ಬೆಂಗಳೂರು : ನಟ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ವ್ಯಾಪಕವಾಗುತ್ತಿರುವ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ, ಕೆಲವರ ಪರವಾಗಿ ನಾನು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಾನು ಯಾರ ಹತ್ತಿರವೂ ಟಿಕೆಟ್ ಕೇಳಿಲ್ಲ. ಟಿಕೆಟ್ ಕೊಡಿಸುವಷ್ಟು ದೊಡ್ಡವನು ನಾನಲ್ಲ. ಚಿತ್ರರಂಗಕ್ಕೆ ಕಾಲಿಟ್ಟಾಗ ನನ್ನ ಪರ ಕೆಲವರು ನಿಂತಿದ್ದರು. ಅವರ ಪರವಾಗಿ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ನಿಜ. ನಾನು ಸುದ್ದಿಗೋಷ್ಠಿಯಲ್ಲಿಯೇ ಎಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
ಬೆದರಿಕೆ ಪತ್ರ ಬರೆದವರು ಯಾರೆಂಬುದು ಗೊತ್ತಿದೆ :
ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರದ ವಿಚಾರವಾಗಿ ಮಾತನಾಡಿದ ಅವರು, ಇಂತಹ ಬೆದರಿಕೆ ಪತ್ರಕ್ಕೆ ನಾನು ಉತ್ತರ ನೀಡುತ್ತೇನೆ. ಪತ್ರ ಬರೆದವರು ಯಾರು ಅಂತಾ ಸಹ ನನಗೆ ಗೊತ್ತಿದೆ. ಆದರೆ, ಅವರ ಬಗ್ಗೆ ನಾನು ಈ ಮಾತನಾಡಲ್ಲ. ಚಿತ್ರರಂಗದಲ್ಲಿ ನನ್ನ ಕಂಡ್ರೆ ಆಗದವರು ಸಹ ಇದ್ದಾರೆ. ಅವರಿಗೆ ಅವರ ದಾರಿಯಲ್ಲಿಯೇ ಉತ್ತರ ನೀಡುತ್ತೇನೆ ಎಂದು ಬೆದರಿಕೆ ಪತ್ರ ಬರೆದವರಿಗೆ ಖಡಕ್ ವಾರ್ನಿಂಗ್ ಅನ್ನು ಕಿಚ್ಚ ಸುದೀಪ್ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಯವರು ಬುಧವಾರ ಎರಡು ಪ್ರತ್ಯೇಕ ಸುದ್ದಿಗೋಷ್ಠಿಗಳನ್ನು ಹಮ್ಮಿಕೊಂಡಿದ್ದರು. ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲಿ ಒಂದು ಸುದ್ದಿಗೋಷ್ಠಿ ರದ್ದಾಗಿದೆ. ಒಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ ಜೊತೆ ಕಿಚ್ಚ ಸುದೀಪ್ ಭಾಗವಹಿಸುತ್ತಿದ್ದಾರೆ. ಇದು ಸುದೀಪ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳಿಗೆ ಪುಷ್ಠಿ ನೀಡಿತ್ತು. ಈಗ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದು, ನಾನು ಯಾವುದೇ ಪಕ್ಷದ ಪರ ನಿಲ್ಲಲ್ಲ ಎಂದು ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ : ದರ್ಶನ್ ವಿರುದ್ಧ ಅಪ್ಪು ಅಭಿಮಾನಿ ಆಕ್ರೋಶ; ʻದ್ವೇಷವೇ ಎಲ್ಲದಕ್ಕೂ ಉತ್ತರವಲ್ಲʼ ಎಂದ ನಟ ಸುದೀಪ್
ನಯವಾಗಿಯೇ ಕೈ ಸೇರ್ಪಡೆ ಆಹ್ವಾನವನ್ನೂ ತಿರಸ್ಕರಿಸಿದ್ದರು ಸುದೀಪ್ :
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಕಡೆ ಹೋದ ಬೆನ್ನಲ್ಲಿಯೇ ಕಿಚ್ಚ ಸುದೀಪ್ ಅವರನ್ನು ಬಿಜೆಪಿ ಸೆಳೆಯಲು ಪ್ರಯತ್ನಿಸಿದೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೂಡ ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್ಗೆ ಆಹ್ವಾನಿಸಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಹಾಗೂ ಸುದೀಪ್ ನಡುವೆ ಹಲವು ಹಂತದ ಮಾತುಕತೆ ನಡೆದಿತ್ತು. ಆ ಸಂದರ್ಭದಲ್ಲಿ ನಯವಾಗಿಯೇ ಕಾಂಗ್ರೆಸ್ ಸೇರ್ಪಡೆ ಆಹ್ವಾನವನ್ನು ಸುದೀಪ್ ತಿರಸ್ಕರಿಸಿದ್ದರು.ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರಾಗಿದ್ದ ಕಿಚ್ಚ ಸುದೀಪ್ ಈಗ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಬಿಜೆಪಿ ಸರ್ಕಾರದ ಹಲವು ಸಚಿವರ ಜೊತೆ ಕಿಚ್ಚ ಸುದೀಪ್ ಉತ್ತಮ ಬಾಂಧವ್ಯವನ್ನು ಕೂಡ ಹೊಂದಿದ್ದು, ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದು ಬಿಜೆಪಿಗೆ ಕಿಚ್ಚ ಸುದೀಪ್ ಸೇರುತ್ತಾರೆ ಎಂಬುದಕ್ಕೆ ಪುಷ್ಠಿ ನೀಡಿತ್ತು.