ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ಮಾಡಿವೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸದನದ ಒಳಗೂ ಮತ್ತು ಹೊರಗೆ ನಾನು ಮತ್ತು ಬೊಮ್ಮಾಯಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು. ನಾನು ವಿರೋಧ ಪಕ್ಷದಲ್ಲಿದ್ದೇನೆ, ಬೊಮ್ಮಾಯಿ ಅವರೂ ಇದ್ದಾರೆ. ನಾಡಿನ ಹಿತಾಸಕ್ತಿ ಕಾಪಾಡುವ ಸಲುವಾಗಿ ಹೋರಾಟ ಮಾಡಲು ನಾವು ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ವಿಪಕ್ಷಗಳ ಸಭೆಗೆ ನಮಗೆ ಆಹ್ವಾನ ನೀಡಿಲ್ಲ ನಾವು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ: ಹೆಚ್ ಡಿ ಕುಮಾರಸ್ವಾಮಿ
ಜೆಡಿಎಸ್ ಮತ್ತು ಬಿಜೆಪಿ ಎರಡೂ ವಿರೋಧ ಪಕ್ಷಗಳಾಗಿದ್ದು, ಒಟ್ಟಾಗಿ ಕೆಲಸ ಮಾಡುವ ನಿರ್ಧಾರವನ್ನು ಮಾಡಲಾಗಿದೆ. ಎಲ್ಲರ ಅಭಿಪ್ರಾಯವನ್ನು ಪಡೆದು ಪಕ್ಷದ ಸಂಘಟನೆಗೆ 10 ಜನರ ತಂಡ ರಚನೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ದೇವಗೌಡರು ಸಂದೇಶ ನೀಡಿದ್ದಾರೆ. ನಮಗೆ ದೇವೇಗೌಡರು ಸಲಹೆ ನೀಡಿದ್ದಾರೆ. ದೇವೇಗೌಡರ ಮಾರ್ಗದರ್ಶನ, ಪಕ್ಷ ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ನವರಿಗೆ ಸರ್ಕಾರ ಬೇಕಿಲ್ಲ. ಭೂಮಿ ಲಪಟಾಯಿಸೋದು ಬೇಕು. ಇದು ಒಂದು ರೀತಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ಸರ್ಕಾರಕ್ಕೆ ನಿಜಕ್ಕೂ ಜನತೆಗೆ, ರೈತರಿಗೆ ಒಳ್ಳೆಯದು ಮಾಡಬೇಕು ಅನ್ನೋ ಮನಸ್ಸಿದ್ದರೆ ಸರ್ಕಾರದ ಅಧಿನಕ್ಕೆ ಬರಬೇಕಾದ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಿ. ನನ್ನ ಪಕ್ಷದವರ ಆಸ್ತಿ ಇದ್ದರೂ ಮುಟ್ಟುಗೋಲು ಹಾಕಿಕೊಳ್ಳಿ. ಅಕ್ರಮ ಭೂಕಬಳಿಕೆ ಬಯಲಿಗೆಳೆಯಬೇಕಾದರೆ ಈ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.