ಅನುವಾದ : ನಾ ದಿವಾಕರ
ಯುದ್ಧೋನ್ಮಾದದ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಒಂದು ಮುನ್ನೆಚ್ಚರಿಕೆಯ ಮಾತುಗಳು
ಈ ವರ್ಷ ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯ 76 ನೇ ವರ್ಷದ ಸ್ಮರಣೆಯಲ್ಲಿ ಆ ಐತಿಹಾಸಿಕ ಘಟನೆಯಿಂದ ನಾವು ಕಲಿಯಬಹುದಾದ ಯಾವುದೇ ನೈತಿಕ ಪಾಠಗಳೇನು ? ಅಮೆರಿಕದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಲಿಯಮ್ ಇಸ್ಡೇಲ್ ಅವರು 2015ರಲ್ಲಿ ಮಾಡಿದ ಉಪನ್ಯಾಸವೊಂದರ ಕನ್ನಡ ಭಾವಾನುವಾದ (ವೆಬ್ ಆಧಾರಿತ)
ಈ ವರ್ಷವು ಎರಡನೇ ಮಹಾಯುದ್ಧ ಮುಗಿದು 70 ವರ್ಷಗಳನ್ನು ಸೂಚಿಸುತ್ತದೆ. ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಲಾದ ಪರಮಾಣು ಬಾಂಬುಗಳಂತಹ ಅತ್ಯಂತ ವಿನಾಶಕಾರಿ ಶಸ್ತ್ರಾಸ್ತ್ರಗಳ ಬಳಕೆಯೊಂದಿಗೆ ಈ ಸಂಘರ್ಷವು ಕೊನೆಗೊಂಡಿತ್ತು. ಯುದ್ಧಗಳನ್ನು ಸ್ಮರಿಸುವುದರಿಂದ ಏನು ಪ್ರಯೋಜನ ಎಂದು ಕೇಳಲು ನಿಮಗೆ ಎಂದಾದರೂ ಅನಿಸಿದೆಯೇ? ಅವು ಆಸಕ್ತಿದಾಯಕವಾಗಿರುವುದರಿಂದ ನಾವು ಅವರನ್ನು ಸ್ಮರಿಸುತ್ತೇವೆಯೇ ಅಥವಾ ಇನ್ನೂ ಹೆಚ್ಚು ಪ್ರಮುಖ ಕಾರಣಗಳಿವೆಯೇ ?
ನೀವು ಎಂದಾದರೂ ಯುದ್ಧ ಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿದ್ದರೆ, ನಮ್ಮ ಜೀವನ ವಿಧಾನವನ್ನು ರಕ್ಷಿಸಲು ಹೋರಾಡಿದವರಿಗೆ ನಾವು ನೀಡಬೇಕಾದ ಕೃತಜ್ಞತೆಯ ಬಗ್ಗೆ ಭಾಷಣಕಾರರು ಮಾತನಾಡುವುದನ್ನು ನೀವು ಕೇಳಿರಬಹುದು. ಅಥವಾ ಕಳೆದುಹೋದ ಜೀವಗಳ ದುರಂತವನ್ನು ಪ್ರತಿಬಿಂಬಿಸುವ ಮೂಲಕ ಮತ್ತೊಮ್ಮೆ ಸಂಘರ್ಷಕ್ಕೆ ಧಾವಿಸುವ ಅಪಾಯಗಳನ್ನು ಬಿಂಬಿಸುವ ಭಾಷಣಗಳನ್ನು ಕೇಳಿರಬಹುದು. ಯುದ್ಧಗಳನ್ನು ನೆನಪಿಸಿಕೊಳ್ಳಲು ಅವು ಉತ್ತಮ ಕಾರಣಗಳಾಗಿವೆಯಾದರೂ ಅದಕ್ಕಿಂತಲೂ ಮುಖ್ಯವಾದ ಕೆಲವು ಸಂಗತಿಗಳಿವೆ.
ಸ್ಕಾಟ್‌ಲೆಂಡ್‌ನ ತತ್ವಜ್ಞಾನಿ ಡೇವಿಡ್ ಹ್ಯೂಮ್ “ ಇತಿಹಾಸವನ್ನು ಅಧ್ಯಯನ ಮಾಡಲು ಮುಖ್ಯ ಕಾರಣವೆಂದರೆ ಮಾನವ ಸ್ವಭಾವದ ಸ್ಥಿರ ಮತ್ತು ಸಾರ್ವತ್ರಿಕ ತತ್ವಗಳನ್ನು ಕಂಡುಹಿಡಿಯುವುದು ” ಎಂದು ಹೇಳುತ್ತಾರೆ. ಯುದ್ಧಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮಾನವ ಜೀವನದ ಬೇರೆ ಯಾವುದೇ ಕ್ಷೇತ್ರದಲ್ಲಿ ಆ ಪಾಠಗಳನ್ನು ಕಲಿಯುವುದು ಹೆಚ್ಚು ಮುಖ್ಯ ಎನಿಸುವುದಿಲ್ಲ.
ಯುದ್ಧಗಳನ್ನು ಅಧ್ಯಯನ ಮಾಡುವ ಮೂಲಕ ನಾವು ನಮ್ಮ ಬಗ್ಗೆ ಪಾಠಗಳನ್ನು ಕಲಿಯಬಹುದು. ನಾವು ಯುದ್ಧಗಳೊಳಗೆ ಹೇಗೆ ಪ್ರವೇಶಿಸುತ್ತೇವೆ, ಅವುಗಳ ವಿರುದ್ಧ ಏಕೆ ಹೋರಾಡುತ್ತೇವೆ ಹಾಗೂ ಇತರರ ಮೇಲೆ ನಡೆದ ಅಸಾಧಾರಣ ಮಟ್ಟದ ಕ್ರೌರ್ಯ ಮತ್ತು ವಿನಾಶವನ್ನು ಸಮರ್ಥಿಸಲು ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ನಾವು ಪಾಠಗಳನ್ನು ಕಲಿಯಲು ಸಾಧ್ಯವಿದೆ.
ಇದನ್ನೂ ಓದಿ:‘ನಯಾ ಭಾರತ್’ನಲ್ಲಿ ದೊಡ್ಡ ಉದ್ದಿಮೆ ಸಮೂಹಗಳು ಕಳವಳಗೊಳಿಸುಷ್ಟು ಹಿಗ್ಗುತ್ತಿವೆ
ಜಪಾನ್ ವಿರುದ್ಧ ಪೆಸಿಫಿಕ್‌ನಲ್ಲಿ ನಡೆದ ಯುದ್ಧದಿಂದ ಮತ್ತು ವಿಶೇಷವಾಗಿ ಹಿರೋಷಿಮಾ ಮತ್ತು ನಾಗಸಾಕಿಯ ಪರಮಾಣು ಬಾಂಬ್ ದಾಳಿಯಿಂದ ನಮಗೆ ಬಹಿರಂಗಗೊಂಡ ಮಾನವ ಸ್ವಭಾವದ ಬಗ್ಗೆ ಪ್ರಮುಖವಾಗಿ ಮೂರು ಪಾಠಗಳನ್ನು ಕಲಿಯಬಹುದು.
ಮೊದಲನೆಯ ಪಾಠ : ಮಾನವರು ಬುಡಕಟ್ಟು ಜೀವಿಗಳು.
ಪ್ರೈಮಟಾಲಜಿಸ್ಟ್ ( ಪ್ರೈಮೇಟ್ಸ್‌ಗಳನ್ನು ಕುರಿತ ಪ್ರಾಣಿಶಾಸ್ತ್ರಜ್ಞ) ಫ್ರಾನ್ಸ್ ಡಿ ವಾಲ್ ಅವರು ಒಮ್ಮೆ ನ್ಯೂ ಗಿನಿಯಾದ ಎತ್ತರದ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದ ಬಗ್ಗೆ ಅಧ್ಯಯನ ಮಾಡುತ್ತಿದ್ದ ಜನಾಂಗ ಶಾಸ್ತ್ರಜ್ಞರಿಂದ ತಾವು ಕೇಳಿದ ಕಥೆಯನ್ನು ಹೇಳುತ್ತಾರೆ : “ ಒಂದು ದಿನ ಕೆಲವು ಸಂಶೋಧಕರು ಇಬ್ಬರು ಬುಡಕಟ್ಟು ಜನರಿಗೆ ವಿಮಾನ ಹಾರಾಟವನ್ನು ನೀಡಿದರು. ಅವರು ಒಪ್ಪಿದರು. ಆದರೆ ಹತ್ತುವ ಮೊದಲು ಅವರು “ ದಯವಿಟ್ಟು ಎರಡು ದೊಡ್ಡ ಕಲ್ಲುಗಳನ್ನು ವಿಮಾನದಲ್ಲಿ ತರಬಹುದೇ? ” ಎಂದು ವಿನಂತಿಸಿದ್ದರು. ಸಂಶೋಧಕರು ಏಕೆ ಎಂದು ಕೇಳಿದಾಗ, ಬುಡಕಟ್ಟು ಜನರು ಅದನ್ನು ತಮ್ಮ ಶತ್ರುಗಳ ಹಳ್ಳಿಯ ಮೇಲೆ ಎಸೆಯಲು ಬಯಸುತ್ತೇವೆ ಎಂದು ಹೇಳಿದರು. ”
ಈ ಕತೆಯನ್ನು ಹೇಳಿದ ಜನಾಂಗಶಾಸ್ತ್ರಜ್ಞರು ನವಶಿಲಾಯುಗದ ಮನುಷ್ಯನಿಂದ ಬಾಂಬ್ ದಾಳಿಯ ಆವಿಷ್ಕಾರಕ್ಕಾಗಿ ನಾವು ತಯಾರಾಗಿದ್ದೇವೆ ಎಂದು ಹೇಳಿದ್ದರು.
ಅಮೆರಿಕದ ವಾಯುಪಡೆಯವರು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಆ ನಿರ್ಣಾಯಕ ಕಾರ್ಯಾಚರಣೆಗಳನ್ನು ಹಾರಿಸಿದಾಗ ತಂತ್ರಜ್ಞಾನವು ತುಂಬಾ ವಿಭಿನ್ನವಾಗಿತ್ತು. ಆದರೆ ಮಾನವನ ಮನೋವಿಜ್ಞಾನವು ಅಷ್ಟೊಂದು ಬದಲಾಗಿಲ್ಲ. ಹಿಂಸೆಯನ್ನು ಹೇರಲು ನಮ್ಮ ಪೂರ್ವಜರನ್ನು ಪ್ರೇರೇಪಿಸಿದ ಅದೇ ರೀತಿಯ ಭಾವನೆಗಳು ನಮ್ಮನ್ನೂ ಪ್ರೇರೇಪಿಸಬಹುದು. ಹಾಗಾಗಿಯೇ ಐನ್‌ಸ್ಟೈನ್ “ಪರಮಾಣು ಶಸ್ತ್ರಾಸ್ತ್ರಗಳು ನಮ್ಮ ಆಲೋಚನಾ ವಿಧಾನಗಳನ್ನು ಹೊರತುಪಡಿಸಿ ಎಲ್ಲವನ್ನೂ ಬದಲಾಯಿಸಿವೆ.” ಎಂದು ಹೇಳುತ್ತಾರೆ.
ಜಪಾನ್‌ನೊಂದಿಗಿನ ಯುದ್ಧದ ಬುಡಕಟ್ಟು ಆಯಾಮವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಬಹುಪಾಲು ಜನರು ಮಿಲಿಟರಿ ನಾಯಕರ ಮತ್ತು ನಾಗರಿಕರ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗಿರುವುದನ್ನು ಗಮನಿಸಬೇಕಾಗುತ್ತದೆ. ಇಡೀ ಜನಾಂಗಗಳನ್ನು ಮತ್ತು ರಾಷ್ಟ್ರಗಳನ್ನು ರಾಕ್ಷಸೀಕರಣಗೊಳಿಸಲಾಯಿತು. ಜಪಾನಿನ ಕಡೆಯಿಂದ ಕೆಲವರು ಸೂರ್ಯ ದೇವರ ವಂಶಸ್ಥರಾಗಿ ತಮ್ಮ ಜನಾಂಗೀಯ ಶ್ರೇಷ್ಠತೆಯನ್ನು ನಂಬಿದ್ದರು. ಅಂತಹ ದೃಷ್ಟಿಕೋನವು ಮಿತ್ರರಾಷ್ಟ್ರಗಳ ಯುದ್ಧ ಕೈದಿಗಳ ವಿರುದ್ಧದ ಕ್ರೌರ್ಯವನ್ನು ಸಮರ್ಥಿಸುವುದನ್ನು ಸುಲಭಗೊಳಿಸಿತು. ಮತ್ತು ಮಿತ್ರರಾಷ್ಟ್ರಗಳ ಕಡೆಯಿಂದ ಕೆಲವರು ಜಪಾನೀಯರ ಬಗ್ಗೆ ಅವರು ಮನುಷ್ಯ ಜಾತಿಗಿಂತಲೂ ಕೆಳಗಿನವರು ಎನ್ನುವಂತೆ ಮಾತನಾಡಿದರು. ಉದಾಹರಣೆಗೆ, ಆಸ್ಟ್ರೇಲಿಯಾದ ಜನರಲ್ ಸರ್ ಥಾಮಸ್ ಬ್ಯೂಲಿ “ ಜಪಾನೀಯರು ಮನುಷ್ಯ ಮತ್ತು ವಾನರದ ನಡುವಿನ ಸಂತತಿ ” ಎಂದು ಹೇಳಿದ್ದರು.
ಇದಕ್ಕೂ ಹಿರೋಷಿಮಾ ಮತ್ತು ನಾಗಸಾಕಿಗೂ ಏನು ಸಂಬಂಧ ? ಶತ್ರುವಿನ ಬಗ್ಗೆ ಇರಬಹುದಾದ ಬುಡಕಟ್ಟು ದ್ವೇಷವು ಕನಿಷ್ಠಪಕ್ಷ ಅವರ ಮೇಲೆ ದಾಳಿ ಮಾಡಬೇಕೇ ಎಂದು ನಿರ್ಧರಿಸುವಲ್ಲಿ ಎದುರಾಗುವ ಅವಶ್ಯಕ ಪ್ರಶ್ನೆಗಳನ್ನು ಬದಿಗಿರಿಸುತ್ತದೆ.
1945ರ ಆರಂಭದ ವೇಳೆಗೆ ಜಪಾನ್ ಸೋಲುವುದು ಖಚಿತವಾಗಿತ್ತು. ರಾಷ್ಟ್ರವು ನಾಶವಾಯಿತು. ನೌಕಾ ದಿಗ್ಬಂಧನದಿಂದ ಆರ್ಥಿಕತೆಯು ಕುಸಿದು ನೆಲಕಚ್ಚಿತ್ತು. ಸೋವಿಯತ್ ಸೈನ್ಯವು ಆಕ್ರಮಣ ಮಾಡಲು ಸಿದ್ಧವಾಗಿತ್ತು. ಇಂದು ಅನೇಕ ಇತಿಹಾಸಕಾರರು ಪರಮಾಣು ಬಾಂಬ್ ದಾಳಿ ಮಾಡದೆ ಹೋಗಿದ್ದರೂ ಆ ಸಮಯದಲ್ಲಿ ಜಪಾನ್ ಶರಣಾಗುತ್ತಿತ್ತು ಎಂದು ನಂಬುತ್ತಾರೆ.
ಪರಮಾಣು ಬಾಂಬ್‌ಗಳನ್ನು ಬಳಸಬೇಕೆ ಎಂದು ನಿರ್ಧರಿಸುವ ಸಂದರ್ಭದಲ್ಲಿ “ಸರ್ವಾನುಮತದ, ಸ್ವಪ್ರೇರಣೆಯ , ಪ್ರಶ್ನಾತೀತ ಒಪ್ಪಂದ” ಇದೆ ಎಂದು ಚರ್ಚಿಲ್ ಬರೆದಿದ್ದರು. ಟಾರ್ಗೆಟ್ ಕಮಿಟಿಯ ಒಬ್ಬ ಸದಸ್ಯನೂ ಅವುಗಳನ್ನು ಬಳಸುವುದರ ವಿರುದ್ಧ ನೈತಿಕತೆಯ ನೆಲೆಯಲ್ಲಿ ಪ್ರಶ್ನಿಸಲಿಲ್ಲ ಎಂದು ಇತಿಹಾಸಕಾರ ಪಾಲ್ ಹ್ಯಾಮ್ ಹೇಳುತ್ತಾರೆ. ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದಾದ ಯಾವುದೇ ನಿಜವಾದ ಸಲಹೆಗಳನ್ನೂ ನೀಡಲಿಲ್ಲ. ಯುದ್ಧ ಕಾರ್ಯದರ್ಶಿ ಹೆನ್ರಿ ಸ್ಟಿಮ್‌ಸನ್ ಒಂದು ಪ್ರಾತ್ಯಕ್ಷಿಕೆಯನ್ನು ಒದಗಿಸುವ ಸಾಧ್ಯತೆಯನ್ನು ಸೂಚಿಸಿದ್ದರೂ ಆ ಸಲಹೆಯನ್ನು ತ್ವರಿತವಾಗಿ ತಳ್ಳಿಹಾಕಲಾಯಿತು.
ಯುದ್ಧವನ್ನು ಅಧ್ಯಯನ ಮಾಡುವುದು ನಮ್ಮ ಆಲೋಚನೆಯೊಳಗಿನ ಬುಡಕಟ್ಟು ಆಯಾಮವನ್ನು ಬಹಿರಂಗಪಡಿಸುತ್ತದೆ. ಆ ಪ್ರವೃತ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾವು ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ, ತನ್ಮೂಲಕ ಅನಗತ್ಯವಾಗಿ ಜೀವಹರಣ ಮಾಡುವುದನ್ನು ತಪ್ಪಿಸಬಹುದು.
ಎರಡನೇ ಪಾಠ: ದೂರದಿಂದ ಕೊಲ್ಲುವುದು ಸುಲಭ.
ಜಾರ್ಜ್ ಆರ್ವೆಲ್ ಒಮ್ಮೆ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಹೋರಾಡಿದ ಅನುಭವದ ಬಗ್ಗೆ ಬರೆದಿದ್ದಾರೆ. ನಾವು ಒಮ್ಮೆ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲುವುದನ್ನು ಹೇಗೆ ತಪ್ಪಿಸಿದೆವು ಎಂಬುದರ ಬಗ್ಗೆ ಅವರು ಒಂದು ಕಥೆಯನ್ನು ಹೇಳಿದ್ದರು. “ ಅರೆಬರೆ ಉಡುಪು ಧರಿಸಿ, ತನ್ನ ಪ್ಯಾಂಟನ್ನು ಎರಡೂ ಕೈಗಳಿಂದ ಹಿಡಿದುಕೊಂಡು ಓಡುತ್ತಿರುವ ವ್ಯಕ್ತಿಯನ್ನು ನಾನು ನೋಡಿದೆ. ನಾನು ಫ್ಯಾಸಿಸ್ಟರ ಮೇಲೆ ಗುಂಡು ಹಾರಿಸಲು ಇಲ್ಲಿಗೆ ಬಂದಿದ್ದೆ. ಆದರೆ ಪ್ಯಾಂಟ್ ಹಿಡಿದಿರುವ ವ್ಯಕ್ತಿ ಫ್ಯಾಸಿಸ್ಟ್ ಅಲ್ಲ ಅವನು ನಮ್ಮಂತೆಯೇ ಸಹಜೀವಿ ಎಂದು ತಿಳಿಯಿತು ಹಾಗಾಗಿ ಅವನ ಮೇಲೆ ಗುಂಡು ಹಾರಿಸಲು ಮನಸ್ಸಾಗಲಿಲ್ಲ” ಆರ್ವೆಲ್ ದೃಷ್ಟಿಯಲ್ಲಿ ಆ ಸಣ್ಣ ನಿರೂಪಣೆಯೇ ಶತ್ರುವನ್ನು ಮಾನವೀಯಗೊಳಿಸಿತ್ತು
ಆದರೆ 20,000 ಅಡಿ ಎತ್ತರದಲ್ಲಿ, ನಿಮ್ಮ ಶತ್ರುವನ್ನು ಮಾನವೀಯಗೊಳಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲ. ಜನರ ಮೇಲೆ ಬಾಂಬ್ ದಾಳಿ ನಡೆಸುವುದಕ್ಕೂ ಒಬ್ಬೊಬ್ಬರಾಗಿ ಪಿಸ್ತೂಲ್ ನಿಂದ ಗುಂಡು ಹಾರಿಸುವುದಕ್ಕೂ ಯಾವುದೇ ನೈತಿಕ ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಇದು ವಿಭಿನ್ನವಾಗಿ ಕಾಣುವುದೇಕೆಂದರೆ ನೀವು ಅವರನ್ನು ನೋಡಲು ಸಾಧ್ಯವಿಲ್ಲ. ಯಾವುದೇ ಒಬ್ಬ ನಿರ್ದಿಷ್ಟ ಮಹಿಳೆ ಅಥವಾ ನಿರ್ದಿಷ್ಟ ಮಗು ಸಾಯಬೇಕೆಂದು ನೀವು ಬಯಸುವುದಿಲ್ಲ.
ಮನೋವೈಜ್ಞಾನಿಕ ಅಂಶವೆಂದರೆ, ನಾವು ನೋಡದ ಮತ್ತು ಗುರುತಿಸಲು ಸಾಧ್ಯವಾಗದ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಸಾವಿಗೆ ಕಾರಣವಾಗುವ ಆಧುನಿಕ ಯುದ್ಧವು ಉಂಟುಮಾಡುವ ಆಘಾತಕ್ಕಿಂತಲೂ, ಗುರುತಿಸಬಹುದಾದ ವ್ಯಕ್ತಿಗಳ ವಿರುದ್ಧದ ದುಷ್ಕೃತ್ಯದ-ಭೀಭತ್ಸ ಕಥೆಗಳು ನಮಗೆ ಹೆಚ್ಚು ಆಘಾತಕಾರಿಯಾಗಿ ಕಾಣುತ್ತವೆ. ಅದು ನಮ್ಮನ್ನು ಚಿಂತೆಗೀಡಲೇಬೇಕು ಏಕೆಂದರೆ ನಮ್ಮನ್ನು ಹೆಚ್ಚು ಆಘಾತಗೊಳಿಸುವ ಸಂಗತಿಗಳನ್ನು ನೈತಿಕವಾಗಿ ಅತ್ಯಂತ ಭಯಾನಕವಾದ ಘಟನೆಗಳಿಗೆ ಬದಲಿಯಾಗಿ ಕಾಣಲಾಗುವುದಿಲ್ಲ.
ಆ ಆಘಾತಕಾರಿ ಅಂಕಿಅಂಶಗಳನ್ನು ಮಾನವೀಯಗೊಳಿಸುವುದರಲ್ಲಿಯೇ ಇತಿಹಾಸದ ಮೌಲ್ಯವು ಅಡಗಿದೆ. ಅಲ್ಲಿನ ಸಂತ್ರಸ್ತರ ಕಥೆಗಳನ್ನು ಹೇಳುವ ಮೂಲಕ, ಅವರ ದುಃಖ-ಯಾತನೆ ವೇದನೆಯನ್ನು ತೋರಿಸುವ ಮೂಲಕ ಮತ್ತು ಒಟ್ಟಾರೆಯಾಗಿ ಅವುಗಳನ್ನು ಮರೆಯುವ ನಮ್ಮ ಪ್ರವೃತ್ತಿಯನ್ನು ನೆನಪಿಸುವ ಮೂಲಕ ಈ ಮಾನವೀಯಗೊಳಿಸುವ ಪ್ರಕ್ರಿಯೆ ವ್ಯಕ್ತವಾಗುತ್ತದೆ.
ಮೂರನೆಯ ಪಾಠ : ಪ್ರತೀಕಾರ ಮತ್ತು ಸೇಡು
ಯುದ್ಧವು ನಮ್ಮ ಬಗ್ಗೆ ನಮಗೆ ಕಲಿಸುತ್ತದೆ ಎಂದು ನಾನು ಭಾವಿಸುವ ಅಂತಿಮ ಪಾಠವು ನಮ್ಮ ಮನೋವಿಜ್ಞಾನದ ಪ್ರತೀಕಾರಾತ್ಮಕ-ಸೇಡಿನ ಭಾಗವನ್ನು ಹೊರತರುತ್ತದೆ.
939ರ ಸೆಪ್ಟೆಂಬರ್ 1ರಂದು, ಬ್ರಿಟನ್ ಜರ್ಮನಿಯ ಮೇಲೆ ಯುದ್ಧ ಘೋಷಿಸುವ ಎರಡು ದಿನಗಳ ಮುನ್ನ ಅಧ್ಯಕ್ಷ ರೂಸ್‌ವೆಲ್ಟ್ ರೇಡಿಯೋದಲ್ಲಿ ಭಾಷಣ ಮಾಡಿದರು. ಮುಂಬರುವ ಸಂಘರ್ಷದಲ್ಲಿ ಯಾವುದೇ ಪಾತ್ರವಿಲ್ಲದ ಲಕ್ಷಾಂತರ ಜನರು ಇದಕ್ಕೆ ಬಲಿಯಾಗುತ್ತಾರೆ ಎಂದು ರೂಸ್‌ವೆಲ್ಟ್ ಆತಂಕ ವ್ಯಕ್ತಪಡಿಸಿದರು. ರೂಸ್‌ವೆಲ್ಟ್, ಯುರೋಪಿಯನ್ ರಾಷ್ಟ್ರಗಳಿಗೆ ಮನವಿ ಸಲ್ಲಿಸಿ ತಮ್ಮ ಸಶಸ್ತ್ರ ಪಡೆಗಳು ಯಾವುದೇ ಸಂದರ್ಭದಲ್ಲಿ ಆದರೂ ಸಹ ನಾಗರಿಕ ಜನಸಂಖ್ಯೆಯ ಮೇಲೆ ವಾಯು ಬಾಂಬ್ ದಾಳಿಯನ್ನು ಕೈಗೊಳ್ಳುವುದಿಲ್ಲ ಎಂದು ದೃಢೀಕರಿಸಲು ಕರೆ ನೀಡಿದರು.
ಅಮೆರಿಕವನ್ನೂ ಸೇರಿದಂತೆ 1945ರ ಜುಲೈ ವೇಳೆಗೆ ಜಪಾನಿನ 66 ನಗರಗಳ ಮೇಲೆ ಬಾಂಬ್ ದಾಳಿ ನಡೆಸಿದ ಯಾವ ದೇಶವೂ ಈ ಉನ್ನತ ತತ್ವವನ್ನು ಗೌರವಿಸಲಾಗಲಿಲ್ಲ. ತತ್ವಜ್ಞಾನಿ ಎ.ಸಿ. ಗ್ರೇಲಿಂಗ್ ತನ್ನ ಪುಸ್ತಕ Among the Dead Cities ನಲ್ಲಿ, ಮಿತ್ರರಾಷ್ಟ್ರಗಳು ನಾಗರಿಕರ ಮೇಲೆ ಬಾಂಬ್ ದಾಳಿ ಮಾಡದಿರುವ ಈ ಉದಾತ್ತ ತತ್ವದಿಂದ ಹೇಗೆ ದೂರ ಸರಿದವು ಎಂಬುದನ್ನು ವಿವರಿಸುತ್ತಾರೆ. ನೌಕಾಯಾನ ಮತ್ತು ನಿರ್ದಿಷ್ಟ ಬಾಂಬ್ ದಾಳಿಯ ಗುರಿಯನ್ನು ನಿರ್ಧರಿಸುವ ಸಮಸ್ಯೆಗಳಿಂದಾಗಿ ನಿಖರವಾದ ಗುರಿಗಳ ಮೇಲೆ ದಾಳಿ ನಡೆಸುವುದು ಕಷ್ಟಕರವಾಗಿತ್ತು, ವಿಶೇಷವಾಗಿ ಯುರೋಪ್‌ನಲ್ಲಿ ಯುದ್ಧದ ಆರಂಭಿಕ ವರ್ಷಗಳಲ್ಲಿ ತಂತ್ರಜ್ಞಾನಗಳು ಕಡಿಮೆ ಮುಂದುವರೆದಿದ್ದುದು ಹಾಗೂ ಆಕಾಶದಲ್ಲಿ ಆಗಾಗ್ಗೆ ಮೋಡ ಕವಿದಿದ್ದುದು ಕಾರಣವಾಗಿತ್ತು. ಮತ್ತೊಂದೆಡೆ ಪ್ರತೀಕಾರದ ಹಿಂಸಾಚಾರದ ತೀವ್ರತೆ ಹೆಚ್ಚಾಗಿದ್ದುದರಿಂದಲೂ ಈ ದೂರಸರಿಯುವಿಕೆಗೆ ಕಾರಣವಾಗಿತ್ತು.
ಯುರೋಪಿನ ಈ ಉದಾಹರಣೆಯನ್ನು ಪರಿಗಣಿಸಿರಿ. ಆಗಸ್ಟ್ 24, 1940ರ ರಾತ್ರಿ ಜರ್ಮನ್ ಬಾಂಬರ್‌ಗಳ ಗುಂಪು ಆಕಸ್ಮಿಕವಾಗಿ ಲಂಡನ್ ಮೇಲೆ ಬಾಂಬ್ ದಾಳಿ ನಡೆಸಿತ್ತು. ಅವರು ವಿಮಾನ ಕಾರ್ಖಾನೆಯ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದರು ಆದರೆ ಅವರು ದಾರಿ ತಪ್ಪಿದ್ದರು. ಲಂಡನ್‌ನಲ್ಲಿ, ಬಾಂಬ್ ಸ್ಫೋಟವು ತಪ್ಪು ಎಂದು ಯಾರಿಗೂ ತಿಳಿದಿರಲಿಲ್ಲ. ನಾಗರಿಕರನ್ನು ಕೊಲ್ಲುವುದರ ವಿರುದ್ಧ ಸೂಕ್ಷ್ಮ ನೈತಿಕ ನಿಯಮವು ಬಹುಮಟ್ಟಿಗೆ ಇಲ್ಲವಾಗಿತ್ತು. ಬ್ರಿಟಿಷ್ ವಾರ್ ಕ್ಯಾಬಿನೆಟ್ (ಯುದ್ಧ ಸಮಿತಿ) ಪ್ರತೀಕಾರಕ್ಕೆ ಆದೇಶಿಸಿತು. ಮರುದಿನ ರಾತ್ರಿ ಬರ್ಲಿನ್‌ಗೆ ಎಂಬತ್ತೊಂದು ಬಾಂಬರ್‌ಗಳನ್ನು ಕಳುಹಿಸಿತು.
ಈ ಸೇಡಿಗೆ ಸೇಡು ಪ್ರಕ್ರಿಯೆ ಎರಡೂ ಕಡೆಯವರನ್ನು ಮತ್ತಷ್ಟು ನೈತಿಕ ಅಧಃಪತನಕ್ಕೆ ತಳ್ಳಿತು. ಸಾರ್ವಜನಿಕ ಅಭಿಪ್ರಾಯವು ಸಹ ಕೆಲವೊಮ್ಮೆ ಇದನ್ನೇ ಒತ್ತಾಯಿಸಿತ್ತು. ಒಂದು ಸಂದರ್ಭದಲ್ಲಿ ಚರ್ಚಿಲ್ ಅವರನ್ನು ಅನುಮೋದನೆಯ ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು ಅವರು ನೆರೆದಿದ್ದ ಜನಸಮೂಹವನ್ನುದ್ದೇಶಿಸಿ “ಜರ್ಮನ್ನರು ನಮ್ಮ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ನಾವು ಇನ್ನೂ ಹೆಚ್ಚಿನ ಪ್ರಮಾಣದ ದಾಳಿ ನಡೆಸುತ್ತೇವೆ ” ಎಂದು ಹೇಳಿದ್ದರು.
ಬರ್ಲಿನ್‌ನಲ್ಲಿ ಮಾಡಿದ ಭಾಷಣದಲ್ಲಿ ಹಿಟ್ಲರ್: “ ಬ್ರಿಟಿಷ್ ವಾಯುಪಡೆಯು ಎರಡು ಸಾವಿರ ಅಥವಾ ಮೂರು ಸಾವಿರ ಕಿಲೋಗ್ರಾಂಗಳಷ್ಟು ಬಾಂಬುಗಳನ್ನು ಹಾಕಿದರೆ, ನಾವು ಒಂದು ಲಕ್ಷ ಐವತ್ತು ಸಾವಿರ, ಎರಡು ಲಕ್ಷ ಮೂವತ್ತು ಸಾವಿರ … ಒಂದು ಮಿಲಿಯನ್ ಕಿಲೋಗ್ರಾಂ…. ಅವರು ನಮ್ಮ ನಗರಗಳ ಮೇಲೆ ದಾಳಿ ಮಾಡುತ್ತಾರೆ ಎಂದು ಹೇಳಿದಾಗ, ನಾವು ಅವರ ನಗರಗಳನ್ನು ಅಳಿಸಿಹಾಕುತ್ತೇವೆ.” ಎಂದು ಘೋಷಿಸಿದ್ದ.
ಎರಡನೆಯ ಮಹಾಯುದ್ಧವು ನಿಸ್ಸಂದೇಹವಾಗಿ ಜರ್ಮನ್ ಮತ್ತು ಜಪಾನಿನ ಮಿಲಿಟರಿವಾದವನ್ನು ಸೋಲಿಸುವ ಗುರಿಯನ್ನು ಹೊಂದಿತ್ತು. ಆದರೆ ಒಟ್ಟಾರೆ ಕಾರಣವು ಸರಿಯಾಗಿರಬಹುದು ಎಂಬ ಕಾರಣಕ್ಕಾಗಿಯೇ ಅದನ್ನು ಬೆನ್ನಟ್ಟಲು ಮಾಡಿದ ಎಲ್ಲ ಕ್ರಮಗಳನ್ನೂ ಸಮರ್ಥಿಸಲಾಗುವುದಿಲ್ಲ. ಪ್ರತೀಕಾರವು ಯುದ್ಧದ ಒಟ್ಟಾರೆ ನ್ಯಾಯಕ್ಕೆ ಬೆದರಿಕೆಯೊಡ್ಡಬಹುದು, ಏಕೆಂದರೆ ಇದು ಸಂಪೂರ್ಣವಾಗಿ ಅಗತ್ಯವಿದ್ದ ಸಂದರ್ಭಗಳನ್ನು ಹೊರತುಪಡಿಸಿ ನಾಗರಿಕರನ್ನು ಕೊಲ್ಲುವುದನ್ನು ತಪ್ಪಿಸಬೇಕಾದ ನೈತಿಕ ಅವಶ್ಯಕತೆಯನ್ನು ಮರೆಮಾಡುತ್ತದೆ. ಹಾಗೆಯೇ ಇದು ನಮ್ಮ ಉದಾತ್ತ ಚಿಂತಕರು ಪ್ರತಿಪಾದಿಸುವ ತತ್ವಗಳಿಂದ ನಮ್ಮನ್ನು ದೂರ ಮಾಡುವುದೇ ಅಲ್ಲದೆ “ ಒಂದು ಕಣ್ಣಿಗೆ ಒಂದು ಕಣ್ಣು” ಮನೋಭಾವವು ನಮ್ಮೆಲ್ಲರನ್ನೂ ಅಂಧರನ್ನಾಗಿಸುತ್ತದೆ.
ಅಂತಿಮ ಸಂದೇಶ
ಯುದ್ಧಗಳ ಅಧ್ಯಯನದಿಂದ ಮಾನವ ಸ್ವಭಾವದ ಬಗ್ಗೆ ನಾವು ಕಲಿಯಬಹುದಾದ ಪಾಠಗಳ ಮೂರು ಉದಾಹರಣೆಗಳನ್ನು ನಾನು ನಿಮಗೆ ನೀಡಿದ್ದೇನೆ. ಇತಿಹಾಸದ ಪಾಠಗಳಿಗೆ ಕಿವಿಗೊಡಲು ವಿಫಲವಾದರೆ ಹೇಗೆ ಅಪಾಯದಿಂದ ತುಂಬಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆಯೊಂದಿಗೆ ನಾನು ಕೊನೆಗೊಳಿಸುತ್ತೇನೆ. ಈ ಅಂತಿಮ ಪಾಠವು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ – ಮತ್ತು ಯುದ್ಧದಲ್ಲಿ ಅವುಗಳ ಮೊದಲ ಮತ್ತು ಏಕೈಕ ಬಳಕೆಯ 70 ವರ್ಷಗಳ ನಂತರ, ಅವುಗಳ ಬಗ್ಗೆ ಮರುಚಿಂತನೆ ಮಾಡಲು ಈಗಿರುವುದಕ್ಕಿಂತ ಉತ್ತಮ ಸಮಯ ಯಾವುದಿದೆ ?
ನಿಮಗೆ ತಿಳಿದಿರುವಂತೆ, ಡೈನಮೈಟ್ ಅನ್ನು ಕಂಡುಹಿಡಿದ ನಂತರ ಆಲ್‌ಫ್ರೆಡ್ ನೊಬೆಲ್ ಪ್ರಾಮುಖ್ಯತೆಗೆ ಬಂದರು. ತದನಂತರ ಅವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿದರು. ನೊಬೆಲ್ ಅವರ ಎರಡು ಪರಂಪರೆಗಳು ಸಾಕಷ್ಟು ಹೊಂದಿಕೆಯಾಗುವುದಿಲ್ಲ ಎಂದು ನೀವು ಭಾವಿಸಬಹುದು. ಆದರೆ ನೊಬೆಲ್ ಹಾಗೆ ಯೋಚಿಸಲಿಲ್ಲ. 1860ರ ದಶಕದಲ್ಲಿ ನೊಬೆಲ್ “ತಮ್ಮ ಡೈನಮೈಟ್ ಆವಿಷ್ಕಾರವು ವಿಶ್ವದ ಇತರ ಸಾವಿರ ಸಂಪ್ರದಾಯಗಳಿಗಿಂತ ಬೇಗನೆ ಶಾಂತಿಗೆ ಕಾರಣವಾಗುತ್ತದೆ, ಏಕೆಂದರೆ ಒಂದು ಕ್ಷಣದಲ್ಲಿ ಇಡೀ ಸೈನ್ಯವನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂದು ಜನರು ಕಂಡುಕೊಂಡ ತಕ್ಷಣ, ಅವರು ಖಂಡಿತವಾಗಿಯೂ ಶಾಶ್ವತ ಶಾಂತಿಯಲ್ಲಿ ನಂಬಿಕೆ ಇರಿಸುತ್ತಾರೆ ” ಎಂದು ಹೇಳಿದರು.
ಇದನ್ನೂ ಓದಿ:ಚಂದ್ರಯಾನಕ್ಕೆ ಬೇಕೆ ದೇವರ ಕೃಪಾಶೀರ್ವಾದ?
ದುರದೃಷ್ಟವಶಾತ್ ಆ ಶಾಶ್ವತ ಶಾಂತಿ ಕಾಣಲಾಗಲಿಲ್ಲ . ಹಾರ್ವರ್ಡ್ ಮನಶ್ಶಾಸ್ತ್ರಜ್ಞ ಸ್ಟೀವನ್ ಪಿಂಕರ್ ಅವರು ಜಲಾಂತರ್ಗಾಮಿ ನೌಕೆಗಳು, ಫಿರಂಗಿ ಮತ್ತು ಮಷಿನ್‌ಗನ್ ಪರವಾಗಿ ಇದೇ ರೀತಿಯ ಹೇಳಿಕೆಗಳನ್ನು ನೀಡಲಾಗಿರುವುದರ ಬಗ್ಗೆ ಗಮನಸೆಳೆದಿದ್ದಾರೆ. ರಾಜಕೀಯ ವಿಜ್ಞಾನಿ ಕೆನ್ನೆತ್ ವಾಲ್ಜ್‌ನಂತಹ ಕೆಲವರು ಪರಮಾಣು ಶಸ್ತ್ರಾಸ್ತ್ರಗಳು ಜಗತ್ತನ್ನು ಸುರಕ್ಷಿತವಾಗಿಸುತ್ತದೆ ಎಂದು ವಾದಿಸಿದ್ದಾರೆ. ಏಕೆಂದರೆ ಸಂಭಾವ್ಯ ಆಕ್ರಮಣಕಾರರು ಪರಮಾಣು ವಿನಾಶದಿಂದ ಭಯಭೀತರಾಗುತ್ತಾರೆ.
ಆಗಸ್ಟ್ 6, 1945 ರಂದು, ಅಮೇರಿಕನ್ ಭೌತಶಾಸ್ತ್ರಜ್ಞ ಲೂಯಿಸ್ ಅಲ್ವಾರೆಜ್ ಹಿರೋಷಿಮಾದ ಮೇಲೆ ಪರಮಾಣು ಬಾಂಬ್ ದಾಳಿ ಕಾರ್ಯಾಚರಣೆಯ ಜೊತೆಗಿದ್ದ ಬ್ಯಾಕಪ್ ವಿಮಾನದಲ್ಲಿ ಸವಾರಿ ಮಾಡಿದರು. ಹಿರೋಷಿಮಾ ಸ್ಫೋಟದ ಪ್ರಕಾಶಮಾನವಾದ ಮಿಂಚನ್ನು ಅಲ್ವಾರೆಜ್ ನೋಡಿದರು ಮತ್ತು ಬಾಂಬ್‌ಗಳ ಆಘಾತದ ಅಲೆಗಳ ಎರಡು ತೀಕ್ಷ್ಣವಾದ ಹೊಡೆತಗಳು ವಿಮಾನಕ್ಕೆ ಅಪ್ಪಳಿಸಿದವು. ಟಿನಿಯನ್ ದ್ವೀಪದ ನೆಲೆಗೆ ಹಿಂದಿರುಗುವಾಗ ಅಲ್ವಾರೆಜ್ ತನ್ನ ನಾಲ್ಕು ವರ್ಷದ ಮಗ ವಾಲ್ಟರ್‌ಗೆ ತನ್ನ ಅನುಭವದ ಬಗ್ಗೆ ಪತ್ರ ಬರೆಯುತ್ತಾರೆ. “ಇಂದು ಬೆಳಿಗ್ಗೆ ಸಾವಿರಾರು ಜಪಾನಿನ ನಾಗರಿಕರನ್ನು ಕೊಲ್ಲುವ ಮತ್ತು ಅಂಗವೈಕಲ್ಯಗೊಳಿಸುವ ಕ್ರಿಯೆಯಲ್ಲಿ ಭಾಗವಾಗಿರುವುದಕ್ಕೆ ನನಗೆ ವಿಷಾದವಿದೆ, ನಾವು ರಚಿಸಿದ ಈ ಭಯಾನಕ ಶಸ್ತ್ರಾಸ್ತ್ರವು ವಿಶ್ವದ ದೇಶಗಳನ್ನು ಒಟ್ಟುಗೂಡಿಸಬಹುದು ಮತ್ತು ಹೆಚ್ಚಿನ ಯುದ್ಧಗಳನ್ನು ತಡೆಯಬಹುದು ಎಂಬ ಭರವಸೆಯೊಂದಿಗೆ” ಎಂದು ಪತ್ರದಲ್ಲಿ ಹೇಳುತ್ತಾರೆ. ಡೈನಮೈಟ್ ಯುದ್ಧಗಳನ್ನು ನಿಲ್ಲಿಸುತ್ತದೆ ಎಂಬ ಆಲ್ಫ್ರೆಡ್ ನೊಬೆಲ್‌ನ ಭವಿಷ್ಯವಾಣಿಯ ಬಗ್ಗೆ ಅಲ್ವಾರೆಜ್ ಬರೆದಿದ್ದಾರೆ ಆದರೆ ಅದು ನಿಜವಾಗಲಿಲ್ಲ. ತದನಂತರ ಅವರು “ ನೊಬೆಲ್ ಅವರ ಕನಸನ್ನು ನನಸಾಗಿಸುವುದಕ್ಕಿಂತಲೂ ನಮ್ಮ ಹೊಸ ವಿನಾಶವು ಸಾವಿರಾರು ಪಟ್ಟು ಕೆಟ್ಟದಾಗಿದೆ ” ಎಂದು ಹೇಳುತ್ತಾರೆ.
ಇತಿಹಾಸದ ಪಾಠಗಳನ್ನು ಕಲಿಯಲು ವಿಫಲವಾದ ಒಂದು ಪರಿಪೂರ್ಣ ಉದಾಹರಣೆ ಇಲ್ಲಿದೆ ಎಂದು ನಾನು ಭಾವಿಸುತ್ತೇನೆ. ಎರಡೂ ಅವಿಷ್ಕಾರಗಳ ನಂತರ ಹಾಗೂ ಡೈನಮೈಟ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯ ನಂತರ ತಂತ್ರಜ್ಞಾನಗಳು ಬದಲಾದವು ಮತ್ತು ವಿನಾಶಕಾರಿ ಶಕ್ತಿ ಹೆಚ್ಚಾಗಿತ್ತು. ಆದರೆ ಮಾನವ ಸ್ವಭಾವವು ಹಾಗೆ ಬೆಳೆಯುವುದು ಸಾಧ್ಯವಿಲ್ಲ ಎಂಬ ವಾಸ್ತವವನ್ನು ನೊಬೆಲ್ ಮತ್ತು ಅಲ್ವಾರೆಜ್ ಗಮನಿಸಲು ವಿಫಲವಾಗಿದ್ದರು. ಅಂತಹ ಆಯುಧಗಳನ್ನು ಬಳಸಲು ನಿರ್ಧರಿಸುವ ಜನರು ಇನ್ನೂ ಪ್ರಾಚೀನವಾದ, ಸೇಡಿನ ಕ್ರಮದ ಅಥವಾ ಎಲ್ಲಾ ರೀತಿಯ ತಪ್ಪು ಕಲ್ಪನೆಗಳಿಗೆ ಒಳಗಾಗುತ್ತಾರೆ. ಹಾಗೂ ಪರಮಾಣು ಶಸ್ತ್ರಾಸ್ತ್ರಗಳಿಂದ ಜಗತ್ತಿನಲ್ಲಿ ಒಂದು ಅಪಘಾತವೂ ಸಹ ಮಹಾವಿನಾಶಕ್ಕೆ ಕಾರಣವಾಗಬಹುದು.
1960ರ ದಶಕದಲ್ಲಿ ಹೊಸ ಪರಮಾಣು ಶಸ್ತ್ರಾಸ್ತ್ರಗಳು, ಹೈಡ್ರೋಜನ್ ಬಾಂಬ್‌ಗಳು ಅಭಿವೃದ್ಧಿಪಡಿಸಲ್ಪಟ್ಟವು. ಅದು ಹಿರೋಷಿಮಾದ ಮೇಲೆ ಹಾಕಿದ ಬಾಂಬ್‌ಗಳ ಸಾವಿರ ಪಟ್ಟು ವಿನಾಶಕಾರಿ ಶಕ್ತಿಯನ್ನು ಹೊಂದಿದ್ದವು. ಟೈಟಾನ್-2 ಕ್ಷಿಪಣಿಯು ಎರಡನೇ ಮಹಾಯುದ್ಧದಲ್ಲಿ ಜಪಾನ್ ಮೇಲೆ ಹಾಕಲಾದ ಎರಡು ಪರಮಾಣು ಬಾಂಬ್‌ಗಳನ್ನೂ ಸೇರಿದಂತೆ ಒಟ್ಟು ಎಲ್ಲಾ ಬಾಂಬುಗಳಿಗಿಂತ ಮೂರು ಪಟ್ಟು ಹೆಚ್ಚು ವಿನಾಶಕಾರಿ ಶಕ್ತಿಯನ್ನು ಹೊಂದಿರುವ Warhead ಹೊಂದಿತ್ತು.
ಬಹುಶಃ ಯುದ್ಧದ ಇತಿಹಾಸಗಳು ನಮಗೆ ಕಲಿಸುವ ಪ್ರಮುಖ ಪಾಠವೆಂದರೆ, ಮಾನವರು ಯಾವಾಗಲೂ ತರ್ಕಬದ್ಧವಾಗಿ ಯೋಚಿಸುವುದಿಲ್ಲ. ಪರಮಾಣು ಅಸ್ತ್ರಗಳು ತುಂಬಿದ ಜಗತ್ತಿನಲ್ಲಿ ಅದು ನಮ್ಮಲ್ಲಿ ಭೀತಿಯನ್ನುಂಟುಮಾಡುತ್ತಿರಬೇಕು.
-೦-೦-೦-೦-
ಅಡಿ ಟಿಪ್ಪಣಿ :
28 ಮಾರ್ಚ್ 1979ರದು ಪೆನ್ಸಿಲ್ವೇನಿಯಾ ಬಳಿ ಇರುವ ತ್ರೀ ಮೈಲ್ ದ್ವೀಪದಲ್ಲಿ ಪರಮಾಣು ಘಟಕವೊಂದರ ರಿಯಾಕ್ಟರ್ ಸ್ಪೋಟಗೊಂಡು, ಆನಂತರ ರೇಡಿಯೇಷನ್ ಪರಿಣಾಮದಿಂದಲೇ 300ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದವು.
26 ಏಪ್ರಿಲ್ 1986ರಂದು ರಷ್ಯಾದ ಚೆರ್ನೋಬಿಲ್ ಪರಮಾಣು ಘಟಕದಲ್ಲಿ ರಿಯಾಕ್ಟರ್ ಸ್ಪೋಟಗೊಂದು ರೇಡಿಯೇಷನ್ ಪರಿಣಾಮವಾಗ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಕೆಲವು ವರ್ಷಗಳ ನಂತರ ಸಾವಿರಾರು ಜನರು ಇದರ ರೇಡಿಯೇಷನ್ ಪರಿಣಾಮದಿಂದಲೇ ಕ್ಯಾನ್ಸರ್ ಮತ್ತಿತರ ರೋಗಗಳಿಗೆ ತುತ್ತಾಗಿದ್ದಾರೆ.
11 ಮಾರ್ಚ್ 2011ರಂದು ಜಪಾನ್‌ನಲ್ಲಿ ಸುನಾಮಿ ಸಂಭವಿಸಿದಾಗ, ಸಮೀಪದ ಫುಕುಷಿಮಾ ದಲಿಚಿ ಪರಮಾಣು ಘಟಕದಲ್ಲಿ ಉಂಟಾದ ರೇಡಿಯೇಷನ್ ಸೋರಿಕೆಯ ಪರಿಣಾಮ ಕನಿಷ್ಠ 30ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದೇ ಅಲ್ಲದೆ ನಂತರದ ದಿನಗಳಲ್ಲೂ ಜನರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಅವಘಡದ ನಂತರ ಜಪಾನ್ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಈಗ ಪುನಃ ಆರಂಭಿಸಿದೆ.