ಆನೇಕಲ್ ವಿಧಾನಸಭಾ ಕ್ಷೇತ್ರ ಚುನಾವಣೆ : ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿಗೆ ದಲಿತ ಮತಗಳೇ ನಿರ್ಣಾಯಕ

ಮಂಜುನಾಥ ದಾಸನಪುರ

ರಾಮಜನ್ಮ ಭೂಮಿಯ ರಥಯಾತ್ರೆಯ ನಂತರ ದೇಶದ ಇತರೆ ಭಾಗಗಳಲ್ಲಿ ಕಂಡುಬಂದಂತೆ ಆನೇಕಲ್‌ ಕ್ಷೇತ್ರದಲ್ಲಿ ನಿಧಾನವಾಗಿ ಬಿಜೆಪಿ ತನ್ನ ಹೆಜ್ಜೆ ಗುರುತುಗಳನ್ನು ಊರುತ್ತಾ ಬಂದಿದ್ದನ್ನು ಗಮನಿಸಬಹುದು. 1952ರಿಂದ 1994ರವರೆಗೆ ಬಹುತೇಕ ಕಾಂಗ್ರೆಸ್‌ ಹಿಡಿತದಲ್ಲಿದ್ದ ಆನೇಕಲ್‌ ಕ್ಷೇತ್ರ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ವಲಸೆ ಹೋದ ವೈ.ರಾಮಕೃಷ್ಣ ಜಯಗಳಿಸುತ್ತಾರೆ. ಅಲ್ಲಿಂದ ಪ್ರಾರಂಭವಾಗುವ ಬಿಜೆಪಿಯ ವಿಜಯದ ಯಾತ್ರೆ 2008ರವರೆಗೆ ಮುಂದುವರೆಯುತ್ತದೆ.

ಬೆಂಗಳೂರು ನಗರ ಹಾಗೂ ತಮಿಳುನಾಡು ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಆನೇಕಲ್‌ ಮೀಸಲು ವಿಧಾನಸಭಾ ಕ್ಷೇತ್ರವು ರಾಜ್ಯದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ‌. 30-40 ವರ್ಷಗಳ ಹಿಂದೆ ಕೆರೆ, ಕಟ್ಟೆ, ಹೊಲ, ಗದ್ದೆಗಳಿಂದ ಕಂಗೊಳಿಸುತ್ತಿದ್ದ ಕ್ಷೇತ್ರವು, ಇದೀಗ ರಾಜ್ಯದಲ್ಲಿಯೇ ಅತಿ ಹೆಚ್ಚು ಕೈಗಾರಿಕಾ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರವಾಗಿದೆ.

ಕೈಗಾರಿಕೆಯೊಂದಿಗೆ ರಿಯಲ್ ಎಸ್ಟೇಟ್ ಉದ್ಯಮವೂ ಇಲ್ಲಿನ ಜನರ ಆಲೋಚನಾ ಕ್ರಮವನ್ನು ಬದಲಿಸಿದೆ. ಪ್ರತಿ ಎಕರೆಯ ಮೌಲ್ಯ ಎರಡು-ಮೂರು ಕೋಟಿ ರೂ.ಗೂ ಹೆಚ್ಚಿರುವುದರಿಂದ ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ, ರಾಜಕೀಯ ಮೌಲ್ಯಗಳನ್ನು ಹಣದ ಲೆಕ್ಕಾಚಾರದಿಂದಲೇ ನೋಡಲಾಗುತ್ತಿದೆ. ಕ್ಷೇತ್ರದ ಬಹುತೇಕ ಜನ ಸಮುದಾಯ ತಮ್ಮಲ್ಲಿರುವ ಜಮೀನುಗಳನ್ನು ಮಾರಾಟ ಮಾಡಿ, ಭೂ ಹೀನರಾಗುತ್ತಿದ್ದಾರೆ. ಜೀವನೋಪಾಯಕ್ಕಾಗಿ ಅತ್ತ ಭೂಮಿಯೂ ಇಲ್ಲದೆ, ಇತ್ತ ಉತ್ತಮ ನೌಕರಿಯೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾನೆ.

ಇಂತಹ ಹೊತ್ತಿನಲ್ಲಿ 2023ರ ವಿಧಾನಸಭಾ ಚುನಾವಣೆಗೆ ಆನೇಕಲ್ ಕ್ಷೇತ್ರವು ಸಜ್ಜುಗೊಂಡಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದಲಿತ ಸಮುದಾಯದ ರಾಜಕೀಯ ನಿಲುವುಗಳು ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿವೆ ಎಂಬುದು ಕ್ಷೇತ್ರದ ಹಿರಿಯ ರಾಜಕೀಯ ಮುಖಂಡರ ಅಭಿಪ್ರಾಯವಾಗಿದೆ. ಕ್ಷೇತ್ರದಲ್ಲಿ ಇಲ್ಲಿಯವರೆಗಿನ ರಾಜಕೀಯ ಅಧಿಕಾರ ಬಹುತೇಕವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ಗಿರಕಿ ಹೊಡೆಯುತ್ತಿರುವುದನ್ನು ನೋಡಬಹುದಾಗಿದೆ.

ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ನಂತರ ಸುಮಾರು 40ವರ್ಷಕ್ಕೂ ಹೆಚ್ಚು ಸುದೀರ್ಘ ಆಡಳಿತ ನಡೆಸಿರುವ ಹಿನ್ನೆಲೆಯನ್ನು ಹೊಂದಿದೆ. ಇದರ ನಡುವೆ 1978ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ವೈ.ರಾಮಕೃಷ್ಣ ಜಯಗಳಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಪುನಃ ವೈ.ರಾಮಕೃಷ್ಣ ಕಾಂಗ್ರೆಸ್ ನಿಂದ ಸ್ಪರ್ಧಿಸಿ ವಿಜಯ ಸಾಧಿಸುತ್ತಾರೆ.1994ರ ಚುನಾವಣೆವರೆಗೂ ಕಾಂಗ್ರೆಸ್ ಕ್ಷೇತ್ರದಲ್ಲಿ ಹಿಡಿತವನ್ನು ಸಾಧಿಸುತ್ತದೆ. ಅಷ್ಟರಲ್ಲಾಗಲೆ ಜೆಪಿ ಚಳವಳಿಯ ಪ್ರಭಾವ ಹಾಗೂ ಲಾಲ್ ಕೃಷ್ಣ ಅಡ್ವಾಣಿ ಅವರ ರಾಮ ಜನ್ಮಭೂಮಿ ರಥ ಯಾತ್ರೆಯು ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸನ್ನು ಕುಂದಿಸುತ್ತದೆ.

70-80ರಲ್ಲಿ ಜನತಾದಳ ಪ್ರಬಲ ಪಕ್ಷವಾಗಿತ್ತು : 
ಸದ್ಯ ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೇ ಮಾತ್ರ ತಿಕ್ಕಾಟವಿದೆ. ಆದರೆ, 70, 80 ಹಾಗೂ 90 ರ ದಶಕದಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ ಪ್ರಬಲ ಪಕ್ಷವಾಗಿತ್ತು. 1978 ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ವೈ.ರಾಮಕೃಷ್ಣ ಅವರು ಕಾಂಗ್ರೆಸ್ ಅಭ್ಯರ್ಥಿ ಅಣ್ಣಪ್ಪ ವಿರುದ್ಧ ಜಯಗಳಿಸುತ್ತಾರೆ. 1985 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಪಿ.ಕೇಶವಮೂರ್ತಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ತೋಪಯ್ಯ ಅವರು ಕೇವಲ 4068 ಮತಗಳ ಅಂತರದಿಂದ ಪರಭಾವಗೊಳ್ಳುತ್ತಾರೆ. ಹಾಗೆಯೇ 1994 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ರಾಮಕೃಷ್ಣ ಎದುರಾಗಿ ಜನತಾದಳದ ಅಭ್ಯರ್ಥಿ ಗಣಪತಿರಾಜು ಕೇವಲ 868 ಮತಗಳಿಂದ ಸೋಲನ್ನಪ್ಪುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಜನತಾದಳದ ಅಭ್ಯರ್ಥಿಯಾಗಿದ್ದ ವೈ.ರಾಮಕೃಷ್ಣ ಆ ನಂತರಸಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪಕ್ಷಾಂತರಗೊಂಡಿದ್ದು, ಜನತಾದಳದ ಆಂತರಿಕ ಭಿನ್ನಮತ, ಜೆಡಿಯು, ಜೆಡಿಎಸ್ ಆಗಿ ವಿಭಾಗವಾಗುವ ಮೂಲಕ ಕ್ಷೇತ್ರದಲ್ಲಿ ಜ‌ನತಾದಳ ತನ್ನ ವರ್ಚಸನ್ನು ಕಳೆದುಕೊಂಡಿತು.

ರಾಮಜನ್ಮ ಭೂಮಿಯ ರಥಯಾತ್ರೆಯ ನಂತರ ದೇಶದ ಇತರೆ ಭಾಗಗಳಲ್ಲಿ ಕಂಡುಬಂದಂತೆ ಆನೇಕಲ್‌ ಕ್ಷೇತ್ರದಲ್ಲಿ ನಿಧಾನವಾಗಿ ಬಿಜೆಪಿ ತನ್ನ ಹೆಜ್ಜೆ ಗುರುತುಗಳನ್ನು ಊರುತ್ತಾ ಬಂದಿದ್ದನ್ನು ಗಮನಿಸಬಹುದು. 1952ರಿಂದ 1994ರವರೆಗೆ ಬಹುತೇಕ ಕಾಂಗ್ರೆಸ್‌ ಹಿಡಿತದಲ್ಲಿದ್ದ ಆನೇಕಲ್‌ ಕ್ಷೇತ್ರ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ವಲಸೆ ಹೋದ ವೈ.ರಾಮಕೃಷ್ಣ ಜಯಗಳಿಸುತ್ತಾರೆ. ಅಲ್ಲಿಂದ ಪ್ರಾರಂಭವಾಗುವ ಬಿಜೆಪಿಯ ವಿಜಯದ ಯಾತ್ರೆ 2008ರವರೆಗೆ ಮುಂದುವರೆಯುತ್ತದೆ.

ಈಗ ಕೇಂದ್ರ ಸರ್ಕಾರದ ಸಚಿವರಾಗಿರುವ ಎ.ನಾರಾಯಣಸ್ವಾಮಿ ಅವರು 1998ರಲ್ಲಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವನ್ನು ಸಾಧಿಸುವ ಮೂಲಕ 2008ರವರೆಗೆ ಸತತವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಭದ್ರವಾದ ರಾಜಕೀಯ ನೆಲೆಯನ್ನು ಕಂಡುಕೊಳ್ಳುತ್ತಾರೆ. ಆದರೆ, ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಹಾಗೆ ಅಭಿವೃದ್ಧಿ ಮಾಡಿಲ್ಲ ಎಂಬುದು ಅವರ ಮೇಲಿನ ಆರೋಪವಾಗಿದೆ.

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ : ಮೇ 10 ಕ್ಕೆ ಚುನಾವಣೆ, 13 ಕ್ಕೆ ಫಲಿತಾಂಶ – ಚುರುಕುಗೊಂಡ ಪ್ರಕ್ರಿಯೆ

ಬಿಜೆಪಿಯಿಂದ ಬೇಸತ್ತ ಕಾಂಗ್ರೆಸನ್ನು ಆಯ್ಕೆ ಮಾಡಿದ ಮತದಾರ :
1989ರಿಂದ 2008ರವರೆಗೂ ಸುಮಾರು 19 ವರ್ಷ ಆನೇಕಲ್‌ ಕ್ಷೇತ್ರದಲ್ಲಿ ಬಿಜೆಪಿ ಆಡಳಿತ ನಡೆಸಿತು. ಸತತವಾದ ಬಿಜೆಪಿ ಆಡಳಿತ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳು ಕುಂಠಿತವಾಗಿದ್ದರಿಂದ ಕ್ಷೇತ್ರದ ಮತದಾರರು ಬೇಸತ್ತು ಹೋಗಿದ್ದರು. ಬಹುಮುಖ್ಯವಾಗಿ ಬಿಜೆಪಿಯ ಬೆನ್ನೆಲುಬಾಗಿದ್ದ ರೆಡ್ಡಿ ಸಮುದಾಯ ಹಾಗೂ ಕ್ಷೇತ್ರದ ಇತರೆ ಸಮುದಾಯದ ಮತದಾರರು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಿದರು. ಅದರ ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ಬಿ.ಶಿವಃಣ್ಣ ಜಯಭೇರಿ ಬಾರಿಸಿದರು. ಸತತವಾಗಿ ಎರಡು ಬಾರಿ ಜಯಗಳಿಸಿರುವ ಬಿ.ಶಿವಣ್ಣ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ತಿಕ್ಕಾಟ : ಎಸ್‌ಸಿ ಮೀಸಲು ಕ್ಷೇತ್ರವಾದ ಆನೇಕಲ್‌ನಲ್ಲಿ ಈ ಬಾರಿ ಟಿಕೆಟ್‌ಗೆ ಭಾರೀ ಪೈಪೋಟಿ ಎದುನರಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ. ಶಿವಣ್ಣ ಅವರಿಗೇ ಟಿಕೆಟ್ ಸಿಗುವುದು ಬಹುತೇಕ ಖಚಿತ ಆಗಿದೆ. ಆದರೆ ಬಿಜೆಪಿಯಲ್ಲಿ ಭಾರೀ ಸ್ಪರ್ಧೆ ನಡೆಯುತ್ತಿದೆ.

ಕೇಂದ್ರ ಸಚಿವ ನಾರಾಯಣ ಸ್ವಾಮಿ ಪುತ್ರಿ ಶೀತಲಾ ನಾರಾಯಣ ಸ್ವಾಮಿ ಟಿಕೆಟ್ ಬಯಸಿದ್ದಾರೆ. ಮತ್ತೊಂದೆಡೆ ಮಾಜಿ ಐಎಎಸ್ ಅಧಿಕಾರಿ, ಚಿತ್ರ ನಟ ಕೆ. ಶಿವರಾಮ್, ಬಿಜೆಪಿ ಮುಖಂಡ ಹುಲ್ಲಳ್ಳಿ ಶ್ರೀನಿವಾಸ, ಟಿ.ವಿ. ಬಾಬು ಬಂಡಾಪುರ, ಪಟಾಪಟ್ ಶ್ರೀನಿವಾಸ್ ಮುಂತಾದವರು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಎಸ್‌ಪಿ ಮೈತ್ರಿಮಾಡಿಕೊಂಡ ಪರಿಣಾಮ ಅನೇಕಲ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ಪರ್ಧಿಸದೆ, ಬಿಎಸ್‌ಪಿಗೆ ಬೆಂಬಲ ಘೋಷಿಸಲಾಗಿತ್ತು. ಆದರೆ, ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‌ ಬಾವುಟ ಆನೇಕಲ್‌ ತಾಲೂಕಿನಾದ್ಯಂತ ಹಾರಾಡುತ್ತಿದೆ ಜೆಡಿಎಸ್‌ ಅಭ್ಯರ್ಥಿಯಾಗಿ ಕೆ.ಪಿ.ರಾಜು ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಅವರು ತಾಲೂಕಿನಾದ್ಯಂತ ಬಿರುಸಿನ ಪ್ರಚಾರ ಕೂಗೊಂಡಿದ್ದಾರೆ. ಇನ್ನು ಆನೇಕಲ್‌ ತಾಲೂಕಿನಲ್ಲಿ ಆನೆ ಗುರುತಿನ ಬಿಎಸ್‌ಪಿ ಪಕ್ಷಕ್ಕೆ ತನ್ನದೇ ಆದ ವರ್ಚಸ್ಸಿದೆ. 1990ರ ದಶಕದಲ್ಲಿ ಬಿ.ಗೋಪಾಲ್‌ ಅವರ ಹುಟ್ಟು ಹಾಕಿದ ಬಹುಜನ ಚಳವಳಿ ಬಗೆಗಿನ ಪ್ರೀತಿಯನ್ನು ತಾಲೂಕಿನ ಜನತೆ ಈಗಲೂ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿಎಸ್‌ಪಿ ಅಭ್ಯರ್ಥಿ ಡಾ.ಬಿನ್ನಪ್ಪ ಚಿಕ್ಕಹಾಗಡೆ ಅವರು, ಕಳೆದ ಒಂದು ವರ್ಷದಿಂದಲೂ ಬಿಎಸ್‌ಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಹಳ್ಳಿ ಹಳಿಗಳಲ್ಲಿ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ : ಆನೇಕಲ್ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಕಾಂಗ್ರೆಸ್-ಬಿಜೆಪಿ ನಡುವೆಯೇ ಅಧಿಕಾರ ಗಿರಿಕಿ ಹೊಡೆಯುತ್ತಿರುವುದನ್ನು ಗಮನಿಸಬಹುದಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಈ ಎರಡೂ ಪಕ್ಷಗಳ ನಡುವೆಯೇ ನೇರ ಸ್ಪರ್ಧೆ ಇದೆ. ಇದರ ನಡುವೆ ಜೆಡಿಎಸ್ ಬಾವುಟಗಳು ಕೂಡ ಕ್ಷೇತ್ರದಲ್ಲಿ ಹಾರಾಡುತ್ತಿದೆ.‌ ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಮತಗಳು ಇನ್ನಿತರೆ ಪಕ್ಷಗಳಿಗೆ ಹರಿದು ಹೋಗದಂತೆ ಈಗಾಗಲೇ ಬೂತ್ ಮಟ್ಟದಲ್ಲೇ ಕಮಿಟಿಗಳನ್ನು ರಚಿಸಿ, ಪಕ್ಷದ ಮುಖಂಡರು ಮುನ್ನಚ್ಚರಿಕೆಗಳನ್ನು ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆನೇಕಲ್‌ ತಾಲೂಕಿನ ಸಮಸ್ಯೆಗಳು : ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಅಂಟಿಕೊಂಡೇ ಇರುವ ಆನೇಕಲ್‌ ವಿಧಾನಸಭಾ ಕ್ಷೇತ್ರವು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಎಲೆಕ್ಟ್ರಾನಿಕ್‌ ಸಿಟಿ. ಬೊಮ್ಮಸಂದ್ರ ಕೈಗಾರಿಕೆ, ಜಿಗಣಿ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡಿದೆ. ಒಂದು ರೀತಿಯಲ್ಲಿ ಆನೇಕಲ್‌ನಲ್ಲಿ ಕೈಗಾರಿಕಾ ಕ್ರಾಂತಿಯೇ ಆಗುತ್ತಿದೆಯೆಂದೆ ಹೇಳಬಹುದು. ಆದರೆ, ಸ್ಥಳೀಯರಿಗೆ ಉದ್ಯೋಗ ಎಂಬುದು ಗಗನ ಕುಸುಮವೇ ಆಗಿದೆ. ಹಾಗೂ
ಸರ್ಕಾರಿ ಸೂಪರ್‌ ಸ್ಪೆಷಲಿಟಿ ಆಸ್ಪತ್ರೆ ಇಲ್ಲ. ರಸ್ತೆಗಳಂತೂ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗೆ ಹಲವು ಸಮಸ್ಯೆಗಳ ತಾಣವಾಗಿದೆ.

ಕ್ಷೇತ್ರದ ಜನಸಂಖ್ಯೆ : ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು 3,76,123 ಮತದಾರರಿದ್ದು, 1.97,745 ಪುರುಷ ಹಾಗೂ 1,78,299 ಮಹಿಳಾ ಮತದಾರರಿದ್ದಾರೆ. ಹಾಗೂ 79 ತೃತೀಯ ಲಿಂಗಿಗಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *