ಬೆಂಗಳೂರು: ನಗರದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 19ರಿಂದ 22ರವರೆಗೆ ಹಮ್ಮಿಕೊಂಡಿರುವ 8ನೇ ವರ್ಷದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ನಾಟಕಗಳು, ಕಿರುಚಿತ್ರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ.
ಎರಡನೇ ದಿನವಾದ ಇಂದು(ಫೆಬ್ರವರಿ 20) ನಾಲ್ಕು ವೇದಿಕೆಯಲ್ಲಿ ನಾಲ್ಕು ಕಾರ್ಯಕ್ರಮವಿದ್ದು, ವಿ.ಚನ್ನಪ್ಪ ವೇದಿಕೆಯಲ್ಲಿ ಸಂಜೆ 5.45ಕ್ಕೆ ಶ್ರೀಪಾದ ಭಟ್ ನಿರ್ದೇಶನದ ಸಿರಿ ವಾನಳ್ಳಿ ಅಭಿನಯದ ಆನಂದಭಾವಿನಿ ನಾಟಕ ಪ್ರದರ್ಶನವಿದೆ.
ಪುರುಷೋತ್ತಮ್ ರೇಗೇ ಯವರ ಕಾದಂಬರಿಯಲ್ಲಿ ಬರುವ ಹತ್ತೊಂಬತ್ತನೇ ಶತಮಾನದ ಸಾವಿತ್ರಿ ಪತ್ರದಲ್ಲಿಯೇ ತನ್ನ ಪ್ರಿಯಕರನ್ನು ಸೃಜಿಸುತ್ತಾಳೆ. ಪ್ರೇಮ ಎಂಬುದು ಬಂಧನವಾಗದೇ ಅಸೀಮ ಬಿಡುಗಡೆಯ ಆಯಾಮವಾಗಲು ಪ್ರೇಮಿಗಳಿಗಿರಬೇಕಾದ ಎಲ್ಲ ಆದರ್ಶಗಳನ್ನೂ ಅವಳು ತನ್ನ ಪ್ರಿಯಕರನಿಗೆ ಆರೋಪಿಸುತ್ತಾಳೆ. ಸಾವಿತ್ರಿ ತನ್ನ ಪ್ರಿಯಕರನಿಗೆ ಬರೆಯುವ ಮೂವತ್ತೊಂಭತ್ತು ಪುಟ್ಟ ಪತ್ರಗಳೇ ಇಲ್ಲಿ ನಾಟಕದ ಕಥಾಹಂದರ. ವಿಶೇಷವೆಂದರೆ ಇಲ್ಲಿ ಎಲ್ಲಿಯೂ `ಅವನು’ ಕಾಣಿಸುವುದಿಲ್ಲ; ಅವಳ ದನಿ ಕಾಣೆಯಾಗಿರುವ ಕಾಲದಲ್ಲಿ ಇದೊಂದು ಹೊಸಬೆಳಕು.
ಇದನ್ನು ಓದಿ: ಫೆ.19ರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ; 4ದಿನ – 4ವೇದಿಕೆ – 6ನಾಟಕ – 5ಕಿರುಚಿತ್ರ – 5ಕಾರ್ಯಕ್ರಮ
ಚಿಕ್ಕಂದಿನಿಂದಲೇ, ‘ಸಾವೂ’ ಎಂಬ ಗೊಂದಲದ ಮಜಲುಗಳಲ್ಲಿ ಸಿಕ್ಕಿಕೊಳ್ಳುವ ಆಕೆಗೆ ‘ಆನಂದಭಾವಿನಿ’ಯನ್ನಾಗಿ ಮಾಡುವುದು ತತ್ವಜ್ಞಾನಿಯಾಗಿದ್ದ ಆಕೆಯ ಅಪ್ಪ. ಅವರ ಪುಸ್ತಕದ ಹೆಸರಿನಂತೇ ಈ ಹೆಸರೂ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಡುತ್ತ ಕೂತ ಆಕೆಗೆ ಅದರ ಅರ್ಥವನ್ನೂ ಮಾಡಿಸುತ್ತಾರೆ ಅವರು. “ನೀನು ‘ಆನಂದ ಭಾವಿನಿ’, ಎಂದ್ರೆ ಆನಂದವನ್ನು ಅನುಭವಿಸುವವಳು, ಪಸರಿಸುವವಳು. ಇರುವಲ್ಲೆಲ್ಲ ಆನಂದ ಕಾಣುವವಳು,ಆನಂದ ನೀಡುವವಳು” ಎಂದಾಗ ಆಕೆಗೆ ಮಹದಾನಂದ. ಮುಂದೆಂದೂ ಆಕೆ ‘ಸಾವೂ’ ಕುರಿತು ತಲೆಕೆಡಿಸಿಕೊಳ್ಳಲಿಲ್ಲ.
‘ಒಬ್ಬರ ಬದುಕಲ್ಲಿ ಇನ್ನೊಬ್ಬರು ಪ್ರವೇಶಿಸುವ ಸೋಜಿಗ’ವನ್ನು ಕಾಣುತ್ತಾಳೆ ಆಕೆ. ತಂದೆ ಜಪಾನಿಗೆ ಹೊರಟು ನಿಂತಾಗ ಆಕೆಯೂ ಜೊತೆಗೆ ಹೊರಡುತ್ತಾಳೆ. ‘ಆತ’ ಇನ್ನೊಂದು ಹಾದಿ ಹಿಡಿದು ಇಂಗ್ಲೆಂಡಿಗೆ ಹೋಗುತ್ತಾನೆ. ಯುದ್ಧ ಆಕೆಯ ಬದುಕನ್ನು ಕದಡಿಬಿಡುತ್ತದೆ. ತಂದೆಯನ್ನು ಕಳೆದುಕೊಳ್ಳುತ್ತಾಳೆ ಆಕೆ. ಯುದ್ಧದ ಕಾರಣದಿಂದ ‘ಸಾವೂ’ ನಿರಂತರ ಸಾವುಗಳನ್ನ ನೋಡುತ್ತಾಳೆ. ಯುದ್ಧ ಸರ್ವನಾಶ ಮಾಡುವುದನ್ನು ಕಂಡು ನೋಯುತ್ತಾಳೆ. ಹಿಂಸೆಯನ್ನು ಕಂಡು ಅಳುತ್ತಾಳೆ. ‘ ಯುದ್ಧ ಯಾರಿಗಾದ್ರೂ ಒಳ್ಳೆಯದನ್ನು ಮಾಡಿದರೆ ಅದು ಹಿಂಸೆಗೆ ಮಾತ್ರ’ ಎಂದು ಮರುಗುತ್ತಾಳೆ.
ಇದನ್ನು ಓದಿ: ಫೆ.20ರಿಂದ ಪುನೀತ್ ರಾಜ್ಕುಮಾರ್ ವೇದಿಕೆಯಲ್ಲಿ ಕಿರು ಚಿತ್ರೋತ್ಸವ ಪ್ರದರ್ಶನ
ಹೀಗೆ ಪ್ರೀತಿ, ಪ್ರೇಮ, ಹೆಣ್ತನದ ಸಹಜ ಸಂವೇದನೆಗಳೊಂದಿಗೆ ಮಡಿಕೇರಿಯ ಸರಳ ಸುಂದರ ಬದುಕಿಂದ ಯುದ್ಧಭೂಮಿಯ ವರೆಗೂ ಸುತ್ತುವ ಆಕೆಯ ಅನುಭವ, ಭಾವಗಳ ಒಟ್ಟೂ ಮೊತ್ತವೇ ಈ ಏಕವ್ಯಕ್ತಿ ಪ್ರದರ್ಶನ.
ನಾಟಕದ ನಿರ್ದೇಶಕ ಡಾ. ಶ್ರೀಪಾದಭಟ್, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿದ್ದವರು. ಕಳೆದ 40 ವರ್ಷಗಳಿಂದ ರಂಗಭೂಮಿಯಲಿ ತೊಡಗಿಸಿಕೊಂಡಿದ್ದಾರೆ. 150ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಿಕ್ಷಣದಲ್ಲಿ ರಂಗಭೂಮಿ ಪರಿಕಲ್ಪನೆಯ ಪಾಠನಾಟಕ ರೆಪರ್ಟರಿ ನಡೆಸಿದ್ದಾರೆ. ಗಾಂಧಿ 150 ವರ್ಷದ ಹೊತ್ತಿಗೆ ಸಾವಿರಾರು ಪ್ರದರ್ಶನಗಳನ್ನು ಸಂಘಟಿಸಿದ್ದಾರೆ.
ಅಭಿನಯ ಮಾಡುತ್ತಿರುವ ಸಿರಿ ವಾನಳ್ಳಿ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ. ಚಿಕ್ಕಂದಿನಿಂದ ಮಂಡ್ಯ ರಮೇಶ್ ಅವರ ನಟನ ಸಂಸ್ಥೆಯಲ್ಲಿ ನಾಟಕಗಳಿಗೆ ಬಣ್ಣ ಹಚ್ಚಿದವಳು. `ಜೀರ್ಜಿಂಬೆ’ ಸಿನಿಮಾದಲ್ಲಿ ಬಾಲನಟಿಯಾಗಿ 2016ರಲ್ಲಿ ರಾಜ್ಯ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಯಕ್ಷಗಾನ ಕಲಾವಿದೆಯೂ ಆಗಿರುವ ಸಿರಿ ವಾನಳ್ಳಿಗೆ ಸಂಗೀತ, ಚಿತ್ರಕಲೆ ಮೇಲೆಯೂ ಹೆಚ್ಚಿನ ಆಸಕ್ತಿ.
ಇದನ್ನು ಓದಿ: ಫೆಬ್ರವರಿ 19ರಂದು ದಕ್ಲಾಕಥಾ ದೇವಿಕಾವ್ಯ ನಾಟಕ ಪ್ರದರ್ಶನ
ಸಂಸ್ಕೃತಿ, ಸಂವಹನ ಮತ್ತು ಸೃಜನಶೀಲತೆಗಾಗಿ ಮೀಸಲಾಗಿರುವ ಸಮಾನಮನಸ್ಕರ ತಂಡ ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಷನ್ ಅಂಡ್ ಕ್ರಿಯೇಟಿವಿಟಿ ಮೈಸೂರಿನಲ್ಲಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದೆ, `ಕಥಾಮೇನಿಯಾ’ ಫೋರ್ಸಿ ಸಂಸ್ಥೆ ಮಕ್ಕಳಿಗಾಗಿ ನಡೆಸಿದ ವಿಶೇಷ ಅನ್ಲೈನ್ ಕಥೆ ಹೇಳುವ ಸ್ಪರ್ಧೆಯಲ್ಲಿ ಆರು ನೂರಕ್ಕೂ ಹೆಚ್ಚು ಕನ್ನಡದ ಪುಟಾಣಿಗಳು ದೇಶ ವಿದೇಶಗಳಿಂದ ಭಾಗವಹಿಸಿದ್ದರು. `ಆನಂದ ಭಾವಿನಿ’ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಫೋರ್ಸಿ ತಂಡದ ಕೊಡುಗೆ.
ಪುರುಷೋತ್ತಮ್ ಶಿವರಾಮ ರೇಗೇ ಯವರ ಮರಾಠಿ ಕಾದಂಬರಿ ‘ಸಾವಿತ್ರಿ’ ಯನ್ನು ಕನ್ನಡಕ್ಕೆ ತಂದವರು ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಯವರು. ರಂಗರೂಪಕ್ಕೆ ಸಿದ್ಧಪಡಿಸಿದವರು ಸುಧಾ ಆಡುಕಳ. ಸಹ ನಿರ್ದೇಶನ ಪದ್ಮಶ್ರೀ ಸಿ ಆರ್, ಸಂಗೀತ ಅನುಷ್ ಶೆಟ್ಟಿ ಮತ್ತು ಮುನ್ನಾ. ತಂಡ: ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಷನ್ ಅಂಡ್ ಕ್ರಿಯೇಟಿವಿಟಿ, ಮೈಸೂರು.
(ಮಾಹಿತಿ ಕೃಪೆ: ಕಿರಣ ಭಟ್, ಹೊನ್ನಾವರ ಅವರ ಲೇಖನ. ಇದು ʻಅವಧಿʼಯಲ್ಲಿ ಪ್ರಕಟವಾಗಿದೆ.)
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ