ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್ ಜನಕೀಯ, ಅಮ್ಮಾ ಮಾದರಿಯಲ್ಲಿ ಬಲಗೊಳ್ಳಲಿ

ಗುರುರಾಜ ದೇಸಾಯಿ

ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್ಗಳು ಬಲಗೊಳ್ಳಬೇಕಿದೆ, ಅದಕ್ಕಾಗಿ ಸರ್ಕಾರ ಎರಡು ರಾಜ್ಯಗಳ ಮಾದರಿಯನ್ನು ಅನುಸರಿಸಬೇಕಿದೆ, ಆ ಎರಡು ರಾಜ್ಯಗಳ ಮಾದರಿ ಎಂತದ್ದು? ಕರ್ನಾಟಕದಲ್ಲಿಇಂದಿರಾ ಕ್ಯಾಂಟೀನ್ ಹೇಗೆ ಬಲಪಡಿಸಬಹುದು? ಎಂಬುದರ ಬಗ್ಗೆ ಸರ್ಕಾರ ಯೋಜನೆ ರೂಪಿಸಬೇಕಿದೆ.

ಬಡ ಜನರಿಗೆ ಕಡಿಮೆದರದಲ್ಲಿ ಮೂರು ಹೊತ್ತು ಊಟ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ಗೆ ಮರುಜೀವ ದೊರೆಯಬಹುದೆ ಎಂಬ ಚರ್ಚೆಗಳು ಈಗ ಕೇಳಿ ಬರುತ್ತಿವೆ. 2017ರಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ರಾಜ್ಯವ್ಯಾಪಿ ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ ಕಡಿಮೆ ದರದಲ್ಲಿ ಸಾರ್ವಜಿನಿಕರಿಗೆ ಊಟ ದೊರೆಯುವಂತೆ ಮಾಡಲಾಗಿತ್ತು. ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಗ್ರೂಪ್ ಡಿ ನೌಕರರು, ಅಟೋ ಡ್ರೈವರ್, ಹಮಾಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರು ಸೇರಿದಂತೆ ಸಾಕಷ್ಟು ಜನರಿಗೆ ಹಸಿವಿನ ದಾಹ ತಣಿಸಲು ಸಹಾಯವಾಗಿದ್ದವು.

2017 ಆಗಸ್ಟ್ 15 ರಂದು ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ದುಡಿಯುವ ವರ್ಗದ ಜನಕ್ಕೆ ಕಡಿಮೆ ಬೆಲೆಯಲ್ಲಿ ಆಹಾರ ನೀಡೋದು ಈ ಯೋಜನೆಯ ಉದ್ದೇಶವಾಗಿತ್ತು. ರಾಜ್ಯದಲ್ಲಿಒಟ್ಟು 247 ಇಂದಿರಾ ಕ್ಯಾಂಟೀನ್ಗಳಿವೆ, ಜಿಲ್ಲಾ, ತಾಲ್ಲೂಕ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇವು ಕಾರ್ಯ ನಿರ್ವಹಿಸುತ್ತಿವೆ. ಕೇಂದ್ರಿಕೃತ ಅಡುಗೆ ಮನೆ ಮೂಲಕ ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಸಲಾಗುತ್ತದೆ. ಪ್ರತಿ ಇಂದಿರಾ ಕ್ಯಾಂಟೀನ್ಗೆ 32 ಲಕ್ಷ ರುಪಾಯಿ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಲ್ಯಾಂಡ್ ಆರ್ಮಿಯಿಂದ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ಏನೆಲ್ಲ ಸಿಗಲಿದೆ ಎನ್ನುವುದನ್ನು ನೋಡುವುದಾದರೆ, ಬೆಳಗ್ಗಿನ ಉಪಹಾರವಾಗಿ ಇಡ್ಲಿ ಸಾಂಬಾರ್, ರೈಸ್ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರ ಉಪ್ಪಿಟ್ಟು ಖಾರಪೊಂಗಲ್, (ವಾರದಲ್ಲಿಒಂದರಂತೆ,). ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ಅನ್ನಸಾರು, ಉಪ್ಪಿನಕಾಯಿ, ಹಪ್ಪಳ, ಬಿಸಿಬೇಳೆಬಾತ್, ತರಕಾರಿ ಅನ್ನ, ಪುಳಿಯೊಗರೆ, ಜೀರಿಗೆ ಅನ್ನ ದೊರೆಯಲಿದೆ.

ಕಡಿಮೆ ದರದಲ್ಲಿ ಹೊಟ್ಟೆತುಂಬ ಊಟ ಮಾಡುತ್ತಿದ್ದ ಬಡವರ ಹೊಟ್ಟೆಗೆ ಬಿಜೆಪಿ ಸರಕಾರ ಕತ್ತರಿ ಹಾಕಿತ್ತು. 2019 ರಿಂದ 2023ರ ಅವಧಿಯಲ್ಲಿ 75ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ಹಣಕಾಸಿನ ಕೊರತೆಯ ನೆಪವೊಡ್ಡಿ ಮುಚ್ಚಲಾಗಿತ್ತು. ಈಗ ಮತ್ತೆ ಅವಕ್ಕೆ ಮರುಜೀವ ಬರುತ್ತಿದ್ದು ಹಸಿದವರ ಹೊಟ್ಟೆಗೆ ಇಂದಿರಾ ಕ್ಯಾಂಟೀನ್‌ ಅನ್ನ ನೀಡುವ ತಾಣವಾಗಲಿದೆ. ಇಂದಿರಾ ಕ್ಯಾಂಟೀನ್‌ ಕುರಿತಾದ ಒಂದು ಗ್ರೌಂಡ್‌ ರಿಪೋರ್ಟ್‌ ಇದೆ ನೋಡಿಕೊಂಡು ಬರೋಣ ಬನ್ನಿ.

ಜನ ಇಂದಿರಾ ಕ್ಯಾಂಟೀನ್ಗಳ ಬಗ್ಗೆ ಇಟ್ಟುಕೊಂಡಿರುವ ಹೆಮ್ಮೆಯ ಮಾತುಗಳು ಎಂತಹದ್ದುಅಂತ ಕೇಳಿಸಿಕೊಂಡ್ರಿ, ಒಂದು ಪ್ಲೇಟ್‌ ಅನ್ನ, ಸಾಂಬಾರಿಗೆ 40 ರೂ ಕೊಟ್ಟು ಹೊಟೇಲ್‌ನಲ್ಲಿ ಊಟ ಮಾಡಬೇಕು. ದೊಡ್ಡ ಹೋಟೇಲ್‌ ಆದರೆ 50 ರೂಗಿಂತ ಹೆಚ್ಚು ಹಣ ಕೊಡಬೇಕು. ಈ ದರದಲ್ಲಿ ಇಂದಿರಾ ಕ್ಯಾಂಟೀನಲ್ಲಿ ನಾಲ್ಕೈದು ಜನ ಊಟ ಮಾಡಬಹುದು. ಜನಶಕ್ತಿ ಮೀಡಿಯಾ ನಡೆಸಿದ ಸರ್ವೆಯ ಪ್ರಕಾರ ಒಂದು ಇಂದಿರಾ ಕ್ಯಾಂಟೀನ್‌ಗೆ ದಿನವೊಂದಕ್ಕೆ 500 ರಿಂದ 700 ಜನ ಭೇಟಿ ನೀಡಿ ಊಟ ಮಾಡುತ್ತಾರೆ. ದಿನವೊಂದಕ್ಕೆ ರಾಜ್ಯದಲ್ಲಿ 85 ಸಾವಿರದಿಂದ 1 ಲಕ್ಷ ಮಂದಿ ಊಟ ಮಾಡುತ್ತಾರೆ ಎಂಬ ಮಾಹಿತಿಸಿಕ್ಕಿದೆ. ನಿತ್ಯ ಲಕ್ಷ ಜನರಿಗೆ ಊಟ ನೀಡುವ ಇಂದಿರಾ ಕ್ಯಾಂಟೀನನ್ನು ಬಲಪಡಿಸಲು ಸರಕಾರ ಯೋಜನೆಯನ್ನು ಹಾಕಿಕೊಳ್ಳಬೇಕಿದೆ.

ಇಂದಿರಾ ಕ್ಯಾಂಟೀನ್‌ನನ್ನು ಬಲಪಡಿಸಲು ರಾಜ್ಯ ಸರಕಾರ ಎರಡು ರಾಜ್ಯಗಳ ಮಾದರಿಯನ್ನು ಅಧ್ಯನ ಮಾಡಬೇಕಿದೆ. ಆ ಎರಡು ಮಾದರಿಗಳು ಯಾವವು ಎಂದರೆ ಒಂದು ತಮಿಳುನಾಡಿನಲ್ಲಿರುವ ಅಮ್ಮಾಕ್ಯಾಂಟೀನ್‌, ಮತ್ತೊಂದು ಕೇರಳದಲ್ಲಿ ಕುಟುಂಬಶ್ರೀ ಯೋಜನೆಯಲ್ಲಿ ನಡೆಯುತ್ತಿರುವ ಜನಕೀಯ ಹೊಟೇಲ್ಗಳ ಕುರಿತು ರಾಜ್ಯ ಸರಕಾರ ಅಧ್ಯಯನವನ್ನು ನಡೆಸಬೇಕಿದೆ. ತಮಿಳುನಾಡಿನಲ್ಲಿರುವ ಅಮ್ಮಾ ಕ್ಯಾಂಟೀನ್‌ನಲ್ಲಿ ಸಿಗುವ ಊಟದ ಬಗ್ಗೆ ಒಂದಿಷ್ಟು ಕಣ್ಣು ಹಾಯಿಸಿ ನೋಡೋಣ.
407 ಸ್ಥಳಗಳಲ್ಲಿ ಅಮ್ಮಾ ಕ್ಯಾಂಟೀನ್‌ಗಳಿವೆ, ಪ್ರತಿನಿತ್ಯ ಅಮ್ಮಾ ಕ್ಯಾಂಟೀನ್ನಲ್ಲಿ 1 ರೂ.ಗೆ 1ಇಡ್ಲಿ, 5 ರೂ.ಗೆ ಪೊಂಗಲ್, ಅನ್ನ ಸಾಂಬಾರ್. 3 ರೂ.ಗೆ ಮೊಸರನ್ನ ನೀಡಲಾಗುತ್ತಿದೆ. ದಿನವೊಂದಕ್ಕೆ 3 ರಿಂದ 4 ಲಕ್ಷ ಜನ ಅಮ್ಮಾ ಕ್ಯಾಂಟೀನ್ನಲ್ಲಿ ಆಹಾರವನ್ನು ಸೇವಿಸುತ್ತಾರೆ. ಮಹಿಳಾ ಸ್ವಸಹಾಯ ಸಂಘದ ನೇತೃತ್ವದಲ್ಲಿ ಈ ಕ್ಯಾಂಟೀನ್ಗಳು ನಡೆಯುತ್ತಿದ್ದು, 5 ಸಾವಿರ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಯೋಜನೆಯನ್ನು ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಲಾಗಿತ್ತು. 2021 ರಲ್ಲಿ ಎಂ.ಕೆ.ಸ್ಟಾಲಿನ್ ಈ ಯೋಜನೆಯನ್ನು ತೆಗೆದುಹಾಕುತ್ತಾರೆ ಎಂದು ಅಂದಾಜಿಸಲಾಗಿತ್ತು ಆದರೆ ಅವರು ಈ ಯೋಜನೆಗೆ ಇನ್ನಷ್ಟು ಬಲ ತುಂಬಿದರು. ಜಯಲಲಿತಾ ಇದ್ದಾಗ 200 ಅಮ್ಮಾ ಕ್ಯಾಂಟೀನ್ಗಳು ಮಾತ್ರ ಕೆಲಸ ಮಾಡುತ್ತಿದ್ದವು. ಡಿಎಂಕೆ ಸರಕಾರ ಅಮ್ಮಾ ಕ್ಯಾಂಟೀನ್ಗಳ ಸಂಖ್ಯೆಯನ್ನು ದುಪಟ್ಟು ಮಾಡಿ, ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿದೆ.

ಇನ್ನೂ ಕೇರಳದಲ್ಲಿನ ಎಡರಂಗ ಸರಕಾರ ಕುಟುಂಬಶ್ರೀ ಯೋಜನೆಯ ಮೂಲಕ ಜನಕೀಯ ಹೊಟೇಲ್ಗಳನ್ನು ನಡೆಸುತ್ತಿದೆ. 1116 ಜನಕೀಯ ಹೊಟೇಲ್ಗಳು ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಹಿಳಾ ಸ್ವಸಹಾಹ ಸಂಘಗಳ ಮೂಲಕ ಸರಕಾರ ಈ ಹೊಟೇಲ್ಗಳನ್ನು ನಡೆಸುತ್ತಿದೆ. ದಿನನಿತ್ಯ 2 ರಿಂದ 3 ಲಕ್ಷಜನ ಈ ಹೊಟೇಲ್ಗಳಲ್ಲಿ ಊಟವನ್ನು ಮಾಡುತ್ತಾರೆ. ಜನಕೀಯ್ ಹೊಟೇಲ್ನಲ್ಲಿ ಚಿಕನ್ ಬಿರಿಯಾನಿ, ಪಳಂಪುರಿ, ಪರೋಟಾ, ಆಪಂ, ಕಡ್ಲೆಕರಿ, ಎಗ್ಕರಿ, ಗೀರೈಸ್, 3 ರೀತಿಯ ಪಲ್ಯ ನೀಡಲಾಗುತ್ತಿದೆ. 20 ರೂನಲ್ಲಿ ಗುಣಮಟ್ಟದ ಮಾಂಸಹಾರಿ ಊಟವನ್ನು ನೀಡುತ್ತಿರುವುದರಿಂದ ಈ ಯೋಜನೆ ಹೆಚ್ಚು ಖ್ಯಾತಿಯನ್ನುಹೊಂದಿದೆ.
ಈ ಎರಡು ಮಾದರಿಗಳನ್ನು ನಮ್ಮ ರಾಜ್ಯ ಸರಕಾರ ಅಧ್ಯಯನ ನಡೆಸಬೇಕಿದೆ. ತಮಿಳುನಾಡಿನಲ್ಲಿ 1 ರೂಗೆ 1 ಇಡ್ಲಿ, 5 ರೂಗೆ ಅನ್ನಸಾಂಬಾರ್, ಕೇರಳದಲ್ಲಿ 20 ರೂಗೆ ಉತ್ತಮ ಗುಣಮಟ್ಟದ ಸಸ್ಯಹಾರಿ ಮತ್ತು ಮಾಂಸಹಾರಿ ಊಟಸಿಗುತ್ತಿದೆ. ಕರ್ನಾಟಕದಲ್ಲೂ ಇದೇ ರೀತಿ ನೀಡಲು ಸಾಧ್ಯವಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕ್ಯಾಂಟೀನ್ಗಳನ್ನು ಸ್ವಸಹಾಯ ಸಂಘಗಳ ಮೂಲಕ ಸರಕಾರವೇ  ನಡೆಸುತ್ತಿದೆ. ಹಾಗಾಗಿ ಕಡಿಮೆದರದಲ್ಲಿ ಎಲ್ಲವನ್ನೂ ಕೊಡಲು ಸಾಧ್ಯವಿದೆ. ಆದರೆ ಕರ್ನಾಟಕದಲ್ಲಿ ಈ ಯೋಜನೆಯ ಸರಕಾರದ ಅಡಿಯಲ್ಲಿದ್ದರೂ. ನಿರ್ವಹಣೆ ಮಾಡುತ್ತಿರುವುದು ಗುತ್ತಿಗೆದಾದರು. ಬೆಂಗಳೂರಿನಲ್ಲಿಅದಮ್ಯ ಚೇತನ ಮತ್ತುಇಸ್ಕಾನ್ಗೆ ಗುತ್ತಿಗೆ ನೀಡಲಾಗಿದೆ. ಬೆಳ್ಳುಳ್ಳಿ, ಈರುಳ್ಳಿಯನ್ನು ಹಾಕಿ ಅಡುಗೆ ಮಾಡಲು ನಿರಾಕರಿಸುವ ಈ ಸಂಸ್ಥೆಗಳಿಂದ ಗುಣಮಟ್ಟದ ಊಟ ನಿರೀಕ್ಷಿಸಲು ಸಾಧ್ಯವಿಲ್ಲ.

ಹಾಗಾಗಿ ರಾಜ್ಯ ಸರಕಾರ ಈ ಗುತ್ತಿಗೆ ನಿರ್ವಹಣೆಯನ್ನು ತಪ್ಪಿಸಬೇಕಿದೆ. ಇವರಿಬ್ಬರನ್ನು ಬಿಟ್ಟು ಬೇರೆಯವರು ನಿರವಹಣೆ ಮಾಡಲು ಬಿಡದಷ್ಟು ಇವರು ಸರಕಾರದ ಮೇಲೆ ಪ್ರಭಾವವನ್ನು ಹೊಂದಿದ್ದಾರೆ. ಹಾಗಾಗಿ ರಾಜ್ಯದಲ್ಲಿ 2 ಲಕ್ಕಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಸಂಘದ ಸದಸ್ಯರಾಗಿದ್ದಾರೆ. ಈ ಸ್ವಸಹಾಯ ಸಂಘಗಳಿಗೆ ರಿಯಾಯತಿ, ವಿಶೇಷ ಸೌಲಭ್ಯಗಳ ಮೂಲಕ ನಿರ್ವಹಣೆಗೆ ಅವಕಾಶ ನೀಡಿದರೆ ಕಡಿಮೆ ದರದಲ್ಲಿ ಗುಣಮಟ್ಟದ ಊಟನೀಡಲು ಸಾಧ್ಯವಿದೆ. ಜೊತೆಗೆ ಆ ಮಹಿಳಾ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಅವರ ಕುಟುಂಬ ಆರ್ಥಿಕವಾಗಿ ಬಲಗೊಳುವದರ ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಹಣತರಬಲ್ಲ ಸಾಮರ್ಥವ್ಯೂ ಆ ಸ್ವಸಹಾಯ ಸಂಘಗಳಿಗೆ ಇದೆ ಆ ನಿಟ್ಟಿನಲ್ಲಿ ಸರಕಾರ ಅಧ್ಯಯನ ನಡೆಸಿ ಇಂದಿರಾ ಕ್ಯಾಂಟೀನ್ಗಳನ್ನು ಬಲಪಡಿಸಬೇಕಿದೆ.

ದೇಶದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂದು ಆಹಾರಭದ್ರತಾ ಕಾಯಿದೆ ಹೇಳುತ್ತದೆ, ಹಸಿವಿನಿಂದ ಬಳಲುತ್ತಿರುವ ಕುಟುಂಬಗಳಿಗೆ ಆಹಾರಧಾನ್ಯ, ಇಲ್ಲವೇ ಊಟ ಇವೆರಡು ಆಗದಿದ್ದರೆ ಆಹಾರ ಭತ್ಯೆಯನ್ನು ನೀಡಬೇಕು ಎಂದು ಹೇಳುತ್ತದೆ. ಆದರೆ ದೇಶದಲ್ಲಿ ಇದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 107 ನೇ ಸ್ಥಾನದಲ್ಲಿದೆ. ಸರಕಾರದ ಅಂಕಿ-ಅಂಶದ ಪ್ರಕಾರ 25 ಕೋಟಿಗೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಪ್ರತಿ 9 ಜನರಲ್ಲಿ ಒಬ್ಬ ವ್ಯಕ್ತಿ ಆರೋಗ್ಯಕರ ಜೀವನ ನಡೆಸಲು ಬೇಕಾಗುವ ಆಹಾರ ಪಡೆಯಲು ವಿಫಲನಾಗುತ್ತಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

90 ಲಕ್ಷ ಜನಪ್ರತಿ ವರ್ಷ ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಸರಕಾರದ ಅಂಕಿಅಂಶಗಳೇ ದೃಢಪಡಿಸುತ್ತಿವೆ. 31% ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತವಾದರೆ, 51% ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.ಹಸಿವು ಮುಕ್ತ ಸಮಾಜ ನಿರ್ಮಾಣ ಆಗಬೇಕಾದರೆ ಇಂದಿರಾ ಕ್ಯಾಂಟೀನ್ಗಳಸಂಖ್ಯೆ ಹೆಚ್ಚಾಗಬೇಕಿದೆ.ವಿದ್ಯಾರ್ಥಿಗಳು, ಕಾರ್ಮಿಕರು, ದಿನಗೂಲಿ ಕೆಲಸಮಾಡುವವರು, ಬಡವರಿಗೆ ಇವು ಅನ್ನವನ್ನು ನೀಡುತ್ತವೆ. ಹಾಗಾಗಿ ರಾಜ್ಯ ಸರಕಾರ ಕೇರಳ ಮತ್ತು ತಮಿಳುನಾಡು ಮಾದರಿಯನ್ನು ಅಧ್ಯಯನ ಮಾಡಿ ರಾಜ್ಯದಲ್ಲಿಯೂ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಸಲು ಮುಂದಾಗಲಿ.

 

 

Donate Janashakthi Media

Leave a Reply

Your email address will not be published. Required fields are marked *