ಶಿಕ್ಷಣ ವ್ಯವಸ್ಥೆ ಕೆಟ್ಟ ಸ್ಥಿತಿಯಿಂದ ಶೋಚನೀಯ ಪರಿಸ್ಥಿತಿಗೆ ಕಾಲಿಡಲಿದೆ: ನಿರಂಜನಾರಾಧ್ಯ

ಬೆಂಗಳೂರು: ಕರ್ನಾಟಕದ ಶಿಕ್ಷಣ ವ್ಯವಸ್ಥೆ ಅಯೋಮಯವಾಗಿದ್ದು, ಈಗಿನ ಕೆಟ್ಟ ಸ್ಥಿತಿಯಿಂದ ಮತ್ತಷ್ಟು ಶೋಚನೀಯ  ಪರಿಸ್ಥಿತಿಗೆ ಕಾಲಿಡುವ ಎಲ್ಲಾ ಲಕ್ಷಣಗಳು ಮುಖ್ಯಮಂತ್ರಿಯವರು ಇಂದು(ಫೆಬ್ರವರಿ 17) ಮಂಡಿಸಿದ ಆಯವ್ಯಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ. ಆರೋಪಿಸಿದ್ದಾರೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ನಿರಂಜನಾರಾಧ್ಯ.ವಿ.ಪಿ. ಕಳೆದ ವರ್ಷದ ಆಯವ್ಯಯದಲ್ಲಿ ಹೇಳಿದ ಪ್ರಮುಖ ಅಂಶಗಳು ಕೇವಲ ಭಾಷಣದ ಪುಸ್ತಕದಲ್ಲಿಯೇ ಉಳಿದಿದ್ದು, ಅವುಗಳ ಜೊತೆಗೆ ಮತ್ತಷ್ಟು ಭರವಸೆಗಳನ್ನು ಈಗಿನ ಆಯವ್ಯಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಆಯವ್ಯಯದಲ್ಲಿ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ 37 ಅಪೌಷ್ಠಿಕತೆ ಪರಿಹಾರ ಕೇಂದ್ರಗಳನ್ನು ತೆರೆದು ಕ್ರಮತೆಗೆದುಕೊಳ್ಳುವ ಪ್ರಸ್ತಾಪವಿತ್ತು. ಆದರೆ, ಇಂದಿಗೂ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವ  ವಿಷಯವನ್ನು ಫೆಬ್ರವರಿ 2023ರ  ಆಡಳಿತ ಸುಧಾರಣಾ ಆಯೋಗ -2ರ ವರದಿಯು  ಖಚಿತಪಡಿಸಿದ್ದು, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರದಲ್ಲಿ 5 ದಿನ ಮತ್ತು ಸಾಮಾನ್ಯ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆ ನೀಡುವಂತೆ ಶಿಫಾರಸ್ಸು ಮಾಡಿದೆ. ಇದು, ಹಿಂದಿನ ಆಯವ್ಯಯ ನೀಡಿದ ಭರವಸೆಯನ್ನು ಈಡೇರಿಸಿಲ್ಲವೆಂಬುದನ್ನುಸಂಶೋಧನೆಯ ಮೂಲಕ ತೋರಿಸಿದೆ.

ಅದೇ ರೀತಿ, ಹಿಂದಿನ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 15,000 ಶಿಕ್ಷಕರನ್ನು ನೇಮಿಸಿಕೊಳ್ಳುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಲಾದ ಅಂಶ. ಒಂದು ವರ್ಷದ ನಂತರವೂ ಅದು ಪ್ರಗತಿಯಲ್ಲಿಯೇ ಮುಂದುವರಿದು, ಅತಿಥಿ ಶಿಕ್ಷರನ್ನು ಬಿಟ್ಟರೆ ಇಲ್ಲಿಯವರೆಗೂ  ಒಬ್ಬ ಖಾಯಂ ಶಿಕ್ಷಕರೂ ನೇಮಕವಾಗಿಲ್ಲ. ಇದು ಸರ್ಕಾರದ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ ಎಂದು ನಿರಂಜನಾರಾಧ್ಯ ಅವರು ಆರೋಪಿಸಿದ್ದಾರೆ.

ಡಿಸೆಂಬರ್ 2022 ಮಾಹಿತಿಯಂತೆ ಸರ್ಕಾರಿ ಶಾಲೆಗಳಲ್ಲಿ 2021-22ನೇ ಸಾಲಿಗೆ ಖಾಲಿ ಇರುವ ಶಿಕ್ಷಕರ ಸಂಖ್ಯೆ 1,41,358 ಕ್ಕೆ ಏರಿದೆ. ಇನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸಿದ ಹೆಗ್ಗಳಿಕೆಯ ಭಾಗವಾಗಿ, 3 ರಿಂದ 6 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಪೂರ್ವ-ಪ್ರಾಥಮಿಕ ಶಿಕ್ಷಣ ಮತ್ತು ಆರೈಕೆಯನ್ನು ಒದಗಿಸಲು, 20,000 ಅಂಗನವಾಡಿಗಳಲ್ಲಿ ರೂ.30 ಕೋಟಿ ವೆಚ್ಚದಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಪುಠಾಣಿ ಅಂಗನವಾಡಿ ಮಕ್ಕಳು ಪ್ರಾಥಮಿಕ ಶಿಕ್ಷಣ ಮತ್ತು ಆರೈಕೆಯನ್ನು ಪಡೆಯಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಪ್ರಸಕ್ತ 2023-24ರ ಆಯವ್ಯಯದ ಬಗ್ಗೆ ಹೇಳುವುದಾದರೆ, ಆಯವ್ಯಯವು ಶಾಲಾ ಶಿಕ್ಷಣದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂಬುದನ್ನು ಹೇಳುವ ಬದಲು, 2022-23ನೇ ಸಾಲಿನಲ್ಲಿ ಪ್ರಾರಂಭಿಸಿರುವ ಕೆಲಸ-ಕಾರ್ಯಗಳನ್ನು ಮುಗಿಸುವ ಭರವಷೆಯನ್ನು ಮುಂದುವರಿಸಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, 2023-24ನೇ ಸಾಲಿನ ಆಯವ್ಯಯ ಹೊಸ ಆಯವ್ಯಯವಾಗಿರದೆ, 2022-23ನೇ ಸಾಲಿನ ಎರಡನೇ ಆವೃತ್ತಿಯಂತಿದೆ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

 

 

ಮತ್ತಷ್ಟು ಸ್ಪಷ್ಟನೆ ನೀಡುವುದಾದರೆ, 2022-23ನೇ ಸಾಲಿನ ಆಯವ್ಯಯದಲ್ಲಿ ಶಿಕ್ಷಣಕ್ಕೆ ರೂ.31,980 ಕೋಟಿಯನ್ನು ಮೀಸಲಿಡಲಾಗಿತ್ತು. 2022-23ನೇ ಸಾಲಿನ ಒಟ್ಟು ಆಯವ್ಯದಲ್ಲಿ ಶಿಕ್ಷಣದ ಪಾಲು ಶೇಕಡ 12. ಈ ಬಾರಿ ಶಿಕ್ಷಣಕ್ಕೆ 37,960  ಕೋಟಿಯನ್ನು ಮೀಸಲಿಡಲಾಗಿದೆ. ಒಟ್ಟು ಆಯವ್ಯದಲ್ಲಿ ಶಿಕ್ಷಣದ ಪಾಲು ಶೇಕಡ 13.1. ಯಥಾರ್ಥದಲ್ಲಿ, ಶಿಕ್ಷಣಕ್ಕೆ ಕಳೆದ ಬಾರಿಗಿಂತ 5980 ಕೋಟಿ ಹೆಚ್ಚಿನ ಅನುದಾನ ಸಿಕ್ಕಿದ್ದು, ಒಟ್ಟು ಆಯವ್ಯಯದಲ್ಲಿ ಶೇಕಡಾ 13.1 ದೊರೆತಿದೆ. ಶೇಕಡಾವಾರು ಲೆಕ್ಕದಲ್ಲಿ 1.1ರಷ್ಟು  ಹೆಚ್ಚಿದೆ. ಗಮನಿಸಬೇಕಾದ ಅಂಶವೆಂದರೆ, ಇದು ತೋರಿಕೆಗೆ ಜಾಸ್ತಿಯೆನಿಸಿದರೂ, ಬಹುತೇಕ ಪಾಲು  ಈಗಿನ ಶಿಕ್ಷಕರ ಸಂಬಳ, ಹೆಚ್ಚಿಸಿರುವ ಗೌರವ ಧನ  ಹಾಗು ಹಿಂದಿನ ಸಾಲಿನಲ್ಲಿ ಮುಂದುವರಿದಿರುವ ಕಾಮಗಾರಿಗಳಿಗೆ ವ್ಯಯವಾಗುತ್ತದೆ.

ಜ್ವಲಂತ ಸಮಸ್ಯೆಗಳಾಗಿರುವ ಶಿಕ್ಷಣ ಹಕ್ಕು ಕಾಯಿದೆಯ ಈಗಿನ ಶೇಕಡ 23.6 ಅನುಸರಣೆಯನ್ನು ಕನಿಷ್ಠ 50ಕ್ಕೆ ಏರಿಸಲಾಗಲಿ, ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ 1,41,358 ಶಿಕ್ಷಕರ ಖಾಲಿ ಹುದ್ದೆಗಳನ್ನು ತುಂಬುವ ಭರವಸೆಯಾಗಲಿ, ತೀವ್ರ ಅಪೌಷ್ಠಿಕತೆಯನ್ನು ತೊಡೆದು ಹಾಕಲು  ಆಡಳಿತ ಸುಧಾರಣಾ ಆಯೋಗ-೨ರ ವರದಿಯು  ಪ್ರಸ್ತಾಪಿಸಿದಂತೆ  ಮಕ್ಕಳಿಗೆ ವಾರದಲ್ಲಿ 5 ದಿನವೂ ಮೊಟ್ಟೆ ನೀಡುವ ಭರವಸೆಯಾಗಲಿ ಅನುದಾನಕ್ಕಾಗಿ ಕಾಯುತ್ತಿರುವ ಕನ್ನಡ ಅನುದಾನರಹಿತ ಶಾಲೆಗಳಿಗೆ ಅನುದಾನ ಒದಗಿಸುವ ಅಥವಾ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಯಾವ ಅಂಶಗಳೂ ಆಯವ್ಯದಲ್ಲಿ  ಕಾಣುತ್ತಿಲ್ಲ ಎಂದು ನಿರಂಜನಾರಾಧ್ಯ ಅವರು ಆರೋಪಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಗುಣಾತ್ಮಕ ಶಿಕ್ಷಣದ ಬಗ್ಗೆ ಪದೇಪದೇ ಪ್ರಸ್ತಾಪಿಸದ ಮುಖ್ಯಮಂತ್ರಿಗಳು, ಆ  ಬಗ್ಗೆ ಆಯವ್ಯದಲ್ಲಿ ಚಕಾರವೆತ್ತದಿರುವುದು ಆಶ್ಚರ್ಯ ತಂದಿದೆ ಮತ್ತೂ ಆಶ್ಚರ್ಯವೆಂದರೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಭಾಗವಾಗಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿ , ಇಡೀ ಶಾಲಾ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿದ್ದ ಸರ್ಕಾರ, 2023-24 ರ ಆಯವ್ಯಯದಲ್ಲಿ ಅದರ ಜಾರಿ ಕುರಿತಂತೆ ಪ್ರಸ್ತಾಪಿಸದಿರುವುದು ಅತ್ಯಂತ ಸೋಜಿಗದ ಸಂಗತಿಯಾಗಿದೆ. ಹೀಗಾಗಿ, ಕನ್ನಡಿಗರಿಗೆ ಕನಿಷ್ಠ 5ನೇ ತರಗತಿಯವರೆಗಾದರೂ, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಭಾಷಾ ಮಾಧ್ಯಮ  ಮಾತೃ ಭಾಷೆಯಲ್ಲಿರುತ್ತದೆಯೆಂಬ 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಭರವಸೆ 2023-24 ರಲ್ಲಿಯೂ ಭರವಸೆಯಾಗಿಯೇ ಉಳಿದಿದೆ. ಇದರಿಂದ, ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಪೊಳ್ಳು ಭರವಸೆಯ ದಸ್ತಾವೇಜೆಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ.

ಒಟ್ಟಾರೆ, 2023-24ರ ಆಯವ್ಯಯದ ಬಹುತೇಕ ಅಂಶಗಳು ಹಾಗು ಪ್ರಸ್ತಾವನೆಗಳು 2022-23ರ ಎರಡನೇ ಆವೃತ್ತಿ ಎಂಬಂತಿವೆ. ಇದೊಂದು ಅಲೋಚನೆಯೇ ಇಲ್ಲದ ನೀರಸ ಆಯವ್ಯಯ ಎಂದು ನಿರಂಜನಾರಾಧ್ಯ ಅವರು  ಹೇಳಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *