ಬಿದಿರಿನ ಬುಟ್ಟಿಯಲಿ ರೊಟ್ಟಿಬುತ್ತಿಯಂತೆ ಕಟ್ಟಿತಂದ “ಮುಟ್ಟು” ಪುಸ್ತಕಗಳು

                                                                                                                                                                                    ಮಲ್ಲಿಕಾರ್ಜುನ ಕಡಕೋಳ

ಬಿದಿರಿನ ಬುಟ್ಟಿಯಲಿ ಬುತ್ತಿರೊಟ್ಟಿಯಂತೆ ಕೆಂಪುವಸ್ತ್ರದಲ್ಲಿ ಕಟ್ಟಿದ “ಮುಟ್ಟು” ಪುಸ್ತಕಗಳನು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ಸನ್ನಿಧಿಯಲ್ಲಿ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದರು. ಹೆಸರಾಂತ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಮತ್ತು ನಾನು ವೇದಿಕೆಯಲ್ಲಿ ಸಾಕ್ಷಿಗೊಂಡಿದ್ದೆವು. ಹೀಗೆ ಅಂದು ನೆರೆದವರೆಲ್ಲರ ಸಮಕ್ಷಮ ‘ಮುಟ್ಟು’ ಬಿಡುಗಡೆಯಾದ ಎಣೆಯಿಲ್ಲದ ಸಂಭ್ರಮ.

ಅಂದು ಬೆಂಗಳೂರಿನ ಗಾಂಧಿಭವನವು ಸಾಹಿತ್ಯಾಭಿಮಾನಿಗಳಿಂದ ತುಂಬಿತ್ತು. ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮಗಳಿಗೆ ಬೆಂಗಳೂರಲ್ಲಿ ಸಾಹಿತ್ಯಾಸಕ್ತರು ಬಿಲ್ಕುಲ್ ಬರುವುದೇ ಇಲ್ಲ. ಹೀಗಂತಲೇ ವಿದ್ಯುನ್ಮಾನ ಮಾಧ್ಯಮಗಳು ಪ್ರೇಕ್ಷಕರ ಕಡೆ ಕ್ಯಾಮೆರಾ ತಿರುಗಿಸುವುದೇ ಇಲ್ಲ. ಅದೇನಿದ್ದರೂ ವೇದಿಕೆ ಕೇಂದ್ರಿತ ಮತ್ತದರ ಸುತ್ತಮುತ್ತಲೇ ಅವುಗಳ ನಿಗಾವಣೆಯ ಗಿರ್ಕಿ ಸರ್ಕಸ್. ಆದರೆ ಕಾರ್ಯಕ್ರಮ ಮಾತ್ರ ಯಶಸ್ವಿಯಾಯಿತೆಂಬಂತೆ ಎಲ್ಲ ಮಾಧ್ಯಮಗಳಲ್ಲಿ ಭರಪೂರ ಸುದ್ದಿಯಂತೂ ಬಂದಿರುತ್ತದೆ. ಅದೆಲ್ಲ ಬೆಂಗಳೂರೇತರರು ಓದಿ ಖುಷಿ ಪಡಲು ಮಾಧ್ಯಮಗಳ ಪ್ರಾಯೋಜಿತ ಗಿಮಿಕ್ ಅಂತಲೇ ಪರಿಭಾವಿಸಲಾಗುತ್ತದೆ. ಇದು ಬಹುಪಾಲು ಚರ್ವಿತ ಚರ್ವಣ ನಿಜ ಸಂಗತಿಯೆಂದರೆ ತಪ್ಪೇನಿಲ್ಲ. ಈ ಬಗೆಯ ಸಿದ್ಧಹುನ್ನಾರದ ಸೂತ್ರಾರೋಪಗಳಲ್ಲಿ ಹುರುಳಿರಬಹುದು. ಇಲ್ಲದಿರಬಹುದು.?

ಆದರೆ ನನ್ನ “ಮುಟ್ಟು” ಕಥಾ ಸಂಕಲನ ಲೋಕಾರ್ಪಣೆಗೆ ಬೆಂಗಳೂರಿನ ಗಾಂಧಿಭವನದ ಬಾಪೂ ಸಭಾಂಗಣದ ಕುರ್ಚಿಗಳು ಭರತಿಯಾಗಿದ್ದವು. ಅವರೆಲ್ಲರೂ ಪ್ರೀತಿಯಿಂದಲೇ ಬಂದಿದ್ದರು. ಬಂದವರೆಲ್ಲರೂ ಹೆಚ್ಚುಗಾರಿಕೆ ಎಂಬಂತೆ ಕಾರ್ಯಕ್ರಮ ಮುಗಿಯುವವರೆಗೂ ಆಸ್ಥೆಯಿಂದಲೇ ಆಸೀನರಾಗಿದ್ದರು. ಬೆಂಗಳೂರೇತರ ದೂರದ ಊರಿನ ನಾವು ಬೆಂಗಳೂರಿಗೆ ಬಂದು ಪುಸ್ತಕ ಬಿಡುಗಡೆಯಂತಹ ಕಾರ್ಯಕ್ರಮ ಏರ್ಪಡಿಸುವುದು ಹೈರಾಣದ ಕೆಲಸವೇ ಹೌದು. ವಾಟ್ಸ್ಯಾಪ್ ಮೂಲಕ ಮೆಸೆಜ್ ಕಳಿಸಿ ಕೆಲವರನ್ನು ಪ್ರೀತಿಯಿಂದ ಕರೆದಿದ್ದೆ. ಬಹುಪಾಲಿನವರು ಅವತ್ತಿನ ಪತ್ರಿಕೆಗಳ ಎಂಗೇಜಮೆಂಟ್ ಸುದ್ದಿಓದಿ ತಿಳಿದ ಸಹೃದಯತೆಯಿಂದ ಬಂದಿದ್ದರು. ಹೀಗೆಂದೇ ಮೊದಲು ಅವರ ಉಪಸ್ಥಿತಿ ಪ್ರೀತಿಗೆ ಸಾವಿರ ಸಲಾಮುಗಳು.

ಆಮಂತ್ರಣ ಪತ್ರಗಳನು ಮುದ್ದಾಂ ಮುಟ್ಟಿಸುವ ಕಾಲ ಇದಲ್ಲ. ಎಲ್ಲಾ ಆನ್ ಲೈನ್ ಆಮಂತ್ರಣದ ಸಂಬಂಧಗಳು. ಇದರ‌ ಜತೆಯಾಗಿ ಅವರ ಆಗಮನಕ್ಕೆ ಇನ್ನೊಂದು ಮಹತ್ವದ ಸಂಗತಿ ಹೇಳಲೇಬೇಕಿದೆ. ‘ಮುಟ್ಟು’ ಕತೆಗಳ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ತತ್ವಪದಗಳ ಗಝಲ್ ಗಾಯನ ಏರ್ಪಡಿಸಿದ್ದು ಮತ್ತೊಂದು ಮುಖ್ಯಕಾರಣವೂ ಇದ್ದೀತು. ಹಾಗೆ ನೋಡಿದರೆ ತತ್ವಪದಗಳಿಗೆ ಸಿನೆಮಾ ಹಾಡುಗಳಿಗಿಂತ ಸಾರ್ವಕಾಲಿಕವಾಗಿ ಹಿಟ್ ಆಗುವಂತಹ ವರ್ತಮಾನದ ಪ್ರಖರ ಮತ್ತು ಆಕರ್ಷಕ ಕಾಲಗುಣ.

ಅಷ್ಟಕ್ಕೂ ಅವು ನಮ್ಮೂರ ಮಡಿವಾಳಪ್ಪನ ತತ್ವಪದಗಳು. ಹಸಿಗೋಡೆಗೆ ಹರಳು ಹೊಡೆದಂತೆ ನೇರಾನೇರವಾಗಿ ಮನಸಿನ ಜೀವಾಳಕ್ಕೆ ಗಟ್ಟಿಯಾಗಿ ನಾಟಿಬಿಡುವ ನಾಟೀಬೀಜದ ಪದಗಳು. ಕಲರ್ಸ್ ಕನ್ನಡ ವಾಹಿನಿಯ “ಎದೆತುಂಬಿ ಹಾಡುವೆನು” ಖ್ಯಾತಿಯ ಚಿಂಚೋಳಿ ಬಾರ್ಡರಿನ ಗಡಿಲಿಂಗದಹಳ್ಳಿಯ ಹುಡುಗ ಸೂರ್ಯಕಾಂತನು ಕಡಕೋಳ ಮಡಿವಾಳಪ್ಪನನ್ನು ಆವಾಹಿಸಿಕೊಂಡಂತೆ ಹಾಡುವುದನ್ನು ಟಿವಿಯಲ್ಲಿ ನೋಡಿ ಫಿದಾ ಆಗದವರೇ ಇಲ್ಲ. ಆದರೆ ಅದೇಕೋ ಅವತ್ತು ಸೂರ್ಯಕಾಂತನ ಮತ್ತವನ‌ ತಂಡ ಖುಷಿ ಕೊಡಲಿಲ್ಲ. ಪ್ರಾಯಶಃ ಧ್ವನಿಸೂತಕ ಮತ್ತು ಸಂಗೀತ ಪರಿಕರ ಸಾಂಗತ್ಯಗಳ ಅಪಸವ್ಯ ತುಂಬಾ ಕಾಡಿಸಿತೆಂದುಕೊಳ್ಳುವೆ.

ಎಲ್ಲರೂ ಮೈ ಮರೆತು ಕೇಳಬೇಕಾದವರು ತಮ್ಮ ತಮ್ಮ ಮಾತುಗಳ ದ್ಯಾಸದಲಿ ತತ್ವಪದಗಳ ಗಝಲ್ ಧ್ಯಾನಕ್ಕೆ ಒಲಿಯುವುದನೇ ಮರೆತರು. ಒಂದು ಅಪರಿಚಿತ ನೆಮ್ಮದಿಯೆಡೆಗೆ ಕೊಂಡೊಯ್ಯಬೇಕಾದ, ಅಕ್ಷರಶಃ ಅಕ್ಷರ ಮಾತುಗಳಲಿ ಹಿಡಿದಿಡಲಾಗದ ಖುಷಿಯ ಚಣಗಳು ಆ ಕ್ಷಣದಲಿ ಹುಸಿಯಾದವು. ಕಾರ್ಯಕ್ರಮಕ್ಕೆ ಅರ್ಧಗಂಟೆ ಮೊದಲು ಆರೇಳು ತತ್ವಪದಗಳನು‌ ಹಾಡಬೇಕಾದ ಸೂರ್ಯಕಾಂತ ಮೂರೇ‌ಮೂರು ಪದಗಳಿಗೆ‌ ಮುಗಿಸುವಂತಾಯಿತು. ಮುಖ್ಯವಾಗಿ “ಮುಟ್ಟು” ಬಿಡುಗಡೆ ಕಾರ್ಯಕ್ರಮದ ಪ್ರಾರ್ಥನೆಯಂತೆ ಆರಂಭಕ್ಕೆ ಹಾಡಲೇಬೇಕಿದ್ದ ಮುಡುಚೆಟ್ಟಿನೊಳು ಬಂದು ಮುಟ್ಟಿತಟ್ಟೇನಂತೀರಿ/ ಮುಟ್ಟಾದ ಮೂರು ದಿನಕ ಹುಟ್ಟಿ ಬಂದೀರಿ ನೀವು ಮುಡುಚೆಟ್ಯಾವಲ್ಯಾದ ಹೇಳಣ್ಣ// ಮಡಿವಾಳಪ್ಪನ ಈ ತತ್ವಪದ ಹಾಡಲೇ ಇಲ್ಲ. ಅದು ‘ಮುಟ್ಟು’ ಸಂಕಲನ ಲೋಕಾರ್ಪಣೆಗೆಂದೇ ಸಿದ್ಧಪಡಿಸಿದ ಪದವೆಂಬಂತೆ ತಾದಾತ್ಮ್ಯಗೊಳ್ಳಬೇಕಿತ್ತು. ಅದು ಫಲಿಸಲೇ ಇಲ್ಲ.

ಆದರೆ “ಮೂಕನಾಗಬೇಕು” ಮಾತ್ರ ಒಂದಷ್ಟು ಮುದಕೊಟ್ಟಿತು. ನಿಸರ್ಗ ಸುಬಗದಂತಹ ಮೊದಲ ಮುಲಾಖತ್ತಿನ ಅವನ ಸಿರಿಕಂಠದ ತತ್ವಪದಗಳ ಗಝಲ್ ಗಾಯನ ಕೇಳಿದ್ದ ನನಗೆ ದಶಕದ ಹಿಂದೆ ತೀರಿಹೋದ ನಮ್ಮ ಹಂದಿಗನೂರು ರವೀಂದ್ರ ಕಾಕಾ ಧುತ್ತನೆ ಎದುರು ಬಂದು ನಿಂತಂತಾಯಿತು. ಅವನಿದ್ದಿದ್ರೇ ಸಮಗ್ರ ಸಭಿಕರನ್ನು ಆಲಾಪನೆಯ ಟ್ರ್ಯಾಕಿಗೆ ನಿಯಂತ್ರಿಸಿ ತರುವ ವಾಙ್ಮಕ ಶಕ್ತಿಯ ವಾಚಾಳಿಯೂ ಆಗಿದ್ದನೆಂಬ ನೆನಹುಗಳು ನನ್ನನ್ನು ಘೋರವಾಗಿ ಕಾಡಿದವು. ಆದರೆ ಯುವಗಾಯಕ ಸೂರ್ಯಕಾಂತ ಎಲ್ಲಿ ಕಳೆದು ಹೋದನೆಂಬುದೇ ನನ್ನರಿವಿಗೆ ಬರಲೇ ಇಲ್ಲ. ಏಕೆಂದರೆ ಅವನು ಕಳೆದು ಹೋಗುತ್ತಿರುವುದನ್ನು ಹುಡುಕಿ ಈ ಕೂಡಲೇ ಸಾಣೇಹಳ್ಳಿ ಶ್ರೀಪಂಡಿತಾರಾಧ್ಯರಿಗೆ ಒಪ್ಪಿಸಲೇಬೇಕಿದೆ. ಅದು ನನ್ನ ಉತ್ತರದಾಯಿತ್ವದ ಕರ್ತವ್ಯವೂ ಆಗಿದೆಯೆಂದು ಕೊಂಡಿದ್ದೇನೆ.

ಇದನ್ನೂ ಓದಿ : ಹತ್ತು ಲಕ್ಷ ಜನ ಭಾಗವಹಿಸಿದ ನಾಲ್ಕನೇ ಕೆಂಪು ಪುಸ್ತಕ ದಿನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನನ್ನ ಪ್ರೀತಿಯ ಕಾದಂಬರಿಕಾರ ಕುಂ. ವೀರಭದ್ರಪ್ಪ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಮಲ್ಲಿಕಾ ಘಂಟಿ, ಸಾಹಿತಿಗಳಾದ ರುದ್ರಪ್ಪ ಹನಗವಾಡಿ, ಪ್ರೊ. ಕಾಶಿನಾಥ ಅಂಬಲಗಿ, ದೂರದ ಕಲಬುರ್ಗಿಯಿಂದ ಬಂದ ಮಹಿಪಾಲರೆಡ್ಡಿ ಮುನ್ನೂರು, ಟಿ. ಟಿ. ಕಸ್ತೂರಿ, ಪಿ. ಚಂದ್ರಿಕಾ, ಈರಪ್ಪ ಕಂಬಳಿ, ಆರ್. ಜಿ. ಹಳ್ಳಿ ನಾಗರಾಜ, ಸಿಂದಗಿಯ ಮೌಲಾಲಿ ಬೋರಗಿ, ವೈ. ಬಿ. ಎಚ್. ಜಯದೇವ, ಯಡ್ರಾಮಿಯ ಶಿವಪ್ರಕಾಶ್, ಹಿರಿಯ ರಂಗಕರ್ಮಿಗಳು ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾದ ಡಾ. ಬಿ. ವಿ. ರಾಜಾರಾಮ, ದೆಹಲಿ ದಿನಕರದ ಶಿವಾನಂದ ಇಂಗಳೇಶ್ವರ, ಶ್ರೀನಿವಾಸ ಜಿ. ಕಪ್ಪಣ್ಣ, ಮಾಲತೇಶ ಬಡಿಗೇರ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಭಾಗವತರು ರೇವಣ್ಣ, ಹಿರಿಯ ಪತ್ರಕರ್ತರಾದ ರವೀಂದ್ರ ರೇಷ್ಮೆ, ಭೃಂಗೇಶ್, ದೊಣೆಹಳ್ಳಿ ಗುರುಮೂರ್ತಿ, ಈ. ಚಂದ್ರ ತಾಳಿಕಟ್ಟೆ, ರಮೇಶ ದೇಸಾಯಿ, ವಿರಾಜಪೇಟೆಯ ಭೋಪಯ್ಯ, ದಾವಣಗೇರಿಯ ಎಡಪಂಥೀಯ ಗೆಳೆಯರಾದ ಕಾಂ. ಕೆ. ಮಹಾಂತೇಶ, ನಟರಾಜ, ಎಚ್. ಎನ್. ಗೋಪಾಲಕೃಷ್ಣ, ಸುರಪುರದ ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಚಂದ್ರಕಾಂತ ಭಂಡಾರೆ, ದೇವದುರ್ಗದ ಮತ್ತೋರ್ವ ಅಧಿಕಾರಿ ಶಿವರಾಜ ಪಾಟೀಲ, ಪ್ರಗತಿಪರ ಹೋರಾಟಗಾರರಾದ ಎಚ್. ಸಿ. ಉಮೇಶ್, ಆದರ್ಶ ಯಲ್ಲಪ್ಪ, ಡಾ. ರಾಜಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ವಿ. ಗೀತಾ, ಸಾಣೇಹಳ್ಳಿ ಶಿವಸಂಚಾರದ ಲೇಖಕ ದ್ಯಾಮೇಶ್, ಸಿರಿಗೆರೆ ಮಠದ ಸಿದ್ಧಯ್ಯ, ನನ್ನ ಹುಟ್ಟೂರಿನ ಮಡಿವಾಳಪ್ಪ ಬಿರಾದಾರ, ಸಿನೆಮಾ ಮತ್ತು ದಾರಾವಾಹಿ ಲೋಕದ ಹಿರಿಯ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಮತ್ತು ನೇಪಥ್ಯ ಕಲಾವಿದೆ ರೇಣುಕಾ ಪ್ರಿಯೆ…. ಹೀಗೆ ಸಂತುಲಿತ ಸ್ನೇಹ ಬಳಗವೇ ಸಭಾಂಗಣದ ತುಂಬಾ ನೆರೆದು ನನಗೆ ಖಂಡುಗ ಖುಷಿ ಉಂಡಂತಾಯಿತು.

ಅವತ್ತಿನ ಮುಟ್ಟು ಲೋಕಾರ್ಪಣೆ ಕಾರ್ಯಕ್ರಮ ಕುರಿತು “ಬುಕ್ ಬ್ರಹ್ಮ‌” ನೇರ ಪ್ರಸಾರವನ್ನೇ‌ ಹಮ್ಮಿಕೊಂಡಿತ್ತು. ಅದನ್ನು ಸಂಪೂರ್ಣವಾಗಿ ವೀಕ್ಷಿಸಿದ ಬಹುದೂರದ ಊರುಗಳ ಅನೇಕರು ನನಗೆ ಫೋನ್ ಮಾಡಿ ಸಂತಸ ಹಂಚಿಕೊಂಡರು. ವಿಶೇಷವಾಗಿ ಏಳುನೂರು ಕಿ.ಮೀ. ದೂರದ ನಮ್ಮೂರಿನ ಮಲ್ಲಿನಾಥ ಮಾಸ್ತರ ತುಂಬಾನೇ ಖುಷಿಪಟ್ಟು ತನಗೆ ‘ಮುಟ್ಟು’ ಪುಸ್ತಕಗಳ ಹತ್ತು ಪ್ರತಿಗಳು ಬೇಕೆಂದು ಮೆಸೆಜ್ ಕಳಿಸಿದ್ದರು. ಇನ್ನೂ ಕಾರ್ಯಕ್ರಮ ಜರುಗುತ್ತಿರುವಾಗಲೇ ತಂದಿಟ್ಟಿದ್ದ ಎಲ್ಲಾ ಪುಸ್ತಕಗಳು ಖರ್ಚಾದವು. ಇನ್ನೊಂದು ನೂರು ಪುಸ್ತಕಗಳನ್ನು ತರಿಸಿಕೊಡಿರೆಂದು ಹೊರಗಡೆ ಪುಸ್ತಕಗಳನ್ನು ಮಾರುತ್ತಿದ್ದ ತೋರಣ‌ ಮತ್ತು ಗಣೇಶನ ವರಾತ.

ಖರೇವಂದ್ರ ನನ್ನ ‘ಮುಟ್ಟು’ ಕತೆಗಳ ಸಂಕಲನ ಪ್ರಕಟಿಸಿದ ಕಲಬುರ್ಗಿಯ ಪ್ರಕಾಶಕರಿಂದ ನಾನು ಪಡೆದದ್ದು ನೂರಿಪ್ಪತ್ತೈದು ಪುಸ್ತಕಗಳು ಮಾತ್ರ. ಆದರೆ ಅನೇಕರು ಹತ್ತು ಹದಿನೈದು ಪುಸ್ತಕಗಳಿಗೆ ಮುಂಗಡ ಹಣ ಕೊಟ್ಟು ಪುಸ್ತಕ ಬೇಕೇಬೇಕೆಂಬ ಆರ್ಡರ್ ಕೊಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಪುಸ್ತಕದ ಹಕ್ಕುಗಳು ಯಾರವು.? ದಯವಿಟ್ಟು ತಿಳಿಸಿರಿ. ಮುಟ್ಟು ಕತೆಯನ್ನು ನಾಟಕ, ಸಿನೆಮಾ ಮಾಡಲು ಅವಕಾಶ ಕೋರಿ ಮೆಸೆಜ್ ಮತ್ತು ಫೋನ್ ಕರೆಗಳ ಮೂಲಕ ಕೇಳಿದ್ದಾರೆ.‌ ಹಾಗೆ ಕೇಳಿದವರಲ್ಲಿ ಪ್ರಮುಖವಾಗಿ ಪಲ್ಲಕ್ಕಿ ಮತ್ತು ಬಡಿಗೇರ ಮುಖ್ಯರು.

ಬಿದಿರಿನ ಬುಟ್ಟಿಯಲಿ ಬುತ್ತಿರೊಟ್ಟಿಯಂತೆ ಕೆಂಪುವಸ್ತ್ರದಲ್ಲಿ ಕಟ್ಟಿದ “ಮುಟ್ಟು” ಪುಸ್ತಕಗಳನು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ಸನ್ನಿಧಿಯಲ್ಲಿ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದರು. ಹೆಸರಾಂತ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಮತ್ತು ನಾನು ವೇದಿಕೆಯಲ್ಲಿ ಸಾಕ್ಷಿಗೊಂಡಿದ್ದೆವು. ಹೀಗೆ ಅಂದು ನೆರೆದವರೆಲ್ಲರ ಸಮಕ್ಷಮ ‘ಮುಟ್ಟು’ ಬಿಡುಗಡೆಯಾದ ಎಣೆಯಿಲ್ಲದ ಸಂಭ್ರಮ.

ನನಗೆ ಖಂಡುಗ ಖುಷಿಕೊಟ್ಟ ವಿಷಯವೆಂದರೆ ಮೂವರೂ ಅತಿಥಿಗಳು ‘ಮುಟ್ಟು’ ಸಂಕಲನದ ಕಥೆಗಳನ್ನೆಲ್ಲ ಸಂಪ್ರೀತಿಯಿಂದ ಓದಿಕೊಂಡು ಬಂದಿದ್ದರು. ಅದರಲ್ಲೂ ಸ್ವಾಮೀಜಿ ಅವರಂತೂ ಕಥೆಗಳ ಒಂದೊಂದು ಪಾತ್ರದ ಹೆಸರುಗಳನ್ನು ಪ್ರಸ್ತಾಪಿಸುತ್ತಲೇ ಕಥಾಹಂದರದ ಸಾಂಸ್ಕೃತಿಕ ಅನುಸಂಧಾನಗಳನ್ನು ಉಲ್ಲೇಖಿಸಿದರು. ವೈಚಾರಿಕ ನಿಲುವು ಮತ್ತು ಮಾನವೀಯ ನೆಲೆಗಟ್ಟಿನ ಬಂಡಾಯ ಸಂವೇದನೆಯ ಕಥೆಗಳೆಂದು ಕರೆದರು. ಅಭಿವ್ಯಕ್ತಿ ಸ್ವಾತಂತ್ರ್ಯ ಸೂಕ್ಷ್ಮಬಿಕ್ಕಟ್ಟು ಎದುರಿಸುತ್ತಿರುವ ವರ್ತಮಾನದ ಬದುಕಿನಲ್ಲಿ ಕತೆಗಾರ ಹತ್ತು ಹಲವು ಸವಾಲುಗಳನ್ನು ಎದುರಿಸ ಬೇಕಿರುವುದನ್ನು ಗುರುತಿಸಿದರು.

ಅಕ್ಷರಸ್ಥರಾದ ನಾವು ನಮ್ಮ ಆತ್ಮಕಥನಗಳನ್ನು ನಮ್ಮ ನೇರಕ್ಕೆ ಬರೆದುಕೊಳ್ಳುತ್ತೇವೆ.ಅನಕ್ಷರಸ್ಥರಾದವರ ಆತ್ಮಕಥನಗಳನ್ನು ಯಥಾವತ್ತಾಗಿಯಾದರೂ ಯಾರು ಬರೆಯಬೇಕು.? ನನ್ನ ಪಾಲಿಗೆ ನಿಜವಾದ ಭಾರತದ ಮತ್ತು ಭಾರತೀಯರ ಕತೆಗಳೆಂದರೆ ನನ್ನ ಅಪ್ಪ ಅವ್ವಗಳಂಥ ಸಹಸ್ರಾರು ಮಂದಿಯ ಬದುಕು ಮತ್ತು ಕಣ್ಣೀರಿನ ಕಥನಗಳು. ಅದನ್ನು ನಾವೇ ಹೇಳದೇ ಹೋದರೆ ಅದು ನಮ್ಮ ಅಪ್ಪ ಅವ್ವಗಳು ಬಾಳಿ ಬದುಕಿದ ಭಾರತದ ಕರುಳಿನ ಕತೆಯಾದೀತು ಹೇಗೆ.? ಹೌದು ನಮ್ಮ ನೆಲದ ಕತೆಗಳನ್ನು ನಾವೇ ಬರೆಯಬೇಕಿದೆ. ಅನ್ಯರು ಬರೆಯಲಾರರು. ಬರೆದರೂ ಅವರು ಸುಳ್ಳುಗಳನ್ನೇ ಬರೆಯಬಲ್ಲರು. ನಾವು ಬದುಕಿರುವ ನೆಲದ ವಿವೇಕ ಎಂದರೆ ಅಪ್ಪ ಅವ್ವಂದಿರ ಬದುಕಿನ ಜೀವ ಸಂವೇದನೆಗಳು. ನಾನು ನನ್ನಂಥವರ ಅಪ್ಪ ಅಮ್ಮಗಳ ಸಂತಸ ಮತ್ತು ಸಂಕಟಗಳ ಕುರಿತು ನಾವೇ ಬರೆಯಬೇಕು. ಎರಡನೆಯವರ ಎರವಲು ಬರವಣಿಗೆಗಳು ನಮ್ಮವು ಅಂತನಿಸಲಾರವು. ಮುಟ್ಟು ಕಥಾ ಸಂಕಲನದ ಕೃತಿಕಾರನ ಮೇಲಿನ ಈ ಮಾತುಗಳನ್ನು ಸ್ವಾಮೀಜಿ ಓದಿ ಹೇಳಿ, ಇವು ತಮ್ಮ ಮೆಚ್ಚುಗೆ ಗಳಿಸಿದ ಸಾಲುಗಳೆಂದರು.

ಪ್ರೊ. ಎಸ್. ಜಿ. ಸಿದ್ಧರಾಮಯ್ಯ “ಮುಟ್ಟು” ಪದವೇ ಸಾಂಸ್ಕೃತಿಕ ದಬ್ಬಾಳಿಕೆಯ ದವಡೆಯಲ್ಲಿ ಸಿಕ್ಕು ನಲುಗುತ್ತಿರುವ ಪದ. ಇಲ್ಲಿನ ಕತೆಗಳು ಬಹುತ್ವ ಭಾರತದ ಪ್ರತೀಕವೆಂದು ಬಿಡಿ ಬಿಡಿಯಾಗಿ ಕತೆಗಳನ್ನು ವಿಶ್ಲೇಷಣೆ ಮಾಡಿ ಇವು ಕಡಕೋಳರು ಬರೆದ ಕತೆಗಳಲ್ಲ ಬರೆಸಿಕೊಂಡ ಕತೆಗಳು ಎಂದು ಕೊಂಡಾಡಿದರು. ಖ್ಯಾತ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಪುಸ್ತಕ ಕುರಿತು ಮಾತಾಡಿ ‘ಧರ್ಮ’ ಎನ್ನುವುದು ಭಯೋತ್ಪಾದನಾ ವಸ್ತು ವಿನ್ಯಾಸ ಪಡೆಯುತ್ತಿರುವ ಕಾಲವಿದು. ಇಂತಹ ಕಾಲಘಟ್ಟದಲ್ಲಿ ಹೆಣ್ಣಿನ ನೋವುಗಳ ಸೂಕ್ಷ್ಮ ಸಂವೇದನೆಗಳು ‘ಮುಟ್ಟು’ ಕಥಾ ಸಂಕಲನದ ವಸ್ತುಗಳಾಗಿವೆ. ಕಡಕೋಳರ ಇನ್ನೂ ಇರುವ ಅಪ್ರಕಟಿತ ಕತೆಗಳು ಪುಸ್ತಕ ರೂಪದಲ್ಲಿ ಬರಲಿ. ಅವರು ಇನ್ನಷ್ಟು ಇಂತಹ ಕತೆಗಳನ್ನು ಬರೆಯಲಿ ಎಂದು ಹಾರೈಸಿದರು.

Donate Janashakthi Media

Leave a Reply

Your email address will not be published. Required fields are marked *