ಕೇರಳ ಮಂತ್ರಿ ಮಂಡಲ ಸೇರಿದ್ದು ಪುಟ್ಟ ಹಳ್ಳಿಯಲ್ಲಿ

ಬಾಬು ಪಿಲಾರ್

ತುಳುನಾಡಿನ ಸಂಪ್ರದಾಯಸ್ಥ ಮದುವೆಗಳಲ್ಲಿ ಮದುಮಗನು ಧರಿಸುವಂತಹ ಪೇಟವನ್ನು  ತೊಡಿಸಿ ಫಲವಸ್ತುಗಳನ್ನು ನೀಡಿ ಮಂತ್ರಿಗಳನ್ನು ಸ್ವಾಗತಿಸಲಾಯಿತು. ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದರಿಂದ ಯಾವುದೇ ಪಕ್ಷದ ಬಾವುಟಗಳಿರಲಿಲ್ಲ ಚಿಹ್ನೆಗಳಿರಲಿಲ್ಲ.

ದೇಶದ ಇತಿಹಾಸದಲ್ಲೆ ಮೊತ್ತ ಮೊದಲ ಬಾರಿಗೆ ಜನರ ಬಳಿಗೆ ಬಂದ ಸಚಿವ ಸಂಪುಟಕ್ಕೆ ಕೇರಳ ರಾಜ್ಯವೊಂದು ಸಾಕ್ಷಿಯಾಯಿತು. ರಾಜ್ಯದ ಉತ್ತರ ಭಾಗವಾದ  ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಸಪ್ತ ಭಾಷೆಗಳ ಸಂಗಮ ನಾಡುˌತುಳು ಕನ್ನಡ ನೆಲದ ಅಸ್ಮಿತೆಯಾದ ಕವಿ ಗೋವಿಂದ ಪೈˌ ತನ್ನ ಕವಿತೆಗಳೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ನಾಡೋಜ ಕವಿ ಕಯ್ಯಾರ ಕಿಂಞಣ್ಣ ರೈ  ಜನಿಸಿದ ಪುಣ್ಯ ನೆಲˌ ಮತಸೌಹಾರ್ದತೆಗೆ ಹೆಸರಾಗಿರುವ ಶ್ರೀ ಅರಸು ಮಂಜಿಷ್ಣಾರ್ ದೈವಗಳ ನೆಲೆವೀಡುˌ ಆಯಿರ ಜಮಾತ್  ಆಲಿದೈವ ಕಾರಣಿಕದ  ಪ್ರಚಾರ ಹೊಂದಿರುವˌ ಪಶ್ಚಿಮಕ್ಕೆ ಅರಬ್ಬಿ ಸಮುದ್ರ

ಪೂರ್ವಕ್ಕೆ  ಹಸಿರು ಕಂಗೊಳಿಸುವ ಘಟ್ಟ ಪ್ರದೇಶಗಳನ್ನು ತಬ್ಬಿನಿಂತಿರುವˌ ಅಂತೆಯೇ ಭೂಮಿಗಾಗಿ ಭೂಮಾಲಕರ ವಿರುದ್ದ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ  ಕ್ರಾಂತಿಕಾರಿ ಸಂಗಾತಿಗಳಾದ  ಮಹಾಬಲ ಶೆಟ್ಟಿˌ ಜನ್ನಪ್ಪ ಶೆಟ್ಟಿˌ ಸುಂದರ ಶೆಟ್ಟಿ  ಒಡ ಜನ್ಮತಳೆದ  “ಪೈವಳಿಕೆ” ಎಂಬ ಪ್ರಶಾಂತವಾದ ನಾಡಿನಲ್ಲಿ  “ನವಕೇರಳ ಸಡಸ್” ಉದ್ಘಾಟನೆಗೊಂಡ ದಿನ 2023 ನವೆಂಬರ 18.

ಕೇರಳ ಎಡರಂಗ  ಸರಕಾರದ ಮುಖ್ಯಮಂತ್ರಿ ಹಾಗೂ  ಇಪ್ಪತ್ತು ಮಂತ್ರಿಗಳಿರುವ ಪೂರ್ಣಪ್ರಮಾಣದ ಸಚಿವ ಸಂಪುಟವು  ಪೈವಳಿಕೆ ಹೈಯರ್ ಸೆಕೆಂಡರಿ  ಶಾಲಾ ಮೈದಾನದಲ್ಲಿ ಸೇರುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಕೇರಳ ರಾಜ್ಯದ ಎಲ್ಲಾ 140ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ  ಡಿಸೆಂಬರ್ 24ರಂದು  ತಿರುವನಂತಪುರದಲ್ಲಿ ಈ ಯಾನವು ಸಮಾಪನಗೊಳ್ಳಲಿದೆ.

ಇಷ್ಟೊಂದು ಮಂತ್ರಿಗಳು ಬಳಸುವ  ಕಾರುಗಳೊಂದಿಗೆ ಅವರಿಗೆ  ಸಂಬಂಧ ಪಟ್ಟ ಅಧಿಕಾರಿಗಳ ಕಾರುಗಳು ಎಸ್ಕಾರ್ಟ್ ಕಾವಲು ಪಡೆಗಳ ವಾಹನಗಳು ಸೇರಿದಂತೆ  ಪಯಣ ಹೊರಟರೆ ಅದರಿಂದ  ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದೆಂಬ ಕಾರಣಕ್ಕೆ ಎಲ್ಲರೂ ಸೇರಿ ಒಂದೇ ಬಸ್ಸಿನಲ್ಲಿ ಹೋಗುವುದಾಗಿ ತೀರ್ಮಾನಿಸಲಾಗಿತ್ತು. ಅದರಂತೆ ಕಪ್ಪು  ಮಿಶ್ರಿತ ಕಂದು ಬಣ್ಣದಲ್ಲಿ  ಸ್ವರ್ಣ ಗೆರೆಗಳು ಮೂಡಿರುವˌ ಮಂತ್ರಿಗಳನ್ನು ಹೊತ್ತು ತಂದ ಬಸ್ಸೊಂದು ಆ ತಿಳಿಬಿಸಿಲ ಸಂಜೆಗೆ ಪೈವಳಿಕೆಗೆ ಬಂದು ತಲಪಿತು. ಆ  ಬಸ್ಸು ಭಾರತ್ ಬೆನ್ಝ್ ಹೆಸರಿನದ್ದಾಗಿತ್ತು. ( ಹಿಂದಿನ ದಿವಸ ಕೇರಳದ ಮಾಧ್ಯಮವೊಂದರಲ್ಲಿ ಚರ್ಚಿಸಲ್ಪಟ್ಟಿರುವ ಚೀನಾ ಬಸ್ಸ್  ಅಲ್ಲ ಎಂಬುದಕ್ಕೆ ಖಾತ್ರಿ)

ಕೊಂಬು ಕಹಳೆಯೊಂದಿಗೆ ತುಳುನಾಡ ಸಂಸ್ಕ್ರತಿಯನ್ನು ಬಿಂಬಿಸುವ ಸಾಂಪ್ರದಾಯಿಕ ರೀತಿಯಲ್ಲಿ ಮಂತ್ರಿ ವರ್ಯರನ್ನು ಸ್ವಾಗತಿಸಲಾಯಿತು.  ಮುಖ್ಯಮಂತ್ರಿ  ಪಿಣರಾಯಿ ವಿಜಯನ್ ರವರು ಇದರ ಕೇಂದ್ರ ಬಿಂದುವಾಗಿದ್ದರು.

ಸಚಿವ ಕೆ. ರಾಜನ್ ನೇತ್ರತ್ವದ  ನವಕೇರಳ ಸಭಾ ತಂಡವು ವೇದಿಕೆ ಏರುವಾಗ ಕರತಾಡಣಗಳ ಸುರಿಮಳೆ. ʼಕೊಂಬು ಕಹಳೆಗಳ ಮೇಳೈಕೆʼ ಜೋರಾಗಿದ್ದವು.   ಸಾಮಾನ್ಯರಲ್ಲಿ ಸಾಮಾನ್ಯರಂತೆ ಕೇರಳದ ಸಾಂಪ್ರದಾಯಿಕ ಉಡುಪಿನಲ್ಲೇ ವೇದಿಕೆ ಏರಿದ ಮಂತ್ರಿಗಳಿಗೆ ಬಿಗುವಾದ ಭದ್ರತೆಗಳು ಕಂಡು ಬರಲಿಲ್ಲ. ಕಿಕ್ಕಿರಿದು ಸೇರಿದ ಸಭೆಯ ನಡುವಿನಿಂದಲೇ ಕೈಬೀಸುತ್ತಾ ಬಂದಿದ್ದ  ಮಂತ್ರಿಗಳು ನಿಜ ಅರ್ಥದಲ್ಲಿ ಜನ  ಪತಿನಿಧಿಗಳಾಗಿಯೇ ಕಂಡರು.

ತುಳುನಾಡಿನ ಸಂಪ್ರದಾಯಸ್ಥ ಮದುವೆಗಳಲ್ಲಿ ಮದುಮಗನು ಧರಿಸುವಂತಹ ಪೇಟವನ್ನು  ತೊಡಿಸಿ ಫಲವಸ್ತುಗಳನ್ನು ನೀಡಿ ಮಂತ್ರಿಗಳನ್ನು ಸ್ವಾಗತಿಸಲಾಯಿತು. ಇದೊಂದು ಸರಕಾರಿ ಕಾರ್ಯಕ್ರಮವಾಗಿದ್ದರಿಂದ ಯಾವುದೇ ಪಕ್ಷದ ಬಾವುಟಗಳಿರಲಿಲ್ಲ ಚಿಹ್ನೆಗಳಿರಲಿಲ್ಲ. ಆಡಳಿತ ಸಂಸ್ಥೆಗಳ ಅಧಿಕಾರಿಗಳು  ಸ್ಥಳೀಯ ಚುನಾಯಿತ ಸಂಸ್ಥೆಗಳ ಪ್ರತಿನಿಧಿ ಮುಖ್ಯಸ್ಥರುಗಳು  ಹಾಗೂ ಸಂಸ್ಥೆಗಳು  ನೇಮಿಸಿದ ನೀಲಿ ವಸ್ತ್ರಧಾರಿ ವಾಲೆಂಟಿಯರ್‌ಗಳೇ ಎಲ್ಲವನ್ನು ನಿರ್ವಹಿಸುತ್ತಿದ್ದರು.

ಇಲ್ಲಿ ಜವಾಬ್ದಾರಿ ವಹಿಸಬೇಕಿದ್ದ ಸ್ಥಳೀಯ ಶಾಸಕರ ಗೈರು ಹಾಜರಿ ಎದ್ದು ಕಾಣುತಿತ್ತು. ಆದ ಕಾರಣ ಆ ಜವಾಬ್ದಾರಿಯನ್ನು ಬೇರೆಯವರು ಹೊರುವುದು ಅನಿವಾರ್ಯವಾಗಿತ್ತು. ಜನರ ಅಹವಾಲುಗಳನ್ನು ಜನರ ಬಳಿಗೆ ಹೋಗಿ ತಿಳಿದುಕೊಳ್ಳಬೇಕೆಂಬ ಸರಕಾರದ ಈ ನಿರ್ಧಾರವನ್ನು ಕಾಂಗ್ರೇಸ್ ನೇತ್ರತ್ವದ ಯುಡಿಎಫ್  ವಿರೋಧಿಸಿತ್ತು. ಎಡರಂಗ ಬಲಾಢ್ಯವಲ್ಲದ ಮಂಜೇಶ್ವರ ಪ್ರದೇಶದಲ್ಲಿ ಬಾರೀ ಸಂಖ್ಯೆಯ ಜನಸೇರಿದ್ದಾರೆಂದರೆ  ಯೂಡಿಎಫ್‌ನ ನಿರ್ಧಾರವನ್ನು ಜನತೆ ಒಪ್ಪಿಕೊಂಡಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಮುಖ್ಯಮಂತ್ರಿಗಳ ಬಾಯಿಂದ ಈ ಮಾತು ಬಂದಾಗ  ಜೋರಾದ ಕರತಾಡಣ ಕೇಳಿಬಂತು.

ರಾಜ್ಯದ ಪ್ರಗತಿಯ ಬಗ್ಗೆ ಜನರೊಂದಿಗೆ ನೇರ ಸಂವಾದ ಬೆಳೆಸುವುದು,.

ದೇಶದ ಬಡತನ ಸೂಚ್ಯಂಕ ಪಟ್ಟಿಯಲ್ಲಿ ಕೇರಳವು  ಈಗ ಅತಿ ಕಡಿಮೆ ಅಂದ್ರೆ 0॰7%  ದಲ್ಲಿದೆ. 2025ನವೆಂಬರ 1ರ ಮೊದಲು ಕೇರಳವನ್ನು  ಅತಿಬಡತನ ದಾರಿದ್ರ್ಯದಿಂದ  ಸಂಪೂರ್ಣವಾಗಿ ಮೇಲೆತ್ತುವುದು  ಸರಕಾರದ ಗುರಿಯಾಗಿದೆ ಮತ್ತು ಪರಿಸರ ಮಾಲಿನ್ಯ ನಿರ್ಮೂಲನಗೊಳಿಸುವುದು  ಈ ನವಕೇರಳ ಸಭಾ ಯಾತ್ರೆಯ ಉದ್ದೇಶವಾಗಿದೆ. ಸರಕಾರದ ಈ ಉದ್ದೇಶಿತ ಕಾರ್ಯಗಳನ್ನು ನನಸು ಮಾಡುವುದಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು .

2016ರವರೆಗೆ ಅಧಿಕಾರದಲ್ಲಿದ್ದ  ಯುಡಿಎಫ್ ಸರಕಾರವು   ಕ್ಷೇಮನಿಧಿ ಪಿಂಚಣಿಯನ್ನು 18ತಿಂಗಳಲ್ಲಿ ಬಾಕಿಯಿರಿಸಿತ್ತು.  ಎಡರಂಗ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆ ಪೆನ್ಶನ್ ದಾರರ ಹಣ ಸಂದಾಯ ಮಾಡಿದೆ ಮತ್ತು 600ರೂಪೈಯಿದ್ದ ಪಿಂಚಣಿಯನ್ನು 1600ಕ್ಕೆ ಏರಿಸಿ 60ವರ್ಷಕ್ಕಿಂತ ಮೇಲ್ಪಟ್ಟ 60ಲಕ್ಷ ಜನರನ್ನು ಫಲಾನುಭವಿಗಳಾಗಿ ಗುರುತಿಸಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಇಲಾಖೆಗಳೇ ನಿರ್ಣಯಿಸಿದಂತೆ ಇಂಡಿಯಾದಲ್ಲೆ ಪ್ರಥಮ ಸ್ಥಾನದಲ್ಲಿದೆ.

ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು

ರಾಜ್ಯದ ಹೆದ್ದಾರಿಗಳನ್ನು ಮುಖ್ಯ ರಸ್ತೆಗಳನ್ನು ಸುಸಜ್ಜಿತವಾಗಿ ಅಭಿವ್ರದ್ದಿ ಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಂಬ್ರ 66ಗೆ ಸಂಬಂಧ ಪಟ್ಟಂತೆ ಭೂಸ್ವಾಧೀನಕ್ಕಾಗಿ 5400 ಕೋಟಿ ರೂಪೈಗಳನ್ನು ಕೇರಳ ಸರಕಾರ ಒದಗಿಸಿದೆ. ಇನ್ನೂ ಅನೇಕ ರೀತಿಯ ಅಭಿವೃದ್ದಿಗಳನ್ನು ಕಂಡು ಕೇಂದ್ರವು ಕೇರಳ ರಾಜ್ಯದೊಂದಿಗೆ  ದ್ವೇಷ ರಾಜಕಾರಣಕ್ಕೆ ತೊಡಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ 57000ಕೋಟಿ ರೂಪೈಗಳನ್ನು ಕೊಡದೆ ಸತಾಯಿಸುತ್ತಿದೆ. ಅದಲ್ಲದೆ ರಾಜ್ಯಕ್ಕೆ ಸಿಗಬೇಕಾದ ಪಾಲು ..  ಶಾಲಾ ಬಿಸಿಯೂಟದ 54ಕೋಟಿ ರೂ.ˌ ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿ 137ಕೋಟಿ ರೂಪೈ, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯು.ಜಿ.ಸಿ. ಗ್ರ್ಯಾಂಟ್ 750ಕೋಟಿ ರೂಪೈ— ಹೀಗೆ ವಿವಿಧ  ವಿಭಾಗಗಳಿಗೆ ಕೊಡಬೇಕಾದ ಹಣಕಾಸಿನ ಪಾಲನ್ನು ಕೊಡದೆ ರಾಜ್ಯದ ಆರ್ಥಿಕ ವ್ಯವಸ್ಥೆಯ ಕತ್ತು ಹಿಸುಕುವ ಪ್ರಯತ್ನವನ್ನು ಕೇಂದ್ರವು ನಿರಂತರ ಮಾಡಿದೆ.

ಕೊರೋನ  ಮತ್ತು ಪ್ರಳಯ ಸಂದರ್ಭದಲ್ಲಿ  ರಾಜ್ಯವು 30000ಕೋಟಿ ರೂಪೈ ನಷ್ಟ ಹೊಂದಿದೆ. ಕೇಂದ್ರಸರಕಾರ ಇದರಲ್ಲೂ ದ್ವೇಷ ರಾಜಕಾರಣ  ಮಾಡಿದೆ.  ವಿದೇಶಗಳಿಂದ ಕೊಡಮಾಡಿದ್ದ ಸಹಾಯವನ್ನು ಪಡೆಯಲೂ ಬಿಡಲಿಲ್ಲ. ಬೇರೆ ರಾಜ್ಯಗಳ ಮಲಯಾಳಿಗಳಿಂದ ಆರ್ಥಿಕ ಸಹಾಯ ಪಡೆಯಲೂ ಕೇಂದ್ರವು ಅನುಮತಿ ನೀಡದೆ ದುಷ್ಟ ನೀತಿಯನ್ನು ಅನುಸರಿಸಿದೆ.

ಈ ಎಲ್ಲಾ ದುರಂತಗಳಿಂದ ನಲುಗಿದ ಪುಟ್ಟ ರಾಜ್ಯ ಕೇರಳವು ಮತ್ತೆ ಎದ್ದು ನಿಲ್ಲುವಂತೆ ಮಾಡಲು ಸಹಕರಿಸಿದ  ರಾಜ್ಯದ ಜನತೆಯನ್ನು  ಮರೆಯುವಂತಿಲ್ಲ.  ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ 114276ಕಿರು ಮಧ್ಯಮ ಉದ್ದಿಮೆಗಳನ್ನು ಸ್ಥಾಪಿಸಿ  264463 ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ಭೂಮಿ ಇಲ್ಲದದವರ ಪೈಕಿ 3ಲಕ್ಷ ಕುಟುಂಬಗಳಿಗೆ ಭೂಮಿಯೊಂದಿಗೆ ಪಟ್ಟಾವನ್ನು ನೀಡಲಾಗಿದೆ. ಭಾರತದಲ್ಲೆ ಅತಿ ಶ್ರೇಷ್ಟ ಮಟ್ಟದ ನಾಗರೀಕ ಆಹಾರ ಪೂರೈಕೆ ವ್ಯವಸ್ಥೆಯನ್ನು  ನೀಡಿದೆ. ಏಳೂವರೆ ವರ್ಷಗಳ ಎಡರಂಗ ಸರಕಾರದ ಆಡಳಿತದಲ್ಲಿ ಅಸಾಧ್ಯವೆಂಬುದನ್ನು ಸಾಧ್ಯವಾಗಿಸಿದೆ. ಹೊಸ ಕಣ್ಣೋಟದೊಂದಿಗೆ ಜನಪರವಾಗಿ ಆಡಳಿತ ನಡೆಸುತ್ತಿರುವ ಕೇರಳ ಎಡರಂಗ ಸರಕಾರವು ಈ ವರೆಗೆ ಏನು ಮಾಡಿದೆ ಈಗ ಏನು ಮಾಡುತ್ತಿದೆ ಮುಂದೆ ಏನು ಮಾಡಲಿಕ್ಕಿದೆ ಎಂಬುದನ್ನು ಜನತೆಗೆ ತಿಳಿಸುವುದು ಮತ್ತು ನಾವೇನು ಮಾಡಬೇಕು ಎಂಬುದರ ಬಗೆಗೆ ಜನರಿಂದಲೂ ಅಭಿಪ್ರಾಯ ಸಂಗ್ರಹಿಸಲುˌ ಪೈವಳಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರಿಂದ ಉದ್ಘಾಟನೆಗೊಂಡು ಮುಂದಿನ 36ದಿವಸಗಳ ದೀರ್ಘ ಪಯಣಕ್ಕೆ ಚಾಲನೆ ನೀಡಿ ಆಡಿದ ಮಾತಿನ   ಸಾರಾಂಶವಿದು.

ಮಾಧ್ಯಮ ಕುರಿತು ಪಿಣರಾಯಿ ಹೇಳಿದ್ದು…..!

ಮಂತ್ರಿ ಮಂಡಲ ಸದಸ್ಯರು ಪ್ರಯಾಣಿಸಲಿದ್ದ ಬಸ್ಸಿನ ಕುರಿತು ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆ ಮತ್ತು ಪ್ರಚಾರವೂ ನಡೆದಿತ್ತು. ಇಷ್ಟೊಂದು ಆಡಂಭರದ ಸೌಕರ್ಯ ಬೇಕಿತ್ತೇ ಎಂಬ ವಿಚಾರದ ಸುತ್ತ ನಡೆದ ಚರ್ಚೆಯಲ್ಲಿ ಕೇರಳ ಸರಕಾರವನ್ನು ತರಾಟೆಗೆ ತೆಗೆದು ಕೊಂಡಿದ್ದರು.

ಬಸ್ಸನ್ನು ನೋಡದೆ ಏನನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದ ಮಂತ್ರಿಗಳು ಕಾಸರಗೋಡಿನಲ್ಲಿ ನಿಂತಿದ್ದ ಅವರೆಲ್ಲ ಪ್ರಯಾಣಿಸಲಿದ್ದ ಬಸ್ಸನ್ನೇರಿ ಕುಳಿತು  ಎಲ್ಲಾ ರೀತಿಯಲ್ಲಿ ಶೋಧನೆ ನಡೆಸಿಯೂ ಮಾಧ್ಯಮಗಳು ಹೇಳಿರುವಂತಹ ಕೋಟಿ ಕೋಟಿ ಖರ್ಚು ಮಾಡಿರುವ ಆಡಂಭರಗಳೇನೂ ಕಾಣ ಸಿಗಲಿಲ್ಲ. ಆದ್ದರಿಂದ ನಾವೇನೋ ಹುಡುಕಿ ಸಿಗಲಿಲ್ಲ  ನೀವೇನಾದರು ಶೋಧನೆ ಮಾಡಿ  ಆಡಂಭರ ಕಾಣಲು ಸಾಧ್ಯವಾಗಬಹುದೊ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.,  ನಾವು ಹಿಂತಿರುಗಿ ಹೋಗಲು ಬಸ್ಸೇರಿ ಕುಳಿತ ಮೇಲೆ ಇಲ್ಲಿರುವ ಎಲ್ಲಾ ಮಾಧ್ಯಮದವರು  ಬಸ್ಸಿನೊಳಗೆ ಬರಬೇಕೆಂದು ಮುಖ್ಯಮಂತ್ರಿಯವರು ಆಹ್ವಾನಿಸಿದರು.

ಅಂತೆಯೆ ಐದೈದು ಮಂದಿ ಮಾಧ್ಯಮ ಪ್ರತಿನಿಧಿಗಳನ್ನು ಬಸ್ಸಿನೊಳಗೆ ಬಿಡಲಾಯಿತು. ಕೆಲವು ವೀಡಿಯೋಗಳು ಮೇಲೆ ಕೆಳಗೆ ಅತ್ತ ಇತ್ತ ಸೂಕ್ಷ್ಮವಾಗಿ ನೋಡುವಂತೆ ಭಾಸವಾಗುತ್ತಿತ್ತು. ಇನ್ನು ಕೆಲವರು ನಾಮಕಾವಸ್ಥೆಯಲ್ಲಿ ಒಂದೇ ಮಗ್ಗುಲಿಗೆ ಕ್ಯಾಮರಾ ಹಿಡಿದು ಸಾಗುತ್ತಿರುವುದು ಹೊರಗೆ ನಿಂತವರಿಗೆ ಗೋಚರಿಸುತ್ತಿತ್ತು. ದೇಶದಲ್ಲಿ ಚರ್ಚೆಗೆ ಎತ್ತಬೇಕಾದ ನುಾರಾರು ಸಮಸ್ಯೆಗಳಿರುವಾಗ  ನಿಮಗೆ  ಬಸ್ಸಿನ ಆಡಂಭರವೇ ಮುಖ್ಯವಾಯಿತೇ! ಎಂಬುದಾಗಿ  ನಗುತ್ತಲೇ   ಮಾಧ್ಯಮದವರನ್ನು ಕೆಣಕಿದರು.

ವಿಡಿಯೋ ನೋಡಿ: ವಿಶ್ವಕಪ್‌ ಮೇಲೆ ಕಾಲಿಟ್ಟಾಗ ಚುರ್‌ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023

Donate Janashakthi Media

Leave a Reply

Your email address will not be published. Required fields are marked *