ದಲಿತ ಹಕ್ಕುಗಳ ಸಮಿತಿ (DHS) ಯ ‘ದಲಿತ ಹಕ್ಕೋತ್ತಾಯ ರಾಜ್ಯ ಸಮಾವೇಶ’ದ ಆಕ್ರೋಶ
ಬೆಂಗಳೂರು: ದಲಿತರು ಊರಿಂದ ಆಚೆ ಇರೋದಕ್ಕೆ, ಜಾತಿ ದೌರ್ಜನ್ಯಕ್ಕೆ ಮೂಲ ಕಾರಣ ಮನುವಾದ, ಇದನ್ನು ಸಮರ್ಥಿಸುವ ಬಿಜೆಪಿ ಸೋಲುವುದರ ಮೂಲಕ ರಾಜ್ಯದ ರಾಜಕೀಯ ವ್ಯವಸ್ಥೆ ಬದಲಾಗಿದೆ, ಆದರೆ ಸಾಮಾಜಿಕ ವ್ಯವಸ್ಥೆ ಬದಲಾವಣೆ ಮಾಡಲು ನಾವು ಹೋರಾಟ ಮಾಡಬೇಕಿದೆ ಎಂದು ದಲಿತ ಹಕ್ಕುಗಳ ಸಮಿತಿ (DHS) ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರನಹಳ್ಳಿ ಹೇಳಿದರು. ಅವರು ಸೋಮವಾರದಂದು ನಗರದ ಗಾಂಧಿ ಭವನದಲ್ಲಿ ನಡೆದ ಸಮಿತಿಯ ‘ದಲಿತ ಹಕ್ಕೋತ್ತಾಯ ರಾಜ್ಯ ಸಮಾವೇಶ’ದಲ್ಲಿ ಮಾತನಾಡುತ್ತಿದ್ದರು.
ಜಾತಿ ನಿರ್ಮೂಲನೆಗಾಗಿಯೆ ದಲಿತ ಹಕ್ಕುಗಳ ಸಮಿತಿ (DHS) ಕಟ್ಟಿಕೊಂಡು, ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ ಗೋಪಾಲಕೃಷ್ಣ, “ಹೊಸ ಸರ್ಕಾರ ನೀಡಿದ ಗ್ಯಾರಂಟಿಗಳು ದಲಿತರ ಮೂಲ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಚುನಾವಣೆಯಲ್ಲಿ ಸೋತರೂ ಕೇಂದ್ರದ ಬಿಜೆಪಿ ಸರ್ಕಾರ ಸುಮ್ಮನೆ ಕೂತಿಲ್ಲ. ಅಕ್ಕಿಯ ವಿಚಾರದಲ್ಲೂ ರಾಜಕೀಯ ದ್ವೇಷ ಮಾಡುತ್ತಿದೆ” ಎಂದು ಸಮಾವೇಶದ ಅಧ್ಯಕ್ಷೀಯ ಭಾಷಣದಲ್ಲಿ ಆಕ್ರೊಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ವಾಮೀಜಿಗಳು ವ್ಯಾಪಾರಿಗಳಾಗಿದ್ದು, ಮಠಗಳು ವಾಣಿಜ್ಯ ಕೇಂದ್ರಗಳಾಗಿವೆ: ಖ್ಯಾತ ಸಾಹಿತಿ ಅರವಿಂದ ಮಾಲಗತ್ತಿ
“ದಲಿತರಿಗೆ ನೀಡಲಾಗಿರುವ ಬಗರ್ ಹುಕುಂ ಜಾಮೀನು ಈಗಲೂ ಅವರದ್ದಾಗಿಲ್ಲ. ಈ ಜಮೀನಿಗೆ ಮಂಜೂರಾತಿ ನೀಡಿ ಎಂಬ ಬೇಡಿಕೆಯನ್ನು ಹೊಸ ಸರ್ಕಾರದ ಮುಂದೆ ಇಡುತ್ತಿದ್ದೇವೆ. ಅಲ್ಲದೆ, ಸರ್ಕಾರದ ಯಾವುದೇ ಯೋಜನೆಯಲ್ಲಿ ಭೂಮಿ ಸಿಗುತ್ತಿಲ್ಲ. ಹಾಗಾಗಿ ಭೂಮಿ ಮತ್ತು ಮನೆಯನ್ನು ನೀಡಬೇಕು ಎಂಬ ಬೇಡಿಕೆ ಇಡುತ್ತಿದ್ದೇವೆ. ಕನಿಷ್ಠ ನಾಲ್ಕು ಗುಂಟೆ ಜಮೀನು ದಲಿತರ ಮನೆಗಾಗಿ ಹೊಸ ಯೋಜನೆ ಮಾಡಬೇಕು. ಹಿತ್ತಲು ಸಹಿತ ಮನೆ ದಲಿತರಿಗೆ ನೀಡಬೇಕು” ಎಂದು ಹೇಳಿದರು.
“ಸರ್ಕಾರದ ಸಾವಿರಾರು ಬ್ಯಾಕ್ಲಾಗ್ ಹುದ್ದೆಗಳು ಹಾಗೆ ಉಳಿದಿವೆ. ಸರ್ಕಾರ ಇದರ ನೇಮಕಾತಿಗೆ ಪ್ರಾಧಿಕಾರ ರಚನೆ ಮಾಡಬೇಕು. ಅದಕ್ಕಾಗಿ ಕಾನೂನು ರೂಪಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆಯಲ್ಲಿ ನೌಕರಿ ಮಾಡುತ್ತಿರುವ ದಲಿತರನ್ನು ಖಾಯಂ ಮಾಡಬೇಕು” ಎಂದು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಅರ್ಥಶಾಸ್ತ್ರಜ್ಞ ಡಾ. ಟಿ.ಆರ್. ಚಂದ್ರಶೇಖರ್, “ದಲಿತರ ದುಸ್ಥಿತಿ ಹೇಗಿದೆ ಎಂಬುವುದು ಜಾತಿಗಣತಿಯಲ್ಲಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಈ ಗಣತಿಗೆ ವಿರೋಧ ಮಾಡುತ್ತಿದ್ದಾರೆ. ರಾಜಕೀಯ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಸಾಮಾಜಿಕ ಸ್ವಾತಂತ್ರ್ಯ ಕೂಡಾ ಬರುತ್ತೆ ಅನ್ನುವುದು ಹುಸಿಯಾಗಿದೆ. ಸರ್ಕಾರಗಳು ಮತ್ತು ಇಲಾಖೆಗಳಲ್ಲಿ ದಲಿತರಿಗೆ ಮಾಡುವ ಅಭಿವೃದ್ಧಿ ಕಾರ್ಯಗಳ ಯಾವುದೇ ಮಾಹಿತಿ ಲಭ್ಯವಿಲ್ಲ. ದಲಿತರಿಗೆ ಸಂಬಂಧಪಟ್ಟ ಅಭಿವೃದ್ಧಿ ಸೂಚಿಯನ್ನು ಸರ್ಕಾರ ಪ್ರತ್ಯೇಕವಾಗಿ ಮಾಡಬೇಕಿದೆ” ಎಂದರು.
ಗೋವಿನ ಬಗ್ಗೆ ಮತ್ತು ಮತಾಂತರ ಕಾಯ್ದೆ ಬಗ್ಗೆ ಮಾತಾಡುವ ಸ್ವಾಮೀಜಿಗಳು ಕಳೆದ 75 ವರ್ಷಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತಾಡಿದ್ದು ಇದೆಯೇ ಎಂದು ಅವರು ಪ್ರಶ್ನಿಸಿದ ಟಿ.ಆರ್. ಚಂದ್ರಶೇಖರ್, “21ನೇ ಶತಮಾನದಲ್ಲಿ ದಲಿತ ದೌರ್ಜನ್ಯ ನಡೆಯುವಾಗ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬದಲಾಗಿ ರಾಜಿ ಪಂಚಾಯಿತಿ ಮಾಡಿ ಮುಚ್ಚಿ ಹಾಕಲಾಗುತ್ತದೆ. ಮಂಗಳಾರತಿ ತಟ್ಟೆ ಕೈ ತಗುಳಿದ್ದಕ್ಕೆ ಹಲ್ಲೆ ಮಾಡಿರುವುದು ಸಾಮಾನ್ಯ ಘಟನೆ ಅಲ್ಲ. ಕಾಯ್ದೆ, ಕಾನೂನು ಇದ್ದರೂ ದಲಿತ ದೌರ್ಜನ್ಯ ತಪ್ಪು ಎನ್ನುವುದನ್ನು ಸಮಾಜ ಇನ್ನೂ ಅವುಗಳನ್ನು ಒಪ್ಪಿಕೊಂಡಿಲ್ಲ. ನ್ಯಾಯಮೂರ್ತಿ ಎಚ್. ಎಸ್. ನಾಗಮೋಹನ್ ದಾಸ್ ನಡೆಸುತ್ತಿರುವ ಸಂವಿಧಾನದ ಓದು ಅಭಿಯಾನದ ರೀತಿ ಅಸ್ಪ್ರಶ್ಯತೆ ನಿವಾರಣೆ ಅಭಿಯಾನವನ್ನು ಸರ್ಕಾರ ರಾಜ್ಯದಾದ್ಯಂತ ನಡೆಸಬೇಕಿದೆ” ಎಂದು ಹೇಳಿದರು.
ಇದನ್ನೂ ಓದಿ: ಅಂತರ್ಜಾತಿ ವಿವಾಹಿತ ಯುವಕನಿಗೆ ಸಾಮಾಜಿಕ ಬಹಿಷ್ಕಾರ; ಚಾಮರಾಜನಗರ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ದಲಿತ ಹಕ್ಕುಗಳ ಸಮಿತಿಯ ಕೇಂದ್ರ ಸಮಿತಿ ಸದಸ್ಯೆ ಮಾಳಮ್ಮ ಮಾತನಾಡಿ, “ನ್ಯಾಯಬೆಲೆ ಅಂಗಡಿಗಳಲ್ಲಿ 16 ರೀತಿಯ ವಸ್ತುಗಳನ್ನು ನೀಡಬೇಕಿದೆ. ಪಕ್ಕದ ಕೇರಳದಲ್ಲಿ ಸಾಧ್ಯ ಆಗಿದೆ ಎಂದಾದರೆ ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲವೆ” ಎಂದು ಪ್ರಶ್ನಿಸಿದರು.
“ಉಚಿತ ಪ್ರಯಾಣ ಎಂಬ ಸರ್ಕಾರ ಮಹಿಳೆಗೆ ನೀಡಿರುವ ಸಣ್ಣದೊಂದು ಯೋಜನೆಯನ್ನು ಕೂಡಾ ಸಹಿಸಲು ಪುರುಷರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ದಲಿತರ ಪರ, ದೇವದಾಸಿ ಮಹಿಳೆಯರ ಪರ ಕೆಲಸ ಮಾಡಬೇಕಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತರಿಗೆ ಸರಿಯಾದ ಮನೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಇನ್ನೂ ಇಲ್ಲ. ದಲಿತರಿಗಾಗಿ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿವೆ?” ಎಂದು ಕೇಳಿದರು.
“ದಲಿತರು ಮತ್ತು ಮಹಿಳೆಯರು ಹೇಗೆ ಇದ್ದಾರೋ ಹಾಗೆಯೆ ಇರಬೇಕು ಎಂದು ಸಮಾಜ ಬಯಸುತ್ತಿದೆ. ದೇವದಾಸಿ ಮತ್ತು ದಲಿತರಿಗೆ ಭೂಮಿ ಕೊಡಲು ಸರ್ಕಾರಕ್ಕೆ ಮನಸ್ಸಿಲ್ಲ. ಅಂಬಾನಿ – ಅದಾನಿಗೆ ಬೇಕಾದರೆ ಸುಮ್ಮನೆ ಭೂಮಿ ಕೊಡುತ್ತವೆ. ಆದರೆ ದೇವದಾಸಿ ಮತ್ತು ದಲಿತರಿಗೆ ಸರ್ಕಾರ ಕೊಡುತ್ತಿಲ್ಲ. ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದೆ, ದಲಿತರು ಹೀಗೆಯೇ ಇರಬೇಕು ಎಂದು ಅದು ಬಯಸುತ್ತಿದೆ. ಮಠಗಳ ಮೂಲಕ ಸರ್ಕಾರಕ್ಕೆ ಅವರು ಒತ್ತಡ ಹೇರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋತ ಕೂಡಲೇ ಎಲ್ಲವೂ ಸರಿಯಾಗುತ್ತದೆ ಎಂಬುವುದು ಸರಿಯಲ್ಲ” ಎಂದರು.
ದಲಿತ ಹಕ್ಕುಗಳ ಸಮಿತಿಯ ನಾಯಕ ರಾಜಣ್ಣ ಹಕ್ಕೊತ್ತಾಯ ಮಂಡನೆ ಮಾಡಿದರು. ಕೇಂದ್ರ ಸಮಿತಿ ಸದಸ್ಯರಾ ನಾಗರಾಜ್ ಎನ್., ಜಂಬಯ್ಯ ನಾಯಕ್ ಮಾತನಾಡಿದರು. ಪ್ರಾಸ್ತಾವಿಕವಾಗಿ ಬಿ. ರಾಜಶೇಖರಮೂರ್ತಿ ಮಾತನಾಡಿದರು. ಎನ್ ರಾಜಣ್ಣ ಸ್ವಾಗತಿಸಿ, ನಾಗಣ್ಣ ಅವರು ವಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಡ್ಯ ಕೃಷ್ಣ ಅವರು ನಿರೂಪಿಸಿದರು.