ಕರ್ನಾಟಕದ ಆರ್ಥಿಕತೆ: ಜನಗಳ ಹಕ್ಕೊತ್ತಾಯಗಳೇನು, ಆಶಯಗಳೇನು?

ಪ್ರೊ. ಟಿ.ಆರ್.ಚಂದ್ರಶೇಖರ್

ಆರ್ಥಿಕ ರಂಗದಲ್ಲಿ ಯಾವುದು ಆದ್ಯತೆ, ಯಾವದು ಸರ್ಕಾರದ ಕೆಲಸ – ಯಾವುದಲ್ಲ ಎಂಬುದರ ಪರಿಜ್ಞಾನವೇ ಸರ್ಕಾರಕ್ಕೆ ಇದಂತೆ ಕಾಣುವುದಿಲ್ಲ!. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಆರ್ಥಿಕತೆ ಕುರಿತಂತೆ ಜನಗಳ ಹಕ್ಕೊತ್ತಾಯಗಳೇನು, ಆಶಯಗಳು ಏನಾಗಿರಬೇಕು ಎಂಬುದನ್ನು ಯೋಚಿಸುವುದು ಅಗತ್ಯ ಎಂದಿರುವ ಅರ್ಥಶಾಸ್ತಜ್ಞ ಪ್ರೊ. ಟಿ.ಆರ್.ಚಂದ್ರಶೇಖರ್ ಇಲ್ಲಿ ಅಂತಹ ಒಂದು ಆರ್ಥಿಕತೆ ಕುರಿತಾದ ಪ್ರಣಾಳಿಕೆಯನ್ನು ರೂಪಿಸುವ ಪ್ರಯತ್ನ ಮಾಡಿದ್ದಾರೆ:

ಕರ್ನಾಟಕ ಆರ್ಥಿಕತೆಯ ಆರೋಗ್ಯ ಹದಗೆಟ್ಟಿದೆ. ಬಡತನ, ನಿರುದ್ಯೋಗ, ಹಸಿವು, ದುಸ್ಥಿತಿ, ಅಸಮಾನತೆ, ಶೋಷಣೆ ಸಮಾಜವನ್ನು ಕಾಡುತ್ತಿವೆ. ಈಗಿರುವ ಡಬಲ್ ಎಂಜಿನ್ ಸರ್ಕಾರ ರೆಟರಿಕ್‌ನಲ್ಲಿಯೇ ಬದುಕು ದೂಡುತ್ತಿದೆ. ರಾಜ್ಯದ ಆರ್ಥಿಕತೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಇದು ಮರೆಮಾಚುತ್ತಿದೆ. ಉದಾ: ಕರ್ನಾಟಕ ಸರ್ಕಾರವು ಪ್ರಕಟಿಸುವ ಮಾನವ ಅಭಿವೃದ್ಧಿ ವರದಿಗಳಲ್ಲಿ ದಲಿತರ ಹಾಗೂ ಆದಿವಾಸಿಗಳ ಸ್ಥಿತಿಗತಿಗಳ ಬಗ್ಗೆ ಹಾಗೂ ಪ್ರಾದೇಶಿಕ ಅಸಮಾನತೆಯ ಬಗ್ಗೆ ಪ್ರತ್ಯೇಕ ಅಧ್ಯಾಯಗಳಿರುತ್ತಿದ್ದವು. ಈಗ ಪ್ರಕಟವಾಗಿರುವ ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ 2022’ರಲ್ಲಿ ಇವು ಮಾಯವಾಗಿವೆ. ಸಾಂದರ್ಭಿಕವಾಗಿ ಅವುಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಇದೇ ರೀತಿಯಲ್ಲಿ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿಯೂ ಪ್ರಾದೇಶಿಕ ಅಸಮಾನತೆ ಅಧ್ಯಾಯ ಮಾಯವಾಗಿದೆ ಮತ್ತು ದಲಿತರ ಮತ್ತು ಆದಿವಾಸಿಗಳ ಬಗೆಗಿನ ಚರ್ಚೆಯನ್ನು ಕೆಲವು ಪುಟಗಳಿಗೆ ಮಿತಿಗೊಳಿಸಲಾಗಿದೆ. ಹಾಗಾದರೆ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಿದೆಯೇ? ದಲಿತರ ಮತ್ತು ಆದಿವಾಸಿಗಳ ಬದುಕು ಸಾಮಾನ್ಯ ಜನವರ್ಗದ ಮಟ್ಟಕ್ಕೆ ಉತ್ತಮಗೊಂಡಿದೆಯೇ?

ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿ ಸರ್ಕಾರ ಬ್ಯುಸಿಯಾಗಿದೆ. ಇದು ಅಭಿವೃದ್ಧಿ ಆದ್ಯತೆಯೇ? ಆರು ಪಥಗಳ ಎಕ್ಸಪ್ರೆಸ್ ಹೈವೇಗಳು ನಮಗೆ ಆದ್ಯತೆಯೇ? ಒಕ್ಕೂಟ ಸರ್ಕಾರ ಪ್ರಕಟಿಸಿರುವ ಮಲ್ಟಿಡೈಮೆಂಷನಲ್ ಪಾವರ್ಟಿ ಇಂಡೆಕ್ಸ್ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿನ ಬಹುಮುಖಿ ಬಡವರ ಪ್ರಮಾಣ ಶೇ. 42, ರಾಯಚೂರಿನಲ್ಲಿ ಇದು ಶೇ. 32. ಅಪೌಷ್ಟಿಕತೆಯ ಪ್ರಮಾಣ ರಾಜ್ಯದಲ್ಲಿ ಏರಿಕೆಯಾಗುತ್ತಿದೆ. ನಿರುದ್ಯೋಗ ಪ್ರಮಾಣ ರಾಜ್ಯದಲ್ಲಿ ಕಡಿಮೆಯಿದೆ ಎಂದು ಸರ್ಕಾರ ಬೀಗುತ್ತಿದೆ. ನಿಜ, ಒಟ್ಟು ನಿರುದ್ಯೋಗ ಕೆಳಮಟ್ಟದಲ್ಲಿದೆ(ಶೇ.4.4) ಆದರೆ 15 ರಿಂದ 29 ವರ್ಷಗಳ ವಯೋಮಾನದ ಯುವಕರು-ಯುವತಿಯರಲ್ಲಿ ಇದು ಅನುಕ್ರಮವಾಗಿ ಶೇ. 14.3 ಮತ್ತು ಶೇ. 22.1 ರಷ್ಟಿದೆ. ಇದಾವುದರ ಬಗ್ಗೆಯೂ ಯೋಚಿಸದೆ ರಾಮದೇವರ ಗುಡಿ ಬಗ್ಗೆ, ಅಂಜನಾದ್ರಿ ಬೆಟ್ಟದ ಬಗ್ಗೆ, ಕಾಶಿ ಯಾತ್ರೆಯ ಬಗ್ಗೆ ಸರ್ಕಾರ ಮಾತನಾಡುತ್ತಿದೆ. ಯಾವುದು ಆದ್ಯತೆ, ಯಾವದು ಸರ್ಕಾರದ ಕೆಲಸ – ಯಾವುದಲ್ಲ ಎಂಬುದರ ಪರಿಜ್ಞಾನವೇ ಸರ್ಕಾರಕ್ಕೆ ಇದಂತೆ ಕಾಣುವುದಿಲ್ಲ!. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಆರ್ಥಿಕತೆ ಕುರಿತಂತೆ ನಮ್ಮ ಪ್ರಣಾಳಿಕೆ, ನಮ್ಮ ಹಕ್ಕೊತ್ತಾಯಗಳು, ನಮ್ಮ ಆಶಯಗಳು ಏನಾಗಿರಬೇಕು ಎಂಬುದನ್ನು ಯೋಚಿಸುವುದು ಅಗತ್ಯ. ಇಲ್ಲಿ ಅಂತಹ ಒಂದು ಪ್ರಣಾಳಿಕೆಯನ್ನು ರೂಪಿಸುವ ಪ್ರಯತ್ನ ಮಾಡಲಾಗಿದೆ.

(1). ಮಹಿಳೆಯರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕ ವರ್ಗ, ಕೂಲಿಕಾರರು ಸೇರಿದಂತೆ ‘ಜನರು’ ಅಭಿವೃದ್ಧಿ ಅಭಿಯಾನದ ಕೇಂದ್ರದಲ್ಲಿರಬೇಕು. ನಮ್ಮ ರಾಜ್ಯದಲ್ಲಿ 15 ರಿಂದ 49 ವರ್ಷ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನಿಮಿಯ(ರಕ್ತಹೀನತೆ) 2015-16ರಲ್ಲಿ ಶೇ.44.8ರಷ್ಟಿದ್ದುದು 2019-20ರಲ್ಲಿ ಶೇ.47.8ಕ್ಕೇರಿದೆ (ಮೂಲ: ಎನ್‌.ಎಫ್‌.ಎಚ್‌.ಎಸ್) 5). ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.14 ರಷ್ಟಿರುವ ಅಲ್ಪಸಂಖ್ಯಾತರು ಜನಾಂಗೀಯ ದ್ವೇಷಕ್ಕೆ, ತಾರತಮ್ಯಕ್ಕೆ, ದೈಹಿಕ ಆಕ್ರಮಣಕ್ಕೆ ಒಳಗಾಗುತ್ತಿದ್ದಾರೆ. ಅಭದ್ರತೆಯು ಅವರನ್ನು ಕಾಡುತ್ತಿದೆ. ರೈತರು ತಮ್ಮ ಉಳುವಿಗಾಗಿ ಹೋರಾಟ ನಡೆಸುತ್ತಿದ್ದರೆ ಸರ್ಕಾರವು ಕೃಷಿಯೇತರರು ಅಲ್ಲಿ ಬಂಡವಾಳ ಹೂಡುವುದಕ್ಕೆ ಅವಕಾಶ ನೀಡುವ ಭೂಸುಧಾರಣೆ ಕಾಯಿದೆ 2020 ಜಾರಿಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮನ್‌ರೇಗಾ ಒಂದು ರೀತಿಯಲ್ಲಿ ಭೂರಹಿತ ಕೃಷಿ ಕೂಲಿಕಾರರಿಗೆ ಅಮೃತಪಾನವಾಗಿದೆ. ವಲಸೆಯ ಹಿನ್ನೆಲೆಯಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ನಗರ ಪ್ರದೇಶದಲ್ಲಿಯೂ ಹಮ್ಮಿಕೊಳ್ಳುವುದು ತೀರಾ ಅಗತ್ಯವಾಗಿದೆ. ಕರ್ನಾಟಕದ ಆರ್ಥಿಕತೆಯು ಎನ್ ಆರ್. ನಾರಾಯಣಮೂರ್ತಿ ಅಥವಾ ಕಿರಣ್ ಮಜುಂದಾರ್ ಶಾ ಅಥವಾ ಅಂಬಾನಿ, ಆದಾನಿ ಮುಂತಾದವರ ಶ್ರಮದ ಮೇಲೆ ನಿಂತಿಲ್ಲ. ಸರಿಸುಮಾರು 70 ಲಕ್ಷದಷ್ಟಿರುವ ಭೂರಹಿತ ಕೃಷಿ ಕೂಲಿಕಾರ್ಮಿಕರು ಬೆವರು, ಕಣ್ಣೀರು, ರಕ್ತ ಹರಿಸಿ ನಡೆಸಿರುವ ದುಡಿಮೆಯ ಮೇಲೆ ನಿಂತಿದೆ. ಇವರು ನಿಜವಾಗಿ ಆರ್ಥಿಕತೆಯಲ್ಲಿ ‘ವೆಲ್ಥ್ ಕ್ರಿಯೇಟರ್ಸ್’. ಆದರೆ ನಮ್ಮ ಪ್ರಧಾನಮಂತ್ರಿ ಬಂಡವಳಿಗರು ‘ವೆಲ್ಥ್ ಕ್ರಿಯೇಟರ್ಸ್’ ಎಂದು ಹೇಳುತ್ತಿದ್ದಾರೆ. ಈ ಧೋರಣೆ ಕರ್ನಾಟಕಕ್ಕೆ ಬೇಡ.

ನಮ್ಮ ಒತ್ತಾಯ: ಕಾರ್ಮಿಕರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರು  ಅಭಿವೃದ್ಧಿಯ ಕೇಂದ್ರದಲ್ಲಿರಬೇಕು.

(2). ಶಿಕ್ಷಣ ಕ್ಷೇತ್ರವನ್ನು, ಮುಖ್ಯವಾಗಿ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರ ಹಾಳು ಮಾಡುತ್ತಿದೆ. ಅನವಶ್ಯಕವಾಗಿ ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಪಠ್ಯ ಪುಸ್ತಕಗಳ ಮರುಪರಿಷ್ಕರಣೆ ಕೊವಿಡ್ ಪೆಂಡಮಿಕ್ ನಂತರದ ವರ್ಷದ ಮಧ್ಯದಲ್ಲಿ ಬೇಕಾಗಿತ್ತಾ? ದಲಿತರ ಬರಹಗಳನ್ನು ಕಿತ್ತುಹಾಕುವುದರ ಮೂಲಕ, ಬಸವಣ್ಣನ ಜೀವನಚಿತ್ರವನ್ನು ವಿಕೃತಗೊಳಿಸುವುದರ ಮೂಲಕ, ಯಜ್ಞ-ಯಾಗಗಳ ಅರ್ಥಹೀನತೆಯ ಬಗ್ಗೆ ಬರಹಗಳನ್ನು ಬದಲಾಯಿಸಿ ರಾಜ್ಯದ 105 ಲಕ್ಷ ಮಕ್ಕಳಿಗೆ ಏನು ಸಂದೇಶ ನೀವು ಕೊಡುತ್ತಿದ್ದೀರಿ? ಹಿಜಾಬ್ ಗೊಂದಲ ಸೃಷ್ಟಿಸಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಳುನೀರು ಬಿಟ್ಟಿರಿ!. ಇದೆಲ್ಲ ಬೇಕಿತ್ತಾ?  ಪ್ರಾಥಮಿಕ ಶಿಕ್ಷಣ ಕ್ಷೇತ್ರವು ಹಳ್ಳಹಿಡಿದಿದೆ. ಸರ್ಕಾರ ಉನ್ನತ ಶಿಕ್ಷಣದಲ್ಲಿ ಖಾಸಗಿ ವಿವಿಗಳಿಗೆ ಅವಕಾಶ ನೀಡಿ ಅದು ನಾಡಿನ ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರಿಗೆ, ಒಬಿಸಿಗಳಿಗೆ ದೊರೆಯದಂತೆ ಮಾಡುತ್ತಿದ್ದೀರಿ.

ನಮ್ಮ ಒತ್ತಾಯ: ಶಿಕ್ಷಣವು ಒಂದು ಅಗತ್ಯ ಸೇವೆ. ಆದ್ದರಿಂದ ಇದು, ಕನಿಷ್ಟ ಪ್ರಾಥಮಿಕ ಶಿಕ್ಷಣವು ಸಾರ್ವಜನಿಕ ವಲಯದಲ್ಲಿರಬೇಕು. ರಾಜ್ಯದಲ್ಲಿ 2023-24ರಲ್ಲಿ ಜಿಎಸ್ಡಿಪಿಯ(ರೂ.23.34 ಲಕ್ಷ ಕೋಟಿ) ಶೇ.1.43ರಷ್ಟನ್ನು (ರೂ. 0.34 ಲಕ್ಷ ಕೋಟಿ)ಶಿಕ್ಷಣಕ್ಕೆ ನೀಡಲಾಗುತ್ತಿದೆ. ಇದನ್ನು ಶೇ. 5 ಕ್ಕೇರಿಸಬೇಕು. ಶಿಕ್ಷಣದ ಬಗ್ಗೆ ಆಳವಾದ ಚಿಂತನೆಅಧ್ಯಯನವಿಲ್ಲದ ಕೋಮುವಾದಿಯೊಬ್ಬನನ್ನು ಐಐಟಿ ಪ್ರಾಧ್ಯಾಪಕ ಎಂದು ಸುಳ್ಳು ಹೇಳಿ ಪಠ್ಯಕ್ರಮಗಳನ್ನು ಬದಲಾಯಿಸುವ ಕ್ರಮಗಳನ್ನು ಸರ್ಕಾರ ಕೈಬಿಡಬೇಕು.

(3). ನಮ್ಮ ರಾಜ್ಯದಲ್ಲಿ ಆರೋಗ್ಯ ಸೇವೆಯು ಅತ್ಯಂತ ಕೆಳಮಟ್ಟದಲ್ಲಿದೆ. ಸರ್ಕಾರವು ಬೆಂಗಳೂರೇ ಕರ್ನಾಟಕವೆಂದು ಭಾವಿಸಿ ಅಲ್ಲಿಯೇ ಎಲ್ಲ ಆರೋಗ್ಯ ಸೇವೆಯ ಸೌಲಭ್ಯಗಳನ್ನು ಕೇಂದ್ರೀಕರಿಸುತ್ತಿದೆ.  ಇದನ್ನು ಬದಲಾಯಿಸಬೇಕು. ಯಾದಗಿರಿ, ರಾಯಚೂರು, ಚಾಮರಾಜನಗರ, ಚಿತ್ರದುರ್ಗ ಮುಂತಾದ ಹಿಂದುಳಿದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಯ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿ ಹಸಿವಿನ ಸಮಸ್ಯೆಯಿದೆ. ಉದಾ: ಎನ್‌ಎಫ್‌ಎಚ್‌ಎಸ್ 5(2019-20)ದ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿನ 6 – 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಶೇ. 76 ರಷ್ಟು ಮಕ್ಕಳು ಅನೀಮಿಯ ಎದುರಿಸುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಇದರ ಪ್ರಮಾಣ 2015-16ರಲ್ಲಿ ಶೇ. 60.9 ರಷ್ಟಿದ್ದುದು 2019-20ರಲ್ಲಿ ಇದು ಶೇ. 65.5ಕ್ಕೇರಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಕುಸಿತವು ಮೋದಿ ಪರ್ವದಲ್ಲಿ ಉಂಟಾಗಿದೆ. ರಾಜ್ಯದ 2023-24ರ ಬಜೆಟ್ಟಿನಲ್ಲಿ ಆರೋಗ್ಯಕ್ಕೆ ನೀಡಿರುವ ಅನುದಾನ ರೂ.14552.22 ಕೋಟಿ. ಇದು ರಾಜ್ಯದ 2023-24ರ ಜಿಎಸ್‌ಡಿಪಿಯ ಶೇ. 0.6 ರಷ್ಟಾಗುತ್ತದೆ.

ನಮ್ಮ ಒತ್ತಾಯ: ಕನಿಷ್ಟ ಜಿಎಸ್ಡಿಪಿಯ ಶೇ. 3 ರಷ್ಟನ್ನು ಆರೋಗ್ಯ ಸೇವೆಗೆ ನೀಡಬೇಕುಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರಗಳನ್ನು ಬಲಪಡಿಸಬೇಕು.

(4). ಕೃಷಿ ಎಂದರೆ ನೀರಾವರಿ ಮಾತ್ರವಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಒಟ್ಟು ಸಾಗುವಳಿ ಪ್ರದೇಶದಲ್ಲಿ ಶೇ. 60 ರಷ್ಟು ಒಣ ಭೂಮಿ ಬೇಸಾಯವಾಗಿದೆ. ಆದರೆ ಸರ್ಕಾರವು 2023-24ರಲ್ಲಿ ಒಟ್ಟು ಬಜೆಟ್ ವೆಚ್ಚದಲ್ಲಿ ಶೇ. 7.39ರಷ್ಟನ್ನು ನೀರಾವರಿಗೆ ನೀಡಲಾಗಿದೆ. ನೀರಾವರಿಯು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

ಆದೃರಿಂದ ಸರ್ಕಾರವು ಅತಿಸಣ್ಣ ಮತ್ತು ಸಣ್ಣ ರೈತರು ಅಧಿಕವಾಗಿ ಅವಲಂಬಿಸಿರುವ ಒಣ ಬೇಸಾಯಕ್ಕೆ ಹೆಚ್ಚುನ ಅನುದಾನ ನೀಡಬೇಕು.

ರಾಜ್ಯದ ಒಟ್ಟು ಭೂಹಿಡುವಳಿಗಳಲ್ಲಿ ಶೇ. 85 ರಷ್ಟು ಅತಿಸಣ್ಣ ಮತ್ತು ಸಣ್ಣ ಭೂಹಿಡುವಳಿಗಳಿವೆ. ನಾಡಿನ ರೈತರು ತಾವು ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸಬೇಕೆಂದು ಚಳುವಳಿ ಮಾಡುತ್ತಿದ್ದಾರೆ. ಕಾರ್ಖಾನೆಗಳಲ್ಲಿ ತಯಾರಾಗುವ ಬ್ರಶ್, ಟೂತ್ ಪೇಸ್ಟಿಗೆ ಎಂಆರ್‌ಪಿ ಇರುತ್ತದೆ. ನಾಡಿನ 140 ಕೋಟಿ ಜನಸಂಖ್ಯೆಗೆ ಕೂಳು ನೀಡುವ ರೈತರ ಉತ್ಪನ್ನಗಳಿಗೆ ಎಂಆರ್‌ಪಿ ಏಕಿಲ್ಲ?

ಸರ್ಕಾರವು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಾಯಿದೆಯ ಮೂಲಕ ಬಲಪಡಿಸಬೇಕು.

(5). ಈಗಾಗಲೆ ಹೇಳಿರುವಂತೆ ರಾಜ್ಯದಲ್ಲಿ ಯುವಕರು-ಯುವತಿಯರಲ್ಲಿ ನಿರುದ್ಯೋಗವು ಅತ್ಯಧಿಕ ಮಟ್ಟದಲ್ಲಿದೆ. ಕರ್ನಾಟಕವು ಅತ್ಯಧಿಕ ಪ್ರಮಾಣದಲ್ಲಿ ಯುವ ಶಕ್ತಿಯನ್ನು ಪಡೆದಿದೆ. ಇದನ್ನು ತಜ್ಞರು ‘ಜನಸಂಖ್ಯಾ ಲಾಭಾಂಶ’(ಡಿವಿಡೆAಡ್) ಎನ್ನುತ್ತಾರೆ.  ಈ ಲಾಭಾಂಶದ ಅನುಕೂಲವನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಬೇಕೆಂದರೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ಜನಸಂಖ್ಯಾ ಲಾಭಾಂಶ ಎನ್ನುವುದು ಜನಸಂಖ್ಯಾ ವಿಪತ್ತಾಗುವ ಸಾಧ್ಯತೆಯಿದೆ. ನಮ್ಮ ಸರ್ಕಾರಗಳು ಉದ್ಯೋಗ ಕಾರ್ಯಕ್ರಮಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿವೆ.

ನಮ್ಮ ಒತ್ತಾಯ: ಸರ್ಕಾರವು ಉದ್ಯೋಗ ಕಾರ್ಯಕ್ರಮಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಖಾಸಗಿ ವಲಯದಿಂದ ಉದ್ಯೋಗಗಳ ಸೃಷ್ಟಿಯಾಗುತ್ತಿಲ್ಲ. ಇಲ್ಲಿ ಉದ್ಯೋಗ ಬೆಳವಣಿಗೆಯ ಸ್ಥಿತಿಸ್ಥಾಪಕತ್ವವು ಅತ್ಯಂತ ಕೆಳಮಟ್ಟದಲ್ಲಿದೆ(0.22). ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮುಚ್ಚುವುದನ್ನುಮಾರಾಟ ಮಾಡುವುದನ್ನು ಬಿಟ್ಟು ಅವುಗಳನ್ನು ಬಲಪಡಿಸಬೇಕು.

(6). ಅಭಿವೃದ್ಧಿಗೆ ಮಹಿಳಾ ರೂಪವನ್ನು ಮತ್ತು ದಲಿತ-ಆದಿವಾಸಿ ಮುಖವನ್ನು ನೀಡಬೇಕು. ಅಭಿವೃದ್ಧಿಯು ಲಾಗಾಯ್ತಿನಿಂದ  ಪುರುಷ ಪ್ರಧಾನವಾಗಿಯೇ ನಡೆದಿದೆ. ಪ್ರಜ್ಞಾಪೂರ್ವಕವಾಗಿ ಇದನ್ನು ಮಹಿಳಾ ಸ್ಪಂದಿಯನ್ನಾಗಿ ಮಾಡಬೇಕು. ಇದೇ ರೀತಿಯಲ್ಲಿ ದಲಿತ-ಆದಿವಾಸಿಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು. ರಾಜ್ಯದಲ್ಲಿನ ಒಟ್ಟು ದುಡಿಮೆಗಾರರಲ್ಲಿ(278.72 ಲಕ್ಷ) ಭೂರಹಿತರ ಪ್ರಮಾಣ ಶೇ. 25. ಆದರೆ ದಲಿತರು ಮತ್ತು ಆದಿವಾಸಿಗಳಲ್ಲಿ ಇವರ ಪ್ರಮಾಣ ಶೇ. 40ಕ್ಕಿಂತ ಅಧಿಕವಾಗಿದೆ.

ಸಕಾರಾತ್ಮಕ ತಾರತಮ್ಯ ನೀತಿಯ ಮೂಲಕ ಚಾರಿತ್ರಿಕ ಪ್ರತ್ಯೇಕೀಕರಣವನ್ನು ಎದುರಿಸುತ್ತಿರುವ  ಜನವರ್ಗವು ಅಭಿವೃದ್ಧಿಯ ತಿರುಳಾಗಬೇಕು.

(7). ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಮಗೆ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿನ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರನ್ನು ಒದಗಿಸುವುದು ಸಾಧ್ಯವಾಗಿಲ್ಲ. ಇಂದಿಗೂ ರಾಜ್ಯದಲ್ಲಿ ಶೇ. 40 ರಿಂದ 50 ರಷ್ಟು ಜನರು ವಸತಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯಗಳನ್ನು ವ್ಯವಸ್ಥಿತವಾಗಿ ನೀಡುವುದು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಎಲ್ಲ ಪ್ರೌಢಶಾಲೆಗಳಲ್ಲಿ ಬಾಲಕಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ನೀಡಬೇಕು.

ಕೊನೆಯದಾಗಿ ಅಭಿವೃದ್ಧಿ ಎಂದರೆ ಬಂಡವಾಳ ಹೂಡಿಕೆ ಮಾತ್ರವಲ್ಲ. ಎಕ್ಸ್ಪ್ರೆಸ್ ಹೈವೇಗಳು ಮಾತ್ರವೇ ಅಥವಾ ಇನ್‌ಫ್ರಾಸ್ಟçಕ್ಚರ್ ಎನ್ನುವುದೇ ಅಭಿವೃದ್ಧಿಯಲ್ಲ. ಅಭಿವೃದ್ದಿ ಎನ್ನುವುದು ಜನರ ಸಮೃದ್ಧ, ಸಮಾನ, ನ್ಯಾಯಯುತ ಬದುಕಿಗೆ ಸಂಬAಧಿಸಿದ ಸಂಗತಿ. ಅಸಮಾನತೆಯು ದೈತ್ಯಾಕಾರವಾಗಿ ಬೆಳೆಯುತ್ತಿರುವುದನ್ನು ಆಕ್ಸ್ಫಾಮ್ ವರದಿಗಳು ಬಿಚ್ಚಿ ತೋರಿಸುತ್ತಿವೆ. ನಮ್ಮ ಸಂವಿಧಾನದ ಅನುಚ್ಛೇದ 38(2) ರಲ್ಲಿ ವರಮಾನದ ಕೇಂದ್ರೀಕರಣವನ್ನು ತಡೆಯಬೇಕು, ವರಮಾನ ಅಸಮಾನತೆಯನ್ನು ತಗ್ಗಿಸಬೇಕು ಎಂಬ ನಿರ್ದೇಶನವಿದೆ. ಇದನ್ನು ಇಂದು ಸರ್ಕಾರ ಪಾಲಿಸುತ್ತಿಲ್ಲ. ಅಭಿವೃದ್ಧಿಯಲ್ಲಿ ವರಮಾನದ ಏರಿಕೆ ಎಷ್ಟು ಮುಖ್ಯವೋ ವರಮಾನದ ಹಂಚಿಕೆಯೂ ಅಷ್ಟೇ, ಅಥವಾ ಅದಕ್ಕಿಂತ ಒಂದು ತೂಕ ಹೆಚ್ಚು ಮುಖ್ಯ.

ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನಮ್ಮ ಪ್ರಣಾಳಿಕೆಯಲ್ಲಿನ ಅಂಶಗಳಿಗೆ ಗಮನ ನೀಡಬೇಕು ಎಂದು ‘ಕರ್ನಾಟಕ ಆರ್ಥಿಕತೆ: ನಮ್ಮ ಪ್ರಣಾಳಿಕೆ’ ಮೂಲಕ ಒತ್ತಾಯಿಸುತ್ತೇವೆ.

 

Donate Janashakthi Media

Leave a Reply

Your email address will not be published. Required fields are marked *