ಪತಿ ಗಳಿಸಿದ ಆಸ್ತಿಯಲ್ಲಿ ಪತ್ನಿಗೆ ಸಮಾನ ಹಕ್ಕಿದೆ – ಮದ್ರಾಸ್ ಹೈಕೋರ್ಟಿನ ತೀರ್ಪು: ಎಐಡಿಡಬ್ಲ್ಯುಎ ಸ್ವಾಗತ

ಮದ್ರಾಸ್‌: ಪತಿ ಹೊರಗೆ ಗಳಿಸುವ ಸಮಯದಲ್ಲಿ, ಮನೆಯಲ್ಲೇ ಉಳಿದು ಕುಟುಂಬಕ್ಕಾಗಿ ದುಡಿಯುವ , ಅದಕ್ಕಾಗಿ ತನ್ನ ಉದ್ಯೋಗಾವಕಾಶಗಳನ್ನು ತ್ಯಾಗ ಮಾಡುವ ಗೃಹಿಣಿಯೊಬ್ಬಳುಅವರು ಗಳಿಸಿರುವ  ಎಲ್ಲಾ ಆಸ್ತಿಗಳ 50% ಕ್ಕೆ  ಅರ್ಹರಾಗಿರುತ್ತಾಳೆ ಎಂದು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣನ್ ರಾಮಸಾಮಿ  ನೀಡಿರುವ ತೀರ್ಪು ಒಂದು ಹೊಸ ಹಾದಿ ತುಳಿದಿದೆ ಎಂದು ಆ ತೀರ್ಪನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ( ಹೈಕೋರ್ಟ್‌ನ ನ್ಯಾಯಮೂರ್ತಿ) ಸ್ವಾಗತಿಸಿದೆ. ಗೃಹಿಣಿಯಾಗಿ ಹೆಂಡತಿಯ ಕೊಡುಗೆಯು ಕೆಲಸಕ್ಕೆ ಹೋಗುವ ಗಂಡನ ಕೊಡುಗೆಯಷ್ಟೇ  ಮೌಲ್ಯಯುತವಾಗಿದೆ ಎಂಬುದನ್ನು ಈ  ತೀರ್ಪು ಗುರುತಿಸುತ್ತದೆ ಎಂದು ಎಐಡಿಡಬ್ಲ್ಯುಎ ಹೇಳಿದೆ.

 

 

ಈ ನಿರ್ದಿಷ್ಟ ಪ್ರಕರಣದಲ್ಲಿ, ಪತಿ 1983 ರಿಂದ 1994 ರವರೆಗೆ ಅಬುಧಾಬಿಯಲ್ಲಿ ಕೆಲಸ ಮಾಡಲು ಭಾರತವನ್ನು ತೊರೆದಾಗ ಹೆಂಡತಿ ಕುಟುಂಬ ಮತ್ತು ಮೂವರು ಚಿಕ್ಕ ಮಕ್ಕಳನ್ನು ನೋಡಿಕೊಂಡಳು. ಈ ಅವಧಿಯಲ್ಲಿ, ಆಕೆ ಟ್ಯೂಟರ್ ಮತ್ತು ಟೈಲರ್ ಆಗಿ ಕೆಲಸ ಮಾಡುವುದನ್ನು ನಿಲ್ಲಿಸಿದಳು, ಮಾತ್ರವಲ್ಲ, ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳಲು ಮತ್ತು ನಿರ್ವಹಿಸಲು ಮತ್ತು ಮಕ್ಕಳ ಪಾಲನೆಗೆ ಮನೆಯಲ್ಲಿಯೇ ಉಳಿದಳು.  ಖಾತೆಗಳನ್ನು ಮತ್ತು ಉಳಿತಾಯವನ್ನು ಕೌಶಲ್ಯದಿಂದ ನಿರ್ವಹಿಸುವ ಮೂಲಕ ಆಕೆ ತನ್ನ ಹೆಸರಿನಲ್ಲಿ ಮೂರು ಆಸ್ತಿಗಳನ್ನು ಮತ್ತು ತನ್ನ ಆಭರಣಗಳನ್ನು ಗಿರವಿ ಇಟ್ಟು ಮತ್ತೊಂದು ಆಸ್ತಿಯನ್ನು ಖರೀದಿಸಿದಳು. ಪತಿ ಆಕೆಗೆ ಉಡುಗೊರೆಯಾಗಿ ನೀಡುತ್ತಿದ್ದ ಆಭರಣಗಳು ಮತ್ತು ಸೀರೆಗಳು ಮತ್ತು ಇತರ ಚರ ಆಸ್ತಿಗಳನ್ನು  ಅವಳು ತನ್ನ ಲಾಕರ್‌ನಲ್ಲಿ ಇರಿಸಿದ್ದಳು. ಪತಿಹಿಂತಿರುಗಿದಾಗ, ಈ ಆಸ್ತಿಗಳನ್ನೆಲ್ಲ ವಹಿಸಿಕೊಂಡು, ಅವು ವಾಸ್ತವವಾಗಿ ತನಗೆ ಸೇರಿದ್ದು, ಏಕೆಂದರೆ, ಆಕೆಗೆ ಸ್ವಂತ ಗಳಿಕೆಯಿಲ್ಲ, ತನ್ನ ಏಜೆಂಟಳಾಗಿ ಆಕೆ ಅವನ್ನು ಖರೀದಿಸಿದ್ದಾಳೆ ಎಂದು ದಾವೆ ಹೂಡಿದನು. ವ್ಯಾಜ್ಯದ ಸಮಯದಲ್ಲಿ ಪತಿ ನಿಧನಗೊಂಡಾಗ, ಆಕೆಯ ಇಬ್ಬರು ಪುತ್ರರು ಆಕೆಯ ವಿರುದ್ಧದ ಈ ಮೊಕದ್ದಮೆಯಲ್ಲಿ ಫಿರ್ಯಾದಿಗಳಾದರು.

ಇದನ್ನೂ ಓದಿ:ಶಾಲು ಹಾಕಿ ದಳ – ಸೇನೆ ಎಂದು ಕಾನೂನು ಕೈಗಿತ್ತಿಕೊಂಡರೆ ಒದ್ದು ಒಳಗಾಕಿ: ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ

ಈ ಆಸ್ತಿಗಳ ಖರೀದಿಗೆ ಯಾರ ಹಣ ನೀಡಲಾಗಿದೆ ಎಂಬುದು ಮುಖ್ಯವಲ್ಲ ಮತ್ತು ಪತಿಗೆ ಸಮಾನವಾಗಿ ಆಸ್ತಿಗೆ ಪತ್ನಿಯೂ ಅರ್ಹಳು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹೆಂಡತಿ ಗೃಹಿಣಿಯಾಗಿ ಯಾವುದೇ ನೇರ ಆರ್ಥಿಕ ಕೊಡುಗೆ ನೀಡದಿದ್ದರೂ, ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ ಮಾಡುವುದು, ಶುಚಿಗೊಳಿಸುವುದು ಮತ್ತು ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ಮೂಲಕ ಮನೆಕೆಲಸಗಳನ್ನು ನಿರ್ವಹಿಸುವಲ್ಲಿ ಆಕೆ ಪ್ರಮುಖ ಪಾತ್ರ ವಹಿಸಿದ್ದಾಳೆ. ವಿದೇಶದಲ್ಲಿದ್ದ ಫಿರ್ಯಾದಿಗೆ ಯಾವುದೇ ಅನಾನುಕೂಲತೆಯನ್ನುಂಟು ಮಾಡದೆ, ಕುಟುಂಬವನ್ನು ನೋಡಿಕೊಂಡಿದ್ದಾಳೆ ಮತ್ತು ಮೇಲಾಗಿ, ಅವಳು ತನ್ನ ಕನಸುಗಳನ್ನು ತ್ಯಾಗ ಮಾಡಿದ್ದಾಳೆ. ಮತ್ತು ತನ್ನ ಇಡೀ ಜೀವನವನ್ನು ಕುಟುಂಬ ಮತ್ತು ಮಕ್ಕಳಿಗಾಗಿ ಕಳೆದಿದ್ದಾಳೆ ಎಂದ  ನ್ಯಾಯಾಲಯ, “ಗಂಡ ಮತ್ತು ಹೆಂಡತಿಯನ್ನು ಕುಟುಂಬದ ಬಂಡಿಯ ಎರಡು ಚಕ್ರಗಳಂತೆ ಪರಿಗಣಿಸಿದಾಗ, ಪತಿ ಸಂಪಾದಿಸುವ ಮೂಲಕ ಅಥವಾ ಹೆಂಡತಿ ಕುಟುಂಬ ಮತ್ತು ಮಕ್ಕಳ ಸೇವೆ ಮಾಡುವ ಮೂಲಕ ಮತ್ತು ನೋಡಿಕೊಳ್ಳುವ ಮೂಲಕ ನೀಡಿದ ಕೊಡುಗೆ ಎರಡೂ ಕುಟುಂಬದ ಕಲ್ಯಾಣಕ್ಕಾಗಿ,  ಇಬ್ಬರೂ ತಮ್ಮ ಜಂಟಿ ಪ್ರಯತ್ನದಿಂದ ಗಳಿಸಿದ್ದಕ್ಕೆ ಸಮಾನವಾಗಿ ಅರ್ಹರಾಗಿರುತ್ತಾರೆ. ಅದರ ಫಲಗಳು ಜಂಟಿಯಾಗಿ ಅವರಿಬ್ಬರಿಗೂ ಸೇರಿದ್ದು, ಆಸ್ತಿಯನ್ನು ಗಂಡ ಅಥವಾ ಹೆಂಡತಿಯ ಹೆಸರಿನಲ್ಲಿ ಮಾತ್ರ ಖರೀದಿಸಬಹುದು, ಅದೇನೇ ಇದ್ದರೂ ಅದನ್ನು ಅವರ ಜಂಟಿ ಪ್ರಯತ್ನಗಳಿಂದ ಉಳಿಸಿದ ಹಣದಿಂದ ಖರೀದಿಸಲಾಗಿದೆ ಎಂದು ತೀರ್ಪಿನಲ್ಲಿ ಹೇಳಿದೆ.

“ಮಕ್ಕಳನ್ನು ಪೋಷಿಸುವುದು, ಆಹಾರವನ್ನು ತಯಾರಿಸುವುದು, ಶಾಲೆಗೆ ಕರೆದೊಯ್ಯುವುದು, ಅವರ ಅಗತ್ಯಗಳನ್ನು ನೋಡುವುದು ಮತ್ತು ಅವರ ಆರೋಗ್ಯ, ಮನೆಕೆಲಸ ಇತ್ಯಾದಿಗಳನ್ನು ನೋಡಿಕೊಳ್ಳುವ ಮೂಲಕ ಹೆಂಡತಿಯು ಕುಟುಂಬಕ್ಕೆ 24 ಗಂಟೆಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದಾಳೆ. ಇದರ ತೂಕ ವಿದೇಶದಲ್ಲಿ ಫಿರ್ಯಾದಿ/ಪತಿಯ ಹಣ ಗಳಿಕೆಗಿಂತ ಕಡಿಮೆಯದ್ದೇನಲ್ಲ” ಎಂದಿರುವ ತೀರ್ಪು  ಪತ್ನಿ ತನ್ನ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಖರೀದಿಸಿದ ಆಸ್ತಿಯು, ಆಕೆಗೆ ಉಡುಗೊರೆಯಾಗಿ ನೀಡಿದ ಆಭರಣಗಳು ಮತ್ತು ಚರ ವಸ್ತುಗಳಂತೆ  ಆಕೆಗೆ ಮಾತ್ರ ಸೇರಿದ್ದು ಎಂದೂ  ಹೇಳಿದೆ.

ಕುಟುಂಬಕ್ಕೆ ಹೆಂಡತಿ/ಜತೆಗಾರ್ತಿಯ  ಸಮಾನ ಕೊಡುಗೆಯನ್ನು ಗುರುತಿಸುವ ಮತ್ತು ಮದುವೆ ಊರ್ಜಿತದಲ್ಲಿರುವಾಗ ಗಳಿಸಿದ ಎಲ್ಲ ಸೊತ್ತುಗಳಲ್ಲಿ ಆಕೆಗೆ ಸಮಾನ ಹಕ್ಕನ್ನು ಕೊಡುವ ಒಂದು ಕಾನೂನನ್ನು ತರಬೇಕು ಎಂದು ಎಐಡಿಡಬ್ಲ್ಯುಎ ಕಳೆದ 15 ವರ್ಷಗಳಿಂದ ಸತತವಾಗಿ  ಸರ್ಕಾರಗಳಿಗೆ ಅರ್ಜಿ ಮನವಿ ಸಲ್ಲಿಸುತ್ತ ಬಂದಿದೆ. ಮಹಿಳೆಯರಿಗೆ ಮನೆಯಲ್ಲಿ ನ್ಯಾಯ ಸಿಗುವಂತೆ ಮಾಡಲು ಇಂತಹ ಕಾನೂನು ಜಾರಿಗೆ ತರಬೇಕೆಂದು ಈಗ ಮತ್ತೊಮ್ಮೆ ಆಗ್ರಹಿಸುವುದಾಗಿ ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *