ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಹಾಸ್ಟೆಲ್‌ನಿಂದ ಕ್ಯಾಂಪಸ್‌ಗೆ ಬರುವುದಕ್ಕೆ ಮತ್ತು ಹೋಗುವುದಕ್ಕೆ ವಿಧಿಸಿರುವ ನಿಯಮಬಾಹಿರ ಶಟಲ್ ಶುಲ್ಕವನ್ನು ರದ್ದುಗೊಳಿಸುವಂತೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಅಭಿಜಿತ್ ಹೆಸರಿನ ವಿದ್ಯಾರ್ಥಿಯು ಸಹ ವಿದ್ಯಾರ್ಥಿಗಳ ಜತೆಗೆ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ಅಭಿಜಿತ್ ನಮ್ಮ ಜತೆ ಹತ್ತು ದಿನದಿಂದ ನಮ್ಮೊಂದಿಗೆ ಸತ್ಯಾಗ್ರಹ ನಡೆಸುತ್ತಿದ್ದರು. ಗುರುವಾರವಷ್ಟೇ ಅವರು 24 ಗಂಟೆ ಉಪವಾಸ ಮುಗಿಸಿದ್ದರು. ಉಪವಾಸ ಮುಗಿಸಿದ ಬಳಿಕ ಅವರು ಕುಸಿದು ಬಿದ್ದರು. ಆಸ್ಪತ್ರೆಗೆ ಚಿಕಿತ್ಸೆಗೆ ತಕ್ಷಣವೇ ನಾವೇ ಕರೆದುಕೊಂಡು ಹೋದವೆ, ಆದರೆ ಉಳಿಸಿಕೊಳ್ಳಲಾಗಲಿಲ್ಲ. ವಿವಿಯ ದುರಾಡಳಿತಕ್ಕೆ ವಿದ್ಯಾರ್ಥಿಯೊಬ್ಬ ಬಲಿಯಾಗುವಂತಹ ಸ್ಥತಿಯನ್ನು ನಿರ್ಮಾಣ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಮೂಲಭೂತ ವೈದ್ಯಕೀಯ ಸೌಲಭ್ಯಗಳು ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ವಿವಿಯು ಬೆದರಿಕೆ ಹಾಕುತ್ತಿದೆ ಎಂದು ಅವರು ಆರೋಪ ಕೇಳಿ ಬಂದಿದೆ. ಈ ವಿದ್ಯಾರ್ಥಿಗಳು ಕಳೆದ ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು ಎರಡು ಕಿ.ಮೀ. ದೂರದ ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಬರಲು ಕಡ್ಡಾಯ ಶಟಲ್ ಶುಲ್ಕವನ್ನು ತೆಗೆಯುವ ಕುರಿತು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ವಿವಿ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೃತಪಟ್ಟ ಅಭಿಜಿತ್ ಮೃತ ದೇಹವನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವಿದ್ಯಾರ್ಥಿಯ ಸಾವಿನ ಬಗ್ಗೆ ವಿಶ್ವವಿದ್ಯಾನಿಲಯವು ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ : 6 ಹೊಸ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ಮಸೂದೆಗೆ ಸಂಪುಟ ಸಭೆ ಅನುಮೋದನೆ
ಸೂಕ್ತ ಕ್ರಮಕ್ಕೆ ಎಸ್ಎಫ್ಐ ಆಗ್ರಹ : ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಹೋರಾಟ ನಿರತ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇದಕ್ಕೆ ಕಾರಣದವಾದ ವಿವಿಯ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯ ಆಡಳಿತ ಮಂಡಳಿ ವಿರುದ್ಧ ಕಳೆದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 12 ದಿನಗಳಿಂದ ಕ್ಯಾಂಪಸ್ ಒಳಗೆ ಹೋರಾಟ ನಡೆಸುತ್ತಿದ್ದರು. ಈ ಹೋರಾಟಕ್ಕೆ ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಆಡಳಿತ ಮಂಡಳಿ ಸೂಕ್ತವಾಗಿ ಸ್ಪಂದಿಸದ ಕಾರಣ ವಿದ್ಯಾರ್ಥಿಗಳ ಹೋರಾಟ ಸಮಿತಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಹೋರಾಟವನ್ನು ಮುಂದುವರೆಸಿದ್ದರು. ಈ ಉಪವಾಸ ಸತ್ಯಾಗ್ರಹ ಹೋರಾಟ ನಿರತ ವಿದ್ಯಾರ್ಥಿಯ ಅಭಿಜಿತ್ ರವರು ನೆನ್ನೆ ಪ್ರಜ್ಞೆ ತಪ್ಪಿ ಕುಸಿತು ಬಿದ್ದು, ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಇದಕ್ಕೆ ವಿವಿಯೇ ನೇರ ಕಾರಣವಾಗಿದೆ. ಇದೊಂದು ಶೈಕ್ಷಣಿಕ ಹತ್ಯೆಯಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ.
ಇದನ್ನೂ ಓದಿ : ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 4 ದಿನಗಳಲ್ಲಿ 3 ವಿದ್ಯಾರ್ಥಿಗಳ ಆತ್ಮಹತ್ಯೆ
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಿಂದ ಹಾಸ್ಟೆಲ್ ವಸತಿ ಸಮುಚ್ಚಕ್ಕೆ ದೂರದಲ್ಲಿದ್ದು ಪ್ರತಿನಿತ್ಯ ವಿದ್ಯಾರ್ಥಿಗಳು ಪ್ರಯಾಣಿಸಬೇಕಾಗುತ್ತದೆ. ಈ ಪ್ರಯಾಣ ಶುಲ್ಕವನ್ನು ಇದೇ ಮೊದಲ ಸಲ ಕಳೆದ ವರ್ಷದ ದಾಖಲಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳು ಒಂದು ವರ್ಷಕ್ಕೆ 8,500/ (ಎಂಟು ವರೆ ಸಾವಿರ) ರೂಪಾಯಿಗಳ ಲೆಕ್ಕದಲ್ಲಿ ಎರಡು ವರ್ಷಗಳ ಪ್ರಯಾಣ ಶುಲ್ಕ ಒಟ್ಟು 17,000 (ಹದಿನೇಳು ಸಾವಿರ)ರೂಪಾಯಿಗಳನ್ನು ಕಟ್ಟಲು ಪ್ರತಿಯೊಬ್ಬ ವಿದ್ಯಾರ್ಥಿಗೆ ಅಜೀಮ್ ಪ್ರೇಮ್ ವಿಶ್ವವಿದ್ಯಾಲಯ ಇಮೇಲ್ ಕಳಿಸಿದೆ. ಇದರಿಂದ ಆತಂಕಿತರಾದ ವಿದ್ಯಾರ್ಥಿಗಳು ಈ ರೀತಿಯ ಪ್ರಯಾಣ ಶುಲ್ಕ ಕಟ್ಟಬೇಕೆಂದು ದಾಖಲಾತಿ ಸಮಯದಲ್ಲಿ ತಿಳಿಸಿರಲಿಲ್ಲ ಹಾಗೂ ಇದೇ ಮೊದಲ ಸಲ ಏಕಾಏಕಿ ಪ್ರಯಾಣ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡಬೇಕೆಂದು ಇಮೇಲ್ ಕಳುಹಿಸಿರುವ ಆದೇಶವನ್ನು ವಾಪಸ್ ಪಡೆದುಕೊಳ್ಳಬೇಕೆಂದು ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ ಕ್ಯಾಂಪಸ್ ಒಳಗಡೆಯೇ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಿ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿ ಪತ್ರ ಸ್ವೀಕರಿಸಿದ ವಿವಿ ಕುಲಪತಿಗಳು ಹೋರಾಟದ ಬೇಡಿಕೆಗಳನ್ನು ಈಡೇರಿಸುವ ಬದಲು ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಮತ್ತೊಮ್ಮೆ ಇಮೇಲ್ ಕಳುಹಿಸಿ ಬೆದರಿಸುವ ತಂತ್ರ ಅನುಸರಿಸಿದ್ದಾರೆ ಎಂದು ಎಸ್‌ಎಫ್‌ಐ ಆರೋಪಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ