ಭಾರತದ ಮೊದಲ ಸುದ್ದಿವಾಚಕಿ ಸಯಿದಾ ಬಾನೂ

ಡಾ.ಕೆ.ಷರೀಫಾ

ಸಯಿದಾ ಬಾನೂ ಆಲ್ ಇಂಡಿಯಾ ರೇಡಿಯೋದ ಮೊಟ್ಟ ಮೊದಲ ಸುದ್ದಿವಾಚಕಿಯಾಗಿದ್ದರು. ಈಗಿನ ಕಾಲದಲ್ಲಿಯೇ ಒಂಟಿ ಮಹಿಳೆ ಬದುಕುವುದು ಬಹಳ ಕಷ್ಟಕರವಾಗಿರುವಾಗ 1947 ಕಾಲದಲ್ಲಿ ಒಬ್ಬ ಒಂಟಿ ಮಹಿಳೆ ಪುರುಷ ಪ್ರಾಬಲ್ಯದ ಹೊಸ ಕ್ಷೇತ್ರವನ್ನು ಬೇಧಿಸಿ ಬದುಕು ಕಟ್ಟಿಕೊಳ್ಳುವುದೆಂದರೆ ಅದು ಸಾಮಾನ್ಯ ವಿಷಯವಾಗಿರಲಿಲ್ಲ. ಆಕೆಯ ಬದುಕು, ಹೋರಾಟ, ಮತ್ತು ಸಾಧನೆಗಳು ಸ್ವತಂತ್ರ ಭಾರತದ ಮಹಿಳೆಯರಿಗೊಂದು ದಾರಿದೀಪವಾಗಿದ್ದವು. ಇಂದಿಗೂಆಗಿವೆ.

**********

ದೇಶದಲ್ಲಿ ಮೊಟ್ಟ ಮೊದಲಬಾರಿಗೆ ಆಲ್ ಇಂಡಿಯಾ ರೇಡಿಯೋದಲ್ಲಿ ಒಂದು ಸುಮಧುರ ಹೆಣ್ಣು ಧ್ವನಿ ಕಿವಿಗೆ ತಟ್ಟುತ್ತದೆ. ಅದನ್ನು ಕೇಳಿದ ಭಾರತದ ಜನರು ರೋಮಾಂಚಿತರಾದರು. ಅದು ಆಲ್ ಇಂಡಿಯಾ ರೇಡಿಯೋದ ಮೊಟ್ಟ ಮೊದಲ ಸುದ್ದಿವಾಚಕಿ, ಸಯಿದಾ ಬಾನೂರವರ ಧ್ವನಿಯಾಗಿತ್ತು. ಅವರು ದಿನವೂ ಬೆಳಗಿನ 8-೦೦ ಗಂಟೆಗೆ ತನ್ನ ಪರಿಚಯವನ್ನು ಸ್ವತ: ಕೇಳುಗರಿಗೆ ಪರಿಚಯಿಸಿಕೊಂಡು ಉರ್ದುವಿನಲ್ಲಿ ಸುದ್ದಿಯನ್ನು ವಾಚಿಸುತ್ತಿದ್ದರು. ಅವರು ತಮ್ಮ 34ನೇ ವರ್ಷ ವಯಸ್ಸಿನಲ್ಲಿ ಪಿತೃಸತ್ತೆಯ ಸರಪಳಿಗಳನ್ನು ಕಿತ್ತೆಸೆಯುವುದರ ಮೂಲಕ ಆಗ ಪುರುಷರಿಗೇ ಸೀಮಿತವಾಗಿದ್ದ ಈ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪುರುಷ ಪ್ರಾಬಲ್ಯದ ಸುದ್ದಿವಾಚಕರ ಕ್ಷೇತ್ರದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಎಂಬ ಸ್ಥಿತಿಯನ್ನು ಮುರಿಯುತ್ತಾರೆ.

ಭೂಪಾಲದ ಈ ಹುಡುಗಿ ಬಹಳ ಬಿಂದಾಸ್ ಮತ್ತು ತುಂಟ ಹುಡುಗಿಯಾಗಿದ್ದಳು. ಸಯಿದಾ ಬಾನೂರವರ ಜನ್ಮ 1913ರಲ್ಲಿ ಮಧ್ಯಪ್ರದೇಶದ ಭೂಪಾಲನಲ್ಲಿ ಆಗುತ್ತದೆ. ಅವರು ತಮ್ಮ ಬಾಲ್ಯವನ್ನು ಲಖನೌ, ಉತ್ತರಪ್ರದೇಶ, ಮಧ್ಯಪ್ರದೇಶದ ಭೋಪಾಲನಲ್ಲಿ ಕಳೆಯುತ್ತಾರೆ. ಅವರು ಅಗಸ್ಟ್ ದಿನಾಂಕ 13, 1947ರಲ್ಲಿ ಭಾರತದ ಮೊಟ್ಟ ಮೊದಲ ಆಲ್ ಇಂಡಿಯಾ ರೇಡಿಯೋದಲ್ಲಿ ಮುಸ್ಲಿಂ ಸಮುದಾಯದಿಂದ ಬಂದ ಮಹಿಳೆಯಾಗಿ ಕೆಲಸ ನಿರ್ವಹಿಸುತ್ತಾರೆ. ಸಯಿದಾ ಬಾನೂರವರು ದೇಶದ ಮೊದಲ ಸುದ್ದಿವಾಚಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ನಾವು ಇಂದು 1956ರಿಂದಲೂ ಆಕಾಶವಾಣಿ ಎಂದು ಕರೆಯುತ್ತಿದ್ದದನ್ನು ಹಿಂದೆ ಅದನ್ನು ಆಲ್ ಇಂಡಿಯಾ ರೇಡಿಯೋ ಎಂದು ಕರೆಯುತ್ತಿದ್ದೆವು. ಇದನ್ನು 1936ರಲ್ಲಿ ಸ್ಥಾಪಿಸಲಾಯಿತು. ಇಂತಹ ಆಲ್ ಇಂಡಿಯಾ ರೇಡಿಯೋದ ಮೊದಲ ಮಹಿಳಾ ಸುದ್ದಿ ವಾಚಕಿಯಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸು ಸಯಿದಾ ಬಾನೂರವರಿಗೆ ಸೇರುತ್ತದೆ.

ಬಾನೂರವರು ಬಹಳ ಸ್ವತಂತ್ರವಾದ ವಾತಾವರಣದಲ್ಲಿ ಬೆಳೆದ ಹುಡುಗಿಯಾಗಿದ್ದರು. ಅವರ ಶಿಕ್ಷಣಕ್ಕೆ ಅವರ ತಂದೆಯವರು ದೊಡ್ಡ ಬೆನ್ನೆಲುಬಾಗಿ ನಿಂತರು. ಮಗಳ ಶಿಕ್ಷಣಕ್ಕಾಗಿಯೇ ಅವರು ತಮ್ಮ ಕುಟುಂಬವನ್ನು ಭೂಪಾಲದಿಂದ ಲಖನೌಗೆ ವರ್ಗಾಯಿಸುತ್ತಾರೆ. ಅಲ್ಲಿ ಸಯಿದಾ ಬಾನೂರವರು ತಮ್ಮ ಪದವಿ ಶಿಕ್ಷಣವನ್ನು ಲಖನೌನಲ್ಲಿಯ ಇಸಬೆಲ್ಲಾ ಥೋಬರ್ನ ಕಾಲೇಜಿನಲ್ಲಿ ಪೂರ್ಣಗೊಳಿಸುತ್ತಾರೆ. ಅವರ ಸ್ಕೂಲ್ ಮತ್ತು ಕಾಲೇಜು ಅವಧಿಯಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆಯುತ್ತಾರೆ. ಅವರು ಉತ್ತಮ ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಬಾನೂರವರ 17ನೇ ವರ್ಷ ವಯಸ್ಸಿನಲ್ಲಿ ನವೆಂಬರ್ 14, 1932ರಲ್ಲಿ ಅಬ್ಬಾಸ್ ರಜಾ ಅವರೊಂದಿಗೆ ಮದುವೆಯಾಗುತ್ತದೆ. ಅವರೊಬ್ಬ ಜಡ್ಜ ಆಗಿದ್ದರು. ಅಬ್ಬಾಸ್ ರಜಾ ಅವರ ತಂದೆಯಾದ ಮುಹಮ್ಮದ್ ರಜಾ ಅವರೂ ಸಹ ನ್ಯಾಯವಾದಿಗಳಾಗಿದ್ದರು. ಮದುವೆಯ ನಂತರದಲ್ಲಿ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲಾ ಮುಸ್ಲಿಂ ಮಹಿಳೆಯರಂತೆ ಇರುವಂತೆ ಅವರಿಗೆ ಹೇಳಲಾಗುತ್ತದೆ. ಅವರಿಗೆ ಇದು ಸರಿ ಬರುವುದಿಲ್ಲ. ಕೊನೆಗೆ ತಮ್ಮಿಷ್ಟದಂತೆ ತಾವು ಬದುಕುವುದರಲ್ಲಿಯೇ ಕ್ಷೇಮವಿದೆ ಎಂದು ಪರಿಗಣಿಸಿ, ಪತಿಯಿಂದ ಬೇರೆಯಾಗುತ್ತಾರೆ. ಆಗಲೇ ಅವರಿಗೆ ಇಬ್ಬರು ಮಕ್ಕಳಿರುತ್ತಾರೆ. ಮುಂದೆ 1947ರಲ್ಲಿ ಅವರಿಬ್ಬರೂ ಬೇರೆಯಾಗುತ್ತಾರೆ.

ಅವರಿಬ್ಬರ ಸಂಬಂಧ ಕಡಿದು ಹೋದ ನಂತರವೇ ಅವರು ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಾರೆ. ಜವಾಹರಲಾಲ್ ನೆಹರೂರವರ ಸೋದರಿ ವಿಜಯಲಕ್ಷ್ಮಿ ಪಂಡಿತ್ ಬಾನೂರವರ ಗೆಳತಿಯಾಗಿದ್ದರು. ಅವರು ಸಯಿದಾರಿಗೆ ಅರ್ಜಿ ಸಲ್ಲಿಸುವಂತೆ ಪ್ರೇರೆಪಿಸುತ್ತಾರೆ. ನಂತರ ದೆಹಲಿಯ ಆಲ್ ಇಂಡಿಯಾ ರೇಡಿಯೋದಲ್ಲಿ ಸುದ್ದಿ ವಾಚಕಿಯಾಗಿ ಕೆಲಸ ಮಾಡಲು ಒಪ್ಪಿ ಮಕ್ಕಳೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ಭಾರತದ ಮೊಟ್ಟ ಮೊದಲ ಸುದ್ದಿ ವಾಚಕಿಯ ಕೆಲಸಕ್ಕೆ ನಿಯುಕ್ತಗೊಂಡ ಮಹಿಳೆಯಾಗಿ ಹೆಸರು ಮಾಡುವುದರೊಂದಿಗೆ ಅವರು ಸಮಾಜದ ಪ್ರತಿರೋಧಗಳನ್ನೂ ಎದುರಿಸಬೇಕಾಯಿತು. ಸಿಂಗಲ್ ಪೇರೆಂಟ್ ಆಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ರೇಡಿಯೋನಲ್ಲಿ ಉರ್ದುವಿನಲ್ಲಿ ಬಾನೂ ಸುದ್ದಿ ವಾಚಿಸಲು ಆರಂಭಿಸಿದಾಗ ಬ್ರಿಟಿಷ್ ಸರ್ಕಾರವಿತ್ತು. ಅವರು ಅಗಸ್ಟ್, 13, 1947ರಂದು ಕೆಲಸಕ್ಕೆ ಸೇರಿದರು, ಕೇವಲ ಎರಡು ದಿನಗಳ ನಂತರ ಅಂದರೆ ಅಗಸ್ಟ 15, 1947ರಲ್ಲಿ ಭಾರತ ಸ್ವತಂತ್ರವಾಯಿತು. ಅನಂತರ ಬ್ರಿಟೀಷ್ ವಸಾಹತು ನಿಯಂತ್ರಣದಿಂದ ಭಾರತ ಹೊರಬಂದಿತು.

ಇದನ್ನೂ ಓದಿ:ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ

ಆಗ ಭಾರತ ಪಾಕಿಸ್ತಾನದ ವಿಭಜನೆಯ ಕಾರ್ಯ ಆರಂಭವಾಗಿತ್ತು. ಹಿಂದು ಮುಸ್ಲಿಂ ದಂಗೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ಸಯೀದಾ ಬಾನೂರವರಿಗೆ ಹಲವಾರು ಪತ್ರಗಳು ಬರುತ್ತಿದ್ದವು. ಅದರಲ್ಲಿ ಕೆಲವರು “ನೀವು ಪಾಕಿಸ್ತಾನಕ್ಕೆ ಹೋಗಿರಿ” ಎಂದು ಹೇಳಿ ಬೆದರಿಸಿದರು. ಮತ್ತೇ ಕೆಲವರು “ಭಾರತದಲ್ಲಿ ನೀವು ಇರಬಾರದು” ಎಂದು ಪತ್ರಗಳನ್ನು ಬರೆದರು. ಇದಲ್ಲದೇ ಹಲವರು ಅವರಿಗೆ ತಮ್ಮನ್ನು ಮದುವೆಯಾಗಲು ಕೂಡ ಅಹ್ವಾನ ನೀಡುತ್ತಿದ್ದರು. ಈಗಿನ ಕಾಲದಲ್ಲಿಯೇ ಒಬ್ಬ ಒಂಟಿ ಮಹಿಳೆ ಬದುಕುವುದು ಬಹಳ ಕಷ್ಟಕರವಾಗಿರುವಾಗ 1947ರ ಕಾಲದಲ್ಲಿ ಒಂಟಿ ಮಹಿಳೆ ಭಾರತದಲ್ಲಿ ಬದುಕು ಕಟ್ಟಿಕೊಳ್ಳುವುದೆಂದರೆ ಅದು ಸಾಮಾನ್ಯ ವಿಷಯವಾಗಿರಲಿಲ್ಲ. ಅದೊಂದು ಬಹು ದೊಡ್ಡ ಹೋರಾಟವೇ ಆಗಿತ್ತು. ಆದರೆ ಬಾನೂ ಬಹಳ ದಿಟ್ಟ ಮಹಿಳೆಯಾಗಿದ್ದರು. ಇಂತಹ ವಿಷಯಗಳಿಗೆ ಅವರು ಮಣೆ ಹಾಕುತ್ತಿರಲಿಲ್ಲ. ದೆಹಲಿಯಲ್ಲಿ ದಂಗೆಗಳು ತೀವ್ರವಾಗಿದ್ದಾಗ ಅವರು ಕೃಷಿ ಸಚಿವರಾಗಿದ್ದ ರಫಿ ಅಹ್ನದ್ ಕಿದ್ವಾಯಿ ಅವರ ಮನೆಯಲ್ಲಿ ಆಶ್ರಯ ಪಡೆಯಬೇಕಾಯಿತು. ಗಾಂಧೀಜಿ ಅವರ ಕೊಲೆಯಾದ ದಿನ ಅವರು ಎಷ್ಟು ಭಾವುಕರಾಗಿದ್ದರೆಂದರೆ ಅವರಿಗೆ ಆ ದಿನ ಸುದ್ದಿ ಓದಲು ಸಾಧ್ಯವಾಗಲಿಲ್ಲ. ಅವರು 1965ರ ವರೆಗೆ ಸುದ್ದಿ ವಾಚಕಿಯಾಗಿ ಮುಂದುವರೆದರು. 1970ರ ದಶಕದ ವರೆಗೂ ಅವರು ಆಲ್ ಇಂಡಿಯಾ ರೇಡಿಯೊ ದ ಉರ್ದು ಕರ‍್ಯಕ್ರಮಗಳ ನಿರ್ಮಾಪಕರಾಗಿ ಕೆಲಸ ಮಾಡಿದರು.

ಆಗಿನ ಕಾಲದಲ್ಲಿ ಮುಸ್ಲಿಂ ಮಹಿಳೆಯರಿಗೆ ಸಮಾಜದಲ್ಲಿ ಬಹಳ ನಿರ್ಬಂಧಗಳಿದ್ದವು. ಆ ಕಾಲದಲ್ಲಿ ಮಹಿಳೆಯರ ಬದುಕು ಜೈಲಿನಂತಹ ಬದುಕನ್ನು ಬದುಕುತ್ತಿದ್ದರು. ಇವರು ಅಂತ್ಯವಿಲ್ಲದ ಗುಲಾಮಗಿರಿ ಮತ್ತು ಮನೆಗೆಲಸದ ಚಾಕರಿಗಳಿಂದ ಬಿಡುವಿಲ್ಲದಂತೆ ದುಡಿಯುತ್ತಿದ್ದರು. ಅವರು ಹಗಲು ರಾತ್ರಿ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರು. ಉಸಿರುಗಟ್ಟಿಸುವ ವಸ್ತ್ರಸಂಹಿತೆ ಬಹಳ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ಹಿಂದೂ ಮಹಿಳೆಯರೂ ಸಹ ಭಿನ್ನ ಭಿನ್ನ ವಸ್ತçಸಂಹಿತೆಯನ್ನು ಪಾಲಿಸಬೇಕಿತ್ತು. ಬಾನೂರವರು ಯಾವುದೇ ವಸ್ತçಸಂಹಿತೆಯನ್ನು ಅನುಸರಿಸುತ್ತಿರಲಿಲ್ಲ. ಅವರ ಸಮಾಜದ ಜನ ಬಾನೂರವರು ಸಹ ಪರ್ದಾ ಪದ್ದತಿಯನ್ನು ಅನುಸರಿಸಬೇಕೆಂದು ಬಯಸುತ್ತಿದ್ದರು.

ಅವರು ಭೂಪಾಲದಲ್ಲಿದ್ದಾಗ ಅವರ ಮೇಲೆ ನವಾಬ್ ಸುಲ್ತಾನ್ ಜಹಾಂ ಬೇಗಂರವರ ಪ್ರಭಾವ ಬಹಳವಾಗಿತ್ತು. ಆಗ ಭೂಪಾಲವನ್ನು ಆಳುತ್ತಿದ್ದವರು ರಾಣಿ ನವಾಬ್ ಸುಲ್ತಾನ್ ಜಹಾಂ ಬೇಗಂ ರವರಾಗಿದ್ದರು. ಇವರ ರಾಜ್ಯಭಾರದಲ್ಲಿ ಭೂಪಾಲದಲ್ಲಿ ಮಹಿಳೆಯರ ಸ್ಥಾನ ಮಾನಗಳು ಸುಧಾರಣೆಯಾದವು. ಮಹಿಳಾ ಶಿಕ್ಷಣ ಪ್ರಗತಿ ಕಂಡಿತು. ಮಹಿಳಾ ಶಿಕ್ಷಣಕ್ಕಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಈ ಮೂಲಕ ಅವರು ಮಹಿಳಾ ಶಿಕ್ಷಣದ ಪ್ರಗತಿಗೆ ಮಹತ್ವದ ಕಾರಣವಾದರು. ಇದನ್ನೆಲ್ಲ ಬೆರಗುಗಣ್ಣಿನಿಂದ ನೋಡುತ್ತಿದ್ದ ಸಯಿದಾ ಬಾನೂರವರು ನವಾಬ್ ಸುಲ್ತಾನ ಜಹಾಂ ಬೇಗಂ ರವರ ಅಭಿಮಾನಿಯಾದರು. “ಈ ಸನಾತನ ಲೋಕದಲ್ಲಿ ಅಪರೂಪಕ್ಕೊಮ್ಮೆ ಮಹಿಳೆ ತನ್ನ ಕೈಗೆ ಅಧಿಕಾರ ವಹಿಕೊಳ್ಳುತ್ತಾರೆ. ಮಹಿಳೆಯ ರಾಜ್ಯಾಧಿಕಾರದಲ್ಲಿ ನವಾಬ್ ಸುಲ್ತಾನ್ ಜಹಾಂ ಬೇಗಂ ರಂಥವರು ಇಡಿ ಭೂಪಾಲ ರಾಜ್ಯವನು ಪ್ರಗತಿಪರವಾಗಿ ಮಾಡುತ್ತಾರೆ” ಎಂದು ಬಾನೂರವರು ತಮ್ಮ 1994ರಲ್ಲಿ ಪ್ರಕಟಿಸಿದ ಉರ್ದು ಕೃತಿ “ಡಗರ ಸೆ ಹಟ್ ಕರ್” ಎಂಬ ಕೃತಿಯಲ್ಲಿ ದಾಖಲಿಸುತ್ತಾರೆ.

ಅವರು 1994ರಲ್ಲಿ ಉರ್ದುವಿನಲ್ಲಿ “ಡಗರ್ ಸೆ ಹಟ್ ಕರ್” ಎಂಬ ಪುಸ್ತಕ ಬರೆದರು. ಅನಂತರ ಅದು ಇಂಗ್ಲೀಷಿನಲ್ಲಿ “ಆಫ್ ದಿ ಬೀಟನ್ ಟ್ಯ್ರಾಕ್‌ ಎಂಬ ಹೆಸರಿನಿಂದ ಪ್ರಕಾಶನ ಗೊಂಡಿತು. ಅದರಲ್ಲಿ ಸಯಿದಾ “ತೀರಾ ಸಾಂಪ್ರದಾಯಿಕ ಮತ್ತು ಭದ್ರ ಜೀವನದ ಸಂಕೋಲೆಗಳನ್ನು ಕಡಿದು ಹಾಕಿ, ಏಕಾಂಗಿ ಮಹಿಳೆಯ ದುರ್ಭರ ಜೀವನವನ್ನು ನಾನು ಆರಿಸಿಕೊಂಡಿದ್ದೆ. ವಯಸ್ಸು ನನ್ನ ಪರವಾಗಿತ್ತು. ನಾನು ಗಟ್ಟಿ ಯುವತಿಯಾಗಿದ್ದೆ.” ಎಂದು ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾರೆ. ಅವರು ತಮ್ಮ ಕಾಲದ ಖ್ಯಾತ ಗಾಯಕಿ ಆಖ್ತರ್ ಬಾಯಿಯಿಂದ ಮುಂದೆ ಬೇಗಂ ಅಖ್ತರ ಆಗುವಲ್ಲಿನವರೆಗೂ ಅವರಿಗೆ ಬಹಳ ಸಹಾಯ ಮಾಡುತ್ತಾರೆ. ಅವರ ಹಾಡುಗಾರಿಕೆಯನ್ನು ಸಮಾಜಕ್ಕೆ ಪರಿಚಯಿಸುತ್ತಾರೆ. ಅಖ್ತರ್ ಅವರೊಂದಿಗೆ ಬೇಗಂ ಅಖ್ತರವರನ್ನು ಮದುವೆ ಮಾಡಿಸುತ್ತಾರೆ. ದೀರ್ಘ ಕಾಲದ ನಂತರ ಅವರ ಜೀವನದಲ್ಲಿ ಮತ್ತೆ ಪ್ರೀತಿ ಪಡೆಯುತ್ತಾರೆ. ದೆಹಲಿಯ ಬ್ಯಾರಿಸ್ಟರ್ ನೂರುದ್ದಿನ್ ಅಹ್ಮದ್ ಅವರ ಜತೆ ಅಕಸ್ಮಾತ್ ಭೇಟಿ 25 ವರ್ಷಗಳ ದೀರ್ಘ ಪ್ರೇಮಕ್ಕೆ ನಾಂದಿಯಾಗುತ್ತದೆ. ಅಹ್ಮದ್ ಅವರು ದೆಹಲಿಯ ಮೇಯರ್ ಆಗಿ ಮೂರು ಬಾರಿ ಆಯ್ಕೆಯಾಗಿದ್ದರು. ಸಯೀದಾ ಬಾನೂ 2001ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ನಿಧನ ಹೊಂದಿದರು.

ಇಂತಹ ಸಯಿದಾ ಬಾನೂರವರ ಬದುಕು, ಹೋರಾಟ, ಮತ್ತು ಸಾಧನೆಗಳು ಹೊಸದಾಗಿ ಸ್ವತಂತ್ರಗೊಂಡ ಭಾರತದ ಮಹಿಳೆಯರಿಗೊಂದು ದಾರಿದೀಪವಾಗಿದ್ದವು. ಇಂದಿಗೂ ಆಗಿವೆ.

Donate Janashakthi Media

Leave a Reply

Your email address will not be published. Required fields are marked *