ಬೆಂಗಳೂರು – ರಾಜ್ಯದಲ್ಲಿ ಅನಧಿಕೃತವಾಗಿ ನಡೆಸುತ್ತಿರುವಂತಹ ಶಾಲೆಗಳ ವಿರುದ್ಧ ಕ್ರಮವಹಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ 1,600 ಅಧಿಕೃತ ಶಾಲೆಗಳು ಇರುವ ವಿಚಾರ ದೃಢಪಟ್ಟಿದೆ. ಆದರೆ, ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನಲೆ ಆ ಶಾಲೆಗಳ ಪಟ್ಟಿ ಪ್ರಕಟಿಸುವ ನಿರ್ಧಾರದಿಂದ ಶಾಲಾ ಶಿಕ್ಷಣ ಇಲಾಖೆ ಹಿಂದೆ ಸರಿದಿದೆ.
ಹೀಗಾಗಿ ಮಕ್ಕಳನ್ನು ಶಾಲೆಗೆ ದಾಖಲಿಸುವ ಸಮಯದಲ್ಲಿ ಶಾಲೆಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೆ ಪಾಲಕರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಒಟ್ಟಾರೆ 17,269 ಖಾಸಗಿ(ರಾಜ್ಯ ಪಠ್ಯಕ್ರಮ), 704 ಸಿಬಿಎಸ್ಇ, 300 ಐಸಿಎಸ್ಇ ಮತ್ತು 9 ಅಂತರಾಷ್ಟ್ರೀಯ ಶಾಲೆಗಳಿವೆ. ಈ ಪೈಕಿ 1,600 ಕ್ಕೂ ಹೆಚ್ಚಿನ ಶಾಲೆಗಳು ಅನಧಿಕೃತವಾಗಿವೆ. ಮಾನ್ಯತೆ ನವೀಕರಣ ಮಾಡಿಕೊಳ್ಳುವುದು, ನೋಂದಣಿಯಿಲ್ಲದೆ ನಡೆಸುತ್ತಿರುವುದು, ರಾಜ್ಯ ಪಠ್ಯಕ್ರಮ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧನೆ ಸೇರಿ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಶಾಲೆಗಳ ಪಟ್ಟಿ ಮಾಡಲಾಗಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಅಥವಾ ಪರೀಕ್ಷಾ ಸಮಯದಲ್ಲಿ ಅನಧಿಕೃತ ಶಾಲೆಗಳನ್ನು ಪ್ರಕಟಿಸಿದರೆ ಸಂಬಂಧಪಟ್ಟ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ತೊಂದರೆಯಾಗುಯತ್ತದೆ. ಈ ಕಾರಣದಿಂದಾಗಿ 2022-23ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ಣಗೊಂಡ ಬಳಿಕ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿತ್ತು. ಅದರಂತೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಇದನ್ನೂ ಓದಿ : ವಿಧಾನಸಭೆ ಚುನಾವಣೆ : ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಪಾಲಿಸಬೇಕಾದ ನಿಯಮಗಳೇನು ?
ಇನ್ನು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಲು ಅಸಾಧ್ಯ. ಅನಧಿಕೃತ ಶಾಳೆಗಳ ಪಟ್ಟಿಯನ್ನು ಪ್ರಕಟಿಸಬೇಕೋ-ಬೇಡವೋ ಎಂಬುದನ್ನು ಮುಂದಿನ ಸರ್ಕಾರ ಬಂದ ನಂತರ ನಿರ್ಧಾರವಾಗಲಿದೆ. ಆದರೆ ಅಲ್ಲಿಯವರೆಗೂ ಪ್ರಕಟಣೆಯನ್ನು ತಡೆಹಿಡಿಯುವದರಿಂದ ಪಾಲಕರಿಗೆ ತೊಂದರೆಯಾಗುವ ಸಾಧ್ಯತೆಗಳಿವೆ. ಪಾಲಕರಿಗೆ ಅನಧಿಕೃತ ಶಾಲೆಗಳ ಅಗತ್ಯ ಮಾಹಿತಿ ಸಿಗದೆ ಸಮಸ್ಯೆಯಾಗಲಿದೆ. ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಶಾಲೆಯು ರಾಜ್ಯ/ ಕೇಂದ್ರ ಪಠ್ಯಕ್ರಮಕ್ಕೆ ಅನುಗುಣವಾಗಿ ನೋಂದಣಿ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ಖಾತ್ರಿಪಡಿಸಿಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.
ಒಂದು ವೇಳೆ ಶಾಲೆ ನೋಂದಣಿಯಾಗಿದ್ದರೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ನವೀಕರಣ ಮಾಡಲಾಗಿದೆಯೇ ಹಾಗೂ ಅನುಮತಿ ಪಡೆದಿರುವ ವಿಷಯಗಳನ್ನು ಮಾತ್ರ ಬೋಧನೆ ಮಾಡುತ್ತಿದೆಯೇ ಅಥವಾ ಅನಗತ್ಯ ವಿಷಯಗಳನ್ನು ಸೇರ್ಪಡೆ ಮಾಡಿದೆಯೇ ಎಂಬ ಮಾಹಿತಿ ತಿಳಿದುಕೊಳ್ಳುವಂತೆ ಸೂಚಿಸಿದೆ. ಪ್ರವೇಶ ಶುಲ್ಕವನ್ನು ಶಾಲಾ ಸೂಚನಾ ಫಲಕ ಹಾಗೂ ವೆಬ್ಸೈಟ್ನಲ್ಲಿ ಪ್ರಕಟಿಸಿದೆಯೇ, ಒಂದು ವೇಳೆ ಪ್ರಕಟಿಸಿದಿದ್ದರೆ ಏಕೆ ಪ್ರಕಟಿಸಿಲ್ಲ ಎಂಬುದನ್ನು ಕೇಳಿ ತಿಳಿದುಕೊಳ್ಳಿ ಎಂದು ಹೇಳಿದೆ.