ಕೆ. ಶಶಿಕುಮಾರ್ ಮೈಸೂರ್, ಪತ್ರಕರ್ತರು
ನಮ್ಮ ಮನದ ಮಾತುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತಿಲ್ಲ ಬೇರೆಯವರ `ಮನ್ ಕೀ ಬಾತ್’ ಗಳನ್ನು ಮಾತ್ರ ಕೇಳಬೇಕು ಎಂದರೆ ಹೇಗೆ? ಮಾತನಾಡಲು ಹೊರಟಾಗ ಕುತ್ತಿಗೆ ಅದುಮಿದಂತಹ ಈ ಹೇರಿಕೆ ನಾವು ಉಸಿರಾಡುವ ಗಾಳಿಯನ್ನೇ ಕಸಿದುಕೊಂಡಂತೆ ಅಲ್ಲವೆ? ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸ್ವಾತಂತ್ರ್ಯವನ್ನು ಇಂದು ನಮ್ಮ ದೇಶವನ್ನು ಆಳುತ್ತಿರುವವರಿಗೆ ಕೊಟ್ಟವರು ಯಾರು? ಯಾರೂ ಕೊಟ್ಟಿಲ್ಲ. ತಮಗೆ ತಾವೇ ಅವರು ಆ ಅಧಿಕಾರ ಕೊಟ್ಟುಕೊಂಡಿದ್ದಾರೆ. ಮನಬಂದಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಏಕೆಂದರೆ ಜನರು ಅತಿರೇಕದ ಅಧಿಕಾರವನ್ನು ಸಹಿಸಿಕೊಳ್ಳುತ್ತಿದ್ದಾರೆ. ʻನಮಗೇಕೆ?ʼ ಎಂಬ ನಿರ್ಲಕ್ಷ್ಯವನ್ನು ಬೆಳೆಸಿಕೊಂಡಿದ್ದಾರೆ. ಹರಕೆಯ ಕುರಿಯು ವಧಾಸ್ಥಾನದವರೆಗೂ ತಾನೇ ನಡೆದುಕೊಂಡು ಹೋಗಿ ನಿಲ್ಲುವಂತೆ ಜನರು ಕಣ್ಣು ಮುಚ್ಚಿ ಹೆಜ್ಜೆಯಿಡುತ್ತಿದ್ದಾರೆ. ಏನೋ ಅಪಾಯ ನಮ್ಮ ಮುಂದಿನ ಹೆಜ್ಜೆಯಡಿ ಕಾದಿದೆ ಎಂದೆನಿಸಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಪ್ರಪಾತಕ್ಕೆ ಆಹುತಿಯಾಗಿರುತ್ತಾರೆ.
ಅದೊಂದು ಕಾಲವಿತ್ತು. ಅಕ್ರಮಗಳು ಕಂಡರೆ ಜನ ಸಿಡಿದೆದ್ದು ನಿಲ್ಲುತ್ತಿದ್ದರು. ಅನ್ಯಾಯ ಎದುರಾದರೆ ಸೆಟೆದೆದ್ದು ಪ್ರತಿಭಟಿಸುತ್ತಿದ್ದರು. ಭ್ರಷ್ಟರನ್ನು ಕಂಡರೆ ಛೀ, ಥೂ ಎನ್ನುತ್ತಿದ್ದರು. ದುಷ್ಟರನ್ನು ದೂರವಿಡುತ್ತಿದ್ದರು. ನಮ್ಮ ಸಮಾಜವನ್ನು ಸುರಕ್ಷಿತವಾಗಿಡಲು ಜನರ ಆ ಧ್ವನಿಯೇ ಸಾಕಾಗಿತ್ತು. ಜನರ ಧಿಕ್ಕಾರದ ಘೋಷಣೆಗಳು ಸರ್ಕಾರಗಳನ್ನು ಅಲುಗಾಡಿಸುತ್ತಿದ್ದವು. ಆಳುವವರ ಎದೆಯನ್ನು ನಡುಗಿಸುತ್ತಿದ್ದವು. ಜನಶಕ್ತಿಗೆ, ಅಕ್ರಮಗಳ ವಿರುದ್ಧ ಸೆಟೆದು ನಿಲ್ಲುತ್ತಿದ್ದ ಜನ ಸಮುದಾಯಗಳ ಆಕ್ರೋಶಕ್ಕೆ ತಪ್ಪು ಮಾಡಿದ ಸರ್ಕಾರಗಳು ತಲೆಬಾಗಿ ತಪ್ಪೊಪ್ಪಿಕೊಳ್ಳುತ್ತಿದ್ದವು. ಆ ಕಾಲ ನಿಜಕ್ಕೂ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ, ಜನಾಭಿಪ್ರಾಯಕ್ಕೆ ಜನಪ್ರತಿನಿಧಿಗಳು ಗೌರವ ನೀಡುವ ಒಂದು ಸುವರ್ಣ ಕಾಲವಾಗಿತ್ತು.
ಆದರೆ ಇಂದು ಏನಾಗಿದೆ? ಆಳುವ ಸರ್ಕಾರಗಳು ಮನಬಂದಂತೆ ಆಡಳಿತ ನಡೆಸುತ್ತಿದ್ದರೂ ಜನರೇಕೆ ಮೌನವಾಗಿದ್ದಾರೆ? ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೊಟ್ಟ ಆಶ್ವಾಸನೆಗಳೆಲ್ಲ ಬೊಗಳೆ ಮಾತುಗಳಾಗಿಯೇ ಉಳಿದುಹೋದರೂ ಜನರೇಕೆ ಪ್ರಶ್ನಿಸದೆ ಇದ್ದಾರೆ? ಅಗತ್ಯ ವಸ್ತುಗಳ ಬೆಲೆಗಳು ಆಕಾಶಕ್ಕೇರಿದರೂ ಜನರೇಕೆ ಸಹಿಸಿಕೊಂಡಿದ್ದಾರೆ? ಅನ್ಯಾಯ, ಅಕ್ರಮ, ಅತ್ಯಾಚಾರಗಳು ಮಂತ್ರಿಗಳು, ಶಾಸಕರು ಮತ್ತು ಅವರ ಸಂಬಂಧಿಕರಿಂದಲೇ ನಡೆಯುತ್ತಿದ್ದರೂ ಜನರೇಕೆ ಸುಮ್ಮನಿದ್ದಾರೆ? ಭ್ರಷ್ಟಾಚಾರ ಮಿತಿ ಮೀರಿ, ಆಡಳಿತ ಪಕ್ಷಗಳ ಶಾಸಕರು ಮತ್ತು ಅವರ ಆಪ್ತರೇ ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿರುವುದು ಬಟಾಬಯಲಾದರೂ ಜನರೇಕೆ ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಬೇರೆತ್ತಲೋ ನೋಡುತ್ತಿದ್ದಾರೆ?
ನಮ್ಮ ಭಾರತ ದೇಶವೆಂದರೆ ಅದು ಸುಮ್ಮನೇ ಒಂದು ಭೂ ಪ್ರದೇಶ ಮಾತ್ರವಲ್ಲ. ಪರಕೀಯರಾದ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ನಮ್ಮ ನೆಲವನ್ನು ನಮ್ಮ ಸ್ವಂತದ್ದಾಗಿಸಿಕೊಳ್ಳುವ ಸಲುವಾಗಿ ನಡೆಸಿದ ಸ್ವಾತಂತ್ರ್ಯ ಹೋರಾಟದಲ್ಲಿ ದಶದಿಕ್ಕುಗಳೂ ಚದುರಿಹೋಗುವಂತೆ ಘೋಷಣೆಗಳನ್ನು ಮೊಳಗಿಸಿದ ಗಟ್ಟಿ ಜನಧ್ವನಿ ನಮ್ಮದು. ಬ್ರಿಟಿಷ್ ದೊರೆಗಳ ರಕ್ತ ಹೆಪ್ಪುಗಟ್ಟುವಂತೆ ಶತ್ರುಗಳ ರಕ್ತದೋಕುಳಿ ನಡೆಸಿದ ಶೌರ್ಯ ನಮ್ಮದು. ಹೋರಾಟಗಳ ಮುಂಚೂಣಿಯಲ್ಲಿದ್ದ ನಾಯಕರು ಒಂದು ಕರೆ ನೀಡಿದರೆ ಸಾಕು, ಸಂಪರ್ಕ ಸಾಧನಗಳ ಕೊರತೆಯಿದ್ದ ಕಾಲದಲ್ಲೂ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಏನನ್ನೂ ಲೆಕ್ಕಿಸದೆ ಮುನ್ನುಗ್ಗುತ್ತಿದ್ದ ವೀರ ಇತಿಹಾಸ ನಮ್ಮ ದೇಶಕ್ಕಿದೆ. ಹೀಗೆ ಹೋರಾಟಗಳ ಪರಂಪರೆಯಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆದುಕೊಂಡ ಇತಿಹಾಸ ನಮ್ಮದು. ಹೀಗಿದ್ದ ನಮ್ಮ ತಾಯ್ನಾಡಿನಲ್ಲಿ ಇಂದು ಜನರೆಲ್ಲ ತಮಗೇನೂ ಆಗಿಲ್ಲ, ತಮಗೇನೂ ಗೊತ್ತಿಲ್ಲ, ತಮಗೇನೂ ಸಂಬಂಧವಿಲ್ಲ ಎಂಬಂತೆ ನಿರ್ವೀರ್ಯರಾಗಿ ಮನೆ ಬಾಗಿಲು ಹಾಕಿಕೊಂಡು ತಣ್ಣಗೆ ಕುಳಿತಿರುವುದನ್ನು ಕಂಡರೆ ಭಯವಾಗುತ್ತಿದೆ. ಏನೋ ಎಡವಟ್ಟಾಗಿದೆ ಎನಿಸುತ್ತಿದೆ. ಏಕೋ ಇದು ಅಸಹಜ ಎಂದೆನಿಸಿ ಆತಂಕ ಮೂಡುತ್ತಿದೆ.
ಇದನ್ನು ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ ಎದುರಾಗಿದೆ: ಪ್ರೊ. ಎಸ್.ಜಿ.ಸಿದ್ದರಾಮಯ್ಯ
ಎಲ್ಲಾ ಸಂದರ್ಭಗಳಲ್ಲೂ ಜನಗಳೇ ಬೀದಿಗಿಳಿದು ಹೋರಾಡಬೇಕು ಎಂಬ ನಿಯಮವಿಲ್ಲ. ಜನಪರ ಸಂಘಟನೆಗಳು, ನೌಕರರ, ಕಾರ್ಮಿಕರ, ಶ್ರಮಜೀವಿಗಳ ಸಂಘಗಳು ಪ್ರತಿಭಟನೆ, ಮೆರವಣಿಗೆ ಮುಂತಾದವುಗಳನ್ನು ನಡೆಸುವ ಮೂಲಕ ಸಾಂಕೇತಿಕವಾಗಿ ತಮ್ಮ ವಿರೋಧವನ್ನು ದಾಖಲಿಸುವ ಪ್ರಕ್ರಿಯೆ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಸಂಘಟನೆಗಳು ಅನ್ಯಾಯದ ವಿರುದ್ಧ ದನಿಯೆತ್ತಿದರೆ ಅದಕ್ಕೆ ಜನಸಮೂಹದಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿತ್ತು. ಪ್ರತಿಭಟನಾ ಮೆರವಣಿಗೆಗಳು ಸಾಗುತ್ತಿದ್ದರೆ ಜನರು ಸಹಾ ಸ್ವಯಂಪ್ರೇರಿತರಾಗಿ ಆ ಸಾಲುಗಳನ್ನು ಸೇರಿಕೊಂಡು ಹೆಜ್ಜೆಯಿಕ್ಕುತ್ತಿದ್ದರು. ಕನಿಷ್ಠಪಕ್ಷ ಪ್ರತಿಭಟನೆಗಳು ನಡೆಯುತ್ತಿದ್ದಾಗ ನಿಂತು ನೋಡುತ್ತಿದ್ದರು. ಆ ಪ್ರತಿಭಟನೆಗೆ ಕಾರಣವೇನು ಎಂದು ತಿಳಿದುಕೊಂಡು, ಕರಪತ್ರಗಳನ್ನು ಪಡೆದುಕೊಂಡು ಓದುತ್ತಾ ಮುಂದಿನ ಹೆಜ್ಜೆಯಿಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೋರಾಟಗಾರರ ಬಗ್ಗೆ ಅನಾದರ ಹೆಚ್ಚಾಗಿದೆ. ಅವರನ್ನು ಅಪರಾಧಿಗಳೆಂಬಂತೆ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅವರೆಡೆಗೆ ಅಸಡ್ಡೆ, ನಿರ್ಲಕ್ಷತೆ ಹೆಚ್ಚುತ್ತಿದೆ. ಇನ್ನೂ ಅಪಾಯಕಾರಿ ಬೆಳವಣಿಗೆಯೆಂದರೆ ಅವರೆಡೆಗಿನ ಅಸಹನೆಯ ವಲಯವೂ ವಿಸ್ತಾರಗೊಳ್ಳುತ್ತಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ದಿನಬಳಕೆಯ ವಸ್ತುಗಳ ಬೆಲೆ ಏರಿದಾಗ, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆಗಳು ಕೇವಲ ಹತ್ತಿಪ್ಪತ್ತು ರೂಪಾಯಿಗಳಷ್ಟು ಹೆಚ್ಚಾದಾಗ ಬೆಟ್ಟವೇ ಕುಸಿದು ತಲೆಯ ಮೇಲೆ ಬಿದ್ದಂತೆ ಆಡುತ್ತಿದ್ದ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದುದನ್ನು ಕಂಡಿದ್ದೇವೆ. ಎಲ್ಲೋ ಯಾರಿಗೋ ಅನ್ಯಾಯವಾಯಿತು, ಯಾರದೋ ಜೀವ, ಜೀವನ ಹಾಳಾಯಿತು ಎಂಬ ಮಾಹಿತಿ ಸಿಕ್ಕಿದರೂ ಅದು ತಮಗೇ ಸಂಭವಿಸಿತೇನೋ ಎಂಬಂತೆ ಜನರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದವು. ಜನರ ಒಳಿತಿಗೆ ಪೂರಕವಾದ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರಿಗೆ ಜನಬೆಂಬಲ ವ್ಯಕ್ತವಾಗುತ್ತಿತ್ತು. ಅವರು ತಮ್ಮ ಪರವಾಗಿ ಪ್ರತಿಭಟಿಸುತ್ತಿದ್ದಾರೆ ಎಂಬ ಅಭಿಮಾನದಿಂದ ಅವರನ್ನು ಕಾಣುತ್ತಿದ್ದರು. ಪ್ರತಿಭಟನಾ ಮೆರವಣಿಗೆಗಳು ಸಾಗಿ ಹೋಗುತ್ತಿದ್ದಾಗ ಅಕ್ಕಪಕ್ಕದ ಅಂಗಡಿಗಳವರು ತಾವು ಮಾರಲಿಟ್ಟಿದ್ದ ಮಿಠಾಯಿಗಳನ್ನು ಘೋಷಣೆ ಕೂಗುವವರಿಗೆ ಹಂಚುತ್ತಿದ್ದರು. ಕೆಲವು ಮನೆಗಳವರು ನೀರು ಮಜ್ಜಿಗೆ ತಯಾರಿಸಿ ಹಂಚುತ್ತಿದ್ದರು.
ಆದರೆ ಇಂದು ಪ್ರತಿಭಟನೆಗಳ ಮಾತು ಹಾಗಿರಲಿ, ಪ್ರತಿಕ್ರಿಯೆಗಳಿಗೂ ಬಹುದೊಡ್ಡ ಬರ ಬಂದಿದೆ. ಪತ್ರಕರ್ತರಾದ ನಾವೇ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಹೋದರೆ ʻಅಯ್ಯೋ ಹೋಗಿ ಸಾರ್, ನಾವು ಅದರ ಬಗ್ಗೆ ಮಾತನಾಡಿದರೆ ಎಲ್ಲಾ ಸರಿಹೋಗುತ್ತದಾ? ಎಲ್ಲರಿಗೂ ಆಗುವಂತೆ ನಮಗೂ ಆಗುತ್ತದೆ. ಅನುಭವಿಸಿದರೆ ಆಯ್ತುʼ ಎಂದು ನಿರ್ಲಕ್ಷ್ಯದ ಮಾತುಗಳನ್ನಾಡುತ್ತಾರೆ. ಇನ್ನೂ ಹೆಚ್ಚು ಕೆಣಕಲು ಹೋದರೆ ಯಾವುದಾದರೂ ವೇದಾಂತದ, ಸಿದ್ಧಾಂತದ ಮಾತುಗಳನ್ನಾಡಿ ನಮಗೇ ತಲೆ ಕೆಟ್ಟುಹೋಗುವಂತೆ ಮಾಡಿಬಿಡುತ್ತಾರೆ! ಅಷ್ಟರಮಟ್ಟಿಗೆ ಜನರು ಇಂದು ನಿರ್ಲಕ್ಷ್ಯ ತೋರುತ್ತಾ ತಮ್ಮನ್ನು ತಾವೇ ಹಳಿದುಕೊಳ್ಳುವ ಮಟ್ಟಿಗೆ ನಿರುತ್ಸಾಹಿಗಳಾಗುತ್ತಿದ್ದಾರೆ. ಸುಖಾಸುಮ್ಮನೆ ತಮ್ಮನ್ನೇ ತಾವು ಅಪರಾಧಿಗಳೆಂಬಂತೆ ಬಿಂಬಿಸಿಕೊಳ್ಳುವುದಕ್ಕಿಂತಲೂ ಅಪಾಯಕಾರಿ ಬೆಳವಣಿಗೆ ಮತ್ತೊಂದಿರಲಾರದು.
ಇದನ್ನು ಓದಿ: ಪತ್ರಿಕಾ ಸ್ವಾತಂತ್ರ ಬೆಂಬಲಿಸಿ ಪ್ರಜಾಪ್ರಭುತ್ವ ತತ್ವ ಎತ್ತಿ ತೋರಿಸಲು ಇದು ಸಕಾಲ: ಬಿಬಿಸಿ ಬೆಂಬಲಕ್ಕೆ ನಿಂತ ಅಮೆರಿಕ
ಇಂದು ನಮ್ಮ ದೇಶದಲ್ಲಿ ಸಂವಿಧಾನದ ನಿಯಮಗಳು ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಉಲ್ಲಂಘಿಸಲ್ಪಡುತ್ತಿವೆ. ಪ್ರಜಾಪ್ರಭುತ್ವದ ಆಶಯಗಳು ತುಳಿಯಲ್ಪಡುತ್ತಿವೆ. ಪ್ರಜೆಗಳೇ ಪ್ರಭುಗಳು ಎಂಬ ನೀತಿ ದಮನಿಸಲ್ಪಟ್ಟು ಸರ್ವಾಧಿಕಾರಿ ಧೋರಣೆಗಳು ವಿಜೃಂಭಿಸುತ್ತಿವೆ. ಯಾರೂ ಮನಬಿಚ್ಚಿ ಮಾತನಾಡುವಂತಿಲ್ಲ. ಮಾತನಾಡಿದರೂ ಯಾರೊಂದಿಗೆ, ಯಾವ ವಿಷಯದ ಬಗ್ಗೆ, ಎಷ್ಟು ಪ್ರಮಾಣದಲ್ಲಿ ಮಾತನಾಡಬೇಕು ಎಂಬುದನ್ನು ಅಳೆದೂ ತೂಗಿ ಬಾಯಿ ಬಿಚ್ಚಬೇಕಾದ ವಿಷಮ ಪರಿಸ್ಥಿತಿ ಇಂದು ನಮ್ಮ ಎದುರಿನಲ್ಲಿದೆ. ಆದರೆ ಈ ಬಗೆಯ ಕಡಿವಾಣ ಎಲ್ಲರಿಗೂ ವಿಧಿಸಲ್ಪಟ್ಟಿಲ್ಲ. ಆಳುವ ಸರ್ಕಾರಗಳ, ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳವರು, ಅವುಗಳ ಅಂಗʻಸಂಘʼಗಳ ನಾಯಕರು ಹಾಗೂ ಆ ರಾಜಕೀಯ ಪಕ್ಷಗಳನ್ನು ಬೆಂಬಲಿಸುವವರು ಮಾತ್ರ ಎಲ್ಲಿ, ಏನು ಬೇಕಾದರೂ ಮಾತನಾಡಬಹುದು. ʻಕೊಚ್ಚಿಹಾಕಿ, ಕೊಂದುಬಿಡಿ, ಬೆಂಕಿ ಹಚ್ಚಿ, ಅತ್ಯಾಚಾರ ಮಾಡಿʼ ಎಂದು ಬಹಿರಂಗವಾಗಿಯೇ ಕರೆ ನೀಡಬಹುದು. ʻಆ ಜಾತಿಯವರು ದೇಶದ್ರೋಹಿಗಳು, ಈ ಸಮುದಾಯದವರು ದೇಶವನ್ನೇ ಮಾರುವವರುʼ ಎಂದು ನೇರ ಆರೋಪಗಳನ್ನು ಮಾಡಬಹುದು. ಹಾಗೆ ಮಾತನಾಡುವಾಗ ಸಾರ್ವಜನಿಕವಾಗಿಯೇ ಮಾರಕಾಸ್ತ್ರಗಳನ್ನು ಎತ್ತಿ ಹಿಡಿದು ಹೆದರಿಸಬಹುದು. ಆದರೆ ಅವರನ್ನೆಲ್ಲಾ ದೇಶಭಕ್ತರು, ದೇಶಕ್ಕಾಗಿ ಅವರು ಅಂತಹ ಮಾತುಗಳನ್ಜು ಆಡಬಹುದು ಎಂಬ ಸಮರ್ಥನೆಗಳು ಕೇಳಿಬರುತ್ತವೆ. ಅವರ ವಿರುದ್ಧ ಯಾವ ಕೇಸೂ ದಾಖಲಾಗುವುದಿಲ್ಲ. ಬದಲಿಗೆ ಆ ಬಾಯಿ ಹರುಕರಿಗೆ ಪದವಿ, ಪ್ರಶಸ್ತಿ, ಪುರಸ್ಕಾರಗಳು ಕೊಡಲ್ಪಡುತ್ತಿವೆ. ಹಾದಿಬೀದಿಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಇಂತಹ ವಿಪರ್ಯಾಸದ ಸ್ಥಿತಿ ನಮ್ಮ ಸಮಾಜಕ್ಕೆ ಬಂದೊದಗಿದೆ.
ಬೆಲೆಗಳು ಏರಿದ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬಹುದು. ಅಥವಾ ದುಡಿಮೆಯ ಆದಾಯವನ್ನು ಹೇಗಾದರೂ ಹೆಚ್ಚಿಸಿಕೊಂಡು ಖರೀದಿಸಬಹುದು. ಆದರೆ ನಮ್ಮ ಮನದ ಮಾತುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತಿಲ್ಲ ಬೇರೆಯವರ ʻಮನ್ ಕೀ ಬಾತ್ʼ ಗಳನ್ನು ಮಾತ್ರ ಕೇಳಬೇಕು ಎಂದರೆ ಹೇಗೆ? ಮಾತನಾಡಲು ಹೊರಟಾಗ ಕುತ್ತಿಗೆ ಅದುಮಿದಂತಹ ಈ ಹೇರಿಕೆ ನಾವು ಉಸಿರಾಡುವ ಗಾಳಿಯನ್ನೇ ಕಸಿದುಕೊಂಡಂತೆ ಅಲ್ಲವೆ? ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸ್ವಾತಂತ್ರ್ಯವನ್ನು ಇಂದು ನಮ್ಮ ದೇಶವನ್ನು ಆಳುತ್ತಿರುವವರಿಗೆ ಕೊಟ್ಟವರು ಯಾರು? ಯಾರೂ ಕೊಟ್ಟಿಲ್ಲ. ತಮಗೆ ತಾವೇ ಅವರು ಆ ಅಧಿಕಾರ ಕೊಟ್ಟುಕೊಂಡಿದ್ದಾರೆ. ಮನಬಂದಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಏಕೆಂದರೆ ಜನರು ಅತಿರೇಕದ ಅಧಿಕಾರವನ್ನು ಸಹಿಸಿಕೊಳ್ಳುತ್ತಿದ್ದಾರೆ. ʻನಮಗೇಕೆ?ʼ ಎಂಬ ನಿರ್ಲಕ್ಷ್ಯವನ್ನು ಬೆಳೆಸಿಕೊಂಡಿದ್ದಾರೆ. ಹರಕೆಯ ಕುರಿಯು ವಧಾಸ್ಥಾನದವರೆಗೂ ತಾನೇ ನಡೆದುಕೊಂಡು ಹೋಗಿ ನಿಲ್ಲುವಂತೆ ಜನರು ಕಣ್ಣು ಮುಚ್ಚಿ ಹೆಜ್ಜೆಯಿಡುತ್ತಿದ್ದಾರೆ. ಏನೋ ಅಪಾಯ ನಮ್ಮ ಮುಂದಿನ ಹೆಜ್ಜೆಯಡಿ ಕಾದಿದೆ ಎಂದೆನಿಸಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಪ್ರಪಾತಕ್ಕೆ ಆಹುತಿಯಾಗಿರುತ್ತಾರೆ.
ಇದನ್ನು ಓದಿ: ದೃಶ್ಯ ಮಾಧ್ಯಮಗಳು ಸುದ್ದಿ ರೋಚಕತೆಯ ಸ್ಪರ್ಧೆಗೆ ಇಳಿದಿವೆ: ಸರ್ವೋಚ್ಚ ನ್ಯಾಯಾಲಯ
ಇಂತಹ ಅಪಾಯಕಾರಿ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಯೋಚಿಸಿದರೆ ಆ ಕಾರಣಗಳೂ ಗಾಬರಿ ಹುಟ್ಟಿಸುವಂತಿವೆ! ನಮ್ಮ ದೇಶದ ನಿರ್ವಹಣೆಯ ಜವಾಬ್ದಾರಿಯನ್ನು ಸಮರ್ಥ ವ್ಯಕ್ತಿಗಳ ಕೈಗೆ ಒಪ್ಪಿಸಿಬಿಟ್ಟಿದ್ದೇವೆ. ಅವರು ಎಲ್ಲವನ್ನೂ ಸರಿ ಮಾಡುತ್ತಾರೆ. ಅವರು ಮಾಡಿದ್ದೆಲ್ಲಾ ಸರಿ. ಈ ಹಿಂದೆ ಆಡಳಿತ ನಡೆಸಿದವರು ಸರಿಯಿರಲಿಲ್ಲ. ಈಗಿರುವವರೇ ಸರಿ ಎಂಬ ಅಭಿಪ್ರಾಯವನ್ನೇ ಜನರು ವ್ಯಕ್ತಪಡಿಸುತ್ತಿದ್ದಾರೆ. ಆಳುತ್ತಿರುವವರು ಎಷ್ಟೆಲ್ಲಾ ಅಧ್ವಾನಗಳನ್ನು ಮಾಡಿದ್ದು ಅದರಿಂದ ದೇಶ ಅಧೋಗತಿಯತ್ತ ಸಾಗಿದೆ ಎಂಬುದಕ್ಕೆ ಹಲವು ಸಾಕ್ಷ್ಯಗಳು ತಮ್ಮ ಕಣ್ಣ ಮುಂದಿದ್ದರೂ ಕಣ್ಣ ರೆಪ್ಪೆಗಳನ್ನು ಬಿಚ್ಚಿ ನೋಡುವುದಕ್ಕೂ ಜನರು ಬಯಸದಂತೆ ಅವರ ಬ್ರೈನ್ ವಾಷ್ ಮಾಡಲಾಗಿದೆ. ಹಾಗೆ ಅವರ ಮಿದುಳು ತೊಳೆಯಲು ಸಾಮಾಜಿಕ ಜಾಲತಾಣ ಎಂಬ ವಿಸ್ತಾರವಾದ ಅಸ್ತ್ರವನ್ನು ಮಾರ್ಜಕ ಮಾಧ್ಯಮವನ್ನಾಗಿ ಆಳುವ ಜನರು ಬಳಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಜನರು ತಮಗೆ ಅನ್ಯಾಯವಾದಾಗ, ಆಕ್ರೋಶಗೊಂಡಾಗ, ಅಧಿಕಾರಸ್ಥರ ದುರಾಡಳಿತ ಹೆಚ್ಚಾದಾಗ ಬೀದಿಗೆ ಬಂದು ಅರಚಾಡುವುದಲ್ಲದೆ ಬೇರೆ ದಾರಿ ಇರಲಿಲ್ಲ. ಧಿಕ್ಕಾರ ಕೂಗದಿದ್ದರೆ ಮನಸಿಗೆ ಸಮಾಧಾನವಾಗುತ್ತಿರಲಿಲ್ಲ. ಪ್ರತಿಭಟಿಸುವುದಕ್ಕಿಂತ ಅನ್ಯ ಮಾರ್ಗ ಇರಲೇ ಇಲ್ಲ. ಆದರೆ ಇಂದು ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಯಾರಾದರೂ ಏನಾದರೂ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿದರೆ ಅವುಗಳಿಗೆ ಜನರು ಒಂದು ಕಮೆಂಟನ್ನೋ, ಲೈಕನ್ನೋ ಒತ್ತಿ ಅಷ್ಟಕ್ಕೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬಂತೆ ಸುಮ್ಮನಾಗಿಬಿಡುತ್ತಾರೆ. ಅಷ್ಟಕ್ಕೇ ತಮ್ಮ ಮನದ ಆಕ್ರೋಶವನ್ನು ಶಮನಗೊಳಿಸಿಕೊಂಡುಬಿಡುತ್ತಿದ್ದಾರೆ. ಈ ಅಂಶವೂ ಸಹ ಜನರು ಇಂದು ಅನ್ಯಾಯದ ವಿರುದ್ಧ ಧ್ವನಿಯೆತ್ತದೆ ಸುಮ್ಮನಿರುವುದಕ್ಕೆ ಕಾರಣವಾಗಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.
ಇನ್ನೂ ಸುಮ್ಮನಿದ್ದರೆ, ಅನ್ಯಾಯ ಅಕ್ರಮಗಳನ್ನು ಕಂಡೂ ಕಾಣದಂತಿದ್ದರೆ, ದುರಾಡಳಿತದ ವಿರುದ್ಧ ಧ್ವನಿ ಎತ್ತದೇ ಹೋದರೆ ಜನರ ಧ್ವನಿ ಶಾಶ್ವತವಾಗಿ ಅಡಗಿಹೋಗುವ ಅಪಾಯವಿದೆ. ʻಮೌನಂ ಸಮ್ಮತಂʼ ಎಂಬ ಮಾತಿನಂತೆ ಮೌನವಾಗಿರುವ ಜನ ಸಮುದಾಯದ ಅವ್ಯಕ್ತ ಅಭಿಪ್ರಾಯಗಳೆಲ್ಲವೂ ತಮ್ಮ ಪರವಾಗಿಯೇ ಇದೆ ಎಂದು ದೇಶವಾಳುವ ಮಂದಿ ಸ್ವಯಂ ಘೋಷಿಸಿಕೊಂಡು, ತಮಗಿಷ್ಟಬಂದಂತೆ ಆಡಳಿತ ನಡೆಸಿ, ದೇಶವನ್ನು ಹಾಳು ಮಾಡುವಂತಹ ದುರಂತಗಳು ಸಂಭವಿಸಲು ಹೆಚ್ಚು ಕಾಲ ಕಾಯಬೇಕಿಲ್ಲ. ನಾವೀಗ ಆ ದುರಂತದ ಮೆಟ್ಟಿಲುಗಳ ಮೇಲೆಯೇ ಆಕಾಶ ನೋಡುತ್ತಾ ಮಲಗಿದ್ದೇವೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಆ ಮೆಟ್ಟಿಲುಗಳ ಮೇಲಿಂದಲೇ ಪ್ರಪಾತಕ್ಕೆ ಜಾರಲಿದ್ದೇವೆ. ಎಚ್ಚರವಿರಲಿ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಬದಲಾಗುತ್ತಿರುವ ಜನರ ಮನೋಧರ್ಮ ಅತ್ಯಂತ ಅಪಾಯಕಾರಿಯಾಗುತ್ತಾ ಸಾಗಿದೆ. ಒಂದು ಸಮಾಜದ ಆದ್ಯತೆ ಏನಾಗಿರಬೇಕು ಎಂಬುದನ್ನು ಜನರಿಗೆ ತಿಳಿಸಬೇಕಾದವರೇ ಭ್ರಷ್ಟರಾಗಿ ದೇಶದ ಅತ್ಯಂತ ಉನ್ನತ ಸ್ಥಾನಗಳಲ್ಲಿ ಬೀಡುಬಿಟ್ಟಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿಗಳಿಗೆಲ್ಲ ಬಿಡುಗಡೆಯ ಭಾಗ್ಯ. ನಂತರ ಪಕ್ಷದೊಳಗೆ ಅವಕಾಶ. ಸ್ವಲ್ಪಕಾಲ ಕಾಯ್ದರೆ ನಮಗೆ ಕಾಣುವುದೇ ಏದುಸಿರು ಬಿಡುತ್ತಿರುವ ಸಮಾಜ.
ನೈತಿಕ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿಬೆಳೆಯಬೇಕಾದ ಮಠಾಧೀಶರೇ ಇಂಥ ರಾಜಕೀಯ ಮಸಲತ್ತಿನೊಳಗೆ ಪಾಲುದಾರರಾದಾಗ ನೀತಿ ಇರದ ನಾಡೊಂದು ಉದಯಿಸದೇ?
ಇಷ್ಟೆಲ್ಲದರ ನಡುವೆ ಸಮಾಜವನ್ನ ಎಚ್ಚೆತ್ತ ಸ್ಥಿತಿಯಲ್ಲಿ ಇಟ್ಟು ಸಮಾಜದ ನೆಮ್ಮದಿಗೆ, ಮನುಷ್ಯ ಸಂಬಂಧಗಳ ಬೆಸುಗೆಗೆ ಕಾರಣವಾಗಬೇಕಿದ್ದ ಮಾಧ್ಯಮಗಳು ತಮಗಿರುವ ಜವಾಬ್ದಾರಿಯಿಂದ ದೂರ ನಿಂತು ಸುಳ್ಳುಗಳ ಮಳೆಗರೆಯುತ್ತಿವೆ. ಜನರ ಮನಸ್ಸನ್ನು ರೂಪಿಸಬೇಕಾದ ಜಾಗದಲ್ಲಿ ನಿಂತು ವಿರೂಪಗೊಳಿಸುತ್ತಿವೆ. ಇಂತಹ ವಿರೂಪವೇ ಕುರೂಪಿ ಸಮಾಜದ ನಿರ್ಮಾಣದ ಅಡಿಗಲ್ಲಾಗಿ ಉಳಿದುಬಿಡುವ ಅಪಾಯ ಇದ್ದೇ ಇದೆ. ಪತ್ರಿಕೆಗಳಲ್ಲಿ ಬರುವುದನ್ನೆಲ್ಲ ಸತ್ಯವೆಂದೇ ನಂಬುವ ಅಮಾಯಕ ಜನರನ್ನು ಅಸತ್ಯ ಬಲಿತೆಗೆದುಕೊಳ್ಳದಂತೆ ಎಚ್ಚರ ವಹಿಸಬೇಕಿದೆ.
ಶಶಿಕುಮಾರರ ಸಾಮಾಜಿಕ ಕಳಕಳಿಯ ಈ ಬರಹ ಸಕಾಲಿಕ.
ದಯಾನಂದ ಮೂರ್ತಿ, ಕುಕ್ಕರಹಳ್ಳಿ