ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 52 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಬಲಿಯಾದವರ ಪೈಕಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕೂಡ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಬಲೋಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮಸೀದಿಯೊಂದರ ಸಮೀಪ ಸ್ಫೋಟ ಸಂಭವಿಸಿದೆ. ಅಲ್ಫಾಹ್ ರಸ್ತೆಯ ಮದೀನಾ ಮಸೀದಿ ಸಮೀಪ ಈದ್ ಇ ಮಿಲಾದುನ್ ನಬಿ ಮೆರವಣಿಗೆಗಾಗಿ ನೂರಾರು ಜನರು ಸೇರಿದ್ದರು. ಇದು ಆತ್ಮಾಹುತಿ ದಾಳಿ ಎಂದು ನಗರ ಸ್ಟೇಷನ್ ಹೌಸ್ ಅಧಿಕಾರಿ ಜಾವೇದ್ ಲೆಹ್ರಿ ತಿಳಿಸಿದ್ದಾರೆ.
ಮಸೀದಿಯ ಸುತ್ತಮುತ್ತಲೂ ಹತ್ತಾರು ಶವಗಳು ಛಿದ್ರಗೊಂಡು ಬಿದ್ದಿರುವುದು ಸ್ಫೋಟದ ಬಳಿಕದ ವಿಡಿಯೋ ಹಾಗೂ ಚಿತ್ರಗಳಲ್ಲಿ ಕಾಣಿಸಿದೆ. ದೇಹಗಳಿಂದ ಬೇರ್ಪಟ್ಟ ಕೈ ಕಾಲುಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಘಟನೆಯ ಭೀಕರ ಸ್ವರೂಪಕ್ಕೆ ಸಾಕ್ಷಿಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 28 ಮೃತದೇಹಗಳನ್ನು ಶಹೀದ್ ನವಾಬ್ ಗೌಸ್ ಬಕ್ಷ್ ರೈಸಿನಿ ಸ್ಮಾರಕ ಆಸ್ಪತ್ರೆಗೆ ತರಲಾಗಿದೆ. ಇನ್ನು 22 ಶವಗಳನ್ನು ಮಸ್ತುಂಗ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಬಲೂಚಿಸ್ತಾನ
ಅಲ್ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಈದ್ ಮಿಲಾದುನ್ ನಬಿ (PBUH) ಮೆರವಣಿಗೆಗಾಗಿ ಜನರು ಸೇರುತ್ತಿದ್ದಾಗ ಸ್ಫೋಟ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶತ್ರುಗಳು ಬಲೂಚಿಸ್ತಾನದಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಶಾಂತಿಯನ್ನು ನಾಶಮಾಡಲು ಬಯಸುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಪಿಟಿಐ ನಾಯಕ ಇಮ್ರಾನ್ ಇಸ್ಮಾಯಿಲ್ ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಮಾಯಕರ ಬದುಕನ್ನು ಕೊನೆಗಾಣಿಸುವವರು ದಬ್ಬಾಳಿಕೆಗಾರರು ಮತ್ತು ಭಯೋತ್ಪಾದಕರು ಎಂದು ಕರೆದಿದ್ದಾರೆ.
ಮಸ್ತಂಗ್ನ ಮದೀನಾ ಮಸೀದಿ ಬಳಿ ನಡೆದ ಸ್ಫೋಟವನ್ನು ಆಂತರಿಕ ಸಚಿವ ಸರ್ಫರಾಜ್ ಅಹ್ಮದ್ ಬುಗ್ತಿ ಬಲವಾಗಿ ಖಂಡಿಸಿದ್ದಾರೆ. ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವ ಬಗ್ಗೆ ತೀವ್ರ ದುಃಖ ಮತ್ತು ವಿಷಾದ ವ್ಯಕ್ತಪಡಿಸಿದ್ದಾರೆ. ಬಲೂಚಿಸ್ತಾನ
ಈ ವಿಡಿಯೋ ನೋಡಿ : ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ : ಬೆಂಗಳೂರು ಭಾಗಶಃ ಸ್ತಬ್ದ