ಸಾಮಾಜಿಕ ಕ್ರೌರ್ಯವೂ ʼಸೌಜನ್ಯʼಳ ಆರ್ತನಾದವೂ

ನಾ ದಿವಾಕರ

ತಮ್ಮ ಮೇಲೆ ನಡೆಯುವ ಪ್ರತಿಯೊಂದು ದೌರ್ಜನ್ಯಗಳಿಗೂ ಸಾಕ್ಷಿ ಪುರಾವೆಗಳನ್ನು ಒದಗಿಸಬೇಕಾದ ವಾತಾವರಣವನ್ನು ಮಹಿಳೆಯರು ಎದುರಿಸುತ್ತಿದ್ದಾರೆ ಎಂದರೆ ಅದರರ್ಥ ನಮ್ಮ ಪಿತೃಪ್ರಧಾನ ವ್ಯವಸ್ಥೆಯು ಪುರುಷ ಸಮಾಜವನ್ನು ಅಥವಾ ಸಮಾಜದೊಳಗಿನ ಪುರುಷಾಧಿಪತ್ಯವನ್ನು ಅನುಮಾನಿಸುವುದೇ ಇಲ್ಲ. ಕಾನೂನು ಸಾಕ್ಷ್ಯಾಧಾರಗಳನ್ನು ಕೇಳುತ್ತದೆ. ಆದರೆ ಜೀವಂತ ಸಮಾಜಕ್ಕೆ ಕಣ್ಣೆದುರು ನಡೆಯುವ ಅನ್ಯಾಯಗಳ ಸಾಕ್ಷ್ಯಾಧಾರಗಳು ಬೇಕಿಲ್ಲ ಅಲ್ಲವೇ ? ಸೌಜನ್ಯ ನಮ್ಮ ನಡುವಿನ ದುರಂತ ಸಾಕ್ಷಿಯಾಗಿ ಏಕೆ ಕಾಣುತ್ತಾಳೆ ಎಂದರೆ ಆಕೆಯ ಮೇಲೆ ನಡೆದಿರುವ ಬರ್ಬರ ಕೃತ್ಯದ ಸಾಕ್ಷಿಗಳು ನಮ್ಮ ನಡುವೆಯೇ ಜೀವಂತವಾಗಿವೆ. ಈ ದೃಷ್ಟಿಯಿಂದ ನೋಡಿದಾಗ ಸೌಜನ್ಯ ಏಕಾಂಗಿಯಲ್ಲ. ಆಕೆಯೊಡನೆ ಆಕೆಯಂತೆಯೇ ದೌರ್ಜನ್ಯಕ್ಕೊಳಗಾದ ನೂರಾರು ಅಮಾಯಕ ಜೀವಗಳು ಇಂದಿಗೂ ನ್ಯಾಯಕ್ಕಾಗಿ ಹಾತೊರೆಯುತ್ತಿವೆ.

ಪಾತಕಿಗಳನ್ನು ಶಿಕ್ಷಿಸುವುದಕ್ಕಿಂತಲೂ  ಸಾಮಾಜಿಕ ಕ್ರೌರ್ಯವನ್ನು ಕೊನೆಗೊಳಿಸುವುದು ಮುಖ್ಯ

ಹನ್ನೊಂದು ವರ್ಷಗಳ ಹಿಂದೆ ಪುರುಷಾಹಮಿಕೆ ಮತ್ತು ಊಳಿಗಮಾನ್ಯ ದರ್ಪದ ಕ್ರೂರ ಶಕ್ತಿಗಳಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಒಬ್ಬ ಅಮಾಯಕ ಅಪ್ರಾಪ್ತ ಹೆಣ್ಣುಮಗಳಿಗೆ ಕರ್ನಾಟಕದ ಜೀವಪರ ಮನಸುಗಳು ಮತ್ತೊಮ್ಮೆ ಮಿಡಿಯುತ್ತಿವೆ. ಧರ್ಮ-ಸಂಸ್ಕೃತಿ-ಶ್ರದ್ಧೆ-ನಂಬಿಕೆಗಳ ನೆಲೆವೀಡಿನಲ್ಲಿ ನಡೆದ ಈ ಅಮಾನುಷ ಕೃತ್ಯ ಇಂದು ನಿಗೂಢತೆಯನ್ನು ಪಡೆದುಕೊಂಡಿದೆ. ಏಕೆಂದರೆ ಸೌಜನ್ಯಗಳ ಮೇಲೆ ಅತ್ಯಾಚಾರ ಎಸಗಿದವರು, ಆ ಬಾಲೆಯನ್ನು ಭೀಕರವಾಗಿ ಹತ್ಯೆ ಮಾಡಿದವರು ಅಗೋಚರರಾಗಿದ್ದಾರೆ. ಗುರುತಿಸಲಾಗಿದ್ದ ಅಪರಾಧಿಯೂ ಅಮಾಯಕನೆಂದು ನ್ಯಾಯಾಂಗವೇ ತೀರ್ಪು ನೀಡಿದೆ. ಹಾಗಾದರೆ ಸೌಜನ್ಯಳ ಮೇಲೆ ಎರಗಿದ ದುಷ್ಟ ಶಕ್ತಿಗಳು ಎಲ್ಲಿವೆ ? ಈ ಹನ್ನೊಂದು ವರ್ಷ ಸೌಜನ್ಯ ನ್ಯಾಯವಂಚಿತಳಾಗಿರುವುದು ನಮ್ಮ ನಡುವಿನ ಸಾಮಾಜಿಕ ನಿಷ್ಕ್ರಿಯತೆಯ ಸಂಕೇತವಾದರೆ ಈ ದುಷ್ಕೃತ್ಯ ಎಸಗಿದ ಪಾತಕಿಗಳು ಇಂದಿಗೂ ಅಗೋಚರವಾಗಿಯೇ ಉಳಿದಿರುವುದು ಸಾಮಾಜಿಕ ಕ್ರೌರ್ಯದ ಸಂಕೇತವಾಗಿ ಕಾಣುತ್ತದೆ.

ಸೌಜನ್ಯ ನಮ್ಮ ನಡುವಿನ ಅಮಾಯಕ ಬಲಿಪಶುವಾಗಿ ಕಾಣುವುದಷ್ಟೇ ಅಲ್ಲ, ಆ ಬಾಲಕಿ ರಾಜ್ಯದೆಲ್ಲೆಡೆ ನಿರಂತರವಾಗಿ ನಡೆಯುತ್ತಿರುವ  ಮಹಿಳಾ ದೌರ್ಜನ್ಯಗಳು, ಅತ್ಯಾಚಾರಗಳು ಹಾಗೂ ಮರ್ಯಾದೆಗೇಡು ಹತ್ಯೆಗಳಿಗೆ ಒಂದು ಚಾರಿತ್ರಿಕ ಸಂಕೇತವಾಗಿ ಕಾಣುತ್ತಾಳೆ. ಮಹಿಳೆಯ ಘನತೆ, ಗೌರವ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ವಿಶಾಲ ಸಮಾಜದಲ್ಲಿ ಕಲ್ಪಿಸಲಾಗುವ ಅಂತಸ್ತು-ಪ್ರತಿಷ್ಠೆ ಹಾಗೂ ಉನ್ನತ ಪದವಿಗಳ ಮೂಲಕವೇ ನೋಡುವ ಸಮಾಜವೊಂದು ಸ್ವಪ್ರಶಂಸೆಯ ಭ್ರಮೆಗೆ ಸಿಲುಕಿ ವಾಸ್ತವಗಳಿಗೆ ವಿಮುಖವಾಗಿರುತ್ತದೆ. ಪ್ರಾಚೀನ ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ನಾಲ್ಕು ಗೋಡೆಗಳ ನಡುವೆ ಇಟ್ಟು ಗೌರವಿಸುತಿದ್ದಂತೆಯೇ ಇಂದಿಗೂ ಮೇಲ್ವರ್ಗದ-ಮೇಲ್ಪದರದ ಸಮಾಜ ಸಾಧನೆಗಳ ಮೂಲಕವೇ ಮಹಿಳಾ ಗೌರವವನ್ನು ನಿಷ್ಕರ್ಷೆ ಮಾಡುವ ಧೋರಣೆ ಅನುಸರಿಸುತ್ತಿದೆ. ಮತ್ತೊಂದು ಬದಿಯಲ್ಲಿ ಪ್ರತಿ ಇಪ್ಪತ್ತು ನಿಮಿಷಕ್ಕೊಬ್ಬ ಮಹಿಳೆ ಅತ್ಯಾಚಾರ-ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ.

ಅಂತರ್ಗತ ಕ್ರೌರ್ಯಕ್ಕೆ ಸಾಕ್ಷಿಯಾವುದು ?

ಈ ಸೀಮಿತ ಚೌಕಟ್ಟಿನಿಂದಾಚೆಗಿನ ಸಮಾಜದತ್ತ ಕಣ್ಣು ಹಾಯಿಸಿದಾಗ ನಮ್ಮ ಸುಶಿಕ್ಷಿತ ಆಧುನಿಕ ಸಮಾಜವೂ ಹೇಗೆ ಮಹಿಳೆಯರು ಎದುರಿಸುತ್ತಿರುವ ಅಪಮಾನಗಳಿಗೆ, ಶೋಷಣೆ ದೌರ್ಜನ್ಯಗಳಿಗೆ, ಅತ್ಯಾಚಾರ ಕಗ್ಗೊಲೆಗಳಿಗೆ ಜಾಣಕುರುಡು ಪ್ರದರ್ಶಿಸುತ್ತಾ, ಇಂತಹ ಅಮಾನುಷತೆಗೆ ಜಾತಿ-ಧರ್ಮಗಳ ಲೇಪನ ನೀಡುವ ಮೂಲಕ ಬೌದ್ಧಿಕ ನಿಷ್ಕ್ರಿಯತೆಗೊಳಗಾಗಿದೆ ಎನ್ನುವುದು ಅರ್ಥವಾಗುತ್ತದೆ. ಸಾಮಾನ್ಯ ಮಹಿಳೆಗೆ ಗೌರವಯುತ ಸ್ಥಾನಮಾನ ನೀಡಲು ಪ್ರಶಸ್ತ ಜಾಗಗಳನ್ನೋ, ಅವಕಾಶಗಳನ್ನೋ ಅಥವಾ ಜಾತಿ-ಧರ್ಮಗಳ ನಿಬಂಧನೆಗಳನ್ನೋ ಹುಡುಕಾಡುವ ಪಿತೃಪ್ರಧಾನ ಸಮಾಜ ದೌರ್ಜನ್ಯ-ಶೋಷಣೆ-ಅತ್ಯಾಚಾರಗಳ ಸಂದರ್ಭದಲ್ಲಿ ಎಲ್ಲ ಬೇಲಿಗಳನ್ನೂ ಹಾರಿ ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತದೆ. ಹಾಗಾಗಿಯೇ ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳೂ, ಆರಾಧನಾ ಸ್ಥಾವರಗಳೂ, ಪವಿತ್ರ ನದಿಗಳೂ ಸಹ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಮೂಕ ಸಾಕ್ಷಿಗಳಾಗಿಬಿಡುತ್ತವೆ.

ತಮ್ಮ ಮೇಲೆ ನಡೆಯುವ ಪ್ರತಿಯೊಂದು ದೌರ್ಜನ್ಯಗಳಿಗೂ ಸಾಕ್ಷಿ ಪುರಾವೆಗಳನ್ನು ಒದಗಿಸಬೇಕಾದ ವಾತಾವರಣವನ್ನು ಮಹಿಳೆಯರು ಎದುರಿಸುತ್ತಿದ್ದಾರೆ ಎಂದರೆ ಅದರರ್ಥ ನಮ್ಮ ಪಿತೃಪ್ರಧಾನ ವ್ಯವಸ್ಥೆಯು ಪುರುಷ ಸಮಾಜವನ್ನು ಅಥವಾ ಸಮಾಜದೊಳಗಿನ ಪುರುಷಾಧಿಪತ್ಯವನ್ನು ಅನುಮಾನಿಸುವುದೇ ಇಲ್ಲ. ಕಾನೂನು ಸಾಕ್ಷ್ಯಾಧಾರಗಳನ್ನು ಕೇಳುತ್ತದೆ. ಆದರೆ ಜೀವಂತ ಸಮಾಜಕ್ಕೆ ಕಣ್ಣೆದುರು ನಡೆಯುವ ಅನ್ಯಾಯಗಳ ಸಾಕ್ಷ್ಯಾಧಾರಗಳು ಬೇಕಿಲ್ಲ ಅಲ್ಲವೇ ? ಸೌಜನ್ಯ ನಮ್ಮ ನಡುವಿನ ದುರಂತ ಸಾಕ್ಷಿಯಾಗಿ ಏಕೆ ಕಾಣುತ್ತಾಳೆ ಎಂದರೆ ಆಕೆಯ ಮೇಲೆ ನಡೆದಿರುವ ಬರ್ಬರ ಕೃತ್ಯದ ಸಾಕ್ಷಿಗಳು ನಮ್ಮ ನಡುವೆಯೇ ಜೀವಂತವಾಗಿವೆ. ಈ ದೃಷ್ಟಿಯಿಂದ ನೋಡಿದಾಗ ಸೌಜನ್ಯ ಏಕಾಂಗಿಯಲ್ಲ. ಆಕೆಯೊಡನೆ ಆಕೆಯಂತೆಯೇ ದೌರ್ಜನ್ಯಕ್ಕೊಳಗಾದ ನೂರಾರು ಅಮಾಯಕ ಜೀವಗಳು ಇಂದಿಗೂ ನ್ಯಾಯಕ್ಕಾಗಿ ಹಾತೊರೆಯುತ್ತಿವೆ.

ಇದನ್ನೂ ಓದಿ:ಸೌಜನ್ಯ ಪ್ರಕರಣವನ್ನು ನ್ಯಾಯ ಬದ್ಧ ಮೂಲ ತನಿಖೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

 “ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ” ಎಂಬ ಕವಿವಾಣಿಯನ್ನು ನೆನಪಿಸಿಕೊಂಡಾಗ (ಕವಿಯ ಕ್ಷಮೆ ಕೋರುತ್ತಾ) ಅತ್ಯಾಚಾರ ಎಸಗುವ ಪಾತಕಿಗಳೂ ನೆನಪಾಗುವುದು ಕಾಕತಾಳೀಯ ದುರಂತ. ಏಕೆಂದರೆ ತಮ್ಮ ಕಾಮತೃಷೆ, ಜಾತಿ-ಧರ್ಮದ ನಶೆ ಹಾಗೂ ಪುರುಷಾಹಮಿಕೆಯ ಅಮಲನ್ನು ತೀರಿಸಿಕೊಳ್ಳ ಬಯಸುವ ಪಾತಕಿ ಪುರುಷರಿಗೆ  ಮಹಿಳೆಯ ಅಸ್ತಿತ್ವ, ಅಸ್ಮಿತೆಗಳು ನಗಣ್ಯವಾಗುತ್ತವೆ. ಹಾಗೆಯೇ ಸುತ್ತಲಿನ ಸಾಂಸ್ಕೃತಿಕ ಪರಿಸರ, ಸಾಮಾಜಿಕ ವಾತಾವರಣ, ಧಾರ್ಮಿಕ ಕಟ್ಟುಪಾಡುಗಳೂ ಸಹ  ಅಡ್ಡಿಯಾಗುವುದಿಲ್ಲ. ಯಾರೂ ಮುಖ್ಯರಾಗುವುದಿಲ್ಲ, ಅಮುಖ್ಯರೂ ಆಗುವುದಿಲ್ಲ. ಹಾಗಾಗಿಯೇ ನಮಗೆ ತಮ್ಮ ಪೋಷಕರಿಂದಲೇ ಹತ್ಯೆಗೀಡಾಗುವ, ಸಂಬಂಧಿಕರಿಂದಲೇ ಅತ್ಯಾಚಾರಕ್ಕೊಳಗಾಗುವ, ಸಹ ಧರ್ಮೀಯರಿಂದಲೇ ದೌರ್ಜನ್ಯಕ್ಕೊಳಗಾಗುವ, ಜಾತಿ ಬಾಂಧವರಿಂದಲೇ ಶೋಷಣೆಗೊಳಗಾಗುವ ಮಹಿಳೆಯರು ದಿನನಿತ್ಯ ಎದುರಾಗುತ್ತಿರುತ್ತಾರೆ. ಕರ್ನಾಟಕದ ಸಮಸ್ತ ಜನತೆಯ ಶ್ರದ್ಧಾ ನಂಬಿಕೆಗಳ ಕೇಂದ್ರವಾದ ಧರ್ಮಸ್ಥಳದಲ್ಲೂ ಇಂತಹ ಕೃತ್ಯಗಳು ನಡೆಯಲು ಸಾಧ್ಯವೇ ಎಂಬ ಜಿಜ್ಞಾಸೆಗೆ ಉತ್ತರ ಇಲ್ಲಿ ಕಾಣುತ್ತದೆ.

ಸಾಮಾಜಿಕ-ಸಾಂಸ್ಕೃತಿಕ ಪ್ರಾಬಲ್ಯ

ಉತ್ತರ ಭಾರತದ ಯಾವುದೋ ಕುಗ್ರಾಮದಲ್ಲಿ ನಡೆಯುವಂತಹ ಬರ್ಬರ ಮರ್ಯಾದೆಗೇಡು ಹತ್ಯೆ ಅಥವಾ ಸಾಮಾಜಿಕ ಬಹಿಷ್ಕಾರ ದಕ್ಷಿಣ ತುದಿಯ ಬಂಗಾರಪೇಟೆ ತಾಲ್ಲೂಕು ಬೋಡಗುರ್ಕಿ ಗ್ರಾಮದಲ್ಲೂ ನಡೆಯುತ್ತದೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಧಾರ್ಮಿಕ ಸ್ಥಳದಲ್ಲಿ ಅತ್ಯಾಚಾರ-ಹತ್ಯೆಗೀಡಾದ 12 ವರ್ಷದ ಆಸಿಫಾಳಂತೆಯೇ ಕರ್ನಾಟಕದ ಧರ್ಮಸ್ಥಳದ ಸಮೀಪದಲ್ಲಿ 17 ವರ್ಷದ ಸೌಜನ್ಯ ಬಲಿಯಾಗುತ್ತಾಳೆ. ಆಸಿಫಾಗೆ ಶೀಘ್ರ ನ್ಯಾಯ ದೊರೆಯುತ್ತದೆಯಾದರೂ ಸೌಜನ್ಯ ನ್ಯಾಯವಂಚಿತಳಾಗುತ್ತಾಳೆ. ಇಲ್ಲಿ ಸಂತ್ರಸ್ತ ಬಾಲಕಿಯರ ಅಸ್ಮಿತೆಗಳನ್ನು ದಾಟಿ ನೋಡಿದಾಗ ನಮಗೆ ಕಾಣುವುದು ದುಷ್ಕೃತ್ಯ ಎಸಗುವ ವ್ಯಕ್ತಿಗಳ ಸಾಮಾಜಿಕ ಪ್ರಾಬಲ್ಯ ಮತ್ತು ಪ್ರಭಾವ. ಸೌಜನ್ಯ ಪ್ರಕರಣದಲ್ಲಿ ನಮಗೆ ಢಾಳಾಗಿ ಕಾಣುವುದು ಅತ್ಯಾಚಾರಿ-ಹಂತಕರ ಈ ಪ್ರಭಾವಳಿ ಮತ್ತು ಸಾಮಾಜಿಕ ಅಂತಸ್ತು. ಅಗೋಚರವಾಗಿಯೇ ಉಳಿದಿರುವ ಪಾತಕಿಗಳನ್ನು ಶೋಧಿಸುವ ಜವಾಬ್ದಾರಿ ಕಾನೂನು ಪಾಲಕರ ಮೇಲೆ, ಆಡಳಿತ ವ್ಯವಸ್ಥೆಯ ಮೇಲೆ ಇರುವುದಾದರೂ ಒಂದು ನಾಗರಿಕತೆಯುಳ್ಳ ಸಮಾಜವಾಗಿ ನಾವು ಗುರುತಿಸಬೇಕಿರುವುದು ಈ ವ್ಯಕ್ತಿಗತ ಪಾತಕಿಗಳಿಂದಾಚೆಗೆ ನಾವೇ ಪೋಷಿಸುತ್ತಿರುವ ಒಂದು ಕ್ರೂರ ನಾಗರಿಕ ಜಗತ್ತನ್ನು.

ಗುಬ್ಬಿ ತಾಲ್ಲೂಕಿನ ಚಿಕ್ಕ ಹೆಡಿಗೆಹಳ್ಳಿ ಮತ್ತು ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಹತ್ಯೆಗೀಡಾದ ಅಮಾಯಕ ಹೆಣ್ಣುಮಕ್ಕಳ ಅಪ್ಪಂದಿರು, ಚಿಕ್ಕಪ್ಪಂದಿರು  ಪ್ರತಿನಿಧಿಸುವ ಸಮಾಜಕ್ಕೂ, ಸೌಜನ್ಯ ಪ್ರಕರಣದಲ್ಲಿ ಬರ್ಬರ ಕೃತ್ಯ ಎಸಗಿದ ಪಾತಕಿಗಳನ್ನು ಪ್ರತಿನಿಧಿಸುವ ಸಮಾಜಕ್ಕೂ ವ್ಯತ್ಯಾಸವೇನಾದರೂ ಇದೆಯೇ ? ಸಾಮಾಜಿಕ ನೆಲೆಯಲ್ಲಿ ಯಾವುದೇ ಅಂತರ ಕಾಣಲು ಸಾಧ್ಯವಿಲ್ಲ. ಏಕೆಂದರೆ ಮೂರೂ ಪ್ರಕರಣಗಳಲ್ಲಿ ಎದ್ದು ಕಾಣುವುದು ಪುರುಷಾಧಿಪತ್ಯ, ದುರ್ಬಲ ಮಹಿಳೆಯ ಅಸಹಾಯಕತೆ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಶೋಷಕ ಪ್ರವೃತ್ತಿ. ಈ ಶೋಷಕ ಪ್ರವೃತ್ತಿಯನ್ನು ಜಾತಿ ಶ್ರೇಷ್ಠತೆಯ ಚೌಕಟ್ಟಿನಲ್ಲಿ ಸಮರ್ಥಿಸುವಷ್ಟೇ ಬಲವಾಗಿ ಧರ್ಮ ದ್ವೇಷದ-ಕೋಮು ದ್ವೇಷದ ನೆಲೆಯಲ್ಲೂ ಸಮರ್ಥಿಸಲಾಗುತ್ತದೆ. ಇಲ್ಲಿ ನಮಗೆ ಬಿಲ್ಕಿಸ್‌ ಬಾನೋ, ಭವಾರಿ ದೇವಿ ದುರಂತ ಸಾಕ್ಷಿಗಳಾಗಿ ಸೌಜನ್ಯಳೊಡನೆ ಕಾಣುತ್ತಾರೆ.

ಈ ಶೋಷಣೆಗೊಳಗಾದ ಅಮಾಯಕ ಹೆಣ್ಣು ಮಕ್ಕಳು ʼನಮ್ಮವರುʼ ಎನಿಸಿಕೊಳ್ಳಲು ಅಸ್ಮಿತೆಗಳ ಚೌಕಟ್ಟುಗಳು ಬೇಕಾಗುತ್ತವೆ. ಹಾಗೆನಿಸಿಕೊಂಡರೂ ಸುತ್ತಲಿನ ಶೋಷಕ ಸಮಾಜದಲ್ಲಿ ಪ್ರಬಲವಾಗಿರುವ ʼನಮ್ಮವರೆಂಬʼ ಧೋರಣೆ ಸಂತ್ರಸ್ತ ಜೀವಗಳನ್ನು ನಗಣ್ಯಗೊಳಿಸಿ ಅಪರಾಧಗಳನ್ನು ಮುಚ್ಚಿಹಾಕಲು ನೆರವಾಗಿಬಿಡುತ್ತದೆ. ಈ ಮುಚ್ಚಿ ಹಾಕುವ ಪ್ರವೃತ್ತಿಗೆ ಪಿತೃಪ್ರಧಾನ ಸಮಾಜ ಸ್ಮಶಾನ ಮೌನ ವಹಿಸುತ್ತದೆ. ಸೌಜನ್ಯ ಪ್ರಕರಣದಲ್ಲಿ ಇದನ್ನು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಈ ಕಾರಣಕ್ಕಾಗಿಯೇ ಮಾನವೀಯತೆಯುಳ್ಳ ಸಮಾಜದ ಒಂದು ಬೃಹತ್‌ ವರ್ಗಕ್ಕೆ ಸೌಜನ್ಯ ಮನೆಯ ಮಗಳಾಗಿ ಕಾಣುತ್ತಾಳೆ. ಕರ್ನಾಟಕದ ಸಹೃದಯರಿಗೆ ಕನ್ನಡತಿಯಾಗಿ ಕಾಣುತ್ತಾಳೆ. ಅನ್ಯಾಯಗಳಿಗೆ ಮಿಡಿಯುವ ಪ್ರತಿಯೊಂದು ಮನಸ್ಸಿಗೂ  ʼನಮ್ಮವಳುʼ ಎಂದೆನಿಸುತ್ತಾಳೆ. ಈ ಮನೆಯ ಮಗಳ ಆರ್ತನಾದ, ಆಕ್ರಂದನ ಹಾಗೂ ಯಾತನೆಯ ಧ್ವನಿಗಳೆಲ್ಲವೂ ನೇತ್ರಾವತಿಯಲ್ಲಿ ಹರಿದು ಹೋಗಿ ಹನ್ನೊಂದು ವರ್ಷಗಳಾಗಿದ್ದರೂ ಸೌಜನ್ಯ ಇಂದಿಗೂ ಧ್ವನಿಸುತ್ತಿರುವ ಕಾರಣವೇನೆಂದರೆ, ಸೌಜನ್ಯಳಂತಹ ನೂರಾರು ಅಸಹಾಯಕ ಧ್ವನಿಗಳನ್ನು ಹೊಸಕಿಹಾಕುವ ಒಂದು ಕ್ರೂರ ಸಮಾಜ ನಮ್ಮ ನಡುವೆ ಜೀವಂತವಾಗಿದೆ.

ಅಪರಾಧ-ಶಿಕ್ಷೆಗಳಿಂದಾಚೆಗೆ 

ಸೌಜನ್ಯ ಪ್ರಕರಣದಲ್ಲಿ ಅಗೋಚರವಾಗಿರುವ ಪಾತಕಿಗಳಿಗೆ ಭವಿಷ್ಯದಲ್ಲಿ ಶಿಕ್ಷೆಯಾದರೂ, ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಕ್ರೌರ್ಯ ಮತ್ತು ಅದನ್ನು ಪೋಷಿಸುವ ದುಷ್ಟ ಪ್ರವೃತ್ತಿಗಳನ್ನು ನಿರ್ಮೂಲ ಮಾಡಿದರೆ ಮಾತ್ರ ಆಕೆಯಂತಹ ನೂರಾರು ಜೀವಗಳಿಗೆ ಪೂರ್ಣ ನ್ಯಾಯ ದೊರಕಿಸಿದಂತಾಗುತ್ತದೆ. ಇಲ್ಲವಾದಲ್ಲಿ ಇದೇ ಸುಶಿಕ್ಷಿತ-ನಾಗರಿಕತೆಯ ಸಮಾಜ ಹಲವು ಸೌಜನ್ಯಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಒಂದು ಆರೋಗ್ಯಕರ ಸಮಾಜದಲ್ಲಿ ದೌರ್ಜನ್ಯ-ಅತ್ಯಾಚಾರಗಳನ್ನು ಎಸಗುವ ದುಷ್ಕರ್ಮಿಗಳಿಗಿಂತಲೂ ಅಪಾಯಕಾರಿಯಾಗಿ ಕಾಣಬೇಕಾದುದು ಅಂತಹ ಕೃತ್ಯಗಳನ್ನು ಮೌನವಾಗಿ ಸಮ್ಮತಿಸುವ, ತಾತ್ವಿಕವಾಗಿ ಸಮರ್ಥಿಸುವ ಮತ್ತು ಸೈದ್ಧಾಂತಿಕವಾಗಿ ಪೋಷಿಸುವ ಸಾಂಸ್ಕೃತಿಕ ಚಿಂತನಾ ವಾಹಿನಿಗಳು ಹಾಗೂ ಆಲೋಚನಾ ಕ್ರಮ.                      “ ಎಲ್ಲರನ್ನೂ ಒಳಗೊಳ್ಳುವ ” ತಾತ್ವಿಕ ಚಿಂತನೆಗಳು ಸಮಾಜದಲ್ಲಿ ವ್ಯಾಪಿಸುತ್ತಿರುವಾಗಲೂ ಎಲ್ಲರೂ ನಮ್ಮವರೆಂದು ಭಾವಿಸುವ ಉದಾತ್ತ ಆಲೋಚನೆಗಳು ಸೃಷ್ಟಿಯಾಗದಿರುವುದಕ್ಕೆ ಕಾರಣವೇ ಈ ಸ್ಮಶಾನ ಮೌನದ ಧ್ವನಿಗಳು. ಹಾಗಾಗಿಯೇ ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ಸೌಜನ್ಯ ಮನೆಯ ಮಗಳೂ ಆಗುವುದಿಲ್ಲ ಅಪ್ಪಟ ಕನ್ನಡತಿಯೂ ಆಗುವುದಿಲ್ಲ ಮಲೆನಾಡಿನ ಕೂಸೂ ಆಗುವುದಿಲ್ಲ.

ಆದರೆ ಸೌಜನ್ಯ ಕರ್ನಾಟಕದ ಕೆಲವು ಮನಸುಗಳಲ್ಲಾದರೂ ನೆಲೆಸಿದ್ದಾಳೆ. ಆಕೆಯ ಮೇಲೆ ನಡೆದ ಪಾತಕಿ ಕೃತ್ಯ ಕೆಲವರ ಪ್ರಜ್ಞೆಯನ್ನಾದರೂ ಕದಡಿದೆ. ಜಾತಿ-ಮತ-ಧರ್ಮ-ಪಂಥ-ಭಾಷೆ-ಪ್ರದೇಶ-ಲಿಂಗ ಇದಾವುದರ ಅಂತರವೂ ಇಲ್ಲದ ಒಂದು ಮನುಜ ಪ್ರೀತಿಯ ಸೆಲೆ ಜುಲೈ 17ರಂದು ಮೈಸೂರಿನಲ್ಲಿ ನಡೆದ ಬೃಹತ್‌ ಮಾನವ ಸರಪಳಿಯ ಮೂಲಕ ವ್ಯಕ್ತವಾಗಿದೆ. ವಸ್ತುಶಃ ಅದು “ ಮಾನವತೆಯ ಸರಪಳಿ” ಆಗಿತ್ತು. ಜೀವಪರ ಮನಸುಗಳ ಸರಪಳಿಯಾಗಿತ್ತು. ಹಲವು ವರ್ಷಗಳ ಹಿಂದೆ ಹತ್ಯೆಗೀಡಾದ ವಿಜಯಪುರದ ದಾನಮ್ಮ ಎಂಬ ಅಸಹಾಯಕ ಹೆಣ್ಣುಮಗಳನ್ನೂ ಸೇರಿದಂತೆ ಜಾತಿಶ್ರೇಣೀಕೃತ ಪಿತೃಪ್ರಧಾನ ವ್ಯವಸ್ಥೆಯ ಕ್ರೌರ್ಯಗಳಿಗೆ ಬಲಿಯಾಗುತ್ತಿರುವ ಸಮಸ್ತ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸುವುದೆಂದರೆ ಈ ವ್ಯವಸ್ಥೆಯೊಳಗಿನ ಕರಾಳ ಮುಖವಾಡಗಳನ್ನು ಕಿತ್ತೊಗೆಯುವುದೇ ಆಗಿದೆ. ಇದು ಒಂದು ಸಂಯಮಶೀಲ, ಸಂವೇದನಾಶೀಲ ಸಮಾಜದ ಆದ್ಯತೆಯೂ ಆಗಬೇಕಿದೆ. ಲಿಂಗ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯನ್ನು ಪೋಷಿಸಿ ಬೆಳೆಸುವ ಗುರುತರ ಜವಾಬ್ದಾರಿ ಇದೇ ಸಮಾಜದ ಸಾಂಸ್ಕೃತಿಕ ಚಿಂತನಾ ವಾಹಿನಿಗಳ ಮೇಲಿದೆ.

ಇಲ್ಲವಾದರೆ ನಮ್ಮ ಸ್ವಯಂ ಘೋಷಿತ ಸಾಂಸ್ಕೃತಿಕ ಔನ್ನತ್ಯಗಳೆಲ್ಲವೂ ಅನ್ಯಾಯಕ್ಕೊಳಗಾದ ಅಸಹಾಯಕ ಹೆಣ್ಣುಮಕ್ಕಳ ಸಮಾಧಿಯ ಮುಂದೆ ನಗಣ್ಯವಾಗಿಬಿಡುತ್ತವೆ. ಸೌಜನ್ಯ ಈ ಜವಾಬ್ದಾರಿಯನ್ನು ನೆನಪಿಸುವ ದುರಂತ ಸಾಕ್ಷಿಯಾಗಿ ನಮ್ಮ ನಡುವೆ ನಿಲ್ಲುತ್ತಾಳೆ.

Donate Janashakthi Media

Leave a Reply

Your email address will not be published. Required fields are marked *