ಬೆಂಗಳೂರು : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತು ಅವರ ಪುತ್ರ ಸಿದ್ದಾರ್ಥ್ ಸಿಂಗ್ ಹಾಗೂ ಅವರ ಸಂಬಂಧಿಕರು ಕಾನೂನು ಬಾಹಿರವಾಗಿ ಜಮೀನನ್ನು ಭೂ ಕಬಳಿಕೆ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಹೋರಾಟಗಾರ ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್. ಕುಮಾರಸ್ವಾಮಿ ಹಾಗೂ ನಗರಸಭೆ ಪಕ್ಷೇತರ ಸದಸ್ಯ ಅಬ್ದುಲ್ ಖದೀರ್ ಎಂಬುವರು ಸಚಿವ ಆನಂದ್ ಸಿಂಗ್ ಅವರು, ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ 180 ಎಕರೆ ಇನಾಂ ಜಮೀನನ್ನು ಅವರ ಮಗ ಸಿದ್ದಾರ್ಥ್ ಸಿಂಗ್ ಠಾಕೂರ್, ಭಾಮೈದ ಧರ್ಮೇಂದ್ರ ಸಿಂಗ್, ಮಾವ ಅಬ್ದುಲ್ ರಹೀಮ್ ಮತ್ತು ಇತರೆ ಎಂಟು ಜನರ ಹೆಸರಿನಲ್ಲಿ ಸಚಿವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ದಾಖಲೆಗಳ ಸಮೇತ ದೂರು ನೀಡಿ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ಇದು ನೇರಾನೇರ ಭೂ ಕಬಳಿಕೆ ಪ್ರಕರಣ. ಇದಕ್ಕೆ ನೆರವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. 180 ಎಕರೆಯಲ್ಲಿ 36.46 ಎಕರೆ ಖರಾಬು ಜಮೀನಿದೆ. ಖರಾಬು, ಹಳ್ಳದ ಜಮೀನು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನೀರಿಕ್ಷಕರು, ಅರಣ್ಯಾಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದರೆ 36 ಎಕರೆ ಜಮೀನು ಕೂಡಾ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿ ಗಳಿಕೆಯಲ್ಲಿ ಸಚಿವರ ಕುಟುಂಬಸ್ಥರೇ ಮೂವರಿದ್ದಾರೆ. ಸಚಿವರ ಪುತ್ರ, ಅಳಿಯ ಸೇರಿದಂತೆ 9 ಜನರ ಹೆಸರಲ್ಲಿ ಇನಾಮ್ ಆಸ್ತಿ ರಿಜಿಸ್ಟರ್ ಆಗಿದೆ ಎಂದು ದಾಖಲೆ ಸಮೇತ ಮಾಹಿತಿ ನೀಡಿರುವುದಾಗಿ ಹೇಳಿದರು.
ಸದ್ಯ ನಾವು 180 ಎಕರೆ ಜಮೀನು ಸರ್ಕಾರಕ್ಕೆ ಉಳಿಯಬೇಕು ಅಂತ ಒತ್ತಾಯ ಮಾಡುತ್ತಿದ್ದೇವೆ. ಈ ಬಗ್ಗೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದೇವೆ. ಅಲ್ಲಿಯೂ ನಮಗೆ ನ್ಯಾಯ ಸಿಗಲಿಲ್ಲ ಎಂದರೆ ಹೈಕೋರ್ಟ್ಗೂ ಹೋಗುತ್ತೇವೆ ಎಂದು ತಿಳಿಸಿದರು.
ಕಾನೂನು ಮೀರಿ ಸಚಿವರ ಮಗ, ಸಂಬಂಧಿಕರು ಮತ್ತು ಸಚಿವರು ಇತರೆ ಎಂಟು ಜನರ ಹೆಸರಿನಲ್ಲಿ 2020-21ರಲ್ಲಿ ತಮ್ಮ ಹೆಸರಿಗೆ ಬೇನಾಮಿ ಆಸ್ತಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಜಮೀನು ಕೃಷಿಯೇತರ ಜಮೀನಾಗಿ ಕೂಡ ಪರಿವರ್ತಿಸಿಕೊಂಡಿದ್ದಾರೆಂದು ವಿವರಿಸಿದ್ದಾರೆ.
ಕುಮಾರಸ್ವಾಮಿ ದೇವಾಲಯದ ಹೆಸರಿನಲ್ಲಿ ಒಟ್ಟು 330 ಎಕರೆ ಇನಾಮು ಜಮೀನಿದೆ. ಈ ಪೈಕಿ 74 ಎಕರೆ ಜಮೀನು 1982ರಲ್ಲಿ ರಾಜರತ್ನಂ, ಶ್ರೀನಿವಾಸ್ ಸೇರಿದಂತೆ ಒಟ್ಟು ಆರು ಜನ ಸಹೋದರರಿಗೆ ಮಂಜೂರಾಗುತ್ತದೆ. ಇನ್ನೂ ಹೆಚ್ಚಿನ ಜಮೀನು ಬೇಕೆಂದು ಇವರು ರಿಟ್ ಅರ್ಜಿ ಸಲ್ಲಿಸುತ್ತಾರೆ.
ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು 1990ರಲ್ಲಿ ಹೈಕೋರ್ಟ್ ತಿಳಿಸುತ್ತದೆ. ಅನಂತರ ವಿಷಯ ನನೆಗುದಿಗೆ ಬೀಳುತ್ತದೆ. 2019ರಲ್ಲಿ ಅರಣ್ಯ ಸಚಿವರಾಗಿದ್ದ ಆನಂದ್ ಸಿಂಗ್, ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವಾಗ ತಮ್ಮ ಪ್ರಭಾವ ಬಳಸಿ ರಾಜರತ್ನಂ, ಶ್ರೀನಿವಾಸ್ ಹಾಗೂ ಸಹೋದರರ ಮೂಲಕ ಜಮೀನು ಮಾರಾಟಕ್ಕೆ ಅರ್ಜಿ ಹಾಕಿಸುತ್ತಾರೆ. ಅಂದಿನ ಸಂಡೂರು ತಹಶೀಲ್ದಾರ್ ರಶ್ಮಿ ಅವರು ತಪ್ಪು ವರದಿ ಕೊಟ್ಟು ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾರೆ. ಇದರ ವಿರುದ್ಧ ಬಳ್ಳಾರಿ ಜಿಲ್ಲಾಧಿಕಾರಿಗೆ ದೂರು ಕೊಟ್ಟ ನಂತರ ಅವರು ಅದನ್ನು ತಡೆಹಿಡಿದಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರೆಸಾರ್ಟ್ನಲ್ಲಿ ಮಾರಾಮಾರಿ: ರಾಜಿ ಸಂಧಾನ ಹಿನ್ನೆಲೆಯಲ್ಲಿ ಪ್ರಕರಣ ರದ್ದು
ಚುನಾವಣೆ ಮುಗಿದ ನಂತರ ರಶ್ಮಿ ಅವರು ಪುನಃ ಸಂಡೂರು ತಹಶೀಲ್ದಾರ್ ಆಗಿ ನೇಮಕಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಉಪನೋಂದಣಾಧಿಕಾರಿಯಾಗಿದ್ದ ಜಯಪದ್ಮಾ, ಪ್ರಭಾರ ಕಂದಾಯ ನಿರೀಕ್ಷಕ ಕುಮಾರ್ ನಾಯಕ ಮತ್ತು ಗ್ರಾಮ ಲೆಕ್ಕಾಧಿಕಾರಿ ವೀಣಾ ಅವರು ತಪ್ಪು ವರದಿ ಕೊಟ್ಟು, ರಾಜರತ್ನಂ ಮತ್ತು ಶ್ರೀನಿವಾಸ್ ಅವರಿಗೆ ಕಂಪ್ಯೂಟರ್ ಪಹಣಿ ಮಾಡಿಸಿಕೊಳ್ಳಲು ನೆರವಾಗುತ್ತಾರೆ. ಅದನ್ನು ಆಧರಿಸಿ ಸಿದ್ದಾರ್ಥ್ ಸಿಂಗ್, ಧರ್ಮೇಂದ್ರ ಸಿಂಗ್ ಸೇರಿದಂತೆ ಇತರೆ ಒಂಬತ್ತು ಜನರಿಗೆ ಒಟ್ಟಿಗೆ ನೋಂದಣಿ ಮಾಡಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಇದರ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದರೂ ಅದನ್ನು ಪರಿಗಣಿಸದೆ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಆರೋಪಿಸಿದ್ದಾರೆ.
ಹಾಲಿ ಜಾಗದಲ್ಲಿ ನೂರಾರು ಗಂಧದ ಮರಗಳಿವೆ. ಕೋಟ್ಯಂತರ ರೂಪಾಯಿ ಬೆಲೆಬಾಳುತ್ತವೆ. ಮರಗಳನ್ನು ತೆಗೆಯಲು ಪ್ರಯತ್ನಿಸಲಾಗಿತ್ತು. ಆದರೆ ಈ ಕುರಿತು ಅರಣ್ಯ ಇಲಾಖೆಯವರಿಗೆ ದೂರು ಕೊಟ್ಟ ನಂತರ ಕೈಬಿಟ್ಟಿದ್ದರು. ನೂರಾರು ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಪಟ್ಟಾ ಕೊಡುತ್ತಿಲ್ಲ. ಸಚಿವರ ಒತ್ತಡಕ್ಕೆ ಮಣಿದು ಅವರ ಮಗ, ಸಂಬಂಧಿಕರ ಹೆಸರಿಗೆ ಮಾಡಿಕೊಟ್ಟಿದ್ದು ಸರಿಯೇ? ಸರ್ಕಾರ ಕೂಡಲೇ ಜಮೀನು ತನ್ನ ವಶಕ್ಕೆ ಪಡೆಯಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಸಚಿವ ಸಂಪುಟ ಸಭೆ: ಆನಂದ್ ಸಿಂಗ್, ಶ್ರೀರಾಮುಲು, ಆರ್ ಅಶೋಕ ಗೈರು
ಯಾರ ಯಾರ ಹೆಸರಿನಲ್ಲಿ ಆಸ್ತಿ ನೋಂದಣಿ:
ಸಿದ್ದಾರ್ಥ ಸಿಂಗ್ ಹೆಸರಲ್ಲಿ 13 ಎಕರೆ ನೋಂದಣಿ, ಧರ್ಮೇಂದ್ರ ಸಿಂಗ್ ಹೆಸರಲ್ಲಿ 22.19 ಎಕರೆ ನೋಂದಣಿ, ಅಬ್ದುಲ್ ರಹೀಮ್ 22.75 ಎಕರೆ ಜಮೀನು ನೋಂದಣಿ, ಸಿ. ಕುಮಾರಸ್ವಾಮಿ ಶೆಟ್ಟಿ 22.75 ಎಕರೆ ನೋಂದಣಿ, ಪಿ.ನಾಗರಾಜ್ ಹೆಸರಲ್ಲಿ 22.75 ಎಕರೆ ನೋಂದಣಿ, ಎನ್.ಶ್ರೀನಿವಾಸ್ 14.76 ಎಕರೆ ನೋಂದಣಿ, ಪಿ.ಬಸವನಗೌಡ ಹೆಸರಲ್ಲಿ 16.96 ಎಕರೆ ಜಮೀನು ನೋಂದಣಿ, ಸೂರ್ಯತೇಜ್ ವಿ. ಹೆಸರಲ್ಲಿ 15.24 ಎಕರೆ ನೋಂದಣಿ, ಮತ್ತೊಬ್ಬರ ಹೆಸರಲ್ಲಿ 13 ಹಾಗೂ 16 ಎಕರೆ ನೋಂದಣಿಯಾಗಿದೆ ಎಂದು ತಿಳಿಸಿದ್ದಾರೆ.