ನವದೆಹಲಿ: ಸಂಸತ್ತಿನಲ್ಲಿ 2023-24ನೇ ಸಾಲಿನ ಬಜೆಟ್ ಅಧಿವೇಶನದ ಮುಂದುವರೆದ ಭಾಗವಾಗಿ ಐದನೇ ದಿನವಾದ ಇಂದು ಸಂಸತ್ತಿನ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ನಡೆಯದೆ ಸಮಯ ವ್ಯರ್ಥವಾಗಿದ್ದು, ದಿನದ ಕಲಾಪ ಮೊಟಕುಗೊಂಡಿದೆ.
ಕಳೆದ ತಿಂಗಳು ಮಂಡಿಸಲಾದ ಕೇಂದ್ರ ಬಜೆಟ್ ಕುರಿತು ಅಧಿವೇಶನದ ಮುಂದುವರೆದ ಭಾಗವಾಗಿ ಮಾರ್ಚ್ 13ರಿಂದ ಕಲಾಪ ಆರಂಭಗೊಂಡಿತು. ಸಂಸತ್ತಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ಗದ್ದಲದಿಂದಾಗಿ ಉಭಯ ಸದನದಲ್ಲಿ ಚರ್ಚೆ ನಡೆಯಲಿಲ್ಲ. ಕಲಾಪ 5ನೇ ದಿನವೂ ಕಲಾಪದಲ್ಲಿ ಯಾವುದೇ ಫಲಪ್ರದ ಮಾತುಕತೆ, ಚರ್ಚೆಗಳು ನಡೆಯದೆ ವ್ಯರ್ಥವಾಗಿ ಮುಂದೂಡಲಾಗಿದೆ.
ಇದನ್ನು ಓದಿ: ಬಜೆಟ್ ಸಂಸತ್ ಅಧಿವೇಶನ: ಲೋಕಸಭೆಯಲ್ಲಿ ಅದಾನಿ ಸಂಸ್ಥೆ ವಿರುದ್ಧದ ಆರೋಪಗಳ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು
ಸಂಸತ್ತಿನಲ್ಲಿ ಪ್ರತಿಪಕ್ಷಗಳು ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡಬೇಕು ಮತ್ತು ಅದಾನಿ ಗುಂಪಿನ ಷೇರು ಮೌಲ್ಯ ಹೆಚ್ಚಳದ ಹಗರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ಆಗ್ರಹಿಸಿದ್ದಾರೆ. ಬ್ರಿಟನ್ನಲ್ಲಿ ರಾಹುಲ್ಗಾಂಧಿ ಉಪನ್ಯಾಸದ ಕುರಿತು ಆಡಳಿತ ಪಕ್ಷದ ಸದಸ್ಯರ ಗಲಾಟೆ-ಗದ್ದಲದಿಂದಾಗಿ ಸದನವನ್ನು ಮುಂದೂಡಲಾಗಿದೆ.
ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಸ್ವಾಯತ್ತ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿಪಕ್ಷಗಳನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರವನ್ನು ಮುಂದು ಮಾಡಿಕೊಂಡು ಆಡಳಿತ ಪಕ್ಷ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಸಂಸದರು ಪ್ರತಿಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಸುಮಾರು 20 ನಿಮಿಷ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಗದ್ದಲದಿಂದಾಗಿ ಕಲಾಪ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.
ಬಿಜೆಪಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ನಡೆಸಿದೆ. ಮುಂದಿನ ಸಾಲಿನ ಸಚಿವರು, ಬಿಜೆಪಿ ಮತ್ತು ಅದರ ಮಿತ್ರಕೂಟದ ಸಂಸದರು ರಾಹುಲ್ಗಾಂಧಿ ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಸಂಸತ್ ಬಜೆಟ್ ಅಧಿವೇಶನ ಆರಂಭ; ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಿದ ಬಿಆರ್ಎಸ್, ಎಎಪಿ
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಆಡಳಿತ ಪಕ್ಷದಿಂದ ಮುಂದಿನ ಸಾಲಿನ ನಾಯಕರು ಎದ್ದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಪ್ರಸ್ತಾಪಿಸಿದ ಆದೇಶವನ್ನು ಕೈಗೆತ್ತಿಕೊಂಡ ಸಭಾಪತಿಗಳು ಧನ್ಕರ್ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ “ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿದ ಆದೇಶಕ್ಕೆ ಸಂಬಂಧಿಸಿದಂತೆ, ದಿನದ ಅವಧಿಯಲ್ಲಿ ಈ ವಿಷಯದ ಕುರಿತು ಮಾರ್ಚ್ 13 ಮತ್ತು 14 ರಂದು ಅವರು ಮಾಡಿದ ಸಮರ್ಥನೆಗಳನ್ನು ದೃಢೀಕರಿಸಲು ಸದನದ ನಾಯಕನಿಗೆ ನಿರ್ದೇಶಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ಅದಾನಿ ಸಮೂಹ ಗುಂಪಿನ ವಿರುದ್ಧ ಕಾರ್ಪೊರೇಟ್ ವಂಚನೆ, ಷೇರು ಮಾರುಕಟ್ಟೆ ದುರ್ಬಳಕೆ ಮತ್ತು ಹಣಕಾಸು ದುರುಪಯೋಗದ ಆರೋಪದ ಮೇಲೆ ಜೆಪಿಸಿ ರಚಿಸದ ಸರ್ಕಾರದ ವೈಫಲ್ಯದ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ಸಂಸದರಾದ ನೀರಜ್ ಡಾಂಗಿ, ಅಖಿಲೇಶ್ ಪ್ರಸಾದ್ ಸಿಂಗ್, ಕುಮಾರ್ ಕೇತ್ಕರ್, ಸೈಯದ್ ನಸೀರ್ ಹುಸೇನ್, ಅಮೀ ಯಾಜ್ನಿಕ್ ಮತ್ತು ಸಂತೋಷ್ ಕುಮಾರ್ ಪಿ ಅವರು ಸೂಚನಾ ಪತ್ರ ನೀಡಿದ್ದರು.
ಇದನ್ನು ಓದಿ: ಸಂಸತ್ ಕಲಾಪ ಮುಂದೂಡಿಕೆ-ಮಹಿಳಾ ಸದಸ್ಯರ ಮೇಲೆ ಹಲ್ಲೆ: ವಿರೋಧ ಪಕ್ಷಗಳ ಪ್ರತಿಭಟನೆ
ರಂಜೀತ್ ರಂಜನ್, ಕೆಸಿ ವೇಣುಗೋಪಾಲ್, ಸಂಜಯ್ ಸಿಂಗ್ ಮತ್ತು ಪ್ರಮೋದ್ ತಿವಾರಿ ಅವರು ಅದಾನಿ ಗ್ರೂಪ್ನ ವ್ಯಾಪಾರ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಸರ್ಕಾರದ “ಪ್ರಶ್ನಾರ್ಹ” ಪಾತ್ರದ ಬಗ್ಗೆ ಚರ್ಚಿಸಲು ಸೂಚನಾ ಪತ್ರ ನೀಡಿದರು.
ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಗಳಲ್ಲಿನ ಸರ್ಕಾರಿ ಠೇವಣಿಗಳನ್ನು ಅಪಾಯಕ್ಕೆ ಸಿಲುಕಿಸಿದ ಅದಾನಿ ಸಮೂಹ ಗುಂಪಿನ ಹಿಂಡೆನ್ಬರ್ಗ್ ವರದಿಯನ್ನು ಚರ್ಚಿಸಲು ಎಲಮರಮ್ ಕರೀಂ ಬೇಡಿಕೆಯನ್ನು ಎತ್ತಿದ್ದಾರೆ ಎಂದು ಧನ್ಖರ್ ಹೇಳಿದರು.
ರಾಹುಲ್ ಗಾಂಧಿ ಹೇಳಿಕೆ ಮತ್ತು ಅದಾನಿ ಗುಂಪಿನ ಹಗರಣಗಳಿಂದಾಗ ಕಳೆದ ಐದು ದಿನಗಳಿಂದಲೂ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಯಾವುದೇ ಕಲಾಪ ನಡೆಯದೆ ಸಮಯ ವ್ಯರ್ಥವಾಗಿದೆ. ವಾರದ ಕೊನೆಯ ದಿನವಾದ ಇಂದು ಮಧ್ಯಾಹ್ನದವರೆಗೂ ಕಲಾಪ ನಡೆಯಬೇಕಿತ್ತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ