ಬೆಂಗಳೂರು: ಜನರಿಗೆ ಕಿರುಕುಳ ನೀಡುತ್ತಿರುವ 42 ಲೋನ್ ಆಪ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಈ ಕುರಿತು ಒಕ್ಕೂಟ ಸರ್ಕಾರ ಮತ್ತು ಗೂಗಲ್ನೊಂದಿಗೆ ಚರ್ಚಿಸಲಾಗಿದೆ ಎಂದು ಎಂದು ರಾಜ್ಯ ಸರ್ಕಾರ ಮಂಗಳವಾರ ಹೇಳಿದೆ. ಈಗಾಗಲೇ ಇಂತಹ 42 ಆ್ಯಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಅವರು ಗೃಹ ಸಚಿವ ಜಿ.ಪರಮೇಶ್ವರ ಅವರ ಪರವಾಗಿ ಅವರು ಮಾತನಾಡಿದರು. ಇಂತಹ ಆ್ಯಪ್ಗಳ ವಿರುದ್ಧ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುಂಡುರಾವ್ ಹೇಳಿದ್ದಾರೆ. ಬಿಜೆಪಿ ಎಂಎಲ್ಸಿ ಡಿ.ಎಸ್.ಅರುಣ್ ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿ, ಆನ್ಲೈನ್ ಗೇಮಿಂಗ್, ಆನ್ಲೈನ್ ಸಾಲದ ಅಪ್ಲಿಕೇಶನ್ಗಳು ಜನರನ್ನು ಹಿಂಸಿಸುತ್ತಿವೆ ಎಂದು ಹೇಳಿದರು.
ವಿಶೇಷವಾಗಿ ಗೇಮಿಂಗ್ ಅಪ್ಲಿಕೇಶನ್ಗಳು ಮತ್ತು ಆನ್ಲೈನ್ ಸಾಲದ ಅಪ್ಲಿಕೇಶನ್ಗಳು ಯುವಕರು ಮತ್ತು ವಿದ್ಯಾರ್ಥಿಗಳ ಜೀವನವನ್ನು ನಾಶಪಡಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಸೆಲೆಬ್ರಿಟಿಗಳು ಇಂತಹ ಆ್ಯಪ್ಗಳನ್ನು ಪ್ರಚಾರ ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕ, ಇದು ಯುವಕರನ್ನು ಜೂಜಿನಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಸುಮಾರು 800 ಆಪ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅರುಣ್ ಆರೋಪಿಸಿದ್ದಾರೆ. ಇದೇ ವೇಳೆ ಮಾತನಾಡಿದ ಗುಂಡೂರಾವ್, ಆ್ಯಪ್ ಗಳನ್ನು ನಿಯಂತ್ರಿಸಿ ನಿಗಾ ವಹಿಸುತ್ತಿರುವುದು ಒಕ್ಕೂಟ ಸರ್ಕಾರವಾಗಿರುವುದರಿಂದ ರಾಜ್ಯ ಸರ್ಕಾರ ಮಾತ್ರ ಈ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಒಟಿಟಿ ಆರಂಭಿಸಿದ ಕೇರಳ : ದೇಶದಲ್ಲೆ ಮೊದಲು.