ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ’ ಎಂದು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್, ಬಿಜೆಪಿ ಆತ್ಮವಲೋಕನಸಭೆಯಲ್ಲಿ ಡಾ.ಕೆ. ಸುಧಾಕರ್ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಡಾ.ಕೆ.ಸುಧಾಕರ್ಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ನೀಡಿದ್ದರು. ಉಸ್ತುವಾರಿ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ನನ್ನ, ಚಿಂತಾಮಣಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಅವರೇ ಕಾರಣ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಆದರೆ ಕಾಂಗ್ರೆಸ್‍ನಲ್ಲಿರುವಾಗ ಮೂರು ಬಾರಿ ಗೆದ್ದಿದ್ದ ನಾನು ಬಿಜೆಪಿ ಸೇರಿದ ನಂತರ ಎರಡು ಬಾರಿಯೂ ಸೋಲನ್ನು ಅನುಭವಿಸಿದೆ’ ಎಂದು ಅಳಲು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‍ನ ಶೇ.40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಏನೂ ಮಾಡಲಿಲ್ಲ. ನಾವು ಕೇವಲ ಸಿದ್ದರಾಮಯ್ಯರಿಗೆ ಮಾತ್ರ ಬೈದೆವು. ವಿಧಾನಸಭೆ ಚುನಾವಣೆ ವೇಳೆ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಕಡಿಮೆ ಮಾಡಿದ್ದು ಸೋಲಿಗೆ ಪ್ರಮುಖ ಕಾರಣ. ಆದರೆ, ಇದೇ ವೇಳೆ ಕಾಂಗ್ರೆಸ್ ಪಕ್ಷದ 10 ಕೆಜಿ ಅಕ್ಕಿ ಗ್ಯಾರಂಟಿಯೂ ನಮ್ಮ ಸೋಲಿಗೆ ಕಾರಣವಾಯಿತು’ ಎಂದು ಅವರು ತಿಳಿಸಿದರು ಎಂದು ಹೇಳಲಾಗಿದೆ.
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ, ಕಾರ್ಯಕರ್ತರ ಆಗು-ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲೇ ಇಲ್ಲ. ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು. ಡಾ.ಸುಧಾಕರ್ ನಿಂದಾಗಿಯೇ ನಾನು ಸೋತಿದ್ದು. ನಾನು ಹಣ, ಅಧಿಕಾರದ ಆಸೆಗಾಗಿ ಬಿಜೆಪಿಗೆ ಬಂದವನಲ್ಲ’ ಎಂದು ಎಂಟಿಬಿ ನಾಗರಾಜ್ ಮುಖಂಡರ ಮುಂದೆಯೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.