ವೇತನ ಪರಿಷ್ಕರಣೆ-ನಿಶ್ಚಿತ ಪಿಂಚಣಿ ಪದ್ದತಿ ಕುರಿತು ಸ್ಪಂದಿಸದ ‌ನೌಕರ ವಿರೋಧಿ ಬಜೆಟ್‌: ಜೈಕುಮಾರ್‌

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿಗೆ ಅಂದಾಜು ರೂ. 3.0 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡನೆ ಮಾಡಿದ್ದಾರೆ. ಆದರೆ, ಇಷ್ಟು ದೊಡ್ಡ ಗಾತ್ರದ ಆಯವ್ಯಯವು ಸರ್ಕಾರಿ ನೌಕರರ ಯಾವೊಂದು ಜ್ವಲಂತ ಸಮಸ್ಯೆಗೂ ಸ್ಪಂದಿಸದೇ ಇರುವುದು ನೌಕರರಲ್ಲಿ ತೀವ್ರ ನಿರಾಸೆ ಮತ್ತು ಅತೃಪ್ತಿ ಮೂಡಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಅಧ್ಯಕ್ಷ ಜೈಕುಮಾರ್.ಹೆಚ್.ಎಸ್ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಜೈಕುಮಾರ್‌, ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಶೇ. 30ರಷ್ಟು ಬೆಳವಣಿಗೆ ದರ ಹೊಂದಿರುವ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಆದರೆ, ತೆರಿಗೆ ಸಂಗ್ರಹಣೆ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ನೌಕರರು ಅತಿ ಕಡಿಮೆ ವೇತನ ಸೌಲಭ್ಯ ಪಡೆಯುತ್ತಿರುವುದರ ಕಡೆಗೆ ಆಯವ್ಯಯದಲ್ಲಿ ಪ್ರಸ್ತಾಪಿಸದೇ ಇರುವುದು ನೌಕರ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಒಪಿಎಸ್‌ ಮರು ಜಾರಿಗೆ ಆಗ್ರಹಿಸಿ ಫೆ.7ಕ್ಕೆ ವಿಧಾನಸೌಧ ಚಲೋ

ನೆರೆಹೊರೆ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯ ಸರ್ಕಾರಿ ನೌಕರರು ಶೇ 40-50ರಷ್ಟು ಕಡಿಮೆ ವೇತನ ಪಡೆಯುತ್ತಿದ್ದು, ಶೇ. 25ರಷ್ಟು ಮಧ್ಯಂತರ ಪರಿಹಾರ ಕೂಡಲೇ ಘೋಷಿಸುವಂತೆ ಮತ್ತು ವೇತನ ಪರಿಷ್ಕರಣೆಗೆ ಅವಶ್ಯವಿರುವ ಅಂದಾಜು ರೂ. 15,000 ಕೋಟಿ ಹೆಚ್ಚುವರಿ ಅನುದಾನವನ್ನು ಆಯವ್ಯಯದಲ್ಲಿ ಹಂಚಿಕೆ ಮಾಡಬೇಕು. ಎನ್.ಪಿ.ಎಸ್‌ ಪಿಂಚಣಿ ಪದ್ದತಿಯನ್ನು ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ಪದ್ದತಿ ಮರುಸ್ಥಾಪಿಸುವಂತೆ ಮತ್ತು 2.60 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಗಿತ್ತು ಎಂದರು.

ಪ್ರಧಾನ ಕಾರ್ಯದರ್ಶಿ ಎಸ್.ಅಭಿಜಿತ್ ಅವರು ಕೋವಿಡ್‌ ಸಂಕಷ್ಟ ಕಾಲದಲ್ಲಿ 18 ತಿಂಗಳ ತುಟ್ಟಿಭತ್ಯೆ ರೂ.4,500 ಕೋಟಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಸರ್ಕಾರಿ ನೌಕರರ ವೇತನ ಸೌಲಭ್ಯಗಳನ್ನು ಜುಲೈ 2022ರಿಂದಲೇ ಪರಿಷ್ಕರಣೆ ಮಾಡಬೇಕಿರುತ್ತದೆ. ಆದರೆ, ಬಹಳ ವಿಳಂಬವಾಗಿ 7ನೇ ವೇತನ ಆಯೋಗವನ್ನು ರಚಿಸಿದ್ದು, ಅದೂ ಕೂಡ ದಿನಾಂಕಗಳನ್ನು ವಿಸ್ತರಣೆ ಮಾಡುತ್ತಿರುವುದರಿಂದ ನೌಕರರಿಗೆ ವಾರ್ಷಿಕವಾಗಿ ರೂ. 15,000 ಕೋಟಿ ನಷ್ಟವಾಗುತ್ತಿದೆ. ನೌಕರರಿಗೆ ನ್ಯಾಯೋಚಿತವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವುದಕ್ಕಿಂತ ಅವರಿಂದ ಕಸಿದುಕೊಳ್ಳುವ ನೌಕರ-ವಿರೋಧಿ ನೀತಿಗಳನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಖಂಡಿಸುತ್ತದೆ ಎಂದಿದ್ದಾರೆ.

ನೌಕರರ ಬೇಡಿಕೆಗಳನ್ನು ಕೇವಲ ಪೊಳ್ಳು ಭರವಸೆಗಳಿಂದ ಈಡೇರಿಸಿಕೊಳ್ಳಲಾಗದು. ಬದಲಿಗೆ ಜಡತ್ವ/ ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದು ಹೋರಾಟಗಳ ಮೂಲಕ ಮಾತ್ರವೇ ಈಡೇರಿಸಿಕೊಳ್ಳಲು ಸಾಧ್ಯ ಎಂಬುದನ್ನು ಒಕ್ಕೂಟವು ಪುನರುಚ್ಛರಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟಕ್ಕೆ ನೌಕರರ ಸಜ್ಜಾಗಬೇಕೆಂದು ಕರೆ ನೀಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

One thought on “ವೇತನ ಪರಿಷ್ಕರಣೆ-ನಿಶ್ಚಿತ ಪಿಂಚಣಿ ಪದ್ದತಿ ಕುರಿತು ಸ್ಪಂದಿಸದ ‌ನೌಕರ ವಿರೋಧಿ ಬಜೆಟ್‌: ಜೈಕುಮಾರ್‌

Leave a Reply

Your email address will not be published. Required fields are marked *