ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು‌: ಜಾಗೃತ ನಾಗರಿಕರಿಂದ ವಿರೋಧ

ಬೆಂಗಳೂರು: ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ದತ್ತು‌ ಕೊಡುವ ಪ್ರಸ್ತಾಪಕ್ಕೆ ಜಾಗೃತ ನಾಗರಿಕರು ಕರ್ನಾಟಕದ ವತಿಯಿಂದ ವಿರೋಧ ವ್ಯಕ್ತವಾಗಿದ್ದು,  ಸರಕಾರಿ ಶಾಲೆಗಳಿಗೆ ಬಲತುಂಬಿ, ಸಾರ್ವಜನಿಕ ಶಿಕ್ಷಣವನ್ನು ಸಶಕ್ತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಖಾಸಗಿ ಶಾಲೆಗಳು ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಮಾನ್ಯ ಡಿ.ಕೆ.ಶಿವಕುಮಾರ್ ಅವರು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದು ನಿಜಕ್ಕೂ ಅಘಾತಕಾರಿಯಾಗಿದೆ. ಪ್ರಜಾಪ್ರಭುತ್ವದ ಆಶಯಗಳು ಜೀವಂತವಾಗಿರಬೇಕೆಂದರೆ ಸಾರ್ವಜಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳಬೇಕು, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು, ಸಮಾನ ಶಿಕ್ಷಣ, ನೆರೆಹೊರೆ ಶಾಲಾ ಪದ್ಧತಿ ಜಾರಿಗೊಳ್ಳಬೇಕು ಎನ್ನುವ ಮೂಲ ತತ್ವಗಳು ಮತ್ತು 6-14 ರ ವಯಸ್ಸಿನ ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಕಡ್ಡಾಯಗೊಳಿಸಿದ ನಮ್ಮ ಸಂವಿಧಾನದ ವಿಧಿ 21ಎ ಆಶಯವನ್ನೇ ಕಡೆಗಣಿಸಿ ಕರ್ನಾಟಕ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ‘ಖಾಸಗಿ-ಸಾರ್ವಜನಿಕ-ಸಹಭಾಗಿತ್ವದ ಅಡಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಲ್ಲ ಎಂದು ಸಾಹಿತಿಗಳು,ಚಿಂತಕರು,ಕನ್ನಡ ಪರ ಹೋರಾಟಗಾರರು,ಶಿಕ್ಷಣ ತಜ್ಞರು, ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳಬೇಕು : ಡಿ.ಕೆ.ಶಿವಕುಮಾರ್

ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಿಷನ್ 95 ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಲು ಎಸ್‌ಡಿಎಂಸಿ (ಶಾಲೆ ಅಭಿವೃದ್ಧಿ ಮೇಲ್ವಿಚಾರಣೆ ಸಮಿತಿ)ಯನ್ನು ರಚಿಸಲಾಗಿದೆ. ಅದಕ್ಕೆ ಆದ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯ್ತಿ ಸದಸ್ಯರು ನೇಮಕವಾಗಿರುತ್ತಾರೆ. ಎಸ್‌ಡಿಎಂಸಿ, ಸಮಾನ ಮನಸ್ಕರು, ಒಳಗೊಂಡಂತಹ ಶಾಲಾ ಪೋಷಣೆ ಯೋಜನೆ ಇದೆ. ಸಮಗ್ರ ಶಿಕ್ಷಣ ಆಭಿಯಾನ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇದೆ. ಕರ್ನಾಟಕ ಮುಕ್ತ ಶಿಕ್ಷಣ ಸಂಪನ್ಮೂಲ ಯೋಜನೆ ಇದೆ. ವಿಷಯ ಶಿಕ್ಷಕರ ಫೋರಂ ಇದೆ. ಮಾದರಿ ಶಾಲೆ ಯೋಜನೆ ಇದೆ. ಆದರ್ಶ ವಿದ್ಯಾಲಯ ಯೋಜನೆ ಇದೆ. ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್.ಕೆಜಿ, ಯು ಕೆಜಿ)ಯನ್ನು ಪ್ರಾರಂಭಿಸಲು ಅವಕಾಶಗಳಿವೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಡಿಡಿಪಿಐ, ಬಿಇಓಗಳು, ವಲಯ ಸಂಪನ್ಮೂಲ ಸಂಯೋಜಕರು(ಬಿಆರ್‌ಸಿ), ಕಾರ್ಯನಿರ್ವಹಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಕ ಗುಣಮಟ್ಟ, ಬೋಧನೆಯ ಗುಣಮಟ್ಟ, ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸಲಿಕ್ಕಾಗಿ ಮತ್ತು ನಿರಂತರವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಆರಂಬಿಸಿದ ಜಿಲ್ಲಾ ಮಟ್ಟದ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯೆಟ್), ಶೈಕ್ಷಣಿಕ ಸಂಶೋದನೆ ಮತ್ತು ತರಬೇತಿ(ಡಿಸರ್ಟ) ನಂತಹ ಪ್ರಮುಖ ಶಿಕ್ಷಣ ತರಬೇತಿ, ಭೋದನೆ, ಕಲಿಕಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಿ ಸೂಕ್ತ ಕಾಯಕಲ್ಪ ನೀಡಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಬಲೀಕರಣಗೊಳಿಸಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು.

ಏಕೆಂದರೆ ಕಳೆದ ಮೂವತ್ತು ವರ್ಷಗಳಲ್ಲಿ ಇಡೀ ಶಿಕ್ಷಣ ಕ್ಷೇತ್ರದಲ್ಲಿ ನಡೆದ ವಿದ್ಯಾಮಾನಗಳನ್ನು ಗಮನಿಸಿದಾಗ ಆರಂಭದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ, ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತೇವೆ ಎಂದೇ ಸಾರ್ವಜನಿಕ-ಖಾಸಗಿ ಸಹಬಾಗಿತ್ವದಲ್ಲಿ ಪಾಲ್ಗೊಳ್ಳುವ ಖಾಸಗಿ ಸಂಸ್ಥೆಗಳು ಕ್ರಮೇಣ ಅದನ್ನು ಒಂದು ಲಾಭದಾಯಕ ಉದ್ಯಮನ್ನಾಗಿಯೇ ರೂಪಿಸುತ್ತವೆ, ಮತ್ತು ಬಂಡವಾಳವಿಲ್ಲದೆ ನಾವು ನಿಮಗೆ ಶಿಕ್ಷಣವನ್ನು ಕೊಡುವುದಾದರೂ ಹೇಗೆ ಎನ್ನುವ ತರ್ಕವನ್ನು ಮುಂದಿಟ್ಟುಕೊಂಡು ಹಣ ಕೊಟ್ಟರೆ ಮಾತ್ರ ಶಿಕ್ಷಣ ಎನ್ನುವ ನೀತಿಯನ್ನು ಜಾರಿಗೊಳಿಸುತ್ತವೆ. ನಂತರ ಸರ್ಕಾರಿ ಶಾಲೆಗಳು ಈ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಗೊಳ್ಳುತ್ತವೆ. ನಂತರ ಈ ಖಾಸಗಿ ಸಂಸ್ಥೆಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ರಚಿಸುತ್ತವೆ. ಅದರ ಗುಣಮಟ್ಟವನ್ನು ನಿರ್ಧರಿಸುವ, ಈ ಪಠ್ಯಪುಸ್ತಗಳ ಮೌಲ್ಯಮಾಪನ ಮಾಡುವ ಅಧಿಕಾರವನ್ನು ಸಹ ಶಿಕ್ಷಣ ಇಲಾಖೆ ಕಳೆದುಕೊಂಡಿರುತ್ತದೆ ಎಂದರು.

ಈ ಎಲ್ಲಾ ಕಾರಣಗಳಿಗಾಗಿ ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ಕೊಡುವ ಬದಲು ಸರಕಾರವೇ ಸಂಪನ್ಮೂಲ ಒದಗಿಸಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕೆಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

ಜಾಗೃತ ನಾಗರಿಕ ಕರ್ನಾಟಕ ದ ಪರವಾಗಿ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ, ಬಿ.ಶ್ರೀಪಾದ ಭಟ್, ವಿಮಲಾ‌.ಕೆ.ಎಸ್, ಡಾ.ಬಂಜಗೆರೆ ಜಯಪ್ರಕಾಶ್, ಟಿ.ಸುರೇಂದ್ರ ರಾವ್, ಎನ್.ಆರ್.ವಿಶುಕುಮಾರ್, ಡಾ.ಮೀನಾಕ್ಷಿ ಬಾಳಿ, ಡಾ.ಬಿ.ಆರ್.ಮಂಜುನಾಥ್, ಡಾ.ಎಚ್.ಜಿ.ಜಯಲಕ್ಷ್ಮಿ, ಡಾ.ಎನ್.ಗಾಯತ್ರಿ ಅವರು ಸರಕಾರಿ ಶಾಲೆಗಳನ್ನು ದತ್ತು ಕೊಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *