ಲಕ್ನೋ: ಆಟವಾಡುತ್ತಿದ್ದ ಬಾಲಕನ ಮೇಲೆ ಕಳಪೆ ಗುಣಮಟ್ಟದಿಂದ ನಿರ್ಮಾಣ ವಾಗಿದ್ದ ಸರ್ಕಾರಿ ಶೌಚಾಲಯದ ಗೋಡೆ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿದ 5 ವರ್ಷದ ಬಾಲಕನೋರ್ವ ಜೀವಂತ ಸಮಾಧಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಜಖಿಂಪುರ ಖೇರಿ ಜಿಲ್ಲೆಯ ಮಗಲ್ಗಂಜ್ ಚಪರ್ತಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರ ನಿರ್ಮಿಸಿದ ಶೌಚಾಲಯ ಕುಸಿದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ಬಾಲಕ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಬಾಲಕ ಮನೆ ಹೊರಗಡೆ ಆಟವಾಡುತ್ತಿದ್ದ ಸಂದರ್ಭ ಅಲ್ಲೇ ನಿರ್ಮಿಸಲಾಗಿದ್ದ ಸರ್ಕಾರಿ ಶೌಚಾಲಯ ಆತನ ಮೇಲೆ ಏಕಾಏಕಿ ಕುಸಿದು ಬಿದ್ದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಬಾಲಕನ ಕುಟುಂಬದವರು ತಿಳಿಸಿದ್ದಾರೆ.
ಇದನ್ನೂ ಓದಿ : ಸೀರೆ ಮರೆಯಲ್ಲಿ ಮಕ್ಕಳಿಗೆ ಶೌಚಾಲಯ! ಶೋಚನೀಯ ಸ್ಥಿತಿಯಲ್ಲಿದೆ ಸರಕಾರಿ ಶಾಲೆ!!
2016ರಲ್ಲಿ ಗ್ರಾಮದ ಮುಖಂಡರು ಹಾಗೂ ಗ್ರಾ.ಪಂ. ಕಾರ್ಯದರ್ಶಿ ಸೇರಿ ಕಳಪೆ ವಸ್ತುಗಳನ್ನು ಬಳಸಿ ಶೌಚಾಲಯ ನಿರ್ಮಿಸಿದ್ದರು. ಕಳಪೆ ಗುಣಮಟ್ಟದ ಶೌಚಾಲಯ ನಿರ್ಮಿಸಿರುವುದರಿಂದಲೇ ಮಗನ ಸಾವಾಗಿದೆ ಎಂದು ಆರೋಪಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಆದರೆ ಆರೋಪಿಗಳ ವಿರುದ್ಧ ಪೊಲೀಸರು ಇನ್ನೂ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.