ನವದೆಹಲಿ: ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ನಾಲ್ಕು ವಾರಗಳ ಕಾಲ ಮುಂದೂಡಿದೆ. 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ಪಿತೂರಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ಯುಎಪಿಎ ಪ್ರಕರಣದಡಿ ಅವರು 3 ವರ್ಷಗಳಿಂದ ಬಂಧನದಲ್ಲಿದ್ದಾರೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ತ್ರಿವೇದಿ ಅವರ ಪೀಠವು ಈ ಪ್ರಕರಣಕ್ಕೆ ವಿವರವಾದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು. ಜೊತೆಗೆ ಪ್ರಕರಣದ ದಾಖಲೆಗಳನ್ನು ಸಲ್ಲಿಸುವಂತೆ ಖಾಲಿದ್ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಕೇಳಿದ್ದಾರೆ.
ಭಯೋತ್ಪಾದನೆ, ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು ಮತ್ತು ಪಿತೂರಿ ಸೇರಿದಂತೆ ಯುಎಪಿಎಯ ಕೆಲವು ನಿಬಂಧನೆಗಳು ಪ್ರಸ್ತುತ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ವಕೀಲ ಕಪಿಲ್ ಸಿಬಲ್ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ನಾಲ್ಕು ವಾರಗಳ ನಂತರ ಪ್ರಕರಣವನ್ನು ಪಟ್ಟಿ ಮಾಡಿ… ಈ ಪ್ರಕರಣದಲ್ಲಿ ನಾವು ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಯಾವ ಪುರಾವೆಗಳು ಲಭ್ಯವಿವೆ ಮತ್ತು ಅದು ನಿಮ್ಮ ವಿರುದ್ಧದ ಆರೋಪಗಳಿಗೆ ಹೇಗೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ನೀವು ನಮಗೆ ತೋರಿಸಬೇಕು” ಎಂದು ಹೇಳಿದೆ. ಉಮರ್ ಖಾಲಿದ್
ಇದನ್ನೂ ಓದಿ: 2020ರ ದೆಹಲಿ ಗಲಭೆ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
2020 ರ ಸೆಪ್ಟೆಂಬರ್ನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಖಾಲಿದ್, “ನಗರದ ಈಶಾನ್ಯ ಪ್ರದೇಶದ ಹಿಂಸಾಚಾರದಲ್ಲಿ ತನಗೆ ಯಾವುದೇ ಪಾತ್ರವಿಲ್ಲ. ಅಲ್ಲದೆ, ಇತರ ಯಾವುದೇ ಆರೋಪಿಗಳೊಂದಿಗೆ ಯಾವುದೇ ಪಿತೂರಿಯ ಸಂಪರ್ಕ ಹೊಂದಿಲ್ಲ” ಎಂಬ ಆಧಾರದ ಮೇಲೆ ಹೈಕೋರ್ಟ್ನಲ್ಲಿ ಜಾಮೀನು ಕೋರಿದ್ದರು. ಆದರೆ ದೆಹಲಿ ಪೊಲೀಸರು ಈ ಜಾಮೀನು ಅರ್ಜಿಯನ್ನು ವಿರೋಧಿಸಿದ್ದರು.
ಆದರೆ, 2022 ರ ಅಕ್ಟೋಬರ್ನಲ್ಲಿ ದೆಹಲಿ ಹೈಕೋರ್ಟ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಅದಕ್ಕೂ ಮುಂಚೆ 2022ರ ಮಾರ್ಚ್ನಲ್ಲಿ ವಿಚಾರಣಾ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಮೊರೆ ಹೋಗಿದ್ದರು. ಉಮರ್ ಖಾಲಿದ್ ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (UAPA) ಹಲವಾರು ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಈ ಪ್ರಕರಣದಲ್ಲಿ ಖಾಲಿದ್, ಶರ್ಜೀಲ್ ಇಮಾಮ್, ಹೋರಾಟಗಾರ ಖಾಲಿದ್ ಸೈಫಿ, ಜೆಎನ್ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ, ಜಾಮಿಯಾ ಸಮನ್ವಯ ಸಮಿತಿ ಸದಸ್ಯರಾದ ಸಫೂರ ಜರ್ಗರ್, ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಹಲವರ ವಿರುದ್ಧ ಕಠಿಣ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಭೆಯಲ್ಲಿ 53 ಜನರು ಸಾವನ್ನಪ್ಪಿ, 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ವಿಡಿಯೊ ನೋಡಿ: ಗೌರಿ ಕೊಂದವರು ಯಾರು? ಕೇಸ್ ಎಲ್ಲಿಗೆ ಬಂತು? – ವಿಶ್ಲೇಷಣೆ : ಕೆ.ನೀಲಾ Janashakthi Media