ಬೆಂಗಳೂರು : ಕೇಂದ್ರ ಹೊರಡಿಸಿರುವ ಸರಕಾರ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು, 2023, ಆನ್ಲೈನ್ನಲ್ಲಿ ಮಾಹಿತಿ ಮತ್ತು ಅವುಗಳನ್ನು ತೆಗೆದುಹಾಕುವ ಸರ್ಕಾರದ ಅಧಿಕಾರಗಳ ಬಗ್ಗೆ ಹೇಳುತ್ತದೆ. ಆದರೆ, ವಾಸ್ತವವಾಗಿ ಸರಕಾರ ಈ ಹೊಸ ನಿಯಮಗಳ ಮೂಲಕ “ವಾಸ್ತವ ಸಂಗತಿ ಪರೀಕ್ಷಣಾ ಘಟಕ’( Facr-checking unit)ವನ್ನು ರಚಿಸುವ ಅಧಿಕಾರವನ್ನು ಪಡೆದುಕೊಂಡಿದೆ. ಮತ್ತು ಈ ಘಟಕಕ್ಕೆ ಕೇಂದ್ರ ಸರಕಾರದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಯಾವುದು “ಹುಸಿ ಅಥವಾ ಸುಳ್ಳು ಅಥವಾ ತಪ್ಪುದಾರಿಗೆಳೆಯುವಂತದ್ದು” ಎಂಬುದನ್ನು ನಿರ್ಧರಿಸಲು ವ್ಯಾಪಕ ಅಧಿಕಾರವನ್ನು ಪ್ರೆಸ್ ಇನ್ಫೋರ್ಮೇಷನ್ ಬ್ಯುರೊ(ಪಿಐಬಿ)ಗೆ ಕೊಡಲಾಗಿದೆ. ಹಾಗೂ ಅದು ಸಾಮಾಜಿಕ ಮಾಧ್ಯಮಗಳು, ಇಂಟರ್ನೆಟ್ ಸೇವೆಗಳನ್ನು ಒದಗಿಸುವವರು ಮತ್ತು ಇತರ ಸೇವೆಗಳನ್ನು ಒದಗಿಸುವವರು ಇಂತಹ ಅಂಶಗಳನ್ನು ಹಾಕಬಾರದು ಎಂಬ ನಿರ್ದೇಶನಗಳನ್ನು ಕೊಡುತ್ತದೆ. ಇದು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ದೇಶದ ಪತ್ರಿಕಾ ಸಂಪಾದಕರುಗಳ ಸಂಘಟನೆಯಾದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯ (ಇಜಿಐ) ಆತಂಕ ವ್ಯಕ್ತಪಡಿಸಿದೆ.
“ಈ ಮೂಲಕ ಸರ್ಕಾರವು ತನ್ನ ಸ್ವಂತ ಕೆಲಸಕ್ಕೆ ಸಂಬಂಧಪಟ್ಟಂತೆ ಯಾವುದು ಹುಸಿ ಅಥವಾ ಅಲ್ಲ ಎಂಬುದನ್ನು ನಿರ್ಧರಿಸುವ ಅಬಾಧಿತ ಹಕ್ಕನ್ನು ಮತ್ತು ಅದನ್ನು ತೆಗೆದುಹಾಕಲು ಆಧೇಶ ಕೊಡುವ ಸಂಪೂರ್ಣ ಅಧಿಕಾರವನ್ನು ತನಗೇ ಕೊಟ್ಟುಕೊಂಡಿದೆ” ಎಂದು ಗಿಲ್ಡ್ ನ ಅಧ್ಯಕ್ಷೆ ಸೀಮಾ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಅನಂತನಾಥ್ ಮತ್ತು ಖಜಾಂಚಿ ಶ್ರೀರಾಮ್ ಪವಾರ್ ಸಹಿ ಹಾಕಿರುವ ಹೇಳಿಕೆ ‘ವಾಸ್ತವ ಸಂಗತಿ ಪರೀಕ್ಷಣಾ ಘಟಕ’ಎಂಬುದನ್ನು ಸಚಿವಾಲಯವು ಅಧಿಕೃತ ಗೆಜೆಟ್ನಲ್ಲಿ ಒಂದು ಸರಳ ಅಧಿಸೂಚನೆಯನ್ನು ಪ್ರಕಟಿಸುವ ಮೂಲಕ ರಚಿಸಬಹುದು ಎಂಬ ಸಂಗತಿಯತ್ತ ಗಮನ ಸೆಳೆದಿದೆ. ಅಂತಹ ವಾಸ್ತವ ಸಂಗತಿ ಪರೀಕ್ಷಣಾ ಘಟಕದ ಕೆಲಸವನ್ನು ಹೇಗೆ ನಿಭಾಯಿಸಲಾಗುವುದು ಎಂಬ ಬಗ್ಗೆ ಏನೂ ಹೇಳಿಲ್ಲ, ಅದರ ನ್ಯಾಯಾಂಗ ಉಸ್ತುವಾರಿ, ಅಪೀಲಿನ ಹಕ್ಕು, ಸುಪ್ರಿಂ ಕೋರ್ಟ್ ಈ ಕುರಿತಂತೆ ಹಾಕಿ ಕೊಟ್ಟಿರುವ ಮಾರ್ಗ ನಿರ್ದೇಶನಗಳನ್ನು ಹೇಗೆ ಪಾಲಿಸಲಾಗುತ್ತದೆ ಎಂಬಿತ್ಯಾದಿಗಳ ಬಗ್ಗೆಯೂ ಯಾವುದೇ ಉಲ್ಲೇಖವಿಲ್ಲ.
“ಇದೆಲ್ಲವೂ ಸ್ವಾಭಾವಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಸೆನ್ಸಾರ್ ಶಿಪ್ ನ್ನು ಹೋಲುತ್ತದೆ” ಎಂದು ಗಿಲ್ಡ್ ದೂಷಿಸಿದೆ. 2023 ರ ಜನವರಿಯಲ್ಲಿ ತಾನು ಹೊರತಂದಿದ್ದ ಹಿಂದಿನ ಕರಡು ತಿದ್ದುಪಡಿಗಳನ್ನು ಹಿಂತೆಗೆದುಕೊಂಳ್ಳುವಾಗ ಸಚಿವಾಲಯವು ಭರವಸೆ ನೀಡಿದಂತೆ ಯಾವುದೇ ಅರ್ಥಪೂರ್ಣ ಸಮಾಲೋಚನೆಯಿಲ್ಲದೆ ಈ ತಿದ್ದುಪಡಿಯ ಅಧಿಸೂಚನೆ ಹೊರಡಿಸಿರುವುದು “ಆಶ್ಚರ್ಯಕರ” ಎಂದೂ ಅದು ಟೀಕಿಸಿದೆ.
ಇದನ್ನೂ ಓದಿ : ‘ಆಲ್ಟ್ ನ್ಯೂಸ್’ ನ ಜುಬೇರ್ ಬಂಧನಕ್ಕೆ ಪತ್ರಕರ್ತರ ಸಂಘಟನೆಗಳ ತೀವ್ರ ಖಂಡನೆ
ಈಗಾಗಲೇ ಪಿಐಬಿ ಯ ‘ವಾಸ್ತವ ಸಂಗತಿ ಪರೀಕ್ಷಣಾ ಘಟಕ’ಸತ್ಯದ ಪಕ್ಷ ವಹಿಸುವುದಕ್ಕಿಂತ ಸರಕಾರದ ಪಕ್ಷ ವಹಿಸುವ ಉದಾಹರಣೆಗಳೇ ಹೆಚ್ಚು ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಸಚಿವಾಲಯವು ಇಂತಹ ಕಠಿಣ ನಿಯಮಗಳ ಅಧಿಸೂಚನೆಯನ್ನು ಹೊರಡಿಸಿರುವುದು ವಿಷಾದನೀಯವಾಗಿದೆ. ಈ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಿಕಾ ಸಂಸ್ಥೆಗಳೊಂದಿಗೆ ಈ ಕುರಿತು ಸಮಾಲೋಚನೆ ನಡೆಸಬೇಕು ಎಂದು ಎಡಿಟರ್ಸ್ ಗಿಲ್ಡ್ ಆಗ್ರಹಿಸಿದೆ.
ಪ್ರಜಾಪ್ರಭುತ್ವ-ವಿರೋಧಿಯಾದ ನಡೆ-ತಕ್ಷಣ ಹಿಂತೆಗೆದುಕೊಳ್ಳಬೇಕು : ಸಿಪಿಐ(ಎಂ) ಪೊಲಿಟ್ ಬ್ಯುರೊ
ಕೇಂದ್ರ ಸರಕಾರ ಮಾಹಿತಿ ತಂತ್ರಜ್ಞಾನ ನಿಯಮಗಳು, 2021ನ್ನು ತಿದ್ದುಪಡಿ ಮಾಡಿ, ಕೇಂದ್ರ ಸರಕಾರದ ಬಗ್ಗೆ “ಹುಸಿ, ಅಥವ ಸುಳ್ಳು, ಅಥವ ದಾರಿ ತಪ್ಪಿಸುವ” ಮಾಹಿತಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಮತ್ತು ಅವುಗಳನ್ನು ತೆಗೆದುಹಾಕಲು ಫೇಸ್ಬುಕ್, ಟ್ವಿಟರ್, ಗೂಗಲ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಹೇಳುವ ಅಧಿಕಾರವನ್ನು ಪ್ರೆಸ್ ಇನ್ಫೋರ್ಮೇಶನ್ ಬ್ಯುರೊ(ಪಿಐಬಿ) ಗೆ ಅಧಿಕಾರ ನೀಡಿರುವುದು, ಮತ್ತು ಈ ಕಂಪನಿಗಳು ನಿರಾಕರಿಸಿದರೆ, ವೇದಿಕೆಗಳ ಬಳಕೆದಾರರು ಪೋಸ್ಟ್ ಮಾಡಿದ ಯಾವುದೇ ಕಾನೂನುಬಾಹಿರ ಅಥವಾ ಸುಳ್ಳು ವಿಷಯದ ವಿರುದ್ಧ ರಕ್ಷಣೆಯನ್ನು ಖಾತರಿಪಡಿಸುವ ತಮ್ಮ “ಸುರಕ್ಷಿತ ಆಶ್ರಯ ವಿನಾಯಿತಿ” ಅನ್ನು ಈ ತಿದ್ದುಪಡಿಯ ಪ್ರಕಾರ ಕಳೆದುಕೊಳ್ಳುತ್ತಾರೆ ಎಂದು ಉಲ್ಲೇಖಿಸಿರುವುದು ಸಂಪೂರ್ಣವಾಗಿ ಸೆನ್ಸಾರ್ಶಿಪ್ಗೆ ಸಮನಾಗಿರುವಂತಹ ಕ್ರಮ ಎಂದು ಈ ತಿದ್ದುಪಡಿಗೆ ವಿರೋಧವನ್ನು ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಕೂಡ ಅಭಿಪ್ರಾಯ ಪಟ್ಟಿದೆ.
ಇದನ್ನು ಒಪ್ಪಲು ಸಾಧ್ಯವಿಲ್ಲ, ಪಿಐಬಿಗೆ ಇಂತಹ ವ್ಯಾಪಕ ಅಧಿಕಾರಗಳನ್ನು ನೀಡಿರುವುದು ಈ ವೇದಿಕೆಗಳ ಎಲ್ಲ ಬಳಕೆದಾರರನ್ನು ತಟ್ಟುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ-ವಿರೋಧಿಯಾದ ಮತ್ತು ಸ್ವೀಕಾರಾರ್ಹವಲ್ಲದ ನಡೆ ಎಂದು ಹೇಳುತ್ತ ಈ ಐಟಿ ನಿಯಮಗಳ ತಿದ್ದುಪಡಿಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.