ನೊಂದವರೆಂಬ ಮುಸುಕು ಹೊದ್ದಿರುವ ಇಸ್ರೇಲಿನ ನೆಲೆಸಿಗ ವಸಾಹತುಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ವಿಸ್ತರಣಾಕೋರ ಪ್ರವೃತ್ತಿ , ಜನಾಂಗಭೇದ ನೀತಿ, ನರಮೇಧಕ್ಕೂ ಹಿಂಜರಿಯದ ಜನಾಂಗೀಯ ‘ಶುದ್ಧೀಕರಣ’ದ ಪ್ರವೃತ್ತಿ – ವಲಸಿಗ ವಸಾಹತುಶಾಹಿಯ ಈ ಎಲ್ಲ ಲಕ್ಷಣಗಳನ್ನೂ ಇಸ್ರೇಲ್ ಪ್ರಭುತ್ವ ಮೈಗೂಡಿಸಿಕೊಂಡಿದೆ. ಇಸ್ರೇಲಿ ಬಲಪಂಥೀಯರಿಗೆ, ಶತಮಾನಗಳ ಕಾಲ ಯಹೂದಿಗಳು ಅನುಭವಿಸಿದ ಕಿರುಕುಳ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಾಝಿ ಜರ್ಮನಿಯಲ್ಲಿ ನಡೆದ ಅವರ ಹತ್ಯಾಕಾಂಡವು ವಲಸಿಗ ವಸಾಹತುಶಾಹಿ ದಮನ ನಡೆಸಲು ಒಂದು ರೀತಿಯ ಮುಸುಕನ್ನು ಒದಗಿಸಿದೆ. ಇದಕ್ಕೆ ಪಾಶ್ಚಾತ್ಯ ಸಾಮ್ರಾಜ್ಯಶಾಹಿಗಳ ಬೆಂಬಲ ಶತಮಾನಗಳ ಕಾಲ ಪಾಶ್ಚಾತ್ಯ ದೇಶಗಳು ಯಹೂದಿಗಳಿಗೆ ನೀಡಿದ ಕಿರುಕುಳಗಳ ಬಗ್ಗೆ ಹೊಂದಿರುವ ತಮ್ಮ ಅಪರಾಧಿ ಭಾವನೆಯನ್ನು ನಿವಾರಿಸಿಕೊಳ್ಳುವ ಒಂದು ಮಾರ್ಗ. ಈ ವಲಸಿಗ ವಸಾಹತುಶಾಹಿಯನ್ನು ಕೇವಲ ಪ್ಯಾಲೆಸ್ತೀನಿ ಜನರ ಹಿತದೃಷ್ಟಿಯಿಂದ ಮಾತ್ರವಲ್ಲ, ಇಡೀ ವಿಶ್ವದ ಜನರ ಹಿತದೃಷ್ಟಿಯಿಂದ ತಡೆದು ನಿಲ್ಲಿಸಲೇಬೇಕು. ವಸಾಹತುಶಾಹಿ

ಹದಿನೆಂಟನೆಯ ಮತ್ತು ಹತ್ತೊಂಬತ್ತನೆಯ ಶತಮಾನಗಳು ವಸಾಹತುಶಾಹಿಯ ಎರಡು ವಿಭಿನ್ನ ಮಾದರಿಗಳ ಉಗಮವನ್ನು ಕಂಡವು: ಮೊದಲನೆಯದು, ಅದಾಗಲೇ ಮಿಗುತಾಯವನ್ನು ಕಿತ್ತುಕೊಳ್ಳುವ ವ್ಯವಸ್ಥೆಗಳನ್ನು ರೂಢಿಸಿಕೊಂಡು, ಅದರಿಂದ ಪೋಷಣೆ ಪಡೆದ ಕೇಂದ್ರೀಕೃತ ಆಡಳಿತವನ್ನು ಸ್ಥಾಪಿಸಿಕೊಂಡಿದ್ದ ದೇಶಗಳನ್ನು ವಶಪಡಿಸಿಕೊಂಡು ಅಲ್ಲಿ ಹಳೆಯ ಆಡಳಿತ ವ್ಯವಸ್ಥೆಗಳನ್ನು ಬದಲಿಸಿ ವಸಾಹತುಶಾಹಿ ಆಳ್ವಿಕೆಯನ್ನು ಸ್ಥಾಪಿಸುವುದು. ವಸಾಹತುಶಾಹಿಯ ಈ ವಿಧಾನಕ್ಕೆ ಭಾರತ ಒಂದು ಅತ್ಯುತ್ತಮ ಉದಾಹರಣೆ. ಸ್ಥಳೀಯ ಕುಶಲಕರ್ಮಿಗಳನ್ನು ನಾಶಪಡಿಸುವುದು ಮತ್ತು ಆ ಮೂಲಕ ಯುರೋಪಿನಲ್ಲಿ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದಲ್ಲದೆ, ಕಸಿದುಕೊಂಡ ಮಿಗುತಾಯವನ್ನು ಮೆಟ್ರೊಪಾಲಿಟನ್ ದೇಶಗಳಿಗೆ ಬೇಕಾಗುವ ಸರಕುಗಳ ರೂಪದಲ್ಲಿ ಸಾಗಿಸುವುದು ಈ ಮಾದರಿಯ ಸಾರಾಂಶ. ಆದರೆ ಈ ದೇಶಗಳಲ್ಲಿನ ಜನಸಂಖ್ಯಾ ಬಾಹುಳ್ಯ ಮತ್ತು ಉಷ್ಣ ಹವಾಗುಣದಿಂದಾಗಿ ಈ ದೇಶಗಳಿಗೆ ಸಮಶೀತೋಷ್ಣ ಹವಾಗುಣದ ಯೂರೋಪಿನ ದೇಶಗಳ ಜನರ ವಲಸೆ ನಡೆದದ್ದು ಬಹಳ ಕಡಿಮೆ.

ಎರಡನೆಯ ಮಾದರಿಗೆ ಅಮೆರಿಕಾ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಸ್ಥಳೀಯ ಜನರನ್ನು ಅವರ ಭೂಮಿಯಿಂದಲೇ ಹೊರದಬ್ಬುವುದು ಮತ್ತು ಹೊರದಬ್ಬಿದ ವಸಾಹತುಗಾರರೇ ಅದನ್ನು ಆಕ್ರಮಿಸಿಕೊಳ್ಳುವುದು ಮತ್ತು ಅಂಥಹ ಪ್ರದೇಶಗಳನ್ನು ವಶಪಡಿಸಿಕೊಂಡ ಮಾದರಿ ಇದು. ಮೆಟ್ರೊಪಾಲಿಟನ್(ಯುರೋಪಿಯನ್) ದೇಶಗಳಿಂದ ವಲಸೆ ಹೋಗುವುದು ಮತ್ತು ಸ್ಥಳೀಯ ನಿವಾಸಿಗಳಿಂದ ಭೂಮಿಯನ್ನು (ಮತ್ತು ಅವರ ಇತರೆ ಕೆಲವು ಸ್ವತ್ತುಗಳನ್ನು) ಕಿತ್ತುಕೊಳ್ಳುವುದು, ಸ್ಥಳೀಯ ಜನರ ಸಂಹಾರ ಅಥವಾ ಅವರನ್ನು ಒಂದು “ಮೀಸಲು” ಪ್ರದೇಶ ಎನಿಸಿಕೊಂಡ ಕೊಂಪೆಗಳಿಗೆ ತಳ್ಳುವುದು ಈ ವಿಧಾನಸ ಸಾರಾಂಶ. ವಸಾಹತುಶಾಹಿಯ ಈ ಎರಡು ಮಾದರಿಗಳನ್ನು ನಾನು ಅನುಕ್ರಮವಾಗಿ “ಕಸಿದುಕೊಳ್ಳುವ ವಸಾಹತುಶಾಹಿ” ಮತ್ತು “ನೆಲಸಿಗ ವಸಾಹತುಶಾಹಿ” ಎಂದು ಕರೆಯುತ್ತೇನೆ.

ವಸಾಹತುಶಾಹಿಯ ಈ ಎರಡು ಮಾದರಿಗಳ ನಡುವಿನ ವ್ಯತ್ಯಾಸವೆಂದರೆ, ಒಂದು ಮಾದರಿಯಲ್ಲಿ ಭೂಮಿಯ ಉತ್ಪನ್ನಗಳನ್ನು ಕಸಿದುಕೊಳ್ಳಲಾಗುತ್ತಿತ್ತು ಮತ್ತು ಇನ್ನೊಂದರಲ್ಲಿ ಭೂಮಿಯನ್ನೇ ಕಸಿದುಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಮುಖ್ಯವಾದ ಅಂಶವೆಂದರೆ: ಮೊದಲನೆಯ ಮಾದರಿಯಲ್ಲಿ, ಭೂಮಿಯಲ್ಲಿ ಕೆಲಸ ಮಾಡಲು ಸ್ಥಳೀಯ ಜನರ ಅವಶ್ಯಕತೆ ಅಪಾರವಾಗಿತ್ತು. ಅವರು ಭೂಮಿಯಿಂದ ತೆಗೆದ ಫಸಲಿನ ಒಂದು ಬಹು ದೊಡ್ಡ ಪಾಲನ್ನು ವಸಾಹತುಶಾಹಿಯು ವಶಪಡಿಸಿಕೊಂಡ ಕಾರಣದಿಂದಾಗಿ ಸ್ಥಳೀಯ ಜನರು ಹೊಟ್ಟೆಗಿಲ್ಲದೆ ಸಾಯುತ್ತಿದ್ದರು. ಈ ವಿದ್ಯಮಾನವು ಬ್ರಿಟಿಷ್ ಭಾರತದಲ್ಲಿ ಕ್ಷಾಮಗಳ ರೂಪದಲ್ಲಿ ಮರುಕಳಿಸುತ್ತಿತ್ತು. ಆದರೆ, ವಸಾಹತುಶಾಹಿಯು ವಶಪಡಿಸಿಕೊಳ್ಳುವ ಮಿಗುತಾಯವನ್ನು ಉತ್ಪಾದಿಸಲು ಸಾಕಷ್ಟು ಮಂದಿ ಸ್ಥಳೀಯ ಜನರು ಬದುಕುಳಿಯಬೇಕಾದದ್ದು ಅನಿವಾರ್ಯವಾಗಿತ್ತು. ವಸಾಹತುಶಾಹಿ

ಅದಕ್ಕಾಗಿ, ವಸಾಹತು ಶಾಹಿಯು ಕೆಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಯಿತು. ಈ ಸುಧಾರಣಾ ಕ್ರಮಗಳ ಸಂಬಂಧವಾಗಿ ಎರಡನೆಯ ಮಾದರಿಯ ಬಗ್ಗೆ ಹೇಳುವುದಾದರೆ, ಅಂದರೆ ವಲಸಿಗ ವಸಾಹತುಶಾಹಿಯ ವಿಷಯದಲ್ಲಿ, ಅದಕ್ಕೆ ಸ್ಥಳೀಯ ಜನರನ್ನು ಸಂರಕ್ಷಿಸುವ ಅಗತ್ಯವೇ ಇರಲಿಲ್ಲ. ಏಕೆಂದರೆ, ಮೆಟ್ರೊಪಾಲಿಟನ್ ದೇಶಗಳಿಂದ ವಲಸೆ ಬಂದವರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೆ, ಅಥವಾ ಸ್ಥಳೀಯರನ್ನು ಸಂಹರಿಸಿ ಬೇರೆಡೆಯಿಂದ ಕಾರ್ಮಿಕರನ್ನು ಸುಲಭವಾಗಿ ಪಡೆಯಬಹುದಾದರೆ, ಸ್ಥಳೀಯರನ್ನು ಸಂರಕ್ಷಿಸುವ ಅಗತ್ಯ ಇರಲಿಲ್ಲ. ಹಾಗಾಗಿ, ವಲಸಿಗ ವಸಾಹತುಶಾಹಿಯು ವಿಶೇಷವಾಗಿ ಜನಾಂಗೀಯ ಶುದ್ಧೀಕರಣವನ್ನು ರೂಢಿಸಿಕೊಂಡಿತ್ತು. ಮತ್ತು, ಅದಕ್ಕಾಗಿ ನರಮೇಧವನ್ನೂ ನಡೆಸಿತ್ತು.

ವಲಸಿಗ ವಸಾಹತುಶಾಹಿಯು ಮತ್ತೊಂದು ಪ್ರಮುಖ ಲಕ್ಷಣವೆಂದರೆ ಅದು ವಿಸ್ತರಣಾಕೋರವಾಗಿರುತ್ತದೆ. ವಲಸೆ ಮುಂದುವರಿಯುತ್ತಿದ್ದಂತಯೇ, ವಲಸಿಗರು ಆಕ್ರಮಿಸಿಕೊಳ್ಳುವ ಭೂಮಿಯ ವಿಸ್ತೀರ್ಣವೂ ಹೆಚ್ಚುತ್ತಲೇ ಇರುತ್ತದೆ ಎಂಬ ಅರ್ಥದಲ್ಲಿ ಅದು ವಿಸ್ತರಣಾಕೋರವಾಗಿರುತ್ತದೆ. ಆಕ್ರಮಿಸಬಹುದಾದ ಭೂಮಿಯ ನೈಸರ್ಗಿಕ ಮಿತಿಯನ್ನು ತಲುಪುವವರೆಗೂ ಅಥವಾ ಆಕ್ರಮಣಕ್ಕೆ ಪಕ್ಕದ ಬಲಿಷ್ಟ ಪ್ರಭುತ್ವವಿದ್ದಲ್ಲಿ ಅದರ ಗಡಿಗಳು ಅಡ್ಡಿಯಾಗುವವರೆಗೂ ಭೂಮಿಯ ಅತಿಕ್ರಮಣ ಮುಂದುವರೆಯುತ್ತಲೇ ಇರುತ್ತದೆ.

ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು ವಸಾಹತುಶಾಹಿ

ಆಧುನಿಕ ವಲಸಿಗ ವಸಾಹತುಶಾಹಿಗೆ ಒಂದು ಉದಾಹರಣೆ

ಇವೆಲ್ಲವೂ ಗತಕಾಲಕ್ಕೆ ಸೇರಿದ್ದು ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ; ಬಂಡವಾಳಶಾಹಿಯ ಅಡಿಯಲ್ಲಿ ಸಾಮ್ರಾಜ್ಯಶಾಹಿಯು ಒಂದು ವಾಸ್ತವವಾಗಿ ಉಳಿದಿದೆಯಾದರೂ, ವಸಾಹತುಶಾಹಿಯು ಈಗ ಅಷ್ಟೇನೂ ಪ್ರಸ್ತುತವಲ್ಲ ಎಂದು ಕೆಲವರು ಹೇಳುತ್ತಾರೆ. ಇದು ತಪ್ಪೇ ತಪ್ಪು. ಏಕೆಂದರೆ, ಇಂದಿನ ಕಾಲಮಾನದಲ್ಲೂ, ವಸಾಹತುಶಾಹಿ ಇದೆ ಎಂಬುದಕ್ಕೆ ಇಸ್ರೇಲ್ ಒಂದು ಉತ್ತಮ ಉದಾಹರಣೆಯಾಗಿದೆ. ಹಲವು ಶತಮಾನಗಳಿಂದಲೂ ಅಲ್ಪಸಂಖ್ಯಾತ ಯಹೂದಿಗಳು ಹಿಂಸೆ, ಕಿರುಕುಳಗಳಿಗೆ ಒಳಗಾಗಿದ್ದರು. 1939-1945ರ ಅವಧಿಯಲ್ಲಿ ಜರ್ಮನಿಯಲ್ಲಿ ನಾಜಿಗಳು ನಡೆಸಿದ ಹತ್ಯಾಕಾಂಡದಲ್ಲಿ ಅವು ಭಯಾನಕ ಪರಾಕಾಷ್ಠೆಯನ್ನು ಕಂಡವು. ನಂತರ, ಒಂದು ವೈಷಮ್ಯಭರಿತ ಜಗತ್ತಿನಿಂದ, ಬ್ರಿಟಿಷ್ ವಸಾಹತುಶಾಹಿಯ ಪ್ರೋತ್ಸಾಹದಿಂದ ನಿರಾಶ್ರಿತರಾಗಿ ಪ್ಯಾಲೆಸ್ಟೈನ್‌ಗೆ ಬಂದರು ಮತ್ತು 1948ರಲ್ಲಿ ಅದು ತಮ್ಮದೇ ಪವಿತ್ರ ನಾಡು ಎಂಬ ದಾವೆಯೊಂದಿಗೆ ಇಸ್ರೇಲ್‌ನ ಝಿಯೋನಿಸ್ಟ್ ಪ್ರಭುತ್ವವನ್ನು ಸ್ಥಾಪಿಸಿದರು.

ಆದರೆ, ಸಾಮ್ರಾಜ್ಯಶಾಹಿ ಅಮೆರಿಕಾದ ಒಳಸಂಚುಗಳು ಮತ್ತು ಅದರ ಸಕ್ರಿಯ ಹಸ್ತಕ್ಷೇಪಗಳೊಂದಿಗೆ ಮತ್ತು ಆ ದೇಶದಲ್ಲಿ ಒಂದಾದ ಮೇಲೊಂದರಂತೆ ಅಧಿಕಾರಕ್ಕೆ ಬಂದ ಬಲಪಂಥೀಯ ಸರ್ಕಾರಗಳಿಂದಾಗಿ, ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಒಂದು ಆಶ್ರಯ ತಾಣವೆಂದು ಸ್ಥಾಪನೆಯಾದ ಆ ದೇಶವು, ಈಗ ಆಧುನಿಕ ವಲಸಿಗ ವಸಾಹತುಶಾಹಿಗೆ ಒಂದು ಉದಾಹರಣೆಯಾಗಿ ನಿಂತಿದೆ. ಅದರ ಅಂತರ್ಗತ ವಿಸ್ತರಣಾ ಪ್ರವೃತ್ತಿಯಿಂದ ಹಿಡಿದು, ದೇಶದ ಸಶಸ್ತ್ರ ವಲಸಿಗರನ್ನು ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯಂತಹ ಹೊಸ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಪ್ರೋತ್ಸಾಹ, ಜನಾಂಗೀಯ ಶುದ್ಧೀಕರಣದ ಪ್ರವೃತ್ತಿ ಮತ್ತು ಈಗ ನರಮೇಧವನ್ನೂ ನಡೆಸುವವರೆಗೆ, ಆ ದೇಶವು ವಲಸಿಗ ವಸಾಹತುಶಾಹಿಯ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡಿದೆ.

ಜನಾಂಗಭೇದ ಆಳ್ವಿಕೆ ಎಲ್ಲ ವಲಸಿಗ ವಸಾಹತುಶಾಹಿಗಳ ವಿಶೇಷ ಲಕ್ಷಣ. ಈ ಗುಣಲಕ್ಷಣವು ಒಂದು ರೀತಿಯಲ್ಲಿ ಎಲ್ಲ ವಸಾಹತುಶಾಹಿಗಳಿಗೂ ಅನ್ವಯಿಸುತ್ತದೆ. ಅಲ್ಲಿನ ಪ್ರತಿ ವಸಾಹತು ನಗರದೊಳಗೂ ವಸಾಹತುಶಾಹಿ ಯಜಮಾನರು ವಾಸಿಸುವ ಪ್ರದೇಶ, ಅವರು ಕೆಲಸ ಮಾಡುವ ಪ್ರದೇಶ ಮತ್ತು ಸಾಮಾನ್ಯ ಜನರು ವಾಸಿಸುವ ಪ್ರದೇಶಗಳ ನಡುವೆ ಕಟ್ಟುನಿಟ್ಟಾದ ವಿಭಜನೆ ಇರುತ್ತದೆ. ವಲಸಿಗ ವಸಾಹತುಶಾಹಿಯ ಅಡಿಯಲ್ಲಿ, “ಬಿಳಿಯರ” ಪ್ರದೇಶಗಳು ಕೇವಲ ಕೆಲವೇ ಕೆಲವು ಮಂದಿ ವಸಾಹತುಶಾಹಿ ಅಧಿಕಾರಿಗಳಿಗೆ ಸ್ಥಳಾವಕಾಶ ನೀಡುತ್ತವೆ ಮಾತ್ರವಲ್ಲ, ಒಂದು ಬಹು ದೊಡ್ಡ ಸಂಖ್ಯೆಯ ವಲಸಿಗರಿಗೂ ಸ್ಥಳಾವಕಾಶ ನೀಡುತ್ತವೆ. ಇದು ಜನಾಂಗಭೇದ ನೀತಿಯ ಪರಿಸ್ಥಿತಿಯನ್ನು ನಿಕಟವಾಗಿ ಹೋಲುತ್ತದೆ. ವಸಾಹತುಶಾಹಿಯ  ಸಮಕಾಲೀನ ಉದಾಹರಣೆಯಾದ ಇಸ್ರೇಲ್ ಕೂಡ ಜನಾಂಗಭೇದ ನೀತಿಯ ಅತ್ಯುತ್ತಮ ಚಿತ್ರಣವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ವಸಾಹತುಶಾಹಿ

ಸಾಮ್ರಾಜ್ಯಶಾಹಿಗಳ ‘ಪ್ರಾಯಶ್ಚಿತ್ತ’ ಕ್ರಮ!

ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ಸ್ಥಿರವಾದ ಬೆಂಬಲವಿಲ್ಲದೆ ಇಸ್ರೇಲಿ ವಸಾಹತುಶಾಹಿ ಮೇಲೇಳುತ್ತಿರಲಿಲ್ಲ ಸಾಮ್ರಾಜ್ಯಶಾಹಿಗಳಿಗೆ ಮೊಟ್ಟಮೊದಲನೆಯದಾಗಿ ಇದು, ಹಲವು ಶತಮಾನಗಳ ಕಾಲ ಯಹೂದಿಗಳಿಗೆ ನೀಡಿದ ಕಿರುಕುಳಗಳ ಬಗ್ಗೆ ತಾವು ಹೊಂದಿರುವ ಅಪರಾಧಿ ಭಾವನೆಯನ್ನು ನಿವಾರಿಸಿಕೊಳ್ಳುವ ಒಂದು ಮಾರ್ಗವಾಗಿದೆ. ಈ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ದೇಶಗಳು, ಪ್ಯಾಲೆಸ್ತೀನೀಯರಿಗೆ ಇಸ್ರೇಲ್ ಕೊಡುತ್ತಿರುವ ಕಿರುಕುಳಗಳನ್ನು ಬೆಂಬಲಿಸುವ ಮೂಲಕ ತಮ್ಮನ್ನು ತಾವು ಅಪರಾಧ ಮುಕ್ತಗೊಳಿಸಿಕೊಳ್ಳುತ್ತಿವೆ. ಮತ್ತು, ಇಸ್ರೇಲಿ ಬಲಪಂಥೀಯರಿಗೆ, ಶತಮಾನಗಳ ಕಾಲ ಯಹೂದಿಗಳು ಅನುಭವಿಸಿದ ಕಿರುಕುಳ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜರ್ಮನಿಯಲ್ಲಿ ನಡೆದ ಹತ್ಯಾಕಾಂಡವು ವಲಸಿಗ ವಸಾಹತುಶಾಹಿಗೆ ಒಂದು ರೀತಿಯ ಮುಸುಕನ್ನು ಒದಗಿಸಿದೆ.

ಈ ವಸಾಹತುಶಾಹಿಯ ಬಗ್ಗೆ ಮತ್ತು ಅದರ ಸಂಬಂಧಿತ ವಿದ್ಯಮಾನಗಳಾದ ಜನಾಂಗಭೇದ ನೀತಿ, ವಿಸ್ತರಣಾವಾದ, ಜನಾಂಗೀಯ ಶುದ್ಧೀಕರಣ ಮತ್ತು ನರಮೇಧದ ಬಗ್ಗೆ ಮಾಡುವ ಯಾವುದೇ ಟೀಕೆಗೂ ತಕ್ಷಣವೇ “ಯಹೂದಿ- ದ್ವೇಷ” ಎಂಬ ಕಳಂಕವನ್ನು ಹಚ್ಚಲಾಗುತ್ತದೆ. ಇದು ಹತ್ಯಾಕಾಂಡಗಳ ಚರಿತ್ರೆ ಹೊಂದಿದ ಮತ್ತು ಇತ್ತೀಚೆಗೆ ನಾಜಿಸಂನೊಂದಿಗೆ ಹೊಂದಿದ ಸಂಬಂಧದ ಕಾರಣದಿಂದಾಗಿ ಅಸಹ್ಯಕರವೂ ಹೌದು.

ಇಸ್ರೇಲಿ ಸರ್ಕಾರವು ಗಾಝಾದ ಜನರ ಮೇಲೆ ಪ್ರಸ್ತುತ ನಡೆಸುತ್ತಿರುವ ದಾಳಿಯ ನಡುವೆಯೂ, ಅನೇಕ ಮೆಟ್ರೋಪಾಲಿಟನ್ ನಗರಗಳಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನಾ ಪ್ರದರ್ಶನಗಳನ್ನು ನಿಷೇದಿಸುತ್ತಿರುವುದು ಈಗಿನ ಪರಿಸ್ಥಿತಿಯು ಸಾಮ್ರಾಜ್ಯಶಾಹಿಗೆ ಮತ್ತು ಎಲ್ಲೆಡೆಯ ಬಲಪಂಥೀಯರಿಗೆ ಹೆಚ್ಚು ಅನುಕೂಲಕರವಾಗಿದೆ ಎಂಬುದನ್ನು ತೋರಿಸುತ್ತದೆ, ಆದರೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಸರ್ಕಾರಗಳ ಅಸಮ್ಮತಿಯ ಹೊರತಾಗಿಯೂ ಅವು ಸಂಭವಿಸುತ್ತಿವೆ. ವಾಸ್ತವವಾಗಿ, ಲಂಡನಿನಲ್ಲಿ ನಡೆದ ಇಂತಹ ಪ್ರತಿಭಟನಾ ಪ್ರದರ್ಶನಗಳು ಲಂಡನ್ ಪೊಲೀಸ್ ಪ್ಯಾಲೆಸ್ಟೈನ್ಪರ ಪಕ್ಷಪಾತಿ ಎಂದು ಆರೋಪಿಸುವಂತೆ ಸ್ವತಃ ಬ್ರಿಟಿಷ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್ಮನ್ ರನ್ನು ಪ್ರೇರೇಪಿಸಿದೆ.

ವಲಸಿಗ ಇಸ್ರೇಲಿ ವಸಾಹತುಶಾಹಿಗೆ ಸಾಮ್ರಾಜ್ಯಶಾಹಿ ದೇಶಗಳು ನೀಡುತ್ತಿರುವ ಬೆಂಬಲದ ಹಿಂದಿರುವ ಎರಡನೆಯ ಕಾರಣವೆಂದರೆ, ದೇಶಗಳು ಹಿಂದೆ ವಲಸಿಗ ವಸಾಹತುಶಾಹಿಯ ಮೂಲಕ ಅಸ್ತಿತ್ವಕ್ಕೆ ಬಂದವುಗಳು ಅಥವಾ ಅದರಿಂದ ಪ್ರಯೋಜನ ಪಡೆದವುಗಳು. ಅಮೆರಿಕಾ, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ವಲಸಿಗ ವಸಾಹತುಶಾಹಿಯ ಉತ್ಪನ್ನಗಳೇ. ಜನಾಂಗೀಯ ಶುದ್ಧೀಕರಣವನ್ನು ಸ್ವತಃ ತಮ್ಮ ಉದಯದ ಸಾಧನವಾಗಿ ಬಳಸಿಕೊಂಡ ನಂತರ, ಅವರು ಜನಾಂಗೀಯ ಶುದ್ಧೀಕರಣದ ಆಚರಣೆಯನ್ನು ಈಗ ವಿರೋಧಿಸುವುದು ಸಾಧ್ಯವಿಲ್ಲ, ಅದರಲ್ಲೂ ವಿಶೇಷವಾಗಿ ಇಸ್ರೇಲ್ ನಂತಹ ತಮ್ಮ ಪ್ರೀತಿ ಪಾತ್ರ ದೇಶವು ಅದನ್ನು ಆಚರಿಸುತ್ತಿರುವಾಗ.

ಸಾಮ್ರಾಜ್ಯಶಾಹಿಯ ಸ್ಥಳೀಯ ಮಾಂಡಲಿಕ

ಈ ದೇಶಗಳು ಇಸ್ರೇಲಿಗೆ ನೀಡುತ್ತಿರುವ ಸ್ಥಿರ ಬೆಂಬಲದ ಹಿಂದಿರುವ ಪ್ರಬಲ ಕಾರಣವೆಂದರೆ, ಇಸ್ರೇಲ್ ಪಶ್ಚಿಮ ಏಷ್ಯಾದಲ್ಲಿ ಸಾಮ್ರಾಜ್ಯಶಾಹಿಯ ಸ್ಥಳೀಯ ಮಾಂಡಲಿಕನಾಗಿ ಮತ್ತು ಅದರ ಪರಿಣಾಮಕಾರಿ ಮಿತ್ರನಾಗಿ ಆವಿರ್ಭವಿಸಿದೆ. ಸಾಮ್ರಾಜ್ಯಶಾಹಿಯು ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಹಲವು ಹತ್ತು ಪ್ರಯತ್ನಗಳನ್ನು ಸತತವಾಗಿ ಮಾಡಿದೆ. ಈ ಪ್ರದೇಶದ ಪ್ರಗತಿಪರ-ಜಾತ್ಯತೀತ, ಎಡ ಮತ್ತು ಕಮ್ಯುನಿಸ್ಟ್ ಚಳುವಳಿಗಳನ್ನು ದುರ್ಬಲಗೊಳಿಸುವುದಕ್ಕಾಗಿ (ಕೆಲವು ವರ್ಷಗಳ ಹಿಂದೆ ಅರಬ್ ಜಗತ್ತಿನಲ್ಲಿ ಕಮ್ಯುನಿಸಂ ಒಂದು ಬಹಳ ಬಲವಾದ ನೆಲೆಯನ್ನು ಹೊಂದಿತ್ತು), ಇಸ್ಲಾಮಿಕ್ ಮೂಲಭೂತವಾದಿ ಗುಂಪುಗಳನ್ನು (ಹಮಾಸ್ ಕೂಡ ಸೇರಿದಂತೆ)ಬೆಂಬಲಿಸುವುದರಿಂದ ಹಿಡಿದು, ಮಿಲಿಟರಿ ಕಾರ್ಯಾಚರಣೆ ನಡೆಸುವ ವರೆಗೆ ಹಲವಾರು ಹತ್ಯಾರಗಳನ್ನು ಬಳಕೆ ಮಾಡಿದೆ. ಸಾಮ್ರಾಜ್ಯಶಾಹಿಯ ಬತ್ತಳಿಕೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಆಯುಧವೆಂದರೆ, ಇಸ್ರೇಲಿ ವಲಸಿಗ ವಸಾಹತುಶಾಹಿಗೆ ಸ್ಥಿರ ಬೆಂಬಲ ನೀಡುತ್ತಾ ಬಂದಿರುವ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಾ ಬಂದಿರುವ ಕ್ರಮವೇ. ಗಾಝಾದಲ್ಲಿ ನಡೆಯುತ್ತಿರುವ ನರಮೇಧದ ನಡುವಿನಲ್ಲೂ, ತಕ್ಷಣವೇ ಕದನ ವಿರಾಮ ಕೋರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ವಿರುದ್ಧ ಅಮೆರಿಕಾ ಮತ ಚಲಾಯಿಸಿದ್ದು ಆಶ್ಚರ್ಯವೇನಲ್ಲ.

ಇದನ್ನೂ ಓದಿ: ನಿವೇಶನ (site) ಕೊಳ್ಳುವಾಗ ಎಚ್ಚರವಿರಲಿ.

ಮಾನವೀಯಕಾರಣಗಳಿಗಾಗಿ ತನ್ನ ದಾಳಿಯಲ್ಲಿ ಸಾಂದರ್ಭಿಕವಾಗಿವಿರಾಮವಿರುವಂತೆ ಇಸ್ರೇಲ್ ನೋಡಿಕೊಳ್ಳಬೇಕು ಎಂದು ಅಮೆರಿಕಾ ಹೇಳುವುದು ಒಂದು ವಿಪರ್ಯಾಸವೇ ಸರಿ. ಇಸ್ರೇಲ್ ತನಗೆ ತೃಪ್ತಿಯಾಗುವಷ್ಟು ಪ್ಯಾಲೆಸ್ತೀನಿಯರನ್ನು ಕೊಲ್ಲಲಿ ಮತ್ತು ಗಾಯಗೊಳಿಸಲಿ, ಆದರೆ, ಸತ್ತವರನ್ನು ಮತ್ತು ಗಾಯಗೊಂಡವರನ್ನು ಆಗಾಗ ಸಾಗಿಸಬೇಕೆಂದು ಮಾನವ ಧರ್ಮ ಬಯಸುತ್ತದೆ ಎಂದು ಹೇಳಿದಂತಿದೆ ಅದರ ಮಾನವತಾವಾದ! ವಲಸಿಗ ಇಸ್ರೇಲಿ ವಸಾಹತುಶಾಹಿಯನ್ನು ಮುಂದುವರೆಯಲು ಬಿಟ್ಟರೆ, ಅದು ಕಂಡುಕೊಳ್ಳುವ ಅನಿವಾರ್ಯ ತಾರ್ಕಿಕ ಪರಿಹಾರವೆಂದರೆ, ಪ್ಯಾಲೆಸ್ತೀನಿ ಜನರನ್ನು ಜನಾಂಗೀಯ ಶುದ್ಧೀಕರಣದ ನರಮೇಧಕ್ಕೆ ಗುರಿಪಡಿಸುವುದು. ಯೂರೋಪಿನಿಂದ ಬಂದ ವಲಸಿಗರು ಸ್ಥಳೀಯ ಅಮೆರಿಂಡಿಯನ್ನರನ್ನು ಕೊಳೆಹಾಕುತ್ತಿದ್ದಮೀಸಲುಪ್ರದೇಶಗಳನ್ನು ನೆನಪಿಸುವ ರೀತಿಯ ಗಾಝಾದತೆರೆದ ಜೈಲುಗಳಲ್ಲಿ ದನಗಳನ್ನು ರೊಪ್ಪದಲ್ಲಿ ಕೂಡಿಹಾಕುವಂತೆ ಪ್ಯಾಲೆಸ್ತೀನಿಯರನ್ನು ಕೂಡಿಹಾಕುವ ಕ್ರಮವು

ತನ್ನಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಕಾಗುವುದಿಲ್ಲ ಎಂದು ಇಸ್ರೇಲ್ ಭಾವಿಸಿದೆ. ಸನ್ನಿವೇಶದಲ್ಲಿ ಇಸ್ರೇಲಿ ಕಟ್ಟಡ ನಿರ್ಮಾಣ ಸಂಸ್ಥೆಗಳು ಪ್ಯಾಲೆಸ್ಟೀನಿ ಕೆಲಸಗಾರರ ಬದಲಿಗೆ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಯಸುತ್ತವೆ ಎಂಬುದು ಮೂರನೇ ಜಗತ್ತಿನಲ್ಲೊಂದು ಬೃಹತ್ತಾದ ಕಾರ್ಮಿಕ ಮೀಸಲು ಪಡೆ ಇರುವುದರಿಂದಾಗಿ, ಪ್ಯಾಲೆಸ್ತೀನಿಯರನ್ನು ಅನವಶ್ಯಕವೆಂದು ಪರಿಗಣಿಸಿದ ರೀತಿಯಲ್ಲೇ, ಯಾವುದೇ ಒಂದು ನಿರ್ದಿಷ್ಟ ಗುಂಪಿನ ಜನರು ತಮಗೆ ಅನವಶ್ಯಕ ಎಂದು ವಲಸಿಗ ಇಸ್ರೇಲಿ ವಸಾಹತುಶಾಹಿಯು ಭಾವಿಸುತ್ತದೆ ಎಂಬುದನ್ನು ಎತ್ತಿ ತೋರುತ್ತದೆ.

ವಲಸಿಗ ವಸಾಹತುಶಾಹಿಯನ್ನು ಕೇವಲ ಪ್ಯಾಲೆಸ್ತೀನಿ ಜನರ ಹಿತದೃಷ್ಟಿಯಿಂದ ಮಾತ್ರವಲ್ಲ, ಇಡೀ ವಿಶ್ವದ ಜನರ ಹಿತದೃಷ್ಟಿಯಿಂದ ತಡೆದು ನಿಲ್ಲಿಸಲೇಬೇಕು. ಏಕೆಂದರೆ, ಶತಮಾನಗಳ ಅವಧಿಯಲ್ಲಿ ಯೂರೋಪಿನಲ್ಲಿ ಯಹೂದಿಗಳು ಅನುಭವಿಸಿದ ಯಾತನೆಗಳ ಕಾರಣದ ಮೇಲೆ ತಾನು ಮಾತ್ರವೇ ಧರ್ಮಿಷ್ಠ ಎಂಬ ಮುಸುಕು ಹಾಕಿಕೊಂಡಿರುವ ಇಸ್ರೇಲ್, ಸಮಕಾಲೀನ ಸಾಮ್ರಾಜ್ಯಶಾಹಿಯ ಅತ್ಯಂತ ಆಕ್ರಮಣಕಾರಿ ಮತ್ತು ನಿರ್ದಯ ನಿರ್ಲಿಪ್ತತೆಯನ್ನು ಪ್ರತಿನಿಧಿಸುತ್ತದೆ. ವಿಶ್ವ ಸಾರ್ವಜನಿಕ ಅಭಿಪ್ರಾಯದ ಒತ್ತಡದಿಂದ ನಮಾತ್ರ ಇಸ್ರೇಲನ್ನು ತಡೆದು ನಿಲ್ಲಿಸಬಹುದು. ಕೊಲಂಬಿಯಾ, ಬೊಲಿವಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಅನೇಕ ದೇಶಗಳು ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿವೆ. ಪ್ಯಾಲೆಸ್ತೀನಿಯರಿಗೆ ವಿಶ್ವಾದ್ಯಂತ ಅಪಾರ ಬೆಂಬಲವನ್ನು ವ್ಯಕ್ತಪಡಿಸಲಾಗುತ್ತಿದೆ.

ಹಲವಾರು ಮೆಟ್ರೋಪಾಲಿಟನ್ ದೇಶಗಳಲ್ಲಿ ಸಾರ್ವಜನಿಕ ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತಿವೆ. ಅವುಗಳಲ್ಲಿ ಭಾಗವಹಿಸುವವರ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವವಾಗಿದೆ. ಅನೇಕ ಪ್ರದರ್ಶನಗಳನ್ನು ಸ್ಥಳೀಯ ಯಹೂದಿ ಜನರು ಬೆಂಬಲಿಸಿದ್ದಾರೆ ಅಥವಾ ಆಯೋಜಿಸಿದ್ದಾರೆ. ಅವರು ಗಾಝಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಮತ್ತು ನರಮೇಧವನ್ನು ವಿರೋಧಿಸುವವರನ್ನು ಯಹೂದಿದ್ವೇಷಿಗಳೆಂದು ಮಸಿಬಳಿಯುವ ನಡವಳಿಕೆಯನ್ನು ವಿರೋಧಿಸಿದ್ದಾರೆ. ಸಿಡಿದೇಳುತ್ತಿರುವ ವಿಶ್ವವ್ಯಾಪಿ ಪ್ರತಿರೋಧದ ಯಶಸ್ಸಿನ ಮೇಲೆ ಪ್ಯಾಲೆಸ್ತೀನಿ ಜನರ ಭವಿಷ್ಯ ಮಾತ್ರವಲ್ಲ, ವಿಶ್ವದ ಜನತೆಯ ಭವಿಷ್ಯವೂ ನಿರ್ಣಾಯಕವಾಗಿ ಅವಲಂಬಿತವಾಗಿದೆ.

ವಿಡಿಯೋ ನೋಡಿ: ಬೆಂಗಳೂರು ಕೃಷಿ ಮೇಳ 2023 ಹೇಗಿತ್ತು? ಎಷ್ಟು ಜನ ಭಾಗವಹಿಸಿದ್ದರು, ಗಳಿಸಿದ ಆದಾಯ ಎಷ್ಟು? ಒಂದು ರೌಂಡಪ್‌

Donate Janashakthi Media

Leave a Reply

Your email address will not be published. Required fields are marked *