ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು
ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಭಾರಿ ವಿಜಯ ಸಿಕ್ಕಿದೆ. ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ 2 ವರ್ಷಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಹಾಗಾಗಿ ಅವರು ಸಂಸದ ಸ್ಥಾನದ ಅನರ್ಹತೆಯಿಂದ ಬಚಾವ್ ಆಗಿದ್ದು, ಅವರು ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸಂಸದರಾಗಿ ಮುಂದುವರೆಯಲಿದ್ದಾರೆ.
2019 ರಲ್ಲಿ ಮಾಡಲಾಗಿದ್ದ ‘ಮೋದಿ’ ಉಪನಾಮದ ಬಗ್ಗೆಗಿನ ಟೀಕೆ ಪ್ರಕರಣದಲ್ಲಿ ರಾಹುಲ್ ಅವರು ದೋಷಿ ಎಂದು ಸೂರತ್ ನ್ಯಾಯಾಲಯವು ಮಾರ್ಚ್ 23ರಂದು ತೀರ್ಪು ನೀಡಿ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ಇದಾಗಿ ಒಂದು ದಿನದ ನಂತರ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಸೂರತ್ನ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಗುಜರಾತ್ ಹೈಕೋರ್ಟ್ ತಡೆಹಿಡಿಯಲು ನಿರಾಕರಿಸಿದ ಕಾರಣಕ್ಕೆ ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ರಾಹುಲ್ ಗಾಂಧಿಗೆ ಗರಿಷ್ಠ ಶಿಕ್ಷೆ ವಿಧಿಸಲು ಸೂರತ್ ನ್ಯಾಯಾಲಯ ಯಾವುದೇ ಕಾರಣವನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. “ಗರಿಷ್ಠ ಶಿಕ್ಷೆ ವಿಧಿಸಲು ವಿಚಾರಣಾ ನ್ಯಾಯಾಧೀಶರು ಯಾವುದೇ ಕಾರಣವನ್ನು ನೀಡಿಲ್ಲ. ಅಂತಿಮ ತೀರ್ಪಿನವರೆಗೆ ಅಪರಾಧ ನಿರ್ಣಯದ ಆದೇಶವನ್ನು ತಡೆಹಿಡಿಯಬೇಕಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರ ತ್ರಿಸದಸ್ಯ ಪೀಠ ಹೇಳಿದೆ.
ಇದನ್ನೂ ಓದಿ: ಮಣಿಪುರ: ರಾಹುಲ್ ಗಾಂಧಿ ಭೇಟಿ ಬೆನ್ನಿಗೆ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಸಾಧ್ಯತೆ
2019ರ ಏಪ್ರಿಲ್ನಲ್ಲಿ ಕರ್ನಾಟಕದ ಕೋಲಾರದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದ ರಾಹುಲ್ , “ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮ ಹೊಂದಿರುವುದು ಹೇಗೆ?” ಎಂದು ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಈ ಬಗ್ಗೆ ಉಲ್ಲೇಖಿಸಿದ ಸುಪ್ರೀಂಕೋರ್ಟ್, “ರಾಹುಲ್ ಅವರು ಉಚ್ಚಾರಣೆಗಳು ಉತ್ತಮ ಅಭಿರುಚಿಯಲ್ಲಿಲ್ಲ ಎಂದು ಹೇಳಿದ್ದು, “ಸಾರ್ವಜನಿಕ ಜೀವನದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರಿಕೆ ವಹಿಸಬೇಕು” ಎಂದು ಹೇಳಿದೆ.
ರಾಹುಲ್ ಗಾಂಧಿ ಅವರ ಅರ್ಜಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್ ಜುಲೈ 7 ರಂದು “ರಾಜಕೀಯದಲ್ಲಿ ಶುದ್ಧತೆ” ಈ ಕಾಲದ ಅಗತ್ಯ ಎಂದು ಹೇಳಿತ್ತು. ಸೆಷನ್ಸ್ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ತಡೆಹಿಡಿಯಲು ಯಾವುದೇ ಸಮಂಜಸವಾದ ಕಾರಣವಿಲ್ಲ ಹಾಗೂ ತೀರ್ಪು ಸರಿಯಾದ ಮತ್ತು ನ್ಯಾಯಯುತವಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ರಾಹುಲ್ ಅವರ ಹೇಳಿಕೆಯು ವ್ಯಾಪಕ ಮಾಧ್ಯಮ ಪ್ರಸಾರಗೊಂಡಿದ್ದರಿಂದ ದೂರುದಾರರ ಪೂರ್ಣೇಶ್ ಮೋದಿ ಮತ್ತು ಮೋದಿ ಸಮುದಾಯದ ಪ್ರತಿಷ್ಠೆಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ಹೈಕೋರ್ಟ್ ಹೇಳಿತ್ತು.
ಪ್ರಕರಣದ ಕುರಿತು ರಾಹುಲ್ ಅವರು ಜುಲೈ 15 ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ, ಶಿಕ್ಷೆಯನ್ನು ಅಮಾನತುಗೊಳಿಸದಂತೆ ಗುಜರಾತ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿದ್ದರು. ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅವರು ಸುಪ್ರಿಂಕೋರ್ಟ್ಗೆ ಒತ್ತಾಯಿಸಿದ್ದರು. ಜುಲೈ 7ರ ಹೈಕೋರ್ಟ್ ತೀರ್ಪು ತಡೆಹಿಡಿಯದಿದ್ದಲ್ಲಿ, “ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯನ್ನು” ಹತ್ತಿಕ್ಕಲು ಇದೊಂದು ಕಾರಣವಾಗಲಿದೆ ಎಂದು ಗಾಂಧಿ ಕಳವಳ ವ್ಯಕ್ತಪಡಿಸಿದರು.
ವಿಡಿಯೊ ನೋಡಿ: ಕೀಟಗಳನ್ನು ತಿನ್ನುವ ಸಸ್ಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? Janashakthi Media