ʼಯೇ ಇಷ್ಟು ವಿಹಂಗಮವಾಗಿರುವಾಗ , ಮುಂದೆ ಬರಬಹುದಾದ ʼವೃಕ್ಷʼ ಹೇಗಿರಬಹುದು ಎಂಬ ಕಲ್ಪನೆಯನ್ನೂ ತುರುವನೂರು ಮಂಜುನಾಥ್ ಓದುಗರ ವಿವೇಚನೆಗೆ ಬಿಟ್ಟಿರುವಂತಿದೆ. ಜ್ಯೋತಿ ಪ್ರಕಾಶನ ಮೈಸೂರು ಪ್ರಕಟಿಸಿರುವ ʼಮೊಳಕೆ ʼ ಹೊಸ ತಲೆಮಾರಿಗಷ್ಟೇ ಅಲ್ಲದೆ, ಸಮಕಾಲೀನ ಘಟ್ಟದಲ್ಲಿ ಎಲ್ಲ ಓದುಗರಿಗೂ ತಲುಪುವಂತಹ ಲೇಖನಗಳ ಗುಚ್ಛ. ಸೀಮಿತ ಪದಮಿತಿಗಳಲ್ಲಿ (ಅರುಣಾ ರಾಯ್ ಇದನ್ನು Super Monster ಎಂದು ತಮ್ಮ ಆತ್ಮಕತೆ Personal is Political ಕೃತಿಯಲ್ಲಿ ಬಣ್ಣಿಸುತ್ತಾರೆ) ಬರೆಯಬೇಕಾದ ಅನಿವಾರ್ಯತೆಯನ್ನು ಅಕ್ಷರ ಲೋಕ ಸೃಷ್ಟಿಸಿರುವುದರಿಂದ, ಲೇಖಕರು ತಮ್ಮ ಬರಹಗಳನ್ನು ಸಂಕ್ಷಿಪ್ತಗೊಳಿಸಿದ್ದಾರೆ. ಆದರೆ ಅದು ವಸ್ತು ವಿಷಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ, ಹೇಳಬೇಕಾದ್ದನ್ನು ಹೇಳಿದ್ದಾರೆ.
ಮೊಳಕೆಗೆ ಮತ್ತಷ್ಟು ಜೀವ ತುಂಬಿ ತುರುವನೂರು ಮಂಜುನಾಥ್ ಅವರ ಅಕ್ಷರ ಕೃಷಿಯಲ್ಲಿ ಹೆಮ್ಮರಗಳು ಬೆಳೆಯಲಿ ಎಂಬ ಹಾರೈಕೆ ಮತ್ತು ಆಶಯದೊಂದಿಗೆ ಅವರನ್ನು ಅಭಿನಂದಿಸುತ್ತೇನೆ.
ಇದನ್ನೂ ನೋಡಿ: ಪುಸ್ತಕ ಬಿಡುಗಡೆ |ಒಕ್ಕೂಟವೋ ತಿಕ್ಕಾಟವೂ | ಬಿ. ಶ್ರೀಪಾದ್ ಭಟ್