ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರ ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸಲು ಬಿಜೆಪಿಯನ್ನು ಕೇಂದ್ರ ಸರ್ಕಾರ ಮತ್ತು ಪ್ರಭುತ್ವದ ಅಧಿಕಾರವನ್ನು ನಿಯಂತ್ರಿಸುವುದರಿಂದ ದೂರವಿಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು, ‘ಇಂಡಿಯ’ ಬಣದ ಮತ್ತಷ್ಟು ಕ್ರೋಡೀಕರಣ ಮತ್ತು ವಿಸ್ತರಣೆಗಾಗಿ ಕೆಲಸ ಮಾಡಲು ನಿರ್ಧರಿಸಿರುವುದಾಗಿ ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ..‘ಇಂಡಿಯ’ ಬಣವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಇದರಲ್ಲಿ ಜನಚಳುವಳಿಗಳ ಗಮನಾರ್ಹ ವಿಭಾಗಗಳನ್ನು ಸೆಳೆಯಲು ಪ್ರಯತ್ನಗಳನ್ನು ಕೇಂದ್ರೀಕರಿಸಬೇಕು ಎಂದು ಅದು ಕರೆನೀಡಿದೆ.
ಸೆಪ್ಟೆಂಬರ್ 16-17 ರಂದು ನವದೆಹಲಿಯಲ್ಲಿ ನಡೆದ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಈ ವಿಷಯವನ್ನು ಅದು ತಿಳಿಸಿದೆ. ಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಘೋಷಣೆ, ಅದಾನಿ ಸಮೂಹದ ಷೇರು ವ್ಯವಹಾರಗಳನ್ನು ಕುರಿತಂತೆ ತಾಜಾ ಪುರಾವೆಗಳು, ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಮಸೂದೆ ಮತ್ತಿತರ ಬೆಳವಣಿಗೆಗಳನ್ನು ಕೂಡ ಅದು ಚರ್ಚಿಸಿ ಪಕ್ಷದ ನಿಲುವನ್ನು ಈ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ದ್ವೇಷ ಕಾರುವ ಚರ್ಚೆ ನಡೆಸುವ 14 ಆಂಕರ್ಗಳನ್ನು ಬಹಿಷ್ಕರಿಸಿದ ‘ಇಂಡಿಯಾ’ ಒಕ್ಕೂಟ
‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಘೋಷಣೆ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಅವಳಿ ಆಕ್ರಮಣವಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಯನ್ನು ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಶಿಫಾರಸು ಮಾಡಲು ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ 8 ಸದಸ್ಯರ ಸಮಿತಿಯನ್ನು ಮೋದಿ ಸರ್ಕಾರ ನೇಮಿಸಿದೆ. ಅಂತಹ ಪ್ರಸ್ತಾಪದಲ್ಲಿ ಸಂವಿಧಾನಕ್ಕೆಗಮನಾರ್ಹ ತಿದ್ದುಪಡಿಗಳಲ್ಲದೆ, ಲೋಕಸಭೆ ಚುನಾವಣೆಗಳೊಂದಿಗೆ ಸರಿಹೊಂದುವಂತೆ ಮಾಡಲು ರಾಜ್ಯ ವಿಧಾನಸಭೆಗಳ ಕಾರ್ಯಕಾಲವನ್ನು ಮೊಟಕುಗೊಳಿಸುವುದು ಅಥವಾ ವಿಸ್ತರಿಸುವುದು ಕೂಡ ಸೇರಿರುತ್ತದೆ. ಸದನದಲ್ಲಿ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡಾಗ, ಅದರ ಮುಂದುವರಿಕೆ ಕಾನೂನುಬಾಹಿರವಾಗಿರುತ್ತದೆ.ಸರ್ಕಾ
ಸರಕಾರ ಪ್ರಕಟಿಸಿರುವ ಚುನಾವಣಾ ಆಯೋಗದಲ್ಲಿ ನೇಮಕದ ಕುರಿತಾದ ಮಸೂದೆಯೂ ಖಂಡಿತವಾಗಿಯೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ತನ್ನ ಸಾಂವಿಧಾನಿಕ ಆದೇಶವನ್ನು ಜಾರಿಗೊಳಿಸುವ ಚುನಾವಣಾ ಆಯೋಗದ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಎಂದಿರುವ ಪೊಲಿಟ್ಬ್ಯುರೊ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ವಿರೋಧಿಸುವಂತೆ ಮತ್ತು ಸೋಲಿಸುವಂತೆ ‘ಇಂಡಿಯ’ ಬಣದ ಎಲ್ಲಾ ಪಕ್ಷಗಳನ್ನು ಸಿಪಿಐ(ಎಂ) ಒತ್ತಾಯಿಸಿದೆ.
ಅದಾನಿ ಸಮೂಹ ತನ್ನ ಕಂಪನಿಗಳ ಷೇರುಗಳ ಬೆಲೆಯಲ್ಲಿ ಕೈಚಳಕ ನಡೆಸಿರುವುದರ ಬಗ್ಗೆ ಹೊರಹೊಮ್ಮಿರುವ ತಾಜಾ ಪುರಾವೆಗಳು ಗಂಭೀರವಾದ ತನಿಖೆಯ ಅಗತ್ಯವನ್ನು ತೋರಿಸಿವೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ. 2014 ರಲ್ಲಿ ಅದಾನಿ ಕಂಪನಿಗಳ ಕಡಲಾಚೆಯ ನಿಧಿನೀಡಿಕೆಯ ವಿಷಯವನ್ನು ಸೆಬಿ ಪರಿಶೀಲಿಸುತ್ತಿತ್ತು, ಆದರೆ ನಂತರ ವಿಚಾರಣೆಯನ್ನು ಮುಚ್ಚಿತು ಎಂದು ವರದಿಗಳು ತೋರಿಸುತ್ತವೆ, ಈಗ ಈ ವಿಷಯದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಯಾವುದನ್ನೂ ಮುಚ್ಚಿ ಹಾಕದಂತೆ ಖಚಿತಪಡಿಸಬೇಕಾಗಿದೆ ಎಂದು ಅದು ಹೇಳಿದೆ
ಜಿ 20 ಶೃಂಗಸಭೆಯ ನಂತರ, ಮೋದಿ ಸರ್ಕಾರವು ತನ್ನನ್ನು ‘ಭೌಗೋಳಿಕ ದಕ್ಷಿಣ’(ಗ್ಲೋಬಲ್ ಸೌತ್)ದ’ ನಾಯಕ ಎಂದು ಬಿಂಬಿಸಿಕೊಂಡಿತು. ಆದರೂ, ಕ್ಯೂಬಾದ ಹವಾನಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದ್ದ ಭಾರತದ ವಿದೇಶಾಂಗ ಸಚಿವರು ಗೈರು ಹಾಜರಾಗಿದ್ದರು. ಸ್ಪಷ್ಟವಾಗಿ, ಮೋದಿ ಸರ್ಕಾರವು ಯುಎಸ್ಎ ನ ಅಡಿಯಾಳು ಮಿತ್ರನಾಗಿ, ಕ್ಯೂಬಾಗೆ ಪ್ರಯಾಣಿಸಿ ‘ಭೌಗೋಳಿಕ ದಕ್ಷಿಣ’ದ ಈ ಅತ್ಯಂತ ಪ್ರಾತಿನಿಧಿಕ ಸಭೆಯಲ್ಲಿ ಮಂತ್ರಿಮಟ್ಟದ ಉಪಸ್ಥಿತಿಯನ್ನು ಹೊಂದಿರದಿರಲು ನಿರ್ಧರಿಸಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ನಲ್ಲಿ ಗರೋಲ್ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರ ದಾಳಿ ನಡೆದಿರುವ ಬಗ್ಗೆ ಪ್ರಸ್ತಾಪಿಸುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಡಿವೈಎಸ್ಪಿ ಹುಮಾಯೂನ್ ಮುಝಮ್ಮಿಲ್ ಭಟ್ ಅವರ ಶೌರ್ಯ ಮತ್ತು ತ್ಯಾಗಕ್ಕೆ ವಂದನೆ ಸಲ್ಲಿಸಿದೆ. ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆಯನ್ನು ಸ್ಥಾಪಿಸಲಾಗಿದೆ ಎಂಬ ಮೋದಿ ಸರ್ಕಾರದ ಹೇಳಿಕೆಗಳನ್ನು ಇದು ಸಂಪೂರ್ಣವಾಗಿ ಬಯಲಿಗೆಳೆಯುತ್ತದೆ ಎಂದು ಅದು ಟಿಪ್ಪಣಿ ಮಾಡಿದೆ.
ಈ ವಿಡಿಯೋ ನೋಡಿ : ಮುಂಬೈನಲ್ಲಿ ‘ಇಂಡಿಯಾ’ ಸಭೆ | ನೇರ ಪ್ರಸಾರ