ಮಂಗಳೂರು: ಯುವ ಜನತೆ ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಸೊನಾರ್, ಡ್ರಗ್ ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಮನೋಹರ್ ಸೇಠ್ (49) ಹಾಗೂ ಉತ್ತರ ಪ್ರದೇಶದ ಬೆಚಾನ್ ಸೊನಾರ್(45) ಎಂದು ಹೇಳಲಾಗಿದೆ.
ಇದನ್ನೂ ಓದಿ:ಹೆರಿಗೆಗೆಂದು ಹೋದ ಯುವತಿ ಕೋಮಾಗೆ | ಮಂಗಳೂರು ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ
ಬಮ್ ಬಮ್ ಮುನಾಕ್ಕಾ ವಾಟಿ , ‘ಆನಂದ ಚೂರ್ಣ’ ಮಹಾಶಕ್ತಿ ಮುನಾಕ್ಕಾ ಇತರೆ ಹೆಸರುಗಳಿಂದ ಮಾರಾಟ ಮಾಡಲಾಗುತ್ತಿದ್ದ ಸುಮಾರು ರೂ. 5,500 ಮೊತ್ತದ ಚಾಕೊಲೇಟ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳೂರಿನ ಹೈಲ್ಯಾಂಡ್ ಜಂಕ್ಷನ್ ಬಳಿ ಸೊನಾರ್ ಅಂಗಡಿ ಇಟ್ಟುಕೊಂಡಿದ್ದರೆ,ಇನ್ನೊಬ್ಬ ಆರೋಪಿ, ಮನೋಹರ್ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಕಾರು ಸ್ಟ್ರೀಟ್ನಲ್ಲಿ ಚಾಕೊಲೇಟ್ ಮಾರಾಟ ಮಾಡುತ್ತಿದ್ದ. ಅವರಿಂದ ಮೂರು ಬ್ಯಾಗ್ಗಳಲ್ಲಿ ಸಂಗ್ರಹವಾಗಿದ್ದ ರೂ.48,000 ಮೊತ್ತದ ಚಾಕೊಲೇಟ್ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಗಳು ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದರು. ಸಾಗಣೆದಾರರ ಜಾಲವನ್ನು ಭೇದಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.