ʼಶೌಚಾಲಯ ಸುರಕ್ಷಿತವಾಗಿರಲಿ, ಉಚಿತವಾಗಿಯೂ ದೊರೆಯುವಂತಾಗಲಿʼ – ಮುಖ್ಯಮಂತ್ರಿಗೆ ಪತ್ರ

‘ಘನತೆ’ಯನ್ನು ಪೋಷಿಸುವಂತ, ನೈರ್ಮಲ್ಯ, ಆರೋಗ್ಯ ಕಾಪಾಡುವಂತ, ಸಾಮಾಜಿಕ ಅವಮಾನಗಳಿಂದ ಪಾರಾಗುವಂತ, ಕಾಮುಕರ ಕೀಟಲೆಗಳಿಂದ ಮುಕ್ತರಾಗುವಂತ “ಸುರಕ್ಷತೆಯ ಶೌಚಾಲಯಗಳನ್ನು”  ಪ್ರತೀ ಬಸ್ ನಿಲ್ದಾಣದಲ್ಲೂ, ಶಾಲೆಗಳಲ್ಲೂ, ದೇವಸ್ಥಾನಗಳಲ್ಲೂ ನಿರ್ಮಿಸಿ ಎಂದು ಯುವ ಚಿಂತಕಿ ದೀಪದ ಮಲ್ಲಿ,  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಆ ಪತ್ರ ಸಾಮಾಜಿಕ  ಜಾಲತಾಣದಲ್ಲಿ ವೈರಲ್‌ ಆಗಿದೆ.

ದೀಪದ ಮಲ್ಲಿ ತಮ್ಮ ಫಸ್ಬುಕ್‌ ಖಾತೆಯಲ್ಲಿ ಮನವಿ ಮಾಡಿದ್ದು, ಮನವಿಯ ಸಾರಾಂಶ ಹೀಗಿದೆ….

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಅತಿ ಶೀಘ್ರದಲ್ಲೇ ‘ಶಕ್ತಿಯೋಜನೆ’ಯನ್ನು ಜಾರಿಮಾಡಿ ಈ ನೆಲದ ಹೆಣ್ಣುಮಕ್ಕಳಿಗೆ ಬಲ ತಂದಿದ್ದೀರಿ. ಅದಕ್ಕಾಗಿ ಸಮಸ್ತ ಹೆಣ್ಣುಮಕ್ಕಳ ಪರವಾಗಿ ಹೃದಯತುಂಬಿ ಧನ್ಯವಾದಗಳು. ಇಷ್ಟೇ ತ್ವರಿತವಾಗಿ ‘ಗೃಹಲಕ್ಷ್ಮೀ’ ಸೇರಿದಂತೆ ಉಳಿದ ಆಶ್ವಾಸನೆಗಳನ್ನು ಜಾರಿಗೆ ತರುವಿರೆಂದೂ ನಂಬುತ್ತೇನೆ. ಇವುಗಳ ಜೊತೆಗೆ ಹೆಣ್ಣುಮಕ್ಕಳ ಬದುಕಿನ ‘ಘನತೆ’ಯನ್ನು ಪೋಷಿಸುವಂತ, ನೈರ್ಮಲ್ಯ, ಆರೋಗ್ಯ ಕಾಪಾಡುವಂತ, ಸಾಮಾಜಿಕ ಅವಮಾನಗಳಿಂದ ಪಾರಾಗುವಂತ, ಕಾಮುಕರ ಕೀಟಲೆಗಳಿಂದ ಮುಕ್ತರಾಗುವಂತ “Well Maintained Toilets” ಗಳನ್ನೂ ಪ್ರತೀ ಬಸ್ ನಿಲ್ದಾಣದಲ್ಲೂ, ಶಾಲೆಗಳಲ್ಲೂ, ದೇವಸ್ಥಾನಗಳಲ್ಲೂ ನಿರ್ಮಿಸಿ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಹೆಣ್ಣುಮಕ್ಕಳ ಹಲವು ತರದ ಸೋಂಕುಗಳಿಗೆ ನೈರ್ಮಲ್ಯವಿಲ್ಲದ ಶೌಚಾಲಯದ ಕೊಡುಗೆ ಅಪಾರ. ಸರ್ಕಾರೀ ಶಾಲೆಗಳ ಶೌಚಾಲಯದ ಪರಿಸ್ಥಿತಿ ತೀರಾ ಶೋಚನೀಯವಿರುವುದನ್ನಂತೂ ಅಲ್ಲಗಳೆಯುವಂತಿಲ್ಲ. ಹಲವು ಹೈಟೆಕ್ ಬಸ್ ನಿಲ್ದಾಣಗಳಲ್ಲಿ ಗುಣಮಟ್ಟದ ಶೌಚಾಲಯಗಳಿದ್ದರೂ ಅವುಗಳ ಬಳಕೆಗೆ ಹಣವೇ ಅಡ್ಡಗಾಲು. ಬ್ಲಾಡರ್ ತುಂಬಿಕೊಂಡ ಹೆಂಗಸರು ತಮ್ಮಲ್ಲಿ ಹಣವಿಲ್ಲದೆ ಇದ್ದರೆ ಅಲ್ಲಿ ಕುಳಿತ ಹಣ ಸ್ವೀಕರಿಸುವ ಖಾಸಗೀನಿರ್ವಹಣಾ ಏಜೆಂಟರನೊಟ್ಟಿಗೆ ಚೌಕಾಸೀ ಮಾಡುತ್ತಾ ನಿಲ್ಲಬೇಕು. Disgusting ವಿಷಯವೆಂದರೆ, ಮೂತ್ರವಿಸರ್ಜನೆ ಉಚಿತ, ಮಲವಿಸರ್ಜನೆಗೆ 5 ರೂಪಾಯಿಯಂತೆ! ನಾವು ಒಳಗೆ ಏನು ಮಾಡಿದೆವೆಂದು ಅವನೊಟ್ಟಿಗೆ ಜೋರುದನಿಯಲ್ಲಿ ಚರ್ಚಿಸಿ ನಮ್ಮ ಪಾಯಿಂಟ್ ನಿರೂಪಿಸಬೇಕು. ಹಲವರು ಈ ರಗಳೆ ಬೇಡವೆಂದವರು ಬಾಯಿಮುಚ್ಚಿಕೊಂಡು ಹಣ ಕೊಟ್ಟು ಹೋಗುತ್ತಾರೆ. ಹಾಗಾದರೆ ಹಣವಿಲ್ಲದೆ ಹೋದವರಿಗೆ ಘನತೆ ಇಲ್ಲವೇ? ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ ಗ್ರಾಮಗಳಲ್ಲಿ ಬಯಲು ಮುಕ್ತ ಶೌಚಾಲಯದ ಬಗ್ಗೆ ವಹಿಸಬೇಕಿರುವ ಕಾಳಜಿಯಂತೇ ನಗರಗಳಲ್ಲೂ ಶೌಚಾಲಯದ ಕೊರತೆ ಇದೆ, ಜಾಗೃತಿಯ ಕೊರತೆಯೂ ಇದೆ. ಬೀದಿ ಬದಿಯ ಗೋಡೆಗಳೇ ಇದನ್ನು ಸಾರುತ್ತವೆ. ಹೆಣ್ಣು ಮಕ್ಕಳಿಗಿಲ್ಲಿ ಬಯಲೂ ಇಲ್ಲ, ಬಾಗಿಲೂ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಸಾರ್ವಜನಿಕ ಬಳಕೆಗೆ ಇರುವ ಕೆಲವು ‘ನಿರ್ಮಲ’ ಶೌಚಾಲಯಗಳು ಮಲವನ್ನೇ ಕಾಣಿಸುತ್ತವೆ. ‘ಸುಲಭ್’ ಬಳಕೆ ಸುಲಭವೇನಿಲ್ಲ. ಪಾನ್/ಗುಟ್ಕಾ ಉಗಿದ, ಡೈಪರ್ ಎಸೆದ, ಶೌಚಸಾಹಿತ್ಯ ಬರೆದ, ನೀರಿಲ್ಲದ, ಬಕೆಟ್ಟಿಲ್ಲದ, ‘ಮಹಿಳೆಯರಿಗೆ 5ರೂ. ಮಾತ್ರ’ ‘ಪುರುಷರಿಗೆ 2ರೂ. ಮಾತ್ರ’ ಬೋರ್ಡುಗಳನ್ನು ಹೊತ್ತ ‘ಸೋ ಕಾಲ್ಡ್ ಶೌಚಾಲಯಗಳು’ ಬಳಕೆಗೆ ಯೋಗ್ಯವಿಲ್ಲವೆಂದು ಯಾರಿಗೆ ದೂರು ಕೊಡಬೇಕು? ಸಾರಿಗೆ ಇಲಾಖೆಗೋ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೋ ಅಥವಾ ಆರೋಗ್ಯ ಇಲಾಖೆಗೋ?  ಎಂದು  ಪ್ರಶ್ನೆ ಮಾಡಿದ್ದಾರೆ.

ಮುಖ್ಯಮಂತ್ರಿಗೆ ಪತ್ರ ಬರೆದ ದೀಪದ ಮಲ್ಲಿ

ಸ್ವತಃ ನಾನು ಕಂಡಂತೆ, ಅನುಭವಿಸಿದಂತೆ ಮೂತ್ರವಿಸರ್ಜನೆಯನ್ನು ತಡೆಯಲಾರದ ಹೆಣ್ಣುಮಕ್ಕಳ ಸಂಕಟ ಕೇಳುವವರು ಯಾರು? ಮದುಮೇಹ, ರಕ್ತದೊತ್ತಡವಿರುವ ಮಹಿಳೆಯರ ಪಾಡೇನು? ಗರ್ಭಿಣಿಯರ ಪಾಡೇನು? ಮುಟ್ಟಾದವರ ಪಾಡೇನು? ಪ್ರತೀಬಾರಿ ಪೆಟ್ರೋಲು ಪಂಪುಗಳಿಗೆ ಹೋಗಿ ಶೌಚಾಲಯ ಉಪಯೋಗಿಸಲು ಸಾಧ್ಯವೇ? ಒಬ್ಬರೇ ಇದ್ದಾಗ ದರ್ಶಿನಿಯಲ್ಲಿ ನಿಂತು ಊಟ ಮಾಡಲು, ಕಾಫಿ ಕುಡಿಯಲಾದರೂ ಹಿತಕರ ವಾತಾವರಣವಿದೆಯೇ? ಮೂತ್ರ ಮಾಡಲು ಮಾಲುಗಳಿಗೆ ಹುಡುಕಿ ಹೋಗಲಾದೀತೇ? ಮೂತ್ರಕ್ಕೆಂದೇ ಆಸ್ಪತ್ರೆಗಳಿಗೆ ಹೋಗಲಾದೀತೇ? ಸಧ್ಯಕ್ಕೆ ಹೆಣ್ಣುಮಕ್ಕಳು ಆಶ್ರಯಿಸಿರುವುದು ಇವನ್ನೇ. ಆದರೆ ಇದೂ ಕೂಡಾ ಹಣವಿಲ್ಲದವರ ಆಯ್ಕೆಯಲ್ಲ. ನಾವು ಟಿಶ್ಯೂ ಕೇಳುತ್ತಿಲ್ಲ, ಹ್ಯಾಂಡ್ ಡ್ರೈಯರ್ ಕೇಳುತ್ತಿಲ್ಲ, ನಿಲುವುಗನ್ನಡಿಯಂತೂ ಬೇಡವೇಬೇಡ. ನಮಗೆ ಇರುವ ಶೌಚಾಲಯಗಳಿಗೆ ಸರಿಯಾದ ಬಾಗಿಲು, ನಿರಂತರ ನೀರು ಸೌಲಭ್ಯ ಕೊಟ್ಟು ನವೀಕರಣ ಭಾಗ್ಯವನ್ನು ಕಲ್ಪಿಸಿ. ಹಾಗೇ ರಾಜ್ಯಾದ್ಯಂತ ನೂತನವಾಗಿ ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯವನ್ನೂ ನಿರ್ಮಿಸಿ. ಮತ್ತು ಅವುಗಳನ್ನು ‘ಉಚಿತ’ವಾಗಿ ಬಳಸಲು ಅನುಮತಿ ನೀಡಿ ಎಂದು ಹೇಳಿದ್ದಾರೆ. ಈ ಮೂಲಕ ಮಹಿಳೆಯರ ಸಬಲೀಕರಣದ ಆದ್ಯತೆಯಲ್ಲಿ ಕರ್ನಾಟಕವನ್ನು ಮತ್ತೊಂದು ಹಂತ ಎತ್ತರಕ್ಕೆ ಒಯ್ಯಬೇಕು ಎಂದಿದ್ದಾರೆ.

ಇದನ್ನೂ ಓದಿ‘ಒಂದೇ ಒಂದು ಶೌಚಾಲಯವೂ ಸಿಗಲಿಲ್ಲ’: ರಾಷ್ಟ್ರಪತಿಗೆ ಪತ್ರ ಬರೆದ ಕನ್ನಡತಿ

 

                                                                                                                                                                                           

 

Donate Janashakthi Media

Leave a Reply

Your email address will not be published. Required fields are marked *