ಉತ್ತರಾಧಿಕಾರ- ತೆರಿಗೆ ಕಾನೂನು- ಏಕರೂಪ ನಾಗರಿಕ ಸಂಹಿತೆ

 ಮೂಲ : ಅನೀಶಾ ಮಾಥುರ್‌

ಅನುವಾದ : ನಾ ದಿವಾಕರ

ಒಬ್ಬ ಮಹಿಳೆ ಅಕಾಲಿಕವಾಗಿ ಮರಣಹೊಂದಿದರೆ, ಆಕೆಯ ತಂದೆಯಿಂದ ಅವಳಿಗೆ ಹಂಚಲಾದ ಪಿತ್ರಾರ್ಜಿತ ಆಸ್ತಿಯನ್ನು ಅವಳ ತಂದೆಯ ವಾರಸುದಾರರಿಗೆ ನೀಡಲಾಗುತ್ತದೆ ಎಂಬುದನ್ನು ಗಮನಿಸಲಾಯಿತು. ಪತಿಯ ಕಡೆಯಿಂದ ಆಕೆಗೆ ಹಂಚಿಕೆಯಾದ ಆಸ್ತಿಯನ್ನು ಆಕೆಯ ಪತಿಯ ಉತ್ತರಾಧಿಕಾರಿಗೆ ವಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌  “ಸೆಕ್ಷನ್ 15 (2) ಅನ್ನು ಜಾರಿಗೆ ತರುವಲ್ಲಿ ಶಾಸಕಾಂಗದ ಮೂಲ ಉದ್ದೇಶವೆಂದರೆ, ಸಂತಾನವಿಲ್ಲದೆ ಸಾಯುವ ಹಿಂದೂ ಮಹಿಳೆಯ ಪಿತ್ರಾರ್ಜಿತ ಆಸ್ತಿಯು ಮೂಲಕ್ಕೆ ಹಿಂತಿರುಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು” ಎಂದು ಅಭಿಪ್ರಾಯಪಟ್ಟಿದೆ.

 ಏಕರೂಪ ನಾಗರಿಕ ಸಂಹಿತೆ (ಏನಾಸಂ) ಕುರಿತ ಚರ್ಚೆಯು ಮದುವೆ, ವಿಚ್ಛೇದನ, ದತ್ತು ಇತ್ಯಾದಿಗಳ ಕಾನೂನುಗಳ ಸುತ್ತ ಇದ್ದರೂ, ಇದು ಆದಾಯ ಮತ್ತು ಆನುವಂಶಿಕತೆಗೆ ಸಂಬಂಧಿಸಿದ ಪ್ರಸ್ತುತ ಶಾಸನದ ಮೇಲೂ ಪರಿಣಾಮ ಬೀರುತ್ತದೆ. ಹಿಂದೂ ಕುಟುಂಬ ಉತ್ತರಾಧಿಕಾರ ವ್ಯವಸ್ಥೆಯ ರಚನೆ ಮತ್ತು ಹಿಂದೂ ಅವಿಭಜಿತ ಕುಟುಂಬಕ್ಕೆ (ಎಚ್‌ಯುಎಫ್) ತೆರಿಗೆ ಪ್ರಯೋಜನಗಳ ಮೇಲೆ ಅತ್ಯಂತ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ, ಇದು ಬೇರೆ ಯಾವುದೇ ಧರ್ಮದಲ್ಲಿ ಅಸ್ತಿತ್ವದಲ್ಲಿಲ್ಲದ ಪರಿಕಲ್ಪನೆಗಳಾಗಿವೆ.

ಏನಾಸಂ ಸುಧಾರಣೆಗಳು ಹಿಂದೂ ಅವಿಭಜಿತ ಕುಟುಂಬವನ್ನು (ಎಚ್‌ಯುಎಫ್) ತೆರಿಗೆ-ವಿನಾಯಿತಿ ವರ್ಗವಾಗಿ ರದ್ದುಗೊಳಿಸುವುದನ್ನು ಒಳಗೊಂಡಿರುತ್ತವೆಯೇ ಎಂಬುದು ಬಹುಶಃ ಸರ್ಕಾರದ ಮುಂದಿರುವ  ಪ್ರಮುಖ ಪ್ರಶ್ನೆಯಾಗಿದೆ. ಎಚ್‌ಯುಎಫ್ ಒಂದು ಪರಿಕಲ್ಪನೆಯಾಗಿ, ಹಿಂದೂ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ಉದ್ಭವಿಸುತ್ತದೆ,  ಏಕೆಂದರೆ ಕುಟುಂಬದ ಆಸ್ತಿಯನ್ನು ಕುಟುಂಬದ “ಮುಖ್ಯಸ್ಥ” ಅಥವಾ “ಕರ್ತಾ” ಹೊಂದಿರುತ್ತಾರೆ. ಆದ್ದರಿಂದ, ಎಚ್‌ಯುಎಫ್ ಅನ್ನು ಬೇರೆ ಯಾವುದೇ ಧರ್ಮದಲ್ಲಿ ಅಸ್ತಿತ್ವದಲ್ಲಿಲ್ಲದ ಕಾನೂನುಬದ್ಧ ತೆರಿಗೆ ಘಟಕವಾಗಿ ಗುರುತಿಸಲು ಪ್ರತ್ಯೇಕ ತೆರಿಗೆ ರಚನೆಯನ್ನು ರೂಪಿಸಲಾಗಿದೆ.

ಎಚ್‌ಯುಎಫ್‌ ಮತ್ತು ತೆರಿಗೆ ಪದ್ಧತಿ

1936ರಲ್ಲಿ, ಆದಾಯ ತೆರಿಗೆ ವಿಚಾರಣಾ ವರದಿಯು ಎಚ್‌ಯುಎಫ್‌ಗೆ ವಿಶೇಷ ವಿನಾಯಿತಿಗಳನ್ನು ನೀಡುವುದರಿಂದ ಆಗುವ ಗಣನೀಯ ಆದಾಯ ನಷ್ಟದ ಬಗ್ಗೆ ಎಚ್ಚರಿಕೆ ನೀಡಿತ್ತು. ಎಚ್‌ಯುಎಫ್‌ಗೆ ಆದ್ಯತಾ ತೆರಿಗೆ ಚಿಕಿತ್ಸೆಯ ಬಗ್ಗೆ ಸ್ವಾತಂತ್ರ್ಯಾನಂತರದ ಇತರ ಹಲವಾರು ಸಮಿತಿಗಳು ಸಹ ಪ್ರತಿಕ್ರಿಯಿಸಿವೆ. ತೆರಿಗೆ ವಿಚಾರಣಾ ಆಯೋಗವು (1953-54) ಹಿಂದೂ ಅವಿಭಜಿತ ಕುಟುಂಬದ ತೆರಿಗೆ ನಿರ್ವಹಣೆಯಲ್ಲಿ ಕೆಲವು ಅಸಂಗತತೆಗಳನ್ನು ಗಮನಿಸಿದೆ. 2018 ರ ಕಾನೂನು ಆಯೋಗದ ವರದಿಯು 1971 ರ ನೇರ ತೆರಿಗೆ ವಿಚಾರಣಾ ಸಮಿತಿಯ ವರದಿಯನ್ನು (ವಾಂಚೂ ಸಮಿತಿ) ಉಲ್ಲೇಖಿಸಿದೆ, ಇದು ಎಚ್‌ಯುಎಫ್ ಸಂಸ್ಥೆಯನ್ನು ತೆರಿಗೆ ತಪ್ಪಿಸಲು ಬಳಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ ಮತ್ತು ಅದನ್ನು ರದ್ದುಗೊಳಿಸಲು ಸೂಚಿಸಿದೆ.

ಎಚ್‌ಯುಎಫ್ ಕಾನೂನು ದೃಷ್ಟಿಕೋನದಿಂದ ಪ್ರತ್ಯೇಕ ಘಟಕವಾಗಿದೆ. ಕುಟುಂಬದ ವೈಯಕ್ತಿಕ ಸದಸ್ಯರು  ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುತ್ತಾರೆ ಹಾಗೂ ಎಚ್‌ಯುಎಫ್ ತನ್ನದೇ ಆದ ಪ್ರತ್ಯೇಕ ಪ್ಯಾನ್ ಕಾರ್ಡ್ ಅನ್ನು ಹೊಂದಿರುತ್ತದೆ. ಎಚ್‌ಯುಎಫ್ ಆದಾಯವನ್ನು  ಗಳಿಸಲು ತನ್ನದೇ ಆದ ವ್ಯವಹಾರವನ್ನು ನಡೆಸಬಹುದು. ಇದು ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿಯೂ ಹೂಡಿಕೆ ಮಾಡಬಹುದು. ಪ್ರತ್ಯೇಕ ಘಟಕವಾಗಿ, ಎಚ್‌ಯುಎಫ್ 2.5 ಲಕ್ಷ ರೂ.ಗಳ ಮೂಲ ತೆರಿಗೆ ವಿನಾಯಿತಿಯನ್ನು ಹೊಂದಿದೆ, ಇದು ಕುಟುಂಬ  ಸದಸ್ಯರ ವೈಯಕ್ತಿಕ ಆದಾಯದಿಂದ ಪ್ರತ್ಯೇಕವಾಗಿ ಪರಿಗಣಿಸಲ್ಪಡುತ್ತದೆ.

ಮೇ 2005 ರಲ್ಲಿ ಕೇಂದ್ರ ಸರ್ಕಾರವು ಎಚ್‌ಯುಎಫ್ ಹೆಸರಿನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯನ್ನು ತೆರೆಯಲು ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಆದಾಗ್ಯೂ 2022 ರಲ್ಲಿ ಜಾರಿಯಲ್ಲಿರುವ ನಿಯಮಗಳ ಅನುಸಾರ ಎಚ್‌ಯುಎಫ್ ತನ್ನ ಹೆಸರಿನಲ್ಲಿ ಪಿಪಿಎಫ್ ತೆರೆಯಲು ಸಾಧ್ಯವಿಲ್ಲವಾದರೂ ತನ್ನ ಸದಸ್ಯರ ಸಂಬಂಧಿತ ಪಿಪಿಎಫ್ ಖಾತೆಗಳಲ್ಲಿ ಠೇವಣಿ ಇಟ್ಟ ಮೊತ್ತಕ್ಕೆ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು. ಇದಲ್ಲದೆ ಎಚ್‌ಯುಎಫ್‌ನ ಪ್ರತಿಯೊಬ್ಬ ಸದಸ್ಯರಿಗೆ ಪಾವತಿಸಿದ ಆರೋಗ್ಯ ವಿಮಾ ಪ್ರೀಮಿಯಂಗಳ ಮೇಲೆ ಎಚ್‌ಯುಎಫ್ ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಎಚ್‌ಯುಎಫ್‌ಗೆ ಆದಾಯ ತೆರಿಗೆ ಶ್ರೇಣಿಯು ಒಬ್ಬ ವ್ಯಕ್ತಿಗೆ ಒಂದೇ ಆಗಿರುತ್ತದೆ. ವಿನಾಯಿತಿ ಮಿತಿ 2.5 ಲಕ್ಷ ರೂ ಇರುತ್ತದೆ. ಎಚ್‌ಯುಎಫ್ ಆದಾಯ ತೆರಿಗೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಲ್ಲಾ ತೆರಿಗೆ ಪ್ರಯೋಜನಗಳಿಗೆ  ಅರ್ಹತೆ ಪಡೆಯುತ್ತದೆ ಮತ್ತು ಬಂಡವಾಳ ಲಾಭಗಳಿಗೆ ಸಂಬಂಧಿಸಿದಂತೆ ವಿನಾಯಿತಿಗಳನ್ನು ಪಡೆಯುತ್ತದೆ. ಈ ಕಾಯ್ದೆಯಡಿ 1.5 ಲಕ್ಷ ರೂ.ಗಳವರೆಗೆ ತೆರಿಗೆ ಪ್ರಯೋಜನಗಳನ್ನು ಗಳಿಸಲು ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು ಮತ್ತು ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್ಎಸ್ಎಸ್) ನಲ್ಲಿ ಹೂಡಿಕೆ ಮಾಡಲು ಎಚ್‌ಯುಎಫ್‌ಗೆ ಅವಕಾಶವಿದೆ.

ಪ್ರಸ್ತುತ ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸ್ವಂತ ಸ್ವಾಧೀನ ಸ್ವತ್ತು ಹೊಂದಿದ್ದರೆ, ಅವುಗಳಲ್ಲಿ ಒಂದನ್ನು ಮಾತ್ರ ತೆರಿಗೆ ವಿನಾಯಿತಿಗಾಗಿ ಕೋರಬಹುದು. ಉಳಿದವುಗಳನ್ನು ಬಾಡಿಗೆಗೆ ಕೊಡಲಾಗಿದೆ ಎಂದು ಪರಿಗಣಿಸಲಾಗುತ್ತದೆ  ಮತ್ತು ಕಾಲ್ಪನಿಕ ಬಾಡಿಗೆಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ ಎಚ್‌ಯುಎಫ್ ತೆರಿಗೆ ಪಾವತಿಸದೆ ಒಂದಕ್ಕಿಂತ ಹೆಚ್ಚು ವಸತಿ ಮನೆಗಳನ್ನು ಹೊಂದಬಹುದು. ಇದಲ್ಲದೆ ಇದು ವಸತಿ ಆಸ್ತಿಯನ್ನು ಖರೀದಿಸಲು ಮತ್ತು ತೆರಿಗೆ ಪ್ರಯೋಜನಗಳನ್ನು ಪಡೆಯಲು ಗೃಹ ಸಾಲವನ್ನು ಸಹ ಪಡೆಯಬಹುದು.

ಈ ನಿಬಂಧನೆಯು ಕೋಟ್ಯಂತರ ಹಿಂದೂ ಕುಟುಂಬಗಳ ಮೇಲೆ, ವಿಶೇಷವಾಗಿ ವ್ಯಾಪಾರ ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಎಚ್‌ಯುಎಫ್‌ಗೆ ನೀಡಲಾದ ತೆರಿಗೆ, ವಿಮೆ ಮತ್ತು ಹೂಡಿಕೆ ವಿನಾಯಿತಿಗಳನ್ನು ಸರ್ಕಾರ ತಾರತಮ್ಯ ಎಂದು ರದ್ದುಗೊಳಿಸುತ್ತದೆಯೇ ಎಂದು ಗಮನಿಸಬೇಕಿದೆ. ಅಂತಹ ಯಾವುದೇ ಕ್ರಮವನ್ನು ತೆಗೆದುಕೊಂಡ ಪಕ್ಷದಲ್ಲಿ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ಗಳನ್ನು  ರದ್ದುಗೊಳಿಸುವುದು, ಅಸ್ತಿತ್ವದಲ್ಲಿರುವ ಸಾಲಗಳು, ವಿಮಾ ನೀತಿಗಳು ಮತ್ತು ಬ್ಯಾಂಕ್ ಖಾತೆ ರಚನೆಗಳನ್ನು ಬದಲಾಯಿಸುವಂತಹ ಹಲವು ಆರ್ಥಿಕ ಮತ್ತು ವ್ಯವಸ್ಥಾಪನಾ ಪರಿಣಾಮಗಳನ್ನು ಸರ್ಕಾರ ಪರಿಗಣಿಸಬೇಕಾಗುತ್ತದೆ.

ಸಹವರ್ತಿತ್ವ ಮತ್ತು ಉತ್ತರಾಧಿಕಾರ

ಪಿತ್ರಾರ್ಜಿತ ಆಸ್ತಿಯ ಅನುವಂಶಿಕತೆಗಾಗಿ ಹಿಂದೂ ಉತ್ತರಾಧಿಕಾರ ವ್ಯವಸ್ಥೆಯು ಪಿತ್ರಾರ್ಜಿತ ಆಸ್ತಿಯ ಪಾಲನ್ನು ಆನುವಂಶಿಕವಾಗಿ ಪಡೆಯುವ ಅಂತರ್ಗತ ಹಕ್ಕನ್ನು ಹುಟ್ಟಿನಿಂದಲೇ ಪಡೆಯಲು ಅನುಕೂಲವಾಗುವಂತೆ ಸಹವರ್ತಿ ಪದ್ಧತಿಯನ್ನು ಸೃಷ್ಟಿಸಿದೆ. ಇದರರ್ಥ ಹಿಂದೂ ಪುರುಷನು ಸತ್ತರೆ, ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯಲ್ಲಿ ಅವರ ಪಾಲನ್ನು ಸಹಭಾಗಿಗಳ ನಡುವೆ ಅಂದರೆ ಹೆಂಡತಿ ಮತ್ತು ಮಕ್ಕಳ ನಡುವೆ ಸಮಾನವಾಗಿ ವಿಂಗಡಿಸಲಾಗುತ್ತದೆ ಕುಟುಂಬದ ಆಸ್ತಿಯ ಸಂದರ್ಭದಲ್ಲಿ ವಿಧವೆ ತಾಯಿಗೆ ಲಭ್ಯವಾಗುತ್ತದೆ.

2005ರವರೆಗೆ, ಗಂಡುಮಕ್ಕಳನ್ನು ಮಾತ್ರ ಹುಟ್ಟಿನಿಂದಲೇ ಉತ್ತರಾಧಿಕಾರದ ಹಕ್ಕುಗಳನ್ನು ಹೊಂದಿರುವ ಸಹವರ್ತಿಗಳಾಗಿ ಪರಿಗಣಿಸಲಾಗುತ್ತಿತ್ತು. ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ 2005 ರ ಮೂಲಕ ಹೆಣ್ಣುಮಕ್ಕಳನ್ನು ಸಹ ಸದಸ್ಯರನ್ನಾಗಿ ಮಾಡಲಾಗಿದೆ, ಇದು ಮಹಿಳೆಯ ಆಸ್ತಿಯ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಸೆಕ್ಷನ್ 15 (2) ಅನ್ನು ಸಹ ಸೇರಿಸಿದೆ.

2020 ರಲ್ಲಿ ವಿನೀತಾ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಪಿತ್ರಾರ್ಜಿತ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವ ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ರ ತಿದ್ದುಪಡಿಯು ಪೂರ್ವಾನ್ವಯವಾಗಿರುತ್ತದೆ ಎಂದು ಒತ್ತಿಹೇಳಿತು. ಸೆಕ್ಷನ್ 6 ರ ಮೂಲಕ ಹೆಣ್ಣುಮಕ್ಕಳಿಗೆ ನೀಡಲಾದ ಸಮಾನತೆಯ ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳೂ ಸಹ ಕೃಷಿ ಆಸ್ತಿ ಸೇರಿದಂತೆ ಅವಿಭಕ್ತ ಹಿಂದೂ ಕುಟುಂಬದ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಸಮಾನ ಜನ್ಮಸಿದ್ಧ ಹಕ್ಕನ್ನು ಹೊಂದಿರುತ್ತಾರೆ.

ಜನವರಿ 2022ರಲ್ಲಿ, ಅರುಣಾಚಲ ಗೌಡರ್(ಈಗ ಮೃತರು) vs ಪೊನ್ನುಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಪೊನ್ನುಸ್ವಾಮಿಯವರು ಹಿಂದೂ ಪುರುಷನ ಸ್ವಯಾರ್ಜಿತ ಆಸ್ತಿಯು ಅನುವಂಶಿಕತೆಯಿಂದ ಹಂಚಿಕೆಯಾಗುತ್ತದೆಯೇ ಹೊರತು ಉತ್ತರಾಧಿಕಾರದಿಂದಲ್ಲ ಎಂದು ಹೇಳಿತ್ತು. ಇದಲ್ಲದೆ ಮಗಳು ಅಂತಹ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಅರ್ಹಳಾಗುವುದೇ ಅಲ್ಲದೆ ಸಹವರ್ತಿಯ ಅಥವಾ ಕುಟುಂಬ ಆಸ್ತಿಯ ವಿಭಜನೆಯ ಮೂಲಕ ಪಡೆದ ಆಸ್ತಿಯಲ್ಲೂ ಪಾಲು ಪಡೆಯುತ್ತಾಳೆ ಎಂದು ಹೇಳಿತ್ತು.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿ ರಾಷ್ಟ್ರೀಯ ವಿಚಾರ ಸಂಕಿರಣ | 12 ಸಾವಿರ ಜನರ ಭಾಗಿ!

ಒಬ್ಬ ಮಹಿಳೆ ಅಕಾಲಿಕವಾಗಿ ಮರಣಹೊಂದಿದರೆ, ಆಕೆಯ ತಂದೆಯಿಂದ ಅವಳಿಗೆ ಹಂಚಲಾದ ಪಿತ್ರಾರ್ಜಿತ ಆಸ್ತಿಯನ್ನು ಅವಳ ತಂದೆಯ ವಾರಸುದಾರರಿಗೆ ನೀಡಲಾಗುತ್ತದೆ ಎಂಬುದನ್ನು ಗಮನಿಸಲಾಯಿತು. ಪತಿಯ ಕಡೆಯಿಂದ ಆಕೆಗೆ ಹಂಚಿಕೆಯಾದ ಆಸ್ತಿಯನ್ನು ಆಕೆಯ ಪತಿಯ ಉತ್ತರಾಧಿಕಾರಿಗೆ ವಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌  “ಸೆಕ್ಷನ್ 15 (2) ಅನ್ನು ಜಾರಿಗೆ ತರುವಲ್ಲಿ ಶಾಸಕಾಂಗದ ಮೂಲ ಉದ್ದೇಶವೆಂದರೆ, ಸಂತಾನವಿಲ್ಲದೆ ಸಾಯುವ ಹಿಂದೂ ಮಹಿಳೆಯ ಪಿತ್ರಾರ್ಜಿತ ಆಸ್ತಿಯು ಮೂಲಕ್ಕೆ ಹಿಂತಿರುಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು” ಎಂದು ಅಭಿಪ್ರಾಯಪಟ್ಟಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಪಿತ್ರಾರ್ಜಿತ ಹಕ್ಕುಗಳನ್ನು ತರಲು ಹಿಂದೂ ಕಾನೂನನ್ನು ತಿದ್ದುಪಡಿ ಮಾಡಿರುವುದರಿಂದ, ಲಿಂಗ ಸಮಾನತೆಯನ್ನು ತರಲು ಇತರ ಧರ್ಮಗಳ ಉತ್ತರಾಧಿಕಾರ ಕಾನೂನುಗಳನ್ನು ಕ್ರೊಡೀಕರಿಸಿ ಸುವ್ಯವಸ್ಥಿತಗೊಳಿಸಬೇಕಾಗಿದೆ.

ಇತರ ಧರ್ಮಗಳಲ್ಲಿ ಉತ್ತರಾಧಿಕಾರ ಕಾನೂನುಗಳು

ಮುಸ್ಲಿಂ ಕಾನೂನು ಸ್ಪಷ್ಟವಾಗಿ ಕ್ರೋಡೀಕರಿಸಲಾಗಿಲ್ಲ ಮತ್ತು ವಿಚ್ಛೇದಿತ ಹೆಂಡತಿ, ಹೆಣ್ಣುಮಕ್ಕಳು ಮತ್ತು ವಿಧವೆಯರ ಮಕ್ಕಳು ತಮ್ಮ ಪಾಲಿನಿಂದ ವಂಚಿತರಾಗಲು ಹಲವಾರು ಲೋಪದೋಷಗಳನ್ನು ಹೊಂದಿದೆ. ಅವಿಭಕ್ತ ಕುಟುಂಬದ ಆಸ್ತಿ ಅಥವಾ ಅವಿಭಕ್ತ ಕುಟುಂಬ ನಿಧಿಗಳ ಪರಿಕಲ್ಪನೆಯು ಮುಸ್ಲಿಂ ಕಾನೂನಿನಲ್ಲಿ ಇಲ್ಲ. ಕಾನೂನು ಆಯೋಗದ ವರದಿಗಳು ಪತ್ನಿಯರು/ವಿಧವೆಯರು ಮತ್ತು ಮಕ್ಕಳನ್ನು ವಾರಸುದಾರರಾಗಿ ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಮುಸ್ಲಿಂ ಕಾನೂನನ್ನು ಕ್ರೋಡೀಕರಿಸಲು ಶಿಫಾರಸು ಮಾಡಿವೆ. ಕ್ರೈಸ್ತರಿಗೆ ಭಾರತೀಯ ಉತ್ತರಾಧಿಕಾರ ಕಾಯ್ದೆ, 1925 ಹಿಂದೂ ಕಾನೂನಿನಂತೆಯೇ ಉತ್ತರಾಧಿಕಾರದ ಪರಿಕಲ್ಪನೆಗಳನ್ನು ಅನ್ವಯಿಸುತ್ತದೆ.

ಅಸ್ಸಾಂನ ಖಾಸಿಯಾ ಮತ್ತು ಜೈನ್ತಿಯಾ ಗುಡ್ಡ ಪ್ರದೇಶಗಳ ಖಾಸಿಯಾಗಳು ಮತ್ತು ಜ್ಯೆಂಟೆಂಗ್‌ ಸಮುದಾಯಗಳು ಹಾಗೂ ಕೊಡಗಿನ ಕ್ರೈಸ್ತರು , ಬಿಹಾರ ಮತ್ತು ಒರಿಸ್ಸಾ ಪ್ರಾಂತ್ಯಗಳಲ್ಲಿ ಮುಂಡಾಗಳು ಮತ್ತು ಒರಾವನ್‌ಗಳ ವಿಷಯದಲ್ಲಿ, ಅವರು ಪ್ರಾಚೀನ ಸಾಂಪ್ರದಾಯಿಕ ಉತ್ತರಾಧಿಕಾರ ಕಾನೂನನ್ನು ಅನುಸರಿಸುತ್ತಾರೆ ಎಂದು ಕಾನೂನು ಆಯೋಗ 2018 ರ ವರದಿಯಲ್ಲಿ ಹೇಳಿದೆ. ಕ್ರೈಸ್ತರು ಬೇರೆ ಯಾವುದೇ ಸಾಂಪ್ರದಾಯಿಕ ಅಥವಾ ಶಾಸನಬದ್ಧ ಕಾನೂನುಗಳಿಂದ ನಿಯಂತ್ರಿಸಲ್ಪಡದಿದ್ದಾಗ ಮಾತ್ರ ಉತ್ತರಾಧಿಕಾರ ಕಾಯ್ದೆ 1925 ರ ನಿಯಮಗಳು ಅವರಿಗೆ ಅನ್ವಯವಾಗುತ್ತವೆ.

ಉದಾಹರಣೆಗೆ, ಗೋವಾ, ಡಮನ್ ಮತ್ತು ಡಿಯುಗಳಲ್ಲಿನ ಕ್ರೈಸ್ತರು ಪೋರ್ಚುಗೀಸ್ ಸಿವಿಲ್ ಕೋಡ್, 1867 ರಿಂದ ನಿಯಂತ್ರಿಸಲ್ಪಡುತ್ತಾರೆ, ಪಾಂಡಿಚೆರಿಯಲ್ಲಿನ ಕ್ರೈಸ್ತರು ಸಾಂಪ್ರದಾಯಿಕ ಹಿಂದೂ ಕಾನೂನು ಕಾಯ್ದೆ 1925 ಮತ್ತು ಫ್ರೆಂಚ್ ಸಿವಿಲ್ ಕೋಡ್ 1804 ನಿಂದ ನಿಯಂತ್ರಿಸಲ್ಪಡುತ್ತಾರೆ.
1925 ರ ಭಾರತೀಯ ಉತ್ತರಾಧಿಕಾರ ಕಾಯ್ದೆಯಲ್ಲಿ ಅಸ್ಪಷ್ಟತೆಗಳಿರುವುದರಿಂದ ಕ್ರೈಸ್ತರಿಗೂ ಸಹ ವಿಧವೆಯರ ಪಾಲು, ಹೆಣ್ಣುಮಕ್ಕಳ ಪಾಲು ಇತ್ಯಾದಿ ವಿಚಾರಗಳಲ್ಲಿ  ಕಾನೂನುಗಳನ್ನು ಕ್ರೋಡೀಕರಿಸುವ ಅಗತ್ಯವಿದೆ.

ಪಾರ್ಸಿಗಳಿಗೂ ಸಹ, ಭಾರತೀಯ ಉತ್ತರಾಧಿಕಾರ ಕಾಯ್ದೆಯ ನಿಬಂಧನೆಗಳು ಅನ್ವಯವಾಗುತ್ತವೆಯಾದರೂ, ಅಂತರ್ಗತ ತಾರತಮ್ಯದ ನಿಬಂಧನೆಗಳಿವೆ. ಕಾನೂನು ಆಯೋಗದ 2018 ರ ವರದಿಯು ಗಮನಿಸುವಂತೆ 1925ರ ಕಾಯ್ದೆಗೆ 1991ರ ತಿದ್ದುಪಡಿಯ ನಂತರ ಸೆಕ್ಷನ್‌ಗಳು ಸಮತೋಲಿತವಾಗಿವೆ ಮತ್ತು ಒಂದೇ ಮಟ್ಟದ ಪ್ರಾತಿನಿಧ್ಯದಲ್ಲಿ ಪುರುಷರು ಮತ್ತು ಮಹಿಳೆಯರ ಪಾಲು ಸಮಾನವಾಗಿರುತ್ತದೆ ಎಂದು ಸೂಚಿಸುತ್ತದೆ.

ಆದಾಗ್ಯೂ, ಪರಿಹರಿಸಬೇಕಾದ ಒಂದು ವಿಷಯವೆಂದರೆ 1925 ರ ಕಾಯ್ದೆಯಲ್ಲಿ ಪಾರ್ಸಿ ಎಂಬ ಪದದ ವ್ಯಾಖ್ಯಾನವನ್ನು ಒದಗಿಸಲಾಗಿಲ್ಲ. ಪಾರ್ಸಿ ಮದುವೆ ಮತ್ತು ವಿಚ್ಛೇದನ ಕಾಯ್ದೆ 1936ರಲ್ಲಿ ಈ ಪದವನ್ನು ಪಾರ್ಸಿ ಜೊರಾಸ್ಟ್ರಿಯನ್ ಎಂದು ವ್ಯಾಖ್ಯಾನಿಸಲಾಗಿದೆ. ಪಾರ್ಸಿ ತಂದೆಯ ಮಕ್ಕಳು, ಪಾರ್ಸಿಯೇತರ ತಾಯಿಯನ್ನು ಹೊಂದಿದ್ದರೂ ಸಹ ಅವರನ್ನು ಜೊರಾಸ್ಟ್ರಿಯನ್ ಧರ್ಮಕ್ಕೆ ಸೇರಿಸಿದರೆ ಮತ್ತು ಅನುಸರಿಸಿದರೆ ಅವರನ್ನು ಪಾರ್ಸಿಗಳು ಎಂದು ಗುರುತಿಸಲಾಗುತ್ತದೆ.

ಪಾರ್ಸಿ ತಾಯಿ ಮತ್ತು ಪಾರ್ಸಿಯೇತರ ತಂದೆಗೆ ಜನಿಸಿದ ಮಕ್ಕಳಿಗೆ ಇದು ಅನ್ವಯಿಸುವುದಿಲ್ಲ. ಅಂತಹ ಮಕ್ಕಳು ಪಾರ್ಸಿಗಳಾಗಿರುವುದಿಲ್ಲ. ಪಾರ್ಸಿ ತಾಯಿ ಕೂಡ ಸಮುದಾಯದ ಹೊರಗೆ ಮದುವೆಯಾದರೆ ಪಾರ್ಸಿ ಸಮುದಾಯದ ಭಾಗವಾಗುವುದಿಲ್ಲ. ಪರಿಣಾಮವಾಗಿ, ಮೃತ ಪಾರ್ಸಿ ಸೋದರಿಯ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಮಕ್ಕಳಿಗೆ ಹಕ್ಕಿಲ್ಲ. ಈ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ಮುಂದೆ ಪ್ರಶ್ನಿಸಲಾಗಿದೆ, ಆದರೆ ಈ ಪ್ರಕರಣವನ್ನು ನ್ಯಾಯಾಲಯವು ಇನ್ನೂ ನಿರ್ಧರಿಸಿಲ್ಲ.

ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿನ ಅಸಂಗತತೆಗಳು

ಹಿಂದೂ ಕಾನೂನಿಗೆ ತಿದ್ದುಪಡಿಗಳನ್ನು ಮಾಡಿದ್ದರೂ, 2008 ಮತ್ತು 2018 ರ ಕಾನೂನು ಆಯೋಗದ ವರದಿಗಳು ವಾರಸುದಾರರ ವರ್ಗಗಳಿಗೆ ಸಂಬಂಧಿಸಿದಂತೆ, ವಿಶೇಷವಾಗಿ ಕುಟುಂಬದ ಮುಖ್ಯಸ್ಥರ ಸಾವಿಗೆ ಮುಂಚಿತವಾಗಿ ಸಾವನ್ನಪ್ಪಿದ ಮಕ್ಕಳ ಮೊಮ್ಮಕ್ಕಳಿಗೆ ಸಂಬಂಧಿಸಿದಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿನ ಅಸಂಗತತೆಗಳು ಮತ್ತು ದ್ವಂದ್ವಗಳನ್ನು ಎತ್ತಿ ತೋರಿಸಿವೆ.

ದೇಶದ ವಿವಿಧ ರಾಜ್ಯಗಳು ವಿಧವೆಯಾದ ಸಂಗಾತಿಗಳ ಪಿತ್ರಾರ್ಜಿತ ಹಕ್ಕುಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಷರತ್ತುಗಳನ್ನು ಜಾರಿಗೆ ತಂದಿವೆ. ಉದಾಹರಣೆಗೆ, ಹಿಂದೂ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಉಂಟಾದ ತೊಡಕುಗಳಿಂದಾಗಿ ಕೇರಳವು 1975 ರಲ್ಲಿ ಕೇರಳ ಹಿಂದೂ ಅವಿಭಕ್ತ ಕುಟುಂಬ (ನಿರ್ಮೂಲನೆ) ಕಾಯ್ದೆ, 1975 ಜಾರಿಗೆ ತರುವ ಮೂಲಕ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ರದ್ದುಗೊಳಿಸಿತು. ಭಾರತದ ಕಾನೂನು ಆಯೋಗವು ತನ್ನ 174 ನೇ ವರದಿಯಲ್ಲಿ – “ಮಹಿಳೆಯರ ಆಸ್ತಿ ಹಕ್ಕುಗಳು: ಹಿಂದೂ ಕಾನೂನಿನ ಅಡಿಯಲ್ಲಿ ಪ್ರಸ್ತಾವಿತ ಸುಧಾರಣೆಗಳು” (2000) ಸಹಸಂಬಂಧದ ನಿರ್ಮೂಲನೆಯ ಪರವಾಗಿ ತೀರ್ಪು ನೀಡಿತು.

21 ನೇ ಕಾನೂನು ಆಯೋಗವು ತನ್ನ 2018 ರ ಶ್ವೇತಪತ್ರದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ಉದ್ಭವಿಸುವ ವಿವಿಧ ಸಮಸ್ಯೆಗಳನ್ನು ಸಹ ಪರಿಗಣಿಸಿತ್ತು.  2005 ರ ತಿದ್ದುಪಡಿಗಳ ಪರಿಣಾಮ ಮೃತರ ವಿಧವೆ ಮತ್ತು ತಾಯಿಯಂತಹ ಇತರ ಮೊದಲನೆ ಸ್ತರದ ಮಹಿಳಾ ಉತ್ತರಾಧಿಕಾರಿಗಳ ಪಾಲನ್ನು ಕಡಿಮೆ ಮಾಡಲಾಗಿದೆ ಏಕೆಂದರೆ ಅವರು ಆನುವಂಶಿಕವಾಗಿ ಪಡೆದ ಮೃತ ಪುರುಷನ ಸಹಭಾಗಿ ಪಾಲು ಕಡಿಮೆಯಾಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಮೇಲಾಗಿ ಮಹಾರಾಷ್ಟ್ರದಂತೆ ಆಸ್ತಿ ವಿಭಜನೆಯಲ್ಲಿ ಹೆಂಡತಿ ಪಾಲನ್ನು ತೆಗೆದುಕೊಳ್ಳುವ ರಾಜ್ಯಗಳಲ್ಲಿ, ವಿಧವೆಯ ಸಂಭಾವ್ಯ ಪಾಲು ಈಗ ಮಗ ಮತ್ತು ಮಗಳ ಪಾಲಿಗೆ ಸಮಾನವಾಗಿದೆ. ಆದರೆ ತಮಿಳುನಾಡು ಅಥವಾ ಆಂಧ್ರಪ್ರದೇಶದಂತೆ ಪತಿಯ ಮರಣದ ನಂತರ ಮಾತ್ರ ಆಸ್ತಿಯ ವಿಭಜನೆಯಲ್ಲಿ ಹೆಂಡತಿಗೆ ಪಾಲು ಸಿಗುವ ರಾಜ್ಯಗಳಲ್ಲಿ  ಆಸ್ತಿಯಲ್ಲಿ ವಿಧವೆ ಮಹಿಳೆ ಪಡೆಯುವ ಸಂಭಾವ್ಯ ಪಾಲು ಹೆಣ್ಣು ಮಕ್ಕಳ ಪಾಲಿಗಿಂತಲೂ ಕಡಿಮೆಯಾಗಿರುತ್ತದೆ. ಈ ಸಮಸ್ಯೆಗಳು ತೆರಿಗೆ, ಆದಾಯ, ಕುಟುಂಬ ರಚನೆ ಮತ್ತು ಆನುವಂಶಿಕತೆಯ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ, ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಿದರೆ ಸರ್ಕಾರವು ಅಗತ್ಯ ಬದಲಾವಣೆಗಳನ್ನು ಹೇಗೆ ತರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *