ಇರ್ಷಾದ್ ಹನೀಫ್
ತೀನ್‌ಮೂರ್ತಿ ಭವನ ಅಥವಾ ಫ್ಲಾಗ್ ಸ್ಟಾಫ್ ಹೌಸ್ 1930 ರಲ್ಲಿ ನಿರ್ಮಿಸಿದ ದೆಹಲಿಯ ಹಳೆಯ ಕಟ್ಟಡ. ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ನೆಹರೂ ಅವರು ಈ ಕಟ್ಟಡದಲ್ಲಿ ಸುಮಾರು 16 ವರ್ಷಗಳ ಕಾಲ ವಾಸ ಮಾಡಿದ್ದರು. 1964ರಲ್ಲಿ ಅವರ ವಿಯೋಗದ ನಂತರ ಅದನ್ನು ನೆಹರೂ ವಸ್ತು ಸಂಗ್ರಹಾಲಯವಾಗಿ ಇಂದಿರಾ ಗಾಂಧಿ ಸರ್ಕಾರ ನಾಮಕರಣ ಮಾಡಿತ್ತು.
30 ಎಕರೆ ವಿಶಾಲವಾದ ಸ್ಥಳದಲ್ಲಿ ನಿಂತಿರುವ ಈ ಭವನವು ನೆಹರೂ ತಾರಾಲಯ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಗ್ರಂಥಾಲಯಗಳನ್ನು ಒಳಗೊಂಡಿದೆ. ಇದೀಗ ಬಿಜೆಪಿಯ ಪ್ರಧಾನಿ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ನೆಹರೂ ಮೆಮೋರಿಯಲ್ ಮತ್ತು ಗ್ರಂಥಾಲಯದ ಹೆಸರನ್ನು ‘ಪ್ರಧಾನಮಂತ್ರಿ ಸಂಗ್ರಹಾಲಯ’ ಎಂದು ಮರು ನಾಮಕರಣ ಮಾಡಿದೆ.
ತೀನ್ ಮೂರ್ತಿ ಭವನದ ಇತಿಹಾಸವನ್ನು ಗಮನಿಸಿದಾಗ 1911 ರಲ್ಲಿ ಬ್ರಿಟಿಷ್ ಸರ್ಕಾರ ಚಳಿಗಾಲದ ರಾಜಧಾನಿಯಾಗಿ ನವದೆಹಲಿಯನ್ನು ಆಯ್ಕೆ ಮಾಡಿದರು. ಹೀಗಾಗಿ ಬ್ರಿಟಿಷ್ ಸರ್ಕಾರದ ಚೀಫ್ ಕಮಾಂಡೋ ವಾಸ ಸ್ಥಳವಾಗಿ 1930ರಲ್ಲಿ ಈ ಭವನವನ್ನು ನಿರ್ಮಿಸಲಾಯಿತು. ದೇಶವೂ ಸ್ವಾತಂತ್ರಗೊಂಡ ನಂತರ ನೆಹರೂ ಅವರು ಇಲ್ಲಿ ವಾಸ ಮಾಡುತ್ತಿದ್ದರು.
ಇದನ್ನೂ ಓದಿ: ಭವಿಷ್ಯದೊಂದಿಗೆ ಮುಖಾಮುಖಿ (Tryst with Destiny) – ನೆಹರೂ ಅವರ ಅಗಸ್ಟ್ 14, 1947ರ ಮಧ್ಯರಾತ್ರಿಯ ಪ್ರಸಿದ್ಧ ಭಾಷಣ
ಆದರೆ ನೆಹರೂ ಸಂಗ್ರಹಲಾಯದ ಹೆಸರನ್ನು ಎಂದು ಮೋದಿ ಸರ್ಕಾರ ಯಾಕೆ ಮರುನಾಮಕರಣ ಮಾಡಿದೆ? ಅದಕ್ಕೆ ಕಾರಣವೇನು? ಯಾಕಾಗಿ ನೆಹರೂ ಎಂದರೆ ಬಲಪಂಥೀಯ ಸರ್ಕಾಕ್ಕೆ ಇಷ್ಟೊಂದು ಭಯ. ಅದಕ್ಕೆಹಲವಾರು ಕಾರಣಗಳಿವೆ.
ನೆಹರೂ Discovery of India ಮತ್ತು Glimpses of World History ಬರೆಯುವ 15 ವರ್ಷಗಳ ಮುಂಚೆಯೇ ಪ್ರಾಚೀನತೆಯಿಂದ ಕೂಡಿದ ಭಾರತವನ್ನು ಆಧುನೀಕರಣಗೊಳಿಸಲು ಸರಣಿ ಬರಹಗಳನ್ನು ಬರೆಯುತ್ತಾ ಇದ್ದರು. ವಿಭಜನೆಯ ನಂತರ ಪ್ರಧಾನಿಯಾದ ನೆಹರೂ ಭಾರತವನ್ನು ಧಾರ್ಮಿಕ ರಾಜ್ಯವಾಗಿಸದೆ ಆಧುನಿಕತೆಯನ್ನು ಅನುಸರಿಸುವ ಪ್ರಬಲವಾದ ಒಂದು ದೇಶವನ್ನಾಗಿ ಕಟ್ಟಿದರು.
ಅದಕ್ಕಾಗಿ ನೆಹರೂ ಅವರು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿ. (1954), ಬಾಬಾ ಪರಮಾಣು ಸಂಶೋಧನಾ ಕೇಂದ್ರ (1954), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (1951), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (1961), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (1961), ಸಾಹಿತ್ಯ ಅಕಾಡೆಮಿ (1954)ಯನ್ನು ಸ್ಥಾಪಿಸಿದರು. ಈ ಪಟ್ಟಿ ಇನ್ನೂ ಮುಂದುವರೆಯುತ್ತದೆ. ಯಾವುದೇ ಸನಾತನವಾದವನ್ನು ಒಪ್ಪದೆ ಆಧುನಿಕತೆಯ ಅಡಿಯಲ್ಲಿ ಭಾರತವನ್ನು ಮುನ್ನಡೆಸಿದ ನೆಹರೂ ಅವರನ್ನು ಬಲಪಂಥೀಯರು ದ್ವೇಷಿಸದೆ ಇರುತ್ತಾರೆಯೇ.
ಸ್ವಾತಂತ್ಯ್ರ ಕಾಲದಿಂದಲೂ ಹೋರಾಟವನ್ನೆ ಮಾಡುತ್ತಾ ಬಂದಿದ್ದ ನೆಹರೂ, ಈಗಿನ ಪ್ರಧಾನಿಯಂತೆ ತನ್ನದು 54 ಇಂಚಿನ ಎದೆ ಎಂದು ಹೇಳಿಕೊಂಡು ತಿರುಗಲಿಲ್ಲ. ಚೀನಾ ವಿರುದ್ಧ ಯುದ್ಧ ಮಾಡಿದ ನೆಹರೂ ಅವರು ನಮ್ಮ ದೇಶದ ಒಂದಿಂಚು ಕೂಡ ಆಯಾಸವಾಗಿ ಬಿಟ್ಟುಕೊಡಲು ತಾನು ತಯಾರಿಲ್ಲ ಎಂದು ವಿಶ್ವಕ್ಕೆ ತೋರಿಸಿದರು.
ಇದನ್ನೂ ಓದಿ: ಬಿಜೆಪಿಗೆ ನೆಹರೂ ಶಾಪವಾಗಿ ಕಾಡಲಿದ್ದಾರೆ: ನೆನಪಿಟ್ಟುಕೊಳ್ಳಿ
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 14 ನವೆಂಬರ್ 2019 ರಂದು ರಾಮನಾಥ್ ಗೋಯೆಂಕಾ ಉಪನ್ಯಾಸದಲ್ಲಿ, 1960 ರಲ್ಲಿ ಗಡಿ ವಿವಾದದ ಕುರಿತು ಝೌ ಎನ್ಲೈ ಅವರ ಪ್ರಸ್ತಾಪವನ್ನು ನೆಹರೂ ಸ್ವೀಕರಿಸಬೇಕಿತ್ತು ಎಂದು ಹೇಳಿದ್ದರು. ಆದರೆ ಅವರ ಝೌ ಅವರ ಆಫರ್ ಏನಿತ್ತು? ಭಾರತವು ಕಾರಕೋರಂ ಶ್ರೇಣಿಯನ್ನು ಗಡಿಯಾಗಿ ಸ್ವೀಕರಿಸಬೇಕೆಂದಾಗಿತ್ತು. ಆದರೆ ಇದನ್ನು ನೆಹರೂ ಒಪ್ಪಿರಲಿಲ್ಲ. ಅವರು ಟಿಬೆಟ್ ನಮ್ಮ ದೇಶದ ಗಡಿ ಎಂದು ಪ್ರತಿಪಾದಿಸಿದರು ಮತ್ತು ಅದಕ್ಕಾಗಿ ಹೋರಾಡಲು ಸಿದ್ಧರಾಗಿದ್ದರು. ಅವರು ಸೋತಿರಬಹುದು ಆದರೆ ಅವರು ಭಾರತದ ಹಕ್ಕು ಬಿಟ್ಟುಕೊಡಲಿಲ್ಲ.
ಈ ಎಲ್ಲಾ ಕಾರಣದಿಂದಲೇ ನೆಹರೂ ಎಂಬ ಹೆಸರು ತಕ್ಷಣ ಬಲಪಂಥೀಯರಿಗೆ ಭಯ.
ಕೊನೆಯದಾಗಿ. ನೆಹರೂ ಅವರು 1947 ಆಗಸ್ಟ್ 14 ಮಧ್ಯರಾತ್ರಿ ಮಾಡಿದ Tryst with Destiny ಭಾಷಣದ ಒಂದೊಂದೇ ಸಾಲುಗಳು ಭಾರತದ ಮೂಲೆ ಮೂಲೆಯಲ್ಲಿ ಸಮುದ್ರ ಅಳೆಯ ತರ ತೇಲಾಡುತ್ತಾ ಇದೆ. ನೆಹರೂ ದೇಶಕ್ಕೆ ಹಾಕಿದ ಬುನಾದಿಯನ್ನು ಕೇವಲ ಅವರ ಸ್ಮರಣಾರ್ಥಕವಾಗಿ ಇಟ್ಟ ಹೆಸರನ್ನು ಮರುನಾಮಕರಣ ಮಾಡುವ ಮೂಲಕ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ.
(ಲೇಖಕರು ಕೇರಳದ ತಾಮರಸ್ಸೆರಿಯಲ್ಲಿರುವ ಮರ್ಕಝ್ ಕಾನೂನು ಕಾಲೇಜು ವಿದ್ಯಾರ್ಥಿ)