ಕೃಪೆ; ತಿಕ್ಕದೀರ್ (ಅನು: – ಸಿದ್ದಯ್ಯ ಸಿ)
ಬೀಜಿಂಗ್/ಬ್ರೆಸಿಲಿಯಾ, ಮೇ 2 – ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಐದು ದೇಶಗಳ ಬೆಳವಣಿಗೆಯು ಜಿ7 ದೇಶಗಳನ್ನು ಆರ್ಥಿಕವಾಗಿ ಹಿಂದೆ ತಳ್ಳಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ಜಿ7 ರಚಿಸಿಕೊಂಡಿವೆ. ಈ ಮೊದಲು ಇದರಲ್ಲಿ ರಷ್ಯಾ ಕೂಡ ಭಾಗಿಯಾಗಿ, ಅದನ್ನು ಜಿ8 ದೇಶಗಳೆಂದು ಕರೆಯಲಾಯಿತು. ರಷ್ಯಾವನ್ನು ಹೊರಹಾಕಿದಾಗಿನಿಂದ ಇತರ ದೇಶಗಳು G7 ಹೆಸರನ್ನು ಮುಂದುವರೆಸಿವೆ. ಜಾಗತಿಕ ಆರ್ಥಿಕ ವಾತಾವರಣವನ್ನು ಈ ದೇಶಗಳು ನಿರ್ಧರಿಸುತ್ತವೆ. ಈ ದೇಶಗಳ ಆರ್ಥಿಕತೆಯಲ್ಲಿ ಕಂಪನಗಳಾದರೆ, ವಿಶ್ವ ಆರ್ಥಿಕತೆಯು ಬಿಕ್ಕಟ್ಟಿಗೆ ಸಿಲುಕುತ್ತದೆ. 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ, ಅಮೆರಿಕದ ಪ್ರಾಬಲ್ಯ ಪ್ರಾರಂಭವಾಯಿತು. ಆದರೆ 2009 ರಲ್ಲಿ ನಡೆದ ಮೊದಲ BRIC ಶೃಂಗಸಭೆಯು ವಿಶ್ವ ರಾಜಕೀಯದಲ್ಲಿ ಬದಲಾವಣೆಯನ್ನು ತಂದಿತು.
ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವು. 2010 ರಲ್ಲಿ, ದಕ್ಷಿಣ ಆಫ್ರಿಕಾ ಈ ಗುಂಪನ್ನು ಸೇರಿಕೊಂಡ ನಂತರ ಬ್ರಿಕ್ಸ್ ಎಂದು ಹೆಸರಾಯಿತು. ಪರಸ್ಪರ ಸಹಕಾರ ಮತ್ತು ವೈವಿಧ್ಯಮಯ ಆರ್ಥಿಕತೆಗಳನ್ನು ಬ್ರಿಕ್ಸ್ ದೇಶಗಳ ಶಕ್ತಿಯಾಗಿ ನೋಡಲಾಗುತ್ತದೆ. ಅಲ್ಲದೆ, ಬ್ರಿಕ್ಸ್ ಸಂಘಟನೆಯ ಬೆಳವಣಿಗೆ ಮತ್ತು ಪ್ರಯೋಜನಗಳಿಂದ ಅನೇಕ ದೇಶಗಳು ಆಕರ್ಷಿತವಾಗಿವೆ. ಸೌದಿ ಅರೇಬಿಯಾ, ಅಲ್ಜೀರಿಯಾ, ಅರ್ಜೆಂಟೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಮೆಕ್ಸಿಕೊ ಬ್ರಿಕ್ಸ್ಗೆ ಸೇರಲು ಆಸಕ್ತಿ ವ್ಯಕ್ತಪಡಿಸಿವೆ. ಬ್ರಿಕ್ಸ್ ವಿಸ್ತರಣೆಯ ಕುರಿತು ಪ್ಯಾಲೇಸ್ಟಿನಿಯನ್-ಅಮೇರಿಕನ್ ಪತ್ರಕರ್ತ ರಾಮ್ಸೆ ಬರೌಡ್ ತಮ್ಮ “ಬ್ರಿಕ್ಸ್ IMF ಮತ್ತು ವಿಶ್ವ ಬ್ಯಾಂಕ್ ಅನ್ನು ನಿಭಾಯಿಸಬಹುದೇ?” ಎಂಬ ಶೀರ್ಷಿಕೆಯ ಲೇಖನದಲ್ಲಿ, ಪ್ರಸ್ತುತ ಪರಿಸ್ಥಿತಿಯು ಅಗಾಧವಾದ ಅವಕಾಶಗಳು ಮತ್ತು ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ ಎಂದು ಗಮನಿಸುತ್ತಾರೆ. ಜಾಗತಿಕ ಭೌಗೋಳಿಕ ರಾಜಕೀಯದ ಮೇಲೆ ಪ್ರಮುಖ ಪ್ರಭಾವ ಬೀರುತ್ತಿರುವ ಬ್ರಿಕ್ಸ್ ಸಂಸ್ಥೆಗೆ ಇದು ಒಂದು ಅವಕಾಶ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಅದರ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ.
ಇದನ್ನೂ ಓದಿ: ಮೇ ದಿನ; ಹಕ್ಕುಗಳನ್ನು ಉಳಿಸಿಕೊಳ್ಳಲು, ಮತ್ತಷ್ಟು ಪಡೆಯಲು ಪಣತೊಡೋಣ
ಬ್ರಿಕ್ಸ್ ನಿಂದ ನೂತನ ಅಭಿವೃದ್ಧಿ ಬ್ಯಾಂಕ್: ಇತ್ತೀಚಿನ ಹಣಕಾಸು ವಲಯದ ವರದಿಗಳ ಪ್ರಕಾರ, GDP ಯಿಂದ BRICS ವಿಶ್ವದ ಅತಿದೊಡ್ಡ ಸಂಸ್ಥೆಯಾಗಿದೆ. ಐದು ಬ್ರಿಕ್ಸ್ ದೇಶಗಳ ಒಟ್ಟು ಆಂತರಿಕ ಉತ್ಪನ್ನವು ವಿಶ್ವದ ಒಟ್ಟು ಆಂತರಿಕ ಉತ್ಪನ್ನದ 31.5 ಪ್ರತಿಶತವನ್ನು ಹೊಂದಿದೆ. ಅದೇ ಸಮಯದಲ್ಲಿ, G-7 ದೇಶಗಳ GDP 30.7 ಶೇಕಡಾ. ಹೊಸದಾಗಿ ಮತ್ತಷ್ಟು ದೇಶಗಳು ಈ ಗುಂಪಿಗೆ ಸೇರಿದರೆ, ಅದು ಶೀಘ್ರದಲ್ಲೇ ವಿಶ್ವದ ಅರ್ಧದಷ್ಟು ತಲುಪಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. IMF ಮತ್ತು ವಿಶ್ವ ಬ್ಯಾಂಕ್ ಎರಡೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಲ ನೀಡಲು ಸಾಮಾನ್ಯವಾಗಿ ಹಲವು ರೀತಿಯ ಷರತ್ತುಗಳನ್ನು ವಿಧಿಸುತ್ತವೆ. ಈ ಹಣಕಾಸು ಸಂಸ್ಥೆಗಳು ರಾಜಕೀಯ ವಿಷಯಗಳಿಗೆ ಸಾಲ ನೀಡುವಾಗ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತವೆ. ಇವುಗಳ ಬಗ್ಗೆ ಮಾತನಾಡಿದ ನಂತರ ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರಿ ಕೆಲಸಗಳನ್ನು ಖಾಸಗೀಕರಣಗೊಳಿಸಬೇಕು ಎಂದು ಷರತ್ತುಗಳನ್ನು ಹಾಕುತ್ತವೆ. ಖಾಸಗೀಕರಣಗೊಳಿಸುವ ದೇಶಗಳಿಗೆ ಸಾಲ ನೀಡುವುದನ್ನು ನೋಡಿದರೆ, ಬಾಯಿ ಮಾತಿಗಷ್ಟೆ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಎಲ್ಲವೂ.
ಈ ಸಂದರ್ಭದಲ್ಲಿ ಬ್ರಿಕ್ಸ್ ರಾಷ್ಟ್ರಗಳು ಹೊಸದಾಗಿ ರಚಿಸಿರುವ ನೂತನ ಅಭಿವೃದ್ಧಿ ಬ್ಯಾಂಕ್ ಎಲ್ಲರ ಗಮನ ಸೆಳೆದಿದೆ. ಅವರು 5 ಶತಕೋಟಿ USD ಹೂಡಿಕೆಯೊಂದಿಗೆ ಆ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದಾರೆ. ಬ್ರೆಜಿಲ್ನ ಮಾಜಿ ಅಧ್ಯಕ್ಷೆ ದಿಲ್ಮಾ ರೌಸೆಫ್ ಅವರನ್ನು ಬ್ಯಾಂಕಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಸಾಲಕ್ಕಾಗಿ ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿರುವ ದೇಶಗಳಿಗೆ ಬ್ಯಾಂಕ್ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.