ಬಜೆಟ್ ಮೌನಗಳು ಜನರಿಗೆ ದುರದೃಷ್ಟಕರ ಮಾತ್ರವಲ್ಲ; ದೇಶಕ್ಕೆ ಅನಿಷ್ಟಕರವೂ ಕೂಡ

ಪ್ರೊ.ಪ್ರಭಾತ್ ಪಟ್ನಾಯಕ್

ದೇಶದಲ್ಲಿ ಸಮಸ್ಯೆಗಳಿವೆ ಎಂಬುದನ್ನೇ ಬಜೆಟ್‌ನಲ್ಲಿ ಗುರುತಿಸಿಲ್ಲ. ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಬೇಡಿಕೆಯನ್ನು ಹೆಚ್ಚಿಸುವಂತಹ ಯಾವ ಕೆಲಸವನ್ನೂ ಬಜೆಟ್ ಮಾಡಿಲ್ಲ. ಆದರೆ ಭಾರತದ ಅರ್ಥವ್ಯವಸ್ಥೆ ಮತ್ತು ಬಾಹ್ಯ ಬೆಳವಣಿಗೆಗಳು ಇವೆರಡೂ ಸಂಬಂಧ ಹೊಂದಿರುವ ಕಾರಣಗಳಿಂದಾಗಿ ಜನಗಳ ಸಂಕಷ್ಟಗಳು ಇನ್ನಷ್ಟು ಹೆಚ್ಚಲಿವೆ. ಆದರೆ, ಭಾವ ಶೂನ್ಯ ಮೋದಿ ಸರ್ಕಾರವು ಜನರ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವ ಗೋಜಿಗೆ ಹೋಗುವುದೇ ಇಲ್ಲ. ಸರ್ಕಾರದ ಈ ವರ್ತನೆಯೇ ಅನಿಷ್ಟಕರವಾಗಿದೆ. ಅದು ಮೋದಿ ಸರಕಾರ ಐಎಂಎಫ್‌ಗೆ ಓಡುವಂತೆ ಮಾಡುತ್ತದೆ. ಐಎಂಎಫ್ ಪ್ಯಾಕೇಜನ್ನು ಒಪ್ಪಿಕೊಂಡದ್ದರಿಂದಾಗಿ ಗ್ರೀಸ್ ದೇಶವು ಅನುಭವಿಸಿದ ದುಃಸ್ಥಿತಿಯನ್ನು ಭಾರತವು ಇಲ್ಲಿಯವರೆಗೆ ತಪ್ಪಿಸಿಕೊಂಡಿತ್ತು. ಆದರೆ, ಅರ್ಥಶಾಸ್ತ್ರದ ವಿಕೃತ ತಿಳುವಳಿಕೆ ಹೊಂದಿರುವ ಸರ್ಕಾರವು ನಮ್ಮನ್ನು ಈ ದಿಕ್ಕಿನಲ್ಲಿ ತಳ್ಳುತ್ತದೆ. ಹಾಗಾಗಿ, ಪ್ರಮುಖ ಸಮಸ್ಯೆಗಳ ಬಗ್ಗೆ ಬಜೆಟ್ ಮೌನಗಳು ಜನರಿಗೆ ದುರದೃಷ್ಟಕರ ಮಾತ್ರವಲ್ಲ; ಅವು ದೇಶಕ್ಕೆ ಅನಿಷ್ಟಕರವೂ ಹೌದು.

ಅರ್ಥವ್ಯವಸ್ಥೆಯು ಸಂಕಷ್ಟದಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ ಬಜೆಟ್ ಮಂಡನೆಯಾಗಿದೆ. ನಿರುದ್ಯೋಗ ಪರಿಸ್ಥಿತಿ ಎಷ್ಡು ಭೀಕರವಾಗಿದೆ ಎಂದರೆ, ನೇಮಕಾತಿಗೆ ಸಂಬಂಧಿಸಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗಲಭೆಗಳು ನಡೆದಿವೆ. ವರಮಾನ ಮತ್ತು ಸಂಪತ್ತಿನ ಅಸಮಾನತೆಗಳು ವಿಶ್ವದಲ್ಲೇ ಅತಿ ಹೆಚ್ಚಿನ ಮಟ್ಟದಲ್ಲಿವೆ. ಕೊರೊನಾ ಮತ್ತು ಸಂಬಂಧಿತ ಲಾಕ್‌ಡೌನ್‌ನಿಂದಾಗಿ ಕೋಟಿಗಟ್ಟಲೆ ಮಂದಿ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಭಾರೀ ನಿರುದ್ಯೋಗದ ನಡುವೆಯೂ ಹಣದುಬ್ಬರವು ತೀವ್ರಗೊಳ್ಳುತ್ತಿದೆ. ಹಾಗಾಗಿ, ಸಂಕಷ್ಟದಲ್ಲಿರುವ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ, ಬಡವರಿಗೆ ಪರಿಹಾರ ಒದಗಿಸುವ ಮತ್ತು ಹಣದುಬ್ಬರಕ್ಕೆ ಕಡಿವಾಣ ಹಾಕುವ ಒಂದು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಿರುವ ಕಾರಣದಿಂದಾಗಿ ಅಂತಹ ಒಂದು ಕಾರ್ಯತಂತ್ರವನ್ನು ಈ ವರ್ಷದ (2022-23) ಕೇಂದ್ರ ಬಜೆಟ್ ಅಳವಡಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಆದರೆ, ಬಜೆಟ್ ವಿವರಗಳನ್ನು ಪರಿಶೀಲಿಸಿದಾಗ ಅಂತಹ ಯಾವ ಸೂಚನೆಗಳೂ ಕಾಣಸಿಗುವುದಿಲ್ಲ. ಮಾತ್ರವಲ್ಲ, ದೇಶದಲ್ಲಿ ಸಮಸ್ಯೆಗಳಿವೆ ಎಂಬುದನ್ನೇ ಬಜೆಟ್‌ನಲ್ಲಿ ಗುರುತಿಸಿಲ್ಲ. ಬಜೆಟ್ ಮಂಡನೆಯಾದ ಹಿಂದಿನ ದಿನ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸಂತೃಪ್ತ ಭಾವವನ್ನು ಪ್ರಕಟಿಸಿತ್ತು. ಅದೇ ಭಾವನೆಯ ಮುಂದುವರಿಕೆಯಾಗಿದೆ ಈ ಬಜೆಟ್.

ಬಜೆಟ್ ಪ್ರಕಾರ, 2022-23ರಲ್ಲಿ ಸರ್ಕಾರದ ಒಟ್ಟು ವೆಚ್ಚಗಳು 39.45 ಲಕ್ಷ ಕೋಟಿ ರೂ.ಗಳು. ಇದು 2021-22ರ ಪರಿಷ್ಕೃತ ಅಂದಾಜಿಗಿಂತ ಕೇವಲ ಶೇ.4.6ರಷ್ಟು ಹೆಚ್ಚಿಗೆ ಇದೆ. ಅಂದರೆ. ಈ ಹೆಚ್ಚಳವು ಹಣದುಬ್ಬರ ಏರುವ ದರಕ್ಕಿಂತ ಕಡಿಮೆ ಇದೆ. ಅಂದರೆ, ಬೆಲೆ-ಏರಿಕೆಯಿಂದಾಗಿ, ಅದರ ನಿಜ ಮೌಲ್ಯದಲ್ಲಿ ಕುಸಿತವಿರುತ್ತದೆ. ಹಾಗಾಗಿ, ಆರ್ಥಿಕ ಸಮೀಕ್ಷೆಯು ಭಾವಿಸಿರುವ ನಿಜ ಜಿಡಿಪಿಯ ಬೆಳವಣಿಗೆಯು ಅಂದಾಜು ಮಾಡಿದ ಶೇಕಡಾ 8-8.5ಗಿಂತ ಕಡಿಮೆಯೇ ಆಗುತ್ತದೆ. ಪರಿಸ್ಥಿತಿ ಹೀಗಿರುವಾಗ, ತನ್ನ ಖರ್ಚು-ವೆಚ್ಚಗಳು ಅರ್ಥವ್ಯವಸ್ಥೆಯನ್ನು ಉತ್ತೇಜಿಸುತ್ತವೆ ಎಂಬುದನ್ನು ಸರ್ಕಾರವೇ ಪರಿಗಣಿಸಿಲ್ಲ. ಹಾಗಾಗಿ, ಆರ್ಥಿಕ ಚಟುವಟಿಕೆಗಳ ಗಾತ್ರ ಕುಗ್ಗುತ್ತದೆ. ಸರ್ಕಾರದ ಬಂಡವಾಳ ವೆಚ್ಚಗಳು ಶೇಕಡಾ 35 ರಷ್ಟು ಏರುತ್ತವೆ ಎಂಬುದೇನೊ ನಿಜ. ಆದರೆ, ಒಟ್ಟು ಬೇಡಿಕೆಯ ದೃಷ್ಟಿಯಲ್ಲಿ, ಒಟ್ಟಾರೆ ವೆಚ್ಚಗಳು ಮುಖ್ಯವೇ ವಿನಃ, ಬಂಡವಾಳ ವೆಚ್ಚಗಳ ಹೆಚ್ಚಳವಲ್ಲ.

ಉದ್ಯೋಗವಿಲ್ಲದವರು, ರೈತರು, ದಿನಗೂಲಿಗಳು, ಮಧ್ಯಮ ವರ್ಗದವರು ಮತ್ತು ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ನೀವೆಲ್ಲರೂ ಖುಶಿಪಡಿರಪ್ಪಾ! ಡಿಜಿಟೈಸ್ಡ್ ಮಾನಸಿಕ ಸಲಹಾ ಕಾರ್ಯವನ್ನು ಆರಂಭಿಸುವುದಾಗಿ ಈ ಬಜೆಟ್‍ ಪ್ರಕಟಿಸಿದೆ  – ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ

ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಬೇಡಿಕೆಯನ್ನು ಹೆಚ್ಚಿಸುವಂತಹ ಯಾವ ಕೆಲಸವನ್ನೂ ಬಜೆಟ್ ಮಾಡಿಲ್ಲ. ದುಡಿಯುವ ಜನರಿಗೆ ಪರಿಹಾರ ಒದಗಿಸುವ ಪ್ರಸ್ತಾಪವನ್ನೂ ಮಾಡಿಲ್ಲ. 2021-22ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ, ಬಡವರಿಗೆ ಪರಿಹಾರ ಒದಗಿಸುವ ಕಾರ್ಯಕ್ರಮಗಳ ವೆಚ್ಚವನ್ನು ವಾಸ್ತವವಾಗಿ ಕಡಿತಗೊಳಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗೆ 2021-22ರಲ್ಲಿ 98,000 ಕೋಟಿ ರೂ.ಗಳನ್ನು ಮತ್ತು 2020-21ರಲ್ಲಿ 1,11,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಈ ವರ್ಷ ಕೇವಲ 73,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯು ಒಂದು ಬೇಡಿಕೆ-ಚಾಲಿತ ಕಾರ್ಯಕ್ರಮ ವಾಗಿರುವುದರಿಂದ, ಅಗತ್ಯವಿದ್ದರೆ ಹಣ ಒದಗಿಸಲಾಗುವುದು ಎಂದು ಸರ್ಕಾರ ಹೇಳುತ್ತದೆ. ಆದರೆ, ಹಣ ಬಿಡುಗಡೆ ಮಾಡುವಲ್ಲಿ ಸರ್ಕಾರವು ವಿಪರೀತ ತಡ ಮಾಡುವುದರಿಂದ ಮತ್ತು ಕೆಲಸ ಮಾಡಿದವರಿಗೆ ಕೂಲಿ ಪಾವತಿ ಮಾಡುವಲ್ಲಿ ತಿಂಗಳುಗಟ್ಟಲೆ ತಡವಾಗುತ್ತಿರುವ ಪರಿಸ್ಥಿತಿಯಲ್ಲಿ, ಬಜೆಟ್‌ನಲ್ಲಿ ನಿಗದಿಪಡಿಸಿರುವ ಅತಿ ಕಡಿಮೆ ಮೊತ್ತವು ಉದ್ಯೋಗಗಳ ಮೇಲಿನ ಬೇಡಿಕೆಯನ್ನು ಕಡಿಮೆ ಮಾಡುವ ಪರಿಣಾಮ ಬೀರುತ್ತದೆ. ಏಕೆಂದರೆ, ಕಾರ್ಮಿಕರು ವೇತನ ಪಡೆಯಲು ಮಿತಿ ಇಲ್ಲದೆ ತಾಳ್ಮೆಯಿಂದ ಕಾಯಬೇಕಾಗುವುದರಿಂದ, ಕೆಲಸ ಬಯಸಿ ಅರ್ಜಿ ಸಲ್ಲಿಸಲು ಜನರು ನಿರುತ್ಸಾಹಗೊಳ್ಳುತ್ತಾರೆ. ಅದೇ ರೀತಿಯಲ್ಲಿ, 2021-22ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ, ಆಹಾರ ಸಬ್ಸಿಡಿಯನ್ನು ಶೇಕಡಾ 28ರಷ್ಟು, ರಸಗೊಬ್ಬರ ಸಬ್ಸಿಡಿಯನ್ನು ಶೇಕಡಾ 25ರಷ್ಟು, ಪೆಟ್ರೋಲಿಯಂ ಸಬ್ಸಿಡಿಯನ್ನು ಶೇಕಡಾ 11ರಷ್ಟು ಮತ್ತು ಇತರ ಸಬ್ಸಿಡಿಗಳನ್ನು ಶೇಕಡಾ 31ರಷ್ಟು ಕಡಿತಗೊಳಿಸಲಾಗಿದೆ. ಮಧ್ಯಾಹ್ನದ ಊಟದ ಯೋಜನೆ ಮತ್ತು ಪಿಎಂ-ಕಿಸಾನ್ ಯೋಜನೆಗಾಗಿ ಮಾಡಿರುವ ಹಂಚಿಕೆಗಳು ವಾಸ್ತವವಾಗಿ ಬದಲಾಗಿಲ್ಲ. ಅಂದರೆ, ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ(ಅಂದರೆ, ನಿಜ ಅರ್ಥದಲ್ಲಿ) ಅದು ಕುಸಿತವೇ.

ಅವಮಾನಕರವಾದ ಒಂದು ವಿಷಯವೆಂದರೆ, ಎರಡು ವರ್ಷಗಳಿಂದಲೂ ಜನರನ್ನು ಸತತವಾಗಿ ಬಾಧಿಸುತ್ತಿರುವ ಕೊರೊನಾ ಸಾಂಕ್ರಾಮಿಕದ ನಡುವೆಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಬಜೆಟ್‌ನಲ್ಲಿ, ನಿಜವಾದ ಅರ್ಥದಲ್ಲಿ ಕಡಿತವಾಗಿದೆ. ಸರ್ಕಾರವೇ ಹಿಂದೆ ನೀಡಿದ್ದ ಭರವಸೆಯ ಪ್ರಕಾರ ಆರೋಗ್ಯದ ಬಾಬ್ತು ಹಂಚಿಕೆಯನ್ನು ಕಾಲ ಕ್ರಮೇಣ ಜಿಡಿಪಿಯ ಶೇಕಡಾ 3 ರ ಮಟ್ಟಕ್ಕೆ ಹೆಚ್ಚಿಸುವುದರ ಬದಲು, ಈಗ ಆರೋಗ್ಯದ ಮೇಲಿನ ಹಂಚಿಕೆಯನ್ನು, ಜಿಡಿಪಿಯ ಹೋಲಿಕೆಯಲ್ಲಿ, ಕಡಿಮೆ ಮಾಡಿದೆ. ಶಿಕ್ಷಣದ ಮೇಲಿನ ಹಂಚಿಕೆಯನ್ನು ಶೇಕಡಾ 18.5 ರಷ್ಟು ಹೆಚ್ಚಿಸಲಾಗಿದೆ ಎಂಬುದೇನೊ ಸರಿ. ಆದರೆ, ಅದರಲ್ಲಿ ಹೆಚ್ಚಿನದು ಡಿಜಿಟಲ್ ಶಿಕ್ಷಣಕ್ಕಾಗಿ. ಅದೂ ಅಲ್ಲದೆ, ಈ ಹೆಚ್ಚಳವು ಶಿಕ್ಷಣದ ಪಾಲನ್ನು ಜಿಡಿಪಿಯ ಶೇಕಡಾ 3.1ರ ಮಟ್ಟದಿಂದ ಮೇಲಕ್ಕೆ ಕೊಂಡೊಯ್ದಿಲ್ಲ. ಅದನ್ನು ಉದ್ದೇಶಿತ ಶೇಕಡಾ 6ಕ್ಕೆ ಏರಿಸುವ ಸಾಧ್ಯತೆಯಂತೂ ದೂರದ ಮಾತಾಗುತ್ತದೆ. ಸಾಮಾಜಿಕ ವಲಯದ ಮೇಲಿನ ವೆಚ್ಚಗಳನ್ನು ತೀವ್ರವಾಗಿ ಕಡಿತಗೊಳಿಸಿದೆ ಮಾತ್ರವಲ್ಲ, ರಾಜ್ಯಗಳಿಗೆ ಹಂಚಿಕೆಯಾಗುವ ಸಂಪನ್ಮೂಲಗಳನ್ನೂ ಸಹ ಕಡಿತಗೊಳಿಸಲಾಗಿದೆ: ಈ ಹಂಚಿಕೆಯು ನಾಮಮಾತ್ರದ ಪರಿಭಾಷೆಯಲ್ಲಿ ಶೇಕಡಾ 9.6 ರಷ್ಟು ಹೆಚ್ಚಾಗಲಿದೆ. ಆದರೆ, ಹಣದುಬ್ಬರಕ್ಕೆ ಹೋಲಿಸಿದ ಲೆಕ್ಕಾಚಾರದಲ್ಲಿ ಶೇಕಡಾ 6.25ಕ್ಕೆ ಬರುತ್ತದೆ ಮತ್ತು 2021-22ರ ಪರಿಷ್ಕೃತ ಅಂದಾಜು ಶೇಕಡಾ 6.91 ಕ್ಕಿಂತಲೂ ಕಡಿಮೆ ಇದೆ. ಹಾಗಾಗಿ, ಜಿಡಿಪಿಯಲ್ಲಿ ಶಿಕ್ಷಣದ ಪಾಲು ಕುಸಿಯುತ್ತದೆ.

ಈ ಹಂಚಿಕೆಗಳನ್ನು ಮನಸ್ಸಿಗೆ ತೋಚಿದಂತೆ ಮಾಡಲಾಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ಮೋದಿ ಸರ್ಕಾರವು ಕಳೆದ ಕೆಲವು ವರ್ಷಗಳಿಂದಲೂ ಅನುಸರಿಸುತ್ತಿರುವ ವಿತ್ತೀಯ ನೀತಿಯ ಕಾರ್ಯತಂತ್ರವನ್ನು ಬಿಂಬಿಸುತ್ತವೆ. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಲ್ಲಿ ಕಾರ್ಪೊರೇಟ್‌ಗಳಿಗೆ ತೆರಿಗೆ ರಿಯಾಯಿತಿಗಳನ್ನು ನೀಡುವ ಮತ್ತು ಈ ರಿಯಾಯಿತಿಗಳಿಂದ ಉಂಟಾದ ಆದಾಯದ ಖೋತಾವನ್ನು ಸರಿದೂಗಿಸಲು ಪರೋಕ್ಷ ತೆರಿಗೆಗಳನ್ನು ಹೆಚ್ಚಿಸುವ, ಅದರಲ್ಲೂ ವಿಶೇಷವಾಗಿ ಪೆಟ್ರೊ ತೈಲಗಳ ಬೆಲೆಗಳ ಏರಿಕೆ ಮತ್ತು ಅದೂ ಸಾಕಾಗದಿದ್ದರೆ ತಾನು ಕೈಗೊಳ್ಳಬೇಕಿದ್ದ ಖರ್ಚು ವೆಚ್ಚವನ್ನು ಮೊಟಕುಗೊಳಿಸುವ ಕ್ರಮಗಳು, ಇಂದು ನಾವು ನೋಡುತ್ತಿರುವ ಹಣದುಬ್ಬರದ ಜೊತೆಯಲ್ಲಿ ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣವಾಗಿವೆ. ಆದ್ದರಿಂದ ಅರ್ಥವ್ಯವಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಅದು ಹೊರಬರಬೇಕು ಎಂದಾದರೆ, ಈ ಕ್ರಮಗಳನ್ನು ಹಿಂದಕ್ಕೆ ತಳ್ಳಿ ತಿರುಗುಮುರುಗುಗೊಳಿಸಬೇಕಾಗುತ್ತದೆ. ಆದರೆ, ಈ ವರೆಗೆ ಒದಗಿಸಿದ ತೆರಿಗೆ ರಿಯಾಯಿತಿಗಳು ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದರ ಬದಲಾಗಿ ಬರಲಿರುವ ಆರ್ಥಿಕ ಹಿಂಜರಿತದಿಂದಾಗಿ ಕುಗ್ಗುತ್ತವೆ ಎಂಬುದು ಈಗಾಗಲೇ ಸ್ಪಷ್ಟವಾಗಿದ್ದರೂ ಸಹ, ಮೋದಿ ಸರ್ಕಾರವು ತಾನು ಅನುಸರಿಸುತ್ತಿರುವ ಈ ವಿಕೃತ ಕಾರ್ಯತಂತ್ರದಿಂದ ಆಚೆ ದೃಷ್ಟಿ ಹಾಯಿಸುವಲ್ಲಿ ಅಸಮರ್ಥವಾಗಿದೆ. ಪ್ರಸ್ತುತ ಬಜೆಟ್‌ನಲ್ಲಿಯೂ ಸಹ ಈ ಕಾರ್ಯತಂತ್ರವೇ ವಿಜೃಂಭಿಸುತ್ತಿದೆ: ಸಬ್ಸಿಡಿಗಳನ್ನು ಕಡಿತಗೊಳಿಸುತ್ತಿರುವ ಸಮಯದಲ್ಲೇ ಮಿಶ್ರಣಮಾಡದೆ ಬಳಕೆಯಾಗುವ ಭಾರತದ ಬಹುಪಾಲು ಇಂಧನದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 2 ರೂ.ನಷ್ಟು ಹೆಚ್ಚಿಸಲಾಗಿದೆ. ಈ ಕ್ರಮವು ಪರೋಕ್ಷ ತೆರಿಗೆಗಳ ಏರಿಕೆಗೆ ಸಮಾನವಾಗುತ್ತದೆ.

ಈ ವಿಕೃತ ಕಾರ್ಯತಂತ್ರದಲ್ಲಿ ಯಾವುದೇ ಚೇತರಿಕೆಗಾಗಲಿ ಅಥವಾ ಯಾವುದೇ ಪರಿಹಾರಕ್ಕಾಗಲಿ ಅವಕಾಶವಿಲ್ಲ. ಹೆಚ್ಚೆಂದರೆ, ಸರ್ಕಾರವು ಒಂದಿಷ್ಟು ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸಬಹುದು ಮತ್ತು ನಂತರ ಸರ್ಕಾರವು ಎಷ್ಟೊಂದು ಉದಾರವಾಗಿದೆ ಎಂದು ಬಿಂಬಿಸಿ ಬೀಗುವ ಸಲುವಾಗಿ ತನಗೆ ಡೊಗ್ಗು ಸಲಾಮು ಹೊಡೆಯುವ ಮಾಧ್ಯಮವನ್ನು ಬಳಸಿಕೊಳ್ಳಬಹುದು. ಇಂತಹ ಚಾಲಾಕಿತನವನ್ನು ನಿರೀಕ್ಷಿಸಬಹುದಾಗಿದ್ದರೂ ಈ ಬಜೆಟ್‌ನಲ್ಲಿ ಅದೂ ಇಲ್ಲ ಎಂಬುದು ಗಮನಾರ್ಹವಾಗಿದೆ. ಆದಾಯ ತೆರಿಗೆ ದರಗಳಲ್ಲಿ ಬದಲಾವಣೆ ಇಲ್ಲ. ಆದಾಯ ತೆರಿಗೆ ಪಾವತಿಸುವ ಮಧ್ಯಮ ವರ್ಗಕ್ಕೆ ಯಾವ ರಿಯಾಯಿತಿಯನ್ನೂ ತೋರಿಸಿಲ್ಲ. ಹಣದುಬ್ಬರ ದರವನ್ನು ಕೆಳಗಿಳಿಸುವ ಸಲುವಾಗಿ ಪರೋಕ್ಷ ತೆರಿಗೆಗಳಲ್ಲಿ ಕಡಿತವನ್ನೂ ಮಾಡಿಲ್ಲ. ಜೊತೆಗೆ, ಹಲವು ಹತ್ತು ಸಾಮಾಜಿಕ ಕಾರ್ಯಕ್ರಮಗಳ ಮೇಲಿನ ವೆಚ್ಚಗಳನ್ನು ಕಡಿತಗೊಳಿಸಲಾಗಿದೆ. ಜನರು ಅಭೂತಪೂರ್ವ ಸಂಕಷ್ಟಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಮತ್ತು ಐದು ರಾಜ್ಯಗಳಲ್ಲಿ ಚುನಾವಣೆಗಳು ಕೆಲವೇ ದಿನಗಳಲ್ಲಿ ನಡೆಯಲಿರುವ ಸಮಯದಲ್ಲಿ ಸರ್ಕಾರವು ಇದನ್ನು ಮಾಡುವ ಧೈರ್ಯ ತೋರಿಸುತ್ತಿದೆ ಎಂಬ ಅಂಶವು ಅದು ಕೋಮು ಧ್ರುವೀಕರಣದ ಬಲದ ಮೇಲೆ ಮತಗಳನ್ನು ಸೆಳೆಯಬಹುದು ಎಂಬ ವಿಶ್ವಾಸ ಹೊಂದಿರುವುದನ್ನು ಸೂಚಿಸುತ್ತದೆ.

ಬಜೆಟ್ ಈ ಸಂಕಷ್ಟಗಳನ್ನು ಪರಿಹರಿಸದಿದ್ದರೂ, ಭಾರತದ ಅರ್ಥವ್ಯವಸ್ಥೆ ಮತ್ತು ಬಾಹ್ಯ ಬೆಳವಣಿಗೆಗಳು ಇವೆರಡೂ ಸಂಬಂಧ ಹೊಂದಿರುವ ಕಾರಣಗಳಿಂದಾಗಿ ಈ ಸಂಕಷ್ಟಗಳು ಇನ್ನಷ್ಟು ಹೆಚ್ಚಲಿವೆ. ಮುಖ್ಯ ಆಂತರಿಕ ಅಂಶವೆಂದರೆ, ಖಾಸಗಿ ಬಳಕೆಯ ಇಳಿಕೆ. ನಿಜವಾಗಿ ಹೇಳುವುದಾದರೆ, ಬಳಕೆಯು 2019-20 ಮಟ್ಟಕ್ಕಿಂತ ಕೆಳಗಿದೆ. ಇದರರ್ಥವೆಂದರೆ, ಬಳಕೆಯ ಸರಕುಗಳ ಉತ್ಪಾದನಾ ಸಾಮರ್ಥ್ಯವು 2019-20ರ ಮಟ್ಟದಲ್ಲಿದ್ದರೂ, ಇನ್ನೂ ಬಳಕೆಯಾಗದ ಸಾಮರ್ಥ್ಯವು ಹೆಚ್ಚಿನ ಮಟ್ಟದಲ್ಲಿರುತ್ತದೆ. ಅದೂ ಅಲ್ಲದೆ, 2019-20 ರ ಮೊದಲು ನೀಡಲಾದ ಹೂಡಿಕೆ ಆದೇಶಗಳು ಅಂದಿನಿಂದ ಇಂದಿನವರೆಗೆ ಈಡೇರುತ್ತಿರುವುದರಿಂದ ಈ ವಲಯಗಳಲ್ಲಿ ಸಾಮರ್ಥ್ಯಕ್ಕೆ ಸ್ವಲ್ಪ ಸೇರ್ಪಡೆಯಾಗುತ್ತದೆ. ಆದ್ದರಿಂದ, ಈ ವಲಯಗಳಲ್ಲಿ ಬಳಕೆಯಾಗದ ಸಾಮರ್ಥ್ಯವು ಹೆಚ್ಚಾಗಿದೆ. ಅಂದರೆ, ಪ್ರಸ್ತುತ ಸಂಭವಿಸುವ ಹೂಡಿಕೆ-ಚಾಲಿತ ಚೇತರಿಕೆಯನ್ನೂ ಸಹ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಅದೇ ರೀತಿಯಲ್ಲಿ ಹಣದುಬ್ಬರ ಸಮಸ್ಯೆಯನ್ನೂ ನಿಭಾಯಿಸಲಾಗದು. ಹಣದುಬ್ಬರವನ್ನು ನಿಭಾಯಿಸುವ ಪ್ರಯತ್ನದಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಇವು ಮತ್ತಷ್ಟು ಹದಗೆಡುತ್ತವೆ. ಏಕೆಂದರೆ, ಬಾಹ್ಯ ಬೆಳವಣಿಗೆಗಳಿಗೂ ಮತ್ತು ನಮ್ಮ ಅರ್ಥವ್ಯವಸ್ಥೆಗೂ ಪರಸ್ಪರ ಸಂಬಂಧವಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಏರುತ್ತಿವೆ. ಅಮೆರಿಕಾದಲ್ಲಿ ಉಲ್ಬಣಗೊಳ್ಳುತ್ತಿರುವ ಹಣದುಬ್ಬರವು ಅಲ್ಲಿ ಬಡ್ಡಿದರಗಳ ಏರಿಕೆಗೆ ಕಾರಣವಾಗುತ್ತಿದೆ. ಅನೇಕ ವರ್ಷಗಳ ಕಾಲದಿಂದಲೂ ಶೂನ್ಯ ಮಟ್ಟದಲ್ಲೇ ಇದ್ದ ಬಡ್ಡಿ ದರಗಳು ಮೇಲೇರುತ್ತವೆ. ಅವು ಶೂನ್ಯ ಮಟ್ಟದಲ್ಲಿದ್ದಾಗ ಭಾರತದಂತಹ ದೇಶಗಳು ತಮ್ಮ ಪಾವತಿ ಶೇಷ (ವಿದೇಶ ವ್ಯಾಪಾರದ ಬಾಕಿ ಚುಕ್ತಾ) ಸಮಸ್ಯೆಯನ್ನು ಸರಿದೂಗಿಸಲು ಜಾಗತಿಕ ಹಣಕಾಸು ಹರಿವನ್ನು ಸುಲಭವಾಗಿ ಪಡೆಯುತ್ತಿದ್ದವು. ಆದರೆ, ಈಗ ಅಮೆರಿಕ ಮತ್ತು ಇತರೆಡೆಗಳಲ್ಲಿ ಬಡ್ಡಿ ದರಗಳು ಏರುತ್ತಿದ್ದಂತೆಯೇ ಪಾವತಿ ಶೇಷ ಸಮತೋಲನವನ್ನು ನಿರ್ವಹಿಸುವುದು ಕಷ್ಟಕರವಾಗುತ್ತದೆ. ಡಾಲರ್ ಬೆಲೆ ಏರುತ್ತದೆ. ಪರಿಣಾಮವಾಗಿ, ರೂಪಾಯಿಯ ಬಾಹ್ಯ ಮೌಲ್ಯವು ಕುಸಿಯುತ್ತದೆ. ತೈಲವನ್ನು ಡಾಲರ್ ಕರೆನ್ಸಿಯಲ್ಲೇ ಕೊಳ್ಳಬೇಕು. ಆದ್ದರಿಂದ, ತೈಲದ ಆಮದು ಬೆಲೆಗಳು ರೂಪಾಯಿ ಲೆಕ್ಕದಲ್ಲಿ ಹೆಚ್ಚಾಗುತ್ತವೆ. ಈ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ. (ಈ ರೀತಿ ವರ್ಗಾಯಿಸುವುದೇ ಸರ್ಕಾರದ ಕಾರ್ಯತಂತ್ರ). ಹಾಗಾಗಿ, ಹಣದುಬ್ಬರ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

ಜನರು ಈ ರೀತಿಯಲ್ಲಿ ಹೆಚ್ಚು ಹೆಚ್ಚು ಸಂಕಷ್ಟಗಳನ್ನು ಅನುಭವಿಸುವಂತಾಗಿದೆ. ಆದರೆ, ಭಾವ ಶೂನ್ಯ ಮೋದಿ ಸರ್ಕಾರವು ಜನರ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವ ಗೋಜಿಗೆ ಹೋಗುವುದೇ ಇಲ್ಲ. ಸರ್ಕಾರದ ಈ ವರ್ತನೆಯೇ ಅನಿಷ್ಟಕರವಾಗಿದೆ. ಏಕೆಂದರೆ, ಪಾವತಿ ಶೇಷ ಸಮಸ್ಯೆಯನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ಮೋದಿ ಸರ್ಕಾರವು ಒಂದು ರಕ್ಷಣಾ ಪ್ಯಾಕೇಜ್ ಒದಗಿಸುವಂತೆ ಕೋರಲು ಐಎಂಎಫ್‌ಗೆ ಓಡುತ್ತದೆ. ತನ್ನ ಪ್ಯಾಕೇಜನ್ನು ಒಪ್ಪಿಕೊಂಡಾಗ, ಐಎಂಎಫ್ ದೇಶದ ಮೇಲೆ “ಮಿತವ್ಯಯ” ನೀತಿಗಳನ್ನು ಹೇರುತ್ತದೆ ಮತ್ತು ಭಾರತದ ಸ್ಥಾನಮಾನವನ್ನು ಮೂರನೇ ಜಗತ್ತಿನ ಸಾಲಗಾರರ ಮಟ್ಟಕ್ಕೆ ಇಳಿಸುತ್ತದೆ. ದೇಶದ ನೀತಿ ನಿರೂಪಣಾ ಸ್ವಾಯತ್ತತೆಯನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಈಗಾಗಲೇ ಕಸಿದುಕೊಂಡಿದ್ದರೂ ಸಹ, ಅದರ “ವಿಶ್ವಾಸವನ್ನು” ಉಳಿಸಿಕೊಳ್ಳುವ ಭರದಲ್ಲಿ, ಐಎಂಎಫ್‌ನ ಕಪಿ ಮುಷ್ಠಿಯಲ್ಲಿ ಸಿಕ್ಕಿಹಾಕಿಕೊಂಡು ಅಳಿದುಳಿದ ಸ್ವಾಯತ್ತತೆಯನ್ನೂ ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ. ಸ್ವಾಯತ್ತತೆಯನ್ನು ಕಳೆದುಕೊಳ್ಳುವುದರಿಂದ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗ್ರೀಸ್ ದೇಶವು ಒಂದು ಅತ್ಯುತ್ತಮ ಉದಾಹರಣೆಯಾಗುತ್ತದೆ. ಐಎಂಎಫ್ ಪ್ಯಾಕೇಜನ್ನು ಒಪ್ಪಿಕೊಂಡದ್ದರಿಂದಾಗಿ ಗ್ರೀಸ್ ದೇಶವು ಅನುಭವಿಸಿದ ದುಃಸ್ಥಿತಿಯನ್ನು ಭಾರತವು ಇಲ್ಲಿಯವರೆಗೆ ತಪ್ಪಿಸಿಕೊಂಡಿತ್ತು. ಆದರೆ, ಅರ್ಥಶಾಸ್ತ್ರದ ವಿಕೃತ ತಿಳುವಳಿಕೆ ಹೊಂದಿರುವ ಸರ್ಕಾರವು ನಮ್ಮನ್ನು ಈ ದಿಕ್ಕಿನಲ್ಲಿ ತಳ್ಳುತ್ತದೆ. ಹಾಗಾಗಿ, ಪ್ರಮುಖ ಸಮಸ್ಯೆಗಳ ಬಗ್ಗೆ ಬಜೆಟ್ ಮೌನಗಳು ಜನರಿಗೆ ದುರದೃಷ್ಟಕರ ಮಾತ್ರವಲ್ಲ; ಅವು ದೇಶಕ್ಕೆ ಅನಿಷ್ಟಕರವೂ ಹೌದು.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *