ನಾ ದಿವಾಕರ
ಭಾರತದ ರಾಜಕಾರಣದಲ್ಲಿ ಆರಾಧನಾ ಸಂಸ್ಕೃತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿದಾಗಲೇ ಈ ದೇಶದ ಪ್ರಜಾಪ್ರಭುತ್ವ ತನ್ನ ಸಾರ್ಥಕತೆಯನ್ನು ಪಡೆಯಲು ಸಾಧ್ಯ ಎಂಬ ಅರ್ಥಬರುವ ಮಾತುಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನವನ್ನು ರಚಿಸುವ ಸಂದರ್ಭದಲ್ಲೇ ಹೇಳಿದ್ದರು. “ ಧರ್ಮದ ಅನುಸರಣೆಯಲ್ಲಿ ಭಕ್ತಿ ಎನ್ನುವುದು ಮೋಕ್ಷ ಅಥವಾ ಮುಕ್ತಿಗೆ ಮಾರ್ಗವಾಗಬಹುದು. ಆದರೆ ರಾಜಕೀಯದಲ್ಲಿ ಭಕ್ತಿ ಅಥವಾ ವ್ಯಕ್ತಿ ಆರಾಧನೆ ಅವನತಿಯತ್ತ ಸಾಗುವ ಮಾರ್ಗವಾಗುವುದು ಖಚಿತ, ಅಂತಿಮವಾಗಿ ಇದು ಸರ್ವಾಧಿಕಾರತ್ತ ಕರೆದೊಯ್ಯುತ್ತದೆ ” ಎಂಬ ಅಂಬೇಡ್ಕರ್ ಅವರ ಮಾತುಗಳಿಗೆ ಈಗ 75 ವರ್ಷಗಳೇ ಸಂದಿವೆ. ಈ ಅವಧಿಯಲ್ಲಿ ಭಾರತದ ರಾಜಕಾರಣ ಅಂಬೇಡ್ಕರ್ ಅವರ ಈ ದಾರ್ಶನಿಕ ಮಾತುಗಳನ್ನು ಅನುಸರಿಸಿದ್ದಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಪಕ್ವತೆ ಪಡೆಯಬಹುದಿತ್ತು. ದುರಾದೃಷ್ಟವಶಾತ್ ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಆರಾಧನಾ ಸಂಸ್ಕೃತಿ ದೇಶವನ್ನು ವಿರುದ್ಧ ದಿಕ್ಕಿನಲ್ಲಿ ಕರೆದೊಯ್ಯುತ್ತಿದೆ.
ಭಾರತದ ರಾಜಕಾರಣ ಮೂರು ನೆಲೆಗಳಲ್ಲಿ ಕಾರ್ಯಪ್ರವೃತ್ತವಾಗಿರುತ್ತದೆ. ತಾತ್ವಿಕ ಅಥವಾ ಸೈದ್ಧಾಂತಿಕ ನೆಲೆ, ಈ ತಾತ್ವಿಕತೆಗನುಸಾರವಾದ ಪಕ್ಷದ ನೆಲೆ ಮತ್ತು ಈ ಪಕ್ಷದೊಳಗೇ ಉಗಮಿಸುವ ವ್ಯಕ್ತಿ ಕೇಂದ್ರಿತ ನೆಲೆ. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ರಾಜಕೀಯ ರಂಗದಲ್ಲಿ ಈ ಮೂರೂ ನೆಲೆಗಳು ಒಟ್ಟೊಟ್ಟಿಗೇ ಕಾರ್ಯೋನ್ಮುಖವಾಗಿರುವುದನ್ನು ಗುರುತಿಸಬಹುದು. ಏಕಸದಸ್ಯ ಪಕ್ಷದಿಂದ ಹಿಡಿದು ದೇಶವ್ಯಾಪಿಯಾಗಿ ಸ್ಥಾಪನೆಯಾಗಿರುವ ಕೋಟ್ಯಂತರ ಸದಸ್ಯರಿರುವ ಪಕ್ಷಗಳವರೆಗೂ ಅಧಿಕಾರ ರಾಜಕಾಣದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳು ತಮ್ಮ ಪ್ರಾದೇಶಿಕ ಅವಶ್ಯಕತೆಗಳಿಗೆ ತಕ್ಕಂತೆ ಈ ಮೂರೂ ನೆಲೆಗಳನ್ನು ಬಳಸಿಕೊಳ್ಳುತ್ತಾ ಬಂದಿವೆ. ಮುಖ್ಯವಾಹಿನಿಯ ಪಕ್ಷಗಳೆಂದು ಗುರುತಿಸಬಹುದಾದ ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪ್ರಾದೇಶಿಕ ಪಕ್ಷಗಳೆಲ್ಲವೂ ತತ್ವ ಸಿದ್ಧಾಂತಗಳಿಂದಾಚೆಗೆ ಒಬ್ಬ ನಾಯಕನ ಸುತ್ತಲೂ ಪ್ರಭಾವಳಿಯನ್ನು ರಚಿಸಿ ಆ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡೇ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ವರ್ತಮಾನದ ರಾಜಕಾರಣದಲ್ಲೂ ಸ್ಪಷ್ಟವಾಗಿ ಗುರುತಿಸಬಹುದು.
ವ್ಯಕ್ತಿ-ಪಕ್ಷ ಮತ್ತು ಪ್ರಭಾವಳಿ
ಬಹುಶಃ ಭಾರತದ ಸಕ್ರಿಯ ರಾಜಕಾರಣದಲ್ಲಿ ಈ ವ್ಯಕ್ತಿ ಕೇಂದ್ರಿತ ಲಕ್ಷಣಗಳಿಲ್ಲದ ಯಾವುದೇ ಪಕ್ಷವನ್ನು ಗುರುತಿಸಲು ಸಾಧ್ಯವಿಲ್ಲ. ಪ್ರಾದೇಶಿಕ ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆಗಾಗಿಯೇ ಟೊಂಕಕಟ್ಟಿ ನಿಲ್ಲುವ ಪ್ರಾದೇಶಿಕ ಪಕ್ಷಗಳೂ ಸಹ ಯಾವುದೋ ಒಂದು ಪ್ರಬಲ ಜಾತಿ, ಮತ, ಸಮುದಾಯಕ್ಕೆ ಸೇರಿದ ವ್ಯಕ್ತಿಯ ಸುತ್ತ ಪ್ರಭಾವಳಿಯನ್ನು ನಿರ್ಮಿಸಿಕೊಂಡಿರುತ್ತವೆ. ಈ ನಾಯಕರೇ ಪಕ್ಷಗಳಿಗೆ ಸದಾ ಕಾಲವೂ ಸಾರ್ವಜನಿಕವಾಗಿ Star Attraction ಆಗಿರುತ್ತಾರೆ. ತತ್ವ ಸಿದ್ಧಾಂತಗಳಿಂದಾಚೆಗಿನ ಸಾರ್ವಜನಿಕ ವಲಯದಲ್ಲಿ ಈ ಆಕರ್ಷಣೀಯ ವ್ಯಕ್ತಿಗಳೇ ಪಕ್ಷಗಳ ವಿಸ್ತರಣೆಗೂ ನೆರವಾಗುತ್ತಾರೆ. ಚುನಾವಣೆಗಳ ಸಂದರ್ಭದಲ್ಲಿ ಆಯಾ ಪಕ್ಷಗಳ ಶಾಶ್ವತ ಬೆಂಬಲಿಗರ ಹೊರತಾಗಿ, ಸಮಾಜದ ಇನ್ನಿತರ ನಾಗರಿಕರನ್ನು ತಮ್ಮ ಪಕ್ಷದೆಡೆಗೆ ಆಕರ್ಷಿಸಲು ಇಂತಹ ನಾಯಕರ ಮೂಲಕ ರೋಡ್ ಷೋ ನಡೆಸುವುದು ಭಾರತದ ರಾಜಕಾರಣದಲ್ಲಿ ಬೆಳೆದುಬಂದಿರುವ ಪರಂಪರೆಯೇ ಆಗಿದೆ. ಈ ರೋಡ್ ಷೋಗಳಲ್ಲಿ ಹೆಚ್ಚಿನ ಆಕರ್ಷಣೆಗಾಗಿ ಸಿನಿಮಾ ತಾರೆಯರನ್ನು ಬಳಸುವುದು ಸಹ ಸಹಜ ಪ್ರಕ್ರಿಯೆಯಾಗಿಯೇ ಕಾಣುತ್ತಿದೆ.
ಈ ಚುನಾವಣೆಗಳಲ್ಲಿ ಪ್ರಧಾನವಾಗಿ ಕಾಣುತ್ತಿರುವ ಪ್ರಚಾರ ವೈಖರಿ ಮತ್ತು ವಿಶಿಷ್ಟವಾಗಿ ಮುನ್ನೆಲೆಗೆ ಬಂದಿರುವ ರೋಡ್ ಷೋಗಳಿಗೂ ಈ ವ್ಯಕ್ತಿ ಕೆಂದ್ರಿತ ರಾಜಕಾರಣಕ್ಕೂ ನೇರವಾದ ಸಂಬಂಧ ಇರುವುದನ್ನು ಗಮನಿಸಬೇಕಿದೆ. ಚುನಾವಣೆಗಳ ಸಂದರ್ಭಗಳಲ್ಲಿ ಮಾತ್ರವೇ ಅಲ್ಲದೆ, ಪಕ್ಷದ ವಿಸ್ತರಣೆಗಾಗಿ ನಡೆಯುವ ಸದಸ್ಯತ್ವ ಅಭಿಯಾನ ಮತ್ತು ಪ್ರಚಾರಾಂದೋಲನದ ಸಂದರ್ಭಗಳಲ್ಲೂ ಸಹ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಪ್ರಮುಖ ನಾಯಕರನ್ನು ರೋಡ್‌ಷೋಗಳ ಮೂಲಕ ಜನಸಾಮಾನ್ಯರ ನಡುವೆ ವಿಜೃಂಭಿಸಿ, ಪಕ್ಷದ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿವೆ. ತಾತ್ವಿಕ ನೆಲೆಯಲ್ಲಿ ನೋಡಿದಾಗ ರೋಡ್ ಷೋ ಎನ್ನುವುದು ಏಕ ವ್ಯಕ್ತಿ ಕೇಂದ್ರಿತವಾಗಿರುತ್ತದೆ ಹಾಗೂ ಅಂತಹ ವ್ಯಕ್ತಿಯ ಸುತ್ತ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿರುವ ಪ್ರಭಾವಳಿಯನ್ನು ಅವಲಂಬಿಸಿರುತ್ತದೆ. ಜನಸಾಮಾನ್ಯರನ್ನು ತಮ್ಮ ಕಾರ್ಯವೈಖರಿಯಿಂದ, ಆಡಳಿತ ದಕ್ಷತೆಯಿಂದ, ವಾಕ್ಚಾತುರ್ಯದಿಂದ , ನಾಯಕತ್ವದ ಗುಣಗಳಿಂದ ಹಾಗೂ ಭೌತಿಕ ಲಕ್ಷಣಗಳಿಂದಲೂ ಆಕರ್ಷಿಸುವ ಗುಣಲಕ್ಷಣಗಳನ್ನು ಹೊಂದಿರುವ ನಾಯಕರು ಸಾಮಾನ್ಯವಾಗಿ ರೋಡ್ ಷೋಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ.
ಮೇ 10ರ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಈಗಾಗಲೇ ಹಲವಾರು ರೋಡ್ ಷೋಗಳಿಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನು ಮುಂತಾದ ಹಲವಾರು ರಾಷ್ಟ್ರ ಮಟ್ಟದ ನಾಯಕರು ಈಗಾಗಲೇ ರೋಡ್ ಷೋಗಳ ಮೂಲಕ ಜನಾಕರ್ಷಣೆಯ ಕಸರತ್ತು ನಡೆಸುತ್ತಿದ್ದಾರೆ. ಇವರೊಂದಿಗೆ ಸಿನಿಮಾ ತಾರೆಯರಾದ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ದುನಿಯಾ ವಿಜಯ್ ಮುಂತಾದವರೂ ಸಹ ರೋಡ್ ಷೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಿನಿಮಾ ತಾರೆಯರನ್ನು ಆರಾಧಿಸುವ ಒಂದು ವಿಶಿಷ್ಟ ಪರಂಪರೆಯನ್ನು ರೂಢಿಸಿಕೊಂಡಿರುವ ಭಾರತದಂತಹ ಸಮಾಜದಲ್ಲಿ, ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ, ಯಾವುದೇ ರಾಜಕೀಯ ಪಕ್ಷವಾದರೂ ಖ್ಯಾತನಾಮರನ್ನು ಆಶ್ರಯಿಸುವುದು ರಾಜಕೀಯ ಅನಿವಾರ್ಯತೆಯಾಗಿಯೂ ಕಾಣುತ್ತದೆ.
ವ್ಯಕ್ತಿ ಪ್ರಭಾವಳಿ-ರಾಜಕೀಯ ಪ್ರಭಾವ
ಆದರೆ ರಾಜಕೀಯ ನಾಯಕರ ವ್ಯಕ್ತಿತ್ವದ ಸುತ್ತ ಸೃಷ್ಟಿಸಲಾಗುವ ಪ್ರಭಾವಳಿ ಹಾಗೂ ಅವರನ್ನೇ ಕೇಂದ್ರೀಕರಿಸಿ ನಡೆಸಲಾಗುವ ರೋಡ್ ಷೋಗಳು ಮತದಾರರನ್ನು ಪ್ರಭಾವಿಸುವುದೋ ಅಥವಾ ಕೇವಲ ಆಕರ್ಷಿಸುವುದೋ ಎಂಬ ತಾರ್ಕಿಕ ಪ್ರಶ್ನೆ ಜಾಗೃತ ಮತದಾರರನ್ನು, ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಿದೆ. ಸಹಜವಾಗಿಯೇ ಸಿನಿಮಾ ತಾರೆಯರನ್ನೊಳಗೊಂಡ ರೋಡ್ ಷೋಗಳಿಗೆ ಹೆಚ್ಚಿನ ಜನ ನೆರೆದಿರುತ್ತಾರೆ. ಹಾಗೆಯೇ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಜನಮಾನಸದ ನಡುವೆ ನೆಲೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಾರೆ. ಈ ರೋಡ್ ಷೋಗಳಲ್ಲಿ ನೆರೆಯುವ ಜನಸಮೂಹಗಳ ವಾಸ್ತವಿಕ ಗುಣಲಕ್ಷಣಗಳನ್ನು ಶೋಧಿಸಿದಾಗ ಅಲ್ಲಿ ಎರಡು ಮೂರು ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.
ಮೊದಲನೆಯದು ತಮ್ಮ ನೆಚ್ಚಿನ ರಾಜಕೀಯ ನಾಯಕನನ್ನು ಹತ್ತಿರದಿಂದ ನೋಡುವ ʼಭಾಗ್ಯʼಕ್ಕಾಗಿ ಹಾತೊರೆಯುವ ಸಾಮಾನ್ಯ ಜನತೆ. ಇಂತಹವರ ಜನಸಂಖ್ಯೆ ಭಾರತದಲ್ಲಿ ಪಾರಂಪರಿಕವಾಗಿ ಹೆಚ್ಚಾಗಿಯೇ ಇದೆ. ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರೀಯ ನಾಯಕರು ಹಲವು ಕಾರ್ಯಕ್ರಮಗಳಿಗೆ, ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭಗಳಿಗೆ, ಸಾರ್ವಜನಿಕ ಸಭೆಗಳಿಗೆ ಭೇಟಿ ನೀಡುತ್ತಲೇ ಇದ್ದರೂ, ಬುಲೆಟ್ ಪ್ರೂಫ್ ವಾಹನದೊಳಗೆ ಕುಳಿತು ನೆರೆದ ಜನಸ್ತೋಮಕ್ಕೆ ಕೈಬೀಸುತ್ತಾ, ಬಿಗಿ ಭದ್ರತೆಯ ನಡುವೆಯೇ ಸಾರ್ವಜನಿಕರನ್ನು ಹಾದು ಹೋಗಿರುತ್ತಾರೆ. ಹೆಚ್ಚೆಂದರೆ ನೂರಾರು ಅಡಿ ಅಂತರದಲ್ಲಿ ನಿರ್ಮಿಸಿದ ವೇದಿಕೆಗಳಲ್ಲಿ ಕುಳಿತು ಭಾಷಣ ಮುಗಿಸಿ ತೆರಳಿರುತ್ತಾರೆ. ಇಂತಹ ನಿರ್ದಿಷ್ಟ ಸಮಾರಂಭಗಳಿಗೆ ಕೆಲವೇ ನಿಗದಿತ ಪ್ರದೇಶದ ಜನರನ್ನಷ್ಟೇ ಕ್ರೋಢೀಕರಿಸಲಾಗಿರುತ್ತದೆ. ಜನಸಾಮಾನ್ಯರೂ ತಮ್ಮ ಆಸಕ್ತಿಗೆ ಅನುಸಾರವಾಗಿ ಸಭೆಗಳಲ್ಲಿ ಹಾಜರಿರುತ್ತಾರೆ. ಆದರೆ ತೆರೆದ ವಾಹನದಲ್ಲಿ ನಿಂತು, ರಸ್ತೆಯ ಇಕ್ಕೆಲಗಳಲ್ಲಿ ಮುಕ್ತ ವಾತಾವರಣದಲ್ಲಿ ನೆರೆದ ಜನಸ್ತೋಮಕ್ಕೆ ʼ ದರ್ಶನ ʼ ನೀಡುತ್ತಾ ಸಾಗುವ ಅವಕಾಶವನ್ನು ಈ ನಾಯಕರು ಪಡೆಯುವುದು ರೋಡ್ ಷೋಗಳ ಮೂಲಕ. ರೋಡ್ ಷೋಗಳ ಮೂಲಕ ರಾಜಕೀಯ ನಾಯಕರು ಒಂದೆಡೆ ಸಾಮಾನ್ಯ ಜನಾಕರ್ಷಣೆಯ ಕೇಂದ್ರ ಬಿಂದುವಾಗಿ ಕಂಡರೆ ಮತ್ತೊಂದೆಡೆ ಮತದಾರರನ್ನು ಸೆಳೆಯುವ ಭೌತಿಕ ಆಯಸ್ಕಾಂತಗಳಾಗಿಯೂ ಕಾಣುತ್ತಾರೆ.
ಎರಡನೆಯದಾಗಿ ಸಾಮಾನ್ಯವಾಗಿ ಸಿನಿಮಾ ತಾರೆಯರನ್ನೊಳಗೊಂಡ ರೋಡ್ ಷೋಗಳು ಹೆಚ್ಚು ಜನಪ್ರಿಯವೂ, ಜನಾಕರ್ಷಕವೂ ಆಗುತ್ತವೆ. ಪರದೆ ಮೇಲೆ ನೋಡುತ್ತಲೇ ತಾವು ಆರಾಧಿಸುವ ಒಬ್ಬ ಸಿನಿಮಾ ಹೀರೋ ತಮ್ಮ ಕಣ್ಣೆದುರಿನಲ್ಲೇ ತೆರೆದ ವಾಹನದಲ್ಲಿ ಸಂಚರಿಸುವುದು ಅಭಿಮಾನಿ ವೃಂದಕ್ಕೆ ಮಹದವಕಾಶವಾಗಿ ಕಾಣುತ್ತದೆ. ಪರದೆಯ ಮೇಲೆ ನಿರ್ದೇಶಕರ ಕೈಗೊಂಬೆಯಾಗಿ ಸಮಾಜಮುಖಿಯಾಗಿ, ಜನಸಾಮಾನ್ಯರ ರಕ್ಷಕರಾಗಿ, ಆಪದ್ಬಾಂಧವನಾಗಿ, ಬಡವರ ಕಣ್ಣೊರೆಸುವ ಉದಾತ್ತ ವ್ಯಕ್ತಿಯಾಗಿ ಕಂಗೊಳಿಸುವ ನಾಯಕ ನಟರು ನಿಜ ಜೀವನದಲ್ಲೂ ಅದೇ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುತ್ತಾರೆ ಎಂಬ ಭ್ರಮೆ ಸಹಜವಾಗಿಯೇ ಸಾಮಾನ್ಯ ಜನರನ್ನು ಆವರಿಸಿರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸತ್ಯವೇ ಆಗಿರಬಹುದಾದರೂ, ಬಹಳಷ್ಟು ಸನ್ನಿವೇಶಗಳಲ್ಲಿ ಭಿನ್ನವಾಗಿಯೇ ಇರುತ್ತದೆ. ಏಕೆಂದರೆ ಬಾಹ್ಯ ಸಮಾಜದ ರಾಜಕೀಯ ತಾತ್ವಿಕ ನೆಲೆಗಳು ಮತ್ತು ಅನಿವಾರ್ಯತೆಗಳು ಭಿನ್ನವಾಗಿರುತ್ತವೆ. ಆದರೂ ಒಂದು ರಾಜಕೀಯ ಪಕ್ಷ ಸಿನಿಮಾ ತಾರೆಯರನ್ನು ಮುಂಚೂಣಿಯಲ್ಲಿ ನಿಲ್ಲಿಸಿದಾಗ , ಜನಸ್ತೋಮದ ನಡುವೆ ಇರುವ ಅಭಿಮಾನಿ ಸಮೂಹ ಕ್ರಿಯಾಶೀಲವಾಗುತ್ತದೆ. ರೋಡ್ ಷೋಗಳ ಯಶಸ್ಸಿನ ಹಿಂದೆ ಈ ಅಂಶವೂ ಇರುವುದನ್ನು ಗಮನಿಸಬೇಕಿದೆ.
ಮೂರನೆಯ ಅಂಶವೆಂದರೆ ರೋಡ್ ಷೋಗಳು ಮೂಡಿಸುವ ರಾಜಕೀಯ ಹವಾ ಅಂದರೆ ವಾತಾವರಣ. ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಎರಡು ದಿನ ನಡೆಸುವ ರೋಡ್ ಷೋ ಇಡೀ ನಗರದಾದ್ಯಂತ ಸೃಷ್ಟಿಸುವ ರಾಜಕೀಯ ಹವಾ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಲಾಭದಾಯಕವಾಗಿ ಪರಿಣಮಿಸುತ್ತದೆ ಎಂಬ ವಿಶ್ವಾಸ ಪಕ್ಷದ ನಾಯಕರಲ್ಲಿರುತ್ತದೆ. ಕೊಂಚ ಮಟ್ಟಿಗೆ ಇದು ಸತ್ಯ ಎನಿಸಬಹುದು. ಆದರೆ ಎಲ್ಲ ರಾಜಕೀಯ ಪಕ್ಷಗಳೂ ತಮ್ಮದೇ ಆದ ವ್ಯಕ್ತಿ ಕೇಂದ್ರಿತ ಪ್ರಭಾವಳಿಗಳನ್ನು ಬಳಸಿ ಇದೇ ರೀತಿಯ ರೋಡ್ ಷೋ ನಡೆಸುವುದರಿಂದ, ಈ ರಾಜಕೀಯ ಹವಾ ಸದಾ ತೆಳುವಾಗಿಯೇ ಇರುತ್ತದೆ. ಸಿನಿಮಾ ತಾರೆಯರನ್ನೊಳಗೊಂಡ ರೋಡ್ ಷೋ ರಾಜಕೀಯ ಸಂದೇಶಕ್ಕಿಂತಲೂ ಹೆಚ್ಚಾಗಿ ನಾಯಕ ನಟನ ಅಭಿಮಾನಿಗಳ ಮನ ತಣಿಸುವ ಒಂದು ಪ್ರಸಂಗವಾಗಿ ಮಾರ್ಪಡುತ್ತದೆ. ರೋಡ್ ಷೋಗಳಲ್ಲಿ ಆಕರ್ಷಣೆ ಮತ್ತು ಕೇಂದ್ರ ವ್ಯಕ್ತಿಯ ಪ್ರಭಾವಳಿಯೇ ಪ್ರಧಾನವಾಗಿರುವುದರಿಂದ, ತಾತ್ವಿಕ ನೆಲೆಯಲ್ಲಿ ಜನಸಾಮಾನ್ಯರ ಮೇಲೆ ಉಂಟಾಗುವ ಪ್ರಭಾವವನ್ನು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ.
ಮತದಾನದ ಮೇಲೆ ಪ್ರಭಾವ
ಈ ಹಿನ್ನೆಲೆಯಲ್ಲಿ ನೋಡಿದಾಗ, ಚುನಾವಣೆಯ ಸಂದರ್ಭದ ರೋಡ್ ಷೋಗಳು ರಾಜಕೀಯವಾಗಿ ಪಕ್ಷಗಳಿಗೆ ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎನ್ನುವ ಜಟಿಲ ಪ್ರಶ್ನೆಗೆ ನಿಖರವಾಗಿ ಉತ್ತರಿಸಲಾಗುವುದಿಲ್ಲ. ಏಕೆಂದರೆ, ತಮ್ಮ ನೆಚ್ಚಿನ ನಾಯಕರ ʼ ದರುಶನ ಭಾಗ್ಯ ʼ ಪಡೆಯಲೆಂದೇ ಗಂಟೆಗಟ್ಟಲೆ ಬಿಸಿಲಿನ ಝಳವನ್ನೂ ಲೆಕ್ಕಿಸದೆ ನಿಲ್ಲುವ ಸಾಮಾನ್ಯ ಜನತೆಯ ನಡುವೆ ಎಲ್ಲ ಪಕ್ಷದ ಕಟ್ಟಾ ಬೆಂಬಲಿಗರಷ್ಟೇ ಅಲ್ಲದೆ ಇತರ ಸಾರ್ವಜನಿಕರೂ ನೆರೆದಿರುತ್ತಾರೆ. ರಾಜಕೀಯ ಪಕ್ಷಗಳು ದೂರದ ಊರುಗಳಿಂದ, ನೆರೆಯ ಬಡಾವಣೆಗಳಿಂದ, ಹಳ್ಳಿಗಳಿಂದ ಹಣ ತೆತ್ತು ವಾಹನಗಳ ಮೂಲಕ ಕರೆತರುವ ಜನಸ್ತೋಮ ಬಹುಮಟ್ಟಿಗೆ ರಾಜಕೀಯವಾಗಿ ನಿರಪೇಕ್ಷವಾಗಿರುತ್ತದೆ. ಹಾಗಾಗಿ ರೋಡ್ ಷೋಗಳನ್ನು ಸಂಭ್ರಮಿಸುವ ಜನಸಮೂಹವೆಲ್ಲವೂ ಒಂದು ನಿರ್ದಿಷ್ಟ ಪಕ್ಷದ ಮತದಾರರಾಗಿ ಪರಿವರ್ತಿತರಾಗುವ ಸಾಧ್ಯತೆಗಳು ಬಹುಮಟ್ಟಿಗೆ ಇರುವುದಿಲ್ಲ.
ಭಾರತದ ಸಾಮಾಜಿಕ ಸಂದರ್ಭದಲ್ಲಿ ಮತದಾರರು ಅಭ್ಯರ್ಥಿಗಳನ್ನು ಮನೆ ಬಾಗಿಲಲ್ಲೇ ಕಾಣಲು ಬಯಸುವುದೇ ಹೆಚ್ಚು. ಮುಂದಿನ ಐದು ವರ್ಷಗಳ ಕಾಲ ತಮ್ಮನ್ನು ಶಾಸನಸಭೆಯಲ್ಲಿ ಪ್ರತಿನಿಧಿಸಲಿರುವ ಮತ್ತು ತಮ್ಮ ಯೋಗಕ್ಷೇಮಕ್ಕಾಗಿ ಆಡಳಿತ ನೀತಿಗಳನ್ನು ರೂಪಿಸಲಿರುವ ಸಂಭಾವ್ಯ ಜನಪ್ರತಿನಿಧಿಗಳನ್ನು ಮುಖಾಮುಖಿ ಸ್ಪಂದಿಸುವ ತವಕ ಮತ್ತು ಇಚ್ಚೆ ಬಹುಪಾಲು ಜನರಲ್ಲಿ ಸಹಜವಾಗಿಯೇ ಇರುತ್ತದೆ. ರೋಡ್ ಷೋಗಳು ಈ ತವಕ ಮತ್ತು ಹಪಹಪಿಗಳನ್ನು ನಿರ್ಲಕ್ಷಿಸಿ ನಡೆಸಲಾಗುವ ಒಂದು ಜನಾಕರ್ಷಣೆಯ ಕಸರತ್ತು. ಇಲ್ಲಿ ಪರಸ್ಪರ ಸಂವಾದ ಮತ್ತು ಸ್ಪಂದನೆ ಇರುವುದಿಲ್ಲ. ಕೇವಲ ಕಣ್ತುಂಬಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿರುತ್ತದೆ. ನೂರಾರು ಅಡಿ ದೂರದಲ್ಲಿ, ಬೇಲಿಗಳ ನಡುವೆ ಇರುವ ವೇದಿಕೆಗಳ ಮೇಲೆ ನಿಂತು ಮಾಡುವ ಭಾಷಣಕ್ಕೂ, ರೋಡ್ ಷೋಗಳಲ್ಲಿ ಕೈಬೀಸುವ ಮೂಲ ನೀಡುವ ಸಂದೇಶಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ. ಇದರಲ್ಲಿ ಕಾಣುವ ಸಮಾನ ಅಂಶವೆಂದರೆ ಎರಡೂ ಪ್ರಕ್ರಿಯೆಗಳಲ್ಲಿ ಪರಸ್ಪರ ಸಂವಾದ, ಸಂವಹನ ಮತ್ತು ಮುಖಾಮುಖಿ ಸ್ಪಂದನೆ ಇರುವುದಿಲ್ಲ. ಎರಡೂ ಪ್ರಕ್ರಿಯೆಗಳಲ್ಲಿ ಸಾಮಾನ್ಯ ಪ್ರಜೆಗಳಿಗೆ ಆಲಿಸುವ ಅಥವಾ ನೋಡುವ ಅವಕಾಶ ಮಾತ್ರ ಲಭಿಸುತ್ತದೆ.
ತಮ್ಮ ಕೈಗೆಟುಕಬಹುದಾದ ಸಂಭಾವ್ಯ ಪ್ರತಿನಿಧಿಗಳಂತೆಯೇ ಅವರ ಗೆಲುವಿಗಾಗಿ ತಮ್ಮ ಪ್ರಭಾವಳಿಯನ್ನು ಬಳಸುವ ರಾಷ್ಟ್ರ ನಾಯಕರೂ ಸಹ ಮತದಾರರ ಮನೆಬಾಗಿಲಿಗೆ ಬರುವಂತಾದರೆ ಆಗ ಪ್ರಜಾಪ್ರಭುತ್ವ ಅರ್ಥಪೂರ್ಣವಾಗುತ್ತದೆ. ಒಮ್ಮೆ ಮನೆಬಾಗಿಲಿಗೆ ಹೋಗಿ ನಂತರ ತಮ್ಮ ಬೆಂಬಲಿಗರ ಪಡೆಗಳ ಮೂಲಕ ಕರಪತ್ರ, ಉಡುಗೊರೆ ಮತ್ತಿತರ ಭೌತಿಕ-ಆರ್ಥಿಕ ಕೊಡುಗೆಗಳನ್ನು ತಲುಪಿಸುವ ರಾಜಕೀಯ ಪಕ್ಷಗಳ ನಾಯಕರು ಈ ಜನಸ್ಪಂದನೆಯ ನೆಲೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯೋಚಿಸಿದರೆ, ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಗಳಿರುತ್ತವೆ. ಜನಸಾಮಾನ್ಯರ ನಿತ್ಯ ಜೀವನದ ಚಟುವಟಿಕೆಗಳನ್ನೂ ನಿರ್ಬಂಧಿಸಿ ಕೆಲವು ಗಂಟೆಗಳ ಸಂಭ್ರಮಾಚರಣೆಗೆ ಎಡೆ ಮಾಡಿಕೊಡುವ ರೋಡ್ ಷೋಗಳು ಮತದಾರರನ್ನು ರಂಜಿಸಬಹುದು ಆದರೆ ಮತದಾರರ ಪ್ರಜ್ಞೆಯನ್ನು ಜಾಗೃತಗೊಳಿಸುವುದಿಲ್ಲ ಎನ್ನುವುದು ವಾಸ್ತವ.
ಈ ರೀತಿಯ ಸಂಭ್ರಮಾಚರಣೆಯ ರೋಡ್ ಷೋಗಳು ಅಂತಿಮವಾಗಿ ಮತದಾರರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತವೆ, ಅಂತಿಮ ಕ್ಷಣದಲ್ಲಿ ಮತದಾರರ ಆಯ್ಕೆಯಲ್ಲಿ ಬದಲಾವಣೆಗೆ ಕಾರಣವಾಗುವುದೇ , ರೋಡ್ ಷೋ ಪೀಡಿತ ನಾಗರಿಕರಲ್ಲಿ (ಅಂದರೆ ಪ್ರತಿಷ್ಠಿತ ನಾಯಕರ ರೋಡ್ ಷೋಗಳಿಂದ ತಾತ್ಕಾಲಿಕ ತೊಂದರೆಗೊಳಗಾಗುವವರು) ಈ ರಾಜಕೀಯ ಆಟಾಟೋಪಗಳು ಯಾವ ರೀತಿಯ ಅಭಿಪ್ರಾಯವನ್ನು ಮೂಡಿಸುತ್ತವೆ ಹಾಗೂ ಅಂತಿಮ ಫಲಿತಾಂಶದ ಮೇಲೆ ರೋಡ್ ಷೋಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ ಇವೇ ಮುಂತಾದ ಅಂಶಗಳ ಬಗ್ಗೆ ರಾಜಕೀಯ ವಿಶ್ಲೇಷಕರು, ಮತದಾನ ಶಾಸ್ತ್ರಜ್ಞರು ಅಧ್ಯಯನ , ಸಂಶೋಧನೆ, ಸಮೀಕ್ಷೆ ನಡೆಸುವ ಅವಶ್ಯಕತೆ ಖಂಡಿತವಾಗಿಯಯೂ ಇದೆ. ಹಾಗೆಯೇ ರೋಡ್ ಷೋ ಎನ್ನುವ ಪ್ರಹಸನ ನಮ್ಮಲ್ಲಿ ಈಗಾಗಲೇ ಗಟ್ಟಿಯಾಗಿ ಬೇರೂರಿರುವ ವ್ಯಕ್ತಿ ಪೂಜೆ ಅಥವಾ ವ್ಯಕ್ತಿ ಆರಾಧನೆಯ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆಯೇ ಎಂಬ ವಿಚಾರವನ್ನೂ ಪರಿಶೋಧಿಸಬೇಕಿದೆ.