ಬೆಂಗಳೂರು: ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಶಾಲೆಗಳ ಕಾರ್ಯಕ್ಷಮತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳನ್ನು ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಳೆದ ವರ್ಷದಿಂದ ಬಿಬಿಎಂಪಿ ಶಾಲೆಗಳ ಕಾರ್ಯಕ್ಷಮತೆ ಕುಸಿತ ಕಂಡಿದೆ. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಈ ಶಾಲೆಗಳನ್ನು ತರಲು, ಶಾಲೆಗಳ ಶೈಕ್ಷಣಿಕ ಭಾಗವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.
ಶಾಲಾ ಕಟ್ಟಡಗಳ ನಿರ್ವಹಣೆ ಮತ್ತು ಮೇಲ್ದರ್ಜೆಗೇರಿಸುವ ಜವಾಬ್ದಾರಿಯನ್ನು ಬಿಬಿಎಂಪಿಯು ನಿರ್ವಹಿಸಿದರೆ, ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಜವಾಬ್ದಾರಿಯನ್ನು ಶಾಲಾ ಶಿಕ್ಷಣ ಇಲಾಖೆ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಬಿಬಿಎಂಪಿ ನಡುವೆ ನಡೆದ ಹಲವು ಚರ್ಚೆಗಳಲ್ಲಿ ಬಿಬಿಎಂಪಿ ಶಾಲೆಗಳನ್ನು ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ನಿರ್ಧಾರ ಪರಿಗಣನೆಗೆ ಬಂದಿದೆ. ಬೇರೆಯವರಿಗೆ ಹೋಲಿಸಿದರೆ ಬಿಬಿಎಂಪಿ ‘ಕಳಪೆ ಗುಣಮಟ್ಟದ ಶಿಕ್ಷಣ ಮತ್ತು ಕಳಪೆ ಮೂಲಸೌಕರ್ಯ’ ನೀಡುತ್ತಿದೆ ಎಂದು ತೀವ್ರ ಟೀಕೆಗೆ ಒಳಗಾಗಿತ್ತು.
ಇದನ್ನೂ ಓದಿ: ಟಿವಿ, ಸಂಪಾದಕೀಯ ಮೂಲಕ ಇಡೀ ವ್ಯವಸ್ಥೆ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ | ಸಂದರ್ಶನದಲ್ಲಿ ಮೋದಿ
ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುವ ಟೆಂಡರ್ ಅನ್ನು ಅಪ್ಪು ಡಿಟೆಕ್ಟಿವ್ ಆ್ಯಂಡ್ ಸೆಕ್ಯುರಿಟಿ ಸರ್ವಿಸ್ ಎಂಬ ಡಿಟೆಕ್ಟಿವ್ ಏಜೆನ್ಸಿಗೆ ನೀಡಿ ಬಿಬಿಎಂಪಿ ವಿವಾದ ಸೃಷ್ಟಿಸಿತ್ತು. ನವೆಂಬರ್ನಲ್ಲಿ ಶಿವಾಜಿನಗರದ ಬಿಬಿಎಂಪಿ ನರ್ಸರಿ ಶಾಲೆಯ ಕಟ್ಟಡ ಕುಸಿದು ಬಿದ್ದು ಸುಮಾರು 90 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದರು. ಪ್ರಸ್ತುತ, ಬೆಂಗಳೂರಿನ 152 ಬಿಬಿಎಂಪಿ ಶಾಲೆಗಳು ಮತ್ತು 17 ಕಾಲೇಜುಗಳಲ್ಲಿ ಸುಮಾರು 25,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
500 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಭೂಮಿ
ಸಿಎಸ್ಆರ್ ನಿಧಿಯ ಮೂಲಕ ರಾಜ್ಯದ 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಮೊದಲ 500 ಶಾಲೆಗಳಿಗೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. “ನಾವು ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಎಲ್ಲಾ ಸಿಎಸ್ಆರ್ ದಾನಿ ಕಂಪನಿಗಳಿಗೆ ಕರೆ ನೀಡುತ್ತಿದ್ದೇವೆ ಮತ್ತು ಮೊದಲ 500 ಶಾಲೆಗಳಿಗೆ ಜವಾಬ್ದಾರಿಗಳನ್ನು ನಿಯೋಜಿಸುತ್ತೇವೆ. ಅವರು ಸಿಎಸ್ಆರ್ ನಿಧಿಯಿಂದ ಸರ್ಕಾರಕ್ಕಾಗಿ ಉತ್ತಮ ಗುಣಮಟ್ಟದ ಶಾಲೆಗಳನ್ನು ನಿರ್ಮಿಸುತ್ತಾರೆ. ಪ್ರತಿ ಶಾಲೆಗೆ 4 ರಿಂದ 7 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.
“ಸಿಎಸ್ಆರ್ ನಿಧಿಗಾಗಿ ನಾವು ಈಗಾಗಲೇ ಕಂಪನಿಗಳೊಂದಿಗೆ ಚರ್ಚೆ ನಡೆಸಿದ್ದೇವೆ ಮತ್ತು ಶೀಘ್ರದಲ್ಲೇ ನಾವು ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ. ಪ್ರಸ್ತುತ, ಕಾರ್ಪೊರೇಟ್ಗಳು ಈ ಉಪಕ್ರಮದ ಅಡಿಯಲ್ಲಿ 1,900 ಕೋಟಿ ರೂಪಾಯಿ ಮೌಲ್ಯದ ಸಿಎಸ್ಆರ್ ನಿಧಿಯನ್ನು ಒದಗಿಸಲು ವಾಗ್ದಾನ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಿಜಾಬ್ ನಿಷೇಧ ಹಿಂಪಡೆಯುವುದಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಸರ್ಕಾರವು ಪ್ರತಿ ಶಾಲೆಗೆ 2 ರಿಂದ 4 ಎಕರೆ ಅಳತೆಯ ಭೂಮಿಯನ್ನು ನೀಡುತ್ತದೆ ಮತ್ತು ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯಿಂದ ನಿಯೋಜಿತ ಭೂಮಿಯಲ್ಲಿ ಶಾಲೆಗಳನ್ನು ನಿರ್ಮಿಸುತ್ತವೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಶಾಲೆಯು ತರಗತಿ ಕೊಠಡಿಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು, ಶೌಚಾಲಯಗಳು ಮತ್ತು ಸಿಬ್ಬಂದಿ ಕೊಠಡಿಗಳು ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿರುತ್ತದೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕ ಯೋಜನೆ ಆರಂಭವಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ಕೆಲವು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಿರ್ವಹಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಕೇಳುತ್ತದೆ. ಅಗತ್ಯವಿರುವ ಕಡೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಈ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ